ಹೊಸ ಬಗೆಯ ಕ್ವಿಜ್ ಶುರು! - ಇದಾರ ಕೆತ್ತನೆ?

ಇವತ್ತಿನಿಂದ ಅವಧಿ-ಆಲೆಮನೆ-ನುದಿನಮನದಲ್ಲಿ ಹೊಸ ಬಗೆಯ ಕ್ವಿಜ್ ಶುರು!

ಇಂದಿನಿಂದ ದಿನಕ್ಕೊಂದು ಪ್ರಶ್ನೆ! ತುಂಬಾನೇ ಸುಲಭ ನಾವು ಒಬ್ಬರ ಕೈ ಬರವಣಿಗೆ ಅಥವಾ ಸಹಿಯನ್ನು ಹಾಕುತ್ತೇವೆ, ಅದು ಬರೆದ ಕೈಗಳಾರವು ಎಂದು ನೀವು ಊಹಿಸಬೇಕಷ್ಟೆ!
ಸರಿ ಹಾಗಾದರೆ ತಯಾರಾ? ಇಗೋ ಬರುತ್ತಿದೆ ನೋಡಿ ಮೊದಲ ಪ್ರಶ್ನೆ -

ಇದಾರದೆಂದು ಗುರುತಿಸಲು ನಿಮಗೆ ನಾಳೆ ಬೆಳ್ಳಿಗ್ಗೆಯವರೆಗೂ ಸಮಯಾವಕಾಶ! ತಲೆ ಕೆರದುಕೊಳ್ಳಬೇಡಿಸ್ವಾಮಿ ಸ್ವಲ್ಪ ಗಮನವಿಟ್ಟು ನೋಡಿ ಥಟ್ ಅಂತ ಹೇಳಿಬಿಡಬಹುದು...

ಕನ್ನಡ ಸಾಹಿತ್ಯ ಮತ್ತು ರಂಗಭೂಮಿ



ಕನ್ನಡದ ರಂಗಭೂಮಿಗೆ ಅತ್ಯಂತ ಶ್ರೀಮಂತ ಇತಿಹಾಸವಿದೆ. ಇಂದು ಕೂಡ ಬೇರೆ ಇತರತ್ರ ಭಾಷೆಗಳಿಗಿಂತ ಕನ್ನಡದ ರಂಗಭೂಮಿ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದೆ.
ಈ ಕ್ರಿಯಾಶೀಲ ಶ್ರೀಮಂತಿಕೆಗೂ ಕನ್ನಡ ಸಾಹಿತ್ಯಕ್ಕೂ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ಸದ್ಯ ಮೈಸೂರಿನ ರಂಗಾಯಣದ ನಿರ್ದೇಶಕರಾಗಿರುವ ಲಿಂಗದೇವರು ಹಳೆಮನೆ ಚರ್ಚಿಸಿದ್ದಾರೆ.


ಕನ್ನಡ ಸಾಹಿತ್ಯ ಮತ್ತು ರಂಗಭೂಮಿ

ಸಾಹಿತ್ಯದ ಪ್ರಕಾರಗಳಲ್ಲಿ ನಾಟಕಕ್ಕೆ ವಿಶಿಷ್ಟವಾದ ಸ್ಥಾನ ಇದೆ. ಹಿಂದೆ ನಾಟಕವನ್ನು ಕಾವ್ಯ ಎಂದೇ ಪರಿಗಣಿಸಲಾಗುತ್ತಿತ್ತು. 'ಕಾವ್ಯೇಷು ನಾಟಕಂ ರಮ್ಯಂ' ಎಂಬುದು ಪ್ರಸಿದ್ಧವಾದ ಹೇಳಿಕೆ. ಹಾಗಾಗಿ ಕನ್ನಡ ಸಾಹಿತ್ಯದಲ್ಲೂ ಬಹಳ ದೀರ್ಘಕಾಲ ನಾಟಕವನ್ನು ಓದುವ ಕೃತಿಯಾಗಿಯೇ ಪರಿಭಾವಿತವಾಗಿತ್ತು. ಕನ್ನಡದ ಮೊದಲ ನಾಟಕ ಗೀತಗೋವಿಂದವನ್ನು ತಿರುಮಲಾರ್ಯ ಬರೆದ ಸಂದರ್ಭದಲ್ಲಿ ಅದನ್ನು ಪ್ರದರ್ಶಿಸಿದರು ಎಂಬುದಕ್ಕೆ ದಾಖಲೆಗಳಂತೂ ಸಿಕ್ಕಿಲ್ಲ.

ಆಧುನಿಕ ಕಾಲದಲ್ಲಿ ಪ್ರಾರಂಭದ ಹಂತದಲ್ಲಿ ಓದುವ ನಾಟಕಗಳನ್ನು ಬರೆದವರೇ ಹೆಚ್ಚು. ಡಿ.ವಿ. ಗುಂಡಪ್ಪರವರಂತೂ ತಮ್ಮ ನಾಟಕಗಳನ್ನು ಓದುವ ನಾಟಕಗಳು ಎಂದೇ ಹೇಳಿಕೊಂಡರು. ಕುವೆಂಪು ಅವರು ತಮ್ಮ ನಾಟಕಗಳು ರಂಗಮಂದಿರದಲ್ಲಿ ಪ್ರದರ್ಶಿಸಲು ಸಾಧ್ಯ ಇಲ್ಲ. ಅವುಗಳನ್ನು ಮನೋ ರಂಗಮಂದಿರದಲ್ಲಿ ಕಲ್ಪಿಸಿಕೊಳ್ಳಬೇಕು ಎಂದರು. ಸಂಸ್ಕೃತದಿಂದ, ಇಂಗ್ಲಿಷಿನಿಂದ, ಗ್ರೀಕ್ನಿಂದ ನಾಟಕಗಳನ್ನು ಅನುವಾದಿಸಿದ, ರೂಪಾಂತರಿಸಿದ ಬಸವಪ್ಪಶಾಸ್ತ್ರಿಗಳು, ಶ್ರೀಕಂಠೇಶಗೌಡರು ಮತ್ತು ಕ.ವೆ. ರಾಘವಾಚಾರ್ಯರು ನಾಟಕವನ್ನು ಪ್ರದರ್ಶಿಸುವುದಕ್ಕೆ ಅನುಕೂಲವಾಗುವಂತೆ ಅನುವಾದಿಸಲಿಲ್ಲ, ರೂಪಾಂತರಿಸಲಿಲ್ಲ. ಅವು ಓದುವುದಕ್ಕೆ ಮಾತ್ರ ಸೂಕ್ತವಾಗಿದ್ದವು.

ನಾಟಕ ಇರುವುದು ಓದುವುದಕ್ಕಲ್ಲ, ರಂಗದ ಮೇಲೆ ಪ್ರದರ್ಶಿಸುವುದಕ್ಕೆ ಎಂದು ಮೊದಲು ಪ್ರತಿಪಾದಿಸಿದವರು ಶಿವರಾಮ ಕಾರಂತರು. ಅವರು ತಮ್ಮ 'ಗೀತನಾಟಕ'ಗಳಿಗೆ ಬರೆದ ಮುನ್ನುಡಿಯಲ್ಲಿ ಈ ಮಾತನ್ನು ಹೇಳಿದ್ದಾರೆ. ಆಡುವ ನಾಟಕಗಳನ್ನು ದೊಡ್ಡ ಪ್ರಮಾಣದಲ್ಲಿ ಬರೆದವರು ಕೈಲಾಸಂ ಮತ್ತು ಶ್ರೀರಂಗರು. ವಾಸ್ತವವಾದಿ ನಾಟಕಗಳನ್ನು ಬರೆದ ಈ ಇಬ್ಬರು ನಾಟಕಕಾರರು ಪ್ರಥಮತಃ ರಂಗ ಭಾಷೆಯನ್ನು ಅತ್ಯಂತ ಶಕ್ತಿಯುತವಾಗಿ ಬಳಸಿದರು. ಆದರೆ ಕೈಲಾಸಂ ಜೊತೆ-ಜೊತೆಗೇ ನಾಟಕಗಳನ್ನು ಬರೆದ ಪಂಪ ಅವರು ತಮ್ಮ ನಾಟಕಗಳನ್ನು ರಂಗ ಪ್ರದರ್ಶನಕ್ಕೆ ಅನುಕೂಲವಾಗುವಂತೆ ರಚಿಸಿದರೂ ಭಾಷೆಯ ವಿಷಯದಲ್ಲಿ ಮಾತ್ರ ಜಿಗುಟು ನಿಲುವನ್ನೇ ತಳೆದರು. ಓದುವ ನಾಟಕಗಳನ್ನು ಬರೆದವರು ನಿರ್ಮಿತ ಭಾಷೆಯನ್ನು ಹೆಚ್ಚಾಗಿ ಬಳಸಿಕೊಂಡರು ಎಂಬುದನ್ನು ನೆನಪಿನಲ್ಲಿಡಬೇಕು.

ಕಳೆದ ಶತಮಾನದ 60ರ ದಶಕದ ಹೊತ್ತಿಗೆ ನಾಟಕವನ್ನು ಲಿಖಿತ ಕೃತಿ ಎಂದೂ ರಂಗ ಪ್ರದರ್ಶನವನ್ನು 'ರಂಗಕೃತಿ' ಎಂದೂ ಪರಿಭಾವಿಸುವ ಪರಿಪಾಠ ಆರಂಭವಾಯಿತು. ರಂಗಭೂಮಿಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದಕ್ಕೆ ರಂಗಶಾಖೆಗಳು ಆರಂಭಗೊಂಡವು. ದೆಹಲಿ ರಾಷ್ಟ್ರೀಯ ನಾಟಕ ಶಾಲೆ ಈ ನಿಟ್ಟಿನಲ್ಲಿ ರಂಗಶಿಕ್ಷಣ ನೀಡಲು ಆರಂಭಿಸಿತು. ರಾಜ್ಯದಲ್ಲಿ ರಂಗಕಾರ್ಯಗಳು ನಡೆದು ಅನೇಕ ತಜ್ಞರು ಈ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಯಾವ ಉತ್ಸಾಹಿ ರಂಗಕರ್ಮಿಗಳಿಗೆ ತರಬೇತಿ ನಡೆಸಿದರು. ಹಾಗಾಗಿ ನಿರ್ದೇಶಕರು, ನಟರು, ರಂಗವಿನ್ಯಾಸಕಾರರು, ಬೆಳಕಿನ ವಿನ್ಯಾಸಕಾರರು ದೊಡ್ಡ ಸಂಖ್ಯೆಯಲ್ಲಿ ಹೊರಬರತೊಡಗಿದರು. ಈ ಪ್ರಯತ್ನಗಳಿಂದಾಗಿ ನಿರ್ದೇಶಕ ಹವ್ಯಾಸಿ ರಂಗಭೂಮಿಯ ಕೇಂದ್ರಸ್ಥಾನದಲ್ಲಿ ಪ್ರತಿಷ್ಠಾಪಿತವಾದ.

ನಾಟಕಕಾರರು ರಂಗಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡೇ ನಾಟಕ ರಚಿಸಲು ಆರಂಭಿಸಿದರು. ಗಿರೀಶ್ ಕಾರ್ನಾಡ್, ಚಂದ್ರ ಶೇಖರ ಕಂಬಾರ, ಲಂಕೇಶ್, ಪ್ರಸನ್ನ, ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದವರು ನಾಟಕವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡರು.
ಒಂದು ಕಡೆ ನಾಟಕಗಳು ರಚನೆಯಾಗುತ್ತಿದ್ದರೆ ಅವುಗಳನ್ನು ಪ್ರದರ್ಶನಕ್ಕೆ ಎತ್ತಿಕೊಳ್ಳುವುದರ ಜೊತೆಗೆ ಕನ್ನಡ ಸಾಹಿತ್ಯದ ಅತ್ಯತ್ತಮ ಕತೆಗಳನ್ನು, ಕವನಗಳನ್ನು ಮತ್ತು ಕಾದಂಬರಿಗಳನ್ನು ರಂಗಕ್ಕೆ ಅಳವಡಿಸುವ ಪ್ರಯತ್ನಗಳೂ ನಡೆದವು. ಪೂರ್ಣಚಂದ್ರ ತೇಜಸ್ವಿಯವರ ಅನೇಕ ಕತೆಗಳು, ಕಾದಂಬರಿಗಳು ರಂಗಕೃತಿಗಳಾಗಿ ಪರಿವರ್ತನೆ ಹೊಂದಿದವು. ಅವರ 'ಕುಬಿ ಮತ್ತು ಇಯಾಲ', 'ತಬರನಕತೆ', 'ಕೃಷ್ಣೇಗೌಡನ ಆನೆ', 'ಕರ್ವಾಲೋ', `ಜುಗಾರಿಕ್ರಾಸ್' ಮುಂತಾದವು ಯಶಸ್ವೀ ನಾಟಕಗಳಾಗಿ ಪ್ರದರ್ಶನಗೊಂಡವು. ದೇವನೂರ ಮಹಾದೇವ ಅವರ ಕತೆಗಳು, ಕಿರುಕಾದಂಬರಿಗಳಾದ 'ಒಡಲಾಳ' ಮತ್ತು 'ಕುಸುಮ ಬಾಲೆ' ಯಶಸ್ವೀ ಪ್ರದರ್ಶನ ಕಂಡವು. 'ಒಡಲಾಳ' ನಾಟಕವಂತೂ ಆಧುನಿಕ ಕನ್ನಡ ರಂಗಭೂಮಿಯಲ್ಲಿ ತನ್ನ ವಾಸ್ತವವಾದಿ ಪ್ರದರ್ಶನದಿಂದಾಗಿ ಹೊಸ ಸಂಚಲನವನ್ನೇ ಸೃಷ್ಟಿಸಿತು.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಈ ಕತೆ ಕಾದಂಬರಿಗಳನ್ನು ಕೆಲವರು ನಾಟಕದ ರೂಪದಲ್ಲಿ ರಚಿಸಿ ಪ್ರದರ್ಶಿಸಿದರೆ, ಇನ್ನು ಕೆಲವು ಕತೆ ಕಾದಂಬರಿಗಳನ್ನು ನಾಟಕದ ರೂಪದಲ್ಲಿ ಪುನಾರಚಿಸದೆ ಹಾಗೆಯೇ ಪ್ರದರ್ಶಿಸುವ ಪ್ರಯತ್ನಗಳೂ ನಡೆದವು. 80ರ ದಶಕದಲ್ಲಿಯೇ ದೆಹಲಿಯ ದೇವರಾಜ ಅಂಕುರ್ ಅವರು ಬೆಂಗಳೂರಿಗೆ ಬಂದು ಯು.ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿಯನ್ನು ಕಾದಂಬರಿಯ ರೂಪದಲ್ಲಿಯೇ ರಂಗದಲ್ಲಿ ಪ್ರದರ್ಶಿಸಿದರು. ಇದನ್ನು ಅವರು 'ಕಥಾಮಂಜ್' ಎಂದು ಕರೆದರು. ಈ ಪ್ರಯತ್ನ ಯಶಸ್ವಿಯಾದ್ದರಿಂದ ಮುಂದೆ ನಟರಾಜ ಹೊನ್ನವಳ್ಳಿ ಮಾಸ್ತಿಯವರ ಕತೆಗಳನ್ನು ಅದೇ ರೂಪದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಕ್ಕೆ ಅಳವಡಿಸಿದರು. ವೈಕುಂಠರಾಜು ಅವರ ಉದ್ಭವ, ಶಿವರಾಮ ಕಾರಂತರ ಕೆಲವು ಕಾದಂಬರಿಗಳು, ಕುವೆಂಪು ಅವರ ಕತೆಗಳು ಹೀಗೆ ಕನ್ನಡ ಸಾಹಿತ್ಯದ ಅತ್ಯಂತ ಸತ್ಯಯುತ ಕತೆ, ಕಾದಂಬರಿಗಳು ರಂಗಭೂಮಿಯಲ್ಲಿ ಅತ್ಯಂತ ಯಶಸ್ವೀ ಪ್ರದರ್ಶನಗಳನ್ನು ಕಂಡವು.

90 ರ ದಶಕದಲ್ಲಿ ಕನ್ನಡದಲ್ಲಿ ಸತ್ವಯುತ ನಾಟಕಗಳು ಬರುತ್ತಿಲ್ಲ ಎಂಬ ಮಾತು ಕೇಳಿ ಬರತೊಡಗಿತು. ಕೆಲವು ರಂಗನಿರ್ದೇಶಕರು ರಂಗಪ್ರದರ್ಶನಕ್ಕೆ ನಾಟಕವೇ ಏಕೆ ಬೇಕು? ಕತೆ, ಕವನ, ಕಾದಂಬರಿ ಹಾಗೂ ಪತ್ರಿಕಾ ಬರಹಗಳೂ ಕೂಡಾ ರಂಗ ಪ್ರದರ್ಶನಕ್ಕೆ ಬೇಕಾದ ಸತ್ವಯುತ ವಸ್ತುಗಳನ್ನು ಒದಗಿಸಬಲ್ಲವು ಎಂಬ ನಿರ್ಧಾರಕ್ಕೆ ಬಂದರು. ಹಾಗಾಗಿ ಕುವೆಂಪು ಅವರ, ಅಡಿಗರ, ಶಿವಪ್ರಕಾಶರ, ಸಿದ್ಧಲಿಂಗಯ್ಯನವರ ಪದ್ಯಗಳು ರಂಗ ಪ್ರದರ್ಶನಕ್ಕೆ ಸಿದ್ಧವಾದವು. ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು ಕೂಡಾ.

ಈಗ ನಾಟಕಗಳೇನೋ ನಿರೀಕ್ಷಿತ ಮಟ್ಟದಲ್ಲಿ, ಸಂಖ್ಯೆಯಲ್ಲಿ ಹೊರಬರುತ್ತಿಲ್ಲ. ಆದರೆ ರಂಗತಂಡಗಳಾಗಲಿ, ರಂಗನಿರ್ದೇಶಕರಾಗಲಿ ಆ ಕೊರತೆಯನ್ನು ದೊಡ್ಡದಾಗಿ ಪರಿಗಣಿಸಿಲ್ಲ. ಯಾಕೆಂದರೆ ಸತ್ವಯುತವಾದ ವಸ್ತು ನಾಟಕದ ರೂಪದಲ್ಲೇ ಪ್ರಕಟವಾಗಬೇಕಿಲ್ಲ. ಅದು ಬರವಣಿಗೆಯ ಯಾವುದೇ ರೂಪದಲ್ಲಿರಲಿ ಅದನ್ನು ರಂಗಕ್ಕೆ ಅಳವಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಿರ್ದೇಶಕರಿಗಿದೆ. ಹಾಗಾಗಿ ನಾಟಕ ಪ್ರಕಾರವಲ್ಲದೆ ಸಾಹಿತ್ಯದ ಬೇರೆ ಪ್ರಕಾರಗಳು ರಂಗಭೂಮಿಗೆ ದೊಡ್ಡ ನಿಧಿಯಾಗಿ ಪರಿಣಮಿಸಿದೆ.

ತೌಡು ಕುಟ್ಟುವ ಕೆಲಸ: ಮುಖ್ಯಮಂತ್ರಿಗೆ ಸೊಗಸಾ?

ಕರ್ನಾಟಕದಲ್ಲಿ ಕನ್ನಡಕ್ಕೊಂದು ಅಭಿವೃದ್ಧಿ ಪ್ರಾಧಿಕಾರ ಇರುವುದು ಕನ್ನಡದ ನೈಜ ಸ್ಥಿತಿಗತಿಯನ್ನು ತೋರಿಸುತ್ತದೆ. ಇರಲಿ . ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಗಿರಬೇಕೆನ್ನುವುದು ಉಸಿರಾಟದಷ್ಟೇ ಸಹಜ. ಆದರೆ ಕರ್ನಾಟಕ ಏಕೀಕರಣಗೊಂಡ ಈ ೫೩ ವರ್ಷಗಳಲ್ಲಿ ನೂರಾರು ಸರಕಾರೀ ಜಿಓಗಳು ಈ ವಿಷಯವಾಗಿ ಹೊರಡಿಸಲ್ಪತ್ತಿದ್ದರೂ ಮೊನ್ನೆ ಕೂಡ ಮುಖ್ಯಮಂತ್ರಿಗಳು ಈ ವಿಷಯವಾಗಿ ಗುಡುಗಬೆಕಾಯಿತು. ಈ ಎಲ್ಲ ಹಿನ್ನಲೆಯಲ್ಲಿ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಹಿರಿಯರು ಎಂ. ಕೆ. ಭಾಸ್ಕರ್ ರಾವ್ ಅವರು ತಮ್ಮ ಜ್ಹುಳುಪಾದ ಲೇಖನಿ ಪ್ರಯೋಗಿಸಿದ್ದಾರೆ


ತೌಡು ಕುಟ್ಟುವ ಕೆಲಸ: ಮುಖ್ಯಮಂತ್ರಿಗೆ ಸೊಗಸಾ?
ನೆಲದ ಭಾಷೆಯ ಅಭಿವೃದ್ಧಿಗಾಗಿ, ಅದನ್ನು ಬಳಕೆ ದೃಷ್ಟಿಯಿಂದ ಉತ್ತೇಜಿಸುವುದಕ್ಕಾಗಿ ಸಮಿತಿ, ಪ್ರಾಧಿಕಾರದಂಥ ವ್ಯವಸ್ಥೆಯನ್ನು ಸ್ಥಾಪಿಸಿರುವ ಭಾರತದ ಏಕಮೇವ ರಾಜ್ಯ ನಮ್ಮದು. 1980ರ ದಶಕದಲ್ಲಿ ಕನ್ನಡ ಕಾವಲು ಸಮಿತಿಯಾಗಿ ಜನ್ಮ ತಾಳಿದ ಇದು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿದೆ. ಸಮಿತಿಯಾಗಲೀ, ಪ್ರಾಧಿಕಾರವಾಗಲೀ ಅದರ ಆಶಯ ಒಂದೇ. ದಿನದಿಂದ ದಿನಕ್ಕೆ ಅಧೋಗತಿಗೆ ಇಳಿಯುತ್ತಿರುವ ಕನ್ನಡ ಭಾಷೆಗೆ ಎಲ್ಲ ಹಂತದಲ್ಲೂ ಕಾಯಕಲ್ಪ ನಡಿ ಅದಕ್ಕೆ ಸಹಜವಾಗಿ ಸಲ್ಲಬೇಕಾದ ಸಾರ್ವಭೌಮ ಪಟ್ಟ ಕಟ್ಟುವುದು.
ದೇಶದ ಇನ್ಯಾವುದೇ ರಾಜ್ಯದಲ್ಲೂ ಆಯಾ ನೆಲದ ಭಾಷೆಯ ಅಭಿವೃದ್ಧಿಗೆ ಸರಕಾರೀ ವ್ಯವಸ್ಥೆಯೊಂದರ ಅಗತ್ಯ ಬಿದ್ದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳ... ಹೀಗೆ ಯಾವುದೇ ರಾಜ್ಯವನ್ನು ನೋಡಿದರೂ ಅಲ್ಲೆಲ್ಲ ಸ್ಥಳೀಯರೇ ತಮ್ಮ ಭಾಷೆಯನ್ನು ಬೆಳೆಸುವ ಸಂಕಲ್ಪತೊಟ್ಟು ಯಶಸ್ವಿಯೂ ಆಗಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಸರ್ಕಾರ ಮನಸ್ಸು ಮಾಡಿದರೆ ಕನ್ನಡ ಉಂಟು ಇಲ್ಲವಾದರೆ ಇಲ್ಲ ಎಂಬಂಥ ದಯನಯ ಸ್ಥಿತಿ ನಿರ್ಮಾಣವಾಗಿದೆ.

ಮನವರಿಕೆಯಾಗದ ಮಾತು
ಕರ್ನಾಟಕ
ದಲ್ಲಿ ಕನ್ನಡವೇ ಆಡಳಿತ ಭಾಷೆ ಎನ್ನುವುದು ಸರ್ಕಾರದ ಘೋಷಿತ ನೀತಿ. ಆಡಳಿತದಲ್ಲಿ ಇದನ್ನು ಅಮಲಿಗೆ ತರಬೇಕಾಗಿರುವ ನಮ್ಮ ಅಧಿಕಾರಶಾಹಿಗೆ ಇದು ಇನ್ನೂ ಮನವರಿಕೆಯಾಗಿಲ್ಲ. ಈ ಕೆಲಸ ಮಾಡುವಲ್ಲಿ ಇದುವರೆಗೆ ಬಂದಿರುವ ಯಾವುದೇ ಸರ್ಕಾರವೂ ಯಶಸ್ಸು ಕಂಡಿಲ್ಲ. ಕನ್ನಡದ ವಿಚಾರದಲ್ಲಿ ತಾತ್ಸಾರ ಭಾವದಲ್ಲೇ ಇರುವ ಹಿರಿಯ ಮತ್ತು ಉನ್ನತ ಸ್ಥಾನಗಳಲ್ಲಿರುವ ಅಧಿಕಾರಿಗಳ ದಂಡೇ ನಮ್ಮಲ್ಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬಳಿಯಲ್ಲಿ ಇಂಥ ಅಧಿಕಾರಿಗಳ ಪಟ್ಟಿಯೇ ಇದೆ. ಕೆಲವು ಸಂದರ್ಭಗಳಲ್ಲಿ ಅಂಥವರ ಹೆಸರನ್ನು ಖುದ್ದಾಗಿ ಬಹಿರಂಗಪಡಿಸಿದ್ದೂ ಇದೆ. ಪರಿಣಾಮ ಏನು....?

ಸರ್ಕಾರದ ಮುಖ್ಯಸ್ಥರಿಗೆ ಕಾಲಕಾಲಕ್ಕೆ ತಾವು ಸಲ್ಲಿಸುವ ವರದಿಯಲ್ಲಿ ಈ ಹೆಸರುಗಳನ್ನು ಅವರು ಪಟ್ಟಿ ಮಾಡುತ್ತಲೇ ಇರುತ್ತಾರೆ. ರಾಜ್ಯದ ದುರ್ದೈವವೋ, ಕನ್ನಡದ ದುರವಸ್ಥೆಯೋ ಈ ಪಟ್ಟಿ ಬೆಳೆಯುತ್ತಲೇ ಇದೆಯೇ ಹೊರತೂ ಕಡಿಮೆ ಆಗಿಲ್ಲ. ಆ ಲಕ್ಷಣವೂ ತೋರುತ್ತಿಲ್ಲ. ಕರ್ನಾಟಕ
ಪರಭಾಷಾ ಐಎಎಸ್, ಐಪಿಎಸ್ ಅಧಿಕಾರಿಗಳಿಂದ ತುಂಬಿ ಹೋಗಿರುವ ರಾಜ್ಯ. ಆಂಧ್ರ, ಕೇರಳ, ತಮಿಳು ನಾಡಿನಲ್ಲಿ ಆಯಾ ರಾಜ್ಯದ ಭಾಷೆ, ಸಂಸ್ಕೃತಿ ಬಲ್ಲವರನ್ನು ಹೇಗೋ ತಂದು ಕೂರಿಸುವ ರಾಜಕೀಯ ಒಳ ಕೆಲಸ ಮಾಡುತ್ತದೆ. ಇಲ್ಲಿ ಮಾತ್ರ ಹಾಗೆ ಆಗುವುದೇ ಇಲ್ಲ. ಅದಕ್ಕೆ ಎರಡು ಕಾರಣ: ಒಂದನೆಯದಾಗಿ ಕನ್ನಡಿಗರು ತಮ್ಮ ಮಕ್ಕಳನ್ನು ಎಂಜಿನಯರ್, ಡಾಕ್ಟರ್ ಮಾಡುವುದಕ್ಕೆ ಆದ್ಯತೆ ಕೊಡುತ್ತಾರೆಯೇ ಹೊರತೂ ಅಖಿಲ ಭಾರತ ಸೇವಾ ವ್ಯವಸ್ಥೆಗೆ ಹೋಗುವುದನ್ನು ಕನಸಿನಲ್ಲಿಯೂ ಬಯಸುವುದಿಲ್ಲ. ಹಾಗಾಗಿ ಆಲ್ ಇಂಡಿಯಾ ಸರ್ವೀಸಸ್ ಕೇಡರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ. ಇರುವಷ್ಟನ್ನಾದರೂ ಕರ್ನಾಟಕಕ್ಕೇ ಕಳಿಸಬಹುದಲ್ಲ ಎಂದು ಕೇಳಲು ಅವಕಾಶವಿಲ್ಲ. ನಯಮಾವಳಿ ರೀತ್ಯ ಹೊರ ರಾಜ್ಯಗಳ ಸೇವೆಗೂ ಅವರು ಹೋಗುವುದು ಅನವಾರ್ಯ.


ರಾಜಕೀಯ ಬಲದ ಕೊರತೆ
ನೆರೆಯ ರಾಜ್ಯಗಳಲ್ಲಿ ಆಯಾ ರಾಜ್ಯದ ಐಎಎಸ್. ಐಪಿಎಸ್ಗಳೇ ಆಯಕಟ್ಟಿನ ತಾಣಗಳಲ್ಲಿರಲು ಕಾರಣ, ಆಯಾ ರಾಜ್ಯಗಳಿಗಿರುವ ರಾಜಕೀಯ ಬಲ. ತಮಿಳುನಾಡು, ಆಂಧ್ರ ಅಥವಾ ಕೇರಳ ರಾಜ್ಯಗಳ ರಾಜಕೀಯಕ್ಕೆ ಆ ಬಲವಿದೆ. ಇಂಥಿಂಥವರೇ ಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿ, ಅದಾಗದಿದ್ದರೆ ಬೆದರಿಸಿ ನಯೋಜನೆ ಮೇರೆಗೆ ತಮ್ಮ ರಾಜ್ಯಕ್ಕೆ ಹಾಕಿಸಿಕೊಳ್ಳುವ ತಾಕತ್ತು ಆ ರಾಜ್ಯಗಳ ರಾಜಕಾರಣಿಗಳಿಗೆ ಇರುವಂತೆ ಕರ್ನಾಟಕದ ರಾಜಕಾರಣಿಗಳಿಗೆ ಇಲ್ಲ. ಅಲ್ಲೆಲ್ಲ ವಿರೋಧಿ ರಾಜಕೀಯ ಮಾಡುವ ಕೆಲಸವನ್ನು ಕರ್ನಾಟಕದ ಪಾರಂಪರಿಕ ಭಜನಾ ರಾಜಕೀಯ ಮಾಡುವುದಿಲ್ಲ.
ಇನ್ನು ಪರಭಾಷೆಯಿಂದ ಆ ರಾಜ್ಯಗಳ ಕೇಡರಿಗೆ ಬರುವ ಅಧಿಕಾರಿಗಳು ಆಯಾ ರಾಜ್ಯಭಾಷೆಯನ್ನು ನಯಮಿತ ಅವಧಿಯಲ್ಲೇ ಕಲಿಯುತ್ತಾರೆ. ಅನವಾರ್ಯವೆನಸುವ ಒಂದು ಬಗೆಯ ಒತ್ತಡ ಅಲ್ಲೆಲ್ಲ ಕೆಲಸ ಮಾಡುತ್ತದೆ. ಇಲ್ಲಿ
ಕರ್ನಾಟಕ
ಕ್ಕೆ ಹೊರಗಿನಂದ ಬರುವ ಅಧಿಕಾರಿಗಳಿಗೆ ಕನ್ನಡದ ಮೇಲೆ ಪ್ರೀತಿ ಹುಟ್ಟುವುದೇ ಇಲ್ಲ. ಕಲಿತರೂ ಆಯಿತು, ಬಿಟ್ಟರೂ ಆಯಿತೆಂಬ ಧೋರಣೆಯಲ್ಲಿ ಅವರು ಸೇವೆಯಲ್ಲಿದ್ದು ನವೃತ್ತರಾಗುತ್ತಾರೆ. ಕನ್ನಡ ಕಲಿಯಲೇ ಬೇಕು, ಇಲ್ಲವಾದರೆ ಉಳಿಗಾಲವಿಲ್ಲ ಎಂಬ ಒತ್ತಡ ಇಲ್ಲಂತೂ ಇದುವರೆಗೂ ನಿರ್ಮಾಣವಾಗಿಲ್ಲ. ಆ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಯನ್ನು ಎಲ್ಲೆಲ್ಲಿಂದಲೋ ಬಂದ ಅಧಿಕಾರಿಗಳು ಕಲಿಯಬಹುದಾದರೆ ಇಲ್ಲೇಕೆ ಆಗುವುದಿಲ್ಲ? ಸರ್ಕಾರ ನಡೆಸುವವರು ಇದಕ್ಕೆಲ್ಲ ಉತ್ತರ ಹೇಳಬೇಕು.

ಚಿರಂಜೀವಿ ನಿದರ್ಶನ
ರಾಜ್ಯದ ಅಡಿಷನಲ್ ಚೀಫ್ ಸೆಕ್ರೆಟರಿಯಾಗಿ ನವೃತ್ತರಾಗಿರುವ ಹಿರಿಯ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರ ತೌರು ಪಂಜಾಬ್. ಸೇವೆಯ ಆರಂಭಿಕ ದಿನಗಳಲ್ಲಿ ಅವರನ್ನು
ಕರ್ನಾಟಕ
ಕೇಡರಿಗೆ ಹಾಕಲಾಯಿತು. ಗೊಣಗದೆ ಬಂದ ಅವರು ಮೊದಲು ಮಾಡಿದ ಕೆಲಸವೆಂದರೆ ಕನ್ನಡ ಕಲಿತಿದ್ದು; ಸಿದ್ಧ, ಪ್ರಸಿದ್ಧ ಕನ್ನಡ ಬರಹಗಾರರ ಕೃತಿ- ಕಾವ್ಯಗಳನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟು ಬೆಳೆದಿದ್ದು; ಕನ್ನಡ ಭಾಷೆ ಮತ್ತು
ಕರ್ನಾಟಕ
ದ ಸಂಸ್ಕೃತಿಯೊಂದಿಗೆ ತಮ್ಮನ್ನು ಅಭಿಮಾನಪೂರ್ವಕವಾಗಿ ಗುರುತಿಸಿಕೊಂಡಿದ್ದು... ಏನೆಲ್ಲ ಅವರ ಸಾಧನೆ.
ವಾರ್ತಾ ಇಲಾಖೆಗೆ ಅವರು ನಿರ್ದೇಶಕರಾಗಿದ್ದಾಗ ಉತ್ತರ ಭಾರತದ ರಾಜ್ಯವೊಂದರಿಂದ ಅವರಿಗೆ ಹಿಂದಿಯಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪತ್ರ ಬರುತ್ತದೆ. ಚಿರಂಜೀವಿ, ಆ ಪತ್ರಕ್ಕೆ ಕನ್ನಡದಲ್ಲಿ ಉತ್ತರ ಬರೆಯುವ ಮೂಲಕ ಹಿಂದಿಯ ಜಾಗವನ್ನು ತೋರಿಸುತ್ತಾರೆ. ಅವರು ತಮ್ಮ ಆಡಳಿತ ಭಾಷೆಯಲ್ಲಿ ಪತ್ರ ಬರೆಯಬಹುದಾದರೆ ನಾವೇಕೆ ಬರೆಯಬಾರದು ಎಂಬ ಅವರ ನಲುವು ಇಂದಿಗೂ ನಮ್ಮ ಬಹುತೇಕ ಅಧಿಕಾರಿಗಳಿಗೆ ಅನುಸರಿಲು ಆಗದ ಮಾದರಿಯಾಗೇ ಉಳಿದಿದೆ.
ಕನ್ನಡದಲ್ಲಿ ಮಾತಾಡುವುದಷ್ಟೇ ಅಲ್ಲದೆ ಓದಿ ಬರೆಯುವುದು ಈ ಸರ್ದಾರ್ಜಿಗೆ ಸಾಧ್ಯವಾಗುತ್ತದಾದರೆ ಉಳಿದವರಿಗೆ ಏಕೆ ಆಗುವುದಿಲ್ಲ. ಮನಸ್ಸಿದ್ದರೆ ಮಹಾದೇವ. ನಮ್ಮ ಅಧಿಕಾರಿಗಳಿಗೆ ಮನಸ್ಸಿಲ್ಲ ಎನ್ನುವುದು ಒಂದು ಮುಖ. ಕನ್ನಡದ ವಿಚಾರದಲ್ಲಿ ಆಫ್ಟರ್ ಆಲ್ ಕನ್ನಡ ಎಂಬ ತಾತ್ಸಾರ ಭಾವವಿರುವುದು ಇನ್ನೊಂದು ಮುಖ. ಈ ತಾತ್ಸಾರಕ್ಕೆ ಮದ್ದರೆಯುವ ಕೆಲಸವನ್ನು ಯಾವ ಮುಖ್ಯಮಂತ್ರಿಯೂ ಮಾಡಲಿಲ್ಲ.

ನಾಯಿಯನ್ನೇ ಆಡಿಸುವ ಬಾಲ
ಯಾವುದೇ ಪಕ್ಷವಿರಲಿ, ಅಧಿಕಾರಿಗಳ ಮರ್ಜಿಯಲ್ಲಿ ಮಂತ್ರಿ, ಮುಖ್ಯಮಂತ್ರಿ ಇರುತ್ತಾರೆ. ಹಾಗಾಗಿ ಕ್ರಮ ಕೈಗೊಳ್ಳುವುದು ಆಗದ ಮಾತು. ನಾಯಿ ಬಾಲ ಅಲ್ಲಾಡಿಸುವ ಬದಲಿಗೆ ಬಾಲವೇ ನಾಯಿಯನ್ನು ಆಡಿಸುವ ಈ ಅವ್ಯವಸ್ಥೆ ಕಾರಣವಾಗಿ ಆಡಳಿತದಲ್ಲಿ ಕನ್ನಡ ಸಂಪೂರ್ಣ ಅನುಷ್ಠಾನ ಇನ್ನೂ ಗಗನಕುಸುಮವೇ ಆಗಿದೆ. ಸರ್ಕಾರ
ನಡೆಸುವ ಜನ ಆಗೀಗ ಹೇಳುವ ಮಾತನ್ನು ನಂಬಬಹುದಾದರೆ ವಿಧಾನ ಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡಗಳ ಹೊರತಾಗಿ ಇತರೆಲ್ಲಡೆ ಕನ್ನಡವೇ ಆಡಳಿತ ಭಾಷೆಯಾಗಿ ಸಮರ್ಪಕ ರೀತಿಯಲ್ಲಿ ಜಾರಿಯಾಗಿದೆ. ಅದು ಹೌದೇ ಆಗಿದ್ದರೆ ಈ ಮೂರು ಜಾಗದಲ್ಲೇಕೆ ಇನ್ನೂ ಆಗಿಲ್ಲ...? ಏನು ಅಡ್ಡಿ, ತೊಂದರೆ...? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಸರ್ಕಾರಕ್ಕೆ ಕಷ್ಟ ಆಗಬಾರದು.

ಕನ್ನಡ ಅನುಷ್ಠಾನಕ್ಕೆ ಅಡ್ಡಿಯಾಗಿರುವ ಅಧಿಕಾರಿಗಳನ್ನು ವಿಧಾನ, ವಿಕಾಸ ಸೌಧ, ಬಹುಮಹಡಿ ಕಟ್ಟಡಗಳಿಂದ ಕಿತ್ತು ಹೊರಗೆಸೆಯಬೇಕು. ಆಡಳಿತ ಭಾಷೆಯ ಅನುಷ್ಠಾನಕ್ಕೆ ಅನುವರ್ತಿಯಾಗುವ ಅಧಿಕಾರಿಗಳನ್ನು ತಂದು ಕೂರಿಸಬೇಕು. ಯಾವುದೇ ಮುಲಾಜಿಗೂ ಒಲಿಯದ ಈ ಕೆಲಸ ಮಾಡುವುದಕ್ಕೆ ಗಂಡೆದೆ ಬೇಕು. ಕನ್ನಡ ಅನುಷ್ಠಾನದಲ್ಲಿ ನರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮದ ಬೆದರಿಕೆ ಹಾಕಿರುವ ಯಡಿಯೂರಪ್ಪ ಗಂಡೆದೆ ತಮಗಿದೆ ಎನ್ನುವುದನ್ನು ತೋರಿಯಾರೆ...? ಯಕ್ಷ ಪ್ರಶ್ನೆ.
ಕರ್ನಾಟಕ
ದಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಸಾರಿದ ಸರ್ಕಾರಿ ಆದೇಶ, ಸೂಚನೆ, ಸುತ್ತೋಲೆಗಳ ಸಂಖ್ಯೆ ಸಾವಿರದ ಆಜೂಬಾಜಿನಲ್ಲಿದೆ. ಸರ್ಕಾರದ ಆದೇಶ ಪಾಲನೆ ಕಡ್ಡಾಯ. ಅದಕ್ಕೆ ವ್ಯತಿರಿಕ್ತವಾಗಿ ನಡೆಯುವುದು ಶಿಕ್ಷಾರ್ಹ ಅಪರಾಧ. ಆದೇಶ, ಸುತ್ತೋಲೆಗಳನ್ನು ಪಾಲಿಸದವರು ಸಾಮಾನ್ಯ ಜನರಾ ಇಲ್ಲವೇ ಸರ್ಕಾರಿ ಅಧಿಕಾರಿಗಳಾ? ಅನುಮಾನ ಬೇಡ.
ಸರ್ಕಾರಿ
ಅಧಿಕಾರಿಗಳೇ ಅದರಲ್ಲೂ ಐಎಎಸ್, ಐಪಿಎಸ್ ಅಧಿಕಾರಿಗಳೇ ಆರೋಪಿಗಳು.
ಸರ್ಕಾರಿ
ಆದೇಶ ಪಾಲಿಸದ ತಪ್ಪಿಗೆ ಏನಾದರೂ ಶಿಕ್ಷೆ ಕೊಡುವುದಿದ್ದರೆ ಮೊದಲು ಅದನ್ನು ಜಾರಿ ಮಾಡಿಬೇಕಿರುವುದು ಈ ಅಧಿಕಾರಿಗಳ ವಿರುದ್ಧ. ಎಷ್ಟು ಜನ ಕನ್ನಡ ವಿರೋಧಿ ಅಧಿಕಾರಿಗಳಿಗೆ ಶಿಸ್ತಿನ ಕ್ರಮದ ರುಚಿ ತೋರಿಸಲಾಗಿದೆ...?
ಸರ್ಕಾರ
ತನ್ನ ಬಳಿ ಇರುವ ವಿವರವನ್ನು ಸಾರ್ವಜನಕಗೊಳಿಸುವುದಕ್ಕೂ ಇದು ಸಕಾಲ.

ಏನು ಕ್ರಮ ಜರುಗಿಸುತ್ತೀರಿ?
ಯಡಿಯೂರಪ್ಪನವರೇ ಹೇಳಿರುವಂತೆ ಇದುವರೆಗೆ ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಅಂಥ ಕಟ್ಟುನಟ್ಟಿನ ಕ್ರಮಗಳನ್ನೇನೂ ಈವರೆಗಿನ
ಸರ್ಕಾರ
ಗಳು ತೆಗೆದುಕೊಂಡಿಲ್ಲ. ಅದರ ಬೆನ್ನಲ್ಲೇ ಅವರು ಹೇಳಿರುವ ಮತ್ತೊಂದು ಮಾತು ನಮ್ಮ
ಸರ್ಕಾರ
ಯಾವುದೇ ಕಾರಣಕ್ಕೂ ಸುಮ್ಮನರುವುದಿಲ್ಲ ಹೌದು ಏನದು ಅವರು ತೆಗೆದುಕೊಳ್ಳಲಿರುವ ಉಗ್ರ ಕ್ರಮ? ಅದನ್ನೇನೂ ಮುಖ್ಯಮಂತ್ರಿ ಬಹಿರಂಗಪಡಿಸಿಲ್ಲ. ಆದರೆ ಅಂಥ ಅಧಿಕಾರಿಗಳ ಸೇವಾ ದಾಖಲೆಯಲ್ಲಿ ಕನ್ನಡ ವಿರೋಧಿ ನಲುವಿನ ಉಲ್ಲೇಖ ಸೇರಿಸಲಾಗುವುದು ಎಂದಿದ್ದಾರೆ. ಇದರಿಂದ ಏನಾಗುತ್ತದೆ...? ಆ ಅಧಿಕಾರಿಗಳ ಸೇವಾ ಹಿರಿತನಕ್ಕೆ ಅದು ಅಡ್ಡಿಯಾಗುತ್ತದೆಯೇ...? ವೇತನ ಬಡ್ತಿ ಸ್ಥಗಿತಗೊಳ್ಳುತ್ತದೆಯೇ...? ಸೇವಾ ಬಡ್ತಿಗೆ ಹಿನ್ನಡೆ ಆಗುತ್ತದೆಯೇ....? ಊಹುಂ ಇಲ್ಲ ಏನೂ ಆಗುವುದಿಲ್ಲ.
ಈ ವಿವರ ಮುಖ್ಯಮಂತ್ರಿಗಿಂತ ಅಧಿಕಾರಿಗಳಿಗೇ ಚೆನ್ನಾಗಿ ಗೊತ್ತಿರುತ್ತದೆ. ಮುಖ್ಯಮಂತ್ರಿಯಾಡುವ ಇಂಥ ಬೆದರಿಕೆ ಮಾತುಗಳನ್ನೆಲ್ಲ ಹೇಗೆ ಮ್ಯಾನೇಜ್ ಮಾಡಬೇಕು ಎನ್ನುವುದೂ ಅವರಿಗೆ ಗೊತ್ತಿರುತ್ತದೆ. ಎಂದೇ ಯಡಿಯೂರಪ್ಪ ವೀರಾವೇಷದಿಂದ ಮಾತಾಡುವಾಗೆಲ್ಲ ಈ ಅಧಿಕಾರಿಗಳು ಮೀಸೆಯಡಿಯಲ್ಲೇ ಮುಸಿಮುಸಿ ನಗುತ್ತಿರುತ್ತಾರೆ. ಆ ಸಂದರ್ಭಗಳಲ್ಲೆಲ್ಲ ಅವರಿಗೆ ಮುಖ್ಯಮಂತ್ರಿ ಬೆದರುಬೊಂಬೆಯಂತೆ ಕಾಣಿಸಿದರೆ ಆಶ್ಚರ್ಯವೇನೂ ಇಲ್ಲ.
ಕರ್ನಾಟಕದ ಇತಿಹಾಸದಲ್ಲೇ ಇದುವರೆಗೆ ಯಾರೇ ಒಬ್ಬ ಐಎಎಸ್, ಐಪಿಎಸ್ ಅಧಿಕಾರಿ ವಿರುದ್ಧ ಕೈ ಎತ್ತುವುದು
ಸರ್ಕಾರ
ಕ್ಕೆ ಸಾಧ್ಯವಾಗಿಲ್ಲ. ಎಂಥ ಸಂದರ್ಭಗಳಲ್ಲೂ ತಮ್ಮವರನ್ನು ಕಾಪಾಡಿಕೊಳ್ಳುವಷ್ಟರಮಟ್ಟಿಗೆ ಈ ಲಾಬಿ ಪ್ರಬಲವಾಗಿದೆ. ಈ ಲಾಬಿಯನ್ನು ಎದುರು ಹಾಕಿಕೊಂಡು ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಯಡಿಯೂರಪ್ಪ ಕ್ರಮ ಜರುಗಿಸಿದ್ದೇ ಹೌದಾದರೆ ಅವರು ಹೊಸ ಅಧ್ಯಾಯವೊಂದನ್ನು ಈ ಇತಿಹಾಸಕ್ಕೆ ಸೇರಿಸಿದಂತಾಗುತ್ತದೆ.

ಕನ್ನಡ ಭಾಷೆಯನ್ನು ಕಲಿಯಬೇಕೆಂದು ಕರ್ನಾಟಕಕ್ಕೆ ಬಂದು ನೆಲೆಸಿರುವ ಇತರ ಭಾಷಿಕ ಜನರಲ್ಲಿ ಆಸೆ ಹುಟ್ಟಿಸುವ ಪರಿಸರವೇ ಇನ್ನೂ ನಮ್ಮಲ್ಲಿ ಮೂಡಿಲ್ಲ. ಇದಕ್ಕೆ ಕಾರಣ ಸಾಮಾಜಿಕ ವ್ಯವಸ್ಥೆಯಲ್ಲ, ಬದಲಿಗೆ ರಾಜಕೀಯ ಇಚ್ಚಾಶಕ್ತಿಯ ಕೊರತೆ.
ಕರ್ನಾಟಕ
ದಲ್ಲಿ ಆಡಳಿತ ನಡೆಸಿದ ಯಾರೊಬ್ಬರಿಗೂ ಕನ್ನಡಕ್ಕೆ ಉತ್ತೇಜನ ನೀಡುವ ಮನಸ್ಸಿರಲಿಲ್ಲ.

ಆರ್. ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಈ ಮಾತಿಗೆ ಭಿನ್ನವಾದ ಪ್ರಯೋಗವೊಂದನ್ನು ಮಾಡುವ ಯತ್ನ ನಡೆದಿತ್ತು.
ಕರ್ನಾಟಕ
ದಲ್ಲಿರುವವರಿಗೇ ಉದ್ಯೋಗಾವಕಾಶ ಆದ್ಯತೆ ಮೇಲೆ ದೊರೆಯಲೆಂಬ ಆಶಯದಿಂದ ಅವರು ಮಾಡಿದ ಮಣ್ಣಿನ ಮಕ್ಕಳಿಗೇ ಉದ್ಯೋಗ ಹೇಳಿಕೆಗೆ ಸ್ವಾಗತ ದೊರೆಯಬೇಕಾದ ನಾಡಿನಲ್ಲಿ ಟೀಕೆ ಎದುರಾಯಿತು.
ಕಮ್ಯೂನಸ್ಟ್ ಪಕ್ಷಗಳಂತೂ ಇದನ್ನು ಸಂಕುಚಿತ ಮನೋಭಾವ ಎಂದು ಜರಿದು ಬೀದಿಗೇ ಇಳಿದವು. ರಾಜಕೀಯ ಮಾಡಲು ಏನಾದರೂ ಒಂದು ನೆಪ ಬೇಕು, ರಾವ್ ಹೇಳಿಕೆ ಅವುಗಳಿಗೆ ವರವಾಯಿತು ಎಂದಿಟ್ಟುಕೊಳ್ಳೋಣ. ಆದರೆ ಬುದ್ಧಿಜೀವಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವ ತಥಾಕಥಿತ ವರ್ಗವೂ ಕನ್ನಡದ,
ಕರ್ನಾಟಕದ
ಹಿತಕ್ಕೆ ಬೆನ್ನು ಹಾಕಿ ನಂತಿತೆನ್ನುವುದು ವಿಚಿತ್ರ ಹಾಗೂ ವಿಪರ್ಯಾಸ. ಇಂಥ ಗೊಂದಲ ಪ್ರವೃತ್ತಿಯನ್ನು
ಕರ್ನಾಟಕದ
ಗಡಿಯಾಚೆ ಕಾಣಲು ಸಾಧ್ಯವೇ ಇಲ್ಲ. ಹಾಗಾಗಿ ಅಲ್ಲೆಲ್ಲ ಆಯಾ ರಾಜ್ಯ ಭಾಷೆ ಹುಲುಸಾಗಿ ಬೆಳೆಯುತ್ತದೆ. ಈಗ ಕರ್ನಾಟಕದಲ್ಲಿ ಪರಿಸ್ಥಿತಿ ತಿರುವುಮುರುವಾಗಿದೆ. ಕಮ್ಯೂನಸ್ಟರೂ ಸೇರಿದಂತೆ ಅಂದು ವಿರೋಧಿ ಪಾಳಯದಲ್ಲಿದ್ದವರೆಲ್ಲರೂ ಮಣ್ಣಿನ ಮಕ್ಕಳಿಗೆ ಉದ್ಯೋಗದ ಜಪ ಮಾಡುತ್ತಿರುವ ಬದಲಾವಣೆಯನ್ನು ನೋಡಬಹುದು. ಆದರೆ ಅದನ್ನು ನೋಡಲು ಗುಂಡೂರಾಯರಿಲ್ಲ.

ಈಗ ಯಡಿಯೂರಪ್ಪ ಮಾತಿನಾಚೆಗೆ ಜಿಗಿಯಬೇಕು. ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದ್ದು ಬಹಿರಂಗ ಸುದ್ದಿಯಾಗಬೇಕು. ಹಾಗೆ ಅವರು ಮಾಡಿದ್ದೇ ಹೌದಾದಲ್ಲಿ ರಾಜ್ಯದ ಉದ್ದಗಲಕ್ಕೆ ಆ ಸುದ್ದಿ ಸ್ಪಷ್ಟ ಸಂದೇಶವನ್ನೂ ರವಾನಸುತ್ತದೆ, ಅಧಿಕಾರಿ ವಲಯದಲ್ಲಿ ಸಂಚಲನಕ್ಕೂ ಕಾರಣವಾಗುತ್ತದೆ. ಹಾಗೆ ಮಾಡದೇ ಮಾತಿಗಷ್ಟೇ ಈ ಪೌರುಷ ಸೀಮಿತವಾದರೆ ಅದು ಗಾಳಿಯನ್ನು ಗುದ್ದಿದಂತೆ; ತೌಡು ಕುಟ್ಟಿದಂತೆ!
(ಈ ಭಾನುವಾರ ವಾರಪತ್ರಿಕೆಯಲ್ಲಿ ಪ್ರಕಟಿತ)