ಕನ್ನಡ ಸಾಹಿತ್ಯ ಸವೆಸಿದ ಹಾದಿ..
ಕಲಿಗಣನಾಥ ಗುಡದೂರು - ವೃತ್ತಿಯಿಂದ ಮೇಷ್ಟ್ರು, ಪ್ರವೃತ್ತಿಯಿಂದ ಲೇಖಕ. ಉತ್ತರ ಕರ್ನಾಟಕದ ಇತ್ತೀಚಿನ ಸತ್ವಯುತ ಲೇಖಕರಲ್ಲೊಬ್ಬರು. ಅವರೂ ಸಹ ಕನ್ನಡ ಬ್ಲೋಗಲೋಕದ ಸಹಜೀವಿಗಳು. ಗುಡದೂರು ಎಂಬ ಬ್ಲೋಗಲೋಕದ ಊರು ಅವರದು. ಅವರು ಸಾಹಿತ್ಯ ಅಂದು - ಇಂದು ಎಂಬ ವಿಷಯವಾಗಿ ಚರ್ಚಿಸಿದ್ದಾರೆ. ಇಂದಿನ ಲೇಖಕರಾಗಿ ಅಂದಿನ ಸಾಹಿತ್ಯವನ್ನು, ಅವರು ಹೇಗೆ ನೋಡುತ್ತಾರೆ? ಇಂದು ಬರುತ್ತಿರುವ ಸಾಹಿತ್ಯದ ಕುರಿತು ಅವರ ಅಭಿಪ್ರಾಯವೇನು?


ಕನ್ನಡ ಸಾಹಿತ್ಯ ಸವೆಸಿದ ಹಾದಿ...

ಸಾಹಿತ್ಯ ಸೃಷ್ಟಿಯೇ ಅದ್ಭುತ. ಭಾವನಾ ಪ್ರಪಂಚದೊಂದಿಗೆ ಬೆಸೆದುಕೊಂಡಿರುವ ಸಾಹಿತ್ಯ ಮೂಡಿಸುತ್ತಿರುವ ಪರಿಣಾಮ ಅನನ್ಯ. ಭಾಷೆಯ ಪೂರ್ವದಲ್ಲಿ ಸಾಹಿತ್ಯ ರೂಪು ಪಡೆದಿರಬಹುದೆಂಬುದು ಸೋಜಿಗ. ಮೌನ, ಸಂಕೇತ ಮತ್ತು ಸಂಜ್ಞೆಗಳ ಮೂಲಕವೂ ಸಾಹಿತ್ಯ ಅರಳಿದೆ ಎಂಬುದನ್ನೂ ತಳ್ಳಿಹಾಕುವಂತಿಲ್ಲ. ಸಾಹಿತ್ಯದ ಉಳಿವಿಗೆ ಮತ್ತು ಬೆಳವಣಿಗೆಗೆ ಭಾಷೆ ಹೆಚ್ಚುಗಾರಿಕೆ ನೀಡಿದೆ ಎಂಬುದು ಸತ್ಯ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಇಂಡಿಯಾದಲ್ಲಷ್ಟೆ ಅಲ್ಲ; ವಿಶ್ವಮಟ್ಟದಲ್ಲೂ ವಿಶೇಷ ಮನ್ನಣೆ ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ಶತಮಾನದಿಂದೀಚೆಗೆ ವಿವಿಧ ಪ್ರಾಕಾರಗಳಲ್ಲಿ ಕನ್ನಡ ಸಾಹಿತ್ಯ ಕ್ರಾಂತಿ ಸ್ವರೂಪ ತಾಳಿದೆ. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕನ್ನಡ ಸಾಹಿತ್ಯ ದೇಶದಲ್ಲೆ ಮುಂಚೂಣಿ ಸ್ಥಾನದಲ್ಲಿದೆ. ಕುವೆಂಪು, ಬೇಂದ್ರೆ, ಕಾರಂತ, ತೀನಂಶ್ರೀ, ಬಿ.ಎಂ.ಶ್ರೀ, ಗೋವಿಂದ ಪೈ, ಡಿ.ವಿ.ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ, ರಂಗನಾಥ ದಿವಾಕರ, ಸಾಲಿ ರಾಮಚಂದ್ರರಾಯರು, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ವಿ.ಸೀತಾರಾಮಯ್ಯ, ಪು.ತಿ.ನರಸಿಂಹಾಚಾರ್ಯ, ಜಿ.ಪಿ.ರಾಜರತ್ನಂ, ಕೆ.ಶಂಕರಭಟ್ಟ, ವಿ.ಕೃ.ಗೋಕಾಕ, ರಂ.ಶ್ರೀ.ಮುಗುಳಿ, ಈಶ್ವರ ಸಣಕಲ್ಲ, ಕೆ.ಎಸ್.ನರಸಿಂಹಸ್ವಾಮಿ, ಡಿ.ಎಸ್.ಕರ್ಕಿ, ಗೋಪಾಲಕೃಷ್ಣ ಅಡಿಗ, ಚೆನ್ನವೀರ ಕಣವಿ, ಜಿ.ಎಸ್.ಶಿವರುದ್ರಪ್ಪ, ಚದುರಂಗ, ತ್ರಿವೇಣಿ, ಅನಂತಮೂರ್ತಿ, ಗಿರೀಶ್ ಕಾರ್ನಾಡ, ಚಂದ್ರಶೇಖರ ಕಂಬಾರ, ಶಾಂತರಸ, ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಚದುರಂಗ ಸೇರಿದಂತೆ ಹಲವು ಹಿರಿಯ ಲೇಖಕರು ತಮ್ಮ ಬರೆವಣಿಗೆ ಮೂಲಕ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಿಗೆ ಜೀವ ತುಂಬಿದ್ದಾರೆ.


ಕುವೆಂಪು ಕನ್ನಡದ ಮಟ್ಟಿಗೆ ಮಹಾನ್ ಶಕ್ತಿಶಾಲಿ ಲೇಖಕರು. ತಮ್ಮ ವಿಸ್ತೃತ ಬರೆವಣಿಗೆ ಮೂಲಕ ಕನ್ನಡ ಸಾಹಿತ್ಯದ ಕಂಪನ್ನು ವಿಶ್ವಮಟ್ಟಕ್ಕೂ ಹಬ್ಬಿಸಿದರು. ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಸೇರಿದಂತೆ ಅನೇಕ ಮಹಾನ್ ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ವೈಚಾರಿಕತೆಯ ಪ್ರಭೆ ಹೊಮ್ಮಿಸಿದರು. ಅವರ ಕಥೆ, ಕಾದಂಬರಿಗಳಲ್ಲಿ ಚಿತ್ರಿತವಾದ ಮಲೆನಾಡಿನ ಚಿತ್ರಣಗಳು ಕೇವಲ ಅಲ್ಲಿನ ಜನ, ಜೀವನ ಚಿತ್ರಣ, ನಿರೂಪಣೆಯೆನಿಸದೆ ಇಡೀ ಜನಸಮುದಾಯ ಮತ್ತು ಪರಿಸರದ ಕಥೆಗಳಾಗಿ ರೂಪುತಳೆದಿರುವುದು ವಿಶೇಷ. ವೈಚಾರಿಕತೆ ಮತ್ತು ವಿಶ್ವ ಮಾನವ ಪ್ರಜ್ಞೆ ಬೆಳೆಸುವಲ್ಲಿ ಕುವೆಂಪು ತೋರಿದ ಆಸ್ಥೆ ಎಂದಿಗೂ ಮಾದರಿ. ಕೆ.ಎಸ್.ಎನ್. ಚಿತ್ರಿಸಿದ 'ಮೈಸೂರು ಮಲ್ಲಿಗೆ' ಕಾವ್ಯ ಕೇವಲ ದಾಂಪತ್ಯಗೀತವೆನಿಸದೆ ಮಾದರಿ ಕಾವ್ಯದ ಹೆಗ್ಗುರುತಾಗಿದೆ. ಮಲ್ಲಿಗೆ ಕಾವ್ಯದಲ್ಲಿ ನವುರಾದ ಪ್ರಣಯದ ರಸಾನುಭವಗಳಿವೆ. ಸಂಯಮ ಮತ್ತು ಸಹಜವಿನೋದ ಕಾವ್ಯಕ್ಕೆ ಶೃಂಗಾರ ಕಳೆ ತಂದಿವೆ. ಆಡುಮಾತಿನ ಸರಸ, ನಯ, ಲಯ, ಗೇಯತೆ ವ್ಯಕ್ತವಾಗಿವೆ. ಸಣ್ಣ ಸಂಗತಿಗಳಲ್ಲಿ ಸೌಂದರ್ಯದ ಶೋಧವಿದೆ. ಶಿವರಾಮ ಕಾರಂತ ನಡೆದಾಡುವ ವಿಶ್ವಕೋಶದಂತೆ ಭಾವಪ್ರಪಂಚಕ್ಕೆ ವೈಜ್ಞಾನಿಕ, ವೈಚಾರಿಕೆ ಸ್ವರೂಪ ನೀಡಿದರು. ಬೇಂದ್ರೆ ಸರಳ ಸುಂದರ ಕಾವ್ಯಕ್ಕೆ ಆಧ್ಯಾತ್ಮ ಮತ್ತು ಗೇಯತೆಯ ಬಣ್ಣ ತೊಡಿಸಿದರು. ನೂರಾರು ಕಥೆಗಳನ್ನು ಬರೆದ ಮಾಸ್ತಿ ಕನ್ನಡ ಕಥಾ ಪರಂಪರೆಯ ಹಂದರ ವಿಸ್ತರಿಸಿದರು.


ಪ್ರಗತಿಶೀಲ, ನವ್ಯ, ನವ್ಯೋತ್ತರ, ನವೋದಯ, ದಲಿತ, ಬಂಡಾಯ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳು ವಿಶೇಷ ಕೆಚ್ಚು, ಹೆಚ್ಚುಗಾರಿಕೆ ಮೈಗೂಡಿಸಿಕೊಂಡವು. ಸಿದ್ಧಮಾದರಿಯಿಂದ ದೂರ ಸರಿದು ಕನ್ನಡ ಸಾಹಿತ್ಯದ ಲಯ, ಗತಿಯನ್ನೇ ಬದಲಿಸಿದ ಕೀರ್ತಿ ದಲಿತ, ಬಂಡಾಯಕ್ಕೆ ಸಲ್ಲುತ್ತದೆ. ಚೆನ್ನಣ್ಣ ವಾಲೀಕಾರ, ಬರಗೂರ ರಾಮಚಂದ್ರಪ್ಪ, ದೇವನೂರು ಮಹಾದೇವ, ಕೃಷ್ಣ ಆಲನಹಳ್ಳಿ, ಗೀತಾ ನಾಗಭೂಷಣ, ವೀಣಾ ಶಾಂತೇಶ್ವರ, ವೈದೇಹಿ, ಕುಂ.ವೀರಭದ್ರಪ್ಪ, ಚಂದ್ರಶೇಖರ ಪಾಟೀಲ್, ಡಾ.ಸಿದ್ದಲಿಂಗಯ್ಯ, ಸತ್ಯಾನಂದ ಪಾತ್ರೋಟ, ಮೂಡ್ನಾಕೂಡು ಚಿನ್ನಾಸ್ವಾಮಿ, ಜಂಬಣ್ಣ ಅಮರಚಿಂತ, ಕಾ.ತ.ಚಿಕ್ಕಣ್ಣ, ಕೃಷ್ಣಮೂರ್ತಿ ಹನೂರು, ಸವಿತಾ ನಾಗಭೂಷಣ, ರಾಜಶೇಖರ ನೀರಮಾನ್ವಿ, ವೀರಭದ್ರ, ಚಿತ್ರಶೇಖರ ಕಂಠಿ, ಡಾ.ಎಲ್.ಬಸವರಾಜು ಎರಡನೇ ಹಂತದ ಸಾಹಿತ್ಯ ಘಟ್ಟದಲ್ಲಿ ಬಲು ಉತ್ಸಾಹದಿಂದ ಬರೆದು ಕನ್ನಡ ಸಾಹಿತ್ಯಕ್ಕೆ ಹೊಸ ಚೈತನ್ಯ ನೀಡಿದ್ದಾರೆ. 1970-80ರ ಕಾಲಘಟ್ಟವನ್ನು ಚಳವಳಿಗಳ ಕಾಲಘಟ್ಟವೆಂದು ಗುರುತಿಸಲಾಗುತ್ತದೆ. ಚಳವಳಿಗಳ ದೆಸೆಯಿಂದಲೆ ಅಂದು ಹುಟ್ಟಿದ ಸಾಹಿತ್ಯಕ್ಕೆ ಬಹು ಮೌಲ್ಯ ಪ್ರಾಪ್ತವಾಯಿತು. ಸದ್ಯ ಬರೆಯುತ್ತಿರುವ ಲೇಖಕರ ಸುತ್ತ ಯಾವುದೇ ಚಳವಳಿಗಳಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈಗ ದಲಿತ, ಬಂಡಾಯ, ಮಹಿಳಾ ಮತ್ತು ಮುಸ್ಲೀಂ ಸಂವೇದನೆಗಳ ನಂತರ ಹೊಸತನದೊಂದಿಗೆ ಸಾಹಿತ್ಯ ರಚನೆ ನಡೆದಿದೆ. ಚಳವಳಿಗಳ ಸ್ವರೂಪ ಢಾಳಾಗಿ ಗೋಚರಿಸದಿದ್ದರೂ ನಿತ್ಯವೂ ಒಂದಿಲ್ಲೊಂದು ಸಂಕಷ್ಟ, ನೋವಿಗೆ ಎದುರುಗೊಳ್ಳುವ ಬದುಕು ಇಂದಿನದಾಗಿದೆ.


ಚಳವಳಿಗಳ ಕಾಲಘಟ್ಟಕ್ಕಿಂತಲೂ ಇಂದು ಜನತೆಯ ಬದುಕು ರಾಜ್ಯ, ದೇಶಗಳನ್ನೂ ಮೀರಿ ತೀರಾ ಶೋಚನೀಯ ಸ್ಥಿತಿ ತಲುಪಿದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ವಿಶೇಷ ಆರ್ಥಿಕ ವಲಯ ಬದುಕಿನ ಲಯ ಮತ್ತು ಗತಿಯನ್ನೇ ಬದಲಿಸಿ, ಮನುಷ್ಯನ ಭಾವನೆಗಳ ಮೇಲೆಯೇ ಸವಾರಿ ನಡೆಸಿವೆ. ಆಧುನಿಕತೆಯ ಹೆಸರಲ್ಲಿ ಬದುಕು ಬರಡಾಗುತ್ತಿದೆ. ಸದ್ಯದ ತೀರಾ ಸಂಕಷ್ಟದ ಕಾಲಘಟ್ಟವೇ ಬರೆಹಗಾರರಿಗೆ ಹೇಳಿಮಾಡಿಸಿದ ಕಾಲಘಟ್ಟವಾಗಿದೆ. ಇಂದು ಪ್ರತಿ ಲೇಖಕ ಹೆಚ್ಚು ಜವಾಬ್ದಾರಿಯಿಂದ ಜನರ ಸಂಕಷ್ಟಗಳ ಪರಿಹಾರಕ್ಕೆ ಅಕ್ಷರ ರೂಪದ ಹೋರಾಟ ನಡೆಸಬೇಕಿದೆ. ಸಾಹಿತ್ಯ ರಚನೆಗೆ ಚಳವಳಿಗಳು ಹೊಸ ದಿಕ್ಕು ದೆಸೆ ತೋರಿಸುತ್ತವೆಯೆನ್ನುವುದೂ ನಿಜ. ಪ್ರಜಾಪ್ರಭುತ್ವ ವ್ಯವಸ್ಥೆ ಕಳೆದ ಅರವತ್ತು ವರ್ಷಗಳಲ್ಲಿ ಜನಸಾಮಾನ್ಯರ ಪಾಲಿಗೆ ಬರೀ ನಿರಾಶೆಯ ಮೂಟೆಯನ್ನೇ ಹೊತ್ತು ತಂದಿದೆ. ರಾಜಕಾರಣಿಗಳು, ಅಧಿಕಾರಿವರ್ಗ, ಪ್ರಭಾವಿಗಳು, ಬಂಡವಾಳಶಾಹಿಗಳ ಹಿಡಿತದಲ್ಲಿ ದೇಶ ಮತ್ತು ರಾಜ್ಯಗಳ ಆಡಳಿತ ವ್ಯವಸ್ಥೆಗಳು ನರಳುತ್ತಿವೆ. ಎಸ್ಇಝಡ್ ಹೆಸರಲ್ಲಿ ದೇಶದ ಬೆನ್ನೆಲುಬಾದ ರೈತರಿಂದ ಸಹಸ್ರಾರು ಎಕರೆ ಜಮೀನನ್ನು ಸರ್ಕಾರವೇ ಭೂಸ್ವಾಧೀನಮಾಡಿಕೊಂಡು ಪುಡಿಗಾಸಿನ ತೆರಿಗೆ ಆಸೆಗೆ ಎಂ.ಎನ್.ಸಿ.ಗಳಿಗೆ ಮಾರಾಟ ಮಾಡುವ ಕುತಂತ್ರ ನಡೆಸುತ್ತಿದೆ. ರೈತರ, ಕಾರ್ಮಿಕರ, ಕೂಲಿಗಳ, ದುಡಿಯುವ ವರ್ಗ ಒಂದಿಲ್ಲೊಂದು ಕಾರಣಕ್ಕೆ ದಿನದ ಬಹುತೇಕ ಅವಧಿ ತಮ್ಮ ಹಕ್ಕುಗಳ ರಕ್ಷಣೆಗೆ ಮತ್ತು ಸಂವಿಧಾನಬದ್ಧ ಸೌಲಭ್ಯಗಳನ್ನು ಪಡೆಯಲು ಬೀದಿಗಿಳಿದು ಹೋರಾಟ ನಡೆಸಬೇಕಾದ ಸಂದರ್ಭ ಒದಗಿರುವುದು ಇದು ಕೇವಲ ಆರ್ಥಿಕ, ಸಾಮಾಜಿಕ ಸಮಸ್ಯೆಯೆಂದು ಸಾಹಿತ್ಯ ವಲಯ ಕೈಕಟ್ಟಿಕೂಡುವಂತಿಲ್ಲ. ಇದೇ ನೈಜ ಚಳವಳಿಗಳು ದೇಶದೆಲ್ಲೆಡೆ ವಿವಿಧ ಸ್ವರೂಪಗಳಲ್ಲಿ ನಡೆಯುತ್ತಿರುವ ಕಾಲಘಟ್ಟವಿದು. ಹಾಗಾಗಿ ಸದ್ಯ ಬರೆಯುವ ಲೇಖಕರಿಗೆ ವಿಫುಲ ವಿಷಯಗಳು ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ರೂಪು ತಳೆಯಲು ಕಾತರದಿಂದ ಕಾಯುತ್ತಿವೆ.


ಕಥೆ, ಕಾವ್ಯ, ಕಾದಂಬರಿ, ನಾಟಕ, ಹನಿಗವನ, ಪ್ರವಾಸಕಥನ, ಪ್ರಬಂಧ, ಲೇಖನವೆಂಬ ಪ್ರಾಕಾರಗಳಲ್ಲೆ ರಚನೆಯಾಗುತ್ತಿದ್ದ ಸಾಹಿತ್ಯದ ಸ್ವರೂಪ ಆಧುನಿಕತೆಯೊಂದಿಗೆ ಹೊಸ ಮಜಲು ಪಡೆಯುತ್ತಿದೆ. ಆತ್ಮಕಥೆಯ ರೂಪದ ಚಿತ್ರಣಗಳು, ಸಣ್ಣ ಸಣ್ಣ ಸಂಗತಿಗಳು, ತೀರಾ ನಿರ್ಲಕ್ಷ್ಯಕ್ಕೊಳಗಾದ ವ್ಯಕ್ತಿಗಳ ಚಿತ್ರಣಗಳು, ಇತಿಹಾಸದ ಪುನವಿಮರ್ಶೆ, ಮರುನಿರೂಪಣೆ, ಕಥೆಯೂ ಅಲ್ಲದ ಕಾವ್ಯವೂ ಅಲ್ಲದ ತೀರಾ ಗೇಯತೆಯೊಂದಿಗೆ ಬರೆಯುವ ಆಪ್ತ ಬರೆಹಗಳು ಇತ್ತೀಚೆಗೆ ಹೆಚ್ಚು ಇಷ್ಟವಾಗುತ್ತಿವೆ. ಉಳಿದೆಲ್ಲಾ ಸಾಹಿತ್ಯ ಪ್ರಾಕಾರಗಳಿಗಿಂತ ಹೆಚ್ಚು ಚರ್ಚಿತವಾಗುವ ಓದಿಸಲ್ಪಡುವ ಸಾಹಿತ್ಯ ಪ್ರಾಕಾರವಾಗಿ ಕಥಾ ಸಾಹಿತ್ಯ ಹಿರಿಮೆ ಹೊಂದಿದೆ. ಸದ್ಯ ಬರೆಯುತ್ತಿರುವ ನೂರಾರು ಲೇಖಕರ ಪಾಲಿಗೆ, ಹಿರಿಯರು ಭಾವಿಸುವ ಹಾಗೆ, ಕನ್ನಡ ಸಾಹಿತ್ಯದಲ್ಲಿ ಈಗ ಶೂನ್ಯ ಆವರಿಸಿಲ್ಲ. ನಿತ್ಯವೂ ಹೊಸ ಕಲ್ಪನೆಗಳೊಂದಿಗೆ ಇದುವರೆಗೆ ಚಿತ್ರಿತವಾಗದ ಮತ್ತೊಂದು ಹೊಸ ಭಾವನಾ ಪ್ರಪಂಚ ನಮ್ಮ ಮುಂದೆ ಮೈದೆಳೆಯುತ್ತಿದೆ. ಸದ್ಯ ಬರೆಯುತ್ತಿರುವ ಮೊಗಳ್ಳಿ ಗಣೇಶ, ಅಮರೇಶ ನುಗಡೋಣಿ, ಅಬ್ಬಾಸ್ ಮೇಲಿನಮನಿ, ವಿವೇಕ ಶಾನಭಾಗ, ನಟರಾಜ ಹುಳಿಯಾರ, ಬಾಳಾಸಾಹೇಬ್ ಲೋಕಾಪುರ, ಚನ್ನಪ್ಪ ಕಟ್ಟಿ, ಎನ್.ಕೆ.ಹನುಮಂತಯ್ಯ, ಚಂದ್ರು ತುರುವೀಹಾಳ, ಅರುಣ್ ಜೋಳದ ಕೂಡ್ಲಿಗಿ, ಆರೀಫ್ ರಾಜಾ, ಚಿದಾನಂದ ಸಾಲಿ, ಮಂಜುನಾಥ ಲತಾ, ವಿ.ಎಂ.ಮಂಜುನಾಥ, ವಿ.ಆರ್.ಕಾಪೆಂಟರ್, ಛಾಯಾ ಭಗವತಿ, ಜೋಗಿ, ಡಿ.ಎಸ್.ರಾಮಸ್ವಾಮಿ, ಎಂ.ಡಿ.ವಕ್ಕುಂದಾ, ಪ್ರಹ್ಲಾದ ಅಗಸನಕಟ್ಟೆ, ರಾಘವೇಂದ್ರ ಪಾಟೀಲ್, ಸಬಿಹಾ ಭೂಮಿಗೌಡ, ದೀಪಾ ಹಿರೇಗುತ್ತಿ, ವಿನಯಾ ವಕ್ಕುಂದಾ, ಮಲ್ಲಿಕಾಜರ್ುನಗೌಡ ತೂಲಹಳ್ಳಿ, ಮಹಾಂತೇಶ ನವಲಕಲ್, ಆನಂದ ಋಗ್ವೇದಿ, ಪೀರ್ಭಾಷಾ, ಟಿ.ಎಸ್.ಗೊರವರ್, ವೀರಣ್ಣ ಮಡಿವಾಳರ, ಚ.ಹ.ರಘುನಾಥ, ಸಂದೀಪ್ ನಾಯಕ, ವಸುಧೇಂದ್ರ, ದೇವು ಪತ್ತಾರ, ದಸ್ತಗೀರಸಾಬ್ ದಿನ್ನಿ, ಶಿವರಾಜ ಬೆಟ್ಟದೂರು, ವಿ.ಹರಿನಾಥ ಬಾಬು, ಜಹಾಂಗೀರ, ಕನ್ನಾಡಿಗ ನಾರಾಯಣ, ಕೆ.ಪಿ.ಸುರೇಶ, ಲಕ್ಷ್ಮಣ ಬಾದಾಮಿ, ಎಲ್.ಸಿ.ಸುಮಿತ್ರಾ, ನಾಗಣ್ಣ ಕಿಲಾರಿ, ನಾಗತಿಹಳ್ಳಿ ರಮೇಶ, ಸಜರ್ಾಶಂಕರ ಹರಳಿಮಠ, ಸಿದ್ದರಾಮ ಹೊನಕಲ್, ಸಿದ್ದು ಯಾಪಲಪವರ್ಿ ನಾಗರಾಜ ವಸ್ತಾರೆ, ನಾಗಮಂಗಲ ಕೃಷ್ಣಮೂತರ್ಿ, ರೂಪಾ ಹಾಸನ್, ಸುನಂದಾ ಪ್ರಕಾಶ ಕಡಮೆ, ವಿಜಯಕಾಂತ ಪಾಟೀಲ್, ಕಲ್ಲೇಶ ಕುಂಬಾರ, ವಿಶ್ವನಾಥ ಪಾಟೀಲ್, ವೀರೇಶ ಸೌದ್ರಿ ಹೀಗೇ ಲಿಸ್ಟ್ ಬೆಳೆಯುತ್ತಲೇ ಹೋಗುತ್ತದೆ. ಇವರು ಸೇರಿದಂತೆ ಇನ್ನೂ ಹಲವರು 21ನೇ ಶತಮಾನದ ಆರಂಭದಿಂದ ಇನ್ನಿಲ್ಲದ ಕಸುವಿನಿಂದ ಬರೆಯುತ್ತಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ಆಶಾದಾಯಕವೆನಿಸಿದೆ.


ಐತಿಹಾಸಿಕ ಹಾಗೂ ಸಾಹಿತ್ಯಿಕವಾಗಿಯೂ ಬಲು ಮುಖ್ಯವಾದ ಗದಗ ನಗರದಲ್ಲಿ ನಡೆಯಲಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ದಲಿತಪರ ಲೇಖಕಿ ಗೀತಾ ನಾಗಭೂಷಣ ಆಯ್ಕೆಯಾಗಿರುವುದು ಇಡೀ ನಾಡಿನ ಸಮಸ್ತ ದಲಿತ ಸಮುದಾಯಕ್ಕೆ ಸಂದ ಗೌರವವಾಗಿದೆ. ಹಿಂದಿನ ಸಮ್ಮೇಳನಗಳಲ್ಲಿ ಘೋಷಣೆಯಾದ ಅನೇಕ ಹಕ್ಕೊತ್ತಾಯಗಳು ಇಂದಿಗೂ ಜಾರಿಯಾಗದೇ ಇರುವಾಗ ಮತ್ತೊಂದು ಸಾಹಿತ್ಯ ಸಮ್ಮೇಳನ ಫೆ.28ರಂದು ಎದುರಾಗಲಿದೆ. ಸಾಹಿತ್ಯ ಸಮ್ಮೇಳನವೆಂಬುದು ರಾಷ್ಟ್ರೀಯ ಹಬ್ಬಗಳ ಆಚರಣೆಯ ಕಾಟಾಚಾರವನ್ನೇ ಪಡೆದುಕೊಂಡಿರುವುದು ದುರ್ದೈವದ ಸಂಗತಿ. ಸಾಹಿತ್ಯ ಸಮ್ಮೇಳನ ಸಮಸ್ತ ಕನ್ನಡ ಜನರ ನಾಡಹಬ್ಬದ ಸ್ವರೂಪ ಪಡೆಯಬೇಕಿದೆ. ಪ್ರತಿ ಕನ್ನಡಗಿನ ಹೆಮ್ಮೆಯ ಆಚರಣೆ ಎನಿಸಬೇಕಿದೆ. ಕನ್ನಡ ನೆಲದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಮತ್ತು ವಿರೋಧ ಪಕ್ಷದ ಸ್ಥಾನದಲ್ಲಿರುವ ಪಕ್ಷಗಳು ಕನ್ನಡಿಗರ ಹಕ್ಕೊತ್ತಾಯಗಳಿಗೆ ಕಾಲಮಿತಿ ಹೇರಿಕೊಂಡು ತಪ್ಪದೇ ಮನ್ನಣೆ ನೀಡಿ, ಜಾರಿಗೊಳಿಸುವ ಮೂಲಕ ಕನ್ನಡತನ ಮೆರೆಯಬೇಕಿದೆ. ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಮಹಿಳೆಯೊಬ್ಬರು ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸ್ಥಾನದಲ್ಲಿ ಕಾಣಿಸಿಕೊಂಡಿರುವುದೇ ಹೆಗ್ಗಳಿಕೆಯ ಸಂಕೇತವಾಗದೆ, ಮಹಿಳಾಪರ ಸಾಹಿತ್ಯಕ್ಕೆ ಉತ್ತೇಜನ ಸಿಗಬೇಕಿದೆ. ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಅಗ್ರಸ್ಥಾನ ದೊರೆಯಬೇಕಿದೆ. ಇದನ್ನು ನೀಡಬೇಕೆಂಬುದು ಕೇವಲ ಒತ್ತಾಸೆಯಲ್ಲ; ಕನ್ನಡ ಸರ್ಕಾರದ ಆದ್ಯ ಕರ್ತವ್ಯವಾಗಬೇಕಿದೆ. ಎಲ್ಲಾ ವಲಯ, ರಂಗಗಳಲ್ಲೂ ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕು ಅವರ ಬದುಕು ಬಂಗಾರವಾಗಬೇಕಿದೆ. ಕನ್ನಡದಲ್ಲಿ ಮಾತನಾಡುವುದು, ಕರ್ನಾಟಕದಲ್ಲಿ ಬದುಕುವುದು, ಕನ್ನಡ ಭಾಷೆಯಲ್ಲಿ ಅಭ್ಯಾಸ ಮಾಡುವುದು, ಕರ್ನಾಟಕದಲ್ಲೇ ಉದ್ಯೋಗ ಪಡೆಯುವುದು ಕೇವಲ ಅಭಿಮಾನವೆನಿಸದೆ, ಪ್ರತಿ ಕನ್ನಡಿಗ ಹೊಂದಲೇಬೇಕಾದ ಹಕ್ಕಾಗಿದೆ. ಕನ್ನಡ ನಮ್ಮ ಹಕ್ಕಾಗಬೇಕಿದೆ, ಬದುಕಾಗಬೇಕಿದೆ, ಬವಣೆ ನೀಗಿಸುವ ಅಸ್ತ್ರವಾಗಬೇಕಿದೆ. ಈ ನಿಟ್ಟಿನಲ್ಲಿ ಸಾಹಿತ್ಯದ ವಿವಿಧ ಪ್ರಾಕಾರಗಳು ರೂಪು ತಳೆದು ಕನ್ನಡಕ್ಕೆ ಮತ್ತಷ್ಟು ಕಸುವು, ಕಿಮ್ಮತ್ತು ನೀಡಿ, ಎಂದಿನ ವಿಶ್ವಮನ್ನಣೆ ಕಾಪಾಡಿಕೊಳ್ಳಬೇಕಿದೆ.

ಬನ್ನಿ ಕನ್ನಡಿಗರೆಲ್ಲರೂ... ಕನ್ನಡದ ತೇರನೆಳೆಯಲು ವೀರನಾರಾಯಣನ ಗದಗಿಗೆ... ನಮ್ಮದೇ ನಾಡಹಬ್ಬದಿ ನೆಮ್ಮದಿಯಿಂದ ಸೇರೋಣ... ಕನ್ನಡತನ ಮೆರೆಯೋಣ... ಕನ್ನಡದ ಬದುಕಿಗೆ ಹೋರಾಡೋಣ.... ಕನ್ನಡಕ್ಕೇ ಕೈ ಎತ್ತೋಣ... ಕನ್ನಡದಿಂದಲೇ ತಲೆ ಎತ್ತಿ ನಡೆಯೋಣ....


ಪ್ರಾದೇಶಿಕ ಆಡುನುಡಿ ಬಗ್ಗೆ ಏಕೆ ಈ ಅಲಕ್ಷ ಮನೋಭಾವ?

ಶರತ್ ಕಲ್ಕೋಡ್ - ಸದ್ಯ ಓ ಮನಸೇ ಪಾಕ್ಷಿಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಪತ್ರಿಕೋದ್ಯಮದ ಹಿರಿಯರು. ಕನ್ನಡದ ಆಡುನುಡಿಗಳನ್ನು ಮಾಧ್ಯಮಗಳಲ್ಲಿ ಅಪಹಾಸ್ಯ ಮಾಡುತ್ತಿರುವ ಪರಿಯನ್ನು ಕಂಡು ನೊಂದವರು. ಅದೇ ಅವರ ಲೇಖನಿಯಿಂದ ಹೊರ ಬಂದಿದೆ.

ಪ್ರಾದೇಶಿಕ ಆಡುನುಡಿ ಬಗ್ಗೆ ಏಕೆ ಈ ಅಲಕ್ಷ ಮನೋಭಾವ?

ಎಲ್ಲಾ ಭಾಷೆಗಳಲ್ಲೂ ಇರುವಂತೆ ಕನ್ನಡದಲ್ಲೂ ಪ್ರಾದೇಶಿಕ ಆಡು ನುಡಿಗಳಿವೆ. ಉದಾಹರಣೆಗೆ: ಧಾರವಾಡದ ಕನ್ನಡ, ಮಂಗಳೂರು ಕನ್ನಡ, ಗುಲ್ಬರ್ಗ ಕನ್ನಡ, ಇತ್ಯಾದಿ. ಆಯಾಯ ಪ್ರಾದೇಶಿಕ ಜೀವನ ಶೈಲಿ, ಉಡುಗೆ ತೊಡುಗೆಗಳಂತೆ ಭಾಷೆಯಲ್ಲೂ ವೈವಿಧ್ಯವಿರುವುದು ಸಹಜ. ಆದರೆ ಈ ಪ್ರಾದೇಶಿಕ ವೈವಿಧ್ಯವೇ ನಮ್ಮಲ್ಲಿ ತಮಾಷೆಯ ವಸ್ತುವಾಗುವುದು ಮಾತ್ರ ವಿಪರ್ಯಾಸದ ಸಂಗತಿ.

ಮಂಗಳೂರು (ದಕ್ಷಿಣ ಕನ್ನಡ) ಕನ್ನಡ ಬಹಳ ಪರಿಶುದ್ಧವೆಂದು ಅವರ ಭಾವನೆ. ದಕ್ಷಿಣ ಕನ್ನಡಿಗರ ಹೆಚ್ಚಿನವರ ಮಾತ್ರ ಭಾಷೆ ತುಳು, ಕೊಂಕಣಿ ಹಾಗೂ ಇನ್ನಿತರ ಭಾಷೆಗಳಾಗಿರುವುದು. ಅವರ ಕನ್ನಡದ ಸ್ಪಷ್ಟ ಬಳಕೆ ಕಾರಣವಾಗಿರಬಹುದು. ಆದರೆ ದಕ್ಷಿಣ ಕನ್ನಡದಲ್ಲೇ ಕುಂದಾಪುರ ಕನ್ನಡ, ಹವ್ಯಕ ಕನ್ನಡ ಪರಿಭೇದಗಳುಂಟು. ಕುಂದಾಪುರ ಕನ್ನಡದಲ್ಲಿ 'ಹೋಯ್ಕು', 'ಬರ್ಕು' ಪದಗಳ ಪ್ರಯೋಗ ಹೊಸಬರಿಗೆ ಬೇರೆ ಭಾಷೆಯಾಗಿ ಕಂಡರೆ ಆಶ್ಚರ್ಯದ ಮಾತಲ್ಲ. ಹಾಗೇ ಧಾರವಾಡದಲ್ಲಿ ಬಳಕೆಯಾಗುವ ಕನ್ನಡ ಭಾಷೆಯ ಉಚ್ಛಾರವೆ ಬೇರೆ. ಅಷ್ಟೇ ಅಲ್ಲ, ಅಲ್ಲಿ ಬಳಸುವ ಪದಗಳು ಮೈಸೂರಿನಲ್ಲಿ ಬಳಕೆಯಾಗುವ ಪದಗಳಿಗಿಂತ ಭಿನ್ನವಾದ ಅರ್ಥವನ್ನು ಕೊಡುತ್ತದೆ. ಕೆಲವೊಮ್ಮೆ ಅಪಾರ್ಥವನ್ನೂ ಎಡೆಮಾಡಿಕೊಡುತ್ತದೆ. ಆದರೆ ನಾನು ಇಲ್ಲಿ ವಿಶ್ಲೇಷಿಸಲು ಹೊರಟಿರುವುದು ಪ್ರಾದೇಶಿಕ ಭಾಷೆಯ ಶಬ್ಧ ಬಳಕೆ, ಶೈಲಿಗಳ ಕುರಿತು ಅಲ್ಲ. ಈ ಪ್ರಾದೇಶಿಕ ಭಾಷಾ ವೈವಿಧ್ಯವನ್ನು ನಮ್ಮ ದೃಶ್ಯ ಮಾಧ್ಯಮದವರು, ಹೇಗೆ ದುರುಪಯೋಗ ಪಡಿಸಿಕೊಂಡು ತಮಾಷೆಯ ವಸ್ತುವನ್ನಾಗಿ ಮಾಡಿ, ಆ ಮೂಲಕ ಆ ಪ್ರದೇಶದ ಜನರನ್ನು ಗೇಲಿ ವಸ್ತುವನ್ನಾಗಿ ಮಾಡಿದ್ದಾರೆ. ಹೀಗೆ ಮಾಡುವುದು ಸರಿಯೇ ಎನ್ನುವುದರ ಬಗ್ಗೆ.

ಸಿನಿಮಾ, ನಾಟಕ, ಟಿವಿ ಸಿರೀಯಲ್ಗಳಲ್ಲಿ, ಅಷ್ಟೇ ಏಕೆ ಕೆಲವೊಮ್ಮೆ ಬರಹಗಳಲ್ಲೂ ಕೂಡ, ಪ್ರಾದೇಶಿಕ ಭಾಷೆಯನ್ನು, ಅದರ ಸೊಗಡನ್ನು ತಮಾಷೆಯಾಗಿ ಬಳಸುವ, ಪ್ರಯೋಗಿಸುವ ವೈಖರಿಯನ್ನು ನೀವು ಈಗಾಗಲೇ ಗಮನಿಸಿರುತ್ತೀರಿ. ಇದಕ್ಕೆ ಹಲವು ದಶಕಗಳ ಇತಿಹಾಸವೇ ಇದೆ. ಅಡುಗೆ ಭಟ್ಟನ ಪಾತ್ರಕ್ಕೆ ಮಂಗಳೂರು ಕನ್ನಡ ಬಳಸುವುದು, ಪೊಲೀಸ್ನ ಪಾತ್ರಕ್ಕೆ ಉತ್ತರ ಕರ್ನಾಟಕ ಭಾಷೆ ಬಳಸುವುದು ಬಹಳ ಮಾಮೂಲಿಯಾದ ಹವ್ಯಾಸ. ಈ ರೀತಿಯ ಪ್ರಯೋಗಗಳ ಫಲವಾಗಿ ಆ ಪ್ರದೇಶದ ಜನರು ಹಾಗೂ ಅವರಾಡುವ ಭಾಷೆ, ಅವಹೇಳನಕ್ಕೆ, ತಮಾಷೆಗೆ ಗುರಿಯಾಗುತ್ತಾರೆ ಎಂಬ ಕಲ್ಪನೆಯ ಇಲ್ಲದೆ ಇದನ್ನು ಮಾಧ್ಯಮದವರು, ತಮ್ಮ ಅವಶ್ಯಕತೆಗೆ, ಅನುಕೂಲಕ್ಕೆ ತಕ್ಕಂತೆ ಬಳಸಿ ಕೊಳ್ಳುತ್ತಾರೆ. ಕೆಲವೊಮ್ಮೆ ಅದನ್ನು ಸಹಜವಾಗಿ ಕೂಡ ಬಳಸುವುದಿಲ್ಲ. ಅಶ್ಲೀಲವಾಗಿ, ಶೇಷಾರ್ಥ ಬರುವಂತೆ ಬಳಸುತ್ತಾರೆ. ಹೀಗೆ ಮಾಡುವುದು ಸರಿಯೆ?

ಇದು ಸರಿಯಾದ ಕ್ರಮವಲ್ಲ ಎಂಬುದು ಪ್ರಜ್ಞಾವಂತರೆಲ್ಲರ ಅನಿಸಿಕೆ. ಹೀಗೆ ಭಾಷೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಹಾಗೆ ಮಾಡುವುದರಿಂದ ಆಯಾಯ ಪ್ರದೇಶದ ಜನರನ್ನು ಅವಹೇಳನ ಮಾಡಿದಂತಾಗುತ್ತದೆ. ಭಾಷೆಗೂ ಹಾನಿ ಮಾಡಿದಂತೆ ಆಗುತ್ತದೆ ಎಂಬ ಎಚ್ಚರದ ಮಾತನ್ನು, ತಿಳುವಳಿಕೆ ನುಡಿಯನ್ನು ಮಾಧ್ಯಮದವರಿಗೆ ಯಾರೂ ಹೇಳಿದಂತಿಲ್ಲ. ಹೇಳಿದರೂ ಆ ಮಾತುಗಳನ್ನು ಅಲಕ್ಷಿಸುವ ಮಾಧ್ಯಮ ಮಂದಿಯೇ ಹೆಚ್ಚು.

ದೃಶ್ಯ ಮಾಧ್ಯಮದಲ್ಲಿ ಜಾತಿ ಬಗ್ಗೆ ನಿಂದನೆಯಾದರೆ, ಆಯಾಯ ಜಾತಿಯ ಜನ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಸೆನ್ಸಾರ್ ಮಂಡಲಿ ಎಚ್ಚರ ವಹಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರವೂ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಆದರೆ ಭಾಷೆ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಯಾಕೆಂದರೆ ಇಲ್ಲಿ ಜಾತಿ- ವರ್ಗದ ಪ್ರಶ್ನೆ ಏಳುವುದಿಲ್ಲ. ಭಾಷೆ ಆ ಪ್ರದೇಶದ ಸಮುದಾಯಕ್ಕೆ ಸೇರಿದ್ದು. ಹಾಗಾಗಿ ಪ್ರತಿಭಟಿಸುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಹೀಗೆ ಪ್ರಾದೇಶಿಕ ಆಡುನುಡಿಗಳನ್ನು ದೃಶ್ಯ ಮಾಧ್ಯಮಗಳು ಕಳೆದ ಹಲವು ದಶಕಗಳಿಂದಲೂ ದುರುಪಯೋಗ ಪಡಿಸಿಕೊಳ್ಳುತ್ತಲೇ ಬಂದಿದ್ದಾವೆ ಎಂಬುದು ನನ್ನ ವಾದವಲ್ಲ. ಅದಕ್ಕಿಂತ ಭಿನ್ನವಾಗಿ, ಪ್ರಾದೇಶಿಕ ಭಾಷೆಯ ಸೊಗಡನ್ನು, ಅದರ ಆಳ-ಅಗಲದ ವಿಸ್ತಾರವನ್ನು ಬಳಸಿಕೊಳ್ಳುವ ಮೂಲಕ, ಅದರ ಪ್ರತಿಷ್ಠೆ- ಶೋಭೆ ಹೆಚ್ಚಿಸಿದವರೂ ಇದ್ದಾರೆ ಎಂಬುದು ನಮ್ಮ ನಾಡ- ನುಡಿಯ ಪುಣ್ಯ. ಉದಾಹರಣೆಗೆ ಗಿರೀಶ ಕಾಸರವಳ್ಳಿಯವರ ಸಿನಿಮಾ- 'ತಾಯಿ ಸಾಹೇಬ', 'ದ್ವೀಪ', 'ಗುಲಾಬಿ ಟಾಕೀಸ್'- ಹೀಗೆ ಅವರ ಯಾವುದೇ ಸಿನಿಮಾ ನೋಡಿ, ಕಥೆ, ಸಂಭಾಷಣೆ, ವಸ್ತು, ತಂತ್ರಗಳ ಬಗ್ಗೆ ಎಚ್ಚರವಹಿಸುವಂತೆ, ಭಾಷೆಯ ಬಗ್ಗೆಯೂ ಕಾಸರವಳ್ಳಿ ಅವರು ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತಾರೆಂಬುದು ಗಮನಾರ್ಹ. ಹೆಮ್ಮೆಯ-ಸಂತೋಷದ ಅಂಶ ಕೂಡ. 'ಗುಲಾಬಿ ಟಾಕೀಸ್' ನಲ್ಲಂತೂ ಕುಂದಾಪುರ ಕನ್ನಡದ ಗಟ್ಟಿತನ, ಹಾಸ್ಯ- ವ್ಯಂಗ್ಯ, ದುಃಖ ದುಮ್ಮಾನ ಸಂತೋಷಗಳನ್ನು ಅಭಿವ್ಯಕ್ತಿಸಲು ಹೇಗೆ ಸಶಕ್ತವಾಗಿದೆ ಎಂಬುದನ್ನು ಚಿತ್ರದ ಉದ್ದಕ್ಕೂ ಗಮನಿಸಿ. ಪಾತ್ರ ಹಾಗೂ ದೃಶ್ಯಗಳ ಜೊತೆಜೊತೆಗೆ ಕುಂದಾಪುರದ ಭಾಷೆಯೂ ತನ್ನತನದ ಛಾಪು ಮೂಡಿಸುತ್ತದೆ. 'ಗುಲಾಬಿ ಟಾಕೀಸ್' ಕೇವಲ ದೃಶ್ಯ ಮಾಧ್ಯಮವಾಗಿ ಮಾತ್ರವಲ್ಲ; ಭಾಷಾ ಮಾಧ್ಯಮವಾಗಿ ಎಷ್ಟು ಅರ್ಥಪೂರ್ಣವಾಗಿ ಹೊರಹೊಮ್ಮಿದೆ ಎಂಬುದನ್ನು ಚಿತ್ರದುದ್ದಕ್ಕೂ ನೀವು ಸಂಭಾಷಣೆಯನ್ನು ಎಚ್ಚರದಿಂದಲೇ ಗಮನಿಸಬೇಕಾಗುತ್ತದೆ. ಅಂದರೆ ಪ್ರಾದೇಶಿಕವಾದ 'ಕುಂದಾಪುರದ ಕನ್ನಡ' ಅಭಿವ್ಯಕ್ತಿಯ ಭಾಷೆಯಾಗಿ ಪ್ರೇಕ್ಷಕನಿಗೆ ಎಲ್ಲೂ ಅಡ್ಡಿ-ಆತಂಕಗಳನ್ನು ಒಡ್ಡುವುದೇ ಇಲ್ಲ. ಬದಲಾಗಿ 'ಕುಂದಾಪುರದ ಕನ್ನಡ'ದ ಬಗ್ಗೆ ಪ್ರೇಕ್ಷಕರಿಗೆ ಹೊಸ ಅರಿವು ಮೂಡಿಸುವಲ್ಲಿ ಹೊಸ ಅನುಭವ ಕಟ್ಟಿಕೊಡುವಲ್ಲಿ ಸಫಲವಾಗುತ್ತದೆ. ದೃಶ್ಯ ಮಾಧ್ಯವನ್ನು ಸೃಷ್ಟಿಸಲು ಹೊರಟ ಮಂದಿಯ ಜವಾಬ್ದಾರಿ ಇರುವುದು ಇಲ್ಲೇ.

ಯಾವುದೇ ಘೋಷಣೆಗಳಿಲ್ಲದೆ ಪ್ರಾದೇಶಿಕ ಆಡುಭಾಷೆಗೂ ಹೊಸ ಆಯಾಮ ನೀಡುವಲ್ಲಿ ಸದ್ದು-ಗದ್ದಲ ಮಾಡದೇ ಗೆದ್ದಿರುತ್ತಾನೆ. ಆ ಮೂಲಕ ಆ ಪ್ರದೇಶಗಳ ಭಾಷೆಗೂ ಹೊಸತನ, ಮೌಲ್ಯ, ಘನತೆ, ಗಾಂಭೀರ್ಯ, ಒದಗಿಸಿಕೊಡುವ ಆಯುಧ. ಆ ಆಡು ನುಡಿಯ ಜನರ ಪ್ರೀತಿ-ವಿಶ್ವಾಸಗಳಿಸುವ ಮೂಲಕ ಅವರ ಹೃದಯದಲ್ಲಿ ವಿಶಿಷ್ಟವಾದ-ಸ್ಥಾನಮಾನ ಪಡೆಯುತ್ತಾನೆ. ಈ ರೀತಿ ಮಾಡುವುದು ಮಾಧ್ಯಮದ ಮಂದಿಗೆ ಒಂದು ರೀತಿಯ ಅಗ್ಗಳಿಕೆ ಅಲ್ಲವೇ? ಪ್ರಾದೇಶಿಕ ಭಾಷೆಗೆ ಹೊಸ ಮೆರಗೂ ನೀಡಿದಂತಾಗುತ್ತದೆ. ಇದು ಖಂಡಿತಾ ಸಾಮಾನ್ಯವಾದ ಸಾಧನೆಯೇನಲ್ಲ. ಕನ್ನಡದ ಪ್ರಾದೇಶಿಕತನವನ್ನೂ ಎಚ್ಚರದಿಂದ ಬಳಸುವಂತೆ ಪ್ರಜ್ಞಾವಂತ ಮಾಧ್ಯಮದ ಮಂದಿ ಕಾರ್ಯೋನ್ಮುಖರಾಗಲು ಇದು ಸಕಾಲಿಕ ಅಲ್ಲವೇ!?