ಬ್ರೇಕಿಂಗ್ ನ್ಯೂಸ್ .....
12:03 PM
Posted by ಆಲೆಮನೆ
ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’ ಎಂಬ ಹೊಸ ಬ್ಲಾಗ್ .ಕನ್ನಡ ಸಾಹಿತ್ಯ ಸಮ್ಮೇಳನವೆನ್ನುವುದು ಸಾಹಿತ್ಯ ಜಾತ್ರೆಯೋ? ಜನ ಜಾತ್ರೆಯೋ? ಎಂಬ ಪ್ರಶ್ನೆಗಳಿವೆಯಾದರೂ ಕನ್ನಡ ಜಾತ್ರೆ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಕೆಲವರಿಗಿದು ಸೆಮಿನಾರು-ಘೋಷ್ಠಿಗಳ ಗಂಭೀರ ಚಿಂತನವಾದರೆ, ಮತ್ತೆ ಕೆಲವರಿಗಿದು ಮಿತ್ರಮಂಡಳಿ, ಇನ್ನೂ ಕೆಲವರಿಗಿದು ಪುಸ್ತಕ ಸಂತೆ, ಇನ್ನುಳಿದವರಿಗೆ ಪ್ರವಾಸದ ಮೋಜು! ಇನ್ನೂ ಕೆಲವರಿರುತ್ತಾರೆ ಅವರಿಗಿದು ಭರ್ಜರಿ ವ್ಯಾಪಾರ, ಮತ್ತೊಂದು ವಿಶೇಷ ವರ್ಗವಿದೆ ಅವರಿಗಿದು ಉರವಣಿಗೆಯ ವೇದಿಕೆ. ಹೀಗೆ ಅವರವರ ಭಾವಕ್ಕೆ ಅವರ ಭಕುತಿಗೆ ಎಂಬಂತೆ ನಡೆದುಕೊಂಡು ಬಂದಿರುವ ಸಾಹಿತ್ಯ ಸಮ್ಮೇಳನದ ಫುಲ್ ಸಚಿತ್ರ ಕ್ಷಣ ಕ್ಷಣದ ವರದಿ ನಿಮ್ಮ ಮುಂದೆ, ನಾಳೆಯಿಂದ....
ಗದಗಿನ ವೈಭವ ಬಲ್ಲಿರಾ - ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು
8:49 AM
Posted by ಆಲೆಮನೆ
ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನೂತನ ಜಿಲ್ಲೆಯಾಗಿ ರೂಪುಗೊಂಡಿರುವ ಗದುಗಿನಲ್ಲಿ ನಡೆಯಲಿದೆ. ಕವಿ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಗದುಗಿನಲ್ಲಿ ನಡೆಯುತ್ತಿರುವುದು ಎರಡನೇ ಸಮ್ಮೇಳನ. ಮೊದಲ ಸಮ್ಮೇಳನ ನಮ್ಮಲ್ಲಿ ಬಹು ಜನರು ಹುತ್ತುವುದಕ್ಕಿಂತಲೂ ಮುಂಚೆಯೇ ೧೯೬೧ರಲ್ಲಿ ನಡೆದಿತ್ತು. ಅದು ಸರಿ ಈ ಗದುಗಿನ ವಿಶೇಷವಾದರೂ ಏನು ಸ್ವಾಮಿ? ಅಂತೀರ, ಇಲ್ಲಿದೆ ನೋಡಿ ಇನ್ನು ಪ್ರತಿ ದಿನ ಗದುಗಿನ ಪರಿಚಯ
ಪ್ರಾಚೀನದಿಂದ ಆಧುನಿಕದವರೆಗೆ
ಗದಗಿಗೆ ಮೇರು ಕೀರ್ತಿ ತಂದುಕೊಟ್ಟವರಲ್ಲಿ ಕುಮಾರವ್ಯಾಸ ಅಗ್ರಗಣ್ಯರು. ಮಹಾಕಾವ್ಯವಾದ ``ಕರ್ನಾಟಭಾರತ ಕಥಾ ಮಂಜರಿ''ಯನ್ನು ಕುಮಾರವ್ಯಾಸ ರಚಿಸಿದ್ದು ಗದಗಿನ ವೀರನಾರಾಯಣನ ಸನ್ನಿಧಿಯಲ್ಲಿ. ಕುಮಾರವ್ಯಾಸನ ಸಾಲಿಗೆ ಸೇರಿದ ಮತ್ತೊಬ್ಬ ಮಹಾಕವಿ ಚಾಮರಸ. ಇವರು ಇಲ್ಲಿನ ನಾರಾಯಣಪುರದವರು. ``ಧರ್ಮಾಮೃತ" ಕಾವ್ಯ ರಚಿಸಿ ಸನ್ನುತ ಎನಿಸಿದ ನಯಸೇನ ಮುಳುಗುಂದದವನು. ಇಲ್ಲಿನ ಅತ್ತಿಮಬ್ಬೆಯು ದಾನಚಿಂತಾಮಣೆ ಎನಿಸಿಕೊಂಡರೆ, ಆಯ್ದಕ್ಕಿ ಲಕ್ಕಮ್ಮ ಮಹಾಶಿವಶರಣೆ ಎನಿಸಿದ್ದಾಳೆ. ಮಲ್ಲಿಸೇಣ, ಕವಿ ಬಸಪ್ಪಾರ್ಯ, ಗದಗ ಜಿಲ್ಲೆಯ ಪ್ರಥಮ ಕವಿ ಎಂಬ ಖ್ಯಾತಿ ಪಡೆದಿರುವ ಶ್ರೀಧರಾಚಾರ್ಯ, ಬಸವಣ್ಣಯ್ಯ, ಕನ್ನಪ್ಪಯ್ಯ, ನಾಗದೇವ ಮತ್ತಿತರರು ಗದಗ ಜಿಲ್ಲೆಯವರೇ. ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರೆನಿಸಿದ ದುರ್ಗಸಿಂಹ ಸವಡಿ ಗ್ರಾಮದವನು. ಹಳಗನ್ನಡ ಹಾಗೂ ನಡುಗನ್ನಡ ಕಾಲದಲ್ಲಿ ಇಂತಹ ಮೇದಾವಿ ಕವಿಗಳು ಇದ್ದರು. `ಸೋಮೇಶ್ವರ ಶತಕ' ವನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಪುಲಿಗೆರೆ ಎಂದು ಅಂದು ಹೆಸರಾಗಿದ್ದ ಇಂದಿನ ಲಕ್ಷ್ಮೇಶ್ವರ ಗದಗದ್ದೆ.
ಇನ್ನು ಆಧುನಿಕ ಸಾಹಿತ್ಯದ ಕಾಲಘಟ್ಟದಲ್ಲಿ ಬಂದು ನಿಂತಾಗ ಜಿಲ್ಲೆಯಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ಹುಯಿಲಗೋಳ ನಾರಾಯಣರಾಯರು. ಇವರು ಬರೆದ ``ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪರಿಣಾಮಕಾರಿ ಪಾತ್ರ ವಹಿಸಿತ್ತು. ದ.ರಾ.ಬೇಂದ್ರೆ ಮೂಲತಃ ಶಿರಹಟ್ಟಿಯವರು. ``ಸಂಗ್ಯಾ ಬಾಳ್ಯಾ" ನಾಟಕ ಬರೆದ ಪತ್ತಾರ ಮಾಸ್ತರ ಗದಗಿನವರು. ಕನ್ನಡದ ಕುಲಪುರೋಹಿತರೆಂದೇ ಹೆಸರಾದ ಆಲೂರು ವೆಂಕಟರಾಯರು ಹೊಳೆಆಲೂರಿನವರು. ಜಿ.ಬಿ.ಜೋಶಿ, ಪಂಚತಂತ್ರದ ಕಥೆಗಳು ರಚಿಸಿದ ಡಾ. ವರದರಾಜ ಹುಯಿಲಗೋಳ, ಆರ್.ಸಿ. ಹಿರೇಮಠ, ಚೆಂಬೆಳಕಿನ ಕವಿ ಚನ್ನವೀರ ಕಣವಿ, ಜಿ.ಎಸ್. ಆಮೂರ, ಗಿರಡ್ಡಿ ಗೋವಿಂದರಾಜ, ಸೋಮಶೇಖರ ಇಂದ್ರಾಪುರ ಗದಗ ಜಿಲ್ಲೆಯವರು.
ಶಿಲ್ಪಕಲೆಯ ಬೀಡು
ಜಿಲ್ಲೆ ಶಿಲ್ಪಕಲೆಯ ಬೀಡೂ ಹೌದು. ಗದುಗಿನ ವೀರನಾರಾಯಣ, ತ್ರಿಕುಟೇಶ್ವರ ಹಾಗೂ ಸೋಮನಾಥ, ಸರಸ್ವತಿ ದೇವಾಲಯ ಪ್ರಸಿದ್ಧಿ ಪಡೆದಿವೆ. ಲಕ್ಕುಂಡಿ ನೂರೊಂದು ಗುಡಿಗಳು ಆಕರ್ಷಣೀಯ. ಇಲ್ಲಿನ ಸೂರ್ಯ ದೇವಾಲಯ, ಬ್ರಹ್ಮ ಜೀನಾಲಯ ಗಮನ ಸೆಳೆಯುತ್ತವೆ. ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ ರಾಷ್ಟ್ರೀಯ ಸಂರಕ್ಷಣಾ ಸ್ಮಾರಕವಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ಶಿಲ್ಪಕಲೆಗೆ ಜೀವ ತುಂಬಿದವರು ರಾಜವಂಶಸ್ಥರು. ಅನೇಕ ರಾಜಮಹಾರಾಜರು ಈ ಭಾಗದಲ್ಲಿ ಆಳಿದ್ದರೆಂಬುದು ಗಮನಾರ್ಹ. ಇನ್ನು ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಶಾಸನಗಳಿವೆ.
ನಾದಮಯ ಈ ಲೋಕ
ಸಂಗೀತ ಕ್ಷೇತ್ರದಲ್ಲಿಯೂ ಜಿಲ್ಲೆಯ ವಿದ್ವಾಂಸರ ಕೊಡುಗೆ ಅಪಾರ. ಭಾರತ ರತ್ನ ಕೀರ್ತಿಗೆ ಭಾಜನರಾಗಿ ಗದಗಿನ ಹೆಸರು ದೇಶ ವಿದೇಶದಲ್ಲಿ ಪ್ರಚುರ ಪಡಿಸಲು ಕಾರಣರಾದ ಭೀಮಸೇನ ಜೋಶಿ ಗದುಗಿನವರು. ದೃಷ್ಟಿಹೀನತೆಯಿದ್ದರೂ ಇತರರಿಗೆ ಮಾದರಿಯಾಗಿ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಗೈದು ಚೌಡಯ್ಯ ಪ್ರಶಸ್ತಿ ಪಡೆದ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳು ಹಾಗೂ ಅವರ ಗುರುಗಳಾದ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳು ಜಿಲ್ಲೆಯನ್ನು ನಾದ ಲೋಕವಾಗಿಸಿದ್ದಾರೆ. ಅವರ ಹೆಸರಿನ ಅಂಧರ ಸಂಗೀತ ಶಾಲೆ ಇಂದಿಗೂ ರಾಜ್ಯವ್ಯಾಪಿ ಶಿಷ್ಯ ಗಣವನ್ನು ಹೊಂದಿದೆ.
ಸರ್ವಧರ್ಮದ ನೆಲೆವೀಡು
ಜಿಲ್ಲೆ ಸರ್ವಧರ್ಮ ಶಾಂತಿಯ ನೆಲೆಯಾಗಿದೆ. ಗದುಗಿನ ತೋಂಟದಾರ್ಯ ಮಠ, ವೀರೇಶ್ವರ ಪುಣ್ಯಾಶ್ರಮ, ಶಿವಾನಂದ ಮಠ, ಮುಂಡರಗಿ ಅನ್ನದಾನೀಶ್ವರ ಮಠ, ಇಟಗಿ ಭೀಮಾಂಬಿಕೆ ಮಠ ನಾಡಿನಲ್ಲಿ ಮನೆ ಮಾತಾಗಿದೆ. ಈ ಮಠಗಳು ನಿತ್ಯ ಅಣ್ಣ-ಅಕ್ಷರ ದಾಸೋಹಗಳ ಕೇಂದ್ರವಾಗಿವೆ. ತೋಂಟದಾರ್ಯ ಮಠದ ಸ್ವಾಮಿಗಳನ್ನಂತೂ ಕನ್ನಡದ ಜಗದ್ಗುರು ಎಂದೇ ಬಂನಿಸುವುದುಂಟು. ಇನ್ನು ಶಿರಹಟ್ಟಿಯ ಫಕೀರಸ್ವಾಮಿ ಮಠ ದಾವಲ್ಮಲ್ಲಿಕ್ ದರ್ಗಾಗಳು ಇಲ್ಲಿನ ಜನರ ಸಹಬಾಳ್ವೆಯ ಸಂಕೇತಗಳಾಗಿವೆ.
ಸಹಕಾರಿ ಚಳುವಳಿಯ ಹುಟ್ಟೂರು
ಎಶಿಯಾ ಖಂಡದಲ್ಲೇ ಪ್ರಥಮ ಸಹಕಾರಿ ಸಂಘ ಸ್ಥಾಪನೆ ಆದದ್ದು ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದಲ್ಲಿ. ೧೯೦೪ರಲ್ಲಿ ದೇಶದಲ್ಲಿ ಸಹಕಾರ ಚಳುವಳಿ ಆರಂಭವಾದಾಗಲೇ ಕಣಗಿನಹಾಳದಲ್ಲಿ ಸಿದ್ಧನ ಗೌಡ ಪಾಟೀಲರಿಂದ ಸಹಕಾರ ಸಂಸ್ಥೆ ಜನ್ಮ ತಾಳಿತು. ಕನಗಿನಹಾಳ ಸಹಕಾರಿ ತತ್ವದ ಜನ್ಮಸ್ಥಳವಾದರೆ, ಸಿದ್ಧನ ಗೌಡ ಪಾಟೀಲರು ಸಹಕಾರೀ ತತ್ವದ ಪಿತಾಮಹರು.
ಸ್ವಾತಂತ್ರ್ಯ ಹೋರಾಟದ ಛಾಪು
ರಜಾಕಾರರ ಹಾವಳಿ ವಿರುದ್ಧ , ಆ ಮೂಲಕ ಬ್ರಿಟಿಷರ ಏಕಚಕ್ರಾಧಿಪತ್ಯಕ್ಕೆ ಸೆಡ್ಡು ಹೊಡೆದ ವೀರರ ಗಂಡು ಭೂಮಿಯಿದು. ಮುಂಡರಗಿಯ ಮಂದಗೈ ಭೀಮರಾಯರು ಇಂಥವರಲ್ಲಿ ಅಗ್ರಗಣ್ಯರು.
ಕ್ರೀಡೆಯಲ್ಲೂ ಮುಂದೆ
ಕ್ರೀಡಾ ಕ್ಷೇತ್ರದಲ್ಲಿಯೂ ಜಿಲ್ಲೆಯ ಯುವಕರು ಪ್ರತಿಭೆ ಮೆರೆದಿದ್ದಾರೆ. ಕ್ರಿಕೆಟ್ನಲ್ಲಿ ಸುನೀಲ್ ಜೋಶಿ ಪ್ರತಿಭೆ ಮೆರೆದಿದ್ದಾರೆ. ವಿಲಾಸ ನೀಲಗುಂದ ಓಟದಲ್ಲಿ ರಾಷ್ಟ್ರ ಮಟ್ಟದ ಸಾಧನೆ ಗೈದಿದ್ದಾನೆ. ಹಾಕಿಯಲ್ಲಿ ಬೀನು ಭಾಠ, ಅಥ್ಲೆಟಿಕ್ಸ್ನಲ್ಲಿ ದ್ರಾಕ್ಞಾಯಿಣಿ ಅಸೂಟಿ, ನೀಲಮ್ಮ ಸೂಡಿ, ಸೈಕ್ಲಿಷ್ಟ್ ನೀಲವ್ವ ಮಲ್ಲಿಗವಾಡ ಮತ್ತಿತರರು ಗದುಗಿನ ಕೀರ್ತಿ ಹೆಚ್ಚಿಸಿದ್ದಾರೆ. ಕಬಡ್ಡಿ ಆಟದಲ್ಲಿ ಮುಳಗುಂದದ ಕ್ರೀಡಾಪಟುಗಳು ದೇಶದ ಗಮನ ಸೆಳೆದಿದ್ದಾರೆ.
ಪ್ರವಾಸಿ ತಾಣವೂ ಹೌದು
ಗದಗ ಜಿಲ್ಲೆಯಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ, ಕಪ್ಪತಗುಡ್ಡ, ವಿದೇಶಿ ಪಕ್ಷಿಗಳಿಗೆ ವಿಹಾರ ತಾಣವಾಗಿರುವ ಮಾಗಡಿ ಕೆರೆ, ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ ಕಟ್ಟಿಸಿದ ಡಂಬಳ ಕೆರೆ ಬಣ್ಣಿಸಲಸದಳ. ದಕ್ಷಿಣ ಕಾಶಿ ಪ್ರಸಿದ್ಧಿಯ ಗಜೇಂದ್ರಗಡದ ಶ್ರೀ ಕಾಲಕಾಲೇಶ್ವರ ದೇವಾಲಯ, ಡಂಬಳದ ದೊಡ್ಡ ಬಸಪ್ಪ ದೇವಾಲಯ, ಲಕ್ಷ್ಮೇಶ್ವರ ಮುಕ್ತಿ ಕೇಂದ್ರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಇಂತಹ ಭವ್ಯ ನೆಲೆವೀಡಾದ ಗದಗ ಜಿಲ್ಲೆಯಲ್ಲಿ ಎರಡನೇ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹ.
ಬ್ಲರ್ಬ....
ಸಾಂಸ್ಕೃತಿಕ ದೃಷ್ಟಿಯಿಂದ, ಸಾಹಿತಿಗಳಿಂದ, ವಿದ್ವಾಂಸರಿಂದ, ಮೇಧಾವಿಗಳಿಂದ, ಕಲಾವಿದರು, ಸಂಗೀತಗಾರರು, ಸಾಧು ಸಂತರು, ರಾಜ ಮಹಾರಾಜರು, ಸ್ವಾತ್ರಂತ್ರ್ಯ ಹೋರಾಟಗಾರರಿಂದ ಗದಗ ಜಿಲ್ಲೆ ಅಪಾರ ಕೀರ್ತಿ ಗಳಿಸಿದೆ. ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ಅಪಾರ. ಇಂತಹ ಭವ್ಯ ಇತಿಹಾಸವನ್ನು ಹೊಂದಿರುವ ಗದಗನಲ್ಲಿ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವುದು ಹೆಮ್ಮೆಯ ಸಂಗತಿ.
ಪ್ರಕಾಶ ಶೇಟ್ ಗದಗ
ಬತ್ತಿದಂತೆ ತೋರುವ ಮಹಾನದಿ
8:14 AM
Posted by ಆಲೆಮನೆ
ನಾಗತಿಹಳ್ಳಿ ಚಂದ್ರಶೇಕರ್ ಎಷ್ಟೇ ಚಿತ್ರರಂಗದವರು ಅಂದು ಕೊಂಡರೂ, ಅವರೂ ಮೇಷ್ಟ್ರೇ, ಸಾಹಿತ್ಯ ಲೋಕದದೊಂದಿಗೆ ನಿಕಟ ಸಂಬಂಧವಿರಿಸಿಕೊಂಡವರು, ತಾವೂ ಉತ್ತಮ ಬರಹಗಾರರು. ಈ ನಮ್ಮ ಫಾಸ್ಟ್ ಜೀವನದ ನಡುವೆಯೂ ಸಾಹಿತ್ಯ ಯಾಕೆ ಬೇಕು? ಅಥವಾ ಸಾಹಿತ್ಯವೇ ಯಾಕೆ ಬೇಕು? ಎನ್ನುವ ಕುರಿತು ಮೇಷ್ಟ್ರು ಚರ್ಚಿಸಿದ್ದಾರೆ.