ಉಷಾ ಕಟ್ಟೆಮನೆ ಕನ್ನಡದ ಪತಿಕೊದ್ಯಮದ ಮೂಸೆಯಲ್ಲಿ ಪಳಗಿದವರು. ಈಗ ಅದೆಲ್ಲವನ್ನೂ ಬಿಟ್ಟು ಹಸಿರು ಅರಸಿ ಊರ ದಾರಿ ಹಿಡಿದಿರುವವರು. ಆದರೆ ಬರವಣಿಗೆ ಅಷ್ಟು ಸುಲಭವಾಗಿ ಬಿದುವಂಥದಲ್ಲವಲ್ಲ - ಮೌನ ಕಣಿವೆ ಎಂಬ ಬ್ಲಾಗ್ನ ಮೂಲಕ ಓದುಗರನ್ನು ತಲುಪುತ್ತಿದ್ದಾರೆ. ಸದ್ಯ ಸಾಹಿತಿಗಳು, ಅದರಲ್ಲೂ ಮಹಿಳಾ ಸಾಹಿತಿಗಳು ಅನ್ಯಗ್ರಹ ಜೀವಿಗಳಲ್ಲ ಎಂದು ಸಾರಿದ್ದಾರೆ. ಕಸಾಪ, ಸಮ್ಮೇಳನ ಹಿಡಿಯಬೇಕಾದ ದಾರಿಯ ಕುರಿತು ಚರ್ಚಿಸಿದ್ದಾರೆ
ಬರವಣಿಗೆಯೆನ್ನುವುದೊಂದು ಬಿಡುಗಡೆಯ ಭಾವ. ಒಳಗಿನ ಒತ್ತಡವನ್ನು ಹೊರ ಹಾಕಲೊಂದು ರಹದಾರಿ. ಅದಕ್ಕೆ ಲಿಂಗಬೇಧವಿಲ್ಲ. ಅನಕ್ಷರಸ್ತರಾಗಿದ್ದರೂ ಕಥೆ- ಕಾವ್ಯ ಕಟ್ಟಿ ಮನದಿಂಗಿತವನ್ನು ಬಿಚ್ಚಿಡುತ್ತಿದ್ದ ಜಾನಪದ ಸಾಹಿತ್ಯ ಲೋಕವನ್ನು ಒಮ್ಮೆ ಹೊಕ್ಕರೆ ಸಾಕು, ಸೃಜನಶೀಲ ಮಹಿಳಾ ಲೋಕವೊಂದು ಅನಾವರಣಗೊಳ್ಳುವ ಪರಿಗೆ ಬೆರಗುಗೊಳ್ಳುವ ಸರದಿ ನಮ್ಮದು. ಕುಟ್ಟುವುದು, ಬೀಸುವುದು, ಉಳುವುದು, ನೇಜಿ ನೇಡುವುದು,ಕೊಯ್ಯುವುದು; ತಮಗಿರುವ ಸೀಮಿತ ಅವಕಾಶದಲ್ಲೇ ಸಾಹಿತ್ಯ ಚಿಗುಗುರೊಡೆದ ಪರಿಯಿದು.

ಇಂದಿನ ಆಧುನಿಕ ಮಹಿಳೆ ಅದೇ ಜನಪದ ಮಹಿಳೆಯೇ. ಆಕೆಯ ಹೊರಜಗತ್ತಿನಲ್ಲಾಗಲಿ, ಒಳಪ್ರಪಂಚದಲ್ಲಾಗಲಿ ಅಂತಹ ದೊಡ್ಡ ವ್ಯತ್ಯಾಸವೇನೂ ಆದ ಹಾಗಿಲ್ಲ. ಅಂದು ಆಕೆ ತನ್ನ ದುಃಖ ದುಮ್ಮಾನಗಳನ್ನು, ಸುಖ-ಸಂತೋಷವನ್ನು ದೇವರೊಡನೆ ಅಥವಾ ಪ್ರಕೃತಿಯೊಡನೆ ತೋಡಿಕೊಳ್ಳುತ್ತಿದ್ದಳು; ಸಖಿಯರೊಡನೆ ಹಂಚಿಕೊಳ್ಳುತ್ತಿದ್ದಳು. ಆಕೆಯದು ಪುಟ್ಟ ಕ್ಯಾನ್ವಾಸ್. ಆದರೆ ಆಧುನಿಕ ಮಹಿಳೆಯ ಜಗತ್ತು ವಿಸ್ತಾರವಾದುದು. ಲಿಂಗಬೇಧವಿಲ್ಲದ ಜಗತ್ತೊಂದನ್ನು ಕಟ್ಟಿಕೊಳ್ಳುವ, ಸೃಷ್ಟಿಸಿಕೊಳ್ಳುವ ಎಲ್ಲ ಅವಕಾಶಗಳು ಆಕೆಗಿದೆ. ಆದರೂ ಆಕೆ ಒಂಟಿಯೇ. ಆಕಾಶದತ್ತ ಮುಖ ಮಾಡಿದವಳೇ. ಹಾಗಾಗಿ ಒಳಜಗತ್ತಿನಲ್ಲಿ ಇಬ್ಬರ ಭಾವವೂ ಒಂದೇ.

ಮೇಲಿನ ಇಬ್ಬರು ಮಹಿಳೆಯರ ಮಧ್ಯೆ ಉಲ್ಕೆಯಂತೆ ಜ್ವಾಜಲ್ಯಮಯವಾಗಿ ಉರಿದ ಮಹಿಳಾ ಗುಚ್ಛವೊಂದು ೧೨ನೇ ಶತಮಾನದಲ್ಲಿ ನಮಗೆ ಕಾಣಸಿಗುತ್ತದೆ. ಮಹಿಳೆಯರ ಅಂತರಂಗದ ಸ್ಫೋಟಕ್ಕೆ ಆ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆ, ಲಿಂಗತಾರತಮ್ಯವೇ ಕಾರಣ. ಅವರು ನುಡಿದುದೆಲ್ಲವೂ ’ವಚನ’ಗಳಾಗಿ ಅನ್ಯರಿಗೆ ದಾರಿದೀಪಗಳಾದವು. ಅಂದು ಸಮಾಜದೆದುರು ಮಹಿಳೆಯರು ಮುಕ್ತವಾಗಿ ತೆರೆದುಕೊಂಡ ಪರಿ ನಮಗಿಂದು ಅಚ್ಚರಿ ಹುಟ್ಟಿಸುತ್ತದೆ. ಅವರು ಅಭಿವ್ಯಕ್ತಿಗಾಗಿ ಹೆದರಲಿಲ್ಲ; ತಿಣುಕಾಡಲಿಲ್ಲ. ಅನ್ನಿಸಿದ್ದನ್ನು ಹೇಳಿದರು. ಹೇಳಿದಂತೆ ಬದುಕಿದರು. ಆದರವರು ಉಲ್ಕೆಯಂತೆ ಉರಿದು ಮಾಯವಾದರು. ಅನಂತರ ತಮಗನ್ನಿಸಿದ್ದನ್ನು ನೇರವಾಗಿ, ಮುಕ್ತವಾಗಿ ಹೇಳಬಲ್ಲ ಮಹಿಳೆಯರಿಗಾಗಿ ನಾವು ೧೯ನೇ ಶತಮಾನದವರೆಗೂ ಕಾಯಬೇಕಾಯ್ತು. ಆದರೂ ವಚನಕಾರ್ತಿಯರ ನಿರ್ಭಿಡೆಯ ಅಭಿವ್ಯಕ್ತಿ ಅಧುನಿಕ ಮಹಿಳೆಯರಲ್ಲಿ ಇದ್ದಂತಿಲ್ಲ. ಅಥವಾ ಬಸವಣ್ಣನಂಥ ಸಹಚಾರಿಗಳು ಇವರಿಗೆ ಒತ್ತಾಸೆಯಾಗಿ ನಿಂತಿಲ್ಲವೆನಿಸುತ್ತದೆ.

೧೯ನೇ ಶತಮಾನದ ನಂತರದಲ್ಲಿ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸಾಹಿತ್ಯವೂ ಸಾಥ್ ನೀಡಿತು. ಪುರುಷ ಜಗತ್ತಿಗೆ ತೀರಾ ಭಿನ್ನವಾದ ಮಹಿಳಾ ಆಂತರಿಕ ಜಗತ್ತೊಂದು ಅನಾವರಣಗೊಳ್ಳತೊಡಗಿತು. ಅದರ ಸಣ್ಣ ಸಣ್ಣ ವಿವರಗಳು ಮಹಿಳೆಯರ ಬರವಣಿಗೆಯಲ್ಲಿ ದಾಖಲಾಗತೊಡಗಿದವು. ಬರವಣಿಗೆಗೆ ಸಾಮಾಜಿಕ ಆಯಾಮ ದೊರಕತೊಡಗಿತು. ಅದನ್ನು ಸ್ತ್ರೀವಾದಿ ಸಾಹಿತ್ಯವೆಂಬ ಪ್ರತ್ಯೇಕ ನೆಲೆಯಲ್ಲಿ ಸಾಹಿತ್ಯ ಜಗತ್ತು ಗುರುತಿಸತೊಡಗಿತು. ಸ್ತ್ರೀವಾದಿ ವಿಮರ್ಶೆ ಕೂಡಾ ಸ್ಪಷ್ಟ ರೂಪ ಪಡೆಯತೊಡಗಿತು. ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳಲ್ಲಿ ’ಮಹಿಳಾ ಅಧ್ಯಯನ’ ಈಗ ಆಸಕ್ತಿಯ ಜ್ನಾನಶಾಖೆ.

ಕೇರಳದ ಮಾಧವಿ ಕುಟ್ಟಿ ಅಂತರಂಗದ ಹುಡುಕಾಟದಲ್ಲೇ ಕಮಲಾದಾಸಳಾಗಿ, ಮತ್ತೆ ಸುರೈಯಳಾಗಿ ತೀವ್ರ ವ್ಯಾಮೋಹಿಯಾಗಿ ಬದುಕಿದವರು. ಪ್ರೋತಿಮಾ ಬೇಡಿ, ಅಮೃತ ಪ್ರೀತಂ, ಮರಾಠಿಯ ಮಾಧವಿ ದೇಸಾಯಿ, ಕನ್ನಡದ ಪ್ರತಿಭಾ ನಂದಕುಮಾರ್ ಸೇರಿದಂತೆ ಎಲ್ಲಾ ಬರಹಗಾರ್ತಿಯರೂ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಡಿ ನರಳಿದವರೇ. ಹಾಗಿದ್ದರೂ ಪುರುಷನಿಲ್ಲದ ಸ್ತ್ರೀಯ ಬಾಳು ಅಪೂರ್ಣ ಎಂಬುದನ್ನು ಮನಗಂಡವರು. ಸ್ತ್ರೀಯ ಅನನ್ಯತೆಯನ್ನು ಗುರುತಿಸಿಕೊಂಡು ಪುರುಷನನ್ನು ಅನುಸರಿಸದೆ, ಅವರಂತಾಗಲು ಬಯಸದೆ ಪ್ರಕೃತಿಧರ್ಮವನ್ನು ಅರಿತುಕೊಂಡು ಅವನಲ್ಲೇ ಆತ್ಮಬಂಧುವನ್ನು ಹುಡುಕಿದವರು.

ಇಂತಹದೊಂದು ಸ್ತ್ರೀ ಬಳಗ ಸಮಾಜದಲ್ಲಿ ಒಳಗಿಂದೊಳಗೆ ಸೃಷ್ಟಿಯಾಗುತ್ತಿದೆ. ಅವರು ವಿದ್ಯಾವಂತರು. ಸ್ವತಂತ್ರ ಚಿಂತನೆ ಹೊಂದಿದವರು. ಹೀಗೆಯೇ ಬದುಕಬೇಕೆಂದು ನಿರ್ಧರಿಸಿಕೊಂಡವರು. ಆರ್ಥಿಕವಾಗಿ ಸಬಲರು. ನೆಮ್ಮದಿಯ ಬದುಕಿಗೆ ಮದುವೆ ಅನಿವಾರ್ಯ ಅಲ್ಲ ಎಂದು ತಿಳಿದುಕೊಂಡವರು. ಇಂತಹ ಟ್ರೆಂಡ್ ಬಗ್ಗೆ ಸಾಹಿತ್ಯ ವಲಯದಲ್ಲಿ ಚರ್ಚೆಯಾಗಬೇಕು. ಯಾಕೆಂದರೆ ಭಾರತೀಯ ಸಮಾಜ ನಿಂತಿರುವುದೇ ಕುಟುಂಬ ವ್ಯವಸ್ಥೆಯ ಮೇಲೆ. ಮಹಿಳೆ ಅದರ ಆಧಾರ ಸ್ತಂಭ. ಈ ವ್ಯವಸ್ಥೆಯೇ ಅಲ್ಲಾಡತೊಡಗಿದರೆ ಸ್ವಸ್ಥ ಸಮಾಜ ರೂಪುಗೊಳ್ಳಲಾರದು. ಮಹಿಳೆಯರಂತೆ ಮಕ್ಕಳು ಮತ್ತು ವೃದ್ಧರ ಮನಸ್ಥಿತಿಯ ಬಗ್ಗೆ ಕೂಡ ಗಂಭೀರವಾಗಿ ಚಿಂತಿಸಬೇಕಾದ ಕಾಲಘಟ್ಟವಿದು.

ಈಗ ಸಾಹಿತ್ಯ ವಲಯದಲ್ಲಿ ಇದರ ಬಗ್ಗೆ ಚಿಂತನೆ ನಡೆಯುತ್ತಿಲ್ಲವೆಂದಲ್ಲ. ಅದು ಅಕಾಡಮಿಕ್ ಮಟ್ಟದಲ್ಲಾಗುತ್ತಿದೆ. ಅದು ಮಾತೃ ದೃಷ್ಟಿಕೋನದಿಂದ ಆಗಬೇಕು. ಸಾಹಿತ್ಯ ಮತ್ತು ಜನಸಾಮಾನ್ಯರ ನಡುವೆ ಬಹುದೊಡ್ಡ ಕಂದಕವಿದೆ. ಚಿಂತಕರು ಜನ ಸಾಮಾನ್ಯರತ್ತ ಇಳಿದು ಬರಬೇಕು. ಅರ್ಥವಾಗುವ ಸರಳ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಗಬೇಕು. ಭಾಷೆ ಉಳಿದರೆ ತಾನೆ ಸಾಹಿತ್ಯ ಸೃಷ್ಟಿ? ಅವರ ಕಣ್ಣಮುಂದೆ ಕನ್ನಡವನ್ನು ನಿಜವಾಗಿ ಪ್ರೀತಿಸುವ ಐಟಿ,ಬಿಟಿ ಯುವ ಮನಸ್ಸುಗಳಿರಬೇಕು. ನವಸಾಕ್ಷರರಿರಬೇಕು. ದೇಸಿಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಗ್ರಾಮೀಣ ಜನರಿರಬೇಕು. ರೈತ ಸಮುದಾಯವಿರಬೇಕು. ಜನಪರ ಚಳುವಳಿಗಳಿರಬೇಕು. ಅವರೆಲ್ಲರಿಗೂ ಸಾಹಿತಿ ಕಿವಿಯಾಗಬೇಕು; ಧ್ವನಿಯಾಗಬೇಕು. ಆದರೆ ಆಗುತ್ತಿರುವುದೇನು? ಸಾಹಿತ್ಯ ನಗರಕೇಂದ್ರಿತವಾಗುತ್ತಿದೆ. ಸಾಹಿತಿಗಳು ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಅಕ್ಷರ ಬಲ್ಲವರೆಲ್ಲಾ ಸಾಹಿತಿಗಳಾಗುತ್ತಿದ್ದಾರೆ.

ಸಾಹಿತ್ಯ ಸಮ್ಮೇಳನವೆಂಬುದೊಂದು ಜಾತ್ರೆ. ಜಾತ್ರೆಯಲ್ಲಿ ಸಡಗರವಿರುತ್ತದೆ. ಸಂಭ್ರಮವಿರುತ್ತದೆ. ಅಲ್ಲಿ ಗಂಭೀರ ಚಿಂತನೆ ನಡೆಯದು. ಆದರೆ ಚಿಂತನೆಯ ಝಳಕು ತೋರಿಸಲು ಅವಕಾಶವಿದೆ. ಸುದ್ದಿಯನ್ನೂ ಮಸಾಲೆ ಸೇರಿಸಿ ಉಣಬಡಿಸುವ ಕಾಲವಿದು. ಹಳೆ ಮುತ್ತೈದೆಯ ಹಾಗಿರುವ ಸಾಹಿತ್ಯ ಪರಿಷತ್ತು ಬದಲಾಗಬೇಕು. ಸಮ್ಮೇಳನದ ರೂಪುರೇಷೆ ಬದಲಾಗಬೇಕು.

ಬರವಣಿಗೆಯೆನ್ನುವುದು ಸ್ವಗತದಂತೆ; ಅಂತರಂಗದ ಪಿಸುಮಾತಿನಂತೆ; ಆಪ್ತ. ಆದರೂ ಅದರೊಳಗೇ ಪ್ರತಿಭಟನೆ ಹುದುಗಿರುತ್ತದೆ. ಅದು ಜನರ ಆಲೋಚನಾ ಕ್ರಮವನ್ನು, ಮೌಲ್ಯಗಳ ಕುಸಿತವನ್ನು, ಸಾಂಸ್ಕೃತಿಕ ಪಲ್ಲಟವನ್ನು ಹಿಡಿದಿಡುತ್ತದೆ. ಗಡಿಸಮಸ್ಯೆ, ಭಾಷಾ ಸಮಸ್ಯೆ, ನದಿನೀರು ಹಂಚಿಕೆ ಇವೆಲ್ಲಾ ಭಾವಾನಾತ್ಮಕ ಸಮಸ್ಯೆಗಳು. ಶಾಸನ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು. ಅವುಗಳ ಪರಿಹಾರಕ್ಕೆ ರಾಜಕೀಯ ವೇದಿಕೆ ಬೇಕು. ಅವುಗಳನ್ನು ವೇದಿಕೆಯತ್ತ ತರುವ ಚಳುವಳಿಗಳು ಬೇಕು. ಅದನ್ನು ಸಾಹಿತ್ಯ ಮುನ್ನಡೆಸುತ್ತಿರಬೇಕು. ಸಾಹಿತಿಗಳು, ಸಾಹಿತ್ಯ ಪರಿಷತ್ತು ಇದನ್ನೆಲ್ಲಾ ಮಾಡುತ್ತಿದೆಯೇ ಎಂಬುದು ಈಗಿರುವ ಬಹುಮುಖ್ಯ ಪ್ರಶ್ನೆ.