ನುಡಿನಮನದಲ್ಲಿ ನಾಳೆ ಬಿಸಿ ಬಿಸಿ..




ಕನ್ನಡದ ರಂಗಭೂಮಿಗೆ ಅತ್ಯಂತ ಶ್ರೀಮಂತ ಇತಿಹಾಸವಿದೆ. ಇಂದು ಕೂಡ ಬೇರೆ ಇತರತ್ರ ಭಾಷೆಗಳಿಗಿಂತ ಕನ್ನಡದ ರಂಗಭೂಮಿ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದೆ.
ಈ ಕ್ರಿಯಾಶೀಲ ಶ್ರೀಮಂತಿಕೆಗೂ ಕನ್ನಡ ಸಾಹಿತ್ಯಕ್ಕೂ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ಸದ್ಯ ಮೈಸೂರಿನ ರಂಗಾಯಣದ ನಿರ್ದೇಶಕರಾಗಿರುವ ಲಿಂಗದೇವರು ಹಳೆಮನೆ ಚರ್ಚಿಸಿದ್ದಾರೆ.

ನಿರೀಕ್ಷಿಸಿ ನಾಳೆ...
ಕರ್ನಾಟಕದಲ್ಲಿ ಕನ್ನಡಕ್ಕೊಂದು ಅಭಿವೃದ್ಧಿ ಪ್ರಾಧಿಕಾರ ಇರುವುದು ಕನ್ನಡದ ನೈಜ ಸ್ಥಿತಿಗತಿಯನ್ನು ತೋರಿಸುತ್ತದೆ. ಇರಲಿ . ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಗಿರಬೇಕೆನ್ನುವುದು ಉಸಿರಾಟದಷ್ಟೇ ಸಹಜ. ಆದರೆ ಕರ್ನಾಟಕ ಏಕೀಕರಣಗೊಂಡ ಈ ೫೩ ವರ್ಷಗಳಲ್ಲಿ ನೂರಾರು ಸರಕಾರೀ ಜಿಓಗಳು ಈ ವಿಷಯವಾಗಿ ಹೊರಡಿಸಲ್ಪತ್ತಿದ್ದರೂ ಮೊನ್ನೆ ಕೂಡ ಮುಖ್ಯಮಂತ್ರಿಗಳು ಈ ವಿಷಯವಾಗಿ ಗುಡುಗಬೆಕಾಯಿತು. ಈ ಎಲ್ಲ ಹಿನ್ನಲೆಯಲ್ಲಿ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಹಿರಿಯರು ಎಂ. ಕೆ. ಭಾಸ್ಕರ್ ರಾವ್ ಅವರು ತಮ್ಮ ಜ್ಹುಳುಪಾದ ಲೇಖನಿ ಪ್ರಯೋಗಿಸಿದ್ದಾರೆ. ನಾಳೆ ನಿರೀಕ್ಷಿಸಿ........

ಸಾಹಿತಿಗಳು ಅನ್ಯಗ್ರಹ ಜೀವಿಗಳಲ್ಲ!



ಉಷಾ ಕಟ್ಟೆಮನೆ ಕನ್ನಡದ ಪತಿಕೊದ್ಯಮದ ಮೂಸೆಯಲ್ಲಿ ಪಳಗಿದವರು. ಈಗ ಅದೆಲ್ಲವನ್ನೂ ಬಿಟ್ಟು ಹಸಿರು ಅರಸಿ ಊರ ದಾರಿ ಹಿಡಿದಿರುವವರು. ಆದರೆ ಬರವಣಿಗೆ ಅಷ್ಟು ಸುಲಭವಾಗಿ ಬಿದುವಂಥದಲ್ಲವಲ್ಲ - ಮೌನ ಕಣಿವೆ ಎಂಬ ಬ್ಲಾಗ್ನ ಮೂಲಕ ಓದುಗರನ್ನು ತಲುಪುತ್ತಿದ್ದಾರೆ. ಸದ್ಯ ಸಾಹಿತಿಗಳು, ಅದರಲ್ಲೂ ಮಹಿಳಾ ಸಾಹಿತಿಗಳು ಅನ್ಯಗ್ರಹ ಜೀವಿಗಳಲ್ಲ ಎಂದು ಸಾರಿದ್ದಾರೆ. ಕಸಾಪ, ಸಮ್ಮೇಳನ ಹಿಡಿಯಬೇಕಾದ ದಾರಿಯ ಕುರಿತು ಚರ್ಚಿಸಿದ್ದಾರೆ
ಬರವಣಿಗೆಯೆನ್ನುವುದೊಂದು ಬಿಡುಗಡೆಯ ಭಾವ. ಒಳಗಿನ ಒತ್ತಡವನ್ನು ಹೊರ ಹಾಕಲೊಂದು ರಹದಾರಿ. ಅದಕ್ಕೆ ಲಿಂಗಬೇಧವಿಲ್ಲ. ಅನಕ್ಷರಸ್ತರಾಗಿದ್ದರೂ ಕಥೆ- ಕಾವ್ಯ ಕಟ್ಟಿ ಮನದಿಂಗಿತವನ್ನು ಬಿಚ್ಚಿಡುತ್ತಿದ್ದ ಜಾನಪದ ಸಾಹಿತ್ಯ ಲೋಕವನ್ನು ಒಮ್ಮೆ ಹೊಕ್ಕರೆ ಸಾಕು, ಸೃಜನಶೀಲ ಮಹಿಳಾ ಲೋಕವೊಂದು ಅನಾವರಣಗೊಳ್ಳುವ ಪರಿಗೆ ಬೆರಗುಗೊಳ್ಳುವ ಸರದಿ ನಮ್ಮದು. ಕುಟ್ಟುವುದು, ಬೀಸುವುದು, ಉಳುವುದು, ನೇಜಿ ನೇಡುವುದು,ಕೊಯ್ಯುವುದು; ತಮಗಿರುವ ಸೀಮಿತ ಅವಕಾಶದಲ್ಲೇ ಸಾಹಿತ್ಯ ಚಿಗುಗುರೊಡೆದ ಪರಿಯಿದು.

ಇಂದಿನ ಆಧುನಿಕ ಮಹಿಳೆ ಅದೇ ಜನಪದ ಮಹಿಳೆಯೇ. ಆಕೆಯ ಹೊರಜಗತ್ತಿನಲ್ಲಾಗಲಿ, ಒಳಪ್ರಪಂಚದಲ್ಲಾಗಲಿ ಅಂತಹ ದೊಡ್ಡ ವ್ಯತ್ಯಾಸವೇನೂ ಆದ ಹಾಗಿಲ್ಲ. ಅಂದು ಆಕೆ ತನ್ನ ದುಃಖ ದುಮ್ಮಾನಗಳನ್ನು, ಸುಖ-ಸಂತೋಷವನ್ನು ದೇವರೊಡನೆ ಅಥವಾ ಪ್ರಕೃತಿಯೊಡನೆ ತೋಡಿಕೊಳ್ಳುತ್ತಿದ್ದಳು; ಸಖಿಯರೊಡನೆ ಹಂಚಿಕೊಳ್ಳುತ್ತಿದ್ದಳು. ಆಕೆಯದು ಪುಟ್ಟ ಕ್ಯಾನ್ವಾಸ್. ಆದರೆ ಆಧುನಿಕ ಮಹಿಳೆಯ ಜಗತ್ತು ವಿಸ್ತಾರವಾದುದು. ಲಿಂಗಬೇಧವಿಲ್ಲದ ಜಗತ್ತೊಂದನ್ನು ಕಟ್ಟಿಕೊಳ್ಳುವ, ಸೃಷ್ಟಿಸಿಕೊಳ್ಳುವ ಎಲ್ಲ ಅವಕಾಶಗಳು ಆಕೆಗಿದೆ. ಆದರೂ ಆಕೆ ಒಂಟಿಯೇ. ಆಕಾಶದತ್ತ ಮುಖ ಮಾಡಿದವಳೇ. ಹಾಗಾಗಿ ಒಳಜಗತ್ತಿನಲ್ಲಿ ಇಬ್ಬರ ಭಾವವೂ ಒಂದೇ.

ಮೇಲಿನ ಇಬ್ಬರು ಮಹಿಳೆಯರ ಮಧ್ಯೆ ಉಲ್ಕೆಯಂತೆ ಜ್ವಾಜಲ್ಯಮಯವಾಗಿ ಉರಿದ ಮಹಿಳಾ ಗುಚ್ಛವೊಂದು ೧೨ನೇ ಶತಮಾನದಲ್ಲಿ ನಮಗೆ ಕಾಣಸಿಗುತ್ತದೆ. ಮಹಿಳೆಯರ ಅಂತರಂಗದ ಸ್ಫೋಟಕ್ಕೆ ಆ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆ, ಲಿಂಗತಾರತಮ್ಯವೇ ಕಾರಣ. ಅವರು ನುಡಿದುದೆಲ್ಲವೂ ’ವಚನ’ಗಳಾಗಿ ಅನ್ಯರಿಗೆ ದಾರಿದೀಪಗಳಾದವು. ಅಂದು ಸಮಾಜದೆದುರು ಮಹಿಳೆಯರು ಮುಕ್ತವಾಗಿ ತೆರೆದುಕೊಂಡ ಪರಿ ನಮಗಿಂದು ಅಚ್ಚರಿ ಹುಟ್ಟಿಸುತ್ತದೆ. ಅವರು ಅಭಿವ್ಯಕ್ತಿಗಾಗಿ ಹೆದರಲಿಲ್ಲ; ತಿಣುಕಾಡಲಿಲ್ಲ. ಅನ್ನಿಸಿದ್ದನ್ನು ಹೇಳಿದರು. ಹೇಳಿದಂತೆ ಬದುಕಿದರು. ಆದರವರು ಉಲ್ಕೆಯಂತೆ ಉರಿದು ಮಾಯವಾದರು. ಅನಂತರ ತಮಗನ್ನಿಸಿದ್ದನ್ನು ನೇರವಾಗಿ, ಮುಕ್ತವಾಗಿ ಹೇಳಬಲ್ಲ ಮಹಿಳೆಯರಿಗಾಗಿ ನಾವು ೧೯ನೇ ಶತಮಾನದವರೆಗೂ ಕಾಯಬೇಕಾಯ್ತು. ಆದರೂ ವಚನಕಾರ್ತಿಯರ ನಿರ್ಭಿಡೆಯ ಅಭಿವ್ಯಕ್ತಿ ಅಧುನಿಕ ಮಹಿಳೆಯರಲ್ಲಿ ಇದ್ದಂತಿಲ್ಲ. ಅಥವಾ ಬಸವಣ್ಣನಂಥ ಸಹಚಾರಿಗಳು ಇವರಿಗೆ ಒತ್ತಾಸೆಯಾಗಿ ನಿಂತಿಲ್ಲವೆನಿಸುತ್ತದೆ.

೧೯ನೇ ಶತಮಾನದ ನಂತರದಲ್ಲಿ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸಾಹಿತ್ಯವೂ ಸಾಥ್ ನೀಡಿತು. ಪುರುಷ ಜಗತ್ತಿಗೆ ತೀರಾ ಭಿನ್ನವಾದ ಮಹಿಳಾ ಆಂತರಿಕ ಜಗತ್ತೊಂದು ಅನಾವರಣಗೊಳ್ಳತೊಡಗಿತು. ಅದರ ಸಣ್ಣ ಸಣ್ಣ ವಿವರಗಳು ಮಹಿಳೆಯರ ಬರವಣಿಗೆಯಲ್ಲಿ ದಾಖಲಾಗತೊಡಗಿದವು. ಬರವಣಿಗೆಗೆ ಸಾಮಾಜಿಕ ಆಯಾಮ ದೊರಕತೊಡಗಿತು. ಅದನ್ನು ಸ್ತ್ರೀವಾದಿ ಸಾಹಿತ್ಯವೆಂಬ ಪ್ರತ್ಯೇಕ ನೆಲೆಯಲ್ಲಿ ಸಾಹಿತ್ಯ ಜಗತ್ತು ಗುರುತಿಸತೊಡಗಿತು. ಸ್ತ್ರೀವಾದಿ ವಿಮರ್ಶೆ ಕೂಡಾ ಸ್ಪಷ್ಟ ರೂಪ ಪಡೆಯತೊಡಗಿತು. ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳಲ್ಲಿ ’ಮಹಿಳಾ ಅಧ್ಯಯನ’ ಈಗ ಆಸಕ್ತಿಯ ಜ್ನಾನಶಾಖೆ.

ಕೇರಳದ ಮಾಧವಿ ಕುಟ್ಟಿ ಅಂತರಂಗದ ಹುಡುಕಾಟದಲ್ಲೇ ಕಮಲಾದಾಸಳಾಗಿ, ಮತ್ತೆ ಸುರೈಯಳಾಗಿ ತೀವ್ರ ವ್ಯಾಮೋಹಿಯಾಗಿ ಬದುಕಿದವರು. ಪ್ರೋತಿಮಾ ಬೇಡಿ, ಅಮೃತ ಪ್ರೀತಂ, ಮರಾಠಿಯ ಮಾಧವಿ ದೇಸಾಯಿ, ಕನ್ನಡದ ಪ್ರತಿಭಾ ನಂದಕುಮಾರ್ ಸೇರಿದಂತೆ ಎಲ್ಲಾ ಬರಹಗಾರ್ತಿಯರೂ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಡಿ ನರಳಿದವರೇ. ಹಾಗಿದ್ದರೂ ಪುರುಷನಿಲ್ಲದ ಸ್ತ್ರೀಯ ಬಾಳು ಅಪೂರ್ಣ ಎಂಬುದನ್ನು ಮನಗಂಡವರು. ಸ್ತ್ರೀಯ ಅನನ್ಯತೆಯನ್ನು ಗುರುತಿಸಿಕೊಂಡು ಪುರುಷನನ್ನು ಅನುಸರಿಸದೆ, ಅವರಂತಾಗಲು ಬಯಸದೆ ಪ್ರಕೃತಿಧರ್ಮವನ್ನು ಅರಿತುಕೊಂಡು ಅವನಲ್ಲೇ ಆತ್ಮಬಂಧುವನ್ನು ಹುಡುಕಿದವರು.

ಇಂತಹದೊಂದು ಸ್ತ್ರೀ ಬಳಗ ಸಮಾಜದಲ್ಲಿ ಒಳಗಿಂದೊಳಗೆ ಸೃಷ್ಟಿಯಾಗುತ್ತಿದೆ. ಅವರು ವಿದ್ಯಾವಂತರು. ಸ್ವತಂತ್ರ ಚಿಂತನೆ ಹೊಂದಿದವರು. ಹೀಗೆಯೇ ಬದುಕಬೇಕೆಂದು ನಿರ್ಧರಿಸಿಕೊಂಡವರು. ಆರ್ಥಿಕವಾಗಿ ಸಬಲರು. ನೆಮ್ಮದಿಯ ಬದುಕಿಗೆ ಮದುವೆ ಅನಿವಾರ್ಯ ಅಲ್ಲ ಎಂದು ತಿಳಿದುಕೊಂಡವರು. ಇಂತಹ ಟ್ರೆಂಡ್ ಬಗ್ಗೆ ಸಾಹಿತ್ಯ ವಲಯದಲ್ಲಿ ಚರ್ಚೆಯಾಗಬೇಕು. ಯಾಕೆಂದರೆ ಭಾರತೀಯ ಸಮಾಜ ನಿಂತಿರುವುದೇ ಕುಟುಂಬ ವ್ಯವಸ್ಥೆಯ ಮೇಲೆ. ಮಹಿಳೆ ಅದರ ಆಧಾರ ಸ್ತಂಭ. ಈ ವ್ಯವಸ್ಥೆಯೇ ಅಲ್ಲಾಡತೊಡಗಿದರೆ ಸ್ವಸ್ಥ ಸಮಾಜ ರೂಪುಗೊಳ್ಳಲಾರದು. ಮಹಿಳೆಯರಂತೆ ಮಕ್ಕಳು ಮತ್ತು ವೃದ್ಧರ ಮನಸ್ಥಿತಿಯ ಬಗ್ಗೆ ಕೂಡ ಗಂಭೀರವಾಗಿ ಚಿಂತಿಸಬೇಕಾದ ಕಾಲಘಟ್ಟವಿದು.

ಈಗ ಸಾಹಿತ್ಯ ವಲಯದಲ್ಲಿ ಇದರ ಬಗ್ಗೆ ಚಿಂತನೆ ನಡೆಯುತ್ತಿಲ್ಲವೆಂದಲ್ಲ. ಅದು ಅಕಾಡಮಿಕ್ ಮಟ್ಟದಲ್ಲಾಗುತ್ತಿದೆ. ಅದು ಮಾತೃ ದೃಷ್ಟಿಕೋನದಿಂದ ಆಗಬೇಕು. ಸಾಹಿತ್ಯ ಮತ್ತು ಜನಸಾಮಾನ್ಯರ ನಡುವೆ ಬಹುದೊಡ್ಡ ಕಂದಕವಿದೆ. ಚಿಂತಕರು ಜನ ಸಾಮಾನ್ಯರತ್ತ ಇಳಿದು ಬರಬೇಕು. ಅರ್ಥವಾಗುವ ಸರಳ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಗಬೇಕು. ಭಾಷೆ ಉಳಿದರೆ ತಾನೆ ಸಾಹಿತ್ಯ ಸೃಷ್ಟಿ? ಅವರ ಕಣ್ಣಮುಂದೆ ಕನ್ನಡವನ್ನು ನಿಜವಾಗಿ ಪ್ರೀತಿಸುವ ಐಟಿ,ಬಿಟಿ ಯುವ ಮನಸ್ಸುಗಳಿರಬೇಕು. ನವಸಾಕ್ಷರರಿರಬೇಕು. ದೇಸಿಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಗ್ರಾಮೀಣ ಜನರಿರಬೇಕು. ರೈತ ಸಮುದಾಯವಿರಬೇಕು. ಜನಪರ ಚಳುವಳಿಗಳಿರಬೇಕು. ಅವರೆಲ್ಲರಿಗೂ ಸಾಹಿತಿ ಕಿವಿಯಾಗಬೇಕು; ಧ್ವನಿಯಾಗಬೇಕು. ಆದರೆ ಆಗುತ್ತಿರುವುದೇನು? ಸಾಹಿತ್ಯ ನಗರಕೇಂದ್ರಿತವಾಗುತ್ತಿದೆ. ಸಾಹಿತಿಗಳು ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಅಕ್ಷರ ಬಲ್ಲವರೆಲ್ಲಾ ಸಾಹಿತಿಗಳಾಗುತ್ತಿದ್ದಾರೆ.

ಸಾಹಿತ್ಯ ಸಮ್ಮೇಳನವೆಂಬುದೊಂದು ಜಾತ್ರೆ. ಜಾತ್ರೆಯಲ್ಲಿ ಸಡಗರವಿರುತ್ತದೆ. ಸಂಭ್ರಮವಿರುತ್ತದೆ. ಅಲ್ಲಿ ಗಂಭೀರ ಚಿಂತನೆ ನಡೆಯದು. ಆದರೆ ಚಿಂತನೆಯ ಝಳಕು ತೋರಿಸಲು ಅವಕಾಶವಿದೆ. ಸುದ್ದಿಯನ್ನೂ ಮಸಾಲೆ ಸೇರಿಸಿ ಉಣಬಡಿಸುವ ಕಾಲವಿದು. ಹಳೆ ಮುತ್ತೈದೆಯ ಹಾಗಿರುವ ಸಾಹಿತ್ಯ ಪರಿಷತ್ತು ಬದಲಾಗಬೇಕು. ಸಮ್ಮೇಳನದ ರೂಪುರೇಷೆ ಬದಲಾಗಬೇಕು.

ಬರವಣಿಗೆಯೆನ್ನುವುದು ಸ್ವಗತದಂತೆ; ಅಂತರಂಗದ ಪಿಸುಮಾತಿನಂತೆ; ಆಪ್ತ. ಆದರೂ ಅದರೊಳಗೇ ಪ್ರತಿಭಟನೆ ಹುದುಗಿರುತ್ತದೆ. ಅದು ಜನರ ಆಲೋಚನಾ ಕ್ರಮವನ್ನು, ಮೌಲ್ಯಗಳ ಕುಸಿತವನ್ನು, ಸಾಂಸ್ಕೃತಿಕ ಪಲ್ಲಟವನ್ನು ಹಿಡಿದಿಡುತ್ತದೆ. ಗಡಿಸಮಸ್ಯೆ, ಭಾಷಾ ಸಮಸ್ಯೆ, ನದಿನೀರು ಹಂಚಿಕೆ ಇವೆಲ್ಲಾ ಭಾವಾನಾತ್ಮಕ ಸಮಸ್ಯೆಗಳು. ಶಾಸನ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು. ಅವುಗಳ ಪರಿಹಾರಕ್ಕೆ ರಾಜಕೀಯ ವೇದಿಕೆ ಬೇಕು. ಅವುಗಳನ್ನು ವೇದಿಕೆಯತ್ತ ತರುವ ಚಳುವಳಿಗಳು ಬೇಕು. ಅದನ್ನು ಸಾಹಿತ್ಯ ಮುನ್ನಡೆಸುತ್ತಿರಬೇಕು. ಸಾಹಿತಿಗಳು, ಸಾಹಿತ್ಯ ಪರಿಷತ್ತು ಇದನ್ನೆಲ್ಲಾ ಮಾಡುತ್ತಿದೆಯೇ ಎಂಬುದು ಈಗಿರುವ ಬಹುಮುಖ್ಯ ಪ್ರಶ್ನೆ.


ನಿಷ್ಕ್ರಿಯ ಕನ್ನಡಿಗರ ಮೇಲೆ - ಕ್ರಿಯಾಶೀಲ ಕನ್ನಡೇತರರ ಸವಾರಿ

ಮಹಾದೇವ ಪ್ರಕಾಶ - `ಈ ಭಾನುವಾರ' ವಾರಪತ್ರಿಕೆಯ ಸಂಪಾದಕರು. ಕನ್ನಡಿಗರ ಮೇಲೆ ಕನ್ನಡೇತರರ ದಬ್ಬಾಳಿಕೆಯ ಬಗ್ಗೆ ಸುದೀರ್ಘ ಚರ್ಚಾತ್ಮಕ ಲೇಖನ ಬರೆದಿದ್ದಾರೆ., ಕನ್ನಡಿಗರು ನಿಷ್ಕ್ರಿಯರಾಗಿರುವುದರಿಂದಲೇ ಕ್ರಿಯಾಶೀಲ ಕನ್ನಡೇತರರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬ ಅವರ ವಿಶ್ಲೇಷಣೆ ಒಪ್ಪತ್ತದಕ್ಕೆ! ಅಂದು ಏಕೀಕರಣ, ಇಂದು ನಡೆಯಬೇಕಿರುವುದು ಕನ್ನಡೀಕರಣ - ಹೌದಲ್ಲವೇ ಎಷ್ಟು ಸತ್ಯ ?
ಅಖಂಡ ಕರ್ನಾಟಕಕ್ಕೆ ಈಗ ಐವತ್ತಮೂರು ವರ್ಷ. ಶೈಶವಾವಸ್ಥೆ, ಬಾಲ್ಯಾವಸ್ಥೆ, ಯೌವನಾವಸ್ಥೆಯನ್ನು ದಾಟಿ ಸಂಪೂರ್ಣ ಪರಿಪಕ್ವಗೊಂಡ ವಯಸ್ಸಿನಲ್ಲಿ ಕರ್ನಾಟಕ ಅಡಿಯಿಡುತ್ತಿದೆ. ಕರ್ನಾಟಕಕ್ಕೇನೋ ಈಗ ಪರಿಪಕ್ವ ವಯಸ್ಸು. ಆದರೆ, ಈ ಪರಿಪಕ್ವ ಕರ್ನಾಟಕದಲ್ಲಿ ಕನ್ನಡದ ಸ್ಥಿತಿಗತಿ ಏನು? ಕನ್ನಡ ಮಾತನಾಡುವ ಜನರ ಜೀವನಮಟ್ಟ ಎಷ್ಟರ ಮಟ್ಟಿಗೆ ಉತ್ತಮಗೊಂಡಿದೆ? ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ, ಪ್ರತ್ಯೇಕ ರಾಜ್ಯ ಬೇಕು ಎಂದು ಬೊಬ್ಬೆಯಿಡುತ್ತಿರುವ ಕೊಡಗು, ಪ್ರಾದೇಶಿಕ ಅಸಮತೋಲನದಿಂದ ಅನ್ಯಾಯವಾಗಿದೆ ಎಂದು ಬಂಡಾಯದ ಬಾವುಟ ಹಾರಿಸಿರುವ ಹೈದರಾಬಾದ್ ಕರ್ನಾಟಕದ ಬಳ್ಳಾರಿ, ರಾಯಚೂರಿನಲ್ಲಿ ಕನ್ನಡಿಗರ, ಕನ್ನಡದ ಸ್ಥಿತಿಗತಿಯ ಸೂಕ್ಷ್ಮ ಅಧ್ಯಯನ ಮಾಡಿದಾಗ ಕರ್ನಾಟಕ, ಕನ್ನಡದ ಸ್ಥಾನ ಮತ್ತು ಮಾನ ಏನಾಗಿದೆ? ಎಲ್ಲಿದೆ? ಎನ್ನುವುದರ ಮನವರಿಕೆಯಾಗುತ್ತದೆ.

ಇದನ್ನು ಕರಾರುವಾಕ್ಕಾದ ಅಂಕಿ-ಅಂಶಗಳಿಂದ ವಿಶ್ಲೇಷಿಸುವುದು ಸಾಧ್ಯವಾಗದೆ ಹೋದರೂ, ಮೇಲ್ನೋಟಕ್ಕೆ ಕಂಡುಬರುವ ವಾಸ್ತವ ಸತ್ಯದ ನೆಲೆಯಲ್ಲಿ ನೋಡಿದಾಗ ಕನ್ನಡಿಗರು ತಮ್ಮ `ಆರ್ಥಿಕ ಪ್ರಭುತ್ವ'ದ ಮೇಲಣ ಹಿಡಿತವನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿದ್ದಾರೆ. ಜೀವನ ನಡೆಸಲು ಕರ್ನಾಟಕದ ನೆಲ ಜಲವನ್ನು ಆಶ್ರಯಿಸಿ ಬಂದ ಕನ್ನಡೇತರರು ಕೃಷಿಯೂ ಸೇರಿದಂತೆ, ವ್ಯಾಪಾರ, ಉದ್ಯಮ, ವಾಣಿಜ್ಯ ಹಾಗೂ ಶೈಕ್ಷಣಿಕ ಮತ್ತಿತರ ಕ್ಷೇತ್ರಗಳಲ್ಲಿ ಕನ್ನಡಿಗರ ಮೇಲೆ ಸವಾರಿ ಮಾಡಲಾರಂಭಿಸಿದ್ದಾರೆ. ಕನ್ನಡಿಗರು, ಕನಿಷ್ಠ ಕುದುರೆಯಾಗುವು ದಿರಲಿ, ಕನ್ನಡೇತರರ ಕತ್ತೆಯಾಗುತ್ತಿದ್ದಾರೆ. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಪರಿಸ್ಥಿತಿಯತ್ತ ಕ್ಷ-ಕಿರಣ ಬೀರಿದಾಗ ಬೆಂಗಳೂರು ಈಗ ಸಂಪೂರ್ಣ ಕನ್ನಡೇತರರ ಪಾಲಾಗಿದೆ. ಸಣ್ಣಪುಟ್ಟ ಟೀಸ್ಟಾಲ್ಗಳಿಂದ ಹಿಡಿದು, ಬೃಹತ್ ಉದ್ದಿಮೆಗಳವರೆಗೆ ಎಲ್ಲ ರೀತಿಯ ವ್ಯಾಪಾರ, ವ್ಯವಹಾರ, ಉದ್ದಿಮೆಗಳೂ ಕನ್ನಡೇತರರ ಹಿಡಿತದಲ್ಲಿದೆ. ಕನ್ನಡದ ನೆಲ ಜಲದ ಲಾಭವನ್ನು ಪಡೆದುಕೊಂಡು ಸಮೃದ್ಧ ಜೀವನವನ್ನು ನಡೆಸುತ್ತಿರುವವರು ಕನ್ನಡೇತರರು. ಆಶ್ಚರ್ಯವಾಗಬಹುದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ರಾಜಕೀಯ ಚಟುವಟಿಕೆಗಳೂ ಕನ್ನಡೇತರರ ನಿಯಂತ್ರಣದಲ್ಲಿದೆ. ಬೆಂಗಳೂರಿನ ಒಟ್ಟು 24 ಶಾಸಕರಲ್ಲಿ ಅಚ್ಚಕನ್ನಡದ ಶಾಸಕರು ಕೇವಲ ಆರೇಳು ಮಂದಿ, ಹಾಗೆಯೇ ಬೆಂಗಳೂರು ಮಹಾನಗರ ಪಾಲಿಕೆಯ ಕ್ಷೇತ್ರ ಪುನರ್ವಿಂಗಡನೆಯ 198 ವಾರ್ಡ್ಗಳಲ್ಲಿ ಅರ್ಧದಷ್ಟು ವಾರ್ಡ್ಗಳಲ್ಲಿ ಅಚ್ಚ ಕನ್ನಡಿಗರು ಜಯ ಗಳಿಸುವುದು ಕನಸಿನ ಮಾತು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರಭಾರತದಿಂದ ಬಂದವರೇ ದರ್ಬಾರು ನಡೆಸುವುದು ಗ್ಯಾರಂಟಿ. ಇದರ ಜೊತೆಗೆ ನೆರೆಹೊರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ವಲಸೆ ಬಂದವರಲ್ಲದೆ, ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ನೆಲೆಯೂರುವವರೆಲ್ಲರೂ ಸಂಪೂರ್ಣವಾಗಿ ಬೆಂಗಳೂರಿನಲ್ಲಿ ಆರ್ಥಿಕ ಹಾಗು ಔದ್ಯಮಿಕ ಪ್ರಭುತ್ವವನ್ನು ಸಾಧಿಸಿದ್ದಾರೆ.

ಸರಾಸರಿ ವಾರ್ಷಿಕ ತಲಾದಾಯದಲ್ಲಿ ಬೆಂಗಳೂರು ನಗರ ಜಿಲ್ಲೆ (25,740 ರೂಪಾಯಿ)ಯನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಕೊಡಗು (ರೂಪಾಯಿ 24, 623) ಈಗ ಸಂಪೂರ್ಣವಾಗಿ ಮಲೆಯಾಳಿಮಯವಾಗಿದೆ. ಸಾವಿರಾರು ಎಕರೆ ಕಾಫಿ ಪ್ಲಾಂಟೇಶನ್ಗಳು ಮಲೆಯಾಳಿಗಳ ಪಾಲಾಗಿದೆ. ಸಣ್ಣಪುಟ್ಟ ಕಾಫಿ ತೋಟಗಳನ್ನು ಹೊಂದಿದ್ದ ಕನ್ನಡಿಗರು ಇವುಗಳನ್ನು ಮಲೆಯಾಳಿಗಳಿಗೆ ಮಾರಿ, ಅವರಲ್ಲಿಯೇ ಕೆಲಸಗಾರರಾಗಿ ಸೇರಿಕೊಂಡಿದ್ದಾರೆ. ಇಲ್ಲವೆ, ಮಾರಾಟದಿಂದ ಬಂದ ಹಣವನ್ನು ತೆಗೆದುಕೊಂಡು ಬೇರೆ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಹೀಗಾಗಿ ನಿಸರ್ಗ ಸಮೃದ್ಧ ನೆಲೆಯಲ್ಲಿ ಮಲೆಯಾಳಿಗಳು ಬೇರು ಬಿಡಲಾರಂಭಿಸಿದ್ದಾರೆ. ಈ ವಾಸ್ತವ ಸತ್ಯವನ್ನು ಅರಿಯದ ಕೊಡಗಿನ ಮೂಲದ ಕನ್ನಡಿಗರು ಪ್ರತ್ಯೇಕ ಕೊಡಗು ರಾಜ್ಯಕ್ಕಾಗಿ ಆಂದೋಳನ ನಡೆಸುತ್ತಲೇ ಇದ್ದಾರೆ. ಪ್ರತ್ಯೇಕ ಕರ್ನಾಟಕಕ್ಕಾಗಿ ಕೂಗೆದ್ದಿರುವ ಹೈದರಾಬಾದ್ ಕರ್ನಾಟಕ ಪ್ರದೇಶದ ರಾಯಚೂರಿನಲ್ಲಿಯೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಕರ್ನಾಟಕದಲ್ಲಿ ಅತ್ಯಧಿಕ ನೀರಾವರಿಗೆ ಒಳಪಟ್ಟಿರುವ ಶಿವಮೊಗ್ಗ (ಶೇಕಡ 50.8), ಮಂಡ್ಯ (ಶೇ.47.1), ದಕ್ಷಿಣ ಕನ್ನಡ (ಶೇ.43.6) ಜಿಲ್ಲೆಗಳನ್ನುಳಿದಂತೆ ಹೆಚ್ಚು ನೀರಾವರಿ ಪ್ರದೇಶ ಅಂದರೆ ಶೇಕಡ 37.8ರಷ್ಟು ನೀರಾವರಿಗೊಳಪಟ್ಟಿರುವ ಭೂಪ್ರದೇಶವನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಈಗ ಸಂಪೂರ್ಣ ಆಂಧ್ರಪ್ರದೇಶದ ರೆಡ್ಡಿಗಳು, ಕಮ್ಮ ಕಾಪು ಜನಗಳದ್ದೇ ಮೇಲುಗೈ. ಕೃಷ್ಣ ಮೇಲ್ದಂಡೆ ನೀರಾವರಿ ಯೋಜನೆಗಳ ಸಿಂಹಪಾಲು ಲಾಭವನ್ನು ಪಡೆದುಕೊಳ್ಳುತ್ತಿರುವ ರಾಯಚೂರಿನಲ್ಲಿ ಮೂಲ ಕನ್ನಡಿಗರು ನಿರಾಶ್ರಿತರಾಗಿದ್ದಾರೆ; ನೆಲೆ ಕಳೆದುಕೊಂಡು ಪರದಾಡುತ್ತಿದ್ದಾರೆ.

ಇಲ್ಲಿ ನಾನು ಪ್ರಸ್ತಾಪ ಮಾಡಿರುವುದು ಮೂರು ಗಂಭೀರ ನಿದರ್ಶನಗಳು ಮಾತ್ರ. ವಾಸ್ತವವಾಗಿ ನಶಿಸಿ ಹೋಗುತ್ತಿರುವ ಕನ್ನಡ, ಕನ್ನಡಿಗರ ಪ್ರಾಬಲ್ಯ, ದಿನದಿಂದ ದಿನಕ್ಕೆ ವೃದ್ಧಿಗೊಳ್ಳುತ್ತಿರುವ ಕನ್ನಡೇತರರ ಪ್ರಭುತ್ವಕ್ಕೆ ಇಡೀ ಕರ್ನಾಟಕವನ್ನೇ ನಿದರ್ಶನವಾಗಿಟ್ಟುಕೊಳ್ಳುವಂತಹ ದಯನೀಯ ಪರಿಸ್ಥಿತಿಯಲ್ಲಿ ಕನ್ನಡ-ಕನ್ನಡಿಗರಿದ್ದಾರೆ. ನಿಜವಾಗಿ ಹೇಳಬೇಕೆಂದರೆ, ವರ್ಷದಿಂದ ವರ್ಷಕ್ಕೆ, ದಶಕದಿಂದ ದಶಕಕ್ಕೆ ಕರ್ನಾಟಕ ಒಂದು ಪುಟ್ಟ ದ್ವೀಪವಾಗುತ್ತಿದೆ. ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ವಿಜೃಂಭಿಸುತ್ತಿರುವ ಬೆಂಗಳೂರು ಮುಂದೊಂದು ದಿನ ಕನ್ನಡಿಗರ ಕೈತಪ್ಪಿ ಹೋಗಿ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಗೊಂಡರೆ ಕರ್ನಾಟಕದ ಜನರು ಆಶ್ಚರ್ಯಪಡಬೇಕಿಲ್ಲ. ವಾಸ್ತವವಾಗಿ ಕನ್ನಡಿಗರ ಔದಾಸೀನ್ಯದ ಪರಿಣಾಮವಾಗಿ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಳ್ಳುವ ಸರ್ವರೀತಿಯ ಅರ್ಹತೆಗಳನ್ನು ಈಗ ಮೈಗೂಡಿಸಿಕೊಳ್ಳುತ್ತಿದೆ. ಕನ್ನಡಿಗರು ಎಚ್ಚರಗೊಳ್ಳದಿದ್ದರೆ, ಘಟಿಸಬಹುದಾದ ಅಪಾಯವನ್ನು ತಪ್ಪಿಸಲು ಸಾಧ್ಯವೇ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.

ಇಂತಹ ಆತಂಕಕಾರಿ ಪರಿಸ್ಥಿತಿಗೆ ಕಾರಣವಾದರೂ ಏನು? ಕರ್ನಾಟಕದಲ್ಲಿ ಕನ್ನಡಿಗರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಎದೆ ಎತ್ತಿ ನಿಲ್ಲಲು ಸಾಧ್ಯವಾಗದಿರುವುದಕ್ಕೆ ಕಾರಣವಾದರೂ ಏನು? ಹಿಮಾಲಯದೆತ್ತರದ ಅಖಂಡ ಕರ್ನಾಟಕದ ಪರಿಕಲ್ಪನೆ, ಕನ್ನಡಿಗರ ಅಸಂಘಟಿತ ಧೋರಣೆಯಿಂದ ಹಿಮದಂತೆ ಕರಗಿ ಹೋಗುತ್ತಿದೆಯೆ? ಹೌದು. ಕನ್ನಡ-ಕರ್ನಾಟಕವನ್ನು "ಕನ್ನಡ ಚಿಂತನೆ"ಯ ನೆಲಗಟ್ಟಿನಲ್ಲಿ ಮುನ್ನಡೆಸುವ ಅಖಂಡ ಕನ್ನಡ ರಾಜಕೀಯ ಶಕ್ತಿಯ ಕೊರತೆಯ ಕಾರಣದಿಂದಾಗಿ ಕನ್ನಡದ ಹಿತ ಸಂಪೂರ್ಣ ಸೊರಗಲಾರಂಭಿಸಿದೆ. "ವೈವಿಧ್ಯತೆಯ ನಡುವೆ ಅಖಂಡತೆ" ಎನ್ನುವ ಅಡಿಪಾಯದ ಭಾರತೀಯ ಸಂಸದೀಯ ಪ್ರಜಾಸತ್ತೆ, ಪ್ರಾಂತೀಯವಾರು ಮತ್ತು ಭಾಷಾವಾರು ಪ್ರದೇಶಗಳು ಅಸ್ತಿತ್ವವನ್ನು ಮಾನ್ಯ ಮಾಡಿದೆ. ಹೀಗಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ, ನಿರ್ದಿಷ್ಟ ಭಾಷೆಯನ್ನು ಮಾತನಾಡುವ ಜನರು, ಆ ಪ್ರದೇಶಕ್ಕೇ ಸೀಮಿತಗೊಂಡ ಹಾಗೆ ಪ್ರಾದೇಶಿಕ ಪಕ್ಷವೊಂದನ್ನು ರಚಿಸಿಕೊಂಡು, ಅಲ್ಲಿನ ಭಾಷೆ, ಸಂಸ್ಕೃತಿಯ ಹಿತವನ್ನು ಕಾಪಾಡಿಕೊಂಡು, ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಮುಂದುವರಿಯುವುದಕ್ಕೆ ಸಂವಿಧಾನಾತ್ಮಕವಾಗಿ ಯಾವುದೇ ಎಡರು ತೊಡರುಗಳೇನು ಇಲ್ಲ.

ಇದರ ಪರಿಣಾಮವಾಗಿ, ಪ್ರಾಯಶಃ ಇಡೀ ಭರತಖಂಡದಲ್ಲಿಯೇ ಮೊತ್ತಮೊದಲ ಬಾರಿಗೆ, ಭಾಷೆ ಮತ್ತು ಪ್ರಾದೇಶಿಕ ಹಿತವನ್ನು ಕಾಪಾಡುವ ಕಾರ್ಯಕ್ರಮದನ್ವಯ, ತಮಿಳುನಾಡಿನ ಮಹಾನ್ ಚಿಂತಕ ಇ.ವಿ.ರಾಮಸ್ವಾಮಿ ನಾಯ್ಕರ್ ಅವರ ಚಿಂತನೆಯ ಮೂಸೆಯಲ್ಲಿ ಅರಳಿ ರೂಪುಗೊಂಡ ಜನಾಂದೋಲನ ಹಾಗೂ ಜನಸಂಘಟನೆಯೇ ದ್ರಾವಿಡ ಕಜಗಂ. ಈ ದ್ರಾವಿಡ ಕಜಗಂ ಕೇವಲ ನಗರ ಪ್ರದೇಶಗಳಲ್ಲಿ ಚಿತ್ರಮಂದಿರಗಳಿಗೆ ಕಲ್ಲು ಹೊಡೆಯುವ, ಹಣವಿದ್ದವರನ್ನು ಬೆದರಿಸಿ, ಹಣ ಕೀಳುವ ಕೆಳಮಟ್ಟದ ಚಳವಳಿಯಾಗದೆ, ಇಡೀ ಜನಸಮುದಾಯದ ಸಮಗ್ರ ಹಿತರಕ್ಷಣೆಯ ಆಂದೋಳನವಾಗಿ ತಮಿಳುನಾಡಿನಾದ್ಯಂತ ಬೇರುಬಿಡಲಾರಂಭಿಸಿತು. ಜನಪರ ಹಾಗು ಶೋಷಿತ ಸಮುದಾಯದ ಪರ ತನ್ನ ನಿಲುವು-ಆಶಯಗಳನ್ನು ಪ್ರತಿಪಾದಿಸಿದ ದ್ರಾವಿಡ ಕಜಗಂ, ಒಂದು ವೈಚಾರಿಕ ಹಾಗು ಪ್ರಜ್ಞಾವಂತ ಜನಪರ ಸಂಘಟನೆಯಾಗಿ ರೂಪುಗೊಳ್ಳಲಾರಂಭಿಸಿತು. ಮೇಲ್ವರ್ಗಗಳ ಶೋಷಣೆಗೆ ಗುರಿಯಾಗಿದ್ದ ತಮಿಳು ಜನಸಮುದಾಯದ ಅಂತರಂಗದ ಸುಪ್ತ ಭಾವನೆಗಳಿಗೆ ದನಿಯಾಗಲಾರಂಭಿಸಿತು. ರಾಷ್ಟ್ರೀಯ ಮುಖ್ಯವಾಹಿನಿಯ ಪಕ್ಷಗಳಿಂದ ಸಾಧ್ಯವಾಗದ ಭಾಷಾವಾರು ಮತ್ತು ಪ್ರದೇಶವಾರು ಹಿತರಕ್ಷಣೆ ದ್ರಾವಿಡ ಕಜಗಂನಂತಹ ಪ್ರಾದೇಶಿಕ ಜನ ಸಂಘಟನೆಯಿಂದ ಸಾಧ್ಯ ಎನ್ನುವ ಅಂಶ ಜನರಿಗೆ ಮನವರಿಕೆಯಾಗತೊಡಗಿತು.

ಜನಹಿತದ ಪರಮೋಚ್ಛ ಗುರಿಯನ್ನು ಹೊಂದಿದ್ದ ದ್ರಾವಿಡ ಕಜಗಂ ತನ್ನ ಸ್ಪಷ್ಟ ಸೈದ್ಧಾಂತಿಕ ಚೌಕಟ್ಟು, ಜನಪರ ಆಶಯಗಳಿಂದ ತಮಿಳುನಾಡಿನ ಬಹುಜನರ ಮನೆಯ ಮಾತಾಯಿತು. ಆರಂಭದ ದಿನಗಳಲ್ಲಿ ರಾಜಕೀಯೇತರ ಸಂಘಟನೆಯಾಗಿದ್ದ ದ್ರಾವಿಡ ಕಜಗಂ, ಹೊಸದೊಂದು ರಾಜಕೀಯ ಸಿದ್ಧಾಂತ ಹಾಗೂ ಶಕ್ತಿಯ ಜನನಕ್ಕೆ ಕಾರಣವಾಯಿತು. ದ್ರಾವಿಡ ಕಜಗಂ ಪ್ರತಿಪಾದಿಸಿದ ತತ್ತ್ವಸಿದ್ಧಾಂತಗಳಿಂದ ಪ್ರಭಾವಿತರಾದ ಅನೇಕ ಮಂದಿ ದ್ರಾವಿಡ ಮುನ್ನೇತ್ರ ಕಜಗಂ ಎನ್ನುವ ರಾಜಕೀಯ ಸಂಘಟನೆಯನ್ನು ರೂಪಿಸಿ, 1967ರಿಂದ ಅವಿಚ್ಛಿನ್ನವಾಗಿ ತಮಿಳುನಾಡಿನ ಅಧಿಕಾರಸೂತ್ರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅನೇಕ ಓರೆಕೋರೆಗಳ ನಡುವೆಯೂ ತಮಿಳುನಾಡಿನ ಜನತೆಗೆ ದ್ರಾವಿಡ ಮುನ್ನೇತ್ರ ಕಜಗಂ ಮತ್ತು ಅಣ್ಣಾ ದ್ರಾವಿಡ ಮುನ್ನೇತ್ರ ಕಜಗಂ ಪಕ್ಷಗಳೇ ಇಂದಿಗೂ ಮಾನ್ಯವಾಗಿವೆ. ಈ ಪಕ್ಷಗಳು ಪ್ರಾದೇಶಿಕ ಹಿತವೇ ಪರಮೋಚ್ಛ ಎಂದು ನಂಬಿ ಅಡಿಯಿಡುತ್ತಿರುವುದರಿಂದ ತಮಿಳುನಾಡಿನಲ್ಲಿ ಅಭಿವೃದ್ಧಿಯ ಚಕ್ರ ಯಶಸ್ವಿಯಾಗಿ ಸುತ್ತುತ್ತಿದೆ.

ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷದ ಯಶಸ್ಸಿನ ಕತೆ ಇದಾದರೆ, ನೆರೆಯ ಮತ್ತೊಂದು ರಾಜ್ಯ ಮಹಾರಾಷ್ಟ್ರದಲ್ಲಿ "ಶಿವಸೇನೆ' ಮರಾಠಿಯೇತರ ಜನಸಮುದಾಯಕ್ಕೆ ಸಿಂಹಸ್ವಪ್ನವಾಗಿದೆ. 1967ರ ಆಸುಪಾಸಿನಲ್ಲಿ ಶಿವಾಜಿ ಮಹಾರಾಜರ ಪರಂಪರೆಯಲ್ಲಿ ಸ್ಥಾಪನೆಗೊಂಡ ಶಿವಸೇನೆ ಹಂತಹಂತವಾಗಿ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿತು. ಮರಾಠಿ ಮಾತನಾಡುವ ಜನಸಮುದಾಯದ ಸಾರ್ವಭೌಮ ರಾಜಕೀಯ ಸಂಘಟನೆಯಾಗಿ ರೂಪುಗೊಂಡಿತು. ಶಿವಸೇನೆಯ ಬಳುವಳಿಯಾದ ಪ್ರತಿಯೊಬ್ಬ ಶಿವಸೈನಿಕ "ಹೌದು ಶಿವಸೇನೆ ಕೋಮುವಾದಿ ರಾಜಕೀಯ ಸಂಘಟನೆಯೆ, ಮುಸ್ಲಿಮರ ದಾಳಿಯಿಂದ ತತ್ತರಿಸಿ ಹೋಗಿದ್ದ ಹಿಂದೂ ಸಾಮ್ರಾಜ್ಯವನ್ನು ಸಂರಕ್ಷಿಸುವ ದೃಷ್ಟಿಯಿಂದ ಛತ್ರಪತಿ ಶಿವಾಜಿ ನಡೆಸಿದ ಹೋರಾಟವನ್ನು ಹಸಿರಾಗಿರಿಸುವುದೇ ಶಿವಸೇನೆಯ ಗುರಿ" ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಶಿವಸೇನೆಯ ಪರಮೋಚ್ಛ ನಾಯಕ ಬಾಳಠಾಕ್ರೆ ಮಹಾನ್ ಕೋಮುವಾದಿಯಂತೆ ಕಂಡುಬಂದರೂ, ಮರಾಠರ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಲ್ಲಿ ಶಿವಸೇನೆಯನ್ನು ಶಿಸ್ತುಬದ್ಧ ಸಂಘಟನೆಯನ್ನಾಗಿ ರೂಪಿಸಿದ ಹೆಗ್ಗಳಿಕೆಗೆ ಪಾತ್ರನಾದ ನಾಯಕ. ಸ್ವಯಂ ವ್ಯಂಗ್ಯಚಿತ್ರಕಾರ ಹಾಗೂ ಪತ್ರಕರ್ತನಾದ ಬಾಳಠಾಕ್ರೆಗೆ ಮಹಾನ್ ದೂರದೃಷ್ಟಿ. ನಿರ್ದಿಷ್ಟ ಕಾರ್ಯಕ್ರಮ ಹಾಗೂ ತನ್ನದೇ ಆದ ತತ್ತ್ವಸಿದ್ಧಾಂತವನ್ನು ಮೈಗೂಡಿಸಿಕೊಂಡು ಶಿವಸೇನೆ ಮಹಾರಾಷ್ಟ್ರದಲ್ಲಿ ಶಿಸ್ತುಬದ್ಧ ಸಂಘಟನೆಯಾಗಿ ರೂಪುಗೊಳ್ಳಲು ಈ ಬಾಳಠಾಕ್ರೆ ನೀಡಿದ ಕೊಡುಗೆ ಅಪಾರ. ಇದರ ಪರಿಣಾಮವಾಗಿ ಶಿವಸೇನೆ ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಮುಖ್ಯವಾಹಿನಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಭಾರತೀಯ ಜನತಾಪಕ್ಷಕ್ಕೆ ಸರಿಸಾಟಿಯಾಗಿ ಬೆಳೆದು ಮಹಾರಾಷ್ಟ್ರದ ಅಧಿಕಾರಸೂತ್ರ ಹಿಡಿಯುವಷ್ಟು ಜನಮನ್ನಣೆ ಗಳಿಸಿತು. ಒಂದು ಶಕ್ತ ಜನಸಂಘಟನೆಯಾಗಿ ರೂಪುಗೊಂಡಿತು.

ಇನ್ನು ಕರ್ನಾಟಕದ ಗಡಿಯಲ್ಲಿರುವ ಮತ್ತೊಂದು ರಾಜ್ಯ ಆಂಧ್ರಪ್ರದೇಶ, ತೆಲುಗರ ಸ್ವಾಭಿಮಾನವನ್ನು ಎತ್ತಿಹಿಡಿಯುವ ಘೋಷಣೆಯೊಡನೆ ಜನ್ಮತಾಳಿದ ತೆಲುಗು ದೇಶಂ ಪಕ್ಷ, ಆಂಧ್ರಪ್ರದೇಶದಲ್ಲಿ ಬಿರುಗಾಳಿಯಾಯಿತು. ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ಪ್ರಭುತ್ವವನ್ನು ಧೂಳಿಪಟ ಮಾಡಿತು. ದಿವಂಗತ ಎನ್.ಟಿ.ರಾಮರಾವ್ ಹೊತ್ತಿಸಿದ ಸೊಡರು ಆಂಧ್ರಪ್ರದೇಶದಾದ್ಯಂತ ಪ್ರಜ್ವಲಿಸಿತು. ತೆಲುಗು ಭಾಷೆಯನ್ನೆ ಮಾತನಾಡುವ ಪ್ರಾದೇಶಿಕ ಹಿತದ ಪರಮೋಚ್ಛ ಗುರಿ ಹೊಂದಿರುವ ತೆಲುಗುದೇಶಂ ಆಂಧ್ರ ಪ್ರದೇಶದಲ್ಲಿ ಎರಡು-ಮೂರು ಬಾರಿ ಅಧಿಕಾರಸೂತ್ರ ಹಿಡಿದದ್ದು ಮಾತ್ರವಲ್ಲದೆ, ಸದ್ಯ ಆಂಧ್ರ ರಾಜಕಾರಣದ ಪ್ರಬಲ ರಾಜಕೀಯ ಶಕ್ತಿಯಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರಾದೇಶಿಕ ಹಿತರಕ್ಷಣೆ ಮಾಡುವ, ಆ ನಿದರ್ಿಷ್ಟ ಪ್ರದೇಶದ ಭಾಷೆ, ನೆಲ, ಜನದ ಸಮಸ್ಯೆಗಳಿಗೆ ಸಮರ್ಥ ಉತ್ತರ ನೀಡುವ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿ ನೆಲೆಯೂರುವುದು ಸಾಧ್ಯವಾಗುವು ದಾದರೆ, ಕನರ್ಾಟಕದಲ್ಲಿ ಅಂತಹ ಪ್ರಾದೇಶಿಕ ಪಕ್ಷ ಈವರೆಗೆ ಸಾಧ್ಯವಾಗದಿರುವುದಾದರೂ ಏಕೆ?

ಕರ್ನಾಟಕ ಏಕೀಕರಣವಾಗಿ ಸುಮಾರು ಐವತ್ತಮೂರು ವರ್ಷಗಳು ಮುಗಿದಿದೆ. ಈ ನಾಲ್ಕೂವರೆ ದಶಕಗಳ ಅವಧಿಯಲ್ಲಿ ಕನ್ನಡದ ಹಿತ ಸಂರಕ್ಷಿಸುವ ಒಂದು ವ್ಯವಸ್ಥಿತ ಸಂಘಟನೆ ಈವರೆಗೂ ರೂಪುಗೊಳ್ಳುವುದು ಸಾಧ್ಯವೇ ಆಗಿಲ್ಲ. ಕಾದಂಬರಿ ಸಾರ್ವಭೌಮ ಅ.ನ.ಕೃಷ್ಣರಾವ್, ಮ.ರಾಮಮೂರ್ತಿ, ಕೋಣಂದೂರು ಲಿಂಗಪ್ಪ ಅವರುಗಳು ಪ್ರಾರಂಭಮಾಡಿದ ಕನ್ನಡ ಚಳವಳಿ ಕ್ರಮೇಣದ ದಿನಗಳಲ್ಲಿ ಒಂದು ರಾಜಕೀಯ ಸಂಘಟನೆಯಾಗಿ ರೂಪುಗೊಳ್ಳುವಷ್ಟರ ಮಟ್ಟಿಗೆ ಪರಿಪಕ್ವತೆ ಹಾಗೂ ಪ್ರಬುದ್ಧತೆಯನ್ನು ಪಡೆದುಕೊಳ್ಳಲಿಲ್ಲ. ಕೆಲವು ಸ್ವಾರ್ಥಸಾಧಕರು, ಕಿಡಿಗೇಡಿಗಳ ಕೈಗೆ ಸಿಕ್ಕ ಕನ್ನಡ ಚಳವಳಿಗೆ ಸೈದ್ಧಾಂತಿಕ ಸ್ಪರ್ಶ ದೊರೆಯುವುದು ಸಾಧ್ಯವೇ ಆಗಲಿಲ್ಲ. ಕನ್ನಡ ಚಳವಳಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವುದು, ಅದಕ್ಕಾಗಿ ಹಣ ಸಂಗ್ರಹಿಸುವುದು, ಪ್ರಚಾರ ಬೇಕು ಎಂದಾಗ ಇಂಗ್ಲಿಷ್ ನಾಮಫಲಕಗಳಿಗೆ ಟಾರ್ ಬಳಿಯುವುದು, ಕತ್ತೆಗೆ ಸನ್ಮಾನ ಮಾಡುವುದು, ಕೋಡಂಗಿಯಂತೆ ಕುಣಿಯುವುದರಿಂದಲೇ ಕನ್ನಡದ ಸಮಗ್ರ ಹಿತರಕ್ಷಣೆ ಎಂದು ಈ ಕಿಡಿಗೇಡಿಗಳು ಭಾವಿಸಿದರು. ಆದರೆ ಗೋಕಾಕ್ ಚಳವಳಿಯ ನಂತರ, ಕನ್ನಡದ ಹಿತರಕ್ಷಣೆಯ ಪ್ರಾದೇಶಿಕ ಪಕ್ಷ ರೂಪುಗೊಳ್ಳುವ ಆಶಾಕಿರಣ ಮೂಡಿತು. ವಾಸ್ತವವಾಗಿ ಕ್ರಾಂತಿರಂಗ ಮತ್ತು ಜನತಾ ಪಕ್ಷಗಳಿಗೆ ಕರ್ನಾಟಕದ ಜನತೆ "ಪ್ರಾದೇಶಿಕ ಪಕ್ಷ" ಎನ್ನುವ ಗುಂಗಿನಲ್ಲಿಯೇ ಮತ ನೀಡಿದರು. ಆದರೆ, ಈ ಪಕ್ಷಗಳು ನಂತರದ ದಿನಗಳಲ್ಲಿ ನಡೆದುಕೊಂಡ ರೀತಿ, ಕಾಂಗ್ರೆಸ್ಗಿಂತ ಭಿನ್ನವಾಗೇನೂ ಇರಲಿಲ್ಲ.

ಖ್ಯಾತ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಹರಿದು ಹಂಚಿಹೋಗುತ್ತಿದ್ದ ಕನ್ನಡ ಶಕ್ತಿಯನ್ನು ಒಂದೇ ನೆಲೆಯಲ್ಲಿ ಸಂಘಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಈ ಕನ್ನಡ ಶಕ್ತಿಗೊಂದು ನಿರ್ದಿಷ್ಟ ಕಾರ್ಯಕ್ರಮ, ಸೈದ್ಧಾಂತಿಕ ಸ್ಪರ್ಶ ನೀಡುವ ಪ್ರಯತ್ನ ಮಾಡಿದರು. ಇದರ ಪರಿಣಾಮವಾಗಿ ಕನ್ನಡ ಶಕ್ತಿ ಕೇಂದ್ರ ಸ್ಥಾಪನೆಗೊಂಡು ರಾಜ್ಯದಾದ್ಯಂತ ವ್ಯಾಪಿಸಿತು. ಆದರೆ, ಕನ್ನಡ ಶಕ್ತಿ ಕೇಂದ್ರ ಈಗ ಕನ್ನಡ ನಿಶ್ಶಕ್ತಿ ಕೇಂದ್ರವಾಯಿತು. ಡಾ.ಚಿದಾನಂದ ಮೂರ್ತಿಯವರಿಗೆ ಮುಪ್ಪಡರಿದ ಹಾಗೆ ಕನ್ನಡ ಶಕ್ತಿ ಕೇಂದ್ರವೂ ಸೊರಗಿತು. ಇನ್ನು ಕನ್ನಡದ ಹಿತದ ಬಗ್ಗೆ ಮಾತನಾಡುವ ಕಾಸಿಗೊಂದು, ಕೊಸರಿಗೊಂದು ಕನ್ನಡ ಸಂಘಟನೆಗಳಿವೆ. ಈ ಯಾವುದೇ ಕನ್ನಡ ಸಂಘಟನೆಗೆ ನಿದರ್ಿಷ್ಟ ಕಾರ್ಯಕ್ರಮವಿಲ್ಲ. ಎಲ್ಲವೂ ಭಾವಾವೇಶದ ಪಟಾಕಿಗಳು. ಈ ಹಿನ್ನೆಲೆಯಲ್ಲಿ ಕರ್ನಾಟಕ, ಕನ್ನಡ, ಕಾವೇರಿ, ಕೃಷ್ಣೆ, ಬೆಳಗಾವಿಯ ರಕ್ಷಣೆಯ ಜೊತೆಗೆ ಈ ನೆಲದಲ್ಲಿ ಬದುಕುವ ಜನರ ಜೀವನಮಟ್ಟ ಸುಧಾರಣೆ ಮಾಡುವ, ಅವರ ಬಡತನ ದಾರಿದ್ರ್ಯ ನಿವಾರಣೆ ಮಾಡುವ ಶೋಷಿತ ಸಮುದಾಯದ ಪರವಾಗಿ ದನಿ ಎತ್ತುವ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎನ್ನುವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳುವ ಕಾರ್ಯಕ್ರಮಾಧಾರಿತ, ಶಿಸ್ತುಬದ್ಧ "ಕನ್ನಡ ಜನಪರ ಸಂಘಟನೆ" ಈಗ ಅಗತ್ಯವಿದೆ.

ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಗೊಂಡು ಪ್ರಾರಂಭದ ದಿನದಿಂದಲೂ ಕನ್ನಡ ಸಾಹಿತ್ಯ, ಕನ್ನಡಿಗ, ಕರ್ನಾಟಕದ ಬಗ್ಗೆ ಜನಾಭಿಪ್ರಾಯವನ್ನು ಪರಿಣಾಮಕಾರಿಯಾಗಿ ಮೂಡಿಸುತ್ತಲೇ ಬಂದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ನಡೆಸುವ ಸಾಹಿತ್ಯ ಸಮ್ಮೇಳನ ಒಂದು ಜಾತ್ರೆಯಾಗಿದೆಯೇ ಹೊರತು ಕನ್ನಡದ ಜನಮನಸವನ್ನು ಬಡಿದೆಚ್ಚರಿಸುವ ಯಾವುದೇ ರೀತಿಯ ರಚನಾತ್ಮಕ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಿಂದ ಸಾಕಾರಗೊಳ್ಳುತ್ತಿಲ್ಲ. ನಿಜ ಹೇಳಬೇಕೆಂದರೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕದ ನೆಲ, ಜಲ, ಭಾಷೆಯ ಸಂರಕ್ಷಣೆಗೆ ಅತ್ಯಂತ ಸಂಘಟನಾತ್ಮಕ ಕಾರ್ಯಕ್ರಮವನ್ನು ರೂಪಿಸಬೇಕು. ಇದರ ಜೊತೆಗೆ ಇತ್ತೀಚಿನ ದಶಕಗಳಲ್ಲಂತೂ ನೆರೆ ರಾಜ್ಯಗಳಿಂದ ಕರ್ನಾಟಕದ ಮೇಲೆ ದಾಳಿಯಿಡುತ್ತಿರುವ ಕನ್ನಡೇತರರ ಉಪಟಳ ಸಹಿಸಲಸಾಧ್ಯವಾಗುತ್ತಿದೆ.

"ಮಣ್ಣಿನ ಮಕ್ಕಳಿಗೆ ಉದ್ಯೋಗ" ಎನ್ನುವ ನೀತಿಗೆ ಅಧಿಕಾರಕ್ಕೆ ಬರುವ ಯಾವುದೇ ಸಕರ್ಾರ ಬದ್ಧವಾಗಬೇಕು ಎನ್ನುವ ಸಿದ್ಧಾಂತವನ್ನು ಸಾಹಿತ್ಯ ಪರಿಷತ್ತು ಎತ್ತಿ ಹಿಡಿಯಬೇಕು. ಕರ್ನಾಟಕದ ನೆಲೆದಲ್ಲಿ ಬದುಕುವ ಯಾವುದೇ ವ್ಯಕ್ತಿ ಕನ್ನಡೀಕರಣಗೊಳ್ಳಬೇಕು, ಕನ್ನಡಿಗನಾಗಿ ಬದುಕಬೇಕು ಎನ್ನುವುದಕ್ಕೆ ಗಂಭೀರವಾದ ಒತ್ತು ನೀಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ದಿಸೆಯಲ್ಲಿ ಕನ್ನಡ ಸಾಹಿತ್ಯಪರಿಷತ್ತು ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಕಾಲಕಳೆಯುವುದರಲ್ಲೇ ನಿರತವಾಗಬಾರದು. ಸದ್ಯಕ್ಕಂತೂ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಇದೇ ಕೆಲಸ. ಇದಕ್ಕೆ ಕಾರಣ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾತ್ಮಕ ಸ್ವರೂಪ. ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾಗುವ ಅಧ್ಯಕ್ಷ ಕೇವಲ ಒಂದೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆಯಾಗಬೇಕು. ಈ ಅವಧಿ ಕೇವಲ ಮೂರೇ ವರ್ಷ ಎಂದು ಸಾಹಿತ್ಯ ಪರಿಷತ್ತಿನ ಸಂವಿಧಾನಕ್ಕೆ ತಿದ್ದುಪಡಿ ತಂದಿರುವುದು ಆಯ್ಕೆಗೊಳ್ಳುವ ಯಾವುದೇ ಪರಿಷತ್ ಅಧ್ಯಕ್ಷ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ರೂಪಿಸಲು ನಿಜವಾದ ಅಡ್ಡಿಯಾಗಿದೆ. ಈ ದಿಸೆಯಲ್ಲಿ ಪರಿಷತ್ತಿನ ಸಂವಿಧಾನಕ್ಕೆ ತಿದ್ದುಪಡಿಯನ್ನು ತರುವುದು ಅತ್ಯಂತ ಅಗತ್ಯವಾದ ಕೆಲಸ ಆಗಿದೆ. ಎರಡನೇ ಅವಧಿಗೆ ಅದೇ ವ್ಯಕ್ತಿ ಸಾಹಿತ್ಯ ಪರಿಷತ್ ಅಧ್ಯಕ್ಷತೆಗೆ ಸ್ಪರ್ಧಿಸಬಾರದು ಎನ್ನುವ ನಿಷೇಧವೇನೋ ಸರಿ. ಆದರೆ, ಆಯ್ಕೆಗೊಳ್ಳುವ ಪರಿಷತ್ನ ಅಧ್ಯಕ್ಷರ ಅವಧಿಯನ್ನು ಕನಿಷ್ಠ ಐದು ವರ್ಷಗಳಿಗೆ ವಿಸ್ತರಿಸಿದಾಗ ಮಾತ್ರ ಅಂತಹ ವ್ಯಕ್ತಿಯಿಂದ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಬಹುದು.

ಸಧ್ಯ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಇಂತಹದ್ದೊಂದು ಚಿಂತನೆಗೆ ಚಾಲನೆ ದೊರೆತರೆ ಕನ್ನಡ ಸಾಹಿತ್ಯ ಪರಿಷತ್ ನಿಜವಾಗಿಯೂ ಕನ್ನಡದ ಕೈಂಕರ್ಯದಲ್ಲಿ ಅರ್ಥಪೂರ್ಣವಾಗಿ ತೊಡಗಬಹುದು. ಆಗ ಮಾತ್ರ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎನ್ನುವ ಹೆಸರು ಅನ್ವರ್ಥಪೂರ್ಣವಾಗುತ್ತದೆ.