ಗೀತ ನಾಗಭೂಷಣ ಪ್ರಸ್ತುತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಈ ಆಯ್ಕೆಯ ಬಗೆಗೆ ಯಾವುದೇ ವಿವಾದಗಳಿಲ್ಲದಿರುವುದೇ ಅವರ ಜೀವನ - ಸಾಧನೆಯ ದ್ಯೋತಕ. ಗೀತಕ್ಕರ ಆತ್ಮೀಯ ಗೆಳತಿ ಗುಲ್ಬರ್ಗದ ಮತ್ತೊಬ್ಬ ಅಕ್ಕ ಡಾ. ಮೀನಾಕ್ಷಿ ಬಾಳಿಯವರು ನುಡಿನಮನಕ್ಕಾಗಿ ಗೀತಕ್ಕರ ಬದುಕ ಕುರಿತು ಆಪ್ತವಾಗಿ ಬರೆದಿದ್ದಾರೆ, ಅಷ್ಟೇ ಅಲ್ಲ ಗೀತಕ್ಕರನ್ನು ಮಾತಿಗೆಳೆದಿದ್ದಾರೆ,





ಟಿಪಿಕಲ್ ಮೊಘಲಾಯಿ ಏರಿಯಾದ ಪ್ರಮುಖ ಲೇಖಕಿ ಗೀತಾ. ಸಮಕಾಲೀನ ಕನ್ನಡ ಲೇಖಕರ ಪಂಕ್ತಿಯಲ್ಲಿ ಎದ್ದು ಕಾಣಿಸುವ ಅಪರೂಪದ ಸಾಹಿತ್ಯದ ನಡೆ. ಸದಾ ಹಸನ್ಮುಖಿ. ಅಂತೆಯೇ ಅಂತರ್ಮುಖಿಯೂ ಹೌದು. ಗೀತಾ ಬರೆದಿದು, ಬದುಕಿದ್ದು ಎಲ್ಲವೂ ಸಂಘರ್ಷಮಯವೇ ಹೌದು. ಏಕೆಂದರೆ ಗೀತಾ ಹುಟ್ಟಿದ್ದು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಕಲಬುಗರ್ಿಯ ಪುಟ್ಟ ಹಳ್ಳಿಯಲ್ಲಿ. 1942ನೇ ಮಾರ್ಚಿ 25ನೇ ತಾರೀಖು. ಕಲಬುರ್ಗಿಯ ನೆರೆ ಹಳ್ಳಿ ಶಿವಲಿಂಗೇಶ್ವರನ ಸಾವಳಗಿ ಎಂಬುದು ಅವರ ಹುಟ್ಟೂರು. ತಂದೆ ಶಾಂತಪ್ಪ, ತಾಯಿ ಶರಣಮ್ಮ. ಇವರ ಮೊದಲಿನ ಹೆಸರು ಶಾಂತಾ ಎಂದಿತ್ತು. ಗಂಗಾಮತವೆಂದು ಶಿಷ್ಯರಿಂದ ಕರೆಸಿಕೊಳ್ಳುತ್ತಿರುವ ಇವರದು ಬಡಕುಟುಂಬವಾಗಿತ್ತು. ತುಂಬಾ ಕಷ್ಟಪಟ್ಟು ಪಟ್ಟಣ ಸೇರಿದ ಶಾಂತಪ್ಪ, ಕಲಬುರ್ಗಿಯ ಎಂ.ಎಸ್.ಕೆ ಮಿಲ್ನಲ್ಲಿ ಕೂಲೀ ಕಾರ್ಮಿಕನಾಗಿ ಸೇರಿದ್ದೇ ದೊಡ್ಡ ಸಾಧನೆ ಎಂಬಂತಾಗಿತ್ತು. ಷಹರದ ಆಧುನಿಕ ಗಾಳಿಯ ಪ್ರಭಾವದಿಂದಾಗಿ ಮಗಳು ಶಾಂತಾಳಿಗೆ ಶಾಲೆಗೆ ಕಳಿಸಲು ಮನಸ್ಸು ಮಾಡಿದ್ದು ಕೂಡಾ ಕನ್ನಡ ಸಾಹಿತ್ಯಕ್ಕೆ ಮಾಡಿದ ಉಪಕಾರವೆಂದೇ ಈಗ ಪರಿಗಣಿಸಬೇಕಾಗಿದೆ.

ಏಕೆಂದರೆ ಇಲ್ಲಿ 1347ರಲ್ಲಿ ಹಸನ್ಗಂಗೂಬಹುಮನಿಯಿಂದ ಪ್ರಾರಂಭವಾದ ಮೊಘಲರ ಆಳ್ವಿಕೆಯು 1948ರ ನಿಜಾಮಶಾಹಿಯವರೆಗೂ ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿತ್ತು. ಎಲ್ಲಾ ದೇಶೀಯ ಅರಸೊತ್ತಿಗೆಗಳಂತೆ ಇಲ್ಲಿಯೂ ಮಡಿವಂತ ಸಾಮಾಜಿಕ ವ್ಯವಸ್ಥೆಯೇ ಮನೆ ಮಾಡಿಕೊಂಡಿತ್ತು. ಬ್ರಿಟೀಷ್ ಸಾಮ್ರಾಜ್ಯಶಾಹಿಯ ಆಳ್ವಿಕೆಗೆ ಒಳಪಟ್ಟ ಭಾಗದಲ್ಲಿ ಆಧುನಿಕ ಗಾಳಿ ಸೋಕಿದಂತೆ, ನಿಜಾಮಶಾಹಿ ಇಲಾಖೆಯು ಆಧುನಿಕತೆಯಿಂದ ದೂರವೇ ಉಳಿದಿತ್ತು. ಹೀಗಾಗಿ ಸಾರ್ವಜನಿಕ ಶಿಕ್ಷಣದಂಥ ಗಂಭೀರ ಬದಲಾವಣೆಗೆ ಈ ಭಾಗ ಒಗ್ಗಿಕೊಂಡಿರಲಿಲ್ಲ. ತತ್ಪರಿಣಾಮವಾಗಿ ಈ ಭಾಗದಲ್ಲಿ ಪಾಳೇಗಾರಿ ಪದ್ಧತಿಯು ಅನೂಚಾನವಾಗಿ ಮುಂದುವರೆದುಕೊಂಡು ಬಂದಿತ್ತು. ಸಾಮಾನ್ಯ ವರ್ಗದ ಪುರುಷರಿಗೇ ಇಲ್ಲಿ ಶಿಕ್ಷಣ ಸಿಕ್ಕಿರಲಿಲ್ಲ. ಅಂಥಾ ಸಂದಿಗ್ಧ ವಾತಾವರಣದಲ್ಲಿ ಮಹಿಳೆಯರಿಗೆ ಶಿಕ್ಷಣ ಎಂಬುದು ದೂರದ ಮಾತೇ ಆಗಿತ್ತು. ಅದಾಗ್ಯೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಇದ್ದಂಥ ಒಂದೇ ಒಂದು ಶಾಲೆಯಲ್ಲಿ ಬೆರಳೆಣಿಕೆಯಷ್ಟು ಹೆಣ್ಣು ಮಕ್ಕಳು ಶಾಲೆಯ ಮುಖ ನೋಡುವುದಿತ್ತು. ಕೆಳವರ್ಗದ ಮಂದಿಗೆ ಶಾಲೆ, ಓದು ವಜ್ರ್ಯವೇ ಆಗಿತ್ತು. ಮೇಲ್ವರ್ಗದ ಮಹಿಳೆಯರೂ 7ನೇ ಇಯುತ್ತೆಯವರೆಗೆ ಶಾಲೆ ಕಲಿಯುವುದು. ನಂತರ 12-14ರ ಬಾಲ್ಯದಲ್ಲಿಯೇ ಅವರಿಗೆ ಮದುವೆ ಕಡ್ಡಾಯವಾಗಿತ್ತು. ಇಂಥ ಸಂದಿಗ್ಧ ವಾತಾವರಣದಲ್ಲಿ ಬೆಳೆದ ಗೀತಾ ಹಟ ತೊಟ್ಟು ಶಾಲೆ ಕಲಿತರು. 10ನೇ ಪಾಸಾದ ಕೆಳವರ್ಗದ ಮಹಿಳೆಯರ ಸಾಲಿನಲ್ಲಿ ಮೊದಲಿಗರಾಗಿ ನಿಂತರು. ಕಿತ್ತು ತಿನ್ನುವ ಬಡತನದ ಮಧ್ಯೆ ಶಾಲೆ ಕಲಿಸುವುದು ಅವರ ಅಪ್ಪನಿಗೆ ಹರಸಾಹಸವೇ ಆಗಿತ್ತು. ಉಳ್ಳವರ ಮನೆಯ ಮಕ್ಕಳು ಓದಿ ಬಿಟ್ಟ ಪುಸ್ತಕಗಳನ್ನು ಎತ್ತಿಕೊಂಡು ಅಭ್ಯಾಸ ಮಾಡಿದ್ದನ್ನು ಗೀತಾ ತುಂಬಾ ನೋವಿನಿಂದ ನೆನಪಿಸಿಕೊಳ್ಳುತ್ತಾರೆ. ಚಿಮಣಿ ಎಣ್ಣೆ ದೀಪದಲ್ಲಿ ಹಟ ತೊಟ್ಟು ಓದಿದ ಗೀತಾ ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿದ್ದು ಆ ಹೊತ್ತು ಜಾತಿ ಬಾಂಧವರ ಕಣ್ಣು ಕೆರಳಿಸುವಂತೆ ಮಾಡಿತಂತೆ. ಅವರ ತಾಯಿ ಗೀತಾರನ್ನು ಮುಂದೆ ಶಾಲೆ ಕಲಿಸಲು ಸರ್ವಥಾ ತಯಾರಿರಲಿಲ್ಲವಂತೆ. ಏಕೆಂದರೆ ತಳವಾರ ಜಾತ್ಯಾಗ ಗಂಡಸರಿಗೆ ಹೆಚ್ಚಿನ ವಿದ್ಯಾಭ್ಯಾಸವಿರಲಿಲ್ಲ. ಇನ್ನು ಹೆಣ್ಣುಮಕ್ಕಳು ಹೆಚ್ಚು ಓದಿಬಿಟ್ಟರೆ, ಕಲಿತವಳನ್ನು ಮದುವೆಯಾಗಲು ಯಾವ ಗಂಡಸರು ಇಷ್ಟಪಟ್ಟಾರು? ಎಂಬ ಹೆದರಿಕೆ ಅವರದ್ದು. ಅವ್ವನ ವಿರೋಧದ ನಡುವೆಯೂ ಅಪ್ಪನ ಒತ್ತಾಸೆಯಿಂದಾಗಿ ಗೀತಾ ಗುಲ್ಬರಗಾದ ಶ್ರೀ ಶರಣಬಸವೇಶ್ವರ ಕಾಲೇಜಿನ ಮೆಟ್ಟಿಲು ಏರಿಯೇಬಿಟ್ಟರು. ಬಾಲ್ಯದಿಂದಲೂ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಇವರಿಗೆ, ತಾವೂ ಬರೆಯಬೇಕೆಂಬ ಹಂಬಲ ಮೂಡಿತ್ತು. ಈ ಹಂಬಲವೇ ಅವರಿಂದ ಕಾಲೇಜು ದಿನಗಳಲ್ಲಿ ಚಿಕ್ಕ ಕಥೆ ಬರೆಯಲು ಹಚ್ಚಿತು.

ಅಬ್ಬಾ ಆ ಹುಡುಗ ಎಂಬ ವರ ಮೊದಲ ಕಥೆಯು ಕಾಲೇಜಿನ ಮ್ಯಾಗಝಿನ್ನಲ್ಲಿ ಪ್ರಕಟವಾಯ್ತು. ಓದಿದವರು ಹುಬ್ಬೇರಿಸಿದ್ದು ಇತ್ತು. ಈ ನಡುವೆ ಹಿರಿಯರ ಒತ್ತಾಸೆಯಂತೆ ಮದುವೆ ಏನೋ ಆಯ್ತು. ಮನಸ್ಸಿಗೊಪ್ಪದ ಪುರುಷನೊಂದಿಗೆ ಬಾಳಲು ಇಷ್ಟ ಪಡದೆ, ದಾಂಪತ್ಯದ ಹಂಗು ಹರಿದು ಬಂದಿದ್ದು ಆ ಹೊತ್ತಿಗೆ ಬಹು ದೊಡ್ಡ ಕ್ರಾಂತಿಕಾರಿ ನಡೆಯೇ ಆಗಿತ್ತು. ಪರ್ಯಾಯ ಕ್ಕಾಗಿ ತಡಕಾಡಿ ಮಗದೊದೆಡೆ ಸಾಂಸಾರಿಕ ಸಂಬಂಧಗಳನ್ನು ಏರ್ಪಡಿಸಿಕೊಂಡದ್ದಾಗಿತ್ತು. ಒಂದು ಗಂಡು, ಒಂದು ಹೆಣ್ಣು, ಹೀಗೆ ಎರಡು ಮಕ್ಕಳನ್ನು ಹೆತ್ತು ಏಗಲಾರದ ಸಂಗತಿಯೊಂದಿಗೆ ದಿನದೂಡುವಲ್ಲಿಯೇ ಗೀತಾ ಹೈರಾಣಾಗಿದ್ದರು. ಇಂಥಾ ಎಲ್ಲಾ ವಿಪರೀತ ಸಂದರ್ಭಗಳಲ್ಲಿಯೂ ಗೀತಾ ತುಂಬಾ ಆಪ್ತವಾಗಿ ಅಂಟಿಕೊಂಡದ್ದು ಓದಿಗೆ ಮತ್ತು ಬರಹಕ್ಕೆ ಮಾತ್ರ. ಎಂ.ಎ, ಬಿ.ಎಡ್ ಮುಗಿಸಿ ಕಾರಕೂನಿಕೆ ಬಿಟ್ತು, ಖಾಸಗೀ ಕಾಲೇಜೊಂದರಲ್ಲಿ ಪ್ರಾಚಾರ್ಯರಾಗಿ ದೀರ್ಘ ಸೇವೆ ಸಲ್ಲಿಸಿದರು.

ಗೀತಾ ತುಂಬಾ ಗಟ್ಟಿಗಿತ್ತಿ ಮಹಿಳೆ. ಪಾಳೇಗಾರಿ ನಂಬಿಕೆಗಳುಳ್ಳ ಮಡಿವಂತ ಸಮಾಜದ ಮಧ್ಯೆ ಬದುಕಿಯೂ ಸ್ವತಂತ್ರ ಆಲೋಚನಾ ಲಹರಿಗೆ ಒಡ್ಡಿಕೊಂಡಿದ್ದಾರೆ. ಹಲವು ಅಡ್ಡಿ ಆತಂಕದ ನಡುವೆಯೂ ಎದೆಗುಂದದೆ ಮುನ್ನುಗ್ಗಿದ ಒಂಟಿ ಸಲಗ. ಉದರ್ುಮಯ ವಾತಾವರಣದಲ್ಲಿ ಕನ್ನಡ ಓದುವುದು, ಬರೆಯುವುದು ತುಂಬಾ ಅಪರೂಪವಾಗಿದ್ದ ಸಂದರ್ಭದಲ್ಲಿ ಹಟ ತೊಟ್ಟು ಕನ್ನಡ ಕಲಿತಾಕೆ. ಕಲಿತದ್ದನ್ನು ಸಾರ್ಥಕಗೊಳಿಸಬೇಕೆಂಬ ವ್ರತತೊಟ್ಟಾಕೆ. ತಮ್ಮ ಓದಿಗೆ ಗೆಳತಿಯರೆಲ್ಲಾ ಮನೆಯ ಸಂಪ್ರದಾಯದಂತೆ ಅರ್ಧಕ್ಕೆ ಓದು ನಿಲ್ಲಿಸಿ ಹಿರಿಯರು ಮಾಡಿದ ಮದುವೆಗೆ ರಾಜಿಯಾಗಿ ಎಂಟು, ಹತ್ತು ಮಕ್ಕಳನ್ನು ಹೆತ್ತು ನೇಪಥ್ಯಕ್ಕೆ ಸೇರಿಹೋದರೆ, ಗೀತಾ ಆ ದಾರಿಯನ್ನು ಬಿಟ್ಟು ಭಿನ್ನ ದಾರಿಯನ್ನು ಆರಿಸಿಕೊಂಡು ನೌಕರಿಗೆ ಸೇರಿದರು. ಸಮಕಾಲೀನ ಮಡಿವಂತ ಸಮಾಜದ ಬೆರಳಚ್ಚುವಂತೆ ಮಾಡಿದಲ್ಲದೆ, ಇಂದು ಅವರು ಬೆಳೆದ ಎತ್ತರ-ಬಿತ್ತರವನ್ನು ಕಂಡು ಅವರೆಲ್ಲಾ ದಿಗ್ಮೂಢರಾಗುವಂತೆ ಮಾಡಿದ್ದು ಇದೆ. ಗೀತಾ ಬರೆಯುವಾಗ ಈ ಭಾಗದ ಬುದ್ಧಿಜೀವಿಗಳೆನಿಸಿಕೊಂಡವರು ಅವರನ್ನು ಗಂಬೀರವಾಗಿ ಪರಿಗಣಿಸಲೇ ಇಲ್ಲವಂತೆ. ಅದಾಗ್ಯೂ ಗೀತಾ ಯಾರ ಹಂಗೂ-ಪರಾಮರ್ಶೆಗೂ ಆತು ಬೀಳದೆ ತಮ್ಮ ಪಾಡಿಗೆ ತಾವು ಬರೆಯುತ್ತ ಇಂದು ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಅವರ ಕನ್ನಡ ಸಾಹಿತ್ಯಕ್ಕೆ ಕೊಡುಗೆ ಹಲವಾರು.

ಅಷ್ಟಕ್ಕು ತಮ್ಮ ಬರವಣಿಗೆಯ ವಿಶಿಷ್ಟ ಶೈಲಿ ಮತ್ತು ಆರಿಸಿಕೊಂಡ ವಸ್ತುವಿನಿಂದಾಗಿ ಕನ್ನಡದ ಸಮಕಾಲೀನ ಲೇಖಕ ಸಾಲಿನಲ್ಲಿ ಭಿನ್ನರಾಗಿ ನಿಂತಿದ್ದಾರೆ. ಕನ್ನಡಲ್ಲಿ ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಬಹುಮಾನ ಪಡೆದ ಪ್ರಥಮ ಮಹಿಳೆ ಎನಿಸಿಕೊಂದಿದ್ದಾರೆ. ಅಂತೆಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜಾ ಪ್ರಶಸ್ತಿ, ಗುಲ್ಬಗರ್ಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ, ಸಾಹಿತ್ಯ ಅಕೆಡೆಮಿಯ ಗೌರವ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಹೀಗೆ ಇವರು ತಮ್ಮ ಸಾಹಿತ್ಯ ಸಾಧನೆಗಾಗಿ ಪಡೆದ ಪ್ರಶಸ್ತಿಗಳ ಪಟ್ಟಿಯು ತುಂಬಾ ದೊಡ್ಡದಿದೆ. ಈ ಎಲ್ಲಾ ಪ್ರಶಸ್ತಿಗೆ ಕಿರೀಟಪ್ರಾಯವಾಗುವಂತೆ, ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ-ಪದವಿಗೆ ಎಂದೆಂದೂ ಲಾಬಿ ಮಾಡದ ಗೀತಾರಿಗೆ ಅವೆಲ್ಲವೂ ತಾವಾಗಿಯೇ ಒಲಿದು ಬಂದು ಪ್ರಶಸ್ತಿಗಳು ತಮ್ಮ ಗೌರವವನ್ನು ಹೆಚ್ಚಿಸಿಕೊಂಡಿವೆ. ಗೀತಾರನ್ನು ಸನಿಹದಿಂದ ಬಲ್ಲ ಯಾರಾದರೂ ಈ ಮಾತನ್ನು ಅಲ್ಲಗೆಳೆಯರಾರರು. ತಮಗೆ ಯಾವುದೇ ಪ್ರಶಸ್ತಿ-ಗೌರವಗಳು ಬಂದಾಗಲೆಲ್ಲಾ, ಗೀತಾ ಆ ಖುಷಿಯನ್ನು ಕಲಬುರ್ಗಿಯ ಸಾಹಿತ್ಯ ಬಳಗದೊಂದಿಗೆ ತುಂಬಾ ಮುಕ್ತವಾಗಿ ಹೊಂಚಿಕೊಳ್ಳುವುದುಂಟು.

ಕಲಬುರ್ಗಿಯಲ್ಲಿ ಪ್ರಗತಿಪರವಾಗಿ ಆಲೋಚಿಸುವ ಮತ್ತು ಬರೆಯುವ ಸಾಹಿತ್ಯದ ಬಳಗವೊಂದಿದೆ. ಸಮಾನತೆಯ ತಳಹದಿಯ ಮೇಲೆ ಹೊಸ ಸಮಾಜವನ್ನು ಕಟ್ಟಬೇಕೆಂಬ ಸೈದ್ಧಾಂತಿಕ ಬದ್ಧತೆಗಳೊಂದಿಗೆ ಕ್ರಿಯಾಶೀಲವಾಗಿರುವ ಈ ಬಳಗಕ್ಕೆ ಗೀತ ಹಿರಿಯಕ್ಕನಂತಿದ್ದಾರೆ. ಕಲ್ಯಾಣದ ಬಸವಾದಿ ಶರಣರ ಕ್ರಾಂತಿ ಕನಸುಗಳು, ತತ್ವಪದಕಾರರ ಪಾಳೆಗಾರಿ ಪದ್ಧತಿ ವಿರುದ್ಧದ ಬಂಡಾಯದ ಭಾಷೆಯನ್ನು ಕನ್ನಡಕ್ಕೆ ವಿಶಿಷ್ಟವೆನ್ನಿಸುವ ಸೂಫಿ ಪರಂಪರೆಯನ್ನು ಅದಮ್ಯವಾಗಿ ಪ್ರೀತಿಸುವ ಈ ಬಳಗವು ಯಾವತ್ತೂ ಗೀತಾ ಅವರೊಂದಿಗೆ, ಅವರು ಸಾಗಿ ಬಂದ ದಾರಿ ಕುರಿತು ಚಚರ್ಿಸುತ್ತಲೇ ಇರುತ್ತದೆ. ಅವರ ಮನೆಯಲ್ಲಿ ಸಾಹಿತ್ಯದ ಚರ್ಚೆ, ಸಮಕಾಲೀನ ವಿದ್ಯಮಾನಗಳ ವಿಮರ್ಶೆ ನಡೆಯುತ್ತಲೇ ಇರುತ್ತದೆ. ಈ ತಂಡವನ್ನು ಸೈದ್ಧಾಂತಿಕ ಬದ್ಧತೆಯೊಂದಿಗೆ ಬೆಳೆಸಿದವರು ಕನ್ನಡದ ಗಜಲ್ ಕೃಷಿಕಾರ ಶಾಂತರಸರು. ಡಾ. ಕಾಶೀನಾಥ ಅಂಬಲಗಿ, ಡಾ. ಪ್ರಭು ಖಾನಾಪುರ. ಪ್ರೊ. ಆರ್.ಕೆ.ಹುಡಗಿ, ಕೆ.ನೀಲಾ, ಡಾ.ಶಾಂತಾ ಮಠ, ಡಾ.ಶಾಂತಾ ಅಷ್ಟಗಿ, ಡಾ.ಮೀನಾಕ್ಷಿ ಬಾಳಿ, ಡಾ.ಇಂದುಮತಿ ಪಾಟೀಲ್, ಡಾ.ಈಶ್ವರಯ್ಯ ಮಠ, ಮಸ್ತಾನ ಬಿರಾದಾರ, ಸಿದ್ಧರಾಮ ಹೊನ್ಕಲ್, ಪ್ರೊ. ಶಿವಶರಣ ಮಳೆಗಾಂವ, ಡಾ.ಅಮೃತಾ ಕಟ್ಟೆ, ಡಾ.ಸೂರ್ಯಕಾಂತ ಸುಜಾತ, ಡಾ.ಮಲ್ಲಿಕಾರ್ಜುನ ಆಮ್ಣೆ, ಮುಂತಾಗಿ ಇದೊಂದು ದೊಡ್ಡ ಬಳಗವೇ ಇದೆ.

ಕಲಬುರ್ಗಿಯಲ್ಲಿ ಸಾಹಿತ್ಯಾಸಕ್ತರ ನಡುವೆ ಕರುಳ ಬಳ್ಳಿಯ ಸಂಬಂಧವಿದೆ. ಪರಸ್ಪರ ಅನ್ಯೋನ್ಯತೆ, ಗೌರವಾದರಗಳು ಗಟ್ಟಿಗೊಂಡು ಅನೌಪಚಾರಿಕ ಸಲುಗೆ ಇದೆ. ಈ ಸಲುಗೆ-ಕಾಳಜಿ ದೆಸೆಯಿಂದಾಗಿಯೇ ವಯಸ್ಸಿನಲ್ಲಿ ಕಿರಿಯರಾದ ನಮಗೆ ಗೀತಾ ಅವರೊಂದಿಗೆ ಮುಕ್ತವಾಗಿ ಸಂವಾದಿಸಲು, ಅಭಿಪ್ರಾಯ ಹಂಚಿಕೊಳ್ಳಲು ಸಾಧವಾಗಿದೆ. ಹಲವಾರು ಸಂದರ್ಭಗಳಲ್ಲಿ ಅವರೊಂದಿಗೆ ಅನೌಪಚಾರಿಕವಾಗಿ ಮಾತಾಡುವಾಗ ವ್ಯಕ್ತವಾದ ಅಭಿಪ್ರಾಯವನ್ನು ನೆನಪಿನಾಳದಿಂದ ಹೆಕ್ಕಿ ತೆಗೆದು ಇಲ್ಲಿ ಸಂದರ್ಶನದ ಚೌಕಟ್ಟು ತರಲು ಪ್ರಯತ್ನಿಸಲಾಗಿದೆ. ಏಕೆಂದರೆ ಗೀತಾ ಅವರೊಂದಿಗೆ ಔಪಚಾರಿಕ ನೆಲೆಯಲ್ಲಿ ಸಂದರ್ಶಿಸಿದ ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪುಂಖಾನುಪುಂಖವಾಗು ಬೆಳಕು ಕಂಡಿವೆ. ಆದ್ದರಿಂದ ಈ ಎಲ್ಲಾ ಸಂದರ್ಶನಗಳಿಗಿಂತ ತುಸು ಭಿನ್ನವಾದ ಮತ್ತು ಅಷ್ಟೇ ಆಪ್ತವಾದ ಸಂಭಾಷಣೆಯೊಂದನ್ನು ಹೆಣೆಯುವ ಪ್ರಯೋಗ ಇಲ್ಲಿದೆ.