ಸರ್ವಜ್ಞಂ ತದಹಂ ವಂದೇ ಪರಂಜ್ಯೋತಿಸ್ತಮೋಪಹಂಪ್ರವೃತ್ತಾಯನ್ಮುಖಾದ್ದೇವೀ ಸರ್ವಭಾಷಾ ಸರಸ್ವತೀ-ನಾಗವರ್ಮ

ಯಾರ ಮುಖಂದಿದೆಳ್ದು ನಿಂದಳೊಭಾಷೆಯೆಲ್ಲಕು ದೇವಿ ಸರಸತಿಅಂಥ ದೇವಗೆ ಎಲ್ಲ ಬಲ್ಲಗೆತಮವ ದೂಡುವ ಹೊಳೆವ ಬೆಳಕಿಗೆಇದಿಗೊ ನನ್ನಯ ವಂದನೆ

ಎಲ್ಲ ಸಾರಸ್ವತ ಚೇತನಗಳಿಗೂ ನನ್ನ ನಮಸ್ಕಾರ,ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಲೇಖಕರಿಗೆ ನೀಡುವ ಅತ್ಯಂತ ಪ್ರಮುಖವಾದ ಗೌರವ--ಇಂಥ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಪದವಿ. ನನಗೆ ಈ ಗೌರವವನ್ನು ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸಿ ನನ್ನ ಕೆಲವು ಅರಿವಿನ ಮಾತುಗಳನ್ನು ಹೇಳುತ್ತೇನೆ. ಶಾಂತವಾಗಿ ಕೇಳಬೇಕೆಂದು ನನ್ನ ಬಿನ್ನಹ.ಕನ್ನಡದ ಕಥೆ ಬಲು ದೊಡ್ಡದು. ಕನ್ನಡನಾಡಿನ ಚರಿತ್ರೆಯಲ್ಲಿ ಕ್ರಿ.ಶ. ಹದಿನೆಂಟನೆಯ ಶತಮಾನದ ಕೊನೆಯ ಭಾಗಕ್ಕೂ ಹತ್ತೊಂಬತ್ತನೆಯ ಶತಮಾನದ ಮೊದಲ ಭಾಗಕ್ಕೂ ಉಂಟಾದ ಸಂಧಿಕಾಲವು ಕನ್ನಡ ಭಾಷಾ ಸಾಹಿತ್ಯಗಳ ದೃಷ್ಟಿಯಿಂದ ಒಂದು ವಿಶಿಷ್ಟ ಪರಿಸರದಲ್ಲಿ ಮುಳುಗಿದ್ದ ಕಾಲ. ರಾಜಕೀಯವಾಗಿ ಕನ್ನಡ ಪ್ರದೇಶಗಳು ವಿವಿಧ ಆಡಳಿತಗಳಿಗೆ ಸಿಕ್ಕಿಕೊಂಡು ಯಾರಿಗೂ ಯಾವ ರಾಜಾಶ್ರಯವೂ ದೊರಕದಿದ್ದ ಕಾಲ. ಇಂಥ ಸಮಯದಲ್ಲಿ ಪಾಶ್ಚಾತ್ಯ ದೇಶಗಳಿಂದ ಕ್ರಿಸ್ತಮತ ಪ್ರಚಾರಕರು ಭಾರತ ದೇಶಕ್ಕೆ ಬಂದು ಭಾರತೀಯರಲ್ಲಿದ್ದ ಶೋಷಿತವರ್ಗದ ಬಡಜನರನ್ನು ಕ್ರಿಸ್ತಮತಕ್ಕೆ ಮತಾಂತರಗೊಳಿಸುವ ಪ್ರಯತ್ನವನ್ನು ಪ್ರಾರಂಭ ಮಾಡಿದ್ದರು. ಜರ್ಮನಿಯಿಂದ ಬಂದ ಬಾಸೆಲ್ ಮಿಷನ್ನಿನ ಮತ ಪ್ರಚಾರಕರು ಭಾರತದ ಪಶ್ಚಿಮ ಕರಾವಳಿಯಲ್ಲಿ ಮಂಗಳೂರನ್ನು ತಮ್ಮ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಕರಾವಳಿಯ ಉದ್ದಕ್ಕೂ ತಮ್ಮ ಉದ್ದೇಶವನ್ನು ಸಾರ್ಥಕಗೊಳಿಸುತ್ತಿದ್ದರು. ಈ ಮತಪ್ರಚಾರಕರೆಲ್ಲ ತುಂಬ ಸಮರ್ಥರಾದ ಬುದ್ಧಿವಂತರು. ವಿಶ್ವವಿದ್ಯಾನಿಲಯಗಳಲ್ಲಿ ತಿಳಿವಳಿಕೆಯನ್ನು ಸಂಪಾದಿಸಿದ್ದವರು. ಮತಪ್ರಚಾರದಲ್ಲಿ ಸಿದ್ಧಹಸ್ತರು. ಅವರು ತಮ್ಮ ಮತಪ್ರಚಾರ ಕಾರ್ಯವು ಕರ್ನಾಟಕದಲ್ಲಿ ಸಫಲವಾಗಬೇಕಾದರೆ ದೇಶಭಾಷೆಯಾದ ಕನ್ನಡದ ಸಹಾಯವು ಅಗತ್ಯವೆಂಬುದನ್ನು ಮನಗಂಡು ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿತರು. ಅದರಲ್ಲಿ ವಿದ್ವಾಂಸರಾಗಿ ಕಾವ್ಯ, ವ್ಯಾಕರಣ, ನಿಘಂಟು ಇತ್ಯಾದಿ ವಿಷಯಗಳಲ್ಲಿ ನಿಷ್ಣಾತರಾಗಿ ತಮ್ಮ ಪ್ರಚಾರ ವರ್ಗದವರಿಗೆ ತಿಳಿವಳಿಕೆಯನ್ನು ನೀಡಲು ಉತ್ತಮ ಸಾಹಿತ್ಯವನ್ನು ರಚಿಸಿದರು. ಅವರು ಮಾಡಿದ ಕಾರ್ಯವೆಲ್ಲ ಸಮರ್ಥರು ಮಾಡುವ ಕಾರ್ಯವಾಗಿತ್ತು. ಅವರ ಉದ್ದೇಶ ಮತಪ್ರಚಾರವಾದರೂ ಅದು ಕನ್ನಡದ ಹಳೆಯ ಗ್ರಂಥಗಳ ಪರಿಷ್ಕರಣಗಳಿಗೆ ಕಾರಣವಾಯಿತು. ಡಾ. ಫರ್ಡಿನಾಂಡ್ ಕಿಟ್ಟಲನು ೧೮೯೪ರಲ್ಲಿ ಮುದ್ರಿಸಿದ ಕನ್ನಡ-ಇಂಗ್ಲಿಷ್ ನಿಘಂಟು ಇಂಥ ಕಾರ್ಯದ ತಲೆಮಣಿಯಾಯಿತು.ಇದೇ ವೇಳೆಗೆ ಭಾರತದ ಎಲ್ಲೆಡೆಗಳಲ್ಲಿಯೂ ಬ್ರಿಟಿಷರ ಆಡಳಿತದ ಪರಿಣಾಮವಾಗಿ ಇಂಗ್ಲಿಷ್ ಭಾಷಾ ಸಾಹಿತ್ಯಗಳನ್ನು ಬೋಧಿಸುವ ಶಾಲೆಗಳು ಸ್ಥಾಪಿತವಾದವು. ಅವುಗಳಲ್ಲಿ ವ್ಯಾಸಂಗ ಮಾಡಿದ ಭಾರತೀಯ ಯುವಕರಲ್ಲಿ ಆಂಗ್ಲ ಸಾಹಿತ್ಯದ ವಿಷಯದಲ್ಲಿ ಅಪಾರ ವಿಶ್ವಾಸವು ಬೆಳೆಯಿತು. ಅಂಥ ಸಾಹಿತ್ಯವು ಕನ್ನಡದಲ್ಲಿ ಇರಲಿಲ್ಲವಾದುದರಿಂದ ಕೆಲವರು ಇಂಗ್ಲಿಷ್ ಸಾಹಿತ್ಯದ ಅತ್ಯುತ್ತಮ ಕವನಗಳನ್ನೂ ಗದ್ಯಕೃತಿಗಳನ್ನೂ ನಾಟಕಗಳನ್ನೂ ಕನ್ನಡಕ್ಕೆ ಅನುವಾದ ಮಾಡಿದರು. ಬಿಡಿಬಿಡಿಯಾಗಿ ಇಂಥ ಪ್ರಯತ್ನಗಳು ನಡೆದರೂ ಕನ್ನಡದ ಬೆಳವಣಿಗೆಗೆ ಸ್ಥಿರವಾದ ಯಾವ ಪ್ರಯತ್ನಗಳೂ ನಡೆದಿರಲಿಲ್ಲ. ಇಂಥ ಅತಂತ್ರ ಸನ್ನಿವೇಶದಲ್ಲಿ ಬೊಂಬಾಯಿ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿಯನ್ನು ಪಡೆದ ಉತ್ಸಾಹಿ ತರುಣರಾದ ರಾ.ಹ. ದೇಶಪಾಂಡೆ ಅವರು ಕೆಲವರು ಸ್ನೇಹಿತರೊಡಗೂಡಿ ಧಾರವಾಡದಲ್ಲಿ ೧೮೯೦ರಲ್ಲಿ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. ಕನ್ನಡದ ಬೆಳವಣಿಗೆಗೆ ಇದೊಂದು ಪ್ರಮುಖವಾದ ಘಟನೆಯಾಯಿತು. ಈ ಸಂಘದಿಂದ ಕನ್ನಡದ ಅಭಿವೃದ್ಧಿಯ ಕೆಲಸಗಳು ಕೆಲವು ನೆರವೇರಿದವು. ಇದರ ಮುಂದಿನ ಪ್ರಮುಖವಾದ ಘಟನೆಯೂ ಅದೇ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನೆರವೇರಿತು. ಮೈಸೂರಿನಲ್ಲಿದ್ದ ಬಿ.ಎಂ. ಶ್ರೀಕಂಠಯ್ಯನವರು ಆ ಸಂಘದಲ್ಲಿ ೧೯೧೧ರಲ್ಲಿ ‘ಕನ್ನಡ ಮಾತು ತಲೆ ಎತ್ತುವಬಗೆ’ ಎಂಬ ವಿಷಯವನ್ನು ಕುರಿತು ವಿಚಾರಪೂರ್ಣವಾದ ಒಂದು ಉಪನ್ಯಾಸವನ್ನು ಮಂಡಿಸಿದರು. ಈ ಉಪನ್ಯಾಸದ ಪ್ರಭಾವವು ಕನ್ನಡ ಜನರ ಮನಸ್ಸಿನಲ್ಲಿ ಗಾಢವಾದ ಪರಿಣಾಮವನ್ನು ಉಂಟುಮಾಡಿತು. ಜನತೆಯ ಮನಸ್ಸಿನಲ್ಲಿ ಈ ಉಪನ್ಯಾಸದ ಪರಿಣಾಮವಾಗಿ, ಕನ್ನಡದ ಅಭಿವೃದ್ಧಿಗೆ ಒಮ್ಮತದ ಕಾರ್ಯಗಳು ನಡೆಯಬೇಕೆಂಬ ಭಾವನೆ ಬೇರೂರಿಬಿಟ್ಟಿತು. ಇದೇ ಕನ್ನಡದ ನವೋದಯದ ಪ್ರಾರಂಭದ ಕೆಲಸ.ಇದೇ ೧೯೧೧ರಲ್ಲಿ ಮಂಜೇಶ್ವರದ ಗೋವಿಂದ ಪೈಗಳು ಒಂದು ಕ್ರಾಂತಿಕಾರಕ ಕಾರ್ಯವನ್ನು ಮಾಡಿದರು. ಕನ್ನಡದ ಪದ್ಯಗಳ ಪ್ರತಿಸಾಲಿನ ಮೊದಲಭಾಗದಲ್ಲಿ ಎರಡನೆಯ ವರ್ಣವು ಒಂದೇ ಆಗಿರಬೇಕೆಂಬ ಸಂಪ್ರದಾಯವು ಕೃತ್ರಿಮವಾದುದೆಂದು ತೀರ್ಮಾನಿಸಿ ಆ ಸಂಪ್ರದಾಯವನ್ನು ಮುರಿದು, ಪ್ರಾಸವನ್ನು ಬಿಟ್ಟು ‘ಹೊಲೆಯನು ಯಾರು?’ ಎಂಬ ಕವನವನ್ನು ರಚಿಸಿ ‘ಸ್ವದೇಶಾಭಿಮಾನಿ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿಬಿಟ್ಟರು. ಇದೇ ಸಮಯದಲ್ಲಿ ಬಿ.ಎಂ. ಶ್ರೀಯವರ ಶಿಷ್ಯರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತಮ್ಮ ‘ಸಣ್ಣಕತೆಗಳು’ ಎಂಬ ಪುಸ್ತಕವನ್ನು ಪ್ರಕಟಪಡಿಸಿದರು. ಈ ಕಾರ್ಯಗಳಿಂದ ಕೋಪಗೊಂಡ ಸಂಪ್ರದಾಯವಾದಿಗಳು ಪೈ ಅವರನ್ನು ಸಾಹಿತ್ಯ ಲೋಕದಲ್ಲಿ ‘ಹುಲಿ’ ಎಂದೂ ಮಾಸ್ತಿಯವರ ಸಣ್ಣಕತೆಗಳನ್ನು ‘ಸಣ್ಣ ಕತ್ತೆ’ಗಳೆಂದೂ ಟೀಕಿಸಿದರು. ಪೈ ಅವರು ಈ ಟೀಕಾಕಾರರಿಗೆ ಇತ್ತ ಉತ್ತರ ಹೀಗಿತ್ತು: ‘ಇಂದು ಒಬ್ಬನೇ ನಡೆದ ಮೇಕೆದಾರಿ ಮುಂದೆ ತೇರೆಳೆಯುವ ಹೆದ್ದಾರಿ.’ ಮಾಸ್ತಿಯವರ ಪ್ರತಿಕ್ರಿಯೆ ಹೀಗಿತ್ತು: ‘ನಿಜ. ನನ್ನ ಸಣ್ಣ ಕತ್ತೆಗಳು ನಿಮ್ಮ ಮನಸ್ಸಿನ ಮೈಲಿಗೆಯನ್ನು ಅಗಸನ ಬಳಿಗೆ ಒಯ್ಯುತ್ತವೆ.’ ಶ್ರೀಯವರ ಬಗ್ಗೆ ಅವರ ಕವನಸಂಕಲನ ಪ್ರಕಟವಾದಾಗಲೂ ಇಂಥವೇ ವ್ಯಂಗ್ಯವಾದ ಮಾತುಗಳು ಬಂದವು. ಆದರೆ ಅವರು ವ್ಯಸನದಿಂದ ಆ ಬಗೆಯ ಮಾತುಗಳನ್ನು ನುಂಗಿಕೊಂಡರು. ಹೊಸಗನ್ನಡದ ನವೋದಯವು ಪ್ರಾರಂಭವಾಗಿಬಿಟ್ಟಿತ್ತು.ಶ್ರೀಯವರ ‘ಇಂಗ್ಲಿಷ್ ಗೀತಗಳು’ ಪುಸ್ತಕವು ಪ್ರಕಟವಾಗಿ ಈ ಆಂದೋಳನವು ಬೃಹತ್ಪ್ರಮಾಣದಲ್ಲಿ ಮುಂದುವರೆಯಿತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶ್ರೀಯವರ ಶಿಷ್ಯರು ‘ಕಿರಿಯ ಕಾಣಿಕೆ’, ‘ತಳಿರು’ ಎಂಬ ಹೊಸಕನ್ನಡ ಕವನ ಸಂಕಲನಗಳನ್ನು ಪ್ರಕಟಿಸಿ ಈ ಚಳವಳಿಯನ್ನು ಮುಂದುವರಿಸಿದರು. ಬಳಿಕ ಶ್ರೀಯವರು ಕೈಗೊಂಡ ಭಾಷಣಗಳ ಪ್ರಚಾರಕಾರ್ಯ ಗಾಢವಾಯಿತು. ನವೋದಯ ಬೆಳೆಯಿತು. ಈ ಉದಯದ ದೊಡ್ಡ ಕವಿ ಕುವೆಂಪು ‘ನವೀನ’ ಎಂಬ ಕವನವನ್ನು ಪ್ರಕಟಿಸಿ ನವೋದಯದ ಪ್ರಭಾವವನ್ನು ಕಾವ್ಯದಲ್ಲಿ ಮೂಡಿಸಿದರು. ಆ ಕವನವು ಹೀಗಿದೆ:ನಾಡಿನ ಪುಣ್ಯದ ಪೂರ್ವದಿಗಂತದಿನವ ಅರುಣೋದಯ ಹೊಮ್ಮುತಿದೆ!ಚಿರನೂತನ ಚೇತನದುತ್ಸಾಹದಿನವೀನ ಜೀವನ ಚಿಮ್ಮತಿದೆ!ಅಭಿನವ ಮಧುಕೋಕಿಲ ಕಲಕಂಠದಿಸ್ವರ ಸುರಚಾಪಗಳುಣ್ಮುತಿವೆ!ಶ್ಯಾಮಲ ಕಾನನ ಸುಮ ಸಮ್ಮೇಲದಿಇಂಚರ ಸಾಸಿರ ಪೊಣ್ಮುತಿವೆ!ಕಿವಿ ಕಣ್ಣಾಗುತಿದೆ!ಕಣ್ ಕಿವಿಯಾಗುತಿದೆ!ಈ ಸಾಲುಗಳು ಯುವಕವಿಗಳ ಬಾಯಲ್ಲಿ ಶಾಶ್ವತವಾಗಿ ನಿಂತುಬಿಟ್ಟವು. ಈ ಕಾರ್ಯಗಳೆಲ್ಲವೂ ೧೯೧೧ರ ಉಪನ್ಯಾಸದ ಪರಿಣಾಮವಾಗಿ ಕನ್ನಡ ಜನತೆ ಕಂಡ ಕನಸಿನ ಪ್ರಭಾವ. ಈ ಕನಸುಗಳು ಮೂಡಿದ್ದು ಇಂದಿಗೆ, ಈ ಬೆಂಗಳೂರಿನ ಸಾಹಿತ್ಯ ಸಮ್ಮೇಳನವು ನಡೆಯುತ್ತಿರುವ ೨೦೧೧ರ ಸಮಯಕ್ಕೆ ಸರಿಯಾಗಿ ನೂರು ವರ್ಷಗಳ ಹಿಂದೆ. ಆದ್ದರಿಂದ ಇಂದು ನೆರವೇರುತ್ತಿರುವ ಸಮ್ಮೇಳನವು ನವೋದಯದ ಶತಮಾನದ ಉತ್ಸವ ಸಮಾರಂಭವೆಂದು ನಾನು ತಿಳಿದಿದ್ದೇನೆ. ಇಂದು ಇದರಲ್ಲಿ ಭಾಗವಹಿಸಿ ತಮ್ಮೆದುರು ಮಾತನಾಡಲು ನನಗೆ ಸಂತೋಷವಾಗುತ್ತಿದೆ.ಈ ನೂರು ವರ್ಷಗಳಲ್ಲಿ ಈ ಆಂದೋಲನದಿಂದ ನಮಗೆ ಆದ ಲಾಭವೇನು ಎಂದು ಲೆಕ್ಕ ಹಾಕುವುದು ತಪ್ಪಲ್ಲ. ಅದು ಲಾಭದಾಯಕವಾದ ಸಿಂಹಾವಲೋಕನವಾಗುತ್ತದೆ.ಶ್ರೀಯವರ ಉದ್ದೇಶದಲ್ಲಿ ಮೂರು ಮುಖ್ಯವಾದ ವಿಷಯಗಳಿದ್ದವು.೧. ಇಲ್ಲಿಯವರೆಗೆ ಸಂಸ್ಕೃತದ ಪೋಷಣೆಯಲ್ಲಿ ಬೆಳೆದ ಕನ್ನಡವು ಇನ್ನು ಮುಂದೆ ಇಂಗ್ಲಿಷ್ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಬೇಕು.

೨. ಹೊಸಗನ್ನಡಕ್ಕೆ ನೂತನ ಗದ್ಯದ ಶೈಲಿಯನ್ನು ತಂದುಕೊಡಬೇಕು.

೩. ಒಟ್ಟಿನಲ್ಲಿ ಉದಾರವಾದ ಜೀವನಧರ್ಮದ ಸಾರವನ್ನು ಪ್ರಚಾರ ಮಾಡಬೇಕು.ಇಂಗ್ಲಿಷ್ ಸಾಹಿತ್ಯಕ್ಕೆ ಗ್ರೀಕ್, ಜರ್ಮನ್, ಫ್ರೆಂಚ್ ಮತ್ತು ಲ್ಯಾಟಿನ್ ಭಾಷಾ ಸಾಹಿತ್ಯಗಳ ಸತ್ವಗಳು ಇಳಿದು ಬಂದಿದ್ದವು. ಆ ಎಲ್ಲ ಪ್ರಭಾವಗಳೂ ಕನ್ನಡದ ಬೆಳವಣಿಗೆಯಲ್ಲಿ ಸಹಾಯವಾಗುತ್ತವೆ ಎಂಬುದು ಶ್ರೀಯವರ ಆಸೆಯಾಗಿತ್ತು. ಕನ್ನಡದಲ್ಲಿ ಇಂದಿನವರೆಗೆ ಆಗಿರುವ ಬೆಳವಣಿಗೆಯಿಂದ ಆ ಆಸೆಯು ಈಡೇರಿದೆ ಎಂಬುದು ಸಾಬೀತಾಗುತ್ತದೆ. ನವೋದಯದ ಪರಿಣಾಮವಾಗಿ ಕನ್ನಡದ ಸಾಹಿತ್ಯದಲ್ಲಿ ಏನೇನು ಬದಲಾವಣೆಯಾಗಿವೆ ಎಂಬುದನ್ನು ಮೇಲುಸ್ತರದಲ್ಲಿ ಪರಿಶೀಲಿಸಿದರೂ ನಿಜವಾಗಿ ಆಶ್ಚರ್ಯವಾಗುತ್ತದೆ.ಮೈಸೂರಿನಲ್ಲಿ ೧೯೧೬ರಲ್ಲಿ ವಿಶ್ವವಿದ್ಯಾನಿಲಯವು ಸ್ಥಾಪಿತವಾದ ಮೇಲೆ ಆ ಊರಿನ ಮಹಾರಾಜ ಕಾಲೇಜು ಕನ್ನಡ ಸಾಹಿತ್ಯದ ಚಟುವಟಿಕೆಗಳ ಕೇಂದ್ರವಾಯಿತು. ಮೈಸೂರಿನಲ್ಲಿ ಪ್ರಾಚ್ಯವಸ್ತು ಭಂಡಾರವು ಕಾರ್ಯವನ್ನು ಪ್ರಾರಂಭಿಸಿತು. ಆ ಭಂಡಾರದಲ್ಲಿ ಪ್ರಾಚೀನವಾದ ಸಂಸ್ಕೃತ, ಕನ್ನಡ ಗ್ರಂಥಗಳು ಸಂಗ್ರಹವಾದವು. ಅನೇಕ ಹಸ್ತಪ್ರತಿಗಳು ಶೇಖರಗೊಂಡವು. ಹೊಸದಾಗಿ ಅನೇಕ ಗ್ರಂಥಗಳು ಸಂಪಾದಕರಿಂದ ಪರಿಷ್ಕರಿಸಲ್ಪಟ್ಟು ಮುದ್ರಣಕ್ಕೆ ಸಿದ್ಧವಾದವು. ಕಾಲೇಜಿನಲ್ಲಿ ಕನ್ನಡದ ಆಳವಾದ ವ್ಯಾಸಂಗ ನಡೆಯಿತು. ಹೊಸಗನ್ನಡದಲ್ಲಿ ಪ್ರಾಚೀನ ಗ್ರಂಥ ವಿಮರ್ಶೆಗಳು ರಚಿತವಾದವು. ಮೊತ್ತಮೊದಲಿಗೆ ಕುಮಾರವ್ಯಾಸ ಪ್ರಶಸ್ತಿ ರಚಿತವಾಯಿತು. ನಾಡಿನಲ್ಲೆಲ್ಲ ಹೊಸ ಹೊಸ ಕರ್ನಾಟಕ ಸಂಘಗಳು ಸ್ಥಾಪಿತವಾಗಿ ಸಾಹಿತ್ಯ ಪ್ರಚಾರಕಾರ್ಯ ನೆರವೇರಿತು. ಜನತೆಯಲ್ಲಿ ಕನ್ನಡದ ಬಗ್ಗೆ ಜಾಗೃತಿಯುಂಟಾಯಿತು.ಸೃಷ್ಟಿಶೀಲ ಸಾಹಿತ್ಯವು ಪ್ರಕಟವಾದಂತೆಲ್ಲ ಹೊಸ ಲೇಖಕರ ಧ್ಯೇಯೋದ್ದೇಶಗಳು ಪ್ರಕಟವಾದವು. ಹಿಂದೆ ಆಧ್ಯಾತ್ಮಿಕದಲ್ಲಿ ಪ್ರಮುಖವಾದ ಆಸಕ್ತಿ ಇದ್ದದ್ದು ಈಗ ಬದಲಾಗಿ ಇಹದಲ್ಲಿರುವ ಮಾನವನ ಬಾಳಿನ ವಿಶ್ಲೇಷಣೆಯು ಹೆಚ್ಚು ಪ್ರಾಧಾನ್ಯವನ್ನು ಪಡೆಯಿತು. ಮಾನವನು ದೇವನೂ ಅಲ್ಲ ರಾಕ್ಷಸನೂ ಅಲ್ಲ-ಆದರೆ ಅವನು ಒಳಿತು ಕೆಡುಕುಗಳ ಮಿಶ್ರಣವಾದ ಸೃಷ್ಟಿ. ಅವನಿಗೆ ದೇಶಪ್ರೇಮವಿದೆ, ಭಾಷಾ ಪ್ರೇಮವಿದೆ, ದೈವದಲ್ಲಿ ನಂಬಿಕೆ ಇದೆ, ಸಹಜೀವಿಗಳಲ್ಲಿ ಸ್ನೇಹವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಶ್ರದ್ಧೆ ಇದೆ-ಭಕ್ತಿ ಭಾವನೆಯೂ ಇದೆ. ಕೆಡುಕನ್ನು ತಿರಸ್ಕರಿಸಿ ಒಳಿತನ್ನು ಬಳಸುವ, ಮಾನವನ ಸ್ವಭಾವವಾದ ನೀತಿಯುತವಾದ ಪ್ರಾಮಾಣಿಕವಾದ ಬದುಕಿನ ಆಸಕ್ತಿ ಹೆಚ್ಚಾಯಿತು, ಅವನಿಗೆ. ಭಾರತ ದೇಶದ ಅತ್ಯಂತ ಹಿರಿಯ ಚೇತನಗಳಾದ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಅರಬಿಂದೊ, ರವೀಂದ್ರನಾಥ, ರಾಜಾರಾಮಮೋಹನರಾಯ್ ಮುಂತಾದವರ ತಾತ್ವಿಕ ಚಿಂತನೆಗಳು ಈ ಹೊಸ ಯುವಜನಾಂಗಕ್ಕೆ ಮಾರ್ಗದರ್ಶಕವಾದವು. ಬಾಳು ನ್ಯಾಯನಿಷ್ಠೆಯಿಂದ ಕೂಡಿರಬೇಕು, ಪ್ರಾಮಾಣಿಕತೆ ಪ್ರದರ್ಶಿತವಾಗಬೇಕು, ಪಾರದರ್ಶಕವಾಗಿರಬೇಕು ಮುಂತಾದ ಉದಾತ್ತ ಭಾವನೆಗಳು ಜನತೆಗೆ ಬೇಕಾದವು. ಒಟ್ಟಿನಲ್ಲಿ ನವಭಾರತ ನಿರ್ಮಾಣವಾಗಬೇಕೆಂಬುದೇ ಮುಖ್ಯದೃಷ್ಟಿ.ಈ ಹೊಸ ನಂಬಿಕೆಗಳಿಂದ ಸಾಹಿತ್ಯದ ಎಲ್ಲ ಪ್ರಕಾರಗಳೂ ಜೀವಂತವಾದವು. ಕಾವ್ಯ, ನಾಟಕ, ಕತೆ, ಕಾದಂಬರಿ, ಜೀವನಚಿತ್ರ, ಪ್ರಬಂಧ, ವಿಮರ್ಶೆ-ಇವೆಲ್ಲ ಬಹುಸಂಖ್ಯೆಯಲ್ಲಿ ಮುದ್ರಣಗೊಂಡವು. ದೇಶೋದ್ಧಾರದ ಜೊತೆಗೆ ಆತ್ಮೋದ್ಧಾರವೂ ಸೇರಿಕೊಂಡಿತು. ಶೋಷಿತರನ್ನು ಎತ್ತಿ ನಿಲ್ಲಿಸುವ ಪ್ರಯತ್ನ ಹೆಚ್ಚಾಯಿತು. ಸ್ವಾತಂತ್ರ್ಯಪ್ರಿಯತೆ ಎಷ್ಟು ಗಾಢವಾಯಿತೆಂದರೆ ಕವಿಗಳು ಹಾಡಿದರು ಹೀಗೆ:-ನೂರು ದೇವರನೆಲ್ಲ ನೂಕಾಚೆ ದೂರ

ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ!

ಹೀಗೆ ಗಟ್ಟಿಯಾಗಿ ಘೋಷಿಸುವುದು ಸಾಧ್ಯವಾಯಿತು.ನವ ಸಾಹಿತಿಗಳೂ ತಮ್ಮ ಕೃತಿಗಳಿಂದ ಗಳಿಸಿದ ಹಿರಿಮೆ ಪ್ರಖರವಾಗಿತ್ತು. ಪರ್ವತೋಪಮವಾದ ಪ್ರತಿಭೆಯ ಮೂವರು ಮಹಾಕವಿಗಳು ನಾಡಿನಲ್ಲಿ ಬೆಳಗಿದರು. ಮಹಾಕಾವ್ಯಗಳ ಕಾಲ ಮುಗಿದುಹೋಯಿತು ಎಂಬಂತಿದ್ದ ಸಮಯದಲ್ಲಿ ಒಂದು ಅದ್ಭುತ ಮಹಾಕಾವ್ಯ ಸೃಷ್ಟಿಯಾಯಿತು. ಸಂಕೀರ್ಣವಾದ ಮಾನವ ಜೀವಿತದ ಸಾವಿರ ಮುಖಗಳನ್ನು ಅತ್ಯಂತ ಭಾವತೀವ್ರತೆಯಿಂದ ಜಾನಪದ ಸತ್ವದಿಂದ ಚಿತ್ರಿಸಿ ಹಾಡಿದ ಕವಿಯೊಬ್ಬರು ಮಹಾಕವಿಗೆ ಸಮಾನರಾದರು. ಹರಿಸರ್ವೋತ್ತಮತ್ವದ ಆಧ್ಯಾತ್ಮಿಕ ದೃಷ್ಟಿಯ ಮತ್ತೊಬ್ಬ ಕವಿ ಮತ್ತೊಂದು ಕಿರು ಮಹಾಕಾವ್ಯವನ್ನೇ ರಚಿಸಿದರು. ಈ ಮೂವರಿಗೆ ಕಿಂಚಿನ್ನೂನವೆಂಬಂತೆ ಅನೇಕ ಕವಿಗಳು ಆಸಕ್ತರಾದ ಓದುಗರಿಗೆ ಹೃದಯ ತುಂಬುವ ಕವಿತೆಗಳನ್ನು ರಚಿಸಿದರು. ನವ್ಯ ಕಾವ್ಯವೆಂಬ ಹೊಸ ರಚನೆಗಳನ್ನು ರಚಿಸಿ ಮತ್ತೆ ಇಬ್ಬರು ಕವಿವರ್ಯರು ಇಂಗ್ಲೆಂಡ್ ಅಮೆರಿಕಗಳ ಹೊಸಕಾವ್ಯವನ್ನು ಅನುಸರಿಸಿ ಕನ್ನಡ ಕಾವ್ಯ ರಚನೆಗೆ ಹೊಸ ಭಾಷೆಯನ್ನು ಹೊಂದಿಸಿದರು. ಕ್ರಮೇಣ ನವ್ಯತೆ ಮಾಯವಾಗಿ ಕೆಲವು ಬದಲಾವಣೆಗಳೊಡನೆ ನವೋದಯದ ಪ್ರಭಾವ ಮತ್ತೂ ಪ್ರಖರವಾಗುತ್ತಾ ಇದೆ. ಇಂದು ರಸಿಕರ ಮನಸ್ಸನ್ನು ಮುದಗೊಳಿಸುವ ಕಾವ್ಯರಾಶಿ ರಚಿತವಾಗುತ್ತಲೆ ಇದೆ. ಸ್ತ್ರೀಯರು ಕೂಡ ಕೆಲವು ಉತ್ತಮ ಕವನಸಂಕಲನಗಳನ್ನು ತಂದಿದ್ದಾರೆ.ಕಾವ್ಯ ಕ್ಷೇತ್ರದಷ್ಟೇ ಪ್ರಭಾವವುಳ್ಳ ಕತೆ-ಕಾದಂಬರಿಗಳ ವಿಭಾಗವೂ ಅತ್ಯಂತ ಜೀವಂತವಾದ ಪುಸ್ತಕಗಳಿಂದ ಅಲಂಕೃತವಾಗಿದೆ. ಕನ್ನಡದ ಆಸ್ತಿಯಾದ ಸಣ್ಣ ಕತೆಗಾರರಿಂದ ಸಾವಿರ ಪುಟಗಳ ಕಾದಂಬರಿಕಾರರವರೆಗೆ ಪ್ರಭಾವಿತರಾದ ಹತ್ತಾರು ಜನ ಕಥಾಸಾಹಿತ್ಯ ನಿರ್ಮಾಪಕರು ಈಗಲೂ ಇದ್ದಾರೆ. ಪ್ರಗತಿಶೀಲವೆಂಬ ಹೆಸರಿನ ಚಳವಳಿಯಿಂದ ಪ್ರಭಾವಿತರಾದ ಕೆಲವರು ನೂರಾರು ಕಾದಂಬರಿಗಳನ್ನು ರಚಿಸಿದ್ದಾರೆ. ಆ ದಾರಿಯಲ್ಲಿಯೇ ನಂಬಿಕೆ ಇದ್ದರೂ ಚಾರಿತ್ರಿಕ ಕಾದಂಬರಿಗಳನ್ನು ರಚಿಸಿದ ಹಿರಿಯರು, ದಲಿತರ ಉದ್ಧಾರಕ್ಕೆಂದೋ ಜನತೆಯ ಬಾಳಿನ ಸೊಗಸಿಗೆಂದೋ ರಚಿಸಿದ ಅನೇಕ ಕಾದಂಬರಿಗಳು ಪ್ರಕಟವಾಗಿವೆ. ಹತ್ತು ಜನ ಕಾದಂಬರಿಕಾರರು ವಿಶ್ವಕಾವ್ಯದ ರಚನೆಯ ಮಟ್ಟಕ್ಕೆ ಬರುವ ಕಾದಂಬರಿಗಳನ್ನು ರಚಿಸಿದ್ದಾರೆ. ಇವರೆಲ್ಲರ ಕಾದಂಬರಿಗಳು ಭಾರತದ ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಪ್ರಗತಿಶೀಲ ಆಂದೋಳನವು ಬಹು ದಟ್ಟವಾದ ಪರಿಣಾಮವನ್ನು ಬೀರಿತು.ನಾಟಕ ಪ್ರಕಾರವೂ ಅಷ್ಟೇ! ಮೈಸೂರರಸರ ಚರಿತ್ರೆಗೆ ಸಂಬಂಧಪಟ್ಟ ನಾಟಕಗಳು, ಸಮಾಜದ ಸಂಸಾರದ ಸಿಹಿಕಹಿ ಪ್ರಸಂಗಗಳು, ವ್ಯಂಗ್ಯಚಿತ್ರಣದ ಕನ್ನಡ-ಇಂಗ್ಲಿಷ್ ಮಿಶ್ರಭಾಷೆಯ ಹಾಸ್ಯನಾಟಕಗಳು, ಸ್ವಾತಂತ್ರ್ಯ ಹೋರಾಟದ ಸಮಯದ ವಿವಿಧ ಚಿತ್ರಗಳುಳ್ಳ ಹೃದಯವಿದ್ರಾವಕ ನಾಟಕಗಳು, ಶಾಲಾಕಾಲೇಜುಗಳ ವಾರ್ಷಿಕ ಸಮಾರಂಭಗಳಿಗೆ ಅನುಕೂಲವಾಗಿರುವ ಏಕಾಂಕಗಳು ಇತ್ಯಾದಿ ಅನೇಕ ನಾಟಕಗಳಿವೆ. ಹೆಗ್ಗೋಡಿನ ನಾಟಕ ಪ್ರದರ್ಶನ ಮತ್ತು ಅಭಿನಯ ಶಿಕ್ಷಣವು ಬೇರೊಂದು ರೀತಿಯ ಚಟುವಟಿಕೆಯಲ್ಲಿ ತೊಡಗಿದೆ. ಹೊಸ ನಾಟಕಗಳ ಪ್ರದರ್ಶನಕ್ಕೆಂದು ಬೆಂಗಳೂರಿನಲ್ಲಿಯ ರಂಗಶಂಕರವೆಂಬ ಪ್ರಾಯೋಗಿಕ ನಾಟಕಮಂದಿರವೇ ಸಿದ್ಧವಾಗಿದೆ.

ಈ ಎಲ್ಲ ಸಾಹಿತ್ಯ ರಚನೆಯನ್ನು ಬೇರೊಂದು ಮಗ್ಗುಲಿನಿಂದಲೂ ಪರಿಶೀಲಿಸಬಹುದಾಗಿದೆ. ಅದು ಒಂದು ರಸಯಾತ್ರೆಯೇ!

ನವೋದಯದ ಪರಿಣಾಮವಾಗಿ ಇಂಗ್ಲೆಂಡನ್ನೂ ಇಂಗ್ಲಿಷ್ ಭಾಷೆಯನ್ನೂ ಸಾಹಿತ್ಯವನ್ನೂ ಪ್ರೀತಿಯಿಂದ ಕಂಡು ಭಾರತೀಯ ಭಾಷಾ ಸಾಹಿತ್ಯಗಳನ್ನು ಒಂದು ಅವಗಣನೆಯ ದೃಷ್ಟಿಯಿಂದ ಕಾಣುವ ವ್ಯವಸ್ಥೆಯುಂಟಾಯಿತು. ಒಬ್ಬ ಕವಿ ಹಾಡಿದನು ಹೀಗೆಬೀಸುತಿದೆ ಪಶ್ಚಿಮದ ರಸಪೂರ್ಣ ಹೊಸಗಾಳಿ

ಭಾರತದ ಬಣಗು ಬಾಳ್ಮರವನಲುಗಾಡಿಈ ಬಗೆಯ ಭಾವನೆ ಕೆಲವರಲ್ಲಿ ಬೇರೂರಿತು. ಇಂಥ ಮಾತಿನಿಂದ ಇಂಗ್ಲೆಂಡನ್ನು ತುಂಬ ಎತ್ತರದಲ್ಲಿ ನಿಲ್ಲಿಸಿದಂತೆ ಕಾಣುತ್ತದೆ. ಇದಕ್ಕೆ ಕಾರಣವಿಲ್ಲದಿಲ್ಲ. ಭಾರತದಲ್ಲಿ ಚೆನ್ನಾಗಿ ಬೇರೂರಿದ್ದ ವಿವಿಧ ಧರ್ಮಗಳ, ಜಾತಿಕೋಮುಗಳ, ಹೆಣ್ಣನ್ನು ಅವಗಣಿಸುತ್ತಿದ್ದ ಭಾವನೆಗಳ ಪರಿಣಾಮವಾಗಿ ವರ್ಗಗಳೇರ್ಪಟ್ಟು ಶೋಷಿತವರ್ಗಗಳು ಹುಟ್ಟಿಕೊಂಡಿದ್ದವು. ಇಂಗ್ಲೆಂಡಿನ ಸರ್ವಾಧಿಕಾರದ ಆಡಳಿತದಲ್ಲಿ ಶೋಷಿತವರ್ಗಗಳೆಲ್ಲ ಎದ್ದು ನಿಂತು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನಗಳನ್ನು ಕಾಣಬಹುದು ಎಂಬ ಆಸೆಯನ್ನು ಹೊಂದಿದ್ದು ಆಶ್ಚರ್ಯವಲ್ಲ. ಅದನ್ನು ಕೆಲವರು ಕವಿಗಳು ಮೆಚ್ಚಿಕೊಂಡರು. ಅಂಥ ಅವಕಾಶವನ್ನು ಹೊಗಳಿ ಕವನಗಳನ್ನು ರಚಿಸಿರಬಹುದು.

ಸ್ವಾತಂತ್ರ್ಯದ ಹೋರಾಟದಲ್ಲಿ ಡಾ. ಅಂಬೇಡ್ಕರ್ ಅವರೂ ಅವರ ಅನುಯಾಯಿಗಳೂ ಸ್ವಾತಂತ್ರ್ಯದ ಗಳಿಕೆಗಿಂತ ಸಮಾಜದಲ್ಲಿ ಶೋಷಿತವರ್ಗಗಳಿಗೆ ಸಮಾನತೆಯನ್ನು ತರುವುದು ಅತ್ಯಗತ್ಯವಲ್ಲವೆ ಎಂಬ ಪ್ರಶ್ನೆಯನ್ನು ಎತ್ತಿಹಿಡಿದರು. ನವೋದಯದ ಕಾದಂಬರಿಗಳಲ್ಲಿಯೂ ಕತೆಗಳಲ್ಲಿಯೂ ಈ ಹೋರಾಟದ ಚಿತ್ರಗಳಿವೆ. ಇದೇನೂ ವಿರೋಧವಿಲ್ಲದ ಹೋರಾಟವಲ್ಲ. ಇಂಥ ಹೋರಾಟಕ್ಕೆ ಅಡ್ಡಿಯಾದ ಪ್ರಯತ್ನಗಳೂ ಮೂಡಿದವು. ಅಂಬೇಡ್ಕರ್ ಅವರ ವಾದವನ್ನು ವಿರೋಧಿಸಿ ಭಾರತದ ವೈಭವದ ಸಂಸ್ಕೃತಿಯ ಚರಿತ್ರೆಯನ್ನು ಎತ್ತಿ ಹಿಡಿದರು ಕೆಲವರು ಸಂಪ್ರದಾಯವಾದಿಗಳಾದ ವಿದ್ವಾಂಸರು. ಮಹಮ್ಮದೀಯರ ರಾಜ್ಯದ ಆಡಳಿತವನ್ನೂ ಮೆಚ್ಚಿ ಗ್ರಂಥ ರಚನೆ ಮಾಡಿದವರಿದ್ದಾರೆ. ಟಿಪ್ಪುವನ್ನು ಮೆಚ್ಚಿಕೊಂಡ ಕಥೆಗಳಿವೆ.ಸ್ವಾತಂತ್ರ್ಯಾನಂತರದ ಕಥೆಯೇ ಬೇರೆ. ಹಿಂದೆ ಯಾರುಯಾರು ಶೋಷಿತರಾಗಿದ್ದರೋ ಅವರೆಲ್ಲ ತಲೆ ಎತ್ತಿ ನಿಲ್ಲುವ ಅವಕಾಶವುಂಟಾಯಿತು. ದಲಿತ, ಬಂಡಾಯ, ಮಹಿಳಾ ಉದ್ಧಾರ, ಮತಾಂತರ ವಿರೋಧ ಇತ್ಯಾದಿ ವಸ್ತುಗಳುಳ್ಳ ಅನೇಕ ಕಾದಂಬರಿಗಳೂ ಕತೆಗಳೂ ಇವೆ. ಕೆಲವರು ಲೇಖಕರು ಉಪಸಂಸ್ಕೃತಿಗಳ ಹೆಸರಿನಲ್ಲಿ ಕೆಳವರ್ಗದವರ ಸಾಮಾಜಿಕ ವ್ಯವಹಾರಗಳನ್ನು ಅಭ್ಯಾಸ ಮಾಡಿ ಅವುಗಳ ಹಿರಿಮೆಯನ್ನು ಚಿತ್ರಿಸಿದ್ದೂ ಉಂಟು.ದಲಿತ ಸಾಹಿತ್ಯದ ಬಗ್ಗೆ ತುಂಬ ಚರ್ಚೆಯಾಯಿತು. ದಲಿತರೇ ಸ್ವಂತವಾಗಿ ಅವರ ಬಗ್ಗೆ ಬರೆದರೆ ಅದು ನಿಜವಾದ ದಲಿತ ಸಾಹಿತ್ಯ. ಬೇರೆಯವರು ಅಂಥ ಸಾಹಿತ್ಯವನ್ನು ಬರೆದರೆ ಅದು ದಲಿತಪರ ಸಾಹಿತ್ಯ ಎಂಬ ಭೇದವನ್ನು ಮಾಡಿದರು. ಇದನ್ನೂ ಕೆಲವರು ಒಪ್ಪಿದರು. ಈ ಬಗೆಯ ಎರಡು ವಿಭಾಗಗಳಲ್ಲಿಯೂ ಉತ್ತಮ ಕೃತಿಗಳು ರಚಿತವಾಗಿವೆ. ವಸಾಹತುಶಾಹಿ, ಪುರೋಹಿತಶಾಹಿ ಮುಂತಾದ ಶಬ್ದಗಳು ಆಯಾವರ್ಗದವರು ರಚಿಸಿದ ಸಾಹಿತ್ಯಕ್ಕೆ ಅನ್ವಯಿಸುತ್ತದೆ. ಇಂಥ ಸಾಹಿತ್ಯವೂ ಅಪಾರವಾಗಿದೆ.ಹೀಗೆ ಅಧಿಕಾಧಿಕವಾಗಿ ಸಾಹಿತ್ಯ ರಚನೆ ಹೆಚ್ಚಿದ ಮೇಲೆ ಅದನ್ನು ಓದುವವರೂ ಹೆಚ್ಚಿದರು. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಪ್ರೀತಿ ಹೆಚ್ಚಾಗಿ ಪಠ್ಯಗಳ ಜೊತೆಗೆ ಪಠ್ಯೇತರ ಗ್ರಂಥಗಳನ್ನು ವಾಚನ ಮಾಡುವುದು ಹೆಚ್ಚಾಯಿತು. ಯುವಕರಲ್ಲಿ ಹೋರಾಟದ ಬುದ್ಧಿ ಬೆಳೆಯಿತು. ವಾರ್ತಾ ಪತ್ರಿಕೆಗಳು ಹೆಚ್ಚಾದವು. ಗ್ರಂಥ ಪ್ರಕಟನೆ ಅಧಿಕವಾಯಿತು. ೧೯೪೭ರ ತನಕ ಮುದ್ರಣಗೊಂಡ ಎಲ್ಲ ಹೊಸ ಪುಸ್ತಕಗಳನ್ನು ಓದುವುದು ಸಾಧ್ಯವಾಗಿತ್ತು. ಅದಾದ ಬಳಿಕ ಗ್ರಂಥ ಪ್ರಕಟನೆ ಎಷ್ಟು ಹೆಚ್ಚಾಗಿದೆ ಎಂದರೆ ಮುದ್ರಣಗೊಂಡ ಎಲ್ಲ ಗ್ರಂಥಗಳನ್ನು ನೋಡುವುದು ಕೂಡ ಕಷ್ಟವಾಗಿದೆ. ಈಗ ವಾರ್ಷಿಕವಾಗಿ ಸುಮಾರು ಮೂರು ಸಾವಿರ ಪುಸ್ತಕಗಳು ಅಚ್ಚಾಗುತ್ತಿವೆಯಂತೆ. ಹೀಗಾಗಿ ಈ ಕಾಲದ ಸಾಹಿತ್ಯರಾಶಿ ಕನ್ನಡಕ್ಕೆ ಹೊಸತನವನ್ನು ನೀಡಿದೆ. ಅದು ವೈಭವಪೂರ್ಣವಾಗಿ ಬೆಳೆಯುತ್ತಿದೆ.ಈ ಕಾಲದಲ್ಲಿ ಬೆಳೆದ ವಿಮರ್ಶೆಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿರುವ ಪುಸ್ತಕ ವಿಮರ್ಶೆಯ ಮಾರ್ಗವೇ ಪ್ರಧಾನ ಮಾರ್ಗವಾಗಿದೆ. ರಾಜಕೀಯ ತತ್ವಗಳನ್ನು, ಮಾನವಿಕ ಶಾಸ್ತ್ರಗಳನ್ನು, ಮನಶ್ಶಾಸ್ತ್ರವನ್ನು ತಳಹದಿಯಾಗಿ ಇಟ್ಟುಕೊಂಡು ವಿಮರ್ಶೆ ಮಾಡಿ ಕೃತಿಗಳ ಆಲೋಚನೆಗಳಿಗೆ ಬೆಲೆ ಕಟ್ಟುತ್ತಾರೆ.ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಹಿತ್ಯವನ್ನು ರಚಿಸಿರುವ ಮಹಿಳಾ ವರ್ಗ ತುಂಬ ದೊಡ್ಡದಾಗಿದೆ. ಸುಮಾರು ೭೫ ಜನ ಉತ್ತಮ ಲೇಖಕಿಯರಿದ್ದಾರೆ. ಅವರೆಲ್ಲರ ಬಗ್ಗೆ ಒಂದು ಪರಿಚಯಗ್ರಂಥವೇ ಇದೆ. ಇವರಲ್ಲಿ ಕೆಲವರು ಹಿರಿಯ ಕವಿಗಳೂ ಕತೆಗಾರರೂ ಕಾದಂಬರಿಕಾರರೂ ವಿಮರ್ಶಕರೂ ಇದ್ದಾರೆ.ವಿಶ್ವವಿದ್ಯಾನಿಲಯಗಳಲ್ಲಿ ತೌಲನಿಕ ವ್ಯಾಸಂಗಕ್ಕೆ ಹೆಚ್ಚು ಗಮನವನ್ನು ಕೊಡಲಾಗುತ್ತಿದೆ. ಜಾನಪದ ಸಾಹಿತ್ಯ ಅಥವಾ ಮೌಖಿಕ ಸಾಹಿತ್ಯದ ಸಂಗ್ರಹ ಪ್ರಕಟಣೆ, ವ್ಯಾಸಂಗ, ವಿಮರ್ಶೆ ಇವೂ ಅಧಿಕವಾಗಿವೆ. ಅಪಾರ ವಿಷಯ ಸಂಗ್ರಹವಾಗಿದೆ. ಜಾನಪದ ಸಾಹಿತ್ಯದ ಬಗ್ಗೆ ಗಂಭೀರವಾದ ಅನೇಕ ಸಂಶೋಧನೆಗಳಾಗಿವೆ. ಇವೂ ನವೋದಯದ ಪರಿಣಾಮವೇ!ಕನ್ನಡದ ಪುಸ್ತಕ ಪ್ರಕಟನೆ ಅಪಾರ ಅಭಿವೃದ್ದಿಯಾಗಿದೆ. ಪುಸ್ತಕ ಪ್ರಕಟನೆಯ ಕಲೆ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಬೃಹತ್ತಾದ ಪ್ರಕಟನೆಯೂ ಬೃಹತ್ತಾದ ಪುಸ್ತಕ ವ್ಯಾಪಾರವೂ ನಡೆಯುತ್ತಿವೆ. ಪುಸ್ತಕ ಪ್ರಕಾಶನ ಈಗ ಲಾಭದಾಯಕ ವೃತ್ತಿಯಾಗಿದೆ.ಒಟ್ಟಿನಲ್ಲಿ ಈ ನೂರು ವರ್ಷಗಳಲ್ಲಿ ಆದ ಕನ್ನಡ ಸಾಹಿತ್ಯದ ಕೃಷಿ ಹಿಂದೆ ಯಾವ ಶತಮಾನದಲ್ಲಿಯೂ ಆಗಿರಲಿಲ್ಲ. ಕ್ರಿ.ಶ. ಹತ್ತನೆಯ ಶತಮಾನವು ಹೇಗೆ ಹಳಗನ್ನಡದ ಸುವರ್ಣಯುಗವಾಯಿತೋ ಹಾಗೆಯೇ ಈ ಇಪ್ಪತ್ತನೆಯ ಶತಮಾನವೂ ಕೂಡ ಹೊಸಗನ್ನಡದ ಸುವರ್ಣಯುಗವಾಗಿ ಪರಿಣಮಿಸಿದೆ. ಮುಂದೆ ಕನ್ನಡದ ಸಾಹಿತ್ಯ ಚರಿತ್ರೆಯನ್ನು ಬರೆಯುವಾಗ ವಿದ್ವಾಂಸರು ಈ ವಿವರವನ್ನು ಖಂಡಿತವಾಗಿ ದಾಖಲಿಸುತ್ತಾರೆ. ಈ ಶತಮಾನದ ಕನ್ನಡದ ಬೆಳಸನ್ನು ಕಂಡು ಇತರ ಭಾಷಾಪ್ರಾಂತದವರು ಕರ್ನಾಟಕವನ್ನು ಕುರಿತು ಕುರುಬುವಷ್ಟು ಸಾಹಿತ್ಯ ವರ್ಣರಂಜಿತವಾಗಿದೆ.ನಾನು ಮಾತನಾಡುತ್ತಿರುವ ಈ ದಶಮಾನದಲ್ಲಿ ಕೂಡ ಕನ್ನಡದಲ್ಲಿ ಬರುತ್ತಿರುವ ಲೇಖನದ ಭಾಷೆಯಲ್ಲಿ ಬೇರೊಂದು ಬಗೆಯ ನವೀನತೆ ಕಾಣಬರುತ್ತಿದೆ. ವಾರ್ತಾ ಪತ್ರಿಕೆಗಳಲ್ಲಿ ಈಗ ಬರುವ ಯುವ ಲೇಖಕರು ಬಳಸುವ ಭಾಷೆಯಲ್ಲಿ ಹತ್ತು ವರ್ಷಗಳ ಹಿಂದಿನ ಭಾಷೆಗಿಂತ ಪೂರ್ಣವಾಗಿ ಬದಲಾದ ರೀತಿ ಎದ್ದು ಕಾಣುತ್ತಿದೆ. ಅದರಲ್ಲಿ ನಿಜವಾಗಿಯೂ ಒಂದು ಹೊಸ ಆಕರ್ಷಕ ಶೈಲಿ ರೂಪುಗೊಳ್ಳುತ್ತಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ವಿಶೇಷವಾಗಿ ಕಲಿಯದಿದ್ದರೂ ಕನ್ನಡದಲ್ಲಿ ಲೇಖನಗಳನ್ನು ರಚಿಸುವವರನ್ನೂ ಕವನ ಕಟ್ಟಿಕೊಡುವವರನ್ನೂ ನಾನು ಕಂಡಿದ್ದೇನೆ. ಅವರು ವೈದ್ಯರು, ತಂತ್ರಜ್ಞಾನಿಗಳು, ವಿಜ್ಞಾನಿಗಳು.... ಹೀಗೆ. ಅವರಿಗೆ ಉತ್ಸಾಹವಿದೆ, ದಟ್ಟವಾದ ಅರಿವಿಲ್ಲ. ಅಂಥವರ ಬರಹದಲ್ಲಿ ಸಾಮರ್ಥ್ಯ ಹೆಚ್ಚಬೇಕಾದರೆ ಹಳಗನ್ನಡದ ಹಿನ್ನೆಲೆ ಸ್ವಲ್ಪ ಇರಬೇಕು. ಇಂಥವರು ಸ್ವಲ್ಪ ಶ್ರಮಪಟ್ಟರೆ ಅವರೇ ಸ್ವಂತವಾಗಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮಾರ್ಗವಿದೆ. ಅದು ಕುಮಾರವ್ಯಾಸನನ್ನೂ ವಚನಸಾಹಿತ್ಯವನ್ನೂ ಪ್ರತಿನಿತ್ಯ ಸ್ವಲ್ಪ ಸ್ವಲ್ಪ ಓದುವುದು, ಇಷ್ಟೆ! ಹೀಗೆ ಅವರೆಲ್ಲ ಬೆಳೆಯಲಿ ಎಂದು ಹಾರೈಸುತ್ತೇನೆ.ಕೆಲವರು ಮಹಿಳೆಯರ ಬರಹಗಳಲ್ಲಿ, ಇದು ಪುರುಷರು ಬಳಸಲಾಗದ ಶೈಲಿ- ಎಂಬಷ್ಟು ವ್ಯತ್ಯಾಸವನ್ನು ನಾನು ಪರಿಗಣಿಸಿದ್ದೇನೆ. ನನ್ನ ಕೆಲವು ಮುನ್ನುಡಿಗಳಲ್ಲಿ ಈ ಮಾತನ್ನು ಹೇಳಿದ್ದೇನೆ ಕೂಡ. ಪ್ರಸಿದ್ಧರಾದ ಕೆಲವರು ಮಹಿಳೆಯರು ಅವರದೇ ಆದ ಶಬ್ದ ಸಮುದಾಯಗಳನ್ನು ರೂಪಿಸಿಕೊಂಡಿದ್ದಾರೆ. ಇದರಲ್ಲಿಯೂ ಒಂದು ಹೊಸತನವಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಶತಮಾನದ ಕೃಷಿಯಿಂದ ಕನ್ನಡದ ನೆಲ ಎಷ್ಟು ಫಲವತ್ತಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯಬರುತ್ತಿದೆ. ಮುಂದೆ ಬರುವ ಸಾಹಿತ್ಯಕ್ಕೆ ಬೇಕಾದ ಎಲ್ಲ ಹಿನ್ನೆಲೆಯನ್ನೂ ಈ ಶತಮಾನ ಸೃಷ್ಟಿಸಿದೆ. ನಾವಿನ್ನು ಹೊಸದಕ್ಕೆ ದಾರಿ ಮಾಡೋಣ. ಬರುವುದನ್ನು ಪ್ರೀತಿಯಿಂದ ನಿರೀಕ್ಷಿಸೋಣ, ಎಂಬ ಆಲೋಚನೆ ನನಗೆ ಹೊಳೆದಿದೆ.ನಾನು ಕನ್ನಡ ಭಾಷೆಯ ವ್ಯಾಸಂಗದಲ್ಲಿ ನಿರತನಾಗಿರುವವನು. ಕನ್ನಡವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕೆಂಬ ಆಸಕ್ತಿಯುಳ್ಳ ವಿದ್ಯಾರ್ಥಿ. ಕನ್ನಡವನ್ನು ಪ್ರೀತಿಸುವ ಜನಸಮುದಾಯದಲ್ಲಿ ನಾನೂ ಒಬ್ಬ. ಆದುದರಿಂದ ಆ ಭಾಷೆಯಲ್ಲಿ ಈಗ ಏನಾಗುತ್ತಿದೆ ಎಂಬುದರ ಕಡೆಗೆ ಈ ಬೃಹತ್ಸಭೆಯ ದೃಷ್ಟಿಯನ್ನು ಸೆಳೆಯಲು ಬಯಸುತ್ತೇನೆ. ಈಗಾಗಲೇ ಹೇಳಿರುವಂತೆ ಕನ್ನಡದ ಶಬ್ದಸಂಪತ್ತು ವೃದ್ಧಿ ಹೊಂದಿದೆ ಎಂಬುದು ನಿಜ. ಆದರೆ ಬೆಂಗಳೂರು ಮತ್ತು ಇತರ ಬೃಹನ್ನಗರಗಳಲ್ಲಿ ಮಧ್ಯಮ ವರ್ಗದ ಜನರು ಕನ್ನಡ ಭಾಷೆಯನ್ನು ಈಗ ಉಪಯೋಗಿಸುತ್ತಿರುವ ರೀತಿಯಲ್ಲಿ ಕನ್ನಡಕ್ಕೆ ಒಂದು ಅಪಾಯ ಕಾದಿದೆ. ನಾಗರಿಕರ ಆಡುಮಾತಿನಲ್ಲಿ ಇಂಗ್ಲಿಷ್ ಶಬ್ದಗಳ ಮಿಶ್ರಣದ ಪ್ರಮಾಣದಲ್ಲಿ ಏರುಪೇರಾಗಿದೆ. ಇದನ್ನು ಲೆಕ್ಕ ಮಾಡಿದರೆ ಶೇಕಡ ೬೦ರಷ್ಟು ಇಂಗ್ಲಿಷ್ ಶಬ್ದಗಳು ಕಾಣಬರುತ್ತಿವೆ. ಅವರು ಒಂದೇ ಒಂದು ವಾಕ್ಯವನ್ನೂ ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡುವುದಿಲ್ಲ. ಹಾಗೆ ಮಾತನಾಡಲು ಅವರಿಗೆ ಕನ್ನಡದ ಸಾಮರ್ಥ್ಯವಿದ್ದರೂ ಆ ಸಾಮರ್ಥ್ಯವನ್ನು ಉಪಯೋಗಿಸುತ್ತಿಲ್ಲ. ಇದೇ ನಿಜವಾದ ಅಪಾಯ. ಅವರು ತಾವು ಆಡುತ್ತಿರುವ ಮಾತಿನ ರೀತಿಯಲ್ಲಿರುವ ಅಪಾಯವನ್ನೂ ತಿಳಿಯದೆ ಇದ್ದಾರೆ. ಸಂಪೂರ್ಣವಾಗಿ ಸಂವಾದವನ್ನೆಲ್ಲ ಇಂಗ್ಲಿಷಿನಲ್ಲಿಯೇ ಮಾಡುವ ಸಮರ್ಥರ ರೀತಿಯೇ ಬೇರೆ. ಅವರು ಇಂಗ್ಲಿಷ್ ಭಾಷೆಯಲ್ಲಿ ಪರಿಣತರು. ಅವರಲ್ಲಿ ಕೆಲವರು ಕನ್ನಡದಲ್ಲಿಯೂ ಅಷ್ಟೇ ಪರಿಣತರು. ಅಂಥವರು ಸಂಪೂರ್ಣವಾಗಿ ಕನ್ನಡವನ್ನೇ ಉಪಯೋಗಿಸುತ್ತಾರೆ. ಇಂಥ ಹಿರಿಯರನ್ನು ಕುರಿತು ನಾನು ಮಾತನಾಡುತ್ತಿಲ್ಲ. ನನ್ನ ದೃಷ್ಟಿ ಸಾಮಾನ್ಯ ವಿದ್ಯಾರ್ಥಿಗಳು, ಅವರಿಗೆ ಶಾಲಾ ಕಾಲೇಜುಗಳಲ್ಲಿ ಬೋಧಿಸುತ್ತಿರುವ ಅವರವರ ವಿದ್ಯಾಕ್ಷೇತ್ರಗಳಲ್ಲಿ ಸಮರ್ಥರಾದ ಉಪಾಧ್ಯಾಯವರ್ಗ- ಇವರ ಸಂವಾದವನ್ನು ಪರಿಶೀಲಿಸುವಾಗ ಮತ್ತು ಬೀದಿಯಲ್ಲಿ ಓಡಾಡುವ ಇತರ ಸಮಾಜದ ಮಧ್ಯಮ ವರ್ಗದ ಜನರು- ಇವರ ಭಾಷೆಯನ್ನು ಕುರಿತದ್ದು.

ಬೆಂಗಳೂರಿಗೆ ಬಂದ ಗ್ರಾಮೀಣ ಪ್ರದೇಶದ ಜನರಿಗೆ ಇವರ ಮಾತನ್ನು ಕೇಳಿ ದಿಗ್ಭ್ರಮೆಯಾಗುತ್ತದೆ. ಬೆಂಗಳೂರಿನಲ್ಲಿ ಕನ್ನಡ ಸಾಯುತ್ತಿದೆ ಎಂದು ಹೇಳುತ್ತಾರೆ. ಹಾಗೆ ಹೇಳುವವರಿಗೆ ಗ್ರಾಮೀಣ ಪ್ರದೇಶದಲ್ಲಿ ಅದು ಬದುಕಿ ಉಳಿಯುತ್ತದೆ ಎಂಬ ನಂಬಿಕೆಯಿದೆ. ಕನ್ನಡದ ರಾಜಧಾನಿಯಲ್ಲಿ ಕನ್ನಡ ಸತ್ತರೆ ಗ್ರಾಮೀಣ ಪ್ರದೇಶದಲ್ಲಿ ಉಳಿಯುತ್ತದೆಯೇ?ಇಂಥ ವಿಪರ್ಯಾಸವನ್ನು ಗಮನಿಸುತ್ತಿರುವ ನನಗೆ ಕೆಲವು ವಿವರಗಳನ್ನು ಇಂಥ ಸಭೆಯ ಮುಂದೆ ಹೇಳಲೇಬೇಕೆಂಬ ಅಪೇಕ್ಷೆಯುಂಟಾಗಿದೆ.ಈಗಿನ ನಾವು ಬದುಕಿರುವ ಈ ಕಾಲದಲ್ಲಿ ಕನ್ನಡ ಭಾಷೆಯು ತನ್ನ ಮತ್ತೊಂದು ಹೊಸತನವನ್ನು ಪಡೆಯುತ್ತಾ ಇದೆ. ಹಿಂದೆ ಕನ್ನಡದ ಆಡುಮಾತಿಗೆ ಸಂಸ್ಕೃತ ಶಬ್ದಗಳು ಹೇಗೆ ಸೇರಿಕೊಂಡಿತೋ ಹಾಗೆ ಈಗ ಇಂಗ್ಲಿಷಿನಿಂದ ಸಾವಿರಾರು ಶಬ್ದಗಳು ನಾಗರಿಕ ಜೀವನದಲ್ಲಿ ಸೇರಿಕೊಳ್ಳುತ್ತಾ ಇದೆ. ಇದನ್ನು ತಪ್ಪಿಸುವುದಕ್ಕೆ ಆಗುವುದಿಲ್ಲ. ಹೀಗೆ ನಗರದ ಸಂಕೀರ್ಣ ಜನಸಮುದಾಯದಲ್ಲಿ ಇಂಗ್ಲಿಷಿನ ಮತ್ತಿತರ ಭಾಷೆಗಳ-ಅಧಿಕವಾಗಿ ಹಿಂದಿ ಮತ್ತು ಉರ್ದು ಭಾಷೆಗಳ-ಶಬ್ದಗಳು ಒಗ್ಗಟ್ಟಿನಿಂದ ನುಗ್ಗುತ್ತಿವೆ. ಕಾಲಾನುಕ್ರಮದಲ್ಲಿ ಈ ಶಬ್ದಗಳಲ್ಲಿ ಅನೇಕ ಶಬ್ದಗಳು ಕನ್ನಡಕ್ಕೆ ಎರವಲುಗಳಾಗಿ ಬಂದು ಸೇರಿಕೊಂಡುಬಿಡುತ್ತವೆ. ಆ ಎಲ್ಲಾ ಕನ್ನಡ ಶಬ್ದಗಳು ಹಾಗೆ ಬಳಕೆಗೆ ಬರಬೇಕಾದರೆ ಒಂದಿಪ್ಪತ್ತು ಮೂವತ್ತು ವರ್ಷಗಳು ಬೇಕಾಗುತ್ತವೆ. ಈಗಾಗಲೇ ಹಿಂದಿನ ಅನೇಕ ವರ್ಷಗಳಲ್ಲಿ ನಮ್ಮವೇ ಆದ ಎಷ್ಟೊಂದು ಇಂಗ್ಲಿಷ್ ಶಬ್ದಗಳಿವೆ ನೋಡಿ. ಕಾರು, ಬುಕ್ಕು, ಪೆನ್ನು, ಇಂಕು, ಪೇಪರ್ರು. ಆದರೆ ಈಗ ನುಗ್ಗಲು ಆತುರಪಡುತ್ತಿರುವ ಶಬ್ದಗಳು ಇಂಥ ಶಬ್ದಗಳಲ್ಲ; ಕನ್ನಡದಲ್ಲಿ ಸೊಗಸಾದ ಶಬ್ದಗಳಿರುವಾಗ ಅವುಗಳನ್ನೇ ತಳ್ಳಿ ಕನ್ನಡಕ್ಕೆ ಬರಲು ಪ್ರಯತ್ನಪಡುತ್ತಿರುವ ಶಬ್ದಗಳು. ಉದಾಹರಣೆ: ಚಿಲ್ಲೀಸ್, ರಾಡಿಶ್, ಬೀನ್ಸ್, ಕುಕುಂಬರ್ರು, ಕ್ಯಾಪ್ಸಿಕಮ್ಮು, ನೈಫು, ಆಯಿಲ್ಲು, ಬಟ್ಟರ್ರು, ಪೌಡರ್ರು, ಗ್ರೈಂಡು ಇತ್ಯಾದಿ. ಎಲ್ಲಾ ಅಡಿಗೆ ಮನೆಗೇ ನುಗ್ಗಿಬಿಟ್ಟಿವೆ. ಇದಕ್ಕೆ ಕಾರಣ ದೂರದರ್ಶನದಲ್ಲಿ ‘ಹೊಸರುಚಿ’ಯ ಪ್ರದರ್ಶನ ಮಾಡುವ ಕನ್ನಡ ಮಹಿಳಾಮಣಿಗಳು ಸಂಭಾಷಣೆಯ ಪರಿಣಾಮ. ಎಫ್.ಎಂ. ರೇಡಿಯೋ, ದೂರದರ್ಶನದ ಅನೇಕ ವಾಹಿನಿಗಳ ಪ್ರಭಾವ. ವರ್ತಮಾನ ಪತ್ರಿಕೆಗಳಲ್ಲಿಯೂ ದೂರದರ್ಶನದಲ್ಲಿಯೂ ಆಕಾಶವಾಣಿಯಲ್ಲಿಯೂ ಪ್ರಚಾರವಾಗುವ ಇಂಥ ಪ್ರಯೋಗಗಳನ್ನು ನಿಲ್ಲಿಸಿ ನಮ್ಮಲ್ಲಿ ಪ್ರಚಾರದಲ್ಲಿರುವ ಕನ್ನಡ ಶಬ್ದಗಳನ್ನು ಉಪಯೋಗಿಸುವಂತೆ ಆಯಾ ಕೇಂದ್ರಗಳ ಅಧಿಕಾರಿಗಳು ನಿರ್ದೇಶಿಸಬೇಕು. ಯಾವ ಶಬ್ದ ಬೇಕಾದರೂ ನಿಧಾನವಾಗಿ ತಾನೇ ತಾನಾಗಿ ಬರಲಿ. ಆದರೆ ನಾವೇ ಅವುಗಳನ್ನು ಅನವಶ್ಯಕವಾಗಿ ಆಮದು ಮಾಡಿಕೊಳ್ಳಬಾರದು. ಹಾಗೆ ಮಾಡಿದರೆ ನಮ್ಮ ಸ್ವಂತ ಶಬ್ದಸಂಪತ್ತು ಮಾಯವಾಗಿಬಿಡುತ್ತದೆ. ನಾವು ಅವುಗಳಿಲ್ಲದೆ ಕನ್ನಡ ಶಬ್ದದರಿದ್ರರಾಗಿಬಿಡುತ್ತೇವೆ. ಸಮಾಜದ ಹಿರಿಯರು, ವಿದ್ಯಾವಂತ ಮಹಿಳೆಯರು, ಸಾಮಾಜಿಕ ಸಂಸ್ಥೆಗಳ ಕಾರ್ಯಕರ್ತರು, ವಾರ್ತಾಪತ್ರಿಕೆಗಳ ಪತ್ರಕರ್ತರು, ಕನ್ನಡ ಚಳವಳಿಯ ನಾಯಕರು ಇವರೆಲ್ಲರಿಗೂ ಈ ಬಗ್ಗೆ ತಿಳಿವಳಿಕೆಯನ್ನು ನೀಡುವ ಒಂದು ಕನ್ನಡ ಆಂದೋಳನ ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅದರ ಜಿಲ್ಲಾ ಮತ್ತು ತಾಲ್ಲೂಕು ಅಂಗಸಂಸ್ಥೆಗಳು, ಮಹಿಳೆಯರ ಕ್ಲಬ್ಬುಗಳು, ಬೆಳಗ್ಗೆ ವಾಯುವಿಹಾರಕ್ಕೆಂದು ಹೋಗುವ ಹಿರಿಯರ ತಂಡ ಇವರೆಲ್ಲ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಕನ್ನಡಕ್ಕೆ ಬರುವ ಶಬ್ದಗಳು ಯಾವ ಭಾಷೆಯಿಂದ ಬೇಕಾದರೂ ಬರಲಿ. ನಿಧಾನವಾಗಿ ಬರಲಿ. ನಾವೇ ಬಲವಂತವಾಗಿ ತುರುಕುವುದು ಬೇಡ. ಅಷ್ಟೆ!ಅನೇಕ ದೂರದರ್ಶನ ವಾಹಿನಿಗಳಲ್ಲಿ- (‘ಅನ್ನದಾತ’, ‘ಕೃಷಿದರ್ಶನ’ ಮುಂತಾದ ಕಾರ್ಯಕ್ರಮಗಳಲ್ಲಿ) ಗ್ರಾಮೀಣ ರೈತರೇ ಮಾತನಾಡುವಾಗ ಎಂಥ ಒಳ್ಳೆಯ ಕನ್ನಡ ಭಾಷೆ ಪ್ರಯೋಗವಾಗುತ್ತದೆ, ನೋಡಿ. ಕನ್ನಡದ ಪ್ರಾದೇಶಿಕ ಸೊಗಡಿನಿಂದ ತುಂಬಿರುವ ಅವರ ಕನ್ನಡ ತುಂಬ ಸ್ವಾರಸ್ಯಕರ. ಅವರ ಮಾತಿನಲ್ಲಿ ಕಾಣುವ ಕನ್ನಡತನವನ್ನು ನಾವು ಮಾದರಿಯಾಗಿ ಉದಾಹರಿಸಬಹುದು.ಕನ್ನಡವು ಸಾಯುತ್ತದೆ ಎಂಬ ಮಾತನ್ನು ಯಾರೂ ಆಡಬಾರದು. ಭಾಷಾಶಾಸ್ತ್ರಿಗಳು ತಯಾರು ಮಾಡಿರುವ ಅಂಕಿ ಅಂಶಗಳಲ್ಲಿ ಪ್ರಪಂಚದ ಪ್ರಾಚೀನ ಪ್ರಸಿದ್ಧ ಸಮೃದ್ಧ ಭಾಷೆಗಳ ಪಟ್ಟಿಯೊಂದು ಇದೆ. ಅಂಥ ಆರು ಸಾವಿರ ಭಾಷೆಗಳ ಪಟ್ಟಿಯಲ್ಲಿ ಕನ್ನಡವು ಮೊದಲ ಮೂವತ್ತು ಭಾಷೆಗಳಲ್ಲಿ ಒಂದಾಗಿದೆ. ಅದು ಸಾಯುವ ಭಾಷೆಯಲ್ಲ. ಚಂದ್ರ ಸೂರ್ಯರಿರುವ ತನಕ ಬಾಳುವ ಬೆಳೆಯುವ ಭಾಷೆ. ಕಾಲಮಾನದಲ್ಲಿ ಇದೂ ಬದಲಾವಣೆಯನ್ನು ಹೊಂದುತ್ತದೆ. ನಾವು ಈ ಬದಲಾವಣೆಯ ಕಾಲದಲ್ಲಿ ಬಾಳುತ್ತಿದ್ದೇವೆ. ನಮ್ಮ ಹೊಸ ಶಬ್ದಸಂಪತ್ತಿನ ಪ್ರಭಾವದಿಂದ ಈಗಿರುವ ಕನ್ನಡ ಶಬ್ದಸಂಪತ್ತನ್ನು ಕಳೆದುಕೊಳ್ಳಬಾರದು ಎಂಬುದನ್ನು ನಾವು ತಿಳಿದಿರಬೇಕು.ಸಾಯುವ ಭಾಷೆ ಎಂಬ ಮಾತು ಬಂದಾಗ ಒಂದು ವಿಶಿಷ್ಟವಾದ ವಿವರವನ್ನು ನಾನು ಈ ಸಭೆಯ ಗಮನಕ್ಕೆ ತರಬೇಕು. ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅಪೂರ್ವವಾದ ಭಾರತದ ಮತ್ತು ಇತರ ದೇಶಗಳ ಮೌಖಿಕ ಭಾಷೆಗಳ ಬಗ್ಗೆ ಒಂದು ಪ್ರಮುಖ ಯೋಜನೆಯನ್ನು ಕೈಗೊಂಡಿದ್ದಾರೆ. ಈಗ ಪ್ರಪಂಚದಲ್ಲಿ ಪ್ರಚಾರದಲ್ಲಿರುವ ಭಾಷೆಗಳ ಸಂಖ್ಯೆ ಸುಮಾರು ೬೫೦೦. ಇವುಗಳಲ್ಲಿ ೩೫೨೪ ಭಾಷೆಗಳು ಈ ಶತಮಾನದ ಕೊನೆಯ ವೇಳೆಗೆ ಸಂಪೂರ್ಣವಾಗಿ ಮಾಯವಾಗಿಬಿಡುತ್ತವೆಂದು ನಿರೀಕ್ಷೆ. ಅವುಗಳಲ್ಲಿ ೧೫೦ ಭಾಷೆಗಳು ಆಗಲೇ ಸಾಯುವ ಸ್ಥಿತಿಯಲ್ಲಿವೆ. ಹೀಗಿರುವ ಎಲ್ಲ ಭಾಷೆಗಳ ಬಗ್ಗೆ database ಅನ್ನು (ಅಂದರೆ ಕಂಪ್ಯೂಟರಿನಲ್ಲಿ ದೊರಕುವ ಅಂಕಿ ಅಂಶಗಳು) ಸಂಗ್ರಹಿಸಿ ಪ್ರಪಂಚದ ಎಲ್ಲರಿಗೂ ದೊರಕುವಂತೆ ಮಾಡುತ್ತಿದ್ದಾರೆ. ಇದಕ್ಕೆ ಹೆಸರು Worlds Oral Literature Project (www.oralliterarure.org).ಈ ಭಾಷಾಶಾಸ್ತ್ರಿಗಳಿಗೆ ಎಲ್ಲ ಭಾಷೆಗಳ ಬಗ್ಗೆ-ಅವು ಪ್ರತಿನಿಧಿಸುವ ಸಂಸ್ಕೃತಿಯ ಬಗ್ಗೆ ಇರುವ ಕಾಳಜಿಗೆ ನಾವು ಕೃತಜ್ಞರಾಗಿರಬೇಕು.ಬೆಂಗಳೂರಿನ ಪ್ರಶ್ನೆಯೇ ಬೇರೆ. ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸುವುದು ಸಾಧ್ಯವೇ? ಬೆಂಗಳೂರಿನಲ್ಲಿರುವ ಕನ್ನಡಿಗರ ಜನಸಂಖ್ಯೆ ಈಗ ಶೇಕಡ ೩೦ಕ್ಕೆ ಇಳಿದಿದೆ. ಇನ್ನೂ ಕಡಮೆಯಾಗುತ್ತಾ ಇದೆ. ತೆಲುಗು, ತಮಿಳು, ಹಿಂದಿ, ಉರ್ದು, ಮರಾಠಿ, ಗುಜರಾತಿ, ಬಂಗಾಳಿ, ಸಿಂಧಿ ಭಾಷೆಗಳು ಸ್ಪರ್ಧೆಯನ್ನು ಹೂಡುತ್ತಿವೆ. ಈ ಎಲ್ಲ ಭಾಷೆಗಳ ನಡುವೆ ಇಂಗ್ಲಿಷಿಗೆ, ಹಿಂದಿಗೆ ಅಧಿಕವಾದ ಸ್ಥಾನ ಸಿಕ್ಕಿದೆ. ಹೀಗಿರುವಾಗ ಈ ಬೃಹನ್ನಗರದಲ್ಲಿ ಕನ್ನಡವನ್ನು ಉಳಿಸಲು ಕೆಲವು ಪ್ರಯತ್ನಗಳನ್ನು ಮಾಡುತ್ತಾ ಇದ್ದಾರೆ. ಉನ್ನತ ಕೈಗಾರಿಕೆಯ ಉದ್ಯಮಗಳಲ್ಲಿರುವ ಕನ್ನಡಿಗರಿಂದ ಕನ್ನಡಿಗರಲ್ಲದವರಿಗೆ ಕನ್ನಡವನ್ನು ಕಲಿಸುವ ಪ್ರಯತ್ನಗಳಾಗುತ್ತಿವೆ. ಇಂಥ ಪ್ರಯತ್ನಗಳಿಂದ ಆಗುವ ಪ್ರತಿಫಲ ಕಡಿಮೆ. ಇದಕ್ಕಿಂತ ಹೆಚ್ಚು ತೀವ್ರವಾದ ಸಾರ್ವಜನಿಕ ಪ್ರಯತ್ನಗಳಾಗಬೇಕು. ಕರ್ನಾಟಕದಲ್ಲಿರುವ ಐಟಿ, ಬಿಟಿ ಮೊದಲಾದ ಉದ್ಯಮಗಳು ಸಾವಿರಾರು ಜನರಿಗೆ ಉದ್ಯೋಗಗಳನ್ನು ನೀಡಿವೆ. ಇವರಲ್ಲಿ ಕನ್ನಡದ ಜನ ಕಡಿಮೆ ಹೊರಗಿನವರು ಅಧಿಕ. ಹೀಗೆ ಹೊರಗಿನಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಉದ್ಯೋಗಿಗಳು ಕನ್ನಡವನ್ನು ಉತ್ಸಾಹದಿಂದ ಕಲಿಯುವಂತೆ ಮಾಡುವ ಕಾರ್ಯವನ್ನು ಎಲ್ಲ ಉದ್ಯಮಪತಿಗಳು ಮಾಡಲೇಬೇಕೆಂದು ನಾನು ಒತ್ತಾಯ ಮಾಡುತ್ತೇನೆ. ಹೀಗೆ ಕನ್ನಡ ಕಲಿತರೆ ಅವರು ನಮ್ಮ ಕನ್ನಡಿಗರೇ ಆಗುತ್ತಾರೆ. ಇದರಿಂದ ಸೌಹಾರ್ದ ಉಂಟಾಗುತ್ತದೆ.ಎಲ್ಲ ಕನ್ನಡಿಗರೂ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯೂ ಕರ್ನಾಟಕ ಸರಕಾರವೂ ಈ ಬಗ್ಗೆ ತುಂಬ ಎಚ್ಚರವಹಿಸಬೇಕು. ತಮಿಳು ನಾಡಿನಲ್ಲಿ ಸರಕಾರವು ಮಾಡಿರುವ ಕೆಲವು ಪ್ರಯತ್ನಗಳೂ ಸಫಲವಾಗಿವೆ. ನಾವೂ ಆ ಮಾರ್ಗವನ್ನೇ ಉಪಯೋಗಿಸಬೇಕು.ಇದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಷಯ. ಎಷ್ಟೇ ಭಾಷೆಗಳ ಜನ ಬೆಂಗಳೂರಿಗೆ ಬಂದು ಸೇರಿದರೂ ಆ ಭಾಷೆಯ ಜನರ ಮಕ್ಕಳಿಗೆ ವಿದ್ಯಾಭ್ಯಾಸ ಬೇಕು ತಾನೆ. ಅವರವರು ಸ್ವಂತ ಭಾಷೆಯ ಶಾಲೆಗಳನ್ನು ಮಾಡಿಕೊಂಡಿದ್ದಾರೆ. ಈ ಎಲ್ಲ ಶಾಲೆಗಳಲ್ಲಿ ಎಲ್ಲ ಮಕ್ಕಳು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಭಾಷೆಯಾಗಿ ಕಲಿಯಲೇಬೇಕೆಂಬ ಬಿಗಿಯಾದ ಕಾನೂನನ್ನು ಸರಕಾರ ಕೂಡಲೇ ಜಾರಿಗೆ ತರಬೇಕು. ಇದು ಸಾಧ್ಯವಾದರೆ ಹತ್ತೇ ವರ್ಷಗಳಲ್ಲಿ ಎಲ್ಲ ಪರಕೀಯರ ಮಕ್ಕಳೂ ಕನ್ನಡಿಗರಾಗಿಬಿಡುತ್ತಾರೆ. ಇಂಥ ಪದ್ಧತಿಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿಗೆ ಒಪ್ಪಿಗೆ ನೀಡಿದೆ. ಇಷ್ಟೆಲ್ಲ ಅವಕಾಶವಿದ್ದರೂ ನಾವು ಈ ದಿಕ್ಕಿನಲ್ಲಿ ಪ್ರಯತ್ನವನ್ನು ಮಾಡುತ್ತಿಲ್ಲ. ಬೆಂಗಳೂರಿನಲ್ಲಿ ಕನ್ನಡ ಉಳಿಯಬೇಕಾದರೆ ಮೊದಲು ಮಾಡಬೇಕಾದ ಕಾರ್ಯ ಇದು. ಇದನ್ನು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ-ಸಾಮಾಜಿಕವಾಗಿ.ನಮ್ಮ ಸರಕಾರವೇ ‘ಅಲ್ಪಸಂಖ್ಯಾತರು’ ಎಂಬ ಹೆಸರಿನ ಅಡಿಯಲ್ಲಿ ಅಂಥ ಅನೇಕ ಶಾಲೆಗಳಿಗೆ ಅವಕಾಶವನ್ನು ಕಲ್ಪಿಸಿದೆ. ಈ ಅವಕಾಶವನ್ನು ಪಡೆದವರು ವೀರಭದ್ರನಂತೆ ವರ್ತಿಸುತ್ತಿದ್ದಾರೆ. ಈ ಎಲ್ಲ ಶಾಲೆಗಳವರೂ ತಮ್ಮ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಿ, ಬಹುಸಂಖ್ಯಾತ ಕನ್ನಡಿಗರೊಡನೆ ಹಾಲು ಜೇನಿನಂತೆ ಬೆರೆತು ಬಾಳುವುದನ್ನೂ ಕಲಿಸಬೇಕು. ಅದು ಸಾಧ್ಯವಾಗದೆ ಹೋದರೆ ಸರಕಾರದ ಕಾನೂನಿನ ಅಂಕುಶವನ್ನು ಪ್ರಯೋಗಿಸಬೇಕಾದ ಪರಿಸ್ಥಿತಿ ಬರಲೇಬೇಕಾಗುತ್ತದೆ. ಅದರಿಂದ ಅಲ್ಪಸಂಖ್ಯಾತರಿಗೆ ಪ್ರಯೋಜನವೇ ಹೊರತು ಅಪಕಾರವೇನೂ ಇಲ್ಲ.ಸ್ವಂತ ಭಾಷೆಯನ್ನು ರಕ್ಷಿಸಿ ಬೆಳೆಸುವ ರೀತಿಯಲ್ಲಿ ಚೀನಾದೇಶವು ಮಾಡುತ್ತಿರುವ ಪ್ರಯತ್ನವು ಎಲ್ಲ ಭಾಷೆಗಳವರಿಗೂ ಮಾದರಿಯಾಗಿದೆ. ಅಮೆರಿಕದಲ್ಲಿರುವ ಚೀನಾ ದೇಶೀಯರ ಮಕ್ಕಳಿಗೆ ಚೀನಾ ದೇಶದ ಆಡಳಿತ ಭಾಷೆಯಾಗಿರುವ ಮಂಡಾರಿನ್ ಭಾಷೆಯನ್ನು ಕಲಿಸುವ ಏರ್ಪಾಟನ್ನು ನಾವು ಪರಿಶೀಲಿಸಬೇಕು. ಅಮೆರಿಕದ ಚೀನಿ ಭಾಷೆಯ ಶಾಲೆಗಳಲ್ಲಿ ಕಿಂಡರ್‌ಗಾರ್ಟನ್ ಮತ್ತು ಪ್ರಥಮ ತರಗತಿಗಳಲ್ಲಿ ಪಾಠದ ಮಾಧ್ಯಮವು ಚೀನಿ ಭಾಷೆಯಲ್ಲಿಯೇ ನಡೆಯುತ್ತದೆ. ಎರಡನೆಯ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸುತ್ತಾರೆ. ಆರನೆಯ ತರಗತಿಯವರೆಗೆ ಅರ್ಧ ಚೀನಿ, ಅರ್ಧ ಇಂಗ್ಲಿಷ್ ಭಾಷೆಯಲ್ಲಿ ಪಾಠಗಳಾಗುತ್ತವೆ. ಅಲ್ಲಿಯೂ ಚೀನಿ ಆವರಣದಲ್ಲಿಯೇ ಪಾಠಗಳಾಗುತ್ತವೆ. ಇಲ್ಲಿಗೆ ಬರುವ ಅಧ್ಯಾಪಕರೆಲ್ಲ ಟೈವಾನ್ ಅಥವಾ ಚೀನಾ ದೇಶದಿಂದಲೇ ಬರುತ್ತಾರೆ. ಪ್ರಾರಂಭದಲ್ಲಿ ಈ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುವುದರಲ್ಲಿ ಹಿಂದೆ ಬಿದ್ದರೂ ಬರಬರುತ್ತಾ ಎರಡು ಭಾಷೆಗಳಲ್ಲೂ ಸ್ಪಷ್ಟವಾಗಿ ಪರಿಣಾಮದಾಯಕವಾಗಿ ಮಾತನಾಡುತ್ತಾರೆ-ಅಲ್ಲದೆ, ಅವರ ಸೃಷ್ಟಿಶೀಲ ವ್ಯಕ್ತಿತ್ವ ಹೆಚ್ಚು ಪ್ರಭಾವಶಾಲಿಯಾಗಿ ಬೆಳಗುತ್ತದೆ. ಇಂಥ ಶಾಲೆಗೆ ಪ್ರಾರಂಭದಲ್ಲಿ ಏಷ್ಯಾ ಖಂಡದವರು ಹೆಚ್ಚಾಗಿ ಸೇರುತ್ತಿದ್ದರು. ಈಗ ಅಮೆರಿಕನರು, ಬಿಳಿ ಮತ್ತು ಕರಿಯ ಜನ ಮತ್ತು ಸ್ಪೇನಿನವರು ಬಂದು ಸೇರುತ್ತಿದ್ದಾರೆ. ಹೀಗೆ ಚೀನಾ ಶಾಲೆಗಳು ಜನಪ್ರಿಯವಾಗಿವೆ. ಅಮೆರಿಕದ ಸರಕಾರವು ಇಂಥ ಶಾಲೆಗಳಿಗೆ ಒಳ್ಳೆಯ ಅನುದಾನವನ್ನು ನೀಡುತ್ತಾ ಇದೆ. ಕನ್ನಡ ಜನರಿಗೂ ಇಂಗ್ಲಿಷ್ ಕಲಿಸುವ ಬಗ್ಗೆ ಇದು ಮಾದರಿಯಾಗಿದೆ. ಕನ್ನಡವು ಎಲ್ಲ ಶಾಲೆಗಳಲ್ಲಿ ಹತ್ತನೆಯ ತರಗತಿಯವರೆಗೆ ಕಡ್ಡಾಯವಾಗುವುದಾದರೆ ಇಂಗ್ಲಿಷನ್ನು ಎರಡು ಮೂರನೆಯ ತರಗತಿಯಿಂದಲೇ ಕಲಿಸುವುದು ತಪ್ಪಾಗುವುದಿಲ್ಲ.ಕನ್ನಡನಾಡಿನ ಸರಕಾರದ ಶಿಕ್ಷಣ ಇಲಾಖೆಯ ಬಗ್ಗೆ ನನ್ನದು ತೀವ್ರ ಆಕ್ಷೇಪಣೆ ಇದೆ. ಅದರಲ್ಲಿರುವ ಕೆಲವು ಅಧಿಕಾರಿಗಳು ಕನ್ನಡದ ಬಗ್ಗೆ ನಿರ್ಲಕ್ಷ್ಯದಿಂದ ಇದ್ದಾರೆ. ಒಂದೆರಡು ಉದಾಹರಣೆಗಳನ್ನು ನೀಡುತ್ತೇನೆ; ಗಮನಿಸಬೇಕು. ಕಳೆದ ಡಿಸೆಂಬರ್ ೧೮ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಒಂದು ಭಾರಿ ವರ್ತಮಾನ ಪ್ರಕಟವಾಗಿತ್ತು. ನಗರದ ಒಂದು ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಮೂಗಿನ ಕೆಳಗೇ ಕನ್ನಡದ ಮಕ್ಕಳಿಗೆ ಆಂಧ್ರದ ಪಠ್ಯಪುಸ್ತಕಗಳನ್ನು ಬೋಧಿಸಲಾಗುತ್ತಿತ್ತು. ನಮ್ಮ ನಾಡು ಯಾವುದು? ಪ್ರಶ್ನೆ. ಉತ್ತರ: ಆಂಧ್ರಪ್ರದೇಶ. ನಮ್ಮ ರಾಜಧಾನಿ ಯಾವುದು? ಪ್ರಶ್ನೆ. ಉತ್ತರ: ಹೈದರಾಬಾದ್. ಆ ಮಕ್ಕಳ ಪೋಷಕರು ಮುಖ್ಯಾಧ್ಯಾಪಕರನ್ನು ಕಂಡು ಪ್ರಶ್ನಿಸಿದರೆ ಅವರು ‘ನಾವು ಬೋಧಿಸುವುದೇ ಹೀಗೆ. ನಿಮಗೆ ಬೇಡದಿದ್ದರೆ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ’ ಎಂದು ಹೇಳಿ ಗದರಿಸಿದರಂತೆ. ಆಂಧ್ರದ ಪಠ್ಯಗಳನ್ನು ಕೊಳ್ಳಲು ಪ್ರತಿಯೊಬ್ಬ ಮಗುವಿನಿಂದ ೧೮೦೦ ರೂಪಾಯಿಗಳನ್ನು ವಸೂಲಿ ಮಾಡಿದ್ದರಂತೆ. ಅವೆಲ್ಲ ಅಹಮದಾಬಾದಿನಲ್ಲಿ ಪ್ರಕಟಿಸಿದ ಪುಸ್ತಕಗಳು. ಈ ವರ್ತಮಾನ ಬಂದಮೇಲೆ ಶಿಕ್ಷಣ ಇಲಾಖೆ ಏನು ಮಾಡಿತೆಂಬುದರ ಬಗ್ಗೆ ಸಾರ್ವಜನಿಕರಿಗೆ ವಿವರಗಳನ್ನು ಕೂಡಲೇ ತಿಳಿಸಬೇಕು. ಶಿಕ್ಷಣ ಇಲಾಖೆಯಲ್ಲಿ ವಿಷಯ ಪರೀಕ್ಷಕರುಗಳೆಂಬ ಅಧಿಕಾರಿಗಳು ಇರುತ್ತಾರೆ. ಅವರೇನು ಮಾಡಿದರು? ಇನ್ನು ಎಷ್ಟು ಇಂಥ ಶಾಲೆಗಳಿವೆಯೋ ಬೆಂಗಳೂರು ನಗರದಲ್ಲಿ? ಇದನ್ನು ಔದಾಸೀನ್ಯದಿಂದ ಕಾಣುವ ಇಲಾಖೆಗೆ ನಾಡಿನ ಭಾಷೆಯ ಮೇಲೆ ಪ್ರೀತಿ ಇದೆ ಎನ್ನಬಹುದೆ? ಅಂಥ ಅಧಿಕಾರಿಗಳ ಮೇಲೆ ಸರಕಾರ ಏಕೆ ಕ್ರಮ ಜರುಗಿಸಿಲ್ಲ? ಆ ಶಾಲೆಯ ಆಡಳಿತ ವರ್ಗ ಇದುವರೆಗೆ ಕನ್ನಡಿಗರ ಕ್ಷಮೆ ಯಾಕೆ ಯಾಚಿಸಿಲ್ಲ?ನಮ್ಮ ಶಿಕ್ಷಣ ಇಲಾಖೆಯ ಗಮನಕ್ಕೆ ಮತ್ತೊಂದು ವಿಷಯವನ್ನು ತರಬೇಕಾಗಿದೆ. ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳಲ್ಲಿ ಕನ್ನಡದ ಬೋಧನೆಗೆ ಅರ್ಹರಾದ ಶಿಕ್ಷಕರು ದೊರಕುತ್ತಿಲ್ಲ. ಹಿಂದೆ ಕನ್ನಡ ಅಥವಾ ಸಂಸ್ಕೃತ ಭಾಷೆಗಳಲ್ಲಿ ಒಂದು ಭಾಷೆಯನ್ನು ಬೋಧಿಸುವುದಕ್ಕೆ ತರಬೇತಿ ಶಾಲೆಗಳಲ್ಲಿ ವಿಶಿಷ್ಟವಾದ ತರಬೇತಿ ಪಡೆದ ಶಿಕ್ಷಕರಿರುತ್ತಿದ್ದರು. ಅವರಿಂದ ಕನ್ನಡ ಅಥವಾ ಸಂಸ್ಕೃತವನ್ನು ಕಲಿತರೆ ಅಂಥ ವಿದ್ಯಾರ್ಥಿಗಳು, ಕಾಗುಣಿತದಲ್ಲಿ ಒಂದೂ ತಪ್ಪು ಮಾಡುತ್ತಿರಲಿಲ್ಲ. ವಾಚನವನ್ನು ಚೆನ್ನಾಗಿ ಕಲಿಯುತ್ತಿದ್ದರು. ಕಾವ್ಯಾಸ್ವಾದನೆಯ ಸುಖವನ್ನೂ ಅನುಭವಿಸುತ್ತಿದ್ದರು. ಈಗಲಾದರೂ ನಮ್ಮಲ್ಲಿರುವ ಕನ್ನಡ ಶಿಕ್ಷಕರಲ್ಲಿ ಅರ್ಹರಾದವರನ್ನು ಆರಿಸಿ ಕನ್ನಡ ಬೋಧನೆಯಲ್ಲಿ ಸರಿಯಾದ ಮಾರ್ಗವನ್ನು ಕಲಿಸುವ ಶಿಬಿರಗಳನ್ನು ನಡೆಸಿ ಪ್ರತಿವರ್ಷವೂ ಕೊನೆಯಪಕ್ಷ ೧೦೦೦ ಶಿಕ್ಷಕರನ್ನು ಸಿದ್ಧಗೊಳಿಸಬೇಕು. ಇದು ನಡೆಯದೆ ಇದ್ದರೆ ಕನ್ನಡದ ಬಗ್ಗೆ ಬಾಲಕರಲ್ಲಿ ಪ್ರೀತಿ ಉಂಟಾಗುವುದಿಲ್ಲ. ಪ್ರೀತಿಯನ್ನು ಉಂಟುಮಾಡುವ ಶಿಕ್ಷಕರ ಸಂಖ್ಯೆ ಬೆಳೆಯಬೇಕು. ಕನ್ನಡವನ್ನು ಐಚ್ಛಿಕವಾಗಿ, ಆಳವಾಗಿ ಅಭ್ಯಾಸ ಮಾಡಿದವರೇ ಕನ್ನಡ ಶಿಕ್ಷಕರಾಗಬೇಕು. ನಮ್ಮ ನಾಡಿನ ಶಿಕ್ಷಣ ಇಲಾಖೆಗೆ ಈ ಬಗ್ಗೆ ಎಚ್ಚರಿಕೆಯನ್ನು ನಾಡಿನ ಶಾಸಕರು ನೀಡಬೇಕು.ಎರಡನೆಯದಾಗಿ ಮತ್ತೊಂದು ಕೆಲಸ ಆಗಬೇಕು. ಕನ್ನಡ ನಾಡಿನ ಸರಕಾರದ ಎಲ್ಲ ಕಚೇರಿಗಳಲ್ಲಿಯೂ ಅಧಿಕಾರಿಗಳಿಗೆ ಬರುವ ಅರ್ಜಿಗಳು ಯಾವಾಗಲೂ ಕನ್ನಡದಲ್ಲಿಯೇ ಇರಬೇಕು. ಕನ್ನಡದಲ್ಲಿರದ ಯಾವ ಅರ್ಜಿಯನ್ನೂ ಸ್ವೀಕರಿಸಬಾರದು. ಹಾಗೆ ಸ್ವೀಕರಿಸಿದ ಅರ್ಜಿಗಳಿಗೆ ಸಂಬಂಧಿಸಿದ ಟೀಕೆ ಟಿಪ್ಪಣಿಗಳು ಯಾವಾಗಲೂ ಕನ್ನಡದಲ್ಲಿಯೇ ಇರಬೇಕು. ಹೀಗೆ ಮಾಡದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಕನ್ನಡದ ಅಭಿವೃದ್ಧಿ ಪ್ರಾಧಿಕಾರವು ಅನೇಕ ಆದೇಶಗಳನ್ನು ಕಳಿಸಿದ್ದರೂ ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದ್ದಾರೆ. ಇದಕ್ಕೆ ಶಿಕ್ಷೆ ಇಲ್ಲದಿದ್ದರೆ ಏನು ಪ್ರಯೋಜನ? ನಮ್ಮ ಸರಕಾರ ಈ ದಿಕ್ಕಿನಲ್ಲಿ ತೀವ್ರ ಎಚ್ಚರಿಕೆಯನ್ನು ವಹಿಸಬೇಕು.ಕನ್ನಡ ಭಾಷೆಯನ್ನು ವೃದ್ಧಿಪಡಿಸುವ ದಿಕ್ಕಿನಲ್ಲಿ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಕನ್ನಡ-ಕನ್ನಡ ಏಕಭಾಷಾ ನಿಘಂಟು ಒಂದು ಘನವಾದ ಕಾರ್ಯ. ೧೯೪೪ರಲ್ಲಿ ಪ್ರಾರಂಭವಾಗಿ ೧೯೯೪ರ ತನಕ ಆ ಕೆಲಸ ನೆರವೇರಿತು. ಅಂದರೆ ಸುಮಾರು ಐವತ್ತು ವರ್ಷಗಳು ನಿಘಂಟು ಕಚೇರಿಯಲ್ಲಿ ಆದ ಕೆಲಸ ಬಹುವ್ಯಾಪಕವಾದುದು. ಆ ಕಚೇರಿಯಲ್ಲಿ ಅನೇಕ ವಿಷಯ ಸಂಗ್ರಹಗಳಿವೆ. ಅದನ್ನು ಉಪಯೋಗಿಸುವ ಮುಂದಿನ ಕಾರ್ಯವನ್ನು ಮಾಡದೆ ಕಚೇರಿಗೆ ಬೀಗಮುದ್ರೆಯನ್ನು ಹಾಕಿ, ಶಾಶ್ವತವಾಗಿ ನೆರವೇರಬೇಕಾಗಿದ್ದ ಅತ್ಯಗತ್ಯವಾದ ಕಾರ್ಯವನ್ನು ನಿಲ್ಲಿಸಿಬಿಡುವ ಸಾಮರ್ಥ್ಯದ ಕನ್ನಡದ ಭಕ್ತರನ್ನೂ, ಪಡೆಯಿತು ನಮ್ಮ ಪರಿಷತ್ತು. ಹಿಂದೆ ಮುದ್ರಣವಾಗಿದ್ದ ನಿಘಂಟು ಸಂಪುಟಗಳು ಮಾರಾಟವಾಗಿ ಕೇಳುವವರಿಗೆ ಅನುಪಲಬ್ಧವಾಗಿತ್ತು. ಈಗಿನ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದರು ಸರಕಾರದಿಂದ ಅನುದಾನವನ್ನು ಪಡೆದು ಆ ನಿಘಂಟಿನ ೧೦೦೦೦ ಪುಟಗಳುಳ್ಳ ಎಂಟು ಸಂಪುಟಗಳ ೧೬ ಸಾವಿರ ಪ್ರತಿಗಳನ್ನು ಪುನರ್ಮುದ್ರಣ ಮಾಡಿದ್ದಾರೆ. ಈಗ ಆ ಪ್ರತಿಗಳು ದೊರಕುತ್ತಿವೆ. ಪುನರ್ಮುದ್ರಣವಾಗುವ ವೇಳೆಗೆ ಆಗಲೇಬೇಕಾಗಿದ್ದ ತಿದ್ದುಪಾಟುಗಳನ್ನು ಸೇರಿಸಿದ್ದರೆ ಉತ್ತಮ ಕಾರ್ಯವಾಗುತ್ತಿತ್ತು. ಈಗಲೂ ಆ ಕೆಲಸವನ್ನು ಮಾಡಬೇಕಾದರೆ ಆ ಕಚೇರಿಯನ್ನು ತೆರೆದು ನಿಘಂಟು ಕಾರ್ಯವನ್ನು ಮುಂದುವರಿಸಬೇಕು. ಆ ಕೆಲಸಕ್ಕೆ ಹೊಸ ಯೋಜನೆಯಾಗಬೇಕು, ಸರಕಾರದ ಒಪ್ಪಿಗೆ ಬೇಕು. ಕೆಲಸವನ್ನು ನಿಲ್ಲಿಸುವುದು ಸುಲಭ, ಮಡಕೆಯನ್ನು ಒಡೆದಂತೆ. ಪ್ರಾರಂಭಿಸುವುದು ಕಷ್ಟ, ಕುಂಬಾರನ ಕೆಲಸದಂತೆ. ಆದರೂ ಈ ಕಾರ್ಯವನ್ನು ಮಾಡಲೇಬೇಕಾಗಿದೆ.ಎಲ್ಲ ಭಾಷೆಗಳಲ್ಲಿಯೂ ಕಾಲಕಳೆದಂತೆ ಹಳೆಯ ಶಬ್ದಗಳು ಕೆಲವು ಮಾಯವಾಗುತ್ತವೆ. ಹೊಸ ಶಬ್ದಗಳು ಸೇರಿಬಿಡುತ್ತವೆ. ಶಬ್ದಗಳ ಅರ್ಥವೂ ಬೇರೆಯಾಗಿಬಿಡುತ್ತವೆ. ಕೆಲವು ಅರ್ಥವಿಸ್ತಾರವನ್ನು ಪಡೆಯುತ್ತವೆ. ಕೆಲವಕ್ಕೆ ಅರ್ಥ ಸಂಕುಚಿತವಾಗುತ್ತವೆ. ಇದನ್ನು ನಿಘಂಟುಕಾರ ಕಣ್ಣಿನಲ್ಲಿ ಕಣ್ಣಿಟ್ಟು ದಾಖಲಿಸುತ್ತ ಹೋಗಬೇಕು. ಅಲ್ಲದೆ ಕನ್ನಡದಲ್ಲಿಯೂ ಭಾರತದ ಇತರ ಭಾಷೆಗಳಲ್ಲಿಯೂ ಆದಾನ ಪ್ರದಾನಕಾರ್ಯಗಳು ಈಗ ನೆರವೇರುತ್ತಿವೆ. ಈ ಕೆಲಸ ಮುಂದುವರಿಯಬೇಕಾದರೆ ದ್ವಿಭಾಷಾ ನಿಘಂಟುಗಳು, ತ್ರಿಭಾಷಾ ನಿಘುಂಟುಗಳು ನಿರ್ಮಾಣವಾಗಬೇಕು. ಇದಕ್ಕೆ ಇತರ ಭಾಷಾ ಸಾಹಿತ್ಯ ಸಂಸ್ಥೆಗಳೊಡನೆ ಸಂಬಂಧವನ್ನು ಬೆಳೆಸಬೇಕು. ಇದು ಕನ್ನಡ ನಿಘಂಟು ಕಚೇರಿಗೆ ಸುಲಭವಾದ ಕಾರ್ಯ. ಇತರ ಭಾಷೆಗಳಲ್ಲಿ ಇಂಥ ಸೌಲಭ್ಯವಿಲ್ಲ. ನಮ್ಮ ಕಚೇರಿಯಲ್ಲಿ ಸಮರ್ಥರಾದ ಕೆಲವರು ಉಪಸಂಪಾದಕರಿದ್ದರು. ಈಗ ಅವರನ್ನೆಲ್ಲ ನಿವೃತ್ತರನ್ನಾಗಿಸಲಾಗಿದೆ. ಮತ್ತೆ ಹೊಸ ಕಾರ್ಯಕರ್ತರ ಪಡೆಯನ್ನು ತಯಾರು ಮಾಡಬೇಕು. ಏನೇ ಆದರೂ ನಿಘಂಟು ಕಚೇರಿಯನ್ನು ಮತ್ತೆ ಪ್ರಾರಂಭಿಸಬೇಕು. ಈ ಕೆಲಸವನ್ನು ಸಾಹಿತ್ಯ ಪರಿಷತ್ತು ಕೂಡಲೇ ಮಾಡಬೇಕು. ಎಂದೂ ಈ ಕಚೇರಿಯನ್ನು ಮುಚ್ಚಬಾರದು.ಭಾರತದ ಇತರ ಸಾಹಿತ್ಯಗಳಲ್ಲಿರುವ ಮಹಾಕೃತಿಗಳನ್ನು ಕನ್ನಡಕ್ಕೆ ತರುವ ಮತ್ತು ಕನ್ನಡದ ಮಹಾಕೃತಿಗಳನ್ನು ಇತರೆ ಭಾಷೆಗೆ ಪ್ರದಾನ ಮಾಡುವ ಕಾರ್ಯವು ಮುಂದುವರಿಯಬೇಕಾದರೆ ಎಲ್ಲ ಭಾಷಾ ಪ್ರದೇಶಗಳಲ್ಲಿಯೂ ಕೊನೆಯಪಕ್ಷ ಎರಡು ಭಾಷೆಗಳಲ್ಲಾದರೂ ನಿಷ್ಣಾತರಾದ ವಿದ್ವಾಂಸರು ಇರಬೇಕು. ಅವರು ಅನುವಾದ ಚತುರರಾಗಿರಬೇಕು. ಈ ದೃಷ್ಟಿಯಿಂದ ಹಿಂದೆ ಕನ್ನಡದ ಸಾಹಿತ್ಯ ಅಕಾಡೆಮಿಯು ಇಬ್ಬರು ಯುವ ವಿದ್ವಾಂಸರನ್ನು ಆಯ್ಕೆ ಮಾಡಿ ಬೇರೆ ಭಾಷೆಯ ವಿಶ್ವವಿದ್ಯಾನಿಲಯಗಳಿಗೆ ಕಳಿಸಿ ಅಲ್ಲಿಯ ಭಾಷೆಯನ್ನು ಕಲಿತು ಅದರಲ್ಲಿ ಪ್ರವೀಣರಾಗಿ ಹಿಂದಕ್ಕೆ ಕರೆತರುವ ಒಂದು ಏರ್ಪಾಟನ್ನು ಮಾಡಿತ್ತು. ಒಬ್ಬರನ್ನು ಪಶ್ಚಿಮ ಬಂಗಾಳಕ್ಕೂ ಮತ್ತೊಬ್ಬರನ್ನು ಇನ್ನೊಂದೆಡೆಗೂ ಕಳಿಸಿದ್ದ ನೆನಪು. ಅವರಲ್ಲೊಬ್ಬರು ಹಿಂದಿರುಗಿ ಒಳ್ಳೆಯ ಗ್ರಂಥವನ್ನು ಬರೆದುಕೊಟ್ಟರು. ಈಗಲೂ ಪರಿಷತ್ತು ಇಂಥ ಕಾರ್ಯವನ್ನು ಪ್ರತಿವರ್ಷವೂ ಮಾಡಿದರೆ ಒಂದು ದಶಕದಲ್ಲಿ ನಮ್ಮಲ್ಲಿಯೇ ಹತ್ತು ಭಾಷೆಗಳ ಪ್ರವೀಣರು ತಯಾರಾಗುತ್ತಾರೆ. ಈಗ ಪರಿಷತ್ತು ಸರಕಾರದ ಸಹಾಯದ ದೆಸೆಯಿಂದ ಆರ್ಥಿಕವಾಗಿ ಗಟ್ಟಿಯಾಗಿ ಬೆಳೆದಿದೆ. ಆದ್ದರಿಂದ ಗಟ್ಟಿಯಾದ ಕಾರ್ಯವನ್ನು ಮಾಡಬೇಕು.ಕನ್ನಡ ಸಾಹಿತ್ಯ ಪರಿಷತ್ತು ಮಾಡಬಹುದಾದ ಕೆಲವು ಇತರ ಕರ್ತವ್ಯಗಳನ್ನು ಈ ಸಭೆಯ ಎದುರಿಗೆ ವಿವರಿಸಲು ಇಷ್ಟಪಡುತ್ತೇನೆ.೧. ಪರಿಷತ್ತು ಪ್ರತಿವರ್ಷವೂ ಬೆಂಗಳೂರಿನಲ್ಲಿ ಗಡಿನಾಡ-ಹೊರನಾಡ ಕನ್ನಡಿಗರ ಒಂದು ಸಮಾವೇಶವನ್ನು ನಡೆಸಬೇಕು. ನಮ್ಮ ಗಡಿನಾಡಿನ ದ್ವಿಭಾಷಾ ವಲಯಗಳಲ್ಲಿ ನೆರವೇರುವ ಸಾಹಿತ್ಯ ಕಾರ್ಯಗಳು ಮತ್ತು ಅಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆಗಳೇನು ಎಂಬುದನ್ನು ನಾವು ತಿಳಿದುಕೊಳ್ಳುತ್ತಿರಬೇಕು. ಪುಣೆ, ಮುಂಬೈ, ನಾಗಪುರ, ಕೋಲ್ಕತ್ತ, ಚೆನ್ನೈ ಮತ್ತು ತಿರುವನಂತಪುರಗಳಲ್ಲಿ ತುಂಬ ಜನ ಕನ್ನಡಿಗರು ನೆಲೆಸಿದ್ದಾರೆ. ಅವರ ಸಂಪರ್ಕವನ್ನು ನಾವು ಸದಾ ಪಡೆದಿದ್ದರೆ ನೆರೆನಾಡುಗಳ ಎಲ್ಲ ವಿದ್ಯಮಾನಗಳನ್ನೂ ಅರಿಯುತ್ತಿರಬಹುದು. ಅವರಿಂದ ನಮಗೆ ಸಹಾಯಕವಾದ ಅನೇಕ ವಿವರಗಳು ದೊರಕುತ್ತವೆ. ಅಂಥ ವಿವರಗಳಲ್ಲಿ ಕೆಲವು ನಮಗೆ ಅಪಾಯಕಾರಿಯೂ ಆಗಿರಬಹುದು. ಆಗ ಸೂಕ್ತ ಸಮಯದಲ್ಲಿ ನಾವು ಎಚ್ಚೆತ್ತು ಕ್ರಮ ಜರುಗಿಸಲು ಅನುಕೂಲವಾಗುತ್ತದೆ. ನನ್ನ ಈ ಸೂಚನೆಯನ್ನು ಒಂದು ದೃಷ್ಟಾಂತದಿಂದ ವಿಶದಪಡಿಸುತ್ತೇನೆ. ಸುಮಾರು ಒಂದು ತಿಂಗಳ ಹಿಂದೆ ಮುಂಬೈ ನಗರದ ಥಾಣೆಯಲ್ಲಿ ಮರಾಠೀ ಸಾಹಿತ್ಯಸಮ್ಮೇಳನವು ನೆರವೇರಿತು. ಅದರ ಅಧ್ಯಕ್ಷರಾಗಿ ಉತ್ತಮ ಕಾಂಬ್ಲೆ ಎಂಬ ಲೇಖಕರು ಆಯ್ಕೆಯಾಗಿದ್ದರು. ಮೂಲತಃ ಅವರು ಕನ್ನಡಿಗರು. ಅವರು ಹುಟ್ಟಿದ್ದು, ವಿದ್ಯಾಭ್ಯಾಸವನ್ನು ಪಡೆದಿದ್ದು ಸಿರಗುಪ್ಪೆಯ ಸುತ್ತಮುತ್ತಲಿನಲ್ಲಿ. ಅವರು ಮಾಡಿದ ಅಧ್ಯಕ್ಷ ಭಾಷಣದಲ್ಲಿ ಮಹಾಜನ್ ವರದಿಯನ್ನು ಉಲ್ಲೇಖಿಸಿ ಮಹಾರಾಷ್ಟ್ರಕ್ಕೆ ಮಹಾ ಅನ್ಯಾಯವಾಗಿದೆ ಎಂಬ ಉದ್ಗಾರವನ್ನು ತೆಗೆದರೆಂದು ವಾರ್ತಾಪತ್ರಿಕೆಗಳಿಂದ ತಿಳಿಯಬರುತ್ತದೆ. ಬೆಳಗಾಂ ಜಿಲ್ಲೆಯೂ ನಿಪ್ಪಾಣಿ ತಾಲ್ಲೂಕು ಮತ್ತು ಕಾರವಾರ ಜಿಲ್ಲೆಯ ಅನೇಕ ಭಾಗಗಳೂ ಮಹಾರಾಷ್ಟ್ರಕ್ಕೆ ಸೇರಬೇಕು, ಇದಕ್ಕೆ ಬೇಕಾದ ಘೋರ ಹೋರಾಟವನ್ನು ಮಾಡಿಯೇ ತೀರಬೇಕು ಎಂದೂ ಮರಾಠೀ ಜನರಿಗೆ ಕರೆಕೊಟ್ಟರು. ಕನ್ನಡದ ಸರಕಾರವು ಮಹಾರಾಷ್ಟ್ರೀಯರಿಗೆ ಕಿರುಕುಳ ಕೊಡುತ್ತಿದೆ ಎಂದೂ ಮರಾಠೀ ಸಂಸ್ಕೃತಿಯನ್ನೇ ಮಟ್ಟಹಾಕಲು ಸಿನಿಮಾ ಮತ್ತು ನಾಟಕಗಳನ್ನು ಉಪಯೋಗಿಸುತ್ತದೆ ಎಂದೂ ಕನ್ನಡ ಲೇಖಕರು ಮರಾಠಿಗರಿಗೆ ಅಗೌರವದಿಂದ ನಡೆದುಕೊಳ್ಳುತ್ತಾರೆ ಎಂದೂ ಕರ್ನಾಟಕ ಸರಕಾರಕ್ಕೂ ಕನ್ನಡ ಜನರಿಗೂ ತಕ್ಕ ಬುದ್ಧಿಯನ್ನು ಕಲಿಸಬೇಕೆಂದೂ ವೀರಾವೇಶದಿಂದ ಮಾತನಾಡಿದರಂತೆ! ಕನ್ನಡ ದೇಶದಲ್ಲಿರುವ ಮರಾಠಿಗರು ಇಂಥ ಸುಳ್ಳು ಹೇಳಿಕೆಗಳನ್ನು ವಿರೋಧಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅದನ್ನು ನಮ್ಮನಾಡಿಗೆ ಬರುವವರೆಲ್ಲರೂ ಕಲಿಯಲೇಬೇಕು. ಇದು ಅನಿವಾರ್ಯವೆಂಬ ಅಂಶವನ್ನು ನಾವು ಅವರ ಅನುಭವಕ್ಕೆ ತರಬೇಕು.ನಿಜವಾಗಿ ಕನ್ನಡನಾಡು ಕಾಸರಗೋಡನ್ನು ಕಳೆದುಕೊಂಡಿದೆ: ಕನ್ನಡಿಗರು ಕೇರಳದೊಡನೆ ಸ್ನೇಹದಿಂದಿದ್ದು ಕಾಸರಗೋಡಿನ ವಿಚಾರವಾಗಿ ನಿಧಾನವಾಗಿ ಆಲೋಚನೆ ಮಾಡುತ್ತಿರುವಾಗ ನಮ್ಮ ನಾಡಿನ-ಕರ್ನಾಟಕದ ಒಂದು ಮುಖ್ಯಭಾಗವಾಗಿ ವೃದ್ಧಿ ಹೊಂದುತ್ತಿರುವ ಜಿಲ್ಲೆಗಳನ್ನು ತಾಲ್ಲೂಕುಗಳನ್ನು ಕಬಳಿಸುವ ಇಂಥ ಉಗ್ರರಿಂದ ಗಡಿನಾಡಿನಲ್ಲಿ ಅಸ್ಥಿರತೆ ತಲೆದೋರುತ್ತಿದೆ. ಇಂಥ ಹೇಳಿಕೆಗಳನ್ನು ನಾವು ತೀವ್ರವಾಗಿ ವಿರೋಧಿಸಬೇಕು. ಆದರೆ ಇಂಥ ಉದ್ವೇಗಕಾರಕ ವಿವರಗಳು ನಮ್ಮ ಗಮನಕ್ಕೆ ಬಾರದೆ ಹೋದರೆ ನಮಗೆ ಅಪಾಯ. ಅಚ್ಚಗನ್ನಡ ಪ್ರದೇಶಗಳನ್ನು ನುಂಗಲು ಇಷ್ಟಪಡುವ ಆಕ್ರಮಣಶೀಲ ಪೇಶ್ವಾಯಿ ಬುದ್ಧಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಸಮ್ಮೇಳನದಲ್ಲಿ ಇಂಥ ಕುಹಕಿಗಳ ಕಾರ್ಯವನ್ನು ಖಂಡಿಸಿ ನಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ಜನರ ಶಾಂತಿಯನ್ನು ಕದಡುವ ಉತ್ತಮ ಕಾಂಬ್ಲೆ ಅವರು ತಮ್ಮ ಆಕ್ರಮಣದ ಮಾತುಗಳನ್ನು ಹಿಂದೆ ತೆಗೆದುಕೊಳ್ಳುವಂತೆ ಮಾಡಬೇಕು. ಇಂಥ ದುರಾಚಾರಿಗಳು ಮತ್ತೊಮ್ಮೆ ಬಾಯ್ಬಿಡದಂತೆ ಮಾಡಬೇಕು.೨. ಪರಿಷತ್ತಿನ ಸದಸ್ಯರ ಸಂಖ್ಯೆ ಈಗ ಒಂದು ಲಕ್ಷದ ಹದಿನೆಂಟು ಸಾವಿರದ ನಾನೂರನ್ನು ಮುಟ್ಟುತ್ತಿದೆ. ಇನ್ನೂ ಹೆಚ್ಚಬಹುದು. ಈ ಎಲ್ಲ ಸದಸ್ಯರಿಗೂ ಪರಿಷತ್ತಿನಿಂದ ಒಂದೇ ಒಂದು ಪತ್ರವು ಹೋಗಬೇಕಾದರೂ ಸುಮಾರು ಆರು ಲಕ್ಷ ರೂಪಾಯಿಗಳು ಖರ್ಚಾಗುತ್ತದೆ. ಇಂಥ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕಳಿಸಬೇಕಾದರೂ ತೆರೆದ ಅಂಚೆಗಾದರೂ ಐದು ಲಕ್ಷ ರೂಪಾಯಿಗಳು ವ್ಯಯವಾಗುತ್ತದೆ. ಕನ್ನಡನುಡಿ ಪತ್ರಿಕೆಯನ್ನು ಕಳಿಸಬೇಕಾದರೂ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿಗಳಾಗುತ್ತವೆ. ಈಗ ಸದಸ್ಯತ್ವವನ್ನು ಎರಡು ಭಾಗ ಮಾಡಿ ಒಂದು ತಿಂಗಳ ಕನ್ನಡನುಡಿಯನ್ನು ಮೊದಲ ಭಾಗಕ್ಕೆ ಎರಡನೆಯ ತಿಂಗಳ ಕನ್ನಡನುಡಿಯನ್ನು ಮತ್ತೊಂದು ಭಾಗಕ್ಕೆ ಕಳಿಸಲಾಗುತ್ತಿದೆ ಎಂದು ಸಂಪಾದಕರು ನನಗೆ ತಿಳಿಸಿದರು. ನಿಜವಾಗಿ ಕನ್ನಡನುಡಿ ಪತ್ರಿಕೆಯನ್ನು ಯಾರು ನಿರೀಕ್ಷಿಸುತ್ತಾರೆಯೋ ಅದನ್ನು ಪರಿಷತ್ತಿಗೆ ತಿಳಿಸಬೇಕೆಂದು ಸದಸ್ಯರನ್ನು ಕೇಳಿಕೊಂಡರೆ ಆಗ ಯಾರು ಉತ್ತರ ಕೊಡುವುದಿಲ್ಲವೋ ಅಂಥವರಿಗೆ ಕಳಿಸದೆ ಇರಬಹುದು. ಈ ಬಗ್ಗೆ ಜಿಲ್ಲೆಯ ಪ್ರತಿನಿಧಿಯಾಗಿರುವ ಪರಿಷತ್ತಿನ ಕಾರ್ಯಸಮಿತಿಯ ಸದಸ್ಯರು ತಮ್ಮ ಜಿಲ್ಲೆಗಳಿಂದ ಇಂಥ ಅಂಕಿ ಅಂಶಗಳನ್ನು ಪ್ರಾಮಾಣಿಕವಾಗಿ ಕಂಡುಹಿಡಿದರೆ ಒಂದು ಉತ್ತಮವಾದ ಉಳಿತಾಯದ ಕೆಲಸವಾಗುತ್ತದೆ. ನಮ್ಮ ಎಲ್ಲ ಸದಸ್ಯರೂ ಪರಿಷತ್ತಿನ ಅಭಿಮಾನಿಗಳು ನಿಜ. ಆದರೆ ಅವರ ವೃತ್ತಿಗಳ ಬಾಹುಳ್ಯದಲ್ಲಿ ಅವರಿಗೆ ಕನ್ನಡನುಡಿಯನ್ನು ಓದುವುದಕ್ಕೆ ಅವಕಾಶವೇ ಸಿಗದ ಎಷ್ಟೋ ಜನರಿರುತ್ತಾರೆ. ಇದನ್ನು ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಗಣಕಯಂತ್ರದ ಸೌಲಭ್ಯ ಇರುವ ಸದಸ್ಯರಿಗೆ ಇ-ಅಂಚೆಯ ಮೂಲಕ ಕನ್ನಡನುಡಿಯನ್ನು ಕಳುಹಿಸಿ ಅಂಚೆವೆಚ್ಚವನ್ನು ಉಳಿಸಬಹುದು.ಪರಿಷತ್ತಿನ ಅಧ್ಯಕ್ಷ ಪದವಿಗೆ ಚುನಾವಣೆಗೆ ನಿಲ್ಲುವವರು ಇನ್ನು ಮುಂದೆ ರಾಜಕೀಯ ಚುನಾವಣೆಗೆ ಖರ್ಚು ಮಾಡುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಸಾಹಿತ್ಯದ ಕ್ಷೇತ್ರದಲ್ಲಿ ಇಂಥವರಾರೂ ಇಲ್ಲವೆಂದು ನನ್ನ ಭಾವನೆ. ಆದ್ದರಿಂದ ಇಂಗ್ಲಿಷಿನಲ್ಲಿ Electoral collegeಎಂದು ಕರೆಯುವ ಪದ್ಧತಿ ಇದೆ. ಸಂಸ್ಥೆಗಳಿಗೆ ಈ ಬಗೆಯ ಏರ್ಪಾಟು ಮಾದರಿ. ಅದರ ಪ್ರಕಾರ ಎಲ್ಲ ಸದಸ್ಯರು ಎಷ್ಟೇ ಜನರಿರಲಿ ಚುನಾವಣೆಗೆ ನಿಲ್ಲುವ ಮತ್ತು ಮತವನ್ನು ಚಲಾಯಿಸುವ ಒಂದು ಸದಸ್ಯ ವರ್ಗವನ್ನು ರೂಪಿಸಿಕೊಳ್ಳುತ್ತಾರೆ. ಹಾಗೆ ನಮ್ಮಲ್ಲಿ ಸಾಹಿತಿಗಳಾಗಿರುವ ಸದಸ್ಯರನ್ನೆಲ್ಲ ಕೂಡಿಸಿ ಒಂದು ಮತ ಚಲಾಯಿಸುವ ವರ್ಗವನ್ನು ನಿರ್ಮಿಸುವುದು ಸಾಧ್ಯವೇ ಎಂದು ಪರಿಶೀಲನೆ ಮಾಡಬೇಕೆಂದು ಸೂಚಿಸುತ್ತೇನೆ. ಹೀಗೆ ಮಾಡಿದರೆ ಪರಿಷತ್ತಿನ ಸಾಹಿತ್ಯ ಕಾರ್ಯಕ್ಕೆ ಬೆಂಬಲ ಹೆಚ್ಚುತ್ತದೆ. ಈಗಿನಂತೆ ಅಧ್ಯಕ್ಷತೆಗೆ ಅರ್ಹರನ್ನು ಆರಿಸಬಹುದು. ಇಲ್ಲದಿದ್ದರೆ ಮುಂದೆ ಪರಿಷತ್ತು ರಾಜಕೀಯ ಸಂಸ್ಥೆಯಾಗಿಬಿಡುತ್ತದೆ. ಸಾಹಿತ್ಯಕ್ಕೆ ಇದು ಅಪಾಯ.೩. ಪರಿಷತ್ತಿನ ಕಾರ್ಯವ್ಯಾಪ್ತಿ ಹೆಚ್ಚಾಗಿದೆ. ಜಿಲ್ಲೆ, ತಾಲ್ಲೂಕುಗಳಲ್ಲಿ ಸಾಹಿತ್ಯಕಾರ್ಯ ನೆರವೇರುತ್ತಿವೆ. ಈ ಬಗೆಯ ಕಾರ್ಯಕ್ರಮಗಳಿಗೆ ಧರ್ಮಸ್ಥಳದಲ್ಲಿ ನಡೆಯುವ ಧರ್ಮ-ಸಾಹಿತ್ಯ ಸಮ್ಮೇಳನಗಳೂ ಮೂಡಬಿದಿರೆಯ ನುಡಿಸಿರಿ ಸಮ್ಮೇಳನಗಳೂ ವಿರಾಸತ್ಗಳೂ ಮಾದರಿಯಾಗಬೇಕು. ಕೆಲವು ಮಠಗಳು ನಡೆಸುವ ಸಾಹಿತ್ಯ ಕಾರ್ಯಕ್ರಮಗಳನ್ನೂ ಮಾರ್ಗದರ್ಶಿಗಳಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಕೇಂದ್ರ ಪ್ರದೇಶವಾದ ಬೆಂಗಳೂರಿನಲ್ಲಿ ಸಾಹಿತ್ಯ ಕಾರ್ಯ ಕಡಿಮೆಯಾಗಿದೆ. ಈಗ ಕನ್ನಡ ಸಾಹಿತ್ಯದಲ್ಲಿ ವಿಮರ್ಶನ ಕ್ಷೇತ್ರದಲ್ಲಿ ತುಂಬ ಬದಲಾವಣೆ ನಡೆದಿದೆ. ಈಗಿನ ವಿದ್ವಾಂಸರು ನಮ್ಮ ಪ್ರಾಚೀನ ಕವಿಗಳ ಕೃತಿಗಳನ್ನು ಪುನರ್‌ವಿಮರ್ಶೆ ಮಾಡುತ್ತಿದ್ದಾರೆ. ಹೊಸ ಆಲೋಚನೆಗಳೂ ಹೊರ ಹೊಮ್ಮುತ್ತಿವೆ. ಈ ದೃಷ್ಟಿಯಿಂದ ಪರಿಷತ್ತು ಬೆಂಗಳೂರಿನಲ್ಲಿ ಪ್ರತಿವರ್ಷ ಒಬ್ಬ ಪ್ರಾಚೀನ ಕವಿಯ ಬಗ್ಗೆ ಈ ಹೊಸ ಆಲೋಚನೆಗಳ ವಿಮರ್ಶೆಯ ಒಂದು ವಿಚಾರ ಸಂಕಿರಣವನ್ನು ನಡೆಯಿಸಿ ಆ ಸಭೆಯ ಉಪನ್ಯಾಸಗಳನ್ನು ಒಂದು ಪುಸ್ತಕವನ್ನಾಗಿ ಪ್ರಕಟಿಸಬೇಕೆಂದು ನನ್ನ ಮತ್ತೊಂದು ಸೂಚನೆಯನ್ನು ಪರಿಷತ್ತಿನ ಮುಂದೆ ಇಡುತ್ತೇನೆ. ಹೀಗೆಯೇ ಸಣ್ಣ ಪ್ರಮಾಣದಲ್ಲಿ ಪ್ರತಿವರ್ಷವು ಎರಡು ತಿಂಗಳಿಗೊಮ್ಮೆ ಯುವ ಪ್ರತಿಭೆ, ಮಕ್ಕಳ ಸಾಹಿತ್ಯ, ಮಹಿಳೆಯರ ಕೃತಿಗಳು, ಒಂದು ವರ್ಷದ ಎಲ್ಲ ಪ್ರಕಾರದ ಕೃತಿಗಳ ವಿಮರ್ಶೆ ಇತ್ಯಾದಿ ಕಾರ್ಯಕ್ರಮವನ್ನು ಇಟ್ಟುಕೊಂಡು ಅಂಥ ಸಭೆಯಲ್ಲಿ ನಡೆಯುವ ಉಪನ್ಯಾಸಗಳನ್ನು ಬರೆಸಿ ಪ್ರಕಟಿಸುವ ಕಾರ್ಯವೂ ಆಗಬೇಕು. ಆಗ ಕೇಂದ್ರದ ಕಾರ್ಯಕ್ರಮಗಳು ಜಿಲ್ಲೆಗಳಿಗೆ ಮಾದರಿಯಾಗುತ್ತವೆ. ವಿಶಿಷ್ಟವಾಗಿ ಈ ವರ್ಷ ನೇಮಿಚಂದ್ರನ ಬಗ್ಗೆ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಬೇಕೆಂದು ನನ್ನ ಸೂಚನೆ. ನೇಮಿಚಂದ್ರನು ಅವನ ನೇಮಿಪುರಾಣವನ್ನು ಪೂರೈಸಿದ್ದರೆ ಮಹಾಕವಿಯಾಗಿ ಪರಿಗಣಿತನಾಗುತ್ತಿದ್ದನು. ಅದಾಗದೆ ಅವನು ಮಹಾಕವಿ ಪಟ್ಟದಿಂದ ವಂಚಿತನಾಗಿದ್ದಾನೆ. ಅವನನ್ನು ಎತ್ತಿಹಿಡಿಯುವ ಕಾರ್ಯ ಆಗಬೇಕಾಗಿದೆ. ಹೀಗೆಯೇ ರುದ್ರಭಟ್ಟನ, ಷಡಕ್ಷರಿಯ ಕೃತಿಗಳನ್ನು ಪರಿಶೀಲಿಸಬೇಕಾದೀತು!೪. ಕನ್ನಡ ನಾಡಿನಲ್ಲಿ ಕನಕ, ಪುರಂದರರ ಕೃತಿಗಳನ್ನು ಕುರಿತ ಅನುಚಿತವಾದ ಕೆಲವು ಹೇಳಿಕೆಗಳು ಬರುತ್ತಿವೆ. ಇಬ್ಬರೂ ಶ್ರೇಷ್ಠ ಸಂತರು. ಇವರ ಕೃತಿಗಳ ಬಗ್ಗೆ ಸತ್ಯಾಸತ್ಯತೆಯನ್ನು ವಿದ್ವತ್ತೆಯಿಂದ ಪರಿಶೀಲಿಸಿ ಸಮರ್ಥವಾಗಿ ತೀರ್ಮಾನವನ್ನು ಸ್ಥಾಪಿಸುವ ಕಾರ್ಯವಾಗಬೇಕಾಗಿದೆ. ಇದೂ ಒಂದು ಮುಖ್ಯ ಕಾರ್ಯ.೫. ಕನ್ನಡದ ನಾಡಗೀತೆಯೆಂದು ಒಂದು ಗೀತೆಯನ್ನು ಆಯ್ಕೆಮಾಡಲಾಗಿದೆ. ಕಾರ್ಯಕ್ರಮಗಳಲ್ಲಿ ಅದನ್ನು ಹಾಡುವಾಗ ಸಭೆಯ ಎಲ್ಲರೂ ನಿಲ್ಲಬೇಕೆಂದು ಸೂಚನೆಯಿದೆ. ಈ ಗೀತೆಯನ್ನು ಹಾಡುವವರು ಸಾಲುಗಳನ್ನು ಎರಡು ಮೂರು ಸಲ ಹಾಡಿ ಹೆಚ್ಚು ಕಾಲವನ್ನು ತೆಗೆದುಕೊಳ್ಳುತ್ತಾರೆ. ನಾಡಗೀತೆ ಯಾವಾಗಲೂ ಸಂಗ್ರಹವಾಗಿ ೩ ನಿಮಿಷಕ್ಕಿಂತ ಹೆಚ್ಚಿಲ್ಲದೆ ಇರಬೇಕು. ಈ ಬಗ್ಗೆ ಪರಿಷತ್ತು ಪರಿಶೀಲನೆ ನಡೆಸಿ ಸರಕಾರಕ್ಕೆ ಸಲಹೆಯನ್ನು ನೀಡಬೇಕು.೬. ‘ಶಾಸ್ತ್ರೀಯ ಭಾಷೆ’ ಎಂಬ ಅಬದ್ಧವಾದ ಶಬ್ದವು ಸಿಂಹಾಸನದ ಮೇಲೆ ಕುಳಿತುಬಿಟ್ಟಿದೆ. ಅದನ್ನು ಕೆಳಗಿಳಿಸಿ ಅಭಿಜಾತ ಭಾಷೆ ಅಥವಾ ಸಮೃದ್ಧ ಪ್ರಾಚೀನ ಭಾಷೆ ಎಂಬ ಶಬ್ದವನ್ನು ಉಪಯೋಗಿಸಬೇಕು. ಕೇಂದ್ರ ಸರಕಾರದಿಂದ ಕನ್ನಡಕ್ಕೆ ಅಭಿಜಾತ ಭಾಷೆಯೆಂಬ ಪಟ್ಟ ದಕ್ಕಿದೆ. ಆದರೆ ಯಾವ ಧನವೂ ನಮಗೆ ಬಂದಿಲ್ಲ. ಈ ಹಣದ ಗಳಿಕೆಯಾಗಿ ಆ ಹಣವನ್ನು ಹೇಗೆ ಉಪಯೋಗಿಸಬೇಕೆಂಬ ಒಂದು ಸ್ಪಷ್ಟ ಆಲೋಚನೆಯನ್ನು ಪರಿಷತ್ತು ರಚಿಸಬೇಕು. ಅದಕ್ಕಾಗಿ ಒಂದು ವಿದ್ವಾಂಸರ ಸಮಿತಿಯನ್ನು ಸ್ಥಾಪಿಸಬೇಕು. ಇದು ಕೂಡಲೆ ಆಗಬೇಕು. ಯೋಜನೆಯನ್ನು ಕಳಿಸದಿದ್ದರೆ ಅನುದಾನ ಬರುವುದಿಲ್ಲ. ಪರಿಷತ್ತು ಈ ವಿಚಾರವಾಗಿ ನಿರ್ಣಾಯಕವಾದ ತೀರ್ಮಾನವನ್ನು ಕೈಗೊಂಡು ತಾನೇ ಮುಂಚೂಣಿಯ ನಾಯಕ ಎಂಬ ಸ್ಥಿತಿಗೆ ಮುಟ್ಟಬೇಕು.೭. ಬಿ.ಎಂ.ಶ್ರೀಯವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನವೋದಯದ ನೆನಪಿಗಾಗಿ ‘ಕನ್ನಡ ಬಾವುಟ’ ಎಂಬ ಗ್ರಂಥವನ್ನು ಪ್ರಕಟಿಸಿದರು. ಅದು ಸುಮಾರು ಹತ್ತು ಸಲ ಪುನರ್‌ಮುದ್ರಣವಾಗಿದೆ. ಈಗ ನವೋದಯದ ಶತಮಾನದ ನೆನಪಿಗಾಗಿ ಈ ವರ್ಷವೇ ಇಂದಿನ ಅಧ್ಯಕ್ಷರು ಈ ಶತಮಾನದ ಸಾಹಿತ್ಯ ಕೃಷಿಯಲ್ಲಿ ಅತ್ಯುತ್ತಮವೆಂದು ಕಂಡುಬಂದ ನೂರು ಕವನಗಳನ್ನು ಆಯ್ಕೆಮಾಡಿ ಮತ್ತೊಂದು ಕವನ ಸಂಕಲನವನ್ನು ಪ್ರಕಟಿಸಬೇಕು. ಕನ್ನಡ ಭುವನೇಶ್ವರಿಗೆ ಒಂದು ಧ್ವಜ, ಒಂದು ಶ್ವೇತಚ್ಛತ್ರ ಮುಖ್ಯ. ಕನ್ನಡ ಭಾಷೆಗೆ ಒಂದು ಬಾವುಟವನ್ನು ಬಿ.ಎಂ.ಶ್ರೀ ನೀಡಿದರು. ಇಂದಿನ ಅಧ್ಯಕ್ಷರು ಈಗ ಒಂದು ‘ಬೆಳ್ಗೊಡೆ’ಯನ್ನು ನೀಡಲಿ ಎಂದು ಸೂಚಿಸುತ್ತೇನೆ.೮. ನಮ್ಮ ಸರಕಾರವು ರೈತರ ಸಮಾಜದ ಒಳಿತಿಗಾಗಿ ‘ಯಶಸ್ವಿನಿ’ ಎಂಬ ಒಂದು ಆರೋಗ್ಯ ವಿಮೆಯ ಸಹಾಯ ಯೋಜನೆಯನ್ನು ಸ್ಥಾಪಿಸಿದೆ. ಇದರಿಂದ ಲಕ್ಷಾಂತರ ರೈತರ ಕುಟುಂಬಗಳಿಗೆ ಸಹಾಯವಾಗುತ್ತಿದೆ. ಅನೇಕ ಸಾಹಿತಿಗಳಿಗೂ ಅವರ ಕುಟುಂಬಕ್ಕೂ ಈ ರೀತಿಯ ಆರೋಗ್ಯವಿಮೆಯ ಆವಶ್ಯಕತೆ ಇದೆ. ಅಂಥವರಿಗೆ ‘ಯಶಸ್ವಿನಿ’ ರೀತಿಯ ಆರೋಗ್ಯ ವಿಮೆಯ ಒಂದು ಯೋಜನೆಯನ್ನು ಸ್ಥಾಪಿಸಿದರೆ ಈ ವರ್ಗಕ್ಕೆ ತುಂಬ ಉಪಕಾರವಾಗುತ್ತದೆ ಎಂದು ತಿಳಿದಿದ್ದೇನೆ. ಸಾಹಿತ್ಯ ಪರಿಷತ್ತು ಈ ಬಗ್ಗೆ ಸರಕಾರಕ್ಕೆ ಒಂದು ಶಿಫಾರಸನ್ನು ಕಳಿಸಬಹುದು.೯. ನಮ್ಮ ರಾಷ್ಟ್ರದ ಪ್ರಸಿದ್ಧ ವೈಜ್ಞಾನಿಕ ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳು (NAL-CSIR)ಎಂಬ ಹೆಸರಿನ ದೊಡ್ಡ ಸಂಸ್ಥೆಯು ಕನ್ನಡದಲ್ಲಿ ವೈಜ್ಞಾನಿಕ ಲೇಖನಗಳ ಬೆಳವಣಿಗೆಗೆ ಮಾಡಿರುವಷ್ಟು ಸಹಾಯವನ್ನು ಇತರ ಯಾವ ವೈಜ್ಞಾನಿಕ ಸಂಸ್ಥೆಯೂ ಮಾಡಿಲ್ಲ. ಅದು ಕಳೆದ ಮೂವತ್ತೆ ದು ವರ್ಷಗಳಿಂದ ‘ಕಣಾದ’ ಎಂಬ ಹೆಸರಿನ ವಾರ್ಷಿಕ ವಿಜ್ಞಾನ ಪತ್ರಿಕೆಯನ್ನು ಪ್ರಕಟಮಾಡುತ್ತ ಇದೆ. ‘ಕಣಾದ’ ಎಂಬುದು ನಮ್ಮ ದೇಶದ ಒಬ್ಬ ಪ್ರಾಚೀನವಾದ ಮಹರ್ಷಿಯ ಹೆಸರು. ಅವನು ಅಣುವಿಜ್ಞಾನಕ್ಕೆ ಆದ್ಯಪ್ರವರ್ತಕ. ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆ ಅಣುತತ್ವವನ್ನು ಪ್ರತಿಪಾದಿಸಿದನು. ಆತನ ಹೆಸರನ್ನು ಆಶ್ರಯಿಸಿ ಈ ಸಂಸ್ಥೆಯಲ್ಲಿ ನಡೆಯುವ ವಿವಿಧ ಸಂಶೋಧನೆಗಳನ್ನು ಕುರಿತ ಕನ್ನಡ ಭಾಷೆಯ ಲೇಖನಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸುತ್ತಾ ಇದೆ. ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಮೂಲವಿಜ್ಞಾನ ಮತ್ತು ವೈಮಾನಿಕ ಕ್ಷೇತ್ರ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಆಸಕ್ತಿಯನ್ನು ಮೂಡಿಸುತ್ತ ಇದೆ. ಪ್ರತಿವರ್ಷ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ಹಂಚುತ್ತಾ ಇದೆ. ಈ ವರ್ಷದ ಪತ್ರಿಕೆ ೩೬ನೆಯ ಸಂಪುಟವನ್ನು ಓದಿ ನನಗೆ ಸಂತೋಷವಾಯಿತು. ಇದು ಇತರ ವಿಜ್ಞಾನ ಸಂಸ್ಥೆಗಳಿಗೆ ಮಾದರಿಯಾದ ಕಾರ್ಯವಾಗಿದೆ. ಆ ಸಂಸ್ಥೆಗಳು ಕನ್ನಡದ ಪ್ರೇಮವನ್ನು ಹೀಗೆ ವ್ಯಕ್ತಪಡಿಸಬೇಕು. ಈ ಸಂಸ್ಥೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಾರ್ಗದರ್ಶನ ಮಾಡಬೇಕು.೧೦. ಕನ್ನಡ ಬೆಳವಣಿಗೆಯ ದೃಷ್ಟಿಯಲ್ಲಿ ನಮ್ಮ ಸಮೂಹ ಮಾಧ್ಯಮಗಳು ಮಾಡಬಹುದಾದ ಕಾರ್ಯವು ಅಪಾರವಾಗಿದೆ. ದೂರದರ್ಶನದಲ್ಲಿಯೂ ಇತರ ಖಾಸಗಿ ಪ್ರಸಾರ ಸಂಸ್ಥೆಗಳೂ ಅವುಗಳಲ್ಲಿ ಪ್ರಸಾರಗೊಳ್ಳುವ ಧಾರಾವಾಹಿಗಳಲ್ಲಿಯೂ, ವಾರ್ತಾ ವಾಚನಗಳಲ್ಲಿಯೂ ಕನ್ನಡದ ಶ್ರೀಮಂತಿಕೆಯನ್ನು ಪ್ರಕಟಿಸಬೇಕು. ಇಂಗ್ಲಿಷ್ ಶಬ್ದಗಳನ್ನು ಅನವಶ್ಯಕವಾಗಿ ಉಪಯೋಗ ಮಾಡುವುದನ್ನು ತಪ್ಪಿಸಬೇಕು. ಧಾರಾವಾಹಿಗಳ ನಟನಟಿಯರೂ ಕನ್ನಡದ ನುಡಿಗಟ್ಟುಗಳನ್ನು ಪ್ರಭಾವಯುತವಾಗಿ ಉಪಯೋಗಿಸಿದರೆ ವೀಕ್ಷಕರ ಮನಸ್ಸಿನಲ್ಲಿ ಕನ್ನಡದ ಪ್ರೀತಿ ಮೂಡುತ್ತದೆ. ಅವರೆಲ್ಲ ಈ ಕೆಲಸವನ್ನು ಆವಶ್ಯಕವಾಗಿ ಮಾಡಬೇಕು. ವಾರ್ತಾಪತ್ರಿಕೆಗಳಿಗೆ ಅಗತ್ಯವಾಗುವ ಒಂದು ಇಂಗ್ಲಿಷ್ ಈಡಿಯಂಗಳಿಗೆ ಸಮಾನವಾದ ಕನ್ನಡ ನುಡಿಗಟ್ಟುಗಳನ್ನು ತಯಾರು ಮಾಡುವ ಒಂದು ವಿಧಾನವಿದೆ. ಅದನ್ನು ಕುರಿತು ಪತ್ರಿಕಾ ಬಳಗದವರು ಸಹಾಯ ಮಾಡಿದರೆ ಒಂದು ಉತ್ತಮ ನುಡಿಗಟ್ಟಿನ ನಿಘಂಟನ್ನು ತಯಾರಿಸಬಹುದು. ವಾರ್ತಾಪತ್ರಿಕೆಗಳಲ್ಲಿ ವಿವಿಧ ಕ್ಷೇತ್ರಗಳು ವರ್ತಮಾನಗಳನ್ನೂ ವಿಶಿಷ್ಟ ಲೇಖನಗಳನ್ನೂ ಇಂಗ್ಲಿಷಿನಲ್ಲಿ ಪಡೆಯುತ್ತವೆ. ಈ ಸಾಮಗ್ರಿಯಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಇಂಗ್ಲಿಷ್ ಈಡಿಯಂಗಳೂ ಇರುತ್ತವೆ. ಆಯಾಭಾಗದ ಉಪಸಂಪಾದಕರು ಒಂದು ತಿಂಗಳ ಕಾಲ ಹಾಗೆ ಕಂಡುಬರುವ ಇಂಗ್ಲಿಷ್ ಈಡಿಯಂಗಳನ್ನು ಬೇರೆಯಾಗಿ ದಾಖಲಿಸಿ ಇಟ್ಟರೆ ಒಂದು ದೊಡ್ಡ ಈಡಿಯಂ ಭಂಡಾರ ಪ್ರಸಿದ್ಧವಾಗುತ್ತದೆ. ಬಳಿಕ ಈ ಈಡಿಯಂಗಳಿಗೆ ಸಮಾನವಾದ ಕನ್ನಡದ ನುಡಿಗಟ್ಟುಗಳನ್ನು ಕಂಡುಹಿಡಿಯಬಹುದು. ಇಲ್ಲದಿದ್ದರೆ ಹೊಸದಾಗಿ ನಿರ್ಮಾಣ ಮಾಡಬಹುದು. ವರ್ತಮಾನ ಪತ್ರಿಕೆಯವರು ಈ ಉಪಾಯವನ್ನು ಪ್ರಯೋಗಿಸಿದರೆ ನಾವು ಕೆಲವರು ಭಾಷಾಭ್ಯಾಸಿಗಳು ನಿಮಗೆ ಶಾಶ್ವತವಾದ ಕನ್ನಡ ನುಡಿಗಟ್ಟಿನ ಕೋಶವನ್ನು ತಯಾರಿಸಿ ಹಿಂದಿರುಗಿಸುತ್ತೇವೆ. ಎಲ್ಲ ಪತ್ರಿಕೆಗಳ ಉಪಸಂಪಾದಕರು ಈ ದೃಷ್ಟಿಯನ್ನು ಪರಿಶೀಲಿಸಬೇಕೆಂದು ನನ್ನ ವಿನಂತಿ. ಪರಿಷತ್ತು ಈ ಬಗ್ಗೆ ತೀವ್ರವಾಗಿ ಆಲೋಚಿಸಬೇಕು.೧೧. ಪತ್ರಿಕಾ ವೃತ್ತಿಯು ಬಹು ಪವಿತ್ರವಾದ ವೃತ್ತಿ. ಕನ್ನಡದ ಪತ್ರಿಕಾಕರ್ತರ ಹಿಂದಿನ ಚರಿತ್ರೆಯನ್ನು ಓದಿದರೆ ಎಂಥ ಶ್ರೀಮಂತ ಮನಸ್ಸಿನ ಮೇಧಾವಿಗಳೂ, ನಿಸ್ವಾರ್ಥ ಪರೋಪಕಾರಿಗಳೂ ವೃತ್ತಿಯಲ್ಲಿ ಪ್ರಾಮಾಣಿಕತೆ, ಧರ್ಮಶ್ರದ್ಧೆ, ಸಾಮಾಜಿಕ ನ್ಯಾಯಪರತೆ ಮತ್ತು ಬಾಳಿನಲ್ಲಿ ಸಂದರ್ಶಕತೆ - ಇವುಗಳನ್ನು ಮೆರೆದಿದ್ದಾರೆ ಎಂಬುದು ಕಣ್ಮುಂದೆ ಕಟ್ಟುತ್ತದೆ. ಆ ಹಿರಿಯರ ಮಾದರಿ ಈಗಲೂ ಅನುಸರಿಸಲು ಅರ್ಹವಾಗಿದೆ. ಜನರ ತಪ್ಪನ್ನು ಜನರಿಗೆ ತಿಳಿಸಿ, ಸರಕಾರದ ತಪ್ಪನ್ನು ಸರಕಾರಕ್ಕೆ ತಿಳಿಸಿ ನವಜೀವನಕ್ಕೆ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಈಗ ನಮ್ಮ ಪತ್ರಿಕಾಕರ್ತರು ಅದೇ ರೀತಿ ಕನ್ನಡ ಭಾಷೆಯ ಬಗ್ಗೆ ದುಡಿಯಬೇಕಾದ ಕಾಲ ಒದಗಿ ಬಂದಿದೆ. ಪರಿಷತ್ತು ಪತ್ರಿಕಾ ಪ್ರಪಂಚದ ಬಗ್ಗೆ ತುಂಬು ವಿಶ್ವಾಸದಿಂದ ಭಾಷಾಬಾಂಧವ್ಯವನ್ನು ಬೆಳೆಸಬೇಕು.೧೨. ನಮ್ಮ ನಾಡಿನ ಮೂಲೆ ಮೂಲೆಗಳಲ್ಲಿ ಅನೇಕ ಚಿಕ್ಕ ಪುಟ್ಟ ಪತ್ರಿಕೆಗಳೂ ನಿಯತಕಾಲಿಕಗಳೂ ಪ್ರಕಟವಾಗುತ್ತಾ ಇವೆ. ಇವುಗಳಲ್ಲಿ ಆಯಾ ಪ್ರದೇಶದಲ್ಲಿ ಪ್ರಚಾರದಲ್ಲಿರುವ ಕನ್ನಡ ನುಡಿಗಟ್ಟುಗಳೂ ಪ್ರಯೋಗವಾಗುತ್ತವೆ. ಆಡುಮಾತಿನ ಆ ಪ್ರಯೋಗಗಳೂ ತುಂಬ ಅರ್ಥವತ್ತಾಗಿರುತ್ತವೆ. ನಾನದನ್ನು ಗಮನಿಸಿದ್ದೇನೆ. ಆ ನುಡಿಗಟ್ಟುಗಳು, ಕೆಲವು ವಿಶಿಷ್ಟ ಶಬ್ದಗಳು ಇವುಗಳನ್ನು ನಾವು ಸಂಗ್ರಹಿಸಿ ದಾಖಲಿಸಬೇಕು. ಇಂಥ ಸಣ್ಣ ಸಣ್ಣ ಪತ್ರಿಕೆಗಳಿಗೆ ಆರ್ಥಿಕ ಬಲವಿರುವುದಿಲ್ಲ. ಇಂಥ ಸ್ಥಿತಿ ಕನ್ನಡಕ್ಕೆ ಮಾತ್ರ ಸೇರಿದ್ದಲ್ಲ. ಭಾರತದ ಎಲ್ಲ ಭಾಷೆಗಳಲ್ಲಿಯೂ ಈ ಸ್ಥಿತಿ ಇದೆ. ಇಂಥ ಸ್ಥಿತಿಯಿಂದ ಈ ಸಣ್ಣ ಪತ್ರಿಕೆಗಳನ್ನು ಮೇಲಕ್ಕೆತ್ತುವ ಒಂದು ಉಪಾಯವಿದೆ. ಅದನ್ನೂ ನಾವು ಗಮನಿಸಬೇಕು. ನಮ್ಮ ದೇಶದಲ್ಲಿರುವ ಬಹುರಾಷ್ಟ್ರೀಯ ಮತ್ತು ಸ್ವದೇಶಿ ವಾಣಿಜ್ಯೋದ್ಯಮಗಳು ತಮ್ಮ ಜಾಹೀರಾತುಗಳನ್ನು ಪತ್ರಿಕೆಗಳಿಗೆ ದೂರದರ್ಶನ ವಾಹಿನಿಗಳಿಗೆ ನೀಡುತ್ತವೆ. ಇದಕ್ಕೆ ನೀಡುವ ಹಣದ ಗಾತ್ರ ಬೃಹತ್ತಾಗಿ ವರ್ಷಕ್ಕೆ ಹಲವು ಸಾವಿರ ಕೋಟಿ ರೂಪಾಯಿಗಳಷ್ಟಾಗುತ್ತವೆ. ಈ ಗಾತ್ರದ ಹಣದಲ್ಲಿ ಶೇಕಡ ೧೫ ರಷ್ಟನ್ನು ಎಲ್ಲ ಭಾಷೆಗಳ ಚಿಕ್ಕ ಪುಟ್ಟ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಕೊಡಲೇಬೇಕೆಂಬ ಕಾನೂನನ್ನು ಕೇಂದ್ರ ಸರಕಾರ ಮಾಡಿಬಿಟ್ಟರೆ ಸಾಕು ಈ ಸಣ್ಣ ಪುಟ್ಟ ಪತ್ರಿಕೆಗಳು ಬದುಕಿ ಹೋಗುತ್ತವೆ. ಇದರಿಂದ ಭಾರತದ ಎಲ್ಲ ಭಾಷೆಗಳ ಚಿಕ್ಕಪುಟ್ಟ ಪತ್ರಿಕೆಗಳಿಗೆ ಸಹಾಯವಾಗಿ ಆ ಪತ್ರಿಕೆಗಳು ಬಳಸುವ ಪ್ರಾದೇಶಿಕ ಸೊಗಡು ಉಳಿದು ಆ ಭಾಷೆಗಳು ಬೆಳೆಯಲು ಸಹಾಯವಾಗುತ್ತದೆ. ಎಲ್ಲ ಪ್ರಾಂತದ ಎಲ್ಲ ಲೋಕಸಭೆ, ರಾಜ್ಯಸಭೆಗಳ ಸದಸ್ಯರು, ಎಲ್ಲ ಕೇಂದ್ರ ಮಂತ್ರಿಗಳು ಈ ಕೆಲಸವನ್ನು ಮಾಡಿಕೊಡಬೇಕು. ಸಣ್ಣ ಪತ್ರಿಕೆಗಳ, ನಿಯತಕಾಲಿಕಗಳ ಒಕ್ಕೂಟವು ಇದರ ಬಗ್ಗೆ ಪ್ರಯತ್ನಪಡಬೇಕು ಮತ್ತು ಉದ್ಯಮಗಳಿಗೆ ಇದನ್ನು ಅವರ ‘ಸಾಮಾಜಿಕ ಹೊಣೆಗಾರಿಕೆ’ ಎಂದು ಪರಿಗಣಿಸುವಂತೆ ಮನವರಿಕೆ ಮಾಡಿಕೊಡಬೇಕು.ಕನ್ನಡ ಭಾಷೆ ಈಗ ನಿಜವಾಗಿ ಕಷ್ಟಕ್ಕೆ ಸಿಕ್ಕಿದೆ. ಅದರ ಮೇಲೆ ಇಂಗ್ಲಿಷಿನಂಥ ಕೊಲೆಗಡುಕ ಭಾಷೆಯ ಕಣ್ಣು ಬಿದ್ದಿದೆ. ಜಾಗತೀಕರಣದ ಪರಿಣಾಮವಾಗಿ ಕನ್ನಡವನ್ನು ಮಾತನಾಡುವ ಎಲ್ಲ ಪ್ರದೇಶಗಳಲ್ಲಿಯೂ ಇಂಗ್ಲಿಷ್ ನುಗ್ಗುತ್ತ ಇದೆ. ನಮ್ಮ ಶಿಕ್ಷಣ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಪರದೇಶಗಳ ಬೋಧನ ಪದ್ಧತಿಗಳನ್ನು ಆಮದು ಮಾಡುತ್ತಾ ಸ್ವಂತಿಕೆಯನ್ನು ಶಿಕ್ಷಕರು ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಣದಲ್ಲಿ ಕನ್ನಡವನ್ನು ಉಳಿಸಿಕೊಳ್ಳಲಾರದೆ ಹೋದರೆ ಅಪಾಯ ತಪ್ಪಿದ್ದಲ್ಲ. ಇದನ್ನು ಎಷ್ಟು ಒತ್ತಿ ಹೇಳಿದರೂ ಸಾಲದಾಗಿದೆ. ಈ ಆಕ್ರಮಣಶೀಲದಿಂದ ನಗರಪ್ರದೇಶಗಳಲ್ಲಿ ಕನ್ನಡದ ಪ್ರಯೋಗ ಕಡಿಮೆಯಾಗುತ್ತಾ ಇದೆ. ಈ ಸ್ಥಿತಿಯನ್ನು ಒಂದು ಜನಾಂದೋಳನದ ಮೂಲಕ ಬದಲಾವಣೆ ಮಾಡಬೇಕು. ಕನ್ನಡವು ಎರಡನೆಯ ಸ್ಥಾನಕ್ಕೆ ತಳ್ಳಲ್ಪಡುವ ಅಪಾಯವಿದೆ. ಇಂಗ್ಲಿಷ್ ಭಾಷೆಯೇ ಪ್ರಧಾನವಾಗಿ ಬೆಳೆಯುತ್ತಿರುವ ಎಲ್ಲ ದೇಶಗಳಲ್ಲಿಯೂ ಈ ಹೆದರಿಕೆ ಇದೆ. ಕೆನಡಾ ದೇಶದಲ್ಲಿ ಫ್ರೆಂಚ್ ಪ್ರಥಮ ಭಾಷೆಯಾದರೂ ಇಂಗ್ಲಿಷ್ ಭಾಷೆಯಿಂದ ಅದಕ್ಕೆ ಹೆದರಿಕೆ ಇದೆ. ಇದನ್ನು ಆ ದೇಶದಲ್ಲಿ ಪ್ರಮುಖ ಸಮಸ್ಯೆ ಎಂದು ಪರಿಗಣಿಸಿದ್ದಾರೆ. ಕನ್ನಡ ಸಾಯುವುದಿಲ್ಲ ಎಂಬುದು ನಿಜ. ಆದರೆ ಕರ್ನಾಟಕದಲ್ಲಿ ಅದು ತನ್ನ ಪ್ರಥಮ ಸ್ಥಾನವನ್ನು ಎಂದೂ ಕಳೆದುಕೊಳ್ಳಬಾರದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅದನ್ನು ಸ್ಥಿರವಾಗಿ ಉಳಿಸಬೇಕು. ಕನ್ನಡ ನಾಡಿನ ಎಲ್ಲರೂ ಈ ಸ್ಥಿತಿಯನ್ನು ತೀವ್ರವಾಗಿ ಗಮನಿಸಬೇಕು. ಪತ್ರಿಕಾಕರ್ತರು ಸಮೂಹಮಾಧ್ಯಮಗಳು ಮುಖ್ಯವಾಗಿ ಸಿನಿಮಾಲೋಕ ಇದನ್ನು ತಮ್ಮ ಕರ್ತವ್ಯಗಳಲ್ಲಿ ಒಂದಾಗಿ ಪರಿಗಣಿಸಬೇಕು. ಕನ್ನಡದ ಎಲ್ಲ ಸಂಘ ಸಂಸ್ಥೆಗಳೂ ಒಟ್ಟಾಗಿ ಕಾರ್ಯವನ್ನು ನಿರ್ವಹಿಸಬೇಕು. ನನ್ನ ಮಾತನ್ನು ಎಚ್ಚರಿಕೆಯ ಗಂಟೆ ಎಂದು ಭಾವಿಸಬೇಕಾಗಿ ವಿನಂತಿ.ಕನ್ನಡ ಸಿನಿಮಾ ಪ್ರಪಂಚವನ್ನು ನೆನೆದಾಗ ಈ ಲೋಕಕ್ಕೇ ಅಪಾಯ ಸಂಭವಿಸುತ್ತ ಇರುವುದು ನನ್ನ ಗಮನಕ್ಕೆ ಬಂದಿದೆ. ಇಷ್ಟು ದಿನಗಳೂ ‘ಡಬ್ಬಿಂಗ್’ ಎಂಬ ಅವ್ಯವಹಾರದಿಂದ ದೂರವಾಗಿದ್ದು ಸುಖವಾಗಿದ್ದ ಪ್ರಪಂಚಕ್ಕೆ ಈಗ ‘ಡಬ್ಬಿಂಗ್’ ಮತ್ತೆ ನುಗ್ಗುವ ಪ್ರಯತ್ನ ಮಾಡುತ್ತಿದೆಯಂತೆ. ‘ಡಬ್ಬಿಂಗ್’ ನಿಜವಾಗಿ ಕಲೇಯೇ ಅಲ್ಲ! ಅದು ಮತ್ತೆ ಕನ್ನಡ ಸಿನಿಮಾ-ದೂರದರ್ಶನಗಳಿಗೆ ತಲೆ ಹಾಕದಂತೆ ಕನ್ನಡಿಗರೆಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸುತ್ತೇನೆ.ನಮ್ಮ ಸಮಾಜದಲ್ಲಿರುವ ಶೋಷಿತರ ಬಗ್ಗೆ ಒಂದು ಸಂಗತಿಯನ್ನು ಎಲ್ಲರ ಗಮನಕ್ಕೆ ತರಲು ಉದಾಹರಣೆಯನ್ನು ನೀಡುತ್ತೇನೆ. ೧೯೭೨ರಲ್ಲಿ ನಮ್ಮ ರಾಜ್ಯದ ಮಂತ್ರಿಮಂಡಲದಲ್ಲಿ ಜನಪ್ರಿಯ ಮಂತ್ರಿಯಾಗಿದ್ದ ಬಸವಲಿಂಗಪ್ಪನವರು ಕೈಗೊಂಡ ಒಂದು ತೀರ್ಮಾನ ಎಲ್ಲ ಪ್ರಜೆಗಳ ಮನಸ್ಸಿಗೆ ಸಂತೋಷವನ್ನು ಉಂಟುಮಾಡಿತು. ಶೋಷಿತವರ್ಗದ ಒಂದು ಪಂಗಡದವರು ಮಾನವ ಮಲವನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತಿದ್ದರು. ಈ ಅಭ್ಯಾಸವು ಕೂಡಲೇ ನಿಲ್ಲಬೇಕೆಂದು ಆದೇಶ ಜಾರಿಗೆ ಬಂತು. ಮಾನವ ಹಕ್ಕುಗಳನ್ನು ಚಾಲ್ತಿಗೆ ತಂದ ತೀರ್ಮಾನವಾಗಿತ್ತು ಅದು. ಈ ಆದೇಶವು ಬಂದು ಸುಮಾರು ನಲವತ್ತು ವರ್ಷಗಳಾಗಿವೆ.ಈಚೆಗೆ ಕರ್ನಾಟಕ ಪ್ರದೇಶದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್. ನಾಯಕ್ ಅವರು, ೨೦೧೦ರ ಜುಲೈ ತಿಂಗಳಲ್ಲಿ ಬರೆದ ಲೇಖನದಲ್ಲಿ, ಸವಣೂರಿನಲ್ಲಿ ಅತಿ ಶೋಷಿತವರ್ಗದವರು ತಮ್ಮ ತಲೆಯ ಮೇಲೆ ಮಾನವ ಮಲವನ್ನು ಕದಡಿದ ನೀರಿನಿಂದ ಅಭಿಷೇಕ ಮಾಡಿಕೊಂಡು ಬಂಡಾಯವನ್ನು ನಡೆಸಿದ ಬಗ್ಗೆ ಬರೆದಿದ್ದರು. ಈ ವಿಚಾರದ ಬಗ್ಗೆ ೨೦೦೮ರಲ್ಲಿಯೇ ಸರಕಾರಕ್ಕೆ ಈ ಭಂಗಿ ಪದ್ಧತಿಯನ್ನು ನಿಲ್ಲಿಸಲು ಏರ್ಪಾಡು ಮಾಡಬೇಕೆಂದು ತಿಳಿಸಿ ಪತ್ರವನ್ನು ಬರೆದಿದ್ದನ್ನು ಉಲ್ಲೇಖಿಸಿದ್ದಾರೆ. ಆದರೆ ಏನೂ ಆಗಲಿಲ್ಲವೆಂದು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. ಹೀಗಿದ್ದೂ ಇಂಥ ಅತಿ ಅಮಾನವೀಯವಾದ ಈ ಪದ್ಧತಿಯನ್ನು ನಿಲ್ಲಿಸುವ ಒಂದು ಕಾರ್ಯವನ್ನು ಯಾವ ಪಕ್ಷ ಮಾಡಿದ್ದರೂ ಅದರ ಕೀರ್ತಿ ಆಕಾಶಕ್ಕೇರುತ್ತಿತ್ತು. ಎಂಥ ಅವಕಾಶವನ್ನು ನಮ್ಮ ಶಾಸಕರು ಕಳೆದುಕೊಂಡರಲ್ಲ ಎಂದು ವ್ಯಥೆಯಾಗುತ್ತದೆ. ನಮ್ಮ ಕೇಂದ್ರ ಸರಕಾರವು ವಿಶ್ವಸಂಸ್ಥೆಯ ಸಾರ್ವಜನಿಕ ಸಭೆಗೆ ವರದಿಯನ್ನು ಕಳಿಸುವಾಗ ನಮ್ಮ ದೇಶದಲ್ಲಿ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಲಾಗಿದೆ ಎಂದೇ ಕಳಿಸುತ್ತದೆ. ಎಂಥ ವಿಪರ್ಯಾಸಸ. ನಾವೆಲ್ಲ ಸಾಮಾನ್ಯರಲ್ಲಿ ಸಾಮಾನ್ಯರಾದ ಜನತೆ. ಶಾಸಕರಿಗೆ ಏನು ಹೇಳಬಹುದು?ಈಗ ಕರ್ನಾಟಕವು ಭಾರತದಲ್ಲಿಯೇ ಅತ್ಯಂತ ಭ್ರಷ್ಟವಾದ ರಾಜ್ಯ ಎಂಬ ಹೆಸರನ್ನು ಸಂಪಾದಿಸಿಬಿಟ್ಟಿದೆ. ಭಾರತದ ಸಂವಿಧಾನವು ಒಂದು ಉತ್ಕೃಷ್ಟ ರಾಜ್ಯಧರ್ಮಶಾಸ್ತ್ರದಂತೆ ಇದೆ ಎಂದು ಹೆಸರು ಪಡೆದಿದೆ. ಹೀಗಿದ್ದೂ ಅದನ್ನು ತಿರಸ್ಕರಿಸಿ ರಾಜಕೀಯ ಪಕ್ಷಗಳು ಅಧಿಕಾರ ದಾಹದಿಂದ ಕಚ್ಚಾಡುತ್ತಿವೆ. ಬಯ್ಗಳು ಅಸಮರ್ಥರ ಆಯುಧ. ಅದು ದುರ್ಬಲರು ಉಪಯೋಗಿಸುವ ಚುಚ್ಚುಗತ್ತಿ. ಅದನ್ನು ಉಪಯೋಗಿಸಬಾರದು. ಹಲವು ಶಾಸಕರ ಮಾತಿನಲ್ಲಿ, ನಡೆಯಲ್ಲಿ, ವ್ಯವಹಾರದಲ್ಲಿ, ಯಾವುದರಲ್ಲಿಯೂ ಗಾಂಭೀರ್ಯವಾಗಲಿ, ಸುಸಂಸ್ಕೃತಿಯಾಗಲಿ ಕಾಣಬರುತ್ತಿಲ್ಲ. ಪ್ರಜಾವರ್ಗದ ನೆಮ್ಮದಿ ಕೆಟ್ಟಿದೆ. ಗೊಂದಲದಿಂದ ಸಮಾಧಾನ ನಾಶವಾಗಿದೆ. ಪ್ರಜೆಗಳಲ್ಲಿ ನಾವೇಕೆ ಇಂಥ ಅಸಮರ್ಥರನ್ನು ಶಾಸಕರನ್ನಾಗಿ ಮಾಡಿದೆವು ಎಂದು ತಮ್ಮನ್ನೂ ಎಲ್ಲ ಪಕ್ಷಗಳನ್ನೂ ನಿಂದಿಸುತ್ತಾ ಇದ್ದಾರೆ. ಪ್ರಜೆಗಳನ್ನು ಕಾಪಾಡುವವರೇ ಕಾದಾಡಿದರೆ ಎಂಥ ವಿಪರ್ಯಾ ಸ.ಈ ಕಾದಾಟ ಪಕ್ಷದ್ವೇಷ ಅಥವಾ ಅಧಿಕಾರ ದಾಹ ಎಂಬ ಒಂದು ದುರಂತ ನಾಟಕವಾಗಿಬಿಟ್ಟಿದೆ. ದಿನಕ್ಕೊಂದು ದೃಶ್ಯ, ವಾರಕ್ಕೊಂದು ಅಂಕ ಎಂಬಂತೆ ಇದು ಮುಂದುವರಿದಿದೆ. ನಮಗೆ ಇದು ದುರಂತ. ಇತರ ಪ್ರಾಂತಗಳವರಿಗೆ ಪ್ರಹಸನ. ಹೀಗೆ ಇಮ್ಮುಖವಾದ ಈ ನಾಟಕವು ಇನ್ನೂ ಕ್ಲೆ ಮಾಕ್ಸ್ ಎಂಬ ಶಿಖರ ತಲುಪಿಲ್ಲ. ಇಷ್ಟರಲ್ಲೇ ತಲುಪಬಹುದು. ಇನ್ನು ಡಿನೂಮೆಂಟ್ ಎಂಬ ಪರಿಣಾಮ ಏನಾಗುತ್ತದೋ ಯಾರು ಬಲ್ಲರು. ಕಾದು ನೋಡೋಣ. ನಾವೇನು ತಾನೇ ಮಾಡಬಹುದು?ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕಮಣಿಗಳಾದ ಈ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ ದುಡಿಯುವ ಬುದ್ಧಿಯು ಬರಲಿ ಎಂದು ಹಾರೈಸೋಣ. ಪ್ರಜೆಗಳಾದ ನಾವು ಇಂಥ ವರ್ಗದಿಂದ ಬೇರೆಯಾಗಿತಲೆತುಂಬ ಕಲಿಯೋಣ

ತಲೆ ಎತ್ತಿ ನುಡಿಯೋಣ

ತಲೆಬಾಗಿ ಬಾಳೋಣ

ಸಿರಿಗನ್ನಂಡಗೆಲ್ಗೆಬೆಂಗಳೂರು ಜಿ. ವೆಂಕಟಸುಬ್ಬಯ್ಯ ೦೪-೦೨-೨೦೧೧