ಬ್ರೇಕಿಂಗ್ ನ್ಯೂಸ್ .....ಈ ಕನ್ನಡದ ಅಖಾಡದೊಳ್ ಮೊದಲು ಇಳಿಯುತ್ತಿರುವ ಜಗಜಟ್ಟಿ,
ಓಪನಿಂಗ್ ಬ್ಯಾಟ್ಸ್ಮನ್ ನಮ್ಮನಿಮ್ಮೆಲ್ಲರ ನೆಚ್ಚಿನ
`ಚಂಪಾ' - ಪ್ರೊ.ಚಂದ್ರಶೇಖರ ಪಾಟೀಲ! ನಾಳೆ ಚಂಪಾ!


ನಿರೀಕ್ಷಿಸಿ......

ಆಲೆಮನೆ - ಇದು ಯುವ ಮನಸ್ಸುಗಳ ಹೂಗುಚ್ಛ

ಹಗಲಿರುಳು ದುಡಿಯೋ ಮನಸ್ಸು ಮಾಡಿರುವ ಬಲಿಷ್ಠ ಯುವ ಇರುವೆಗಳ ಗುಂಪಿದು. ಸಿಕ್ಕಿದ್ದೆಲ್ಲವನೂ ಓದೋ ಹವ್ಯಾಸ, ಬರದಿದ್ದರೂ ತೋಚಿದ್ದೆಲ್ಲವನೂ ಬರೆಯೋ ಚಟ, ನಾಟಕದ ಹುಚ್ಚು, ಸಿನಿಮಾದೆಡಗೆ ಒಂದು ಬೆರಗುಗಣ್ಣು, ಕಲಾತ್ಮಕತೆಯ ಗೀಳು, ಛಾಯಾಗ್ರಹಣದ ಚತುರತೆಗಳನ್ನು ತನ್ನೊಡಲಲ್ಲಿ ಅವಿತಿಟ್ಟುಕೊಂಡಿರುವ ಆಲೆಮನೆಯು ಕನ್ನಡ ನಾಡಿನ ಸಾಂಸ್ಕೃತಿಕ ಜಗತ್ತಿನ ಬೆಲ್ಲದ ಸವಿಯನ್ನು ಸಾಗರದಾಚೆಗೂ ಸಿಂಪಡಿಸುವ ಹಂಬಲದಿಂದ ಚಿಗುರೊಡೆದು, ಇಡೀ ಪ್ರಪಂಚದ ಕನ್ನಡಿಗರೆದೆಯ ಕದ ತಟ್ಟಲು ಸನ್ನದ್ಧವಾಗಿದೆ. ನಮ್ಮ ಈ ಯುವಕರ ಗುಂಪು ಅಭಿವ್ಯಕ್ತಿಗಾಗಿ ಆರಿಸಿಕೊಂಡದ್ದು ಆಧುನಿಕ ನೆಟ್ಲೋಕದ ವೇದಿಕೆಯನ್ನು.

ಪ್ರಸ್ತುತ ನಮ್ಮ ಬಳಗದ ಮೊದಲ ಕೊಡುಗೆ `ನುಡಿನಮನ' ತಮ್ಮ ಮಡಿಲಲ್ಲಿದೆ. ಈ `ಸಂವೇದನಾಶೀಲ' ಇರುವೆಗಳ ಗುಂಪು ಇನ್ನೂ ಅನೇಕ `ತಲೆಕೆಟ್ಟ' ಸಾಹಸಗಳಿಗೆ ಕೈ ಹಾಕಲಿದೆಯೆಂಬ ಆಶ್ವಾಸನೆ ನಮ್ಮ ಕಡೆಯಿಂದ.ಇನ್ನೂ ಹೆಚ್ಚಿನ ವಿವರಗಳಿಗಾಗಿ ಆಲೆಮನೆಯನ್ನು ಪ್ರವೇಶಿಸಿ

http://aalemanebalaga.blogspot.com

`ನುಡಿನಮನ' - ಕನ್ನಡ ಬ್ಲಾಗಲೋಕದಲ್ಲಿ ಕನ್ನಡಕ್ಕೆಂದೇ ಹೊಸದೊಂದು ಲೋಕ!

ಸಮಸ್ತ ಕನ್ನಡ ಕುಲಕೋಟಿಗೆ `ಆಲೆಮನೆ' ಇರುವೆಗಳಿಂದ `ನುಡಿನಮನ'ದ ಗೂಡಿಗೆ ಸವಿ ಸಾಲಿನ ಆಹ್ವಾನ. ನಾಳೆಯಿಂದ ನಮ್ಮ ತಂಡವು ಈ ತಾಣದ ಮುಖೇನ ರಂಗ ಪ್ರವೇಶಿಸುತ್ತಿದೆ. ಮಕ್ಕಳಿಂದ ಮುದುಕರವರೆಗಿನ ಎಲ್ಲಾ ಕನ್ನಡದ ಮನಸ್ಸುಗಳಿಗಾಗಿಯೇ ಈ ವೇದಿಕೆ.

ಪ್ರಸ್ತುತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ನಾವು ನಮ್ಮ ಈ ತಾಣಕ್ಕೆ ಶ್ರೀಕಾರ ಹಚ್ಚಿದ್ದೇವೆ. ಕನ್ನಡ ಸಾಹಿತ್ಯ ಸಮ್ಮೇಳನವೆನ್ನುವುದು ಸಾಹಿತ್ಯ ಜಾತ್ರೆಯೋ? ಜನ ಜಾತ್ರೆಯೋ? ಎಂಬ ಪ್ರಶ್ನೆಗಳಿವೆಯಾದರೂ ಕನ್ನಡ ಜಾತ್ರೆ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಕೆಲವರಿಗಿದು ಸೆಮಿನಾರು-ಘೋಷ್ಠಿಗಳ ಗಂಭೀರ ಚಿಂತನವಾದರೆ, ಮತ್ತೆ ಕೆಲವರಿಗಿದು ಮಿತ್ರಮಂಡಳಿ, ಇನ್ನೂ ಕೆಲವರಿಗಿದು ಪುಸ್ತಕ ಸಂತೆ, ಇನ್ನುಳಿದವರಿಗೆ ಪ್ರವಾಸದ ಮೋಜು! ಇನ್ನೂ ಕೆಲವರಿರುತ್ತಾರೆ ಅವರಿಗಿದು ಭರ್ಜರಿ ವ್ಯಾಪಾರ, ಮತ್ತೊಂದು ವಿಶೇಷ ವರ್ಗವಿದೆ ಅವರಿಗಿದು ಉರವಣಿಗೆಯ ವೇದಿಕೆ. ಹೀಗೆ ಅವರವರ ಭಾವಕ್ಕೆ ಅವರ ಭಕುತಿಗೆ ಎಂಬಂತೆ ನಡೆದುಕೊಂಡು ಬಂದಿರುವ ಸಾಹಿತ್ಯ ಸಮ್ಮೇಳನದ ಕುರಿತಾಗಿ ಇಂದು `ಮರುವಿಮರ್ಶೆ'ಗಿಂತಲೂ ಖಡಕ್ ಚರ್ಚೆ ಅಗತ್ಯ. ಅದಕ್ಕೆ ವೇದಿಕೆಯಾಗಿ ರೂಪುಗೊಳ್ಳುವ ಆಶಯ ನಮ್ಮದು.

ನಿಗದಿತ ದಿನಾಂಕಗಳಂದು ನಡೆಯುತ್ತೋ ಇಲ್ಲವೋ ಎಂಬ ಸಸ್ಪೆನ್ಸ್ ಅನ್ನು ತಕ್ಕಮಟ್ಟಿಗೆ ಇನ್ನೂ ಉಳಿಸಿಕೊಂಡಿರುವ ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ವಿವಾದಗಳಿಗೆ, ಗೊಣಗಾಟಗಳಿಗೆ ಎಡೆ ಮಾಡಿಕೊಡದಂತೆ ಕರುನಾಡ ಹಿರಿಯಕ್ಕನಂತಹ ಗೀತಾ ನಾಗಭೂಷಣ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆರಿಸಿರುವುದು ಅಭಿನಂದನಾರ್ಹ. ಉತ್ತರ ಕರ್ನಾಟಕದ ಬದುಕಿನ ಮೇಲೆ ಬರೆ ಎಳೆದ ಅತಿವೃಷ್ಟಿಯ ಕಾರಣದಿಂದ ಉರವಣಿಗೆ-ಮೆರವಣಿಗೆಗಳಿಲ್ಲದ ಸರಳ ಅರ್ಥಪೂರ್ಣ ಸಮ್ಮೇಳನ ಇದಾಗಲಿದ್ದು, ನೆರೆ ಸಂತ್ರಸ್ತರಿಗೆ ಸಾಹಿತ್ಯ, ಸಂಸ್ಕೃತಿಯ ಮೂಲಕ ಸಾಂತ್ವನ ಹೇಳುವ ಸಮ್ಮೇಳನವಾಗಲಿದೆ. ಕಸಾಪದ ಸೌಜನ್ಯಕ್ಕೆ ನಾಡಿನ ಜನರು ಋಣಿ!

ಹ್ಞಾಂ! ಹಾಗೇ......, ಈ ಇರುವೆ ಗುಂಪು 18ಕ್ಕೆ ಗದುಗಿನ ಗಡಿ ಮುಟ್ಟಿ, ಸತತ ನಾಲ್ಕುದಿನಗಳ ಕಾಲ ಅಲ್ಲಿಂದ ನೇರವಾಗಿ `ನುಡಿನಮನ'ದ ಮುಖೇನ ನಿಮ್ಮ ಮುಂದೆ ತರಲಿದ್ದೇವೆ - 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕ್ಷಣಕ್ಷಣದ ಚಿತ್ರಣ.ಮೇ ಫ್ಲವರ್ ಮೀಡಿಯಾ ಹೌಸ್ನ ಜಿ.ಏನ್. ಮೋಹನ್ ನಮ್ಮ ಬೆನ್ನಿಗೆ ನಿಂತಿರುವುದು ನಮಗೆ ಆನೆ ಬಲವನ್ನೇ ತಂದಿದೆ. ಗದಗದ ಸಾಹಿತ್ಯ ಸಮ್ಮೇಳನದ ಸಂಪೂರ್ಣ ಕವರೇಜ್ ಆಲೆಮನೆಯ `ನುಡಿನಮನ' ಮತ್ತು ಮೇ ಫ್ಲವರ್ ಮೀಡಿಯಾ ಹೌಸ್ನ ಕನ್ನಡದ ನಂ.೧ ಬ್ಲಾಗ್ `ಅವಧಿ' ಸಂಯುಕ್ತವಾಗಿ ನಿರ್ವಹಿಸುವ ಗುರುತರ ಜವಾಬ್ದಾರಿಯನ್ನು ಮೋಹನ್ ನಮ್ಮ ಮೇಲಿರಿಸಿದ್ದಾರೆ. ಅವರ ಪ್ರೋತ್ಸಾಹಕ್ಕೆ ನಮ್ಮ ಕೃತಜ್ಞತೆಗಳು.

ಇಲ್ಲಿ ನಡೆವುದು ಕನ್ನಡಿಗರ ಸಮಾಲೋಚನೆ, ಕನ್ನಡದ ದಶ-ನಿರ್ದೇಶನದ ಕುರಿತು ಕಾವೇರಿದ ಚರ್ಚೆ, ಮನ ಮಿಡಿಯುವ ಮಾತುಗಳು, ನಾಡು-ನುಡಿಯ ಚಿಂತನೆ, ಹೀಗೆ..........ನಾಳಿನಿಂದ ಬಿಸಿ ಬಿಸಿ ಚರ್ಚೆ ಶುರು. (ಚರ್ಚೆಗೆ ಕಿಚ್ಚಿದ್ದರೇನೆ ರುಚಿ).

ಈ ಕನ್ನಡದ ಅಖಾಡದೊಳ್ ಮೊದಲು ಇಳಿಯುತ್ತಿರುವ ಜಗಜಟ್ಟಿ, ಓಪನಿಂಗ್ ಬ್ಯಾಟ್ಸ್ಮನ್ ನಮ್ಮನಿಮ್ಮೆಲ್ಲರ ನೆಚ್ಚಿನ `ಚಂಪಾ' - ಪ್ರೊ.ಚಂದ್ರಶೇಖರ ಪಾಟೀಲ! ಇನ್ನೂ ಹಲ ಹಿರಿ ಮತ್ತು ಕಿರಿತಲೆಗಳ ಚಿಂತನ-ಮಂಥನ ಈ ವೇದಿಕೆಯಲ್ಲಿ. ನಿರೀಕ್ಷಿಸಿ.......

ಕನ್ನಡದ ಕೆಲಸಕ್ಕೆ ಕೈಜೋಡಿಸಿ, ನಿಮ್ಮದೇ ಸಾಲುಗಳನ್ನು ನಮ್ಮ ತಾಣಕ್ಕೆ ಕರೆತನ್ನಿ.

ಇಂತಿ ನಿಮ್ಮ,
ಆಲೆಮನೆಯ ಇರುವೆಗಳು