‘ಹಕ್ಕಿ ಹಾರುತಿದೆ ನೋಡಿದಿರಾ..?’
4:42 PM
Posted by ಆಲೆಮನೆ

-ಜಿ ಎನ್ ಮೋಹನ್
'ಓ ಬಿ ವ್ಯಾನ್ ಬೇಕು' ಅಂದೆ. ರಾಮೋಜಿ ಫಿಲಂ ಸಿಟಿಯ ಮೀಟಿಂಗ್ ಹಾಲ್ ನಲ್ಲಿದ್ದವರು ಏನೋ ಟೆರರಿಸ್ಟ್ ಅಟ್ಯಾಕ್ ಆಗಿದೆ ಅಂತ ಗಾಬರಿಯಾದರು. ಅಂತದ್ದೇನೂ ಇಲ್ಲ ಅಂದೆ. ಹಾಗಿದ್ರೆ ಸೋನಿಯಾ ಗಾಂಧಿ ಬರ್ತಾ ಇದ್ದಾರಾ ಅಂದ್ರು. ' ನೋ' ಅಂತ ತಲೆ ಆಡಿಸಿದೆ. ಮತ್ತೆ ಓ ಬಿ ವ್ಯಾನ್ ಯಾಕೆ ಅಂತ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನ ಕವರೇಜ್ ಗೆ ಅಂದೆ. ಒಂದು ಕ್ಷಣ ಎಲ್ಲರೂ ಮುಖ ಮುಖ ನೋಡಿಕೊಂಡರು. ಓ ಬಿ ವ್ಯಾನ್ ಗೂ ಸಾಹಿತ್ಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಬೆಟ್ಟದ ಮೇಲಿನ ನೆಲ್ಲೀಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ..?
ಇಂತದ್ದೇ ಗಾಬರಿ ನೇರಾ ನೇರಾ ರಾಮೋಜಿರಾಯರಿಗೇ ಆಗಿತ್ತು. ತೇಜಸ್ವಿ ಇಲ್ಲವಾದಾಗ ಈಟಿವಿಯ ಬುಲೆಟಿನ್ ಗಳೆಲ್ಲವೂ ಶೋಕ ಹೊದ್ದು ಕೂತಿತು. ಗಂಟೆಗೊಮ್ಮೆ ಪ್ರಸಾರವಾಗುವ ಬುಲೆಟಿನ್ ಗಳು ಹಾಂ, ಹ್ಞೂ ಎನ್ನುವುದರೊಳಗೆ ಮುಗಿದು ಹೋಗಿರುತ್ತವೆ. ಹಾಗಾಗಿ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಪ್ರೈಮ್ ಬುಲೆಟಿನ್ ಮಾತ್ರ ಎಲ್ಲರ ಗರುಡಗಣ್ಣನ್ನೂ ದಾಟಿಯೇ ಬರಬೇಕು. ಸಂಸ್ಥೆಯ ಮುಖ್ಯಸ್ಥರಿಂದ ಹಿಡಿದು ಮ್ಯಾನೇಜರ್ ವರೆಗೆ ಎಲ್ಲರೂ 'ನೈಟ್ ವಾಚ್ ಮನ್' ಗಳೇ..ಹಾಗಿರುವಾಗ ತೇಜಸ್ವಿ ಇಲ್ಲವಾದ ದಿನ ಇಡೀ ಬುಲೆಟಿನ್ ಅನ್ನು ತೇಜಸ್ವಿಗೆ ಮೀಸಲಿಟ್ಟಿದ್ದು ಎಲ್ಲರಿಗೂ ಷಾಕ್ ನೀಡಿತ್ತು. ತೇಜಸ್ವಿ ಇಲ್ಲ ಎನ್ನುವ ಸುದ್ದಿಯ ಮುಂದೆ ಇನ್ನೊಂದು ಸುದ್ದಿಯಾದರೂ ಎಲ್ಲಿ ಅನ್ನೋದು ನನ್ನ ನಿಲುವು. ಚೇರ್ಮನ್ ರಿಂದ ಬುಲಾವ್ ಬಂತು. ಅಲ್ಲ, ಇಡೀ ಬುಲೆಟಿನ್ ಅನ್ನು ಒಬ್ಬರಿಗೇ ಮೀಸಲಿಡೋದು ಎಷ್ಟು ಸರಿ? ಜಗತ್ತಿನ ಎಲ್ಲೂ ಇವತ್ತು ಏನೂ ಘಟಿಸಿಲ್ವ? ಅದೂ ಪ್ರೈಮ್ ಬುಲೆಟಿನ್ ನಲ್ಲಿ' ಅಂದ್ರು. ನನಗಂತೂ ಅವತ್ತಿನ ಮೆಗಾ ನ್ಯೂಸ್ ತೇಜಸ್ವಿಯೇ ಅನ್ನೋದು ಖಚಿತವಾಗಿ ಹೋಗಿತ್ತು. 'ತೇಜಸ್ವಿ ವಿನಾ ಬುಲೆಟಿನ್ ನ ಚಲತಿ' ಅಂತ ನಿರ್ಧರಿಸಿಬಿಟ್ಟಿದ್ದೆ.
ಸಾರ್, ನಮ್ಮ ನ್ಯೂಸ್ ಗೆ ಟಿ ಆರ್ ಪಿ ಬರೋದೇ ಮೊದಲ ಆದ್ಯತೆ ಆದ್ರೆ ನನ್ನನ್ನ ಬಿಟ್ಬಿಡಿ. ನನ್ನ ಮನಸ್ಸು ಹೇಳ್ತಿದೆ. ತೇಜಸ್ವಿ ಇಲ್ಲ ಅನ್ನೋ ಸುದ್ದಿ ಮಾತ್ರಾನೇ ಇವತ್ತು ಜನರಿಗೆ ಮುಖ್ಯ. ಅಕಸ್ಮಾತ್ ಟಿ ಆರ್ ಪಿ ಬರಲಿಲ್ಲ ಅಂದ್ರೆ ಇನ್ನು ಮುಂದೆ ನೀವು ಹೇಳಿದ ಹಾಗೆ ಕೇಳ್ತೀನಿ. ನೀವೇ ಹೇಳಿದ್ದೀರಲ್ಲಾ ಮೊದಲ ತಪ್ಪು ಮಾಡೋದಿಕ್ಕೆ ಎಲ್ಲರಿಗೂ ಅವಕಾಶವಿದೆ ಅಂತ ಅವರು ಹೇಳಿದ್ದ ಮಾತನ್ನೇ ರಕ್ಷಣೆಗೆ ಗುರಾಣಿಯಾಗಿ ಬಳಸಿದೆ. ರಾಮೋಜಿರಾಯರು ನನ್ನನ್ನ ಒಂದು ಕ್ಷಣ ನೋಡಿದವರೇ 'ಗೋ ಅಹೆಡ್' ಅಂದ್ರು. ತೇಜಸ್ವಿ ತೇಜಸ್ವಿಯೇ. ಸತತ ಮೂರು ದಿನ ಈಟಿವಿ ಚಾನಲ್ ತೇಜಸ್ವಿ ಎನ್ನುವ 'ನಿಗೂಢ ಮನುಷ್ಯ' ನನ್ನು ಸಾಧ್ಯವಿದ್ದ ದಿಕ್ಕಿನಿಂದೆಲ್ಲಾ ಸ್ಪರ್ಶಿಸಲು ಯತ್ನಿಸಿತು. ನನ್ನ ನಂಬಿಕೆ ಹುಸಿಹೋಗಲಿಲ್ಲ. ಅದುವರೆಗೂ ಬಾಂಬ್ ಸ್ಫೋಟಕ್ಕೆ, ಉಗ್ರರ ಧಾಳಿಗೆ, ಸರಣಿ ಹತ್ಯೆಗೆ, ವಿ ಐ ಪಿ ಪ್ರೆಸ್ ಕಾನ್ಫೆರೆನ್ಸ್ ಗೆ ಸೋನಿಯಾ, ಪ್ರಿಯಾಂಕಾ, ರಾಹುಲ್ ಭೇಟಿಗೆ, ಅಡ್ವಾಣಿ ಯಾತ್ರೆಗೆ ಮಾತ್ರ ಸೀಮಿತವಾಗಿ ಹೋಗಿದ್ದ ಬುಲೆಟಿನ್ ಗಳು ಸಾಹಿತ್ಯವನ್ನೂ ತಬ್ಬಿಕ್ಲೊಂಡಿತು. ಮಾರ್ಕೆಟಿಂಗ್ ಟೀಮ್ ನವರು ತಬ್ಬಿಬ್ಬಾಗಿ ಕುಳಿತಿದ್ದರು ಅದುವರೆಗೂ ಗೊತ್ತಿಲದ ಇನ್ನೊಂದು ಟಿ ಆರ್ ಪಿ ವಿನ್ನರ್ ಚಾನಲ್ ಅಂಗಳ ಪ್ರವೇಶಿಸಿತ್ತು. 'ಕಂಗ್ರಾಟ್ಸ್' ಅಂತ ಅದೇ ರಾಮೋಜಿರಾಯರು ಕೈ ಕುಲುಕಿದರು. ಸಾಹಿತ್ಯವೆಂಬ ಹಕ್ಕಿ ಪತ್ರಿಕೋದ್ಯಮದ ಅಂಗಳದಲ್ಲಿ ಹಾರಿತು.
ಅಷ್ಟೇ, ಆನಂತರ ಈಟಿವಿಗೆ ಸಾಹಿತ್ಯ ಅನ್ನೋದು ಎಂದಿಗೂ ಮೈಲಿಗೆಯಾಗಿ ಉಳಿಯಲಿಲ್ಲ. ನಮ್ಮ ವರದಿಗಾರರಿಗೆ ಸಾಹಿತ್ಯ, ಸಾಂಸ್ಕೃತಿಕ ಲೋಕದ ಕಣ್ಣೋಟ ಬೇಕು ಅಂತ ನೀನಾಸಂ ಸಂಸ್ಕೃತಿ ಶಿಬಿರಕ್ಕೆ ಕಳಿಸುವ ಪ್ರಸ್ತಾಪ ಮಾಡಿದರೆ ಮರುಕ್ಷಣ ಒಪ್ಪಿಗೆಯ ಮುದ್ರೆ ಬೀಳುತ್ತಿತ್ತು. ಓ ಬಿ ವ್ಯಾನ್ ಒಂದು ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಿಂದ ಶಿವಮೊಗ್ಗಕ್ಕೆ ಬಂದು ನಾಲ್ಕು ದಿನ ಇದ್ದು ಮತ್ತೆ ತನ್ನ ಮೂತಿ ಹೈದರಾಬಾದ್ ನತ್ತ ತಿರುಗಿಸುವ ವೇಳೆಗೆ ಖರ್ಚು ಏನಿಲ್ಲೆಂದರೂ ೧೦ ಲಕ್ಷ ಮೀರುತ್ತಿತ್ತು. ಆದರೆ ಯಾರಿಗೂ ಈ ಬಗ್ಗೆ ಅಬ್ಜೆಕ್ಷನ್ ಇರಲಿಲ್ಲ. ಶಿವಮೊಗ್ಗದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊತ್ತ ಮೊದಲ ಬಾರಿ ಓ ಬಿ ವ್ಯಾನ್ ಗಳು ಕಾಣಿಸಿಕೊಂಡಿದ್ದವು.
'ಸಾರ್, ಇದು ನೋಡಿ' ಅಂತ ಸಿದ್ಧು ಕಾಳೋಜಿ ನನ್ನನ್ನ ಮಾನಿಟರ್ ಮುಂದೆ ಕೂಡಿಸಿದಾಗ ನನ್ನೊಳಗೆ ತಕ್ಷಣ ಮಿಂಚೊಂದು ಹರಿದು ಹೋಯಿತು. ಅಲ್ಲಿಯವರೆಗೆ ಸಾಹಿತ್ಯ ಸಮ್ಮೇಳನದ ಕವರೇಜ್ ದಿನಗಟ್ಟಲೆ ಯಾರು ನೋಡುತ್ತಾರೆ ಎನ್ನುವ ಗುಂಗೀ ಹುಳು ನನ್ನನ್ನೂ ಕೊರೆಯುತ್ತಿತ್ತು. ಅದು ಕ್ಷಣ ಮಾತ್ರದಲ್ಲಿ ಪರಿಹಾರವಾಗಿ ಹೋಯ್ತು. ಸಿದ್ಧು ತೋರಿಸಿದ್ದು ಬೇರೆ ಬೇರೆ ವರದಿಗಾರರು ಸಮ್ಮೇಳನದ ಅಂಗಳದಿಂದ ಕಳಿಸಿದ್ದ ವಿಡಿಯೋ ಫೂಟೇಜ್ ಗಳನ್ನ. ಅದರಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ನಿದ್ದೆ ಹೊಡೆಯುತ್ತಿದ್ದ ದೃಶ್ಯ ಇತ್ತು. ಸಿದ್ಧು ಕೈ ಅದುಮಿದವನೇ ಎಲ್ಲಾ ನಿದ್ದೆ ಶಾಟ್ ಗಳನ್ನ ಬೇರೆ ಮಾಡಿ ಎಂದೆ. ಬಾಲು ಬುಲೆಟಿನ್ ಉಸ್ತುವಾರಿಗೆ ನಿಂತಿದ್ದರು. ತಕ್ಷಣ ಅವರಿಗೆ ನಾನು ಏನು ಯೋಚಿಸುತ್ತಿದ್ದೇನೆ ಎಂದು ಅರ್ಥವಾಗಿ ಹೋಯಿತು. ಬುಲೆಟಿನ್ ಆರಂಭವಾಗುತ್ತಿದ್ದಂತೆಯೇ 'ಸಮ್ಮೇಳನಕ್ಕೆ ನಿಮ್ಮ ಪ್ರತಿಕ್ರಿಯೆ ಏನು?' ಅಂತ ಶೀರ್ಷಿಕೆ ಫ್ಲಾಶ್ ಆಯ್ತು. ನಂತರ ಸಭಾಂಗಣದಲ್ಲಿ ಜನ ಥರಾವರಿ ಭಂಗಿಗಳಲ್ಲಿ, ನಾನಾ ಥರದ ನಿದ್ದೆಗೆ ಜಾರಿದ್ದು ಮೂಡುತ್ತಾ ಹೋದವು. ಹಿನ್ನೆಲೆಯಲ್ಲಿ ಗೊರಕೆ ಮ್ಯೂಸಿಕ್. ಡೆಸ್ಕ್ ನಲ್ಲಿ ಬುಲೆಟಿನ್ ನೋಡುತ್ತಾ ಇದ್ದ ಎಲ್ಲರೂ ಬಿದ್ದೂ ಬಿದ್ದೂ ನಗುತ್ತಿದ್ದರು. ಎಸ್! ನಮ್ಮ ಕೈಗೆ ದೃಶ್ಯ ಮಾಧ್ಯಮದ ಗ್ರಾಮರ್ ಸಿಕ್ಕು ಹೋಗಿತ್ತು.
ತುಮಕೂರು ಸಾಹಿತ್ಯ ಸಮ್ಮೇಳನಕ್ಕೆ ವರದಿ ಮಾಡಲು ಹೋದ ನನಗೆ ಮೊದಲು ಗೊತ್ತಾಗಿದ್ದು ಜನ ನೋಡಬೇಕಾದರೆ ಮೊದಲು ನೋಡುವಂತ ನ್ಯೂಸ್ ಕೊಡಬೇಕು ಅನ್ನೋದು. ಅದೇ ಸಪ್ಪೆ ಭಾಷಣ, ಅದೇ ಗೋಷ್ಥಿ ಅಂತ ಕೊಟ್ಟರೆ ಸಾಹಿತ್ಯವನ್ನ ಆಕರ್ಷಕವಾಗಿಸೋದಿಕ್ಕೆ ಸಾಧ್ಯವೇ ಇಲ್ಲ ಅಂತ ಗೊತ್ತಾಯ್ತು. ಆಗಲೇ ನಮ್ಮ ಕ್ಯಾಮೆರಾ ಸಮ್ಮೇಳನದ ಅಡಿಗೆ ಮನೆ, ಹೋಟೆಲ್ ಮುಂದಿನ ಭಾರೀ ಕ್ಯೂ, ನಕಲಿ ಊಟದ ಚೀಟಿಗಳು,ಸಾಹಿತ್ಯದ ಬುಕ್ ಸ್ಟಾಲ್ ನಲ್ಲಿ ಹಳ್ಳಿ ಶಕುನದ ಪುಸ್ತಕಗಳ ಕಡೆ ಹೊರಳಿದ್ದು. ಅನಂತಮೂರ್ತಿ ಅವರ ಮೆರವಣಿಗೆಗೆ ರೆಡಿ ಆಗಿದ್ದ ರಥದ ಚಕ್ರವೇ ಟುಸ್ ಅಂದಿದ್ದು, ವರದಿಗಾರರ ಮೇಲೆ ಪೋಲೀಸ್ ಲಾಟಿ ಬೀಸಿದ್ದು, ಸಾಹಿತ್ಯ ಪರಿಷತ್ ನವರು ಮೀಟಿಂಗ್ ನಲ್ಲಿ ಗುದ್ದಾಡಿಕೊಂಡಿದ್ದು ಎಲ್ಲಾ ಎಲ್ಲಾ ನ್ಯೂಸ್ ಆಯ್ತು. ಟಿ ಆರ್ ಪಿ ನೂ ಬಂತು, ಬ್ರೇಕಿಂಗ್ ನ್ಯೂಸೂ ಸಿಗ್ತು,
'ನನಗೆ ಕಿತ್ತೋಗಿರೋ ಖಾತೆ ಕೊಟ್ಟಿದಾರೆ' ಅಂತ ಗೂಳಿಹಟ್ಟಿ ಶೇಖರ್ ಒಬ್ರೇ ಕಿರುಚಿಕೊಳ್ತಾ ಇಲ್ಲ. ಯಾವುದೇ ಮೀಡಿಯಾ ಆಫೀಸ್ ಗೆ ಹೋಗಿ ನೋಡಿ ಸಾಹಿತ್ಯ, ನಾಟಕದ ಕವರೇಜ್ ಅಂದ್ರೆ ಮುಖ ಕೆಂಡ ಆಗಿ ಹೋಗುತ್ತೆ. ಯಾಕೆ ನಮಗೆ ಬಿ ಜೆಪಿ, ಕಾಂಗ್ರೆಸ್ ಬೀಟ್ ಕವರ್ ಮಾಡೋ ತಾಖತ್ ಇಲ್ವಾ? ವಿಧಾನಸೌಧ ರೌಂಡ್ಸ್ ನಮಗ್ಯಾಕೆ ಹಾಕಲ್ಲ ಅಂತ ಸಿಡಿಯೋ ಗೂಳಿಹಟ್ಟಿಗಳು ಪ್ರತೀ ಆಫೀಸ್ ನಲ್ಲೂ ಸಿಗ್ತಾರೆ. ಹೀಗೆ ಒದ್ದಾಡಿದ ಗೂಳಿಹಟ್ಟಿಗಳೇ ಪೇಪರ್, ಚಾನಲ್ ಚುಕ್ಕಾಣಿ ಹಿಡಿಯೋ ಕಾಲ ಬಂದರಂತೂ ' ಅಲ್ಲೀಗೆ ಹರ ಹರಾ ಆಲ್ಲಿಗೆ ಶಿವ ಶಿವಾ ಅಲ್ಲೀಗೆ ನಮ್ಮ ಕಥೀ ಸಂಪೂರ್ಣವಯ್ಯ..' ಅಂತ ಮಂಗಳ ಹಾಡ್ಬೇಕಾಗುತ್ತೆ.
ಸಾಹಿತ್ಯ ಸಮ್ಮೇಳನ ಅಂದ್ರೆ ಪತ್ರಿಕೆಗಳು ಹಬ್ಬ ಆಚರಿಸ್ತಾ ಇದ್ದ ಕಾಲಾನೂ ಒಂದಿತ್ತು ಯಾಕಂದ್ರೆ ಅದು ನುಡಿ ಹಬ್ಬ. ಸಾಹಿತ್ಯ ಅನ್ನೋದು ಪತ್ರಿಕೋದ್ಯಮದ ಸ್ಟೀರಿಂಗ್ ಅನ್ನೋ ನಂಬಿಕೆ ಇತ್ತು. ಹಾಗಾಗೀನೆ ವಿಶೇಷ ಪುರವಣಿಗಳು, ವರದಿ ಮಾಡೋದಿಕ್ಕೆ ಪತ್ರಕರ್ತರ ದಂಡು, ವರದಿ ಬರೆಯೋದರಲ್ಲಿ ಪೈಪೋಟಿ, ನೂರೆಂಟು ಫೋಟೋ..ಆದರೆ ಇವತ್ತು ಆ ಸಂಭ್ರಮ ಉಳಿದಿಲ್ಲ. ಯಾವ ಸಾಪ್ತಾಹಿಕ ಸಂಚಿಕೆಯಲ್ಲಿ ಕಥೆ, ಕವಿತೆಗೆ ಏಕೆ ಜಾಗ ಅಂತ ಯೋಚಿಸಿದ್ದ ವಿಜಯಕರ್ನಾಟಕವೇ ಇವತ್ತು ಸಾಹಿತ್ಯದ ಕವರೇಜ್ ನಲ್ಲಿ ಮುಂಚೂಣಿಯಲ್ಲಿದೆ. ಸಮ್ಮೇಳನ ಅಧ್ಯಕ್ಷರನ್ನ ತನ್ನ ಕಚೇರಿಗೆ ಕರೆಸಿ ಓದುಗರೊಂದಿಗೆ ಫೋನ್- ಇನ್ ನಡೆಸಿದೆ. ಸಂಯುಕ್ತ ಕರ್ನಾಟಕ ಒಳ್ಳೆ ಪುರವಣಿಯ ಮೂಲಕ ತಾನು ಜಾಗೃತವಾಗಿದ್ದೀನಿ ಅನ್ನೋದನ್ನ ಸಾರಿದೆ. ಯಾವತ್ತೂ ಸಾಹಿತ್ಯದ ವಿಷಯ ಬಂದಾಗ ನಾವು ಕಾದು ಕೂರುವಂತೆ ಮಾಡುತ್ತಿದ್ದ ಕನ್ನಡಪ್ರಭ ಆ ಗೆಲುವು ಉಳಿಸಿಕೊಂಡಿಲ್ಲ. ಪ್ರಜಾವಾಣಿಗಂತೂ ಸಂಪೂರ್ಣ ಗೊಂದಲ. ಒಂದು ಕಾಲಕ್ಕೆ ಸಾಲು ಸಾಲು ಸಾಹಿತಿಗಳನ್ನ ಬೆಳಕಿಗೆ ತಂದಿದ್ದ, ನವ್ಯ ಸಾಹಿತ್ಯಕ್ಕೆ ಅಡಿಪಾಯ ಹಾಕಿಕೊಟ್ಟಿದ್ದ, ಬಂಡಾಯದ ದನಿಗೆ ಸಾಥ್ ನೀಡಿದ್ದ ಪ್ರಜಾವಾಣಿ 'ದಾರಿ ಯಾವುದಯ್ಯಾ ವೈಕುಂಠಕೆ..'ಎಂಬಂತೆ ಸಕ್ಸಸ್ ಗೆ ಇರೋ ದಾರಿ ಯಾವುದು ಅಂತ ಗೊತ್ತಾಗದೆ ನಿಂತು ಬಿಟ್ಟಿದೆ. ಇವತ್ತಿನ ಪೇಪರ್ ಗಳನ್ನ ನೋಡಿದರೆ, ಚಾನಲ್ ಬದಲಿಸ್ತಾ ಹೋದರೆ ಸಾಹಿತ್ಯ ಅನ್ನೋದು ಪತ್ರಿಕೆಗಳ ಪಾಲಿಗೆ ಎಕ್ಸ್ಪೈರಿ ಡೇಟ್ ಮುಗಿದಿರೋ ಮಾತ್ರೆ ಥರಾ ಆಗ್ತಿದೆ ಅನ್ನೋದು ಸ್ಪಷ್ಟ.
ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಗೋಪಾಲಕೃಷ್ಣ ಪೈ ಅವರ ಅಷ್ಟು ದಪ್ಪದ ಕಾದಂಬರಿ ಸಪ್ನ ಸಾರಸ್ವತವನ್ನ ಓದಿ ಮುಗಿಸಿದ್ದಾರೆ, ತಾರಾ ಫಿಲಂ ಸೆಟ್ ನಲ್ಲಿ ಪುಸ್ತಕ ಓದುತ್ತಾ ಕೂಡ್ತಾರೆ, ಟಿ ಎನ್ ಸೀತಾರಾಂ ಸೀರಿಯಲ್ ನಲ್ಲಿ ಎಷ್ಟೊಂದು ಕವಿತೆ ಕೋಟ್ ಮಾಡ್ತಾರೆ. ಬಳ್ಳಾರಿ ಚನ್ನಬಸವಣ್ಣ ಬ್ಯಾಂಕ್ ಉದ್ಯೋಗದಲ್ಲಿದ್ರೂ ಪುಸ್ತಕ ಮಾಡೋದಿಕ್ಕೆ ಯಾಕೆ ಹೋದರು, ಅನ್ನೋದು ಮೀಡಿಯಾಗೆ ಹಬ್ಬದೂಟ ಆಗೋದಿಲ್ವಾ? ಬರೀ ಹೀರೋಯಿನ್ ಗಳಲ್ಲ ಪತ್ರಿಕೆ, ಚಾನಲ್ ಗಳೂ ಜೀರೋ ಬಾಡಿ ಗೇ ಮನಸೋತಿವೆ. ಆ ಬಾಡಿಗಾಗಿ ಹಂಬಲಿಸಿ ಡಯಟಿಂಗ್ ಶುರು ಮಾಡಿವೆ. ಆ ನಿಟ್ಟಿನಲ್ಲಿ ಮೊದಲು ವರ್ಜ್ಯ ಮಾಡಿರೋದೇ ಸಾಹಿತ್ಯವನ್ನ.
ಮೊನ್ನೆ ಎಚ್ ಎಸ್ ವೆಂಕಟೇಶ ಮೂರ್ತಿಗಳ ಮೂರು ಸಮಗ್ರ ಕೃತಿಗಳು ಬಿಡುಗಡೆಯಾಯ್ತು. ಅದೇ ದಿನ ಸಂಜೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂತಸದಲ್ಲಿರುವ ವೈದೇಹಿ ಬೆಂಗಳೂರಿನಲ್ಲಿ ಓದುಗರೊಂದಿಗೆ ಮಾತಿಗೆ ಕೂತರು. ಒಂದಿಷ್ಟು ಅಪವಾದ ಬಿಟ್ಟರೆ ಎಚ್ ಎಸ್ ವಿ, ವದೇಹಿ ಓದುಗರ ಮನೆಯೊಳಗೇ ಹೋಗದಂತೆ ಮಾಧ್ಯಮಗಳು ನೋಡಿಕೊಂದುಬಿಟ್ಟವು. ಇದೇ ಎಚ್ ಎಸ್ ವಿ, ಇದೇ ವೈದೇಹಿ ಇವತ್ತು ಯಾರ ಮನೆಯೊಳಗಾದರೂ ಕಾಲಿಡಬೇಕಾದರೆ 'ಪುನರ್ಜನ್ಮ' ಎತ್ತಿ ಬರಬೇಕು, ಇಲ್ಲಾ 'ಬಾಲ ಜ್ಞಾನಿ'ಗಳಾಗಿರಬೇಕು. ಇಲ್ಲಾ ಅವರ 'ಬದುಕು ಜಟಕಾ ಬಂಡಿ' ಆಗಿರಬೇಕು. ಇಲ್ಲಾ ಅಂದ್ರೆ ಕನಿಷ್ಠ ಪಕ್ಷ ಭಾನುವಾರ ಮಧ್ಯಾಹ್ನ ಚಿಕನ್ ಟಿಕ್ಕಾ ಮಾಡಲಾದರೂ ಬರಬೇಕು...
ಬುಕ್ ಟಾಕ್
ಪತ್ರಿಕೋದ್ಯಮಕ್ಕೂ ಸಾಹಿತ್ಯಕ್ಕೂ ಗೆರೆ ಎಳೆಯಲಾಗದ ಕಾಲ ಒಂದಿತ್ತು. ಪತ್ರಿಕೋದ್ಯಮ ಅನ್ನುವುದು ಅವಸರದ ಸಾಹಿತ್ಯ ಎನ್ನುವ ಹಿರಿಮೆಗೂ ಪಾತ್ರವಾಗಿತ್ತು. ಇಂತಹ ನಂಟನ್ನು ಪರಿಶೀಲಿಸುವ ಅಪರೂಪದ ಪ್ರಯತ್ನ- 'ಸಾಹಿತ್ಯ ಮತ್ತು ಪತ್ರಿಕೋದ್ಯಮ'. ಹಲವು ದಶಕಗಳ ಕಾಲ ಪತ್ರಿಕೋದ್ಯಮವನ್ನು ಭೋಧಿಸಿದ, ಸಾಹಿತಿಗಳೊಂದಿಗೆ ಒಡನಾಟವಿದ್ದ ಪ್ರೊ. ಬಿ ಎ ಶ್ರೀಧರ್ ಈ ಕೃತಿ ರಚಿಸಿದ್ದಾರೆ. ಆಂಗ್ಲ ಪತ್ರಿಕೋದ್ಯಮಕ್ಕೆ ಇದ್ದ ಸಾಹಿತ್ಯದ ನಂಟನ್ನು ಪರಿಶೀಲಿಸುತ್ತಾ, ಟಾಮ್ ವೂಲ್ಫ್ ಕೊಟ್ಟ ಕೊಡುಗೆಯನ್ನು ಗುರುತಿಸುತ್ತಾ ಹೋಗುವ ಶ್ರೀಧರ್ ಭಾರತದ ಪತ್ರಿಕೋದ್ಯಮದಲ್ಲಿ ನಡೆದ ಪ್ರಯೋಗಗಳನ್ನು ಪರಿಚಯಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಈ ಕೃತಿ ಪ್ರಕಟಿಸಿದೆ.
ಕೆಂಪ್ ಮೆಣಸಿನ್ಕಾಯ್
ಬಳ್ಳಾರಿನಲ್ಲಿ ಸಡನ್ನಾಗಿ ಹಾಜಿ, ಮಾಜಿ ಪತ್ರಕರ್ತ ಆರ್ ಜಿ ಹಳ್ಳಿ ನಾಗರಾಜ್ ಎದುರಾಗಿಬಿಡೋದಾ? . ಏನ್ಗುರು ಇಲ್ಲಿ.. ಅಂದೆ. ರೆಡ್ಡಿ ಗ್ಯಾಂಗು ಎತ್ತಾಕ್ಕೊಂಡು ಬಂದ್ಬಿಟ್ಟಿದೆಯಪ್ಪಾ ಅಂದ. ಏನ್ಸಮಾಚಾರ ಅಂದೆ. ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಇತ್ತಲ್ಲ ಅದಕ್ಕೆ ಕರಕೊಂಡು ಬಂದವ್ರೆ ಅಂದ. ಅದು ಸರಿ ಅದಕ್ಕೂ ನಿನಗೂ ಏನ್ ಸಂಬಂಧ ಅಂದೆ. 20 ವರ್ಷ ವಿಜಯನಗರದಲ್ಲೇ ಇದ್ನಲ್ಲ ಅದಕ್ಕೆ ಈ ರೆಡ್ದಿಗಾರುಗಳು ನನ್ನೇ ಕೃಷ್ಣದೇವರಾಯ ಅನ್ಕೊಂಡಿದಾರೆ. ಬೆಂಗಳೂರು ವಿಜಯನಗರದಲ್ಲಿ ಬಾಡಿಗೆ ಮನೆ ಮಾಡ್ಕೊಂಡು ಇದ್ದಿದ್ದೇ ತಪ್ಪಾ? ಅಂದ. ನಾನು ಡಿಟೋ ಟಿ ಪಿ ಕೈಲಾಸಂ ಸ್ಟೈಲ್ ನಲ್ಲಿ ತಪ್ಪೆವರದಿ?? ಅಂದೆ.
ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು.....
12:13 PM
Posted by ಆಲೆಮನೆ
ಕಳೆದ 75 ಸಮ್ಮೇಳಾನ್ಬದಲ್ಲಿ ಹಲವು ಸಾವಿರ ನಿರ್ಣಯಗಳಾನ್ನು ಸರ್ವಾನುಮತದಿಂದ/ ಬಹುಮತದಿಂದ ಸ್ವೀಕರಿಸಲಾಗಿದೆ. ಆದರೆ ಈ ನಿರ್ಣಯಗಳ ಅನುಷ್ಟಾನ ಎಷ್ಟರ ಮಟ್ಟಿಗೆ ಆಗಿದೆ? ಯಾವ ಕಾರಣಕ್ಕಾಗಿ ನಿರ್ಣಯಗಳ ಅನುಷ್ಟಾನವಾಗಿಲ್ಲ?ಇದರಲ್ಲಿ ಸಾಹಿತ್ಯ ಪರಿಶತ್ತು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕನ್ನಡಿಗರ ಪಾತ್ರವೇನು? ಸ್ವಾತಂತ್ರ ಪೂರ್ವದಲ್ಲಿ ಕರ್ನಾಟಕ ರಾಜ್ಯ ಉದಯವಾಗುವವರೆಗೆ ನಿರ್ಣಯಗಳ ಅನುಷ್ಟಾನ ಯಾವರೀತಿ ಇತ್ತು? ನಂತರ 1970ರ ದಶಕದವರೆಗೆ ನಿರ್ಣಯ್ಗಳ ಅನುಷ್ಟಾನ, 1980ರ ದಶಕದಿಂದ 2010ರವರೆಗೆ ಎಂದು ಮೂರು ಭಾಗ ಮಾಡಿ ಪರಾಮರ್ಷನೆ ಮಾಡುವ ಅವಶ್ಯಕತೆ ಇದೆ. 1958ರಲ್ಲಿ ಕರ್ನಾಟಕದ ರಾಜ್ಯ ಉದಯವಾದ ಮೇಲೆ ವಿಶಾಲ ಸಮೃದ್ಧ ಕರ್ನಾಟಕದಲ್ಲಿ ಕನ್ನಡಕ್ಕೆ ಎಲ್ಲಾ ರಂಗದಲ್ಲೂ ಪ್ರಶ್ನಾತೀತವಾದ ಅಗ್ರಸ್ಥಾನ ಸಿಗಬೇಕಿತ್ತು.
ಆದರೆ ವಿದೇಶೀ ಮಾನಸಿಕತೆಯ ವಾತಾವರಣವನ್ನು ಸುಮಾರು ಸಾವಿರ ವರ್ಷಗಳಿಂದ ಪ್ರತ್ಯಕ್ಷ ಮತ್ತು ಪರೋಕ್ಶವಾಗಿ ಒಪ್ಪಿಕೊಂಡ ಸಮಾಜ ಆ ನಿಟ್ಟಿನಲ್ಲಿ ಪ್ರಯತ್ನಶೀಲವಾಗಬೇಕಾಯಿತು. ಹಾಗಾಗಿ ಸಮಸ್ತ ಕನ್ನಡಿಗರ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯರಮಗಳನ್ನು ಹಮ್ಮಿಕೊಂಡು ರಾಜ್ಯದ, ಕನ್ನಡದ ಒಳಿತಿಗಾಗಿ ತನ್ನ ಸಮ್ಮೇಳನಗಳಲ್ಲಿ ಹಲವಾರು ನಿರ್ಣಯಗಳನ್ನು ರಾಜುಅದ ಪರವಾಗಿ ಮಂಡಿಸುತ್ತಾ ಬಂದಿತು. ಆದರೆ, ಈ ನಿರ್ಣಯಗಳ ಅನುಷ್ಟಾನದ ಬಗ್ಗೆ ಗಮನ ಸಾಕಾಗಲಿಲ್ಲ. ಅಲ್ಲದೇ ರಾಜ್ಯದ ಸಮಸ್ತ ಜನತೆ ಈ ನಿಟ್ಟಿನಲ್ಲಿ ತಮ್ಮ ಇಚ್ಛಾಶಕ್ತಿಯನ್ನು ತೋರಿಸಿಲ್ಲ ಎಂದೇ ಹೇಳಬೇಕು.ರಾಜ್ಯದ ಸರಿಸುಮಾರು ಆರು ಕೋಟಿ ಜನಸಂಖ್ಯೆಯಲ್ಲಿ ಒಂದು ಲಕ್ಷದಷ್ಟು ಜನ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಾರೆ. ಈ ಸಂಖ್ಯೆ ಕನ್ಬಿಷ್ಟ ಹತ್ತು ಲಕ್ಷವಾದರೂ ಆಗಬೇಕು ಮತ್ತು ರಾಜ್ಯದ ಪ್ರತೀ ಹಳ್ಳಿಯಲ್ಲೂ ಕನಿಷ್ಟ ಐದು ಸದಸ್ಯರಾದರೂ ಇರುವಂತಾಗಬೇಕು. ಆಗ ಸಾಹಿತ್ಯ ಪರಿಷತ್ ನಿಜವಾದ ಅರ್ಥದಲ್ಲಿ ರಾಜ್ಯದ ಎಲ್ಲ ಪ್ರದೇಶದ ಜನರನ್ನು ಪ್ರತಿನಿಧಿಸುವ ಸಂಸ್ಥೆಯಾಗುತ್ತದೆ. ಅಂತೆಯೇ ಇನ್ನು ಮುಂದೆ ಸಮ್ಮೇಳನಗಳಲ್ಲಿ ಗರಿಷ್ಠ 25 ನಿರ್ಣಯಗಳನ್ನು ಮಾತ್ರ ತೆಗೆದುಕೊಳ್ಳುವ ಪದ್ಧತಿ ಜಾರಿಗೆ ಬರಬೇಕು.
ತ್ರೈಮಾಸಿಕಕ್ಕೊಮ್ಮೆ ರಾಜ್ಯದ ಹಿತದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಒಂದು ವರದಿ ತಲುಪಿಸಿ ರಾಜ್ಯದ ಸಮಕಾಲೀನ ಪರಿಸ್ಥಿತಿಯ ಅವಲೋಕನ ರಾಜ್ಯದ ಜನತೆಯ ಸಮಸ್ಯೆಗಳು, ವಿಶೇಷವಾದ ಸಾಂಸ್ಕೃತಿಕ ಹಬ್ಬಗಳ ಆಚರಣೆಗೆ, ಅಅರತಹಿಕ ಪರಿಸತಹಿತಿ, ನ್ಯಾಯಾಂಗ ಸುಧಾರಣೆ, ಭಾಷಾ/ಗಡಿ ಸಮಸ್ತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ, ತುರ್ತಾಗಿ ಆಗಬೇಕಾಗಿರುವ ವಿಷಯಗಳ ಬಗ್ಗೆ ತಿಳುವಳಿಕೆಯ ಮನವಿ ನೀತಿ ಅವರತೀವ್ರತೆಯ ಆಧಾರದ ಮೇಲೆ ಅನುಷ್ಟಾನಕ್ಕೆ ಪ್ರಯತ್ನಿಸಿದರೆ, ವಾರ್ಷಿಕ ಸಾಹಿತ್ಯ ಸಮ್ಮೇಳನದಲ್ಲಿ ಬಹುತೇಕ ಪಟ್ಟಿಯ ನಿರ್ಣಯಗಳನ್ನು ಸ್ವೀಕರಿಸುವ ಪ್ರಮೇಯವೇ ಬರುವುದಿಲ್ಲ.
ಅಂತೆಯೇ ಇಲ್ಲಿಯವರೆಗಿನ ಅತಿಮುಖ್ಯ ನಿರ್ಣಯಗಳಲ್ಲಿ ಅನುಷ್ಟಾನವಾಗಲೇಬೇಕಾದ ನಿರ್ಣಯಗಳನ್ನು ಅನುಶ್ಠಾನಗೊಳಿಸಲು ಸರ್ಕಾರದೊಂದಿಗೆ ವ್ಯವಹರಿಸಿ, ಸಾರ್ವಜನಿಕ ಜಾಗೃತಿ ಮೂಡಿಸಲು ಅನುಷ್ಟಾನವಾಗುವಂತಹ ರಾಜ್ಯದ ವಿವಿಧ ವಿಷಯಗಳ ತಜ್ಞರ ಉಪಸಮಿತಿಯನ್ನು ರಚಿಸಿ, ಆ ಸಮಿತಿ ತೀಕ್ಷ್ಣವಾಗಿ ಕಾರ್ಯೋನ್ಮುಖನಾಗುವತ್ತ ಹೋಗಬೇಕು. ಹಾಗೆ ಪ್ರತೀ ತ್ರೈಮಾಸಿಕಕ್ಕೊಮ್ಮೆ, ರಾಜ್ಯದ ಜನತೆಗೆ ಈ ವಿಷಯಗಳಲ್ಲಿ ಸಮೂಹ ಮಾಧ್ಯಮಗಳು ಮತ್ತು ತಮ್ಮ ಗೃಹ ಪತ್ರಿಕೆ, ಮತ್ತು ತನ್ನ ಅಂತರ್ಜಾಲ ತಾಣದಲ್ಲಿ ಈ ಕುರಿತು ಮಾಹಿತಿ ನೀಡುವುದು ಒಳಿತು ಇದರಿಂದ ರಾಜ್ಯದ ಜನತೆಗೆ ನಾಡಿನ ಪ್ರಮುಖ ವಿಷಯಗಳ ಕುರಿತಾಗಿ ಸಕರ್ಾರ ಎಡವಿರುವುದೆಲ್ಲಿ/ನಿಧಾನವಾಗುತ್ತಿರುವುದೆಲ್ಲಿ? ಎಂದು ತಿಳಿಯುತ್ತದೆ. ಇದರಿಂದ ಸಹಿತ್ಯ ಪರಿಷತ್ತು ಮತ್ತಷ್ಟು ನಾಡಿನ ಪರವಾಗಿ ಕೆಲಸ ಮಾಡಿ ಇನ್ನೂ ಹೆಚ್ಚಿನ ಜನಬೆಂಬಲವನ್ನು ಗಳಿಸಲು ಸಾಧ್ಯವಾಗುತ್ತದೆ.
ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು - ಭಾಗ -೨
6:13 AM
Posted by ಆಲೆಮನೆ
ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು - ಭಾಗ - ೧
5:48 AM
Posted by ಆಲೆಮನೆ

ಸಾಹಿತ್ಯ ಪರಿಷತ್ತು, ಸಾಹಿತ್ಯ ಸಮ್ಮೇಳನಗಳು ಎಂದರೇನೆ ವಿವಾದಗಳು ಎಂಬಂತಾಗಿದೆ ಸ್ಥಿತಿ. ಕಸಾಪ ಹಾಗೂ ಸಮ್ಮೇಳನಗಳಿಗೆ ಇರುವಷ್ಟೇ ದೀರ್ಘ ಇತಿಹಾಸ ವಿವಾದಗಳಿಗೂ ಇದೆ. ಇಂತಿಪ್ಪ ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳ ಕುರಿತು ಖ್ಯಾತ ಸಾಹಿತಿ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ವಿವರವಾಗಿ ಚರ್ಚಿಸಿದ್ದಾರೆ. ಕೊಂಚ ದೀರ್ಘ ಲೇಖನವಾದ್ದರಿಂದ ಎರಡು ಭಾಗಗಳಾಗಿ ಪ್ರಕಟಿಸುತ್ತಿದ್ದೇವೆ
೭೭ನೇ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ
7:33 AM
Posted by ಆಲೆಮನೆ















ಸಾಹಿತ್ಯ ಮತ್ತು ಪ್ರಭುತ್ವ
5:42 AM
Posted by ಆಲೆಮನೆ
ನಾನು ವಿಷಯ ಪ್ರವೇಶವನ್ನು 80 ರ ದಶಕದಿಂದ ಮಾಡುತ್ತೇನೆ. ಯಾಕೆಂದರೆ ಎಂಬತ್ತರ ದಶಕದ ನಂತರದ ಬಹುತೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಒಬ್ಬ ಪತ್ರಕರ್ತನಾಗಿ ನಾನು ಪಾಲ್ಗೊಂಡಿದ್ದೇನೆ. ಈ ನನ್ನ ಅನುಭವದಲ್ಲಿ ಕೆಲವು ಸಾಹಿತ್ಯ ಸಮ್ಮೇಳನಗಳು ನಾನು ಹೇಳಲು ಹೊರಟಿರುವ ವಿಷಯಕ್ಕೆ ಬೇಕಾದ ಪೂರ್ವಭಾವಿ ವಿಚಾರಗಳನ್ನು ಒದಗಿಸುತ್ತವೆ. ಆಗ ರಾಮಕೃಷ್ಣ ಹೆಗಡೆ ರಾಜ್ಯದ ಮುಖ್ಯಮಂತ್ರಿ. ಅವರ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಎಚ್. ಡಿ. ದೇವೇಗೌಡರು ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ್ದು ಸಮಾರೋಪ ಭಾಷಣ. ಆ ಭಾಷಣದಲ್ಲಿ ಅವರು ಪ್ರಸಕ್ತ ರಾಜಕೀಯ ಪರಿಸ್ಥಿತಿಂನ್ನು ಸಾಹಿತ್ಯದ ಮೂಲಕ ಪ್ರಸ್ತುತ ಪಡಿಸಿದ್ದರು. ಅದು ಸಾಹಿತ್ಯ ವಿಮರ್ಶೆಯೂ ಆಗಿತ್ತು. ರಾಜಕೀಯ ವಿಮರ್ಶೆಯೂ ಆಗಿತ್ತು. ಸಾಹಿತ್ಯ ಮತ್ತು ರಾಜಕೀಯದ ನಡುವಿನ ಸೂಕ್ಶ್ಮ ಸಂಬಂಧ ಮತ್ತು ಇದಕ್ಕೆ ಪೂರಕವಾಗಿರುವ, ವಿರೋಧವಾಗಿರುವ ಅಂಶಗಳನ್ನು ಹೊರಗಿಟ್ಟು ನೋಡಿದರೆ ಅದೊಂದು ಅಧ್ಬುತ ಭಾಷಣ. ಆದರೆ ನನಗೆ ಮೂಡಿದ್ದ ಪ್ರಶ್ನೆ ಎಂದರೆ ಸಾಹಿತ್ಯ ಜಾತ್ರೆಯನ್ನು- ಸಾಹಿತ್ಯ ಸಮ್ಮೇಳಗಳು ಸಾಹಿತ್ಯ ಜಾತ್ರೆ ಎಂದೇ ಕರೆಯುವುದು ಸೂಕ್ತ_ ಹೀಗೆ ರಾಜಕೀಯಕ್ಕೆ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು. ಆದರೆ ಇಲ್ಲಿ ಇನ್ನೂ ಕೆಲವು ಪ್ರಶ್ನೆಗಳಿವೆ. ಕನ್ನಡ ಸಾಹಿತ್ಯದ ಇತಿಹಾಸವನ್ನು ಗಮನಿಸಿದರೆ ಅದು ಪ್ರಭುತ್ವವನ್ನು ಬಿಟ್ಟು ಇಲ್ಲ. ಹಳೆಗನ್ನಡದ ಬಹುತೇಕ ಕವಿಗಳು ರಾಜಾಶ್ರಯ ಪಡೆದವರೇ. ಆ ಮೂಲಕ ಕಾವ್ಯವನ್ನು ರಚಿಸುತ್ತ ಬಂದವರು. ಆಯಾ ರಾಜರಿಗೆ ವಂದಿ ಮಾಗಧರಾಗಿ ಕೆಲಸ ಮಾಡುತ್ತ ಬಂದವರು. ಪ್ರಾಯಶಃ ರಾಜಶ್ರಯ ಇಲ್ಲದಿದ್ದರೆ ಹಳೆ ಗನ್ನಡ ಸಾಹಿತ್ಯ ಇಷ್ಟು ಸಮೃದ್ಧವಾಗಿ ಬೆಳೆಯುತ್ತಲೇ ಇರಲಿಲ್ಲ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಪರಿಸ್ಥಿತಿ ಬದಲಾಗಿತ್ತು. ಸಾಹಿತ್ಯ ರೊಮ್ಯಾಂಟಿಕ್ ಕಾವ್ಯಗಳತ್ತ ಹೊರಳಿತ್ತು. ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಆಗ ಅಷ್ಟು ಮುಖ್ಯವಾಗಿರಲಿಲ್ಲ. ಆದರೆ ಕೆಲವರ ಬ?ಹಗಳಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಬಗೆಗಿನ ಪ್ರೀತಿ ಮತ್ತು ಬ್ರಿಟೀಷ್ ಆಡಳಿತವ ವಿರುದ್ಧದ ಪ್ರತಿರೋಧ ವ್ಯಕ್ತವಾಗಿದ್ದು ಉಂಟು. ಆದರೆ ಅದು ಕನ್ನಡ ಸಾಹಿತ್ಯದ ಸ್ಥಾಯಿ ಭಾಗವಾಗಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಪರಿಸ್ಥಿತಿ ಬದಲಾಯಿತು. ನವೋದಯ ನವ್ಯದ ನಂತರದ ಬಂಡಾಯ ಮತ್ತು ದಲಿತ ಸಾಹಿತ್ಯಗಳು ಸಮಾಜಮುಖಿಯಾದವು. ಕಾವ್ಯ ಖಡ್ಗವಾಗುವ ಮಾತುಗಳು ಕೇಳಿಬಂದವು. ರೈತ ಗೀತೆಗಳು ಮೊಳಗತೊಡಗಿದವು. ಪ್ರತಿಭಟನೆಯ ಧ್ವನಿ ಇನ್ನಷ್ಟು ಗಟ್ಟಿಯಾಯಿತು. ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಸರಳವಾದುದಲ್ಲ. ಇವೆರಡರ ನಡುವಿನ ಸಂಬಂಧ ಹೇಗಿರಬೇಕು ಎಂದು ನಿರ್ಧರಿಸುವುದಕ್ಕೆ ಮೊದಲು ಸಾಹಿತ್ಯದ ಉದ್ದೇಶದ ಬಗ್ಗೆ ಸ್ಪಷ್ಟತೆ ಬೇಕು. ಹಳೆಗನ್ನಡದ ಸಂದರ್ಭದಲ್ಲಿ ಸಾಹಿತ್ಯದ ಉದ್ದೇಶ ಸಾಮಾಜಿಕ ಬದಲಾವಣೆ ಆಗಿರಲ್ಲಿಲ್ಲ. ಸಾಮಾಜಿಕ ಬದ್ಧತೆ ಎಂಬ ಮಾತಿಗೆ ಆಗ ಅರ್ಥ ಇರಲಿಲ್ಲ. ಆಗಿನ ಕಾವ್ಯ ಪ್ರಪಂಚವೇ ಬೇರೆ. ಆದ್ದರಿಂದ ಅಂದಿನ ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧವನ್ನು ಈ ಕಾಲ ಘಟ್ಟದಲ್ಲಿ ವಿಶ್ಳೇಷಿಸುವುದು ಸಮಂಜಸವಲ್ಲ. ಒಂದೊಮ್ಮೆ ಈಗ ವಿಶ್ಳೇಷಿಸಿದರೂ ಇಂದಿನ ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧದ ಮಾನದಂಡವನ್ನು ಬಳಸುವುದು ಸಾಧ್ಯವಿಲ್ಲ. ಯಾವಾಗ ಸಾಹಿತ್ಯ ಸಮಾಜಮುಖಿಯಾಗುತ್ತದೆಯೋ ಆಗ ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಬೇರೆ ಆಯಾಮವನ್ನು ಪಡೆದುಕೊಳ್ಳುತ್ತದೆ. ಹಾಗೆ ಸಾಹಿತ್ಯದ ಉದ್ದೇಶ ಸಾಮಾಜಿಕ ಬದಲಾವಣೆ ಎಂದಾಗುತ್ತದೆಯೋ ಆಗ ಸಾಹಿತ್ಯ ಮತ್ತು ಪ್ರಭೂತ್ವದ ಸಂಬಂಧವನ್ನು ಬೇರೆ ರೀತಿಯಲ್ಲಿ ನೋಡಬೇಕಾಗುತ್ತದೆ. ಸಾಹಿತ್ಯದ ಉದ್ದೇಶ ಮನರಂಜನೆಯೋ, ಮನಸ್ಸನ್ನು ಮುದಗೊಳಿಸುವುದೋ ಆಗಿದ್ದರೆ, ಆಗ ಸಾಹಿತ್ಯ ಮಾತು ಪ್ರಭುತ್ವದ ಸಂಬಂಧವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಕನ್ನಡಲ್ಲಿ ಪ್ರತಿಭಟನೆಯ ಕಾವ್ಯಕ್ಕೂ ದೀರ್ಘವಾದ ಇತಿಹಾಸವಿದೆ. ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಇದ್ದುಕೊಂಡೇ ತನ್ನ ವಚನಗಳ ಮೂಲಕ ಹೊಸ ಕ್ಫ್ರಂತಿಯ ಬೀಜವನ್ನು ಬಿತ್ತಿದ. ಹಾಗೆ ನಂತರ ಬಂದ ದಾಸ ಸಾಹಿತ್ಯ ಕೂಡ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಬದಲಾವಣೆಯ ಕನಸನ್ನು ಕಂಡಿತ್ತು ಎಂಬುದನ್ನು ನೆನಪಿಟ್ಟುಕೊಂಡರೆ ಸಾಹಿತ್ಯದ ಉದ್ದೇಶದ ಬಗೆಗಿನ ನಮ್ಮ ಚರ್ಚೆಗೆ ಹೊಸ ಆಯಾಮ ದೊರಕುತ್ತದೆ. ಹಾಗೆ ಸಾಹಿತ್ಯದ ಉದ್ದೇಶ ಸಾಮಾಜಿಕ ಬದಲಾವಣೆಯೂ ಆಗಿರಬೇಕು ಎಂಬ ವಾದಕ್ಕೆ ಪುಷ್ಟಿ ದೊರಕುತ್ತದೆ. ಸಾಹಿತ್ಯ ಸಮಾಜದ ಪ್ರತಿಬಿಂಬವೇ ಆಗಿದೆ. ಹೀಗಾಗಿ ಸಮಾಜದ ಆಗುಹೋಗುಗಳಿಗೆ ಸಾಹಿತ್ಯಿಕವಾಗಿ ಪ್ರತಿಕ್ರಿಯಿಸುವುದು ಸಾಹಿತ್ಯದ ಕರ್ತವ್ಯ ಎಂದು ಸ್ಪಷ್ಟಪಡಿಸುತ್ತೇನೆ. ಈ ಮಾತುಗಳೊಂದಿಗೆ ನಾವು ಸಾಹಿತ್ಯ ಸಮ್ಮೇಳನಗಳು ಮತ್ತು ರಾಜಕೀಯದ ನಡುವಿನ ಸಂಬಂಧದ ಪ್ರಶ್ನೆಯನ್ನು ಕೈಗೆತ್ತಿಕೊಳ್ಳಬಹುದು. ನಾನು ಮೊದಲು ಹೇಳಿದ ಹಾಗೆ, ಸಾಹಿತ್ಯ ಸಮ್ಮೇಳನಗಳು ಸಾಹಿತ್ಯಿಕ ಜಾತ್ರೆ. ಜಾತ್ರೆಯಲ್ಲಿ ಸಂಭ್ರಮ ಇರುತ್ತದೆ. ಇಂತಹ ಸಂಭ್ರಮವನ್ನು ಸಾಹಿತ್ಯ ಸಮ್ಮೇಳನಗಳು ಕನ್ನಡ ನಾಡ ಜನತೆಗೆ ನೀಡುತ್ತವೆ. ಹೀಗೆ ಸಂಭ್ರಮಿಸುವುದಕ್ಕೆ ವೆಚ್ಚ ಮಾಡುವುದಕ್ಕೆ ಸರ್ಕಾರದ ಹಣ ಬೇಕು. ಶಾಸಕರು ಸಚಿವರು ಬೇಕು. ಅವರನ್ನು ವೇದಿಕೆಯ ಮೇಲೆ ಕೂಡ್ರಿಸಿ ಹರ ತುರಾಯಿ ಕೊಟ್ಟು ಗೌರವಿಸಬೇಕು. ಯಾಕೆಂದರೆ ಜಾತ್ರೆಯ ಬೇಕಾದ ವ್ಯವಸ್ಥೆಗೆ ಬೇಕಾದ ಹಣವನ್ನು ನೀಡಿದವರು ಅವರು. ಇದೆಲ್ಲ ಸರಿ, ಆದರೆ ಭ್ರಷ್ಟಾಚಾರಿಗಳು ತಲೆ ಹಿಡುಕರು, ಅಧಿಕಾರ ಹಿಡಿದಿರುವ ಸಂದರ್ಭದಲ್ಲಿ ಅವರನ್ನು ಮೆರೆಸುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಬದ್ಧತೆ ಮತ್ತು ಬದಲಾವಣೆಯ ಸಾಹಿತ್ಯಿಕ ಉದ್ದೇಶದ ಗತಿ ಏನಾಗುತ್ತದೆ ? ಈ ಬಗ್ಗೆ ಸರಸ್ವತಿ ಪುತ್ರರು, ಆರಾಧಕರು ಆಲೋಚಿಸಲೇಬೇಕಾಗುತ್ತದೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂದು ಹೊರಾಟದ ಕನಸನ್ನು ಬಿತ್ತಿದವರು ಅಧಿಕಾರಸ್ಥರ ಪಕ್ಕದಲ್ಲಿ ವಿರಾಜಮಾನರಾದರೆ ಅವರ ಮಾತುಗಳ ಬಗ್ಗೆ ಬರಹದ ಬಗ್ಗೆ ಅಪನಂಬಿಕೆ ಬರುತ್ತದೆ. ಈಗ ಆಗುತ್ತಿರುವುದೂ ಅದೇ. ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಎಲ್ಲೋ ಮೂಲೆ ಸೇರಿರುತ್ತದೆ. ಸಾಹಿತ್ಯಕ ಚರ್ಚೆಗಳು ಅರ್ಥ ಕಳೆದುಕೊಂದಿರುತ್ತವೆ. ಭಾರೀ ವಿಜ್ರಂಭಣೆಯಿಂದ ನಡೆಯುವ ಮದುವೆಗಳ ಹಾಗೆ, ಊರ ಜಾತ್ರೆಯ ಹಾಗೆ, ಮಾರಿ ಹಬ್ಬದ ಹಾಗೆ ಈ ಸಮ್ಮೇಳನಗಳು ನಡೆಯುತ್ತವೆ. ಸಾಹಿತಿಗಳು, ರಾಜಕಾರಣಿಗಳಿಗೆ ಹತ್ತಿರವಾಗಲು ಸಮ್ಮೇಳನಗಳನ್ನು ಬಳಸಿಕೊಳ್ಳುತ್ತಾರೆ. ರಾಜಕಾರಣಿಗಳು ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇದನ್ನು ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಾರೆ. ಸಾಹಿತ್ಯ ಸಮ್ಮೇಳನಗಳು ವಾರ್ಷಿಕವಾಗಿ ನಡೆಯುವ ತಿಥಿಯಂತಾಗಿವೆ. ಇದನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂಬುದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಉದ್ದೇಶ. ಯಾವುದೇ ಒಂದು ಕ್ರಿಯೆ ಸಂಪ್ರದಾಯವಾದರೆ ಅದು ಅರ್ಥ ಕಳೆದುಕೊಳ್ಳುತ್ತದೆ. ಅಲ್ಲಿ ಕ್ರಿಯಾಶೀಲತೆ ಮರೆಯಾಗುತ್ತದೆ. ಎಲ್ಲರೂ ಮಾಡುವುದನ್ನು ಮಾಡಿ ಮುಗಿಸುವುದಕ್ಕೆ ಮಾತ್ರ ಸೀಮಿತರಾಗುತ್ತಾರೆ. ಒಂದೇ ರೀತಿಯ ಘೋಷ್ಟಿಗಳು, ಅಧ್ಯಕ್ಷರ ಮೆರವಣಿಗೆ ಭಾಷಣ, ಊಟ ತಿಂಡಿ, ಪುಸ್ತಕ ಪ್ರದರ್ಶನ. ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಪುನರಾವಲೋಕನ ಮಾಡಬೇಕಿದೆ. ಸಾಹಿತ್ಯದ ಉದ್ದೇಶದ ಬಗ್ಗೆ ಸ್ಪಷ್ಟತೆ ಬೇಕು. ಆಗ ಸಾಹಿತ್ಯ ಮತ್ತು ಪ್ರಭೂತ್ವದ ನಡುವಿನ ಸಂಬಂಧದ ಬಗ್ಗೆಯೂ ಸ್ಪಷ್ಟತೆ ದೊರಕುತ್ತದೆ. ಕೊನೆಯದಾಗಿ ಇನ್ನೊಂದು ಮಾತು; ಅದು ಹಾಸನ ಸಾಹಿತ್ಯ ಸಮ್ಮೇಳನದ ಸಂದರ್ಭ. ಅಲ್ಲಿ ಬಹುತೇಕ ಮಠಾಧಿಪತಿಗಳೇ ವೇದಿಕಯ ಮೇಲೆ ವಿರಾಜಮಾನರಾಗಿದ್ದರು. ಅವರು ನಡುವೆ ಸಿಕ್ಕಿಕೊಂಡ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರು. ಅವರು ವೇದಿಕೆಯಿಂದ ಕೆಳಕ್ಕೆ ಇಳಿದು ಬಂದ ಮೇಲೆ ಮಠಾಧಿಪತಿಗಳ ಸಾಂಗತ್ಯ ಹೇಗಿತ್ತು? ಎಂದು ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದೆ. ಅವರು ಸುಮ್ಮನೆ ನಕ್ಕರು. ಈ ಸಾಹಿತ್ಯ ಸಮ್ಮೇಳನ ಮಠ ಮಾನ್ಯಗಳನ್ನು ವಿರೋಧಿಸುತ್ತಲೇ ಬಂದ ಪಾಟೀಲರನ್ನು ಮಠಾಧಿಪತಿಗಳ ಹತ್ತಿರ ತಂದಿತ್ತು ! ಇಂದಿನ ಸಾಹಿತ್ಯ ಜಾತ್ರೆ ಎಂತಹ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ನೈಜ ಉದಾಹರಣೆ ಎಂದು ನಾನು ಅಂದುಕೊಂಡಿದ್ದೇನೆ.
ಎಪ್ಪತ್ತಾರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಒಂದು ಮುನ್ನೋಟ
5:47 AM
Posted by ಆಲೆಮನೆ
ಕನ್ನಡ ಅಖಾಡದೊಳು ಮೊದಲ ಜಗಜಟ್ಟಿಯ ಎಂಟ್ರಿ...
ಕೆಚ್ಚೆದೆಯ ಕನ್ನಡ ಮನಸ್ಸು ಚಂಪಾರದ್ದು. ಅವರು ಈ ಚರ್ಚೆಗೆ ಚಾಲನೆ ನೀಡಿದ್ದಾರೆ. ಈ ಅಖಾಡ ದಲ್ಲಿ ಚರ್ಚಿಸಲೇಬೇಕಾದ ಸಮಸ್ಯೆಗಳನೇಕ, ಅವೆಲ್ಲವುಗಳನ್ನೂ ಸೂಚ್ಯವಾಗಿ ತಿಳಿ ಹೇಳಿದ್ದಾರೆ ಚಂಪಾ. ಸುಗ್ರಾಸ ಚರ್ಚೆಗೆ ಇದು ಒಳ್ಳೆಯ ಆರಂಭ.
2010 ರ ಫೆಬ್ರವರಿ 19-10-21 ರಂದು, ಕುಮಾರವ್ಯಾಸನ ನೆಲೆವೀಡೆಂದೇ ಹೆಸರು ಪಡೆದು, ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಗದಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿಖರ ಕಾರ್ಯಕ್ರಮವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಾಡೋಜ ಶ್ರೀಮತಿ ಗೀತಾ ನಾಗಭೂಷಣ ಸಮ್ಮೇಳನದ ಅಧ್ಯಕ್ಷರು, ಇದು ಎಪ್ಪತಾರನೆಯ ಸಮ್ಮೇಳನ. ಈ ಮೊದಲು, ಅರ್ಧಶತಕದ ಹಿಂದೆ, 1961 ರಲ್ಲಿ ಖ್ಯಾತ ಸಂಶೋಧಕ ಪ್ರೊ.ಕೆ.ಜಿ.ಕುಂದಣನಕಾರ ಅವರ ಅಧ್ಯಕ್ಷತೆಯಲ್ಲಿ ಗದಗನಗರದಲ್ಲಿ 43 ನೆಯ ಕನ್ನಡ ಸಮ್ಮೇಳನ ನಡೆದಿತ್ತು. ಆಗ ಅವಿಭಾಜಿತ ಧಾರವಾಡ ಜಿಲ್ಲೆಯ ಒಂದು ಊರಾಗಿತ್ತು ಗದಗ, ಈಗ ಅದು ಗದಗ ಜಿಲ್ಲೆಯ ಒಂದು ಸ್ಥಳ.
ಪರಿಷತ್ತು ಪ್ರಾರಂಭವಾದದ್ದು, 1914ರಲ್ಲಿ, ಸಾಹಿತಿಗಳೇ ಮುಂದಾಗಿ ಕಟ್ಟಿದ ಈ ಸಂಸ್ಥೆ 'ಸಾಹಿತ್ಯ ಪರಿಷತ್ತು' ಎಂಬ ಹೆಸರನ್ನೇ ಹೊತ್ತಿದ್ದರೂ ಇದು ಎಂದಿಗೂ ಕೇವಲ ಸಾಹಿತಿಗಳ ಪರಿಷತ್ತು ಆಗಲೇ ಇಲ್ಲ. ಸಂಸ್ಕೃತಿಯ ವಿಕಾಸ, ವರ್ಧನೆಗಳಲ್ಲಿ ಸಾಹಿತ್ಯದ ಪಾತ್ರ ದೊಡ್ಡದು ಮತ್ತು ಮಹತ್ವದ್ದು, ಕನ್ನಡ ನಾಡು ಎಂಬುದು ರಾಜಕೀಯ ಕಾರಣಗಳಿಂದಾಗಿ ಹಲವಾರು ಭೌಗೋಳಿಕ ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿತ್ತು. 'ಕನ್ನಡತನ' ಎಂಬುದು ಹೃದಯದ ಯಾವುದೋ ಮೂಲೆಯಲ್ಲಿ ಮಿಣಿ ಮಿಣಿ ಅಂತ ಉರಿಯುತ್ತಿದ್ದರೂ ಅದು ಕನ್ನಡ ನಾಡವರ ಇಡೀ ಬದುಕನ್ನು ಬೆಳಗುವ ಜ್ಯೋತಿಯಾಗಿರಲಿಲ್ಲ. ಈ ನಿಟ್ಟಿನಲ್ಲಿ ಕ.ಸಾ.ಪರಿಷತ್ತು (ಈ ಮೊದಲೇ ಧಾರವಾಡದಲ್ಲಿ ಸ್ಥಾಪನೆಗೊಂಡಿದ್ದ) ಕರ್ನಾಟಕ ವಿದ್ಯಾವರ್ಧಕ ಸಂಘದೊಂದಿಗೆ ಕೈ ಜೋಡಿಸಿ ಕನ್ನಡ ಪುನರುಜ್ಜೀವನದ ಕಾಯಕಕ್ಕೆ ತನ್ನನ್ನು ತೆರೆದುಕೊಂಡಿತು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿತು. ಆನಂತರದ ವರ್ಷಗಳಲ್ಲೂ ನಿರಂತರವಾಗಿ ಈ ನಾಡಿನ ಸಂತುಷ್ಟ ಬದುಕಿನ ಸಮಸ್ಯೆಗಳನ್ನೆತ್ತಿಕೊಂಡು, ಸಮಸ್ತ ಕನ್ನಡ ಭಾಷಿತ ಸಮುದಾಯವನ್ನು ತನ್ನ ತೆಕ್ಕೆಗೆ ಬರಮಾಡಿಕೊಳ್ಳುತ್ತಾ, ತನ್ನ ಕ್ರಿಯಾ- ನೈತಿಜ್ಯವನ್ನು ವಿಸ್ತರಿಸಿಕೊಳ್ಳುತ್ತದೆ. ಭಾರತದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ-ಈ ಗುರಿಗಳನ್ನು ಸಾಧಿಸಿದ ಮೇಲೆ ಇಂಥದೊಂದ್ದು ಮಹಾಸಂಸ್ಥೆಯ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತಲೇ ಇದೆ.ಸದ್ಯ ರಾಜ್ಯದ ಎಲ್ಲ ಜಿಲ್ಲಾ- ತಾಲ್ಲೂಕುಗಳಲ್ಲಿ, ನೆರೆಯ ನಾಲ್ಕು ರಾಜ್ಯಗಳಲ್ಲಿ ಘಟಕ ಹೊಂದಿರುವ ಕಸಾಪ, ಮಹಾಕವಿ ಕುವೆಂಪು, ಕನಸು ಕಂಡ `ಸಾಂಸ್ಕೃತಿಕ ಕರ್ನಾಟಕ'ವನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದೆ. ಜಗತ್ತಿನ ಯಾವುದೇ ಭಾಗದಲ್ಲಿರಲಿ ಕನ್ನಡಿಗ- ಅವನು ಈ ಸಾಂಸ್ಕೃತಿಕ ವಲಯದ ಒಂದು ಭಾಗವೇ. ಇಂಡಿಯಾ ದೇಶದ ಬೇರಾವ ರಾಜ್ಯದಲ್ಲೂ ಈ ಸ್ವರೂಪದ ಮತ್ತು ಈ ವ್ಯಾಪ್ತಿಯ ಸಾರ್ಥಕ-ಸಾಂಸ್ಕೃತಿಕ ಸಂಸ್ಥೆ ಇಲ್ಲ ಎನ್ನವುದೇ ಕಾಸಾಪರ ಹೆಚ್ಚುಗಾರಿಕೆ.
ಮೊದ ಮೊದಲು ಒಂದು ಪ್ರತಿಷ್ಠಿತ ಸಾಮಾಜಿಕ ವರ್ಗದ ಹಿಡಿತದಲ್ಲೇ ಇದ್ದ ಪರಿಷತ್ತು ನಂತರದ ಅವಧಿಯಲ್ಲಿ ಕರ್ನಾಟಕದ ಎಲ್ಲ ಸ್ತರದ ಸಮುದಾಯಗಳನ್ನು ಒಳಗು ಮಾಡಿಕೊಂಡಿರುವುದೇ ಅಲ್ಲದೆ ಸಮಕಾಲೀನ ಸಾಹಿತ್ಯಕ ವಿದ್ಯಮಾನಗಳಿಗೂ ಸರಿಯಾದ ಸ್ಪಂದನ ನೀಡುತ್ತಿದೆ. ಸಮ್ಮೇಳನದ ವೇದಿಕೆಗಳಲ್ಲಿ 'ಸಾಹಿತ್ಯ'ದ ಜೊತೆಗೇ, ಅದಕ್ಕೆ ಜೀವನವು ನೀಡುವ ಬದುಕಿನ ಅನೇಕ ವಿಷಯಗಳು ಚರ್ಚೆಗೆ ಬರುತ್ತಿವೆ. ಎಲ್ಲ ಪೀಳಿಗೆಗಳ ಸಾಹಿತಿಗಳ ಮುಖಗಳೂ ಅಲ್ಲಿ ಕಾಣುತ್ತವೆ. ಸಂಗೀತ, ನೃತ್ಯ, ಜಾನಪದ, ಚಿತ್ರಕಲೆ, ಕೃಷಿ, ಕೈಗಾರಿಕೆ- ಹೀಗೆ, ಇವತ್ತಿನ ಜಾಗತೀಕರಣ ಸಂದರ್ಭದ ಎಲ್ಲಾ ದೇಶೀಯ ಸಮಸ್ಯೆಗಳ ಬಗ್ಗೆ ಬಲ್ಲವರ ಬಾಯಿಯಿಂದ ಉಪಯುಕ್ತ ಮಾಹಿತಿ. ಹೇರಳವಾಗಿ ಇಲ್ಲಿ ಲಭ್ಯ. ಸಮೃದ್ಧವಾಗಿ ನಡೆಯುವ ಕನ್ನಡ ಪುಸ್ತಕಳ ಮಾರಾಟ ಅಕ್ಷರ ಸಂಸ್ಕೃತಿಯ ವಿಸ್ತಾರಕ್ಕೆ ಪುಷ್ಟೀ ನೀಡುತ್ತದೆ.ಒಟ್ಟಿನಲ್ಲಿ, ಧರ್ಮ-ಜಾತಿ-ಮತ-ಪ್ರದೇಶ ಎಲ್ಲದರ ಗೆರೆ ಮೀರಿ ಕನ್ನಡ 'ಕುಲ' ವೆಂಬುದು ಒಂದೆಡೆ ಸೇರಿ ಮಾಡುವ ಕನ್ನಡದ ಹಬ್ಬ-ಕನ್ನಡ ಸಾಹಿತ್ಯ ಸಮ್ಮೇಳನ.
ಕನ್ನಡಿಗರು ಆಸಕ್ತಿಯಿಂದ ಚರ್ಚಿಸಲೇಬೇಕಾದ ಕೆಲವು ಸಮಸ್ಯೆಗಳೂ ಇವೆ.
(1) ಪರಿಷತ್ತು ಒಂದು ಸ್ವಯತ್ತು, ಸಾರ್ವಭೌಮ ಸಂಸ್ಥೆ, ಅದಕ್ಕಿರುವುದು ಪ್ರಜಾಸಾತ್ತಾತ್ಮಕ ನೆಲಗಟ್ಟು. ಜನರೇ ಕಟ್ಟಿದ ಈ ಪರಿಷತ್ತು ಜನರಿಗಾಗಿಯೇ ಇರುವುದು. ಯಾವುದೇ ಪಕ್ಷದ ಸರಕಾರವಿದ್ದವರೂ ಅದು ಅನೇಕ ನೆಲೆಗಳಲ್ಲಿ ಪರಿಷತ್ತಿಗೆ ಧಾರಾಳವಾಗಿ ಧನ ಸಹಾಯ ಮಾಡುತ್ತಲೇ ಬಂದಿದೆ. ಆದರೆ ಈ ಕಾರಣದಿಂದ ಕಸಾಪ ವಿದ್ಯಮಾನಗಳಲ್ಲಿ ಪಾಲುಗೊಳ್ಳುವ ಪ್ರಭುತ್ವ ಒಮ್ಮೊಮ್ಮೆ ಅನೇಕ ಗೊಂದಲಗಳ ಸೃಷ್ಟಿಗೆ ಕಾರಣವಾಗುವುದು ಉಂಟು. ಅದನ್ನು ಅರ್ಥ ಮಾಡಿಕೊಂಡು ಎದುರಿಸುವ ಮತ್ತು ಯಾವುದೇ ಕಾರಣಕ್ಕೂ ಸಂಸ್ಥೆಯ ಘನತೆ-ಗೌರವವೇ ಕುಂದಾಗದಂತೆ ವರ್ತಿಸುವ ಜವಾಬ್ದಾರಿ ಕಸಾಪ ಅಧ್ಯಕ್ಷರಿಗೆ, ಕಾರ್ಯಕಾರಿ ಸಮಿತಿಗೆ ಇರಬೇಕಾದ್ದು ಅಪೇಕ್ಷಣೀಯ. ಸರಕಾರದ ನೇರ ನಿಯಂತ್ರಣದಲ್ಲಿರುವ ಪ್ರಾಧಿಕಾರ, ಅಕಾಡೆಮಿಗಳ ಹಾಗೆ ಸರಕಾರದ ಒಂದು 'ಅಂಗ'ವಾಗಿ ಕೆಲಸ ಮಾಡುವುದು. ಪರಿಷತ್ತಿನ ಸಂವಿಧಾನದ ಸತ್ಯಕ್ಕೆ ವ್ಯತಿರಿಕ್ತವಾದ ಸಂಗತಿ.
(2) ಸಮ್ಮೇಳನದ ಒಂದು ಮುಖ್ಯ ಆಕರ್ಷಣೆ: ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಕಂಡೋ ಅಥವಾ ತಮ್ಮ ಕೃತಿಗಳ ಮೂಲಕವೋ ಪರಿಚಿತರಾದ ಖ್ಯಾತ ಸಾಹಿತಿಗಳನ್ನು ಪ್ರತ್ಯಕ್ಷ ಕಾಣುವ ಅವಕಾಶ. ಆಸಕ್ತರು, ಅಭಿಮಾನಿಗಳು ಅವರ ಕೈ ಕುಲುಕಿ, ಅವರ ಹಸ್ತಾಕ್ಷರ ಪಡೆಯುವ ಬಯಕೆ ಹೊಂದಿರುವುದು ಸಹಜ. ಆದರೆ ಇತ್ತೀಚೆಗೆ ಪೀಳಿಗೆಗಳ ನಡುವಿನ 'ಅಂತರ' ಅನೇಕ ಕಾರಣಗಳಿಂದ ಹೆಚ್ಚಾಗುತ್ತಲೇ ಇರುವುದರಿಂದ, ಸಾಹಿತ್ಯ ಸಮ್ಮೇಳನಗಳಲ್ಲಿ 'ಹಿರಿಯರ' ಗೈರುಹಾಜರಿ ಎದ್ದು ಕಾಣುತ್ತಿದೆ. ಅವರನ್ನು ವಿಶೇಷ ಅತಿಥಿಗಳನ್ನಾಗಿ ಬರಮಾಡಿಕೊಂಡು ಪ್ರಯಾಣ-ಊಟ-ವಸತಿಯ ಸರಿಯಾದ ವ್ಯವಸ್ಥೆ ಮಾಡಿದರೆ ಈ ನ್ಯೂನ್ಯತೆಯನ್ನು ಹೋಗಲಾಡಿಸಬಹುದಾಗಿದೆ.
(3) ಸಮ್ಮೇಳನದ ಕೊನೆಯ ದಿನ ಬಹಿರಂಗ ಅಧಿವೇಶನದಲ್ಲಿ ನಾಡು-ನುಡಿಗೆ ಸಂಬಂಧಿಸಿದ ಅನೇಕ ಗೊತ್ತುವಳಿಗಳನ್ನು ಪಾಸು ಮಾಡುವುದು ವಾಡಿಕೆ. ಇವುಗಳ ಅನುಷ್ಟಾನದ ಜವಾಬ್ದಾರಿ ಯಾರದು? ಮುಂದಿನ ಸಮ್ಮೇಳನದ ಹೊತ್ತಿಗೆ ಎಷ್ಟು ನಿರ್ಣಯಗಳು ಜಾರಿಯಾಗಿರುತ್ತವೆ? - ಮುಂತಾದ ಪ್ರಶ್ನೆಗಳು ಏಳುವುದು ಸಹಜ. ಪಾಲುಗೊಂಡ ಅಧಿಕಾರಸ್ಥ ರಾಜಕಾರಣಿಗಳು ವೇದಿಕೆಯ ಮೇಲಿಂದ ಭರವಸೆಗಳನ್ನು ನೀಡುತ್ತಾರೇನೋ ನಿಜ. ಅವು ಭರವಸೆಗಳಾಗಿಯೇ ಉಳಿಯುವುದು ಅಷ್ಟೇ ನಿಜ. ಕನ್ನಡಿಗರ ಹಕ್ಕೊತ್ತಾಯಗಳು ಕೇವಲ ಆಶಯಗಳ ಶಬ್ದ ರೂಪವಾಗದೆ, ಅವು ಕಾರ್ಯಗತವಾಗುವಂತೆ ಮಾಡಲು ಪರಿಷತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾಗಿದೆ.
ಗದಗ ಸಮ್ಮೇಳನದಲ್ಲಿ ಎರಡು ಕವಿಗೋಷ್ಠಿಗಳನ್ನೊಳಗೊಂಡಂತೆ ಒಟ್ಟು ಹದಿನೈದು ಗೋಷ್ಠಿಗಳಿವೆ. ಗೀತಾ ನಾಗಭೂಷಣರೊಂದಿಗೆ ಸಾಹಿತ್ಯ ಸಂವಾದವಿದೆ. ಉತ್ತರ ಕರ್ನಾಟಕ ಕಂಡ ಭೀಕರ ನೆರೆ ಹಾವಳಿಯ ಹಿನ್ನೆಲೆಯಲ್ಲಿ ಸಮ್ಮೇಳವನ್ನು ಸರಳವಾಗಿ ಆಚರಿಸುವ ನಿರ್ಣಯ ಕಸಾಪ ಅಧ್ಯಕ್ಷ ಡಾ|| ನಲ್ಲೂರು ಪ್ರಕಾಶ ಅವರದು. . . .
ಜಗತ್ತಿನ ತುಂಬ ಹರಡಿಕೊಂಡಿರುವ ಕನ್ನಡ ಭಾಷಿಕರು ತಿರುಳ್ಗನ್ನಡದ ನಾಡಿನಲ್ಲಿ ನಡೆಯಲಿರುವ ಕನ್ನಡ ಹಬ್ಬದ ಸುತ್ತ ಅನೇಕ ವಿದ್ಯಮಾನಗಳ ಬಗೆಗಿನ ಚರ್ಚೆಯಲ್ಲಿ ಪಾಲುಗೊಳ್ಳಲಿ ಎಂಬ ಬಯಕೆ ನಮ್ಮದು.

