ಗೀತಕ್ಕ ಕಿರಿಯ ಸಮಕಾಲೀನರಾದ ನಮ್ಮೆಲ್ಲರಿಗೂ ಹೆಮ್ಮೆಯ ಗೆಳೆತಿಯೂ ಹೌದು. ಸಾಹಿತ್ಯಕ ಮಾರ್ಗದರ್ಶಕಿಯೂ ಹೌದು. ಈ ಆಪ್ತ ತಳಹದಿಯ ಮೇಲೆ ನಡೆಸಿದ ಸಂಭಾಷಣಾ ತುಣುಕುಗಳು ಇಲ್ಲಿವೆ.

1. ಗೀತಕ್ಕ ಅಂದು ಈ ಭಾಗದ ಮಹಿಳೆಯರ್ಯಾರೂ ಬೆಳವಣಿಗೆಯಂಥ ಗಂಭೀರ ಪ್ರವೃತ್ತಿಗೆ ಒಡ್ಡಿಕೊಂಡಿರಲೇ ಇಲ್ಲ. ಅಂಥಾ ಹೇಳಿಕೊಳ್ಳುವ ಸಾಹಿತ್ಯಕ ವಾತಾವರಣವು ಇಲ್ಲಿರಲಿಲ್ಲ. ಆದರೂ ನೀವು ಬರವಣಿಗೆಯಂಥ ವ್ಯವಸಾಯಕ್ಕೆ ಬಂದಿರಲ್ಲ. ಅದು ಹೇಗೆ ಸಾಧ್ಯವಾಯಿತು.

ಹೌದು. ಆಧುನಿಕ ಸಂದರ್ಭದ ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿ ಪುರುಷರೆ ಕನ್ನಡದ ಬೆಳವಣಿಗೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡದ್ದು ತುಸು ಕಡಿಮೆಯೇ ಎನ್ನಬೇಕು. ಇಂಗ್ಲೀಷ್ ಪ್ರಭಾವದಿಂದ ಬಂದ ಹೊಸ ಗಾಳಿಯ ಸಂಪರ್ಕವು ಚಾರಿತ್ರಿಕ ಕಾರಣವಾಗಿ ತಡವಾಗಿ ಬಂತು. ಅಂದರೆ ನಾವು ಬ್ರಿಟೀಷ್ ಭಾರತದ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ನಿಜಾಮಶಾಹಿಯ ಆಡಳಿತದಲ್ಲಿ ನಮ್ಮ ಬದುಕಿನ ಆದ್ಯತೆಗಳೇ ಬೇರೆಯಾಗಿದ್ದವು. ನಿಜಾಮಶಾಹಿ ಪ್ರಭುತ್ವದಡಿಯಲ್ಲಿ ಸ್ಥಳೀಯವಾಗಿ ಪೋಲೀಸ್ಗೌಡ, ಮಾಲಿಗೌಡ, ಕುಲಕಣರ್ಿ, ದೇಶಮುಖ, ತಳವಾರ, ವಾಲಿಕಾರ ಇವರ ದರ್ಪ-ದರ್ಬಾರಗಳೇ ಪ್ರಧಾನವಾಗಿದ್ದವು. ಬ್ರಿಟಿಷ್ ಸುಧಾರಣಾವಾದಿಯ ಗಾಳಿಯನ್ನು ಒಳ ನುಸುಳಲು ಈ ಪಾಳೇಗಾರಿ ಪ್ರಭುಗಳು ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ತುಂಬಾ ತಡವಾಗಿ ನಮಗೆ ದಕ್ಕಿತು. ಹೀಗೆಂದು ನಮಗೆ ಸಾಹಿತ್ಯ ರಚನೆ ಇರಲೇ ಇಲ್ಲ ಎಂದಲ್ಲ. ನಮ್ಮ ಸಾಹಿತ್ಯಿಕ ಚಟುವಟಿಕೆಗಳೇ ಬೇರೆ ಬಗೆಯದಾಗಿದ್ದವು. ಕನರ್ಾಟಕ ಇತರೆಡೆ ಆಧುನಿಕ ಸಾಹಿತ್ಯದಲ್ಲಿ ನವೋದಯದ ಭರಾಟೆ ಇದ್ದಾಗ ನಮ್ಮಲ್ಲಿ ಪುರಾಣಗಳ ರಚನೆ ಮತ್ತು ಪಠನ, ಅಂದರೆ ಪುರಾಣ ಹಚ್ಚುವುದು, ತತ್ವಪದಗಳ ರಚನೆ, ಭಜನಾಗೋಷ್ಠಿಗಳು, ಸಣ್ಣಾಟ, ಡಪ್ಪಿನಾಟ, ಲಾವಣಿ, ಜನಪದ ತ್ರಿಪದಿಗಳ ರಚನೆ ಮುಂತಾಗಿ, ದೇಶೀ ನೆಲೆಯ ಚಟುವಟಿಕೆಗಳು ನಡೆದೇ ಇದ್ದವು.

ಶಿಕ್ಷಣದಲ್ಲಿ ಉರ್ದುವಿನ ಹಿಡಿತವಿತ್ತಾದರೂ ಸ್ಥಳೀಯ ಮಠ, ಗುಡಿ-ಗುಂಡಾರಗಳಲ್ಲಿ ಅನೌಪಚಾರಿಕ, ಮೌಖಿಕ ಸಾಹಿತ್ಯ ರಚನೆ ಅವ್ಯಾಹತವಾಗಿ ನಡೆದೇ ಇತ್ತು. ಆದರೆ ಭಾರತಕ್ಕೆ ಸ್ವಾತಂತ್ರ ಬಂದು ಭಾಷಾವಾರು ಪ್ರಾಂತ್ಯ ರಚನೆಯೊಂದಿಗೆ ಕನ್ನಡದಲ್ಲಿ ಅಕೆಡೆಮಿಕ್ ಚಟುವಟಿಕೆಗಳು ಬೆಂಗಳೂರು-ಮೈಸೂರು-ಮಂಗಳೂರುಗಳಲ್ಲಿ ಕೇಂದ್ರೀಕರಿತವಾದವು. ಪ್ರಾಚೀನ ಕನ್ನಡ ಸಾಹಿತ್ಯದ ಇತಿಹಾಸವನ್ನು ಕಟ್ಟಿಕೊಡುವಾಗ ಕರ್ನಾಟಕದ ದಕ್ಷಿಣಾತ್ಯ ವಿದ್ವಾಂಸರು ನಮ್ಮ ಸಾಹಿತ್ಯದ ಬೆಳೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಮ್ಮವರು ಅದನ್ನು ಶಿಸ್ತುಬದ್ಧವಾಗಿ ದಾಖಲಿಸಲಿಲ್ಲ. ತತ್ಕಾರಣವಾಗಿ ಆಧುನಿಕ ಕನ್ನಡ ಸಾಹಿತ್ಯವೆಂದರೆ ದಕ್ಷಿಣ ಕರ್ನಾಟಕದ ನವೋದಯ ಸಾಹಿತ್ಯ ಎಂಬಂತೆ ಬಿಂಬಿಸಲಾಯಿತು. ಶಾಂತರಸತರು ಹೇಳುತ್ತಿದ್ದಂತೆ, ನಾವು ಮಾತಾಡುತ್ತಿರುವುದು ಕನ್ನಡವೇ ಅಲ್ಲ. ನಮಗೆ ಕನ್ನಡವೇ ಬರುವುದಿಲ್ಲ ಎಂಬ ಭಾವನೆ ಅವರಿಗಿತ್ತು. ಅಷ್ಟಕ್ಕೂ ಪಕ್ಕಾ ಫ್ಯೂಡಲ್ ದೊರೆಗಳೆ ಇಲ್ಲಿ ರಾಜಕೀಯ ಚುಕ್ಕಾಣಿಯನ್ನು ಹಿಡಿದಿದ್ದರಾದ್ದರಿಂದ ಅವರು ಮಹಿಳೆಯರನ್ನು ಪರಂಪರಾಗತ ಜಾಡಿನಲ್ಲಿಯೇ ಇರುವಂತೆ ಬಯಸುತ್ತಿದ್ದರು.

ನಾನು ಶಾಲೆಗೆ ಹೋಗುತ್ತಿರುವ ಕಾಲದಲ್ಲಿ ಮೇಲ್ವರ್ಗದ ಮಹಿಳೆಯರೇ ತುಂಬಾ ಅಪರೂಪವೆಂಬಂತೆ ಶಾಲೆಗೆ ಬರುತ್ತಿದ್ದರು. ಗುಲ್ಬಗರ್ಾದಲ್ಲಿ ಒಂದೇ ಒಂದು ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಇತ್ತು. ದೊಡ್ಡ ದೊಡ್ಡ ಮನೆಯ ಹುಡುಗಿಯರು ಟಾಂಗಾದಲ್ಲಿ ಕುಳಿತು ಶಾಲೆಗೆ ಬರುತ್ತಿದ್ದರು. ಅದೂ ಟಾಂಗಾಕ್ಕೆ ಪರದಾ ಕಟ್ಟಲಾಗುತ್ತಿತ್ತು. ಅಂಥಾ ಹೊತ್ತಿನಲ್ಲಿ ನಾನು ಎಂ.ಎಸ್.ಕೆ ಮಿಲ್ ಕೂಲಿ ಕಾರ್ಮಿಕನ ಮಗಳು. ಅದರಲ್ಲೂ ತಳವರ ಜಾತಿಗೆ ಸೇರಿದವಳು. ನಮ್ಮ ಮನೆಯಲ್ಲಿ ಯಾರಿಗೂ ಆ ಹೊತ್ತು ವಿದ್ಯಾಭ್ಯಾಸದ ಗಾಳಿ-ಗಂಧ ಇರಲಿಲ್ಲ. ಆದ್ರ ನಮ್ಮಪ್ಪ ಮಾತ್ರ ನನಗ್ ಸಾಲಿ ಕಲಿಸಾ ಮನಸು ಮಾಡಿದ್ದನು. ನಾನು ಆಸಕ್ತಿಯಿಂದ ಓದ ತೊಡಗಿದೆ. ನಮ್ಮ ಮನೆಯಲ್ಲಿ ಅಂದರೆ ಒಂದೇ ಒಂದು ಕೋಣೆಯಲ್ಲಿ, ರಾತ್ರಿ ಓದಿಕೊಳ್ಳಲು ಬೆಳಕು ಇರುತ್ತಿರಲ್ಲ. ನಮ್ಮ ಬಾಡಿಗೆ ಖೋಲಿ ಬ್ರಾಹ್ಮಣರ ಗಲ್ಲಿಯ ಕೊನೇಯ ತುದಿಯಲ್ಲಿತ್ತು. ಬಾಳಾಚಾರಿ ಎಂಬ ಬ್ರಾಹ್ಮಣ ಭಡಜಿಯ ಮನೆಗೆ ರಾತ್ರಿ ಓದಿಕೊಳ್ಳಲೆಂದು ಹೋಗುತ್ತಿದ್ದೆ. ಅವರ ಮನೆಯಲ್ಲಿ ಕಂದೀಲು ಇತ್ತು. ಅವರ ಮಕ್ಕಳೊಂದಿಗೆ ಕುಳಿತು ಓದುತ್ತಿದ್ದಾಗ ಆ ಮನೆಯ ಮಡಿ ಮುದುಕಿ- ಏ! ಶೂದ್ರ ಮುಂಡೇದೆ. ಆ ಕಡಿ ಕೂಡು. ನಮ್ ಪಾರಗೋಳಿಗಿ ಮುಟ್ಟಬ್ಯಾಡ ಅಂತಿತ್ತು. ಅವತ್ತು ಅದೆಲ್ಲಾ ಮಾಮೂಲಿ ಎಂಬಂತಾಗಿತ್ತು.

ಖರೆ ಹೇಳಬೇಕೂಂದ್ರ ಪಾಟಿ-ಪುಸ್ತಕ-ಕಾಪಿ ತರಲು ನಂಬಳಿ ರೊಕ್ಕ ಇರುತ್ತಿರಲಿಲ್ಲ. ಹೈಸ್ಕೂಲಿನಲ್ಲಿದ್ದಾಗ ನನ್ ಗೆಳತಿಯೊಬ್ಬಳಿಂದ ಎರಡು ಪುಸ್ತಕಗಳನ್ನು ಎರವಲು ಪಡೆದು ಓದುತ್ತಿದ್ದೆ. ನಾ ಅಥವಾ ನನ್ನಂಥವರು ಶಾಲಿ ಕಲಿತಿದ್ದು ಒಂದು ದೊಡ್ಡ ಪುರಾಣನೇ ಇದೆ. ಇರಲಿ. ಹೈಸ್ಕೂಲಿನ್ಯಾಗ ಇದ್ದಾಗಲೇ ನನಗೆ ಓದುವ ಗೀಳು ಹತ್ತಿತ್ತು. ಎಂ.ಕೆ.ಇಂದಿರಾ, ಅ.ನ.ಕೃ, ತ.ರಾ.ಸು, ಸಾಯಿಸುತೆ, ರಾಮರಾವ್, ಇವರ ಕಾದಂಬರಿಗಳನ್ನು ತುಂಬಾ ಆಸಕ್ತಿಯಿಂದ ಓದುತ್ತಿದ್ದೆ. ಹೀಂಗ ಓದುವಾಗಲೇ ನಾನು ಬರೀಬೇಕು ಅಂತ ಅನಸತಿತ್ತು. ಏನಾದರೂ ಬರೀಬೇಕು ಎಂಬ ತುಡಿತವಂತೂ ನನಗೆ ರಕ್ತಕ್ಕ ಮೆತ್ತಿದ ವಾಸನಿ ಹಂಗ್ ಬೆನ್ನ ಬಿತ್ತು. ಅಂತೂ ಕಾಲೇಜಿನ್ಯಾಗ ಇದ್ದಾಗ ಮ್ಯಾಗಝೀನ್ದಾಗ ಒಂದು ಸಣ್ಣ ಕತಿ ಬರಿದ್ಯ. ಅದೂ ಒಂದು ನಮೂನಿ ಖುಶಿ ಕೊಟ್ಟಿತು. ನಾನೂ ಬರೆಯಬಲ್ಲೆ ಎಂಬ ಧೈರ್ಯ ಮೂಡಿತು. ಹಂಗೇ ಬರಕೋಂತ ಹೊಂಟ್ಯಾ

2. ನೀವು ಬರೆದಿದ್ದನ್ನು ಯಾರಿಗಾದರೂ ಓದಿ ತೋರ್ಸಿ, ಸಲಹಾ, ಮಷ್ವರಾ, ಪಡಿತಿದ್ರೇನು?

ಛೆ! ಛೆ! ಅದೇನೂ ಇರಲಿಲ್ಲ. ನಮ್ ಕೇರ್ಯಾಗರೆ ಯಾರೂ ಸಾಹಿತ್ಯ, ಗೀಹಿತ್ಯಾ ಅಂತ ತಲೆ ಕೆಡಿಸಕೊತ್ತಿರಲಿಲ್ಲ. ಇನ್ ಮ್ಯಾಲಿನವರಂತೂ ನಮ್ಮನ್ ಖದರ್ ಮಾಡ್ತಿರಲಿಲ್ಲ. ನಾನ್ ಬರ್ಯಾದು, ನಾನೇ ಓದಾದು ಮಾಡ್ತಿದ್ದೆ. ಆಗ ಇಲ್ಲಿ ಅಂಥಾ ಸಾಹಿತ್ಯರ ವಾತಾವರಣನೂ ಅಷ್ಟಾಗಿ ಇರಲಿಲ್ಲ. ಹಿಂಗಾಗಿ ಅವಾಗೇನು ಜನಪ್ರಿಯ ಮಾದರಿಯ ಕಾದಂಬರಿ, ಕಥೆ ಪ್ರಕಟವಾಗಿತ್ತಿರಲಿಲ್ಲ. ನಾನು ಅವುಗಳಿಂದಲೇ ಪ್ರಭಾವಿತಳಾಗಿ ಅದೇ ಜಾಡಿನಲ್ಲಿ ಬರೆಯಲು ಪ್ರಯತ್ನಿಸಿದೆ.

3. ಅಂದ್ರ ಸಾಹಿತ್ಯ ದಾರಿಯಲ್ಲಿ ನೀವೂ ಏಕಲವ್ಯನಂತೆ ನಿಮಗ್ ನೀವೇ ಮಾದರಿಯಾಗಿ ತಿಳಿದಂಗ್ ಬರಿದ್ರಿ. ಓದಿಗಾಗಿ ಹ್ಯಾಂಗ್ ಸಂಘರ್ಷ ಮಾಡಿದೀರಲ್ಲ ಹಾಗೇ ಬರವಣಿಗೆಗಾಗಿ ಸಂಘರ್ಷ ಮಾಡಲಿಲ್ಲವೇ?

ಸಂಘರ್ಷ ಯಾಕ ಮಾಡಲಿಲ್ಲವ್ವ! ನನ್ನದು ತಣ್ಣಗಿನ ಸಂಘರ್ಷ, ನನ್ ಬಳಗಿನ ಸಂಘರ್ಷ ಅದು. ಬದುಕಿನ್ಯಾಗೂ ಪಡಬಾರದ ಪರಿಪಾಟಲು ಪಟ್ಟದ್ದಾಗಿತ್ತು. ಮಜ ಅಂದ್ರ ಬದುಕಿನ್ಯಾಗ ಕಿರಿಕಿರಿ ಹೆಚ್ಚಾದಾಗಲೆಲ್ಲಾ ನಾ ಹೆಚ್ಚೆಚ್ಚು ಬರವಣಿಗೆಯಲ್ಲಿ ತೊಡಗ್ತಿದ್ದೆ. ಬರಹಾ ನನಗೆ ಆಪ್ತಗೆಳತಿಯಾಗಿತ್ತು. ನೋವು ನುಂಗುವ ಧೃತಿಯಾಗಿತ್ತು. ನಾ ಬರೆದಿದ್ದು ನಾಡಿನ ಪತ್ರಿಕೆಗಳಲ್ಲಿ ಪ್ರಕಟಾದಾಗ, ಧನ್ಯತಾ ಭಾವ ಮೂಡುತ್ತಿತ್ತು. ಪ್ರಕಾಶಕರು, ಸಂಪಾದಕರು ನನ್ ಕತೆ, ಕಾದಂಬರಿಗಳಿಗಾಗಿ ದಾರಿ ಕಾಯುತ್ತಿದ್ದರು.

4. ನಿಮ್ಮೊಟ್ಟಿಗೆ ಅಂದು ಸಾಹಿತ್ಯದ ಸ್ಪರ್ಧೆಗಳಿರಲಿಲ್ಲವೇ?
ಅಯ್ಯೋ ಕನ್ನಡದಲ್ಲಿ ಬರೆಯುವ ಮಹಿಳೆಯರ ಸಂಖ್ಯನೇ ಕಡಿಮೆ ಇತ್ತು. ಅದರಲ್ಲೂ ನಮ್ ಭಾಗದಿಂದ ಕಥೆ, ಕಾದಂಬರಿ ಬರೆಯುವವರು ತುಂಬಾ ವಿರಳವಾಗಿದ್ದರು.

5. ನೀವು ಮೊದಮೊದಲಿನ ಜನಪ್ರಿಯ ಪ್ರೇಮಕಥಾ ಜಾಡನ್ನು ಬಿಟ್ಟು ಶೋಷಣಾ ಬದುಕನ್ನು ಕುರಿತು ಬರೆಯಲು ನಿಮಗೆ ಪ್ರೇರಣೆ ಎಲ್ಲಿಂದ ಬಂತು?

ನಮ್ ಭಾಗದ ಬದುಕಿನೊಳಗಿಂದ ನನಗೆ ಪ್ರೇರಣೆ ಸಿಕ್ತು. ನಮ್ ಭಾಗದ ಗುಡಿಸಲಗೇರಿ ಮಂದಿ ಬದುಕಿನ ಚಿತ್ರಣ, ಅದರಲ್ಲೂ ವಿಶೇಷವಾಗಿ ಹಿಂದುಳಿದ, ದಲಿತ ಮಹಿಳೆಯರ ಮೇಲಾಗುತ್ತಿರುವ, ತರಹೇವಾರಿ ಶೋಷಣೆಗಳು ನನ್ನ ಚಿತ್ತವನ್ನು ಕಲಕುತ್ತಲೇ ಇದ್ದವು. ನಮ್ ಭಾಗದ ಜನಪದ ಸಾಹಿತ್ಯದಲ್ಲಿ ಮಹಿಳೆಯರ ನೋವಿನ ನೆಲೆಗಳು ಮಡುಗಟ್ಟಿ ನಿಂತಿದ್ದವು. ವಚನಕಾರರು, ತತ್ವಪದಕಾರರು, ಇವರೆಲ್ಲಾ ಬೆನ್ನ ಹಿಂದಿನ ಬೆಳಕಾಗಿದ್ದರು. ಎಂಭತ್ತರ ದಶಕದಲ್ಲಿ ಬಂಡಾಯ-ದಲಿತ ಸಾಹಿತ್ಯ ಚಳುವಳಿಯು ಮುಂಚೂಣಿಗೆ ಬಂದಿತ್ತು. ಶಾಂತರಸ, ಲಂಕೇಶರಂಥ ಪ್ರಗತಿಪರ ಲೇಖಕರು ನನ್ನಂಥವರನ್ನು ಹುರಿದುಂಬಿಸಲೆಂದೇ ಟೊಂಕ ಕಟ್ಟಿ ನಿಂತಿದ್ದರು.

6. ಅದು ಸರಿ ಕಾದಂಬರಿ, ಕಥೆಗಳ ವಸ್ತುವಿನಲ್ಲೇನೊ ಒಂದು ನಿರ್ದಿಷ್ಟ ಒತ್ತಾಸೆ, ಪ್ರೇರಣೆ, ಒಳಗಿನ ತುಡಿತದಿಂದಾಗಿ ಜನಪ್ರಿಯ ಮಾದರಿ ಬಿಟ್ಟು ಗಂಭೀರ ಬರವಣಿಗೆಗೆ ಪಲ್ಲಟಗೊಂಡಿರಿ. ಆದರೆ ಭಾಷೆಯಲ್ಲೂ ಗ್ರಾಂಥಿಕ ಭಾಷಾ ವೈಖರಿಯಿಂದ ಇದ್ದಕ್ಕಿದ್ದಂತೆ ಹೈದ್ರಾಬಾದ ಕರ್ನಾಟಕದ ಜವಾರಿ ಭಾಷೆಗೆ ಪಲ್ಲಟಗೊಂಡಿರಲ್ಲಾ ಅದು ಏಕೆ?

ಅದು ಅನಿವಾರ್ಯವಾಗಿತ್ತು. ಒಂದು ವಸ್ತು ತನ್ನನ್ನು ಧಾರಣ ಮಾಡಬಲ್ಲಂಥ ಹೊರ ಮೈ ಚೌಕಟ್ಟನ್ನು ತಾನು ಸಿದ್ಧಪಡಿಸಿಕೊಳ್ಳುತ್ತದೆ. ಅಂದರೆ ಸೃಜನಶೀಲ ಬರವಣಿಗೆಯ ಶಕ್ತಿ ಇರುವುದೇ ಅದನ್ನು ನಿರ್ವಹಿಸುವ ಪರಿಕರದಲ್ಲಿ. ಅದು ರೂಪ ಇರಬಹುದು, ಭಾಷೆ ಇರಬಹುದು.
ನಾನು ಯಾರ ಬದುಕನ್ನು ಬರೆಯಲು ಹೊರಟಿದ್ದೆನೋ; ಅದು ಅವರದ್ದೇ ಭಾಷೆಯಲ್ಲಿ ಮಾತ್ರ ಹಿಡಿಯಲು ಸಾಧ್ಯವಾಗುತ್ತಿತ್ತು. ಭಾಷೆ ಎಂದರೆ ಕೇವಲ ಮಾತುಗಳಲ್ಲ. ಧ್ವನಿಯೂ ಅಲ್ಲ. ಅದು ಒಂದು ಬಗೆಯ ಸಂಸ್ಕೃತಿಯೂ ಹೌದು, ಒಂದು ರಾಜಕಾರಣವೂ ಹೌದು. ನನ್ ಕೆಳಗೇರಿಯ ಮಂದಿಯ ಬದುಕಿನ ಪಲಕುಗಳು ಹುದುಗಿರುವುದೇ ಅವರು ಆಡುತ್ತಿರುವ ಭಾಷೆಯಲ್ಲಿ. ನಮ್ಮ ದೇಶದಲ್ಲಿ ಸಾಮಾಜಿಕ ಭಾಷಾವಿಜ್ಞಾನ ಅಷ್ಟಾಗಿ ಅಭಿವೃದ್ಧಿಗೊಂಡಿಲ್ಲ. ಸಮಾಜೋರಾಜಕೀಯ ನೆಲೆಯಲ್ಲಿ ಭಾಷಾ ಅಧ್ಯಯನಗಳು ನಡೆಯುತ್ತಿಲ್ಲ. ಅಂಥಾ ಅಧ್ಯಯನಗಳು ನಡೆದಾಗ ಜನಸಾಮಾನ್ಯರು, ದಲಿತರು, ಶ್ರಮಿಕರು, ಆಡುವ ಭಾಷೆಯ ಸೊಗಡು, ಅದರ ಧ್ವನಿಕಾರು ಅನುರಣಶೀಲತೆ ಇವೆಲ್ಲವೂ ನಿಚ್ಚಳವಾಗುತ್ತದೆ.

7. ನೀವು ಬಳಸುವ ಭಾಷೆ ಮತ್ತು ವಸ್ತುವಿನ ಬಗೆಗೆ ಪುನರಾವರ್ತನೆಗಳಾಗಿವೆ ಎಂಬ ವಿಚಾರವಿದೆಯಲ್ಲ. ಹೌದೆ?

ಭಾಷೆಯ ಬಗೆಗೆ ಪುನರಾವರ್ತನೆ ಎಂಬ ವಿಷಯವೇ ಬರಬಾರದು. ನಾನು ಭಾಷಾ ಪ್ರಭೇದವನ್ನು ತೋರಿಸುವುದಾಗಿ ಆ ಭಾಷೆ ಬಳಸಿದವಳಲ್ಲ. ನಮ್ ಮಂದಿಯ ಭಾಷಾ ಇರುವುದೇ ಹಾಗೆ. ಅವರು ಎಷ್ಟು ಸಲ ಅಕ್ಷರಗಳಲ್ಲಿ ಪಡಿಮೂಡುತ್ತಾರೊ ಅಷ್ಟೂ ಸಲವೂ ಅವೇ ಮಾತಿನ ವರಸೆ ಇರಬೇಕಲ್ಲವೆ? ಇನ್ನು ವಸ್ತುವಿನ ಪುನರಾವರ್ತನೆ. ಅಲ್ಲಿಯೂ ಪುನರಾವರ್ತನೆ ಇದೆ ಎಂದು ನನಗೆ ಅನಿಸುತ್ತಿಲ್ಲ. ಪ್ರತಿಯೊಂದು ಭಿನ್ನ ವಿಭಿನ್ನ ಘಟನೆಗಳಿವೆ. ಈ ಭಾಗದ ಶೋಪಿತ ಮಂದಿಯ ಬದುಕು ಅಂದರೆ ಅದೊಂದು ನೋವಿನ ಸರಮಾಲೆ. ಅನಂತ ಸಂಕೀರ್ಣವಾದುದು. ಅದಕ್ಕೆ ಎಷ್ಟೋಂದು ಮಗ್ಗುಲಗಳಿವೆ ಗೊತ್ತೇ? ಎಷ್ಟೋ ಸಲ ಆ ಎಲ್ಲವನ್ನೂ ಹಿಡಿದಿಡಲು ಸಾಧ್ಯವಾಗಿಲ್ಲವಲ್ಲ ಎಂಬ ಹಳಹಳಿ ಇದೆ. ನಮ್ಮ ಭಾಗದಲ್ಲಿ ಜೋಗಣಿ ಬಿಡುವ ಸಂಪ್ರದಾಯ, ಉಪಪತ್ನಿಯರ ಪದ್ಧತಿ, ಕೂಡಿಕೆ ಮದುವೆಗಳು ಇವೆಲ್ಲಾ ಇನ್ನೂ ಇವೆ. ನಾ ಬರದದ್ದು ತುಸುಮಾತ್ರ. ಬರೆಯದೇ ಉಳಿದದ್ದು ಬಹಳವಿದೆ.

8. ಈಗ ಒಂದಿಷ್ಟು ನಿಮ್ಮ ಬದುಕು-ಬರಹದಾಚೆ ಮಾತಾಡೋಣ. ಸಮಕಾಲೀನ ಕನ್ನಡ ಸಾಹಿತ್ಯ ಸ್ಥಿತಿ-ಗತಿ ಬಗೆಗೆ ನಿಮಗೆ ಏನನಿಸುತ್ತದೆ?

ಏಕಕಾಲಕ್ಕೆ ಖುಷಿ ಮತ್ತು ವಿಷಾದ ಎರಡೂ ಆಗುತ್ತದೆ. ಖುಷಿ ಏಕೆಂದರೆ ನಮ್ಮ ಹೊಸ ತಲೆಮಾರಿನ ಲೇಖಕರು ನಮಗಿಂತ ತೀವ್ರವಾಗಿ ಭಾವ ಸಾಂದ್ರತೆಯೊಂದಿಗೆ ಮತ್ತು ಅಷ್ಟೇ ಆಪ್ತವಾಅಗಿ ಬರೆಯುತ್ತಿದ್ದಾರೆ. ಇದು ವೈಚಾರಿಕ, ವೈಜ್ಞಾನಿಕ ಬರಹಗಳ ಯುಗ. ಅನ್ಯ ಜ್ಞಾನಶಿಸ್ತುಗಳ ವಿಸ್ತೃತ ಅಧ್ಯಯನದ ಬೆಳಕಿನಲ್ಲಿ ಹೆಚ್ಚು ಮೌಲಿಕವಾದ, ಗಟ್ಟಿಯಾದ ಕೃತಿಗಳನ್ನು ರಚಿಸುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಸಾಹಿತ್ಯ ಮತ್ತು ಸೈದ್ಧಾಂತಿಕ ಬದ್ಧತೆಯಿಂದ ದೂರ ಸರಿದು ಜಾಗತಿಕ ಮಾರುಕಟ್ಟೆ ಲೋಕದಲ್ಲಿ ಅವರು ಕಳೆದುಹೋಗುತ್ತಿದ್ದಾರಲ್ಲ, ಇದಕ್ಕೆ ವಿಷಾದವಾಗುತ್ತದೆ. ಆನತೆಯ ಮನೋಭೂಮಿಕೆಯನ್ನು ಪ್ರಭಾವಿಸಬೇಕಾದ ಸಾಹಿತಿಯು ತಾನೇ ಜನಪ್ರಿಯ ಮಾರುಕಟ್ಟೆಯ ಜಾಹೀತಾತು ಲೋಕದಿಂದ ಪ್ರಭಾವಿತನಾದರೆ ಹೇಗೆ?

9. ಜಾಗತಿಕ ಮಾರುಕಟ್ಟೆ ನಿಯಂತ್ರಿತ ಏಕರೂಪೀ ಸಂಸ್ಕೃತಿ ನಿರ್ಮಾಣದಲ್ಲಿ ದೇಶೀಯ ಭಾಷೆ, ಸ್ಥಳೀಯ ಸಂಸ್ಕೃತಿಗಳು ನಾಶವಾಗುತ್ತದೆಯೆಂಬ ಕೂಗು ಕೇಳಿಬರುತ್ತಿದೆಯಲ್ಲ. ಅದಕ್ಕೆ ನಿಮ್ಮ ಅಭಿಪ್ರಾಯವೇನು?

ಹಾಂ! ಹಾಂ! ದೇಶೀ ಭಾಷೆ ಮತ್ತು ಸಂಸ್ಕೃತಿಯ ಅಳಿವಿನ ಬಗೆಗಿನ ಹೆದರಿಕೆಯೇನೋ ಸಕಾರಣವಾದದ್ದೇ. ಆದರೆ ಇದಕ್ಕೆ ಪರ್ಯಾಯವೇ ಇಲ್ಲ ಎಂದು ನಿರಾಶರಾಗಬೇಕಿಲ್ಲ. ಶ್ರಮಶಕ್ತಿ ಮತ್ತು ಬಂಡವಾಳಶಕ್ತಿಯ ನಡುವಿನ ಸಂಘರ್ಷ ಇದಾಗಿದೆ. ಈ ಹೊತ್ತಿನಲ್ಲಿ ಈ ಸಂಘರ್ಷ ಅನಿವಾರ್ಯ. ಅದನ್ನು ನಾವು ಎದುರಿಸಲೇಬೇಕಾಗಿದೆ. ಎದುರಿಸೋಣ. ಜಗತ್ತಿನಲ್ಲಿ ಶ್ರಮಿಕ ಮೂಲದ ಮುರನೇಯ ಶಕ್ತಿಯೊಂದು ಹೊಡೆ ಮುರಿದು ಏಳುತ್ತಿದೆ. ಇನ್ನೊಂದು ಜಗತ್ತು ಸಾಧ್ಯ ಎಂಬ ನಂಬಿಕೆ ನನ್ನದು.

10. ಭಯೋತ್ಪಾದನೆ, ಕೋಮುವಾದ, ಮೂಲಭೂತವಾದ ಇವುಗಳನ್ನು ಸಾಹಿತ್ಯದ ಮೂಲಕ ಎದುರಿಸಬಹುದೇ? ಸಾಹಿತ್ಯಕ್ಕೆ ಅಂಥ ಧಾರಣ ಶಕ್ತಿ ಇದೆಯಾ?

ಖಂಡಿತಾ ಇದೆ. ಎಲ್ಲೋ ಓದಿದ ನೆನಪು. ಕಾವ್ಯ ಕ್ರಾಂತಿಯ ಜನನಿ. ಕಾವ್ಯ ಎಂದರೆ ವಿಶಾಲ ಅರ್ಥದಲ್ಲಿ ಸಾಹಿತ್ಯ ಎಂದೇ ಇದೆ. ಬದುಕಿನ ಪ್ರತಿಬಿಂಬವೇ ಸಾಹಿತ್ಯ ಎಂದಾಗಿರುವುದರಿಂದ ಬದುಕಿನಲ್ಲಿರುವುದೆಲ್ಲವನ್ನು ಹಿಡಿಯಬಲ್ಲ ಶಕ್ತಿ ಸಾಹಿತ್ಯವೆಂಬ ಪರಿಕರಕ್ಕಿದೆ. ಪರಿಕರ ಎಂದೆನಲ್ಲಾ, ಅಂದರೆ ಇಷ್ಟೇ ಆಯಾಕಾಲದ ಕ್ರಿಯಾಶೀಲ ಮನಸ್ಸುಗಳು ತನ್ನ ಪ್ರತಿಭೆಯನ್ನು ನಿಕಷಕೊಡ್ಡಿ ಆಯಾಕಾಲ ಮತ್ತು ಸಂದರ್ಭ ಬಯಸುವ ಹೊಸ ಪರಿಕರ, ಪರಿಕಲ್ಪನೆಗಳನ್ನು ನೆರವಿಕೊಳ್ಳಬೇಕು. ಸಾಹಿತ್ಯ ಎನ್ನುವುದು ಒಂದು ಹೊಸ ಹರೆಯದ ಕುದುರಿ ಇದ್ದಂತೆ. ಸವಾರಿ ಮಾಡುವವನು ಅದಕ್ಕೆ, ತನಗೆ ಅನುಕೂಲವಾಗುವ ನಡೆ ಕಲಿಸಬೇಕಾಗುತ್ತದೆ ಅಷ್ಟೆ.

11. ಈಗಿನ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಮಾಧ್ಯಮವೇ ಮರೆಯಾಗುತ್ತಿರುವಾಗ ಈ ತೆರನ ಸಾಹಿತ್ಯ ಸಮ್ಮೇಳನ ಅಥವಾ ಕನ್ನಡಪರ ಚಳುವಳಿಗಳಿಂದ ಕನ್ನಡ ಉಳಿಸಿ ಬೆಳೆಸಲು ಸಾಧ್ಯವೇ?

ಗಂಭೀರವಾದ ಸಕಾಲಿಕ ಪ್ರಶ್ನೆ. ಶಿಕ್ಷಣದ ಖಾಸಗೀಕರಣ ಎಲ್ಲಿಯವರೆಗೆ ಮುಂದುವರೆಯುತ್ತಿದೆಯೋ ಅಲ್ಲಿಯವರೆಗೆ ಕನ್ನಡ ಮಾಧ್ಯಮಕ್ಕೆ ಕುತ್ತು ಇದ್ದದ್ದೆ. ಶಿಕ್ಷಣವನ್ನು ಮಾಫಿಯಾ ಮಾಡುತ್ತಿರುವ ವಿದ್ಯಮಾನದ ವಿರುದ್ಧ ಜನತೆ ಬಂಡೇಳಬೇಕು. ಜನತೆ ಬಂಡೆದ್ದಾಗಲೇ ರಾಜಕೀಯ ಇಚ್ಛಾಶಕ್ತಿ ಎಂಬುದು ಆಕಾರ ಪಡೆದುಕೊಳ್ಳುತ್ತದೆ. ಇಂದು ನಾವು ನೋಡುತ್ತಿರುವುದು ಕನ್ನಡ ಪರ ಚಳುವಳಿಗಳನ್ನಲ್ಲ. ಚಳುವಳಿಯ ರೂಪಧರಿಸಿಕೊಂಡಿರುವ ಕಾರ್ಯಕರ್ಮಗಳನ್ನು ಮಾತ್ರ ನೋಡುತ್ತಿದ್ದೇವೆ. ಯಾವುದೇ ಅದ್ದೂರಿ, ಅರ್ಥಪೂರ್ಣವೆನಿಸುವ ಕಾರ್ಯಕ್ರಮಗಳಿಗಾದರೂ ಒಂದು ಮಿತಿ ಇದೆ. ಇನ್ನು ಫೇಕ್ ಕಾರ್ಯಕ್ರಮಗಳಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ. ಕಾರ್ಯಕ್ರಮಗಳ ಮಿತಿಯನ್ನು ಮೀರುವುದೇ ಚಳುವಳಿ. ಚಳುವಳಿಗೆ ಪರಿಣಾಮವೇ ಗುರಿ. ಅವಿಶ್ರಾಂತ ಚಟುವತಿಕೆಗಳೇ ನಡೆ. ಇಂಥ ಚಳುವಳಿಗಳ ಅವಶ್ಯಕತೆ ಇದೆ.

ಇನ್ನು ಸಾಹಿತ್ಯ ಸಮ್ಮೇಳನಗಳ ಸಫಲತೆಯ ಪ್ರಶ್ನೆ. ಒಂದು ಮಾತನ್ನು ನಾವೆಲ್ಲ ಸ್ಪಷ್ಟಪಡಿಸಿಕೊಳ್ಳಬೇಕಿದೆ. ಇದು ಸಾಮ್ರಾಜಶಾಹಿ ಶಕ್ತಿಗಳ ಕೈ ಮೇಲಾಗಿರುವ ಜಾಗತಿಕ ಅರಾಜಕ ಸ್ಥಿತಿಯಾಗಿದೆ. ಇಂದ್ಥ ಸ್ಥಿತಿಯಲ್ಲಿ ಎಲ್ಲ ಚಟುವಟಿಕೆಗಳು ಅಂದರೆ ಸಾಂಸ್ಕೃತಿಕ ಚಟುವಟಿಕೆ ಇರಬಹುದು, ಆರ್ಥಿಕ ಪರ್ಯಾಯವಿರಬಹುದು, ಸಾಮಾಜಿಕ ಪಲ್ಲಟಗಳಿರಬಹುದು, ರಾಜಕೀಯ ಸ್ಥಿತ್ಯಂತರಗಳಿರಬಹುದು. ಹೀಗೆ ಎಲ್ಲ ವಿದ್ಯಮಾನಗಳ ಬಗೆಗೆ ಸಕಾರಣ ಗುಮಾನಿ, ದಿವ್ಯ ನಿರ್ಲಕ್ಷ್ಯ, ಒಂಥರಾ ನಿರಾಸೆ ಹುಟ್ಟಿಕೊಳ್ಳುತ್ತವೆ. ಆದರೆ ಈ ಸ್ಥಿತಿ ಶಾಶ್ವತವಲ್ಲ. ಒಂದು ಜನವಿರೋಧಿ ವ್ಯವಸ್ಥೆಯಿಂದ ಜನಪರ ದಿಕ್ಕಿಗೆ ಪಯಣಿಸುವ ಸಂದರ್ಭದಲ್ಲಿನ ಕ್ಷಣಿಕ ನಿಲುದಾಣ. ಇದನ್ನು ನಾವೆಲ್ಲ ಹಾದು ಬರಲೇಬೇಕು. ಆದರೆ ಮಿಂದಿನ ದಾರಿಯ ಹುಡಕಾಟಕ್ಕಾಗಿ ನಾವೆಲ್ಲ ಬದ್ಧರಾಗಿರಬೇಕು ಅಷ್ಟೇ. ಆ ಕಾರಣಕ್ಕಾಗಿ ಕತ್ತಲೆ ಎತ್ತೆತ್ತಲೂ ಆವರಿಸಿಕೊಂಡಿರುವ ಮನೆಯಲ್ಲಿ ಇಂಥ ಸಮ್ಮೇಳನಗಳ ಮೂಲಕ ಸಣ್ಣ ದೀಪ ಹಚ್ಚಿಕೊಂಡಾದರೂ ನಾಳಿನ ಉದಯದವರೆಗೆ ಕಾಯಬೇಕಿದೆ. ಆ ದೀಪವಾದರೂ ನನಗೆ ಬೆಳಕು ತೋರಲೆಂದು ಬೇಕು. ನನ್ನ ಕಣ್ಣ ಕತ್ತಲೆ ಕರಗಿಸುವಷ್ಟು ಶಕ್ತಿ ಪುಟ್ಟ ಪಣತೆಗಿದೆ ಎಂಬುದನ್ನು ಮರೆಯದಿರೋಣ.