ಬ್ರೇಕಿಂಗ್ ನ್ಯೂಸ್ .....


ಗದುಗಿನಲ್ಲಿ ಅವಧಿ-ಆಲೆಮನೆ-ನುಡಿನಮನ

ಕನ್ನಡ ಸಾಹಿತ್ಯ ಲೋಕಕ್ಕೆ’ ಅ’ ಮತ್ತು ‘ಆ’ ಪ್ರವೇಶಿಸಿದೆ. ಗದಗದಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ಲಾಗ್ ಲೋಕದ ಬಾಗಿನ ನೀಡಬೇಕೆಂದು ನಿರ್ಧರಿಸಿದಾಗ ಕೈಗೂಡಿಸಿದ್ದು ಈ ‘ಅ’ ಮತ್ತು ‘ಆ’- ಅವಧಿ ಮತ್ತು ಆಲೆಮನೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ..ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ.

ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’ ಎಂಬ ಹೊಸ ಬ್ಲಾಗ್ .
ಕನ್ನಡ ಸಾಹಿತ್ಯ ಸಮ್ಮೇಳನವೆನ್ನುವುದು ಸಾಹಿತ್ಯ ಜಾತ್ರೆಯೋ? ಜನ ಜಾತ್ರೆಯೋ? ಎಂಬ ಪ್ರಶ್ನೆಗಳಿವೆಯಾದರೂ ಕನ್ನಡ ಜಾತ್ರೆ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಕೆಲವರಿಗಿದು ಸೆಮಿನಾರು-ಘೋಷ್ಠಿಗಳ ಗಂಭೀರ ಚಿಂತನವಾದರೆ, ಮತ್ತೆ ಕೆಲವರಿಗಿದು ಮಿತ್ರಮಂಡಳಿ, ಇನ್ನೂ ಕೆಲವರಿಗಿದು ಪುಸ್ತಕ ಸಂತೆ, ಇನ್ನುಳಿದವರಿಗೆ ಪ್ರವಾಸದ ಮೋಜು! ಇನ್ನೂ ಕೆಲವರಿರುತ್ತಾರೆ ಅವರಿಗಿದು ಭರ್ಜರಿ ವ್ಯಾಪಾರ, ಮತ್ತೊಂದು ವಿಶೇಷ ವರ್ಗವಿದೆ ಅವರಿಗಿದು ಉರವಣಿಗೆಯ ವೇದಿಕೆ. ಹೀಗೆ ಅವರವರ ಭಾವಕ್ಕೆ ಅವರ ಭಕುತಿಗೆ ಎಂಬಂತೆ ನಡೆದುಕೊಂಡು ಬಂದಿರುವ ಸಾಹಿತ್ಯ ಸಮ್ಮೇಳನದ ಫುಲ್ ಸಚಿತ್ರ ಕ್ಷಣ ಕ್ಷಣದ ವರದಿ ನಿಮ್ಮ ಮುಂದೆ, ನಾಳೆಯಿಂದ....

‘ಅವಧಿ’ ಚಿತ್ರದುರ್ಗದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿಮ್ಮ ಮುಂದಿಟ್ಟ ರೀತಿ ನಿಮಗೆಲ್ಲರಿಗೂ ಗೊತ್ತಿದೆ. ಪ್ರತೀ ಘಂಟೆ ‘ಅವಧಿ’ ತನ್ನ ಬ್ಲಾಗ್ ಅನ್ನು ಅಪ್ಡೇಟ್ ಮಾಡಿತ್ತು. ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಪ್ರಕಟಿಸಿತ್ತು. ಆ ಧೂಳು, ಆ ಗೋಳು, ಆ ಜ್ಹಳ , ಆ ಜಗಳ ಎಲ್ಲವೂ ನಿಮ್ಮ ಕಣ್ಣಿಗೆ ಸಿಕ್ಕಿತು. ಈಗ ಇಲ್ಲಿ ಇದ್ದರಲ್ಲಾ ಎನ್ನುವಷ್ಟರ ವೇಳೆಯಲ್ಲಿ ‘ಅವಧಿ’ ತಂಡ ತನ್ನದೇ ಮೇಫ್ಲವರ್ ಮೀಡಿಯಾ ಹೌಸ್ ಸ್ಟಾಲ್ ನಿಂದ ಆಗಲೇ ಜಗತ್ತಿಗೆ ಸಮ್ಮೇಳನದ ಸುದ್ದಿ ಅಪ್ಲೋಡ್ ಮಾಡಿ ಮುಗಿಸುತ್ತಿತ್ತು.

ಈ ಬಾರಿ ಇನ್ನಷ್ಟು ರುಚಿಕರವಾಗಿ ಸಮ್ಮೇಳನವನ್ನು ಬಡಿಸಲು ‘ಅವಧಿ - ಆಲೆಮನೆ’ ಸಜ್ಜಾಗಿದೆ. ಹೀಗಾಗಿ ಈ ಬಾರಿಯ ಸಮ್ಮೇಳನ ಅವಧಿ- ಆಲೆಮನೆ ನುಡಿನಮನ ಅಂತ ಹೆಸರಿಟ್ಟುಕೊಂಡಿದೆ. ಇಂದು ರಾತ್ರಿಯೇ ನಮ್ಮ ನಾಲ್ಕು ಜನರ ತಂದ ಗದಗಕ್ಕೆ ಹೊರಟು ನಿಂತಿದೆ. ನಾಳೆ ಬೆಳಗಿನ ಜಾವಕ್ಕೆಲ್ಲ ಈ ತಂಡ ಗದುಗಿನ ಗಡಿ ಮುಟ್ಟಿರುತ್ತದೆ. ತಗೊಳ್ಳಿ ಇನ್ನು ಶುರು...

ಸತತ ನಾಲ್ಕು ದಿನಗಳ ಕಾಲ ಈ ಕನ್ನಡ ಹಬ್ಬದ ಎಲ್ಲ ಸವಿಯೂಟವನ್ನು ಅದರ ಎಲ್ಲ ರಸಗಳೊಂದಿಗೆ ನಿಮಗೆ ಉಣಬಡಿಸುತ್ತೇವೆ. ತಯಾರಾಗಿರಿ, ನಾಳೆ ಬೆಳಿಗ್ಗೆಯಿಂದಲೇ ನೇರ ವರದಿಗಾರಿಕೆ ಶುರು...

ಗದಗಿನ ವೈಭವ ಬಲ್ಲಿರಾ - ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು








ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನೂತನ ಜಿಲ್ಲೆಯಾಗಿ ರೂಪುಗೊಂಡಿರುವ ಗದುಗಿನಲ್ಲಿ ನಡೆಯಲಿದೆ. ಕವಿ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಗದುಗಿನಲ್ಲಿ ನಡೆಯುತ್ತಿರುವುದು ಎರಡನೇ ಸಮ್ಮೇಳನ. ಮೊದಲ ಸಮ್ಮೇಳನ ನಮ್ಮಲ್ಲಿ ಬಹು ಜನರು ಹುತ್ತುವುದಕ್ಕಿಂತಲೂ ಮುಂಚೆಯೇ ೧೯೬೧ರಲ್ಲಿ ನಡೆದಿತ್ತು. ಅದು ಸರಿ ಈ ಗದುಗಿನ ವಿಶೇಷವಾದರೂ ಏನು ಸ್ವಾಮಿ? ಅಂತೀರ, ಇಲ್ಲಿದೆ ನೋಡಿ ಇನ್ನು ಪ್ರತಿ ದಿನ ಗದುಗಿನ ಪರಿಚಯ


ಕವಿ ಕಾಶಿ ಎಂದು ಕೂಡಲೇ ನೆನಪಾಗುವುದು ಗದಗ. ಕವಿ ಪುಂಗವರು ಇಲ್ಲಿ ನೆಲೆಸಿದ್ದರಿಂದ ಹೀಗೆ ಜನಜನಿತವಾಗಿದೆ. ಸಾಂಸ್ಕೃತಿಕ ದೃಷ್ಟಿಯಿಂದ, ಸಾಹಿತಿಗಳಿಂದ, ವಿದ್ವಾಂಸರಿಂದ, ಮೇಧಾವಿಗಳಿಂದ, ಕಲಾವಿದರು, ಸಂಗೀತಗಾರರು, ಸಾಧು ಸಂತರು, ರಾಜ ಮಹಾರಾಜರು, ಸ್ವಾತ್ರಂತ್ರ್ಯ ಹೋರಾಟಗಾರರಿಂದ ಜಿಲ್ಲೆ ಅಪಾರ ಕೀರ್ತಿ ಗಳಿಸಿದೆ. ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ಅಪಾರ. ಇಂತಹ ಭವ್ಯ ಇತಿಹಾಸವನ್ನು ಹೊಂದಿರುವ ಗದಗನಲ್ಲಿ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಇತಿಹಾಸವನ್ನು ಮೆಲಕು ಹಾಕುವುದು ಸ್ತುತ್ಯ.

ಪ್ರಾಚೀನದಿಂದ ಆಧುನಿಕದವರೆಗೆ


ಗದಗಿಗೆ ಮೇರು ಕೀರ್ತಿ ತಂದುಕೊಟ್ಟವರಲ್ಲಿ ಕುಮಾರವ್ಯಾಸ ಅಗ್ರಗಣ್ಯರು. ಮಹಾಕಾವ್ಯವಾದ ``ಕರ್ನಾಟಭಾರತ ಕಥಾ ಮಂಜರಿ''ಯನ್ನು ಕುಮಾರವ್ಯಾಸ ರಚಿಸಿದ್ದು ಗದಗಿನ ವೀರನಾರಾಯಣನ ಸನ್ನಿಧಿಯಲ್ಲಿ. ಕುಮಾರವ್ಯಾಸನ ಸಾಲಿಗೆ ಸೇರಿದ ಮತ್ತೊಬ್ಬ ಮಹಾಕವಿ ಚಾಮರಸ. ಇವರು ಇಲ್ಲಿನ ನಾರಾಯಣಪುರದವರು. ``ಧರ್ಮಾಮೃತ" ಕಾವ್ಯ ರಚಿಸಿ ಸನ್ನುತ ಎನಿಸಿದ ನಯಸೇನ ಮುಳುಗುಂದದವನು. ಇಲ್ಲಿನ ಅತ್ತಿಮಬ್ಬೆಯು ದಾನಚಿಂತಾಮಣೆ ಎನಿಸಿಕೊಂಡರೆ, ಆಯ್ದಕ್ಕಿ ಲಕ್ಕಮ್ಮ ಮಹಾಶಿವಶರಣೆ ಎನಿಸಿದ್ದಾಳೆ. ಮಲ್ಲಿಸೇಣ, ಕವಿ ಬಸಪ್ಪಾರ್ಯ, ಗದಗ ಜಿಲ್ಲೆಯ ಪ್ರಥಮ ಕವಿ ಎಂಬ ಖ್ಯಾತಿ ಪಡೆದಿರುವ ಶ್ರೀಧರಾಚಾರ್ಯ, ಬಸವಣ್ಣಯ್ಯ, ಕನ್ನಪ್ಪಯ್ಯ, ನಾಗದೇವ ಮತ್ತಿತರರು ಗದಗ ಜಿಲ್ಲೆಯವರೇ. ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರೆನಿಸಿದ ದುರ್ಗಸಿಂಹ ಸವಡಿ ಗ್ರಾಮದವನು. ಹಳಗನ್ನಡ ಹಾಗೂ ನಡುಗನ್ನಡ ಕಾಲದಲ್ಲಿ ಇಂತಹ ಮೇದಾವಿ ಕವಿಗಳು ಇದ್ದರು. `ಸೋಮೇಶ್ವರ ಶತಕ' ವನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಪುಲಿಗೆರೆ ಎಂದು ಅಂದು ಹೆಸರಾಗಿದ್ದ ಇಂದಿನ ಲಕ್ಷ್ಮೇಶ್ವರ ಗದಗದ್ದೆ.

ಇನ್ನು ಆಧುನಿಕ ಸಾಹಿತ್ಯದ ಕಾಲಘಟ್ಟದಲ್ಲಿ ಬಂದು ನಿಂತಾಗ ಜಿಲ್ಲೆಯಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ಹುಯಿಲಗೋಳ ನಾರಾಯಣರಾಯರು. ಇವರು ಬರೆದ ``ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪರಿಣಾಮಕಾರಿ ಪಾತ್ರ ವಹಿಸಿತ್ತು. ದ.ರಾ.ಬೇಂದ್ರೆ ಮೂಲತಃ ಶಿರಹಟ್ಟಿಯವರು. ``ಸಂಗ್ಯಾ ಬಾಳ್ಯಾ" ನಾಟಕ ಬರೆದ ಪತ್ತಾರ ಮಾಸ್ತರ ಗದಗಿನವರು. ಕನ್ನಡದ ಕುಲಪುರೋಹಿತರೆಂದೇ ಹೆಸರಾದ ಆಲೂರು ವೆಂಕಟರಾಯರು ಹೊಳೆಆಲೂರಿನವರು. ಜಿ.ಬಿ.ಜೋಶಿ, ಪಂಚತಂತ್ರದ ಕಥೆಗಳು ರಚಿಸಿದ ಡಾ. ವರದರಾಜ ಹುಯಿಲಗೋಳ, ಆರ್.ಸಿ. ಹಿರೇಮಠ, ಚೆಂಬೆಳಕಿನ ಕವಿ ಚನ್ನವೀರ ಕಣವಿ, ಜಿ.ಎಸ್. ಆಮೂರ, ಗಿರಡ್ಡಿ ಗೋವಿಂದರಾಜ, ಸೋಮಶೇಖರ ಇಂದ್ರಾಪುರ ಗದಗ ಜಿಲ್ಲೆಯವರು.

ಶಿಲ್ಪಕಲೆಯ ಬೀಡು



ಜಿಲ್ಲೆ ಶಿಲ್ಪಕಲೆಯ ಬೀಡೂ ಹೌದು. ಗದುಗಿನ ವೀರನಾರಾಯಣ, ತ್ರಿಕುಟೇಶ್ವರ ಹಾಗೂ ಸೋಮನಾಥ, ಸರಸ್ವತಿ ದೇವಾಲಯ ಪ್ರಸಿದ್ಧಿ ಪಡೆದಿವೆ. ಲಕ್ಕುಂಡಿ ನೂರೊಂದು ಗುಡಿಗಳು ಆಕರ್ಷಣೀಯ. ಇಲ್ಲಿನ ಸೂರ್ಯ ದೇವಾಲಯ, ಬ್ರಹ್ಮ ಜೀನಾಲಯ ಗಮನ ಸೆಳೆಯುತ್ತವೆ. ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ ರಾಷ್ಟ್ರೀಯ ಸಂರಕ್ಷಣಾ ಸ್ಮಾರಕವಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ಶಿಲ್ಪಕಲೆಗೆ ಜೀವ ತುಂಬಿದವರು ರಾಜವಂಶಸ್ಥರು. ಅನೇಕ ರಾಜಮಹಾರಾಜರು ಈ ಭಾಗದಲ್ಲಿ ಆಳಿದ್ದರೆಂಬುದು ಗಮನಾರ್ಹ. ಇನ್ನು ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಶಾಸನಗಳಿವೆ.

ನಾದಮಯ ಈ ಲೋಕ

ಸಂಗೀತ ಕ್ಷೇತ್ರದಲ್ಲಿಯೂ ಜಿಲ್ಲೆಯ ವಿದ್ವಾಂಸರ ಕೊಡುಗೆ ಅಪಾರ. ಭಾರತ ರತ್ನ ಕೀರ್ತಿಗೆ ಭಾಜನರಾಗಿ ಗದಗಿನ ಹೆಸರು ದೇಶ ವಿದೇಶದಲ್ಲಿ ಪ್ರಚುರ ಪಡಿಸಲು ಕಾರಣರಾದ ಭೀಮಸೇನ ಜೋಶಿ ಗದುಗಿನವರು. ದೃಷ್ಟಿಹೀನತೆಯಿದ್ದರೂ ಇತರರಿಗೆ ಮಾದರಿಯಾಗಿ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಗೈದು ಚೌಡಯ್ಯ ಪ್ರಶಸ್ತಿ ಪಡೆದ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳು ಹಾಗೂ ಅವರ ಗುರುಗಳಾದ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳು ಜಿಲ್ಲೆಯನ್ನು ನಾದ ಲೋಕವಾಗಿಸಿದ್ದಾರೆ. ಅವರ ಹೆಸರಿನ ಅಂಧರ ಸಂಗೀತ ಶಾಲೆ ಇಂದಿಗೂ ರಾಜ್ಯವ್ಯಾಪಿ ಶಿಷ್ಯ ಗಣವನ್ನು ಹೊಂದಿದೆ.


ಸರ್ವಧರ್ಮದ ನೆಲೆವೀಡು

ಜಿಲ್ಲೆ ಸರ್ವಧರ್ಮ ಶಾಂತಿಯ ನೆಲೆಯಾಗಿದೆ. ಗದುಗಿನ ತೋಂಟದಾರ್ಯ ಮಠ, ವೀರೇಶ್ವರ ಪುಣ್ಯಾಶ್ರಮ, ಶಿವಾನಂದ ಮಠ, ಮುಂಡರಗಿ ಅನ್ನದಾನೀಶ್ವರ ಮಠ, ಇಟಗಿ ಭೀಮಾಂಬಿಕೆ ಮಠ ನಾಡಿನಲ್ಲಿ ಮನೆ ಮಾತಾಗಿದೆ. ಈ ಮಠಗಳು ನಿತ್ಯ ಅಣ್ಣ-ಅಕ್ಷರ ದಾಸೋಹಗಳ ಕೇಂದ್ರವಾಗಿವೆ. ತೋಂಟದಾರ್ಯ ಮಠದ ಸ್ವಾಮಿಗಳನ್ನಂತೂ ಕನ್ನಡದ ಜಗದ್ಗುರು ಎಂದೇ ಬಂನಿಸುವುದುಂಟು. ಇನ್ನು ಶಿರಹಟ್ಟಿಯ ಫಕೀರಸ್ವಾಮಿ ಮಠ ದಾವಲ್ಮಲ್ಲಿಕ್ ದರ್ಗಾಗಳು ಇಲ್ಲಿನ ಜನರ ಸಹಬಾಳ್ವೆಯ ಸಂಕೇತಗಳಾಗಿವೆ.

ಸಹಕಾರಿ ಚಳುವಳಿಯ ಹುಟ್ಟೂರು

ಎಶಿಯಾ ಖಂಡದಲ್ಲೇ ಪ್ರಥಮ ಸಹಕಾರಿ ಸಂಘ ಸ್ಥಾಪನೆ ಆದದ್ದು ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದಲ್ಲಿ. ೧೯೦೪ರಲ್ಲಿ ದೇಶದಲ್ಲಿ ಸಹಕಾರ ಚಳುವಳಿ ಆರಂಭವಾದಾಗಲೇ ಕಣಗಿನಹಾಳದಲ್ಲಿ ಸಿದ್ಧನ ಗೌಡ ಪಾಟೀಲರಿಂದ ಸಹಕಾರ ಸಂಸ್ಥೆ ಜನ್ಮ ತಾಳಿತು. ಕನಗಿನಹಾಳ ಸಹಕಾರಿ ತತ್ವದ ಜನ್ಮಸ್ಥಳವಾದರೆ, ಸಿದ್ಧನ ಗೌಡ ಪಾಟೀಲರು ಸಹಕಾರೀ ತತ್ವದ ಪಿತಾಮಹರು.

ಸ್ವಾತಂತ್ರ್ಯ ಹೋರಾಟದ ಛಾಪು

ರಜಾಕಾರರ ಹಾವಳಿ ವಿರುದ್ಧ , ಆ ಮೂಲಕ ಬ್ರಿಟಿಷರ ಏಕಚಕ್ರಾಧಿಪತ್ಯಕ್ಕೆ ಸೆಡ್ಡು ಹೊಡೆದ ವೀರರ ಗಂಡು ಭೂಮಿಯಿದು. ಮುಂಡರಗಿಯ ಮಂದಗೈ ಭೀಮರಾಯರು ಇಂಥವರಲ್ಲಿ ಅಗ್ರಗಣ್ಯರು.

ಕ್ರೀಡೆಯಲ್ಲೂ ಮುಂದೆ

ಕ್ರೀಡಾ ಕ್ಷೇತ್ರದಲ್ಲಿಯೂ ಜಿಲ್ಲೆಯ ಯುವಕರು ಪ್ರತಿಭೆ ಮೆರೆದಿದ್ದಾರೆ. ಕ್ರಿಕೆಟ್ನಲ್ಲಿ ಸುನೀಲ್ ಜೋಶಿ ಪ್ರತಿಭೆ ಮೆರೆದಿದ್ದಾರೆ. ವಿಲಾಸ ನೀಲಗುಂದ ಓಟದಲ್ಲಿ ರಾಷ್ಟ್ರ ಮಟ್ಟದ ಸಾಧನೆ ಗೈದಿದ್ದಾನೆ. ಹಾಕಿಯಲ್ಲಿ ಬೀನು ಭಾಠ, ಅಥ್ಲೆಟಿಕ್ಸ್ನಲ್ಲಿ ದ್ರಾಕ್ಞಾಯಿಣಿ ಅಸೂಟಿ, ನೀಲಮ್ಮ ಸೂಡಿ, ಸೈಕ್ಲಿಷ್ಟ್ ನೀಲವ್ವ ಮಲ್ಲಿಗವಾಡ ಮತ್ತಿತರರು ಗದುಗಿನ ಕೀರ್ತಿ ಹೆಚ್ಚಿಸಿದ್ದಾರೆ. ಕಬಡ್ಡಿ ಆಟದಲ್ಲಿ ಮುಳಗುಂದದ ಕ್ರೀಡಾಪಟುಗಳು ದೇಶದ ಗಮನ ಸೆಳೆದಿದ್ದಾರೆ.

ಪ್ರವಾಸಿ ತಾಣವೂ ಹೌದು

ಗದಗ ಜಿಲ್ಲೆಯಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ, ಕಪ್ಪತಗುಡ್ಡ, ವಿದೇಶಿ ಪಕ್ಷಿಗಳಿಗೆ ವಿಹಾರ ತಾಣವಾಗಿರುವ ಮಾಗಡಿ ಕೆರೆ, ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ ಕಟ್ಟಿಸಿದ ಡಂಬಳ ಕೆರೆ ಬಣ್ಣಿಸಲಸದಳ. ದಕ್ಷಿಣ ಕಾಶಿ ಪ್ರಸಿದ್ಧಿಯ ಗಜೇಂದ್ರಗಡದ ಶ್ರೀ ಕಾಲಕಾಲೇಶ್ವರ ದೇವಾಲಯ, ಡಂಬಳದ ದೊಡ್ಡ ಬಸಪ್ಪ ದೇವಾಲಯ, ಲಕ್ಷ್ಮೇಶ್ವರ ಮುಕ್ತಿ ಕೇಂದ್ರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಇಂತಹ ಭವ್ಯ ನೆಲೆವೀಡಾದ ಗದಗ ಜಿಲ್ಲೆಯಲ್ಲಿ ಎರಡನೇ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹ.

ಬ್ಲರ್ಬ....

ಸಾಂಸ್ಕೃತಿಕ ದೃಷ್ಟಿಯಿಂದ, ಸಾಹಿತಿಗಳಿಂದ, ವಿದ್ವಾಂಸರಿಂದ, ಮೇಧಾವಿಗಳಿಂದ, ಕಲಾವಿದರು, ಸಂಗೀತಗಾರರು, ಸಾಧು ಸಂತರು, ರಾಜ ಮಹಾರಾಜರು, ಸ್ವಾತ್ರಂತ್ರ್ಯ ಹೋರಾಟಗಾರರಿಂದ ಗದಗ ಜಿಲ್ಲೆ ಅಪಾರ ಕೀರ್ತಿ ಗಳಿಸಿದೆ. ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ಅಪಾರ. ಇಂತಹ ಭವ್ಯ ಇತಿಹಾಸವನ್ನು ಹೊಂದಿರುವ ಗದಗನಲ್ಲಿ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವುದು ಹೆಮ್ಮೆಯ ಸಂಗತಿ.

ಪ್ರಕಾಶ ಶೇಟ್ ಗದಗ





ಬತ್ತಿದಂತೆ ತೋರುವ ಮಹಾನದಿ




ನಾಗತಿಹಳ್ಳಿ ಚಂದ್ರಶೇಕರ್ ಎಷ್ಟೇ ಚಿತ್ರರಂಗದವರು ಅಂದು ಕೊಂಡರೂ, ಅವರೂ ಮೇಷ್ಟ್ರೇ, ಸಾಹಿತ್ಯ ಲೋಕದದೊಂದಿಗೆ ನಿಕಟ ಸಂಬಂಧವಿರಿಸಿಕೊಂಡವರು, ತಾವೂ ಉತ್ತಮ ಬರಹಗಾರರು. ಈ ನಮ್ಮ ಫಾಸ್ಟ್ ಜೀವನದ ನಡುವೆಯೂ ಸಾಹಿತ್ಯ ಯಾಕೆ ಬೇಕು? ಅಥವಾ ಸಾಹಿತ್ಯವೇ ಯಾಕೆ ಬೇಕು? ಎನ್ನುವ ಕುರಿತು ಮೇಷ್ಟ್ರು ಚರ್ಚಿಸಿದ್ದಾರೆ.

ಸಾಹಿತ್ಯ ಯಾಕೆ ಬೇಕು? ಎನ್ನುವುದು ಹಳತಾಯಿತು. ಈಗ ಸಾಹಿತ್ಯವೇ ಯಾಕೆ ಬೇಕು? ಎಂದು ಕೇಳುವ ದಿನಗಳಲ್ಲಿ ನಾವಿದ್ದೇವೆ. ಇದಕ್ಕೆ ಗೋಚರಿಸುವ ಒಂದು ಮುಖ್ಯ ಕಾರಣ ಬರೆವವರಲ್ಲೂ ಓದುವವರಲ್ಲೂ ಸಾವಧಾನ ಸ್ಥಿತಿಯೊಂದು ಇಲ್ಲವಾಗಿ ಬದುಕಿನ ಎಲ್ಲೆಡೆ ಇರುವ ಕ್ಷಿಪ್ರ, ವೇಗ ಮತ್ತು ಸಂಕ್ಷಿಪ್ತತೆಗಳು ಸಹಜವಾಗಿ ಸಾಹಿತ್ಯ ನಿರ್ಮಿತಿಗೂ, ಅದರ ಆಸ್ವಾದಕ್ಕೂ ದಾಳಿ ಇಟ್ಟಿರುವುದು. ಕ್ಷಿಪ್ರ, ವೇಗ ಮತ್ತು ಸಂಕ್ಷಿಪ್ತತೆಗಳು ತಂತಾನೇ ಅವಗುಣಗಳಲ್ಲ. ಅವು ಲೋಕವನ್ನು ಕೆಲವು ಲಯಗಳಲ್ಲಿ, ಕ್ಷೇತ್ರಗಳಲ್ಲಿ ಉನ್ನತಿಯತ್ತ ಕೊಂಡೊಯುಯಬಲ್ಲವು. ಲೌಕಿಕ ಬದುಕಿನ ಹಲವು ಸ್ಥರಗಳಲ್ಲಿ ವೇಗವೆಂಬುದು ಪವಾಡವನ್ನೇ ಮಾಡಿದೆ. ವಿಸ್ಮಯಗಳನ್ನು ಸೃಷ್ಟಿಸಿದೆ, ವೇಗವು ವಿಜ್ಞಾನದ ಬಹುಮುಖ್ಯವಾದ ಗುಣವೆನಿಸಿದೆ. ಆದರೆ ಒಂದು ಮುಖ್ಯ ಸಂಗತಿಯನ್ನು ಮರೆಯುವಂತಿಲ್ಲ. ಅತಿವೇಗದ ರೈಲು, ವಿಮಾನ, ಗಗನನೌಕೆ ಇತ್ಯಾದಿಗಳನ್ನು ಸೃಷ್ಟಿಸಿದ ವಿಜ್ಞಾನಿಯ ಮನಸ್ಸು ಅದಕ್ಕಾಗಿ ದೀರ್ಘಕಾಲಿನ ಧ್ಯಾನದಲ್ಲಿ, ತಪಸ್ಸಿನಲ್ಲಿ ತೊಡಗಿದ ನಂತರವೇ ಅದು ವೇಗವನ್ನು ಸಂಶೋಧಿಸಿತು. ಅಂದರೆ ವೇಗವೂ ಕೂಡ ನಿಧಾನದ ತಾಳ್ಮೆಯ ಧ್ಯಾನದ ಫಲವೇ ಆಗಿದೆ.

ಕಲೆ ಅನನ್ಯವಾದ ತಪಸ್ಸಿನ ಫಲ. ಒಂದು ಚಮತ್ಕಾರದಂತೆ ಅದು ಪಲ್ಲವಿಸಿದರೂ ಆ ಚಮತ್ಕಾರದ ಹಿಂದೆ ಆಳವಾದ ಗ್ರಹಿಕೆ, ಒಳನೋಟ, ಸೃಜನಶೀಲತೆ, ಪಾರಂಪರಿಕ ಜ್ಞಾನ, ಅಧ್ಯಯನ, ಸಂಶೋಧನೆ ಏನೆಲ್ಲಾ ಇರುತ್ತವೆ. ಸಾಹಿತ್ಯವೂ ಅಂಥದೊಂದು ಕಲೆ. ಅದು ಅತಿವೇಗವನ್ನು ನಿರಾಕರಿಸುತ್ತದೆ. ಆದ್ದರಿಂದಲೇ ಕ್ಷಿಪ್ರ, ವೇಗ ಮತ್ತು ಸಂಕ್ಢಿಪ್ತತೆಗಳು ಸಾಹಿತ್ಯಾಭಿವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ದುಷ್ಪರಿಣಾಮ ಎನ್ನುವುದು ಆತುರದ ಹೇಳಿಕೆಯಾಗಬಹುದು. ಅಂಥ ಹೇಳಿಕೆಯನ್ನು ಧೃಢೀಕರಿಸುವ ಅದಿಕಾರ ಮತ್ತು ಹೊಣೆಗಾರಿಕೆ ಕಲಕ್ಕೆ ಸಂಬಂಧಿಸಿದ್ದು. ಈಗ ದುಷ್ಪರಿಣಾಮಗಳಂತೆ ಮೇಲುಸ್ಥರದಲ್ಲಿ ಕಾಣಿಸುವುದೇ ಮುಂದೆ ಹೊಸದೊಂದು ಮೌಲ್ಯವನ್ನು ಹುಟ್ಟುಹಾಕಬಹುದು. ಚರಿತ್ರೆಯ ಪುಟಗಳಲ್ಲಿ ಅಂಥ ಉದಾಹರಣೆಗಳು ಹಲವಾರಿವೆ. ಕಾಲ ಒಂದನ್ನು ಕಿತ್ತು ಇನ್ನೊಂದನ್ನು ಕೊಟ್ಟದ್ದಿದೆ.

ನಡುಮನೆಯಲ್ಲಿ ಕುಳಿತ ಕಿರುತೆರೆ ಎಂಬ ಪೆಟ್ಟಿಗೆ ಓದುಗ ಸಮೂಹವನ್ನು ನೋಡು ಸಂಸ್ಕೃತಿಗೆ ರೂಪಾಂತರಿಸಿದೆ. ವಿಪುಲ ಚಾನೆಲ್ಗಳು, ವಿಪುಲ ಮಾಹಿತಿಗಳು, ವಿಪುಲಭಾಢೆಯಲ್ಲಿ ಬೆರಳಂಚಿನಲ್ಲಿ ಲಭಿಸುತ್ತಿರುವ ಈ ಸಮೃದ್ಧಿ, ಸೋಮಾರಿಗಳನ್ನಾಗಿಸುತ್ತಿದೆ. ಓದುವ ಬೆರಗು ಮಾಯವಾಗುತ್ತಿದೆ. ದಬದಬನೆ ಮನೆ ಬಾಗಿಲಿಗೆ ಬಂದು ಬೀಳುವ ದೃಶ್ಯಾವಳಿಗಳು ಕಲ್ಪನಾ ಶಕ್ತಿಯನ್ನು ಕಸಿದಿವೆ. ಕಿರುತೆರೆಯ ಇದಮಿತ್ಥಂ ಎಂದು ಪೈಪೋಟಿಯ ಮೇಲೆ ಸಂಕಲಿತ ದೃಷ್ಯಗಳನ್ನು ನೋಡುಗನ ಮೇಲೆ ಹೇರಿ ಅವನ ಮನೋಲೋಕದ ಇತರ ಸಾಧ್ಯತೆಗಳನ್ನೂ, ಊಹಾಶಕ್ತಿಯನ್ನೂ ಇಲ್ಲವಾಗಿಸಿ ದಣಿಸಿಬಿಡುತ್ತಿದೆ. ಸಾಹಿತ್ಯದ interpretationಗಳು ಕಿರುತೆರೆಯಲ್ಲಿ ಕಾಣೆಯಾಗುತ್ತಿವೆ. ಕಂಸ, ತ್ರಿಜ್ಯ, ವ್ಯಾಸಗಳು ಪೂರ್ವಾರ್ಧ ರಚಿಸಿ, ಉತ್ತರಾರ್ಧವನ್ನು ಓದುಗನಿಗೆ ಬಿಡುವ ಸೂಚ್ಯ ಗುಣವಿಲ್ಲದ ಕಿರುತೆರೆ ತನ್ನ ನೋಡುಗನಿಗೆ ಬೇಕಾದ್ದನ್ನೂ ಬೇಡವಾದ್ದನ್ನೂ ಹೇರಿ ಪ್ರಾಯೋಜಿಕ ಹೇಳಿದ್ದನ್ನು ಪುನರುಚ್ಚರಿಸಿ ಒಂದು ಕಮಿಶನ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಯಾವುದೇ ಮಧ್ಯವರ್ತಿಯಂತಿರದೆ, ಸ್ವಯಂಭೂ ಆಗಿರುವ ಸಾಹಿತ್ಯವನ್ನು ನಿರಪೇಕ್ಷವಾಗಿ ಗ್ರಹಿಸುವ ಓದುಗ, ಟೆಲಿವಿಷನ್ ಮುಂದೆ ಗ್ರಾಹಕನಾಗುವ ಅಪಾಯವೇ ಹೆಚ್ಚು. ನಮ್ಮ ಓದುಗ ಕಳೆದುಹೋದದ್ದು ಇಲ್ಲೇ ಇರಬೇಕು. ತ್ರಿವೇಣಿ ಕಾದಂಬರಿ ಓದುತ್ತಿದ್ದ ಹೆಣ್ಣುಮಕ್ಕಳಂಥವರು ಈ ಕಾಲಮಾನದಲ್ಲಿ ಧಾರವಾಹಿಗಳ ದಾಸರಾಗಿದ್ದಾರೆ. ಹಲವು ಸಾಧ್ಯತೆಗಳನ್ನು ತೆರೆಯಬೇಕಿದ್ದ ಟೆಲಿವಿಷನ್ ಇತ್ತಕಡೆ ಸಾಹಿತ್ಯಾಸಕ್ತರನ್ನು ಸಂಹರಿಸಿದ್ದರಲ್ಲದೆ, ಅವರನ್ನು ಗಿರಾಕಿಗಳನ್ನಾಗಿ ಮಾಡಿ ಕೂರಿಸಿದೆ. ದಿನಪತ್ರಿಕೆಯ ಸುದ್ದಿವಿವರಗಳನ್ನು ಬಿಚ್ಚಿ ಓದುವ ಕೌತುಕವನ್ನೂ ಕಸಿದು, Flash news, Breaking newsಗಳನ್ನು ಹೇರಿ ತರ್ಕ, ಶೋಧನೆ, ತರತಮ ಜ್ಞಾನವನ್ನು ಕೊಂದಿದೆ. ಇದು ತಾತ್ಕಾಲಿಕವಿರಬಹುದು. ಆದರೆ ಓದುಗ ನಾಶವಾಗಿರುವುದು ನಿಜ. ಸಾಹಿತ್ಯದಲ್ಲಿ ಲಭಿಸುತ್ತಿದ್ದ ಆಳಾವಾದ ಗ್ರಹಿಕೆ, ನಿರಾಕಾರವಾದ ಅರಿವು, ವ್ಯಕ್ತಿತ್ವ ಮತ್ತು ಸಮಾಜವನ್ನು ಏಕರೂಪದಲ್ಲಿ ಕಟ್ಟುವ ಕ್ರಿಯೆ ಇವೆಲ್ಲವಕ್ಕೂ ಪರ್ಯಾಯವಾಗಿ ಹಸಿರೋಮಾಂಚನವಷ್ಟನ್ನೇ ಕೊಡುತ್ತಾ ಬರುತ್ತಿರುವ ಟೆಲಿವಿಷನ್, ಓದುಗನನ್ನು ತನ್ನೆಡೆಗೆ ಕಸಿಯಲು ಹುಸಿರೋಮಾಂಚನವನ್ನೇ ಬಂಡವಾಳ ಮಾಡಿಕೊಂಡಿದೆ.

ಆದರೆ ಓದುಗರ ಸಂಖ್ಯೆ, ಆಸಕ್ತಿ ಕ್ಷೀಣಿಸುವುದಕ್ಕೆ ಟೆಲಿವಿಷನ್ ಒಂದೇ ಕಾರಣವಲ್ಲ. ಹಾಗೆ ನೋಡಿದರೆ ಇದ್ದುದರಲ್ಲಿ ಸರ್ಕಾರಿ ಚಂದನ ವಾಚನಾಭಿರುಚಿ ಬೆಳೆಸಲು ಕೆಲವು ಕಾರ್ಯಕ್ರಮಗಳನ್ನಾದರೂ ಮಾಡುತ್ತಿವೆ. ಖಾಸಗೀ ವಾಹಿನಿಗಳೆಲ್ಲಾ ಟಿ.ಆರ್.ಪಿ ಉಳಿಸಿಕೊಳ್ಳುವ ಧಾವಂತದಲ್ಲಿ ಸಾಹಿತ್ಯವನ್ನೂ ಒಳಗೊಂಡಂತೆ ಎಲ್ಲಾ ಗಂಭೀರ ಕಲೆಗಳನ್ನೂ ಕಡೆಗಣಿಸಿವೆ. ಕಿರುತೆರೆಯಲ್ಲಿ ಟಿ.ಆರ್.ಪಿ ಎನ್ನುವ ಮಾತೇ ಸಿನಿಮಾಗಳಲ್ಲಿ ಗಲ್ಲಾಪೆಟ್ಟಿಗೆ ಆಗುತ್ತದ್ದೆ. ಟೆಲಿವಿಷನ್ನಿಂದ ಸಾಹಿತ್ಯಕ್ಕೆ ಪೆಟ್ಟುಬಿತ್ತು ಎಂಬಂತೆಯೇ ಸಿನಿಮಾಕ್ಕೆ ಟೆಲಿವಿಷನ್ನಿಂದ ಪೆಟ್ಟುಬಿತ್ತು ಮುಂತಾದ ಆರೋಪ ಪ್ರತ್ಯಾರೋಪಗಳಿವೆ. ಸಿನಿಮಾ ಬಂದಾಗ ನಾಟಕ ನಾಶವಾಯಿತು ಎಂಬುದು ಇಂಥದ್ದೇ ಆರೋಪ. ಹೊಸ ಅವಿಷ್ಕಾರಗಳು ಬಂದೇ ತೀರುತ್ತವೆ. ಒಂದರ ಪ್ರಭಾವದಿಂದ ಮತ್ತೊಂದು ಮುಸುಕಾಗಬಹುದು. ಹೊಸ ರೂಪ ತಾಳಬಹುದು. ಇದು ಅನಿವಾರ್ಯ.

ಮೂಲಭೂತ ಪ್ರಶ್ನೆಯಿರುವುದು ಏರುತ್ತಿರುವ ಜನಸಂಖ್ಯಾ ಪ್ರಮಾಣಕ್ಕನುಗುಣವಾಗಿ ಹೆಚ್ಚಬೇಕಾದ ಓದುಗ ಸಮೂಹ ಏನಾಯಿತು? ಅವರ ಕಣ್ಣು, ಕೈ, ಮೆದುಳು ಏನಾದವು? ಮೊಬೈಲ್, ಕಂಪ್ಯೂಟರ್, ಸೆಳೆದವೇ? ತರಗತಿ ಕೋಣೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸೋಣ. ವಿಷ್ವವಿದ್ಯಾಲಯಗಳು ಜಡಗೊಂಡಿವೆ. ಅಲ್ಲಿನ ಪಠ್ಯ ಬೋಧನೆ ಜೀವಂತಿಕೆ ಕಳೆದುಕೊಂಡಿವೆ. ಕೊಂಚ ಕ್ರಿಯೇಟಿವ್ ಇದ್ದವರು ಅಕಾಡೆಮಿ, ಪ್ರಾಧಿಕಾರ, ಉಪಕುಲಪತಿಗಿರಿ, ಎಂಎಲ್ಸಿ ಮೊಂತಾದ ಪ್ರಲೋಭನೆಗಳಿಂದ ಕಾಲ್ತೆಗೆಯುತ್ತಾರೆ. ಚಿಂತಕರಿಗೆ ಅಲ್ಲಿ ಉಳಿಗಾಲವಿಲ್ಲ. ಹೊಜರ್ಿಗಿಯಲು ಹೊಂಚುಹಾಕುವವರು ಮತ್ತು ಅಸಹಾಯಕ ಪ್ರತಿಭಾವಂತರು ಮಾತ್ರ ಉಳಿದಿರುತ್ತಾರೆ. ವಿವಿಗಳಲ್ಲಿ ಓದು ಸಂಶೋಧನೆ, ಸೃಜನಶೀಲ ಬರವಣಿಗೆ, ಪಾರಂಪರಿಕ ಸಾಹಿತ್ಯದ ಅಧ್ಯಯನ ಎಲ್ಲಕ್ಕೂ ಚ್ಯುತಿ ಬಂದಿದೆ. ಹೊಸ ಓದು, ಹೊಸ ಬರವಣಿಗೆ, ಸ್ಥಗಿತಗೊಂಡ ಪಠ್ಯಾವರಣದಲ್ಲಿ ಸಾಹಿತ್ಯ ಚಟುವಟಿಕೆಗಳು ಔಟ್ಡೇಟೆಡ್ ಆಗುತ್ತಿವೆ. ಎಂಭತ್ತರ ದಶಕದಲ್ಲಿ ನಾವು ಸಾವಿರ ಪುಸ್ತಕಗಳು ಅಚ್ಚು ಹಾಕುತ್ತಿದ್ದೆವು. ಲೈಬ್ರರಿಗಳಿಗೆ ಇನ್ನೂರು, ಮಳಿಗೆಗಳಿಗೆ ನೂರು, ಕಾಂಪ್ಲಿಮೆಂಟರಿಗೆ ಮುನ್ನೂರು, ಮತ್ತು ತೂಕಕ್ಕೆ ನಾನೂರು ಎಂದು. ಮೂರು ದಶಕಗಳ ನಂತರವೂ ಈ ಲೆಕ್ಕ ಏಕೆ ಬದಲಾಗಿಲ್ಲ? ಹೊಸ ಓದುಗರು ಬರಲೇ ಇಲ್ಲವೆ? non-fictionಗಳಂತೂ ಅನಾಥವಾಗುತ್ತಿದೆ. ಬಹುತೇಕ ಬ್ಲಾಗ್ಗಳೂ ಸಹ ಅವನು ಅವಳು ಮತ್ತು ಪ್ರೀತಿಗೆ ಮೀಸಲು, ಬ್ಲಾಗ್ಗಳನ್ನು ಸಾಹಿತ್ಯದ ಪರಿಧಿಯೊಳಗಿಟ್ಟು ನೋಡಿದರೂ ಅಲ್ಲಿ ಮಹತ್ವದ ಕೊಡುಗೆ ಕಾಣುತ್ತಿಲ್ಲ. ಅವು ಬಹುಮಟ್ಟಿಗೆ Personal noteನಂತಿರುತ್ತವೆ.

ಪ್ರತಿಷ್ಟಿತ ವಿವಿಯ ಹಿರಿಯ ಪ್ರಾಧ್ಯಾಪಕರು ಹೇಳುತ್ತಾರೆ: ಹಳಗನ್ನಡದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಕಡಿಮೆಯಾಗಿದೆ. ಹೊಸಗನ್ನಡ ಮತ್ತು ಹಳೆಗನ್ನಡ ಬೇರೆ ಮಾಡುವುದು ಉಚಿತ. ಪಂಪನಂಥ ಕವಿಯನ್ನು ಪೂರ್ಣವಾಗಿ ಓದುವ ತಾಳ್ಮೆ ಯಾರಿಗೂ ಇಲ್ಲ. ಭಾಗಶಃ ಪಠ್ಯವಾಗಿಸಿದರೆ ಅವರಿಗೆ ಪಂಪನನ್ನು ಗ್ರಹಿಸಲಾಗುವುದಿಲ್ಲ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ್ದೂ ಅದೇ ಕಥೆ. ಇದು ಕೊಟೇಶನ್ಗಳ ಕಾಲ.
ಮತ್ತೊಬ್ಬರ ಮಾತು ಮಾರ್ಮಿಕವಾಗಿದೆ:
ಆ ಪುಸ್ತಕದ ಸಾರಾಂಶವನ್ನು ಎರಡು ಸಾಲಿನಲ್ಲಿ ಎಸ್.ಎಮ್.ಎಸ್ ಮಾಡಿ ಸಾಕು, ಮ್ಯಾನೇಜ್ ಮಾಡಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು. ಇದು ಅವರ ತಪ್ಪೋ, ಕಾಲದ ಮಹಿಮೆಯೋ ತಿಳಿಯದು. ಸಂಶೋಧನೆಯ ಕಾರ್ಯ ಎಷ್ಟು ಅಗ್ಗವಾಗಿದೆ ಎಂದರೆ ಗೋಗಲ್ನಲ್ಲಿ ಸರ್ಚ್ ಮಾಡಿ ಕಟ್ ಅಂಡ್ ಪೇಸ್ಟ್ ಮಾಡಿ ಡಾಕ್ಟರೇಟ್ ಪಡೆಯುತ್ತಾರೆ. ಯಾವುದಕ್ಕೂ ತಾಳ್ಮೆ, ಶ್ರದ್ಧೆ ಇಲ್ಲ, ಇನ್ನು ಗೌರವ ಡಾಕ್ಟರೇಟ್ಗಳಂತೂ ಹರಾಜಿಗಿವೆ. ಮುಖ್ಯಮಂತ್ರಿಗಳಂಥಾ ಪ್ರಭಾವಿ ರಾಜಕಾರಣಿಗಳಿಗೆ ಕರೆದು ಡಾಕ್ಟರೇಟ್ ನೆತು ಹಾಕುವ degeneration ಪ್ರಾರಂಭವಾಗಿದೆ. ಕೊಡುವವರೂ, ಪಡೆಯುವವರೂ ಅನರ್ಹರಾಗಿದ್ದರೆ ಪದವಿಗಳಿಗೆ ಏನು ಮರ್ಯಾದೆ?

ವಿದ್ಯುತ್, ವಿದ್ವತ್ಗಳಿಲ್ಲದೆ ಕತ್ತಲಲ್ಲಿ ಕೊಳೆಯುತ್ತಿರುವ ವಿವಿಗಳಲ್ಲಿ ಕಾಣಿಸುವುದು ಬರಿಯ ಕಾರಕೂನ ಪ್ರಜ್ಞೆ. ಆದ್ದರಿಂದಲೇ ಇಂದಿನವರೆಗೂ ನಮ್ಮ ವಿವಿಗಳಿಗೆ ಜಾಗತೀಕರಣವನ್ನು ಸಮರ್ಥವಾಗಿ ಎದುರಿಸಿ ನಮ್ಮ ನೆಲ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಒಂದು ಶೈಕ್ಷಣಿಕ ಆಯುಧವನ್ನು ರೂಪಿಸಿ ಸಮಾಜ ಮತ್ತು ಸರ್ಕಾರದ ಕೈಗೆ ಕೊಡಲಾಗಿಲ್ಲ. ಇಷ್ಟೆಲ್ಲಾ ಘನಕಾರ್ಯವಿರಲಿ, ವಿವಿಗಳು ತಮ್ಮ ಪಠ್ಯಕ್ರಮ, ಪರೀಕ್ಷಾ ವೇಳಾಪಟ್ಟಿಯನ್ನು ಸಕಾಲಿಕವಾಗಿ ಸಿದ್ಧಪಡಿಸಲಾಗದ ದುರವಸ್ಥೆಯಲ್ಲಿದೆ. ಮಕ್ಕಳಿಗೆ ಬಾಲ್ಯವಿಲ್ಲ. ತರುಣರಿಗೆ ಸಾಹಿತ್ಯ ಆದ್ಯತೆಯಲ್ಲ. ಹೆತ್ತವರಿಗೆ ಮಾತೃಭಾಷೆಯ ಶಿಕ್ಷಣದಲ್ಲಿ ನಂಬಿಕೆಯಿಲ್ಲ. ಶಾಲೆಗಳಲ್ಲಿ ಸಾಹಿತ್ಯ ಎನ್ನುವುದು ಸೆಕೆಂಡರಿ. ಅಚ್ಚಾದ ಪುಸ್ತಕಗಳು ಓದುಗನನ್ನು ತಲುಪುತ್ತಿಲ್ಲ. ಅನೇಕ ಪುಸ್ತಕಗಳಿಗೆ ತತ್ಕ್ಷಣದ ವಿಮರ್ಶೆಯ ಭಾಗ್ಯವಿಲ್ಲ. ಕಾದಂಬರಿಗಳಿರಲಿ, ನೀಳ್ಗತೆಬರೆಯಲೂ ಪುರುಸೊತ್ತಿಲ್ಲ. ಯಾರೂ ಓದುವುದಿಲ್ಲ ಎಂಬ ಅಳುಕು ಬರೆಯುವವನದು. ಬರೆಯುವುದನ್ನು ಸಂಕ್ಷಿಪ್ತವಾಗಿ ಬರೆಯಿರಿ ಎಂಬ ಆಗ್ರಹ ಓದುಗನದು. ಸಾಧ್ಯವಾದರೆ ಕುವೆಂಪು, ಪುತಿನ, ಬೇಂದ್ರೆ ಗೀತೆಗಳನ್ನು ಆಡಿಯೋ-ವೀಡಿಯೊ ಮಾಡಿಸಿ ಅಲ್ಲೇ ಕೇಳುತ್ತೇವೆ-ಅಲ್ಲೇ ನೋಡುತ್ತೇವೆ ಅನ್ನುತ್ತಾರೆ. ಕಾವ್ಯವನ್ನು ಓದಬೇಕೇಕೆ? ಕೇಳಲಾಗದೆ? ನೋಡಿದರಾಗದೆ?

ಮಹಾಕಾವ್ಯವನ್ನು ಓದುವುದು ಬೇಡ-ಪ್ರವಚನ ಕೇಳಿದರೆ ಸಾಕು! ಹೀಗೆಂದ ಕೂಡಲೇ ಟೀವಿಯಲ್ಲಿ ಕಾಣಿಸಿಕೊಳ್ಳುವ ಖಯಾಲಿಯುಳ್ಳ ವೃತ್ತಿ ಪ್ರವಚನಕಾರರು ಹೆಚ್ಚಾಗುತ್ತಾರೆ. ಈ ವ್ಯಾಖ್ಯಾನಕಾರರು ಸಾಹಿತ್ಯ ವಿಮರ್ಶಕರಂತೆಯೇ ಗೌರವಾನ್ವಿತ ನಿರುಪಯುಕ್ತರು. ಅವರು ಸಾಹಿತ್ಯವನ್ನು ಬೆಳೆಸಲಾರರು. ಓದುಗನನ್ನು ಬೆಳೆಸಲಾರರು. ದಲ್ಲಾಳಿಗಳ ಹಸ್ತಕ್ಶೇಪವಿರುವ ಯಾವುದೂ ಊರ್ಜಿತವಾಗಲಾರದು. ಸಾವಿರಾರು ವರ್ಷಗಳ ಪರಂಪರೆ ಇರುವ ಸಾಹಿತ್ಯಕ್ಕೆ ದಲ್ಲಾಳಿ ಬೇಕೆ? ಮಹಾಕಾವ್ಯ ಅಥವ ಕಾದಂಬರಿಯೊಂದನ್ನು ನಾಲ್ಕು ಸಾಲುಗಳಲ್ಲಿ ಹೇಳಿ ಅಥರ್ೈಸುವ ವ್ಯಾಖ್ಯಾನಕಾರನೂ, ಅಷ್ಟರಲ್ಲೇ ತೃಪ್ತಿಪಡುವ ಸಹೃದಯನೂ ಈಗ ಹೆಚ್ಚುತ್ತಿದ್ದರೆ. ಎಲ್ಲಾ ಕ್ಷಿಪ್ರ ವೇಗ ಮತ್ತು ಸಂಕ್ಷಿಪ್ತ! ಇದನ್ನು ಸ್ಪರ್ಧಾತ್ಮಕ ಎಂದು ತಪ್ಪಾಗಿ ಕರೆಯಲಾಗುತ್ತಿದೆ. ನಿರರ್ಥಕ ಎನ್ನುವುದನ್ನು ಬಿಟ್ಟು.

ಇತ್ತೀಚೆಗೆ ಮೈಸೂರಿನಲ್ಲಿ ಹತ್ತು ಕೃತಿಗಳ ಬಿಡುಗಡೆಗೆ ಹೋಗಿದ್ದೆ. ಎಲ್ಲವನ್ನೂ ಓದಿಕೊಂಡು ಟಿಪ್ಪಣಿ ಮಾಡಿಕೊಂಡು ಹೋಗಿದ್ದೆ. ಅಲ್ಲಿ ನನಗೆ ತಿಳಿದದ್ದು ಇಡೀ ಸಭೆಗೆ ಹತ್ತು ಕೃತಿಯನ್ನು ಕುರಿತು ವಿವರವಾದ ಪರಿಚಯ ಕೂಡ ಬೇಕಾಗಿಲ್ಲ ಎಂದು. ವ್ಯವಸ್ಥಾಪಕರೂ ಕೂಡ ಇದನ್ನು ಅರಿತು, ನೀವು ಪುಸ್ತಕ ಕುರಿತು ಮಾತನಾಡುವ ಅಗತ್ಯವಿಲ್ಲ, ಜನರಲ್ ಆಗಿ ಮಾತನಾಡಿ ಸಾಕು ಎಂದರು. ಕೃತಿಗಳಿಗೆ ಮೊದಲ ನ್ಯಾಯ, ಮನ್ನಣೆ ಮತ್ತು ವಿಮರ್ಶೆ ದೊರಕುವುದೇ ಬಿಡುಗಡೆ ಸಮಾರಂಭದಲ್ಲಿ. ಅಲ್ಲಿಯೂ ಜನರಲ್ ಆಗಿ ನಾಲ್ಕು ಮಾತು ಆಡುವುದು ಎಷ್ಟು ಸರಿ? ಹಟಕ್ಕೆ ಬಿದ್ದವನಂತೆ ಹತ್ತೂ ಕೃತಿಗಳನ್ನು ಕುರಿತು ವಿವರವಾಗಿ ಮಾತನಾಡಿದೆ. ಆದರೆ ನಂತರ ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಳಂಬವಾದವೆಂಬ ಚಡಪಡಿಕೆ. ಬೇಗ ಮುಗಿಸುವ ಆತುರ ಎದ್ದು ಕಾಣುತ್ತಿದ್ದವು. ಇಂಥ ಉದಾಹರಣೆಗಳು ಅನೇಕ. ವಿಚಿತ್ರವಾದ ಒತ್ತಡ. ಅಸಹಜವಾದ ವೇಗ ನಮ್ಮ ಧ್ಯಾನಸ್ಥ ಸ್ಥಿತಿಯನ್ನು ಕೊಂದುಬಿಟ್ಟಿವೆ. ರಾತ್ರಿ ಊಟ ಪಾನಗಳಿಗೆ, ಲಘುದಾಟಿಯ ಹರಟೆಗಳಿಗೆ ಘಂಟೆಗಟ್ಟಲೆ ವ್ಯಯ ಮಾಡಲು ನಮಗೆಲ್ಲಾ ಸಮಯವಿದೆ. ಆದರೆ ಸಹಿತ್ಯವು ಒತ್ತಾಯಿಸುವ ಕಾಲಾವಕಾಶವನ್ನು ಕೊಡಲು ನಮ್ಮ ಬಳಿ ಸಮಯವಿರುವುದಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಸಂಕೀರ್ಣಗಳಿಗೆ ವ್ಯಯಿಸುವ ಹೊತ್ತಿಗಿಂತ, ಭೋಜನಾಲಯದಲ್ಲಿ ವ್ಯಯಿಸುವ ಹೊತ್ತೇ ಬಹಳವಾಗಿರುತ್ತವೆ.

ನಮ್ಮ ಆರ್ಥಿಕ ಸಂಬಂಧಗಳು ಬದಲಾಗಿವೆ. ಸಾಹಿತ್ಯವು ಮೊದಲಿನಷ್ಟು ಆದ್ಯತೆಯ ವಿಷಯವಾಗಿಲ್ಲ ಎಂದರೆ ಅದು ಹಳಹಳಿಕೆಯಲ್ಲ; ಕಠೋರ ವಾಸ್ತವ. ಸಾಹಿತ್ಯ ಮಾತ್ರವಲ್ಲ; ಬದುಕಿನ ಎಲ್ಲ ಕ್ರಮಗಳೂ ಗೊಂದಲಗೊಂಡಿವೆ, ಗಾಯಗೊಂಡಿವೆ. ವರ್ತಮಾನದ ಸಿನೆಮಾ ಉದ್ಯೋಗದಲ್ಲಿರುವ ನನ್ನಂಥ ಸಾಹಿತಿಗಳಿಗೆ ಈ ವೇಗವೆಂಬ ಛಾಟಿ ಏಟು ಅಲ್ಲೂ ಓಡಲಾಗದ ಕುದುರೆಗೆ ಬೀಳುವ ಏಟಿನಂತಿದೆ. ಧ್ಯಾನದ ಅಗತ್ಯವಿರುವ ಒಂದು ಶಾಟ್ ಅನ್ನು ಸಸ್ಪೆನ್ಸ್ ಮಾಡಲು ಹೆದರಿ ನಿರ್ದಯವಾಗಿ ಕತ್ತರಿಸಿ ಹಾಕಿ ದುಃಖವನ್ನೂ ವಿಷಾದವನ್ನೂಯಾರ್ಪಿಂಗ್ ಮಾಡುತ್ತಿದ್ದೇವೆ. ಹಾಗೆ ಮಾಡದೇ ಇದ್ದರೆ ಪ್ರೇಕ್ಷಕ ಆಕಳಿಸುತ್ತಾನೆ ಎಂದು ನಿರ್ಮಾಪಕರಿರಲಿ, ವಿಮರ್ಶಕನೇ ಸೂಚಿಸುತ್ತಾನೆ, ಮತ್ತು ಅದು ಸತ್ಯ ಕೂಡ ಆಗಿರುತ್ತದೆ. ಎರಡು ಗಂಟೆಯ ಕತ್ತಲೆ ಚಿತ್ರಮಂದಿರದಲ್ಲಿ ಅತೀ ವೇಗವನ್ನೇ ಬಯಸುವ ಪ್ರೇಕ್ಷಕ- ಹೊರಗೆ ಬಂದು ನೋಡಿದರೆ ಅದೇ ಆಲಸಿ ಟೀ ಶಾಪ್ ಗಳು, ಬಸ್ಸ್ಟಾಪಿನಲ್ಲಿ ಗಂಟೆಗಟ್ಟಲೆ ನಿಂತ ಜನ ಸಮಯ ಸ್ಥಬ್ಧವಾಗಿರುತ್ತದೆ! ಹಾಗಾದರೆ ಬದುಕಿನ ವೇಗಕ್ಕಿಂತಕಲೆಯ ಆಸ್ವಾದನೀಯ ಹೇಗೆ ಮತ್ತು ಏಕೆ ಹೆಚ್ಚಾಯಿತು?

ಅಪಾಯಕಾರಿ ಸಾಮಾಜಿಕ ಮನೋಧರ್ಮವೆಂದರೆ, ಅಡ್ಜಸ್ಟ್ಮೆಂಟ್. ಎಲ್ಲವನ್ನೂ ಸಹಿಸಿಕೊಂಡು ಹೋಗುವ, ಅಪ್ಪಟ ದೈನೇಸಿಯಾದ, ಪ್ರಷ್ನೆಗಳಿಗೂ ಚಳುವಳಿಗೂ ಬೆನ್ನುಮಾಡಿದ, ಎಲ್ಲವನ್ನೂ ಜಡಗೊಂಡು ಒಪ್ಪಿಕೊಳ್ಳುವ ಸ್ಥಿತಿ. ದೂರದಲ್ಲಿಯೂ ಚಳುವಳಿಯ ಹೋರಾಟದ ಕಿಡಿ ಗೋಚರಿಸುತ್ತಿಲ್ಲ. ಯಾರಿಗೂ ಯಾವುದು ಬೆಚ್ಚಿ ಬೀಳಿಸುತ್ತಿಲ್ಲ. ಎಲ್ಲರಿಗೂ ಎಲ್ಲವೂ ಗೊತ್ತಿದೆ ಎಂಬ ಭ್ರಮೆ, ಮತ್ತು ಅಹಂ. ಎಂಥ ಸಾಮಾಜಿಕ ದುರಂತವೂ ಕಲಕದ ಸ್ಥಿತಿ. ಬಾಲ್ಯಗಳು ಸಮ್ಮರ್ ಕ್ಯಾಂಪ್ಗಳಲ್ಲಿ ಮುಗಿದುಹೋಗುತ್ತದೆ. ಕ್ಲೀಷೆಗಳಿಂದ ಅತೀತವಾದುದು ಕೈಗೆ ಸಿಗುತ್ತಿಲ್ಲ. ಇಲ್ಲಿ ಬರೆಯುವುದೇನು? ಓದುವುದೇನು? ಯಾಕಾಗಿ ಬರೆಯಬೇಕು? ಯಾಕಾಗಿ ಓದಬೇಕು? ಲಾಭಾಕಾಂಕ್ಷಿಯಾದ ಆಧುನಿಕ ಮನಸ್ಸಿನ ಪ್ರಷ್ನೆ ಇದು. ಕನಿಷ್ಟ ಮನರಂಜನೆಯಾದರೂ ಬೇಕು ಎನ್ನುವುದು ಲಾಭಾಕಾಂಕ್ಷಿಯ ಆಸೆ. ಆದರೆ ಇಂಥಾ ಪ್ರಯೋಜನಗಳಾಚಿಗಿರುವ ಸಾಹಿತ್ಯವೆಂಬುವ ಧಾತು ಉಳಿಯುವುದು ಹೇಗೆ?

ನನ್ನ ಮಾತುಗಳು ನಿರಾಶಾವಾದದಿಂದ ಕೂಡಿರುವಂತೆ ಕಾಣಿಸಬಹುದು.ಮಹತ್ವಾಕಾಂಕ್ಷಿಯೂ ಜೀವಪರತೆಯಲ್ಲಿ ಗಾಢ ನಂಬಿಕೆ ಉಳ್ಳವನು, ಬೇರುಗಳನ್ನು ನೆಚ್ಚಿದವನೂ ಆಗಿಯೇ ಮೆಲಿನ ಮಾತುಗಳನ್ನು ಆಡಿದ್ದೇನೆ. ಇದೆಲ್ಲದರ ನಡುವೆಯೂ ಗಂಭೀರ ಚಟುವಟಿಕೆಯ ಜನರು ನಮ್ಮ ನಡುವೆ ಕೆಲವರಾದರೂ ಇದ್ದಾರೆ ಎಂದು ನಾನು ಬಲ್ಲೆ. ಸಾಹಿತ್ಯವೆಂಬುದು ಒಳದನಿ. ಅದು ಮಗುವಿನ ಮೊದಲ ತೊದಲ ಮತ್ತು ಸಾವಿನಂಚಿನ ಹೇಳಿಕೆ ಕೂಡ. ಅದು ಸ್ವಸ್ಥ ಸಮಾಜಾಪೇಕ್ಷಿ. ಉತ್ತಮಿಕೆಗಾಗಿ ಹಂಬಲಿಸುವ ನಿರಂತರ ತಿದ್ದುಪಡಿ. ಈ ಘನವಾದ ಅಭಿವ್ಯಕ್ತಿಯು ಎಂದೂ ಆರಬಾರದ ಸದಾ ಎಚ್ಚರವಿರಬೇಕಾದ ಉರಿ. ಎಂಥ ಬಿಕ್ಕಟ್ಟಿನಲ್ಲೂ ಪಾರಾಗಿ ಜ್ವಲಿಸುವ ಅಂತಃಪ್ರಭೆ. ಸಾಹಿತ್ಯವು ತನ್ನ ಬದ್ಧತೆ ಮತ್ತು ಆರ್ದತೆಗಳೆಂಬ ಜೀವಪೋಷಕಗಳಿಂದ ವ್ಯಷ್ಟಿ ಮತ್ತು ಸಮಷ್ಟಿಯನ್ನು ಏಕಕಾಲದಲ್ಲಿ ಪೊರೆಯಬಲ್ಲ ಮಹಾನದಿ.
ನದಿ ಬತ್ತಿದಂತೆ ತೋರುತ್ತಿದೆ.
ಮುಂದೆ?
ಮೇಲೆ ಮಳೆಯಾಗಿ ಹಳ್ಳ, ಕೊಳ್ಳ ಕಿರು ಹೊಳೆ, ಉಪನದಿಗಳೆಲ್ಲಾ ತುಂಬಿ ಜೀವಕುಲ ಸಮೃದ್ಧಗೊಂಡು ಈ ಮಹಾನದಿಯಲ್ಲೂ ಪ್ರವಾಹ ಬರಬಹುದು. ನನಗೂ ನಿಮ್ಮಂತೆ ಆಸೆ ಮತ್ತು ಕುತೂಹಲಗಳಿವೆ.
(ಮಯೂರದಲ್ಲಿ ಪ್ರಕಟಿತ)