ಕನ್ನಡ ಅಖಾಡದೊಳು ಮೊದಲ ಜಗಜಟ್ಟಿಯ ಎಂಟ್ರಿ...
ಕೆಚ್ಚೆದೆಯ ಕನ್ನಡ ಮನಸ್ಸು ಚಂಪಾರದ್ದು. ಅವರು ಈ ಚರ್ಚೆಗೆ ಚಾಲನೆ ನೀಡಿದ್ದಾರೆ. ಈ ಅಖಾಡ ದಲ್ಲಿ ಚರ್ಚಿಸಲೇಬೇಕಾದ ಸಮಸ್ಯೆಗಳನೇಕ, ಅವೆಲ್ಲವುಗಳನ್ನೂ ಸೂಚ್ಯವಾಗಿ ತಿಳಿ ಹೇಳಿದ್ದಾರೆ ಚಂಪಾ. ಸುಗ್ರಾಸ ಚರ್ಚೆಗೆ ಇದು ಒಳ್ಳೆಯ ಆರಂಭ.


2010 ರ ಫೆಬ್ರವರಿ 19-10-21 ರಂದು, ಕುಮಾರವ್ಯಾಸನ ನೆಲೆವೀಡೆಂದೇ ಹೆಸರು ಪಡೆದು, ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಗದಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿಖರ ಕಾರ್ಯಕ್ರಮವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಾಡೋಜ ಶ್ರೀಮತಿ ಗೀತಾ ನಾಗಭೂಷಣ ಸಮ್ಮೇಳನದ ಅಧ್ಯಕ್ಷರು, ಇದು ಎಪ್ಪತಾರನೆಯ ಸಮ್ಮೇಳನ. ಈ ಮೊದಲು, ಅರ್ಧಶತಕದ ಹಿಂದೆ, 1961 ರಲ್ಲಿ ಖ್ಯಾತ ಸಂಶೋಧಕ ಪ್ರೊ.ಕೆ.ಜಿ.ಕುಂದಣನಕಾರ ಅವರ ಅಧ್ಯಕ್ಷತೆಯಲ್ಲಿ ಗದಗನಗರದಲ್ಲಿ 43 ನೆಯ ಕನ್ನಡ ಸಮ್ಮೇಳನ ನಡೆದಿತ್ತು. ಆಗ ಅವಿಭಾಜಿತ ಧಾರವಾಡ ಜಿಲ್ಲೆಯ ಒಂದು ಊರಾಗಿತ್ತು ಗದಗ, ಈಗ ಅದು ಗದಗ ಜಿಲ್ಲೆಯ ಒಂದು ಸ್ಥಳ.

ಪರಿಷತ್ತು ಪ್ರಾರಂಭವಾದದ್ದು, 1914ರಲ್ಲಿ, ಸಾಹಿತಿಗಳೇ ಮುಂದಾಗಿ ಕಟ್ಟಿದ ಈ ಸಂಸ್ಥೆ 'ಸಾಹಿತ್ಯ ಪರಿಷತ್ತು' ಎಂಬ ಹೆಸರನ್ನೇ ಹೊತ್ತಿದ್ದರೂ ಇದು ಎಂದಿಗೂ ಕೇವಲ ಸಾಹಿತಿಗಳ ಪರಿಷತ್ತು ಆಗಲೇ ಇಲ್ಲ. ಸಂಸ್ಕೃತಿಯ ವಿಕಾಸ, ವರ್ಧನೆಗಳಲ್ಲಿ ಸಾಹಿತ್ಯದ ಪಾತ್ರ ದೊಡ್ಡದು ಮತ್ತು ಮಹತ್ವದ್ದು, ಕನ್ನಡ ನಾಡು ಎಂಬುದು ರಾಜಕೀಯ ಕಾರಣಗಳಿಂದಾಗಿ ಹಲವಾರು ಭೌಗೋಳಿಕ ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿತ್ತು. 'ಕನ್ನಡತನ' ಎಂಬುದು ಹೃದಯದ ಯಾವುದೋ ಮೂಲೆಯಲ್ಲಿ ಮಿಣಿ ಮಿಣಿ ಅಂತ ಉರಿಯುತ್ತಿದ್ದರೂ ಅದು ಕನ್ನಡ ನಾಡವರ ಇಡೀ ಬದುಕನ್ನು ಬೆಳಗುವ ಜ್ಯೋತಿಯಾಗಿರಲಿಲ್ಲ. ಈ ನಿಟ್ಟಿನಲ್ಲಿ ಕ.ಸಾ.ಪರಿಷತ್ತು (ಈ ಮೊದಲೇ ಧಾರವಾಡದಲ್ಲಿ ಸ್ಥಾಪನೆಗೊಂಡಿದ್ದ) ಕರ್ನಾಟಕ ವಿದ್ಯಾವರ್ಧಕ ಸಂಘದೊಂದಿಗೆ ಕೈ ಜೋಡಿಸಿ ಕನ್ನಡ ಪುನರುಜ್ಜೀವನದ ಕಾಯಕಕ್ಕೆ ತನ್ನನ್ನು ತೆರೆದುಕೊಂಡಿತು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿತು. ಆನಂತರದ ವರ್ಷಗಳಲ್ಲೂ ನಿರಂತರವಾಗಿ ಈ ನಾಡಿನ ಸಂತುಷ್ಟ ಬದುಕಿನ ಸಮಸ್ಯೆಗಳನ್ನೆತ್ತಿಕೊಂಡು, ಸಮಸ್ತ ಕನ್ನಡ ಭಾಷಿತ ಸಮುದಾಯವನ್ನು ತನ್ನ ತೆಕ್ಕೆಗೆ ಬರಮಾಡಿಕೊಳ್ಳುತ್ತಾ, ತನ್ನ ಕ್ರಿಯಾ- ನೈತಿಜ್ಯವನ್ನು ವಿಸ್ತರಿಸಿಕೊಳ್ಳುತ್ತದೆ. ಭಾರತದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ-ಈ ಗುರಿಗಳನ್ನು ಸಾಧಿಸಿದ ಮೇಲೆ ಇಂಥದೊಂದ್ದು ಮಹಾಸಂಸ್ಥೆಯ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತಲೇ ಇದೆ.

ಸದ್ಯ ರಾಜ್ಯದ ಎಲ್ಲ ಜಿಲ್ಲಾ- ತಾಲ್ಲೂಕುಗಳಲ್ಲಿ, ನೆರೆಯ ನಾಲ್ಕು ರಾಜ್ಯಗಳಲ್ಲಿ ಘಟಕ ಹೊಂದಿರುವ ಕಸಾಪ, ಮಹಾಕವಿ ಕುವೆಂಪು, ಕನಸು ಕಂಡ `ಸಾಂಸ್ಕೃತಿಕ ಕರ್ನಾಟಕ'ವನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದೆ. ಜಗತ್ತಿನ ಯಾವುದೇ ಭಾಗದಲ್ಲಿರಲಿ ಕನ್ನಡಿಗ- ಅವನು ಈ ಸಾಂಸ್ಕೃತಿಕ ವಲಯದ ಒಂದು ಭಾಗವೇ. ಇಂಡಿಯಾ ದೇಶದ ಬೇರಾವ ರಾಜ್ಯದಲ್ಲೂ ಈ ಸ್ವರೂಪದ ಮತ್ತು ಈ ವ್ಯಾಪ್ತಿಯ ಸಾರ್ಥಕ-ಸಾಂಸ್ಕೃತಿಕ ಸಂಸ್ಥೆ ಇಲ್ಲ ಎನ್ನವುದೇ ಕಾಸಾಪರ ಹೆಚ್ಚುಗಾರಿಕೆ.

ಮೊದ ಮೊದಲು ಒಂದು ಪ್ರತಿಷ್ಠಿತ ಸಾಮಾಜಿಕ ವರ್ಗದ ಹಿಡಿತದಲ್ಲೇ ಇದ್ದ ಪರಿಷತ್ತು ನಂತರದ ಅವಧಿಯಲ್ಲಿ ಕರ್ನಾಟಕದ ಎಲ್ಲ ಸ್ತರದ ಸಮುದಾಯಗಳನ್ನು ಒಳಗು ಮಾಡಿಕೊಂಡಿರುವುದೇ ಅಲ್ಲದೆ ಸಮಕಾಲೀನ ಸಾಹಿತ್ಯಕ ವಿದ್ಯಮಾನಗಳಿಗೂ ಸರಿಯಾದ ಸ್ಪಂದನ ನೀಡುತ್ತಿದೆ. ಸಮ್ಮೇಳನದ ವೇದಿಕೆಗಳಲ್ಲಿ 'ಸಾಹಿತ್ಯ'ದ ಜೊತೆಗೇ, ಅದಕ್ಕೆ ಜೀವನವು ನೀಡುವ ಬದುಕಿನ ಅನೇಕ ವಿಷಯಗಳು ಚರ್ಚೆಗೆ ಬರುತ್ತಿವೆ. ಎಲ್ಲ ಪೀಳಿಗೆಗಳ ಸಾಹಿತಿಗಳ ಮುಖಗಳೂ ಅಲ್ಲಿ ಕಾಣುತ್ತವೆ. ಸಂಗೀತ, ನೃತ್ಯ, ಜಾನಪದ, ಚಿತ್ರಕಲೆ, ಕೃಷಿ, ಕೈಗಾರಿಕೆ- ಹೀಗೆ, ಇವತ್ತಿನ ಜಾಗತೀಕರಣ ಸಂದರ್ಭದ ಎಲ್ಲಾ ದೇಶೀಯ ಸಮಸ್ಯೆಗಳ ಬಗ್ಗೆ ಬಲ್ಲವರ ಬಾಯಿಯಿಂದ ಉಪಯುಕ್ತ ಮಾಹಿತಿ. ಹೇರಳವಾಗಿ ಇಲ್ಲಿ ಲಭ್ಯ. ಸಮೃದ್ಧವಾಗಿ ನಡೆಯುವ ಕನ್ನಡ ಪುಸ್ತಕಳ ಮಾರಾಟ ಅಕ್ಷರ ಸಂಸ್ಕೃತಿಯ ವಿಸ್ತಾರಕ್ಕೆ ಪುಷ್ಟೀ ನೀಡುತ್ತದೆ.

ಒಟ್ಟಿನಲ್ಲಿ, ಧರ್ಮ-ಜಾತಿ-ಮತ-ಪ್ರದೇಶ ಎಲ್ಲದರ ಗೆರೆ ಮೀರಿ ಕನ್ನಡ 'ಕುಲ' ವೆಂಬುದು ಒಂದೆಡೆ ಸೇರಿ ಮಾಡುವ ಕನ್ನಡದ ಹಬ್ಬ-ಕನ್ನಡ ಸಾಹಿತ್ಯ ಸಮ್ಮೇಳನ.

ಕನ್ನಡಿಗರು ಆಸಕ್ತಿಯಿಂದ ಚರ್ಚಿಸಲೇಬೇಕಾದ ಕೆಲವು ಸಮಸ್ಯೆಗಳೂ ಇವೆ.

(1) ಪರಿಷತ್ತು ಒಂದು ಸ್ವಯತ್ತು, ಸಾರ್ವಭೌಮ ಸಂಸ್ಥೆ, ಅದಕ್ಕಿರುವುದು ಪ್ರಜಾಸಾತ್ತಾತ್ಮಕ ನೆಲಗಟ್ಟು. ಜನರೇ ಕಟ್ಟಿದ ಈ ಪರಿಷತ್ತು ಜನರಿಗಾಗಿಯೇ ಇರುವುದು. ಯಾವುದೇ ಪಕ್ಷದ ಸರಕಾರವಿದ್ದವರೂ ಅದು ಅನೇಕ ನೆಲೆಗಳಲ್ಲಿ ಪರಿಷತ್ತಿಗೆ ಧಾರಾಳವಾಗಿ ಧನ ಸಹಾಯ ಮಾಡುತ್ತಲೇ ಬಂದಿದೆ. ಆದರೆ ಈ ಕಾರಣದಿಂದ ಕಸಾಪ ವಿದ್ಯಮಾನಗಳಲ್ಲಿ ಪಾಲುಗೊಳ್ಳುವ ಪ್ರಭುತ್ವ ಒಮ್ಮೊಮ್ಮೆ ಅನೇಕ ಗೊಂದಲಗಳ ಸೃಷ್ಟಿಗೆ ಕಾರಣವಾಗುವುದು ಉಂಟು. ಅದನ್ನು ಅರ್ಥ ಮಾಡಿಕೊಂಡು ಎದುರಿಸುವ ಮತ್ತು ಯಾವುದೇ ಕಾರಣಕ್ಕೂ ಸಂಸ್ಥೆಯ ಘನತೆ-ಗೌರವವೇ ಕುಂದಾಗದಂತೆ ವರ್ತಿಸುವ ಜವಾಬ್ದಾರಿ ಕಸಾಪ ಅಧ್ಯಕ್ಷರಿಗೆ, ಕಾರ್ಯಕಾರಿ ಸಮಿತಿಗೆ ಇರಬೇಕಾದ್ದು ಅಪೇಕ್ಷಣೀಯ. ಸರಕಾರದ ನೇರ ನಿಯಂತ್ರಣದಲ್ಲಿರುವ ಪ್ರಾಧಿಕಾರ, ಅಕಾಡೆಮಿಗಳ ಹಾಗೆ ಸರಕಾರದ ಒಂದು 'ಅಂಗ'ವಾಗಿ ಕೆಲಸ ಮಾಡುವುದು. ಪರಿಷತ್ತಿನ ಸಂವಿಧಾನದ ಸತ್ಯಕ್ಕೆ ವ್ಯತಿರಿಕ್ತವಾದ ಸಂಗತಿ.

(2) ಸಮ್ಮೇಳನದ ಒಂದು ಮುಖ್ಯ ಆಕರ್ಷಣೆ: ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಕಂಡೋ ಅಥವಾ ತಮ್ಮ ಕೃತಿಗಳ ಮೂಲಕವೋ ಪರಿಚಿತರಾದ ಖ್ಯಾತ ಸಾಹಿತಿಗಳನ್ನು ಪ್ರತ್ಯಕ್ಷ ಕಾಣುವ ಅವಕಾಶ. ಆಸಕ್ತರು, ಅಭಿಮಾನಿಗಳು ಅವರ ಕೈ ಕುಲುಕಿ, ಅವರ ಹಸ್ತಾಕ್ಷರ ಪಡೆಯುವ ಬಯಕೆ ಹೊಂದಿರುವುದು ಸಹಜ. ಆದರೆ ಇತ್ತೀಚೆಗೆ ಪೀಳಿಗೆಗಳ ನಡುವಿನ 'ಅಂತರ' ಅನೇಕ ಕಾರಣಗಳಿಂದ ಹೆಚ್ಚಾಗುತ್ತಲೇ ಇರುವುದರಿಂದ, ಸಾಹಿತ್ಯ ಸಮ್ಮೇಳನಗಳಲ್ಲಿ 'ಹಿರಿಯರ' ಗೈರುಹಾಜರಿ ಎದ್ದು ಕಾಣುತ್ತಿದೆ. ಅವರನ್ನು ವಿಶೇಷ ಅತಿಥಿಗಳನ್ನಾಗಿ ಬರಮಾಡಿಕೊಂಡು ಪ್ರಯಾಣ-ಊಟ-ವಸತಿಯ ಸರಿಯಾದ ವ್ಯವಸ್ಥೆ ಮಾಡಿದರೆ ಈ ನ್ಯೂನ್ಯತೆಯನ್ನು ಹೋಗಲಾಡಿಸಬಹುದಾಗಿದೆ.

(3) ಸಮ್ಮೇಳನದ ಕೊನೆಯ ದಿನ ಬಹಿರಂಗ ಅಧಿವೇಶನದಲ್ಲಿ ನಾಡು-ನುಡಿಗೆ ಸಂಬಂಧಿಸಿದ ಅನೇಕ ಗೊತ್ತುವಳಿಗಳನ್ನು ಪಾಸು ಮಾಡುವುದು ವಾಡಿಕೆ. ಇವುಗಳ ಅನುಷ್ಟಾನದ ಜವಾಬ್ದಾರಿ ಯಾರದು? ಮುಂದಿನ ಸಮ್ಮೇಳನದ ಹೊತ್ತಿಗೆ ಎಷ್ಟು ನಿರ್ಣಯಗಳು ಜಾರಿಯಾಗಿರುತ್ತವೆ? - ಮುಂತಾದ ಪ್ರಶ್ನೆಗಳು ಏಳುವುದು ಸಹಜ. ಪಾಲುಗೊಂಡ ಅಧಿಕಾರಸ್ಥ ರಾಜಕಾರಣಿಗಳು ವೇದಿಕೆಯ ಮೇಲಿಂದ ಭರವಸೆಗಳನ್ನು ನೀಡುತ್ತಾರೇನೋ ನಿಜ. ಅವು ಭರವಸೆಗಳಾಗಿಯೇ ಉಳಿಯುವುದು ಅಷ್ಟೇ ನಿಜ. ಕನ್ನಡಿಗರ ಹಕ್ಕೊತ್ತಾಯಗಳು ಕೇವಲ ಆಶಯಗಳ ಶಬ್ದ ರೂಪವಾಗದೆ, ಅವು ಕಾರ್ಯಗತವಾಗುವಂತೆ ಮಾಡಲು ಪರಿಷತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾಗಿದೆ.

ಗದಗ ಸಮ್ಮೇಳನದಲ್ಲಿ ಎರಡು ಕವಿಗೋಷ್ಠಿಗಳನ್ನೊಳಗೊಂಡಂತೆ ಒಟ್ಟು ಹದಿನೈದು ಗೋಷ್ಠಿಗಳಿವೆ. ಗೀತಾ ನಾಗಭೂಷಣರೊಂದಿಗೆ ಸಾಹಿತ್ಯ ಸಂವಾದವಿದೆ. ಉತ್ತರ ಕರ್ನಾಟಕ ಕಂಡ ಭೀಕರ ನೆರೆ ಹಾವಳಿಯ ಹಿನ್ನೆಲೆಯಲ್ಲಿ ಸಮ್ಮೇಳವನ್ನು ಸರಳವಾಗಿ ಆಚರಿಸುವ ನಿರ್ಣಯ ಕಸಾಪ ಅಧ್ಯಕ್ಷ ಡಾ|| ನಲ್ಲೂರು ಪ್ರಕಾಶ ಅವರದು. . . .

ಜಗತ್ತಿನ ತುಂಬ ಹರಡಿಕೊಂಡಿರುವ ಕನ್ನಡ ಭಾಷಿಕರು ತಿರುಳ್ಗನ್ನಡದ ನಾಡಿನಲ್ಲಿ ನಡೆಯಲಿರುವ ಕನ್ನಡ ಹಬ್ಬದ ಸುತ್ತ ಅನೇಕ ವಿದ್ಯಮಾನಗಳ ಬಗೆಗಿನ ಚರ್ಚೆಯಲ್ಲಿ ಪಾಲುಗೊಳ್ಳಲಿ ಎಂಬ ಬಯಕೆ ನಮ್ಮದು.