ಕನ್ನಡದ ರಂಗಭೂಮಿಗೆ ಅತ್ಯಂತ ಶ್ರೀಮಂತ ಇತಿಹಾಸವಿದೆ. ಇಂದು ಕೂಡ ಬೇರೆ ಇತರತ್ರ ಭಾಷೆಗಳಿಗಿಂತ ಕನ್ನಡದ ರಂಗಭೂಮಿ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದೆ.
ಈ ಕ್ರಿಯಾಶೀಲ ಶ್ರೀಮಂತಿಕೆಗೂ ಕನ್ನಡ ಸಾಹಿತ್ಯಕ್ಕೂ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ಸದ್ಯ ಮೈಸೂರಿನ ರಂಗಾಯಣದ ನಿರ್ದೇಶಕರಾಗಿರುವ ಲಿಂಗದೇವರು ಹಳೆಮನೆ ಚರ್ಚಿಸಿದ್ದಾರೆ.


ಕನ್ನಡ ಸಾಹಿತ್ಯ ಮತ್ತು ರಂಗಭೂಮಿ

ಸಾಹಿತ್ಯದ ಪ್ರಕಾರಗಳಲ್ಲಿ ನಾಟಕಕ್ಕೆ ವಿಶಿಷ್ಟವಾದ ಸ್ಥಾನ ಇದೆ. ಹಿಂದೆ ನಾಟಕವನ್ನು ಕಾವ್ಯ ಎಂದೇ ಪರಿಗಣಿಸಲಾಗುತ್ತಿತ್ತು. 'ಕಾವ್ಯೇಷು ನಾಟಕಂ ರಮ್ಯಂ' ಎಂಬುದು ಪ್ರಸಿದ್ಧವಾದ ಹೇಳಿಕೆ. ಹಾಗಾಗಿ ಕನ್ನಡ ಸಾಹಿತ್ಯದಲ್ಲೂ ಬಹಳ ದೀರ್ಘಕಾಲ ನಾಟಕವನ್ನು ಓದುವ ಕೃತಿಯಾಗಿಯೇ ಪರಿಭಾವಿತವಾಗಿತ್ತು. ಕನ್ನಡದ ಮೊದಲ ನಾಟಕ ಗೀತಗೋವಿಂದವನ್ನು ತಿರುಮಲಾರ್ಯ ಬರೆದ ಸಂದರ್ಭದಲ್ಲಿ ಅದನ್ನು ಪ್ರದರ್ಶಿಸಿದರು ಎಂಬುದಕ್ಕೆ ದಾಖಲೆಗಳಂತೂ ಸಿಕ್ಕಿಲ್ಲ.

ಆಧುನಿಕ ಕಾಲದಲ್ಲಿ ಪ್ರಾರಂಭದ ಹಂತದಲ್ಲಿ ಓದುವ ನಾಟಕಗಳನ್ನು ಬರೆದವರೇ ಹೆಚ್ಚು. ಡಿ.ವಿ. ಗುಂಡಪ್ಪರವರಂತೂ ತಮ್ಮ ನಾಟಕಗಳನ್ನು ಓದುವ ನಾಟಕಗಳು ಎಂದೇ ಹೇಳಿಕೊಂಡರು. ಕುವೆಂಪು ಅವರು ತಮ್ಮ ನಾಟಕಗಳು ರಂಗಮಂದಿರದಲ್ಲಿ ಪ್ರದರ್ಶಿಸಲು ಸಾಧ್ಯ ಇಲ್ಲ. ಅವುಗಳನ್ನು ಮನೋ ರಂಗಮಂದಿರದಲ್ಲಿ ಕಲ್ಪಿಸಿಕೊಳ್ಳಬೇಕು ಎಂದರು. ಸಂಸ್ಕೃತದಿಂದ, ಇಂಗ್ಲಿಷಿನಿಂದ, ಗ್ರೀಕ್ನಿಂದ ನಾಟಕಗಳನ್ನು ಅನುವಾದಿಸಿದ, ರೂಪಾಂತರಿಸಿದ ಬಸವಪ್ಪಶಾಸ್ತ್ರಿಗಳು, ಶ್ರೀಕಂಠೇಶಗೌಡರು ಮತ್ತು ಕ.ವೆ. ರಾಘವಾಚಾರ್ಯರು ನಾಟಕವನ್ನು ಪ್ರದರ್ಶಿಸುವುದಕ್ಕೆ ಅನುಕೂಲವಾಗುವಂತೆ ಅನುವಾದಿಸಲಿಲ್ಲ, ರೂಪಾಂತರಿಸಲಿಲ್ಲ. ಅವು ಓದುವುದಕ್ಕೆ ಮಾತ್ರ ಸೂಕ್ತವಾಗಿದ್ದವು.

ನಾಟಕ ಇರುವುದು ಓದುವುದಕ್ಕಲ್ಲ, ರಂಗದ ಮೇಲೆ ಪ್ರದರ್ಶಿಸುವುದಕ್ಕೆ ಎಂದು ಮೊದಲು ಪ್ರತಿಪಾದಿಸಿದವರು ಶಿವರಾಮ ಕಾರಂತರು. ಅವರು ತಮ್ಮ 'ಗೀತನಾಟಕ'ಗಳಿಗೆ ಬರೆದ ಮುನ್ನುಡಿಯಲ್ಲಿ ಈ ಮಾತನ್ನು ಹೇಳಿದ್ದಾರೆ. ಆಡುವ ನಾಟಕಗಳನ್ನು ದೊಡ್ಡ ಪ್ರಮಾಣದಲ್ಲಿ ಬರೆದವರು ಕೈಲಾಸಂ ಮತ್ತು ಶ್ರೀರಂಗರು. ವಾಸ್ತವವಾದಿ ನಾಟಕಗಳನ್ನು ಬರೆದ ಈ ಇಬ್ಬರು ನಾಟಕಕಾರರು ಪ್ರಥಮತಃ ರಂಗ ಭಾಷೆಯನ್ನು ಅತ್ಯಂತ ಶಕ್ತಿಯುತವಾಗಿ ಬಳಸಿದರು. ಆದರೆ ಕೈಲಾಸಂ ಜೊತೆ-ಜೊತೆಗೇ ನಾಟಕಗಳನ್ನು ಬರೆದ ಪಂಪ ಅವರು ತಮ್ಮ ನಾಟಕಗಳನ್ನು ರಂಗ ಪ್ರದರ್ಶನಕ್ಕೆ ಅನುಕೂಲವಾಗುವಂತೆ ರಚಿಸಿದರೂ ಭಾಷೆಯ ವಿಷಯದಲ್ಲಿ ಮಾತ್ರ ಜಿಗುಟು ನಿಲುವನ್ನೇ ತಳೆದರು. ಓದುವ ನಾಟಕಗಳನ್ನು ಬರೆದವರು ನಿರ್ಮಿತ ಭಾಷೆಯನ್ನು ಹೆಚ್ಚಾಗಿ ಬಳಸಿಕೊಂಡರು ಎಂಬುದನ್ನು ನೆನಪಿನಲ್ಲಿಡಬೇಕು.

ಕಳೆದ ಶತಮಾನದ 60ರ ದಶಕದ ಹೊತ್ತಿಗೆ ನಾಟಕವನ್ನು ಲಿಖಿತ ಕೃತಿ ಎಂದೂ ರಂಗ ಪ್ರದರ್ಶನವನ್ನು 'ರಂಗಕೃತಿ' ಎಂದೂ ಪರಿಭಾವಿಸುವ ಪರಿಪಾಠ ಆರಂಭವಾಯಿತು. ರಂಗಭೂಮಿಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದಕ್ಕೆ ರಂಗಶಾಖೆಗಳು ಆರಂಭಗೊಂಡವು. ದೆಹಲಿ ರಾಷ್ಟ್ರೀಯ ನಾಟಕ ಶಾಲೆ ಈ ನಿಟ್ಟಿನಲ್ಲಿ ರಂಗಶಿಕ್ಷಣ ನೀಡಲು ಆರಂಭಿಸಿತು. ರಾಜ್ಯದಲ್ಲಿ ರಂಗಕಾರ್ಯಗಳು ನಡೆದು ಅನೇಕ ತಜ್ಞರು ಈ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಯಾವ ಉತ್ಸಾಹಿ ರಂಗಕರ್ಮಿಗಳಿಗೆ ತರಬೇತಿ ನಡೆಸಿದರು. ಹಾಗಾಗಿ ನಿರ್ದೇಶಕರು, ನಟರು, ರಂಗವಿನ್ಯಾಸಕಾರರು, ಬೆಳಕಿನ ವಿನ್ಯಾಸಕಾರರು ದೊಡ್ಡ ಸಂಖ್ಯೆಯಲ್ಲಿ ಹೊರಬರತೊಡಗಿದರು. ಈ ಪ್ರಯತ್ನಗಳಿಂದಾಗಿ ನಿರ್ದೇಶಕ ಹವ್ಯಾಸಿ ರಂಗಭೂಮಿಯ ಕೇಂದ್ರಸ್ಥಾನದಲ್ಲಿ ಪ್ರತಿಷ್ಠಾಪಿತವಾದ.

ನಾಟಕಕಾರರು ರಂಗಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡೇ ನಾಟಕ ರಚಿಸಲು ಆರಂಭಿಸಿದರು. ಗಿರೀಶ್ ಕಾರ್ನಾಡ್, ಚಂದ್ರ ಶೇಖರ ಕಂಬಾರ, ಲಂಕೇಶ್, ಪ್ರಸನ್ನ, ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದವರು ನಾಟಕವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡರು.
ಒಂದು ಕಡೆ ನಾಟಕಗಳು ರಚನೆಯಾಗುತ್ತಿದ್ದರೆ ಅವುಗಳನ್ನು ಪ್ರದರ್ಶನಕ್ಕೆ ಎತ್ತಿಕೊಳ್ಳುವುದರ ಜೊತೆಗೆ ಕನ್ನಡ ಸಾಹಿತ್ಯದ ಅತ್ಯತ್ತಮ ಕತೆಗಳನ್ನು, ಕವನಗಳನ್ನು ಮತ್ತು ಕಾದಂಬರಿಗಳನ್ನು ರಂಗಕ್ಕೆ ಅಳವಡಿಸುವ ಪ್ರಯತ್ನಗಳೂ ನಡೆದವು. ಪೂರ್ಣಚಂದ್ರ ತೇಜಸ್ವಿಯವರ ಅನೇಕ ಕತೆಗಳು, ಕಾದಂಬರಿಗಳು ರಂಗಕೃತಿಗಳಾಗಿ ಪರಿವರ್ತನೆ ಹೊಂದಿದವು. ಅವರ 'ಕುಬಿ ಮತ್ತು ಇಯಾಲ', 'ತಬರನಕತೆ', 'ಕೃಷ್ಣೇಗೌಡನ ಆನೆ', 'ಕರ್ವಾಲೋ', `ಜುಗಾರಿಕ್ರಾಸ್' ಮುಂತಾದವು ಯಶಸ್ವೀ ನಾಟಕಗಳಾಗಿ ಪ್ರದರ್ಶನಗೊಂಡವು. ದೇವನೂರ ಮಹಾದೇವ ಅವರ ಕತೆಗಳು, ಕಿರುಕಾದಂಬರಿಗಳಾದ 'ಒಡಲಾಳ' ಮತ್ತು 'ಕುಸುಮ ಬಾಲೆ' ಯಶಸ್ವೀ ಪ್ರದರ್ಶನ ಕಂಡವು. 'ಒಡಲಾಳ' ನಾಟಕವಂತೂ ಆಧುನಿಕ ಕನ್ನಡ ರಂಗಭೂಮಿಯಲ್ಲಿ ತನ್ನ ವಾಸ್ತವವಾದಿ ಪ್ರದರ್ಶನದಿಂದಾಗಿ ಹೊಸ ಸಂಚಲನವನ್ನೇ ಸೃಷ್ಟಿಸಿತು.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಈ ಕತೆ ಕಾದಂಬರಿಗಳನ್ನು ಕೆಲವರು ನಾಟಕದ ರೂಪದಲ್ಲಿ ರಚಿಸಿ ಪ್ರದರ್ಶಿಸಿದರೆ, ಇನ್ನು ಕೆಲವು ಕತೆ ಕಾದಂಬರಿಗಳನ್ನು ನಾಟಕದ ರೂಪದಲ್ಲಿ ಪುನಾರಚಿಸದೆ ಹಾಗೆಯೇ ಪ್ರದರ್ಶಿಸುವ ಪ್ರಯತ್ನಗಳೂ ನಡೆದವು. 80ರ ದಶಕದಲ್ಲಿಯೇ ದೆಹಲಿಯ ದೇವರಾಜ ಅಂಕುರ್ ಅವರು ಬೆಂಗಳೂರಿಗೆ ಬಂದು ಯು.ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿಯನ್ನು ಕಾದಂಬರಿಯ ರೂಪದಲ್ಲಿಯೇ ರಂಗದಲ್ಲಿ ಪ್ರದರ್ಶಿಸಿದರು. ಇದನ್ನು ಅವರು 'ಕಥಾಮಂಜ್' ಎಂದು ಕರೆದರು. ಈ ಪ್ರಯತ್ನ ಯಶಸ್ವಿಯಾದ್ದರಿಂದ ಮುಂದೆ ನಟರಾಜ ಹೊನ್ನವಳ್ಳಿ ಮಾಸ್ತಿಯವರ ಕತೆಗಳನ್ನು ಅದೇ ರೂಪದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಕ್ಕೆ ಅಳವಡಿಸಿದರು. ವೈಕುಂಠರಾಜು ಅವರ ಉದ್ಭವ, ಶಿವರಾಮ ಕಾರಂತರ ಕೆಲವು ಕಾದಂಬರಿಗಳು, ಕುವೆಂಪು ಅವರ ಕತೆಗಳು ಹೀಗೆ ಕನ್ನಡ ಸಾಹಿತ್ಯದ ಅತ್ಯಂತ ಸತ್ಯಯುತ ಕತೆ, ಕಾದಂಬರಿಗಳು ರಂಗಭೂಮಿಯಲ್ಲಿ ಅತ್ಯಂತ ಯಶಸ್ವೀ ಪ್ರದರ್ಶನಗಳನ್ನು ಕಂಡವು.

90 ರ ದಶಕದಲ್ಲಿ ಕನ್ನಡದಲ್ಲಿ ಸತ್ವಯುತ ನಾಟಕಗಳು ಬರುತ್ತಿಲ್ಲ ಎಂಬ ಮಾತು ಕೇಳಿ ಬರತೊಡಗಿತು. ಕೆಲವು ರಂಗನಿರ್ದೇಶಕರು ರಂಗಪ್ರದರ್ಶನಕ್ಕೆ ನಾಟಕವೇ ಏಕೆ ಬೇಕು? ಕತೆ, ಕವನ, ಕಾದಂಬರಿ ಹಾಗೂ ಪತ್ರಿಕಾ ಬರಹಗಳೂ ಕೂಡಾ ರಂಗ ಪ್ರದರ್ಶನಕ್ಕೆ ಬೇಕಾದ ಸತ್ವಯುತ ವಸ್ತುಗಳನ್ನು ಒದಗಿಸಬಲ್ಲವು ಎಂಬ ನಿರ್ಧಾರಕ್ಕೆ ಬಂದರು. ಹಾಗಾಗಿ ಕುವೆಂಪು ಅವರ, ಅಡಿಗರ, ಶಿವಪ್ರಕಾಶರ, ಸಿದ್ಧಲಿಂಗಯ್ಯನವರ ಪದ್ಯಗಳು ರಂಗ ಪ್ರದರ್ಶನಕ್ಕೆ ಸಿದ್ಧವಾದವು. ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು ಕೂಡಾ.

ಈಗ ನಾಟಕಗಳೇನೋ ನಿರೀಕ್ಷಿತ ಮಟ್ಟದಲ್ಲಿ, ಸಂಖ್ಯೆಯಲ್ಲಿ ಹೊರಬರುತ್ತಿಲ್ಲ. ಆದರೆ ರಂಗತಂಡಗಳಾಗಲಿ, ರಂಗನಿರ್ದೇಶಕರಾಗಲಿ ಆ ಕೊರತೆಯನ್ನು ದೊಡ್ಡದಾಗಿ ಪರಿಗಣಿಸಿಲ್ಲ. ಯಾಕೆಂದರೆ ಸತ್ವಯುತವಾದ ವಸ್ತು ನಾಟಕದ ರೂಪದಲ್ಲೇ ಪ್ರಕಟವಾಗಬೇಕಿಲ್ಲ. ಅದು ಬರವಣಿಗೆಯ ಯಾವುದೇ ರೂಪದಲ್ಲಿರಲಿ ಅದನ್ನು ರಂಗಕ್ಕೆ ಅಳವಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಿರ್ದೇಶಕರಿಗಿದೆ. ಹಾಗಾಗಿ ನಾಟಕ ಪ್ರಕಾರವಲ್ಲದೆ ಸಾಹಿತ್ಯದ ಬೇರೆ ಪ್ರಕಾರಗಳು ರಂಗಭೂಮಿಗೆ ದೊಡ್ಡ ನಿಧಿಯಾಗಿ ಪರಿಣಮಿಸಿದೆ.