ಬ್ರೇಕಿಂಗ್ ನ್ಯೂಸ್ .....ಮುಂದಿನ ಸಮ್ಮೇಳನ ಎಲ್ಲಿ?
7:28 PM
Posted by ಆಲೆಮನೆ
ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಮುಂದಿನ ಸಮ್ಮೇಳನ ಎಲ್ಲಿ ಎಂಬ ವಿಚಾರ ಇನೂ ಸಸ್ಪೆನ್ಸ್! ಆದರೆ ನುಡಿನಮನ ನಿಮಗೆ ಸ್ಕೂಪ್ನಂತಹ ಮಾಹಿತಿಯನ್ನು ಹೊತ್ತು ತಂದಿದೆ.
ಮುಂದಿನ ಸಮ್ಮೇಳನಕ್ಕೆ ಚರ್ಚೆಯಲ್ಲಿರುವ ಸ್ಥಳಗಳು - ಬಿಜಾಪುರ, ಬಳ್ಳಾರಿ, ಹಾವೇರಿ ಮತ್ತು ಬೆಂಗಳೂರು!
ಬಳ್ಳಾರಿಯಲ್ಲಿ ಈ ಹಿಂದೆ ೩ ಬಾರಿ ೧೯೨೬, ೧೯೩೮, ೧೯೫೮ ರಲ್ಲಿ ಸಮ್ಮೇಳನ ನಡೆಡಿದ್ದು ಬಿಜಾಪುರದಲ್ಲಿ ೧೯೨೩ರಲ್ಲಿ ಒಮ್ಮೆ ಮಾತ್ರ ಸಮ್ಮೇಳನ ನಡೆದಿದೆ. ಇನ್ನು ಬೆಂಗಳೂರಿನಲ್ಲಿ ಕಸಾಪ ಸ್ಥಾಪನೆಯಾದ ಮೊದಲೆರಡು ವರ್ಷಗಳ - ೧೯೧೫, ೧೯೧೬ರಲ್ಲಿ ಸಮ್ಮೇಳನಗಳು ನಡೆದಿದ್ದು, ನಂತರ ೧೯೭೦ರಲ್ಲಿ ದೇಜಗೌ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದಿದೆ.
ಸದ್ಯ ಇರುವ ಸುದ್ದಿಯ ಪ್ರಕಾರ ಮುಂದಿನ ಸಮ್ಮೇಳನಕ್ಕೆ ಬೆಂಗಳೂರು ಫೇವರಿಟ್!
ಎಲ್ಲರಿಗೊಳಿತನು ಬಯಸಲಿ ಕವನ
7:07 PM
Posted by ಆಲೆಮನೆ
ನನ್ನ ತಂದೆ ಫೋಟೊಗ್ರಫರ್. ಬೆಳಗಿನಿಂದ ರಾತ್ರಿಯವ್ರೆಗೂ ಬಿಡುವಿಲ್ಲದ ಕೆಲಸ. ಓದಲು ಅವರಿಗೆ ಪುರುಸೊತ್ತೆಲ್ಲಿ? ಆದರೂ ಅವರು ಕೆಲವು ಪುಸ್ತಕಗಳನ್ನು ಸಂಗ್ರಹಿಸಿ, ಒಂದು ಗಾದ್ರೆಜ್ ಬೀರುವಿನಲ್ಲಿ ಸಂಗ್ರಹಿಸಿಟ್ಟಿದ್ದರು. ಅದಕ್ಕೆ ಬೀಗ ಕೂಡ ಬಿದ್ದಿತ್ತು. ಆಗಾಗ ಅವುಗಳನ್ನು ತೆರೆದು ಗುಟ್ಟಾಗಿ ಕಣ್ಣಾಡಿಸುತ್ತಿದ್ದರು. ಯಾರ ಕೈಗೂ ಅವು ಸಿಗದ ಹಾಗೆ ಜಾಗರೂಕತೆ ವಹಿಸಿದ್ದರು. ಹೀಗಾಗಿ ನನ್ನಲ್ಲಿ ಕೆಟ್ಟ ಕುತೂಹಲ-ಹೇಗಾದರೂ ಮಾಡಿ, ಆ ಪುಸ್ತಕಗಳನ್ನು ನೋಡಬೇಕು, ಓದಬೇಕು.
ಒಂದು ಅವಕಾಶ ಒದಗಿಬಂತು. ಅಪರೂಪಕ್ಕೆ ನನ್ನ ತಂದೆ ಮತ್ತು ತಾಯಿ ಕೆಲವುದಿನಗಳಾ ಮಟ್ಟಿಗೆ ಬೇರೆ ಊರಿಗೆ ಹೋದರು. ಮನೆಯಲ್ಲಿ ಮಕ್ಕಳಾಅದ ನಮ್ಮದೇ ಸರ್ವತಂತ್ರ ಸ್ವತಂತ್ರ ರಾಜ್ಯಭಾರ. ನಾನು ನನ್ನ ಸೋದರ, ಸೋದರಿಗೆ ಗೊತ್ತಾಗದ ಹಾಗೆ ಅಪ್ಪನ ಗಾದ್ರೆಜ್ ಬೀರುವಿನ ಬೀಗದ ಕೈ ಪತ್ತೆ ಮಾಡಿ ಬೀರುವನ್ನು ತೆರೆದೆ. ಅಲ್ಲಿದ್ದ ಕೇವಲ ನಾಲ್ಕೈದು ಪುಸ್ತಕಗಳಾನ್ನು ಒಂದೊಂದಾಗಿ ಕೈಗೆ ತೆಗೆದುಕೊಂಡು, ಪುಟ ತಿರುವಿ ಕಣ್ಣಾಡಿಸಿದೆ. ಅದೆಲ್ಲಾ ಸೆಕ್ಸ್ಗೆ ಸಂಬಂಧಿಸಿದ ಪುಸ್ತಕಗಳು- ವಾತ್ಸಾಯನ, ಕೊಕ್ಕೋಕ ಇತ್ಯಾದಿ. ಆ ವಯಸ್ಸಿಗೆ ನನಗೆ ಅವುಗಳಲ್ಲಿ ಅಂಥಾ ಸ್ವಾರಸ್ಯವೇನೂ ಕಾಣಲಿಲ್ಲ. ಆದರೆ ಒಂದು ಪುಸ್ತಕ ನನ್ನನ್ನು ತೀವ್ರವಾಗಿ ಸೆಳೆಯಿತು. ಅದು ಮಾಟ, ಮಂತ್ರ, ಇಂದ್ರಜಾಲಕ್ಕೆ ಸಂಬಂಧಿಸಿದ್ದಾಗಿತ್ತು. ಅದನ್ನು ಮಾತ್ರ ತೆಗೆದುಕೊಂಡು, ಬೀರು ಮುಚ್ಚಿ, ನನ್ನ ಕೋಣೆಯಲ್ಲಿ ಕೂತು ಕೂಲಂಕುಶವಾಗಿ ಓದತೊಡಗಿದೆ.
ಎಂಥೆಂಥಾ ಅದ್ಭುತ ಸಂಗತಿಗಳು! ಕಬ್ಬಿಣವನ್ನು ಬಂಗಾರ ಮಾಡುವುದು. ಇತರರಿಗೆ ಕಾಣದ ಹಾಗೆ ಅದೃಶ್ಃಯವಾಗಿ ಓಡಾಡುವುದು. ಶತ್ರುಗಳಿಗೆ ಮಾಟ ಮಾಡಿ ಮಟ್ಟಾ ಹಾಕುವುದು. ಅಚಿಜನ ಹಾಕಿ ನೋಡಿ ಏನು ಬೇಕಾದರೂ ಪತ್ತೆಮಾಡುವುದು. ಹೀಗೆ ಅನೇಕ ರೋಚಕ ಸಾಧನೆಗಳು. ಆದರೆ ಅವುಗಳ ಸಿದ್ಧಿ ಅಷ್ಟು ಸುಲಭವಾಗಿರಲಿಲ್ಲ. ಅಮಾವಾಸ್ಯೆಯ ರಾತ್ರಿ ಸ್ಮಶಾನದಲ್ಲಿ ಕೂತು ಹೋಮ ಮಾಡಬೇಕಿತ್ತು, ಕೋಳಿಯನ್ನು ಬಲಿ ಕೊಡಬೇಕಿತ್ತು, ಯಾವ್ಯಾವುದೋ ಧಾನ್ಯ, ಎಣ್ಣೇ, ಪತ್ರೆ ಸಂಗ್ರಹಿಸಬೇಕಿತ್ತು. ಗಂಟೆಗಟ್ಟಲೇ ಧ್ಯಾನಸ್ಥನಾಗಿ ಕೂತು ಮಂತ್ರ ಸಿಧಿ ಮಾಡಿಕೊಳ್ಳಬೇಕಿತ್ತು; ಹೀಗೆ ಏನೇನೋ. ಇವೆಲ್ಲಾ ಅಸಾಧ್ಯವಾಗಿ ತೋರಿ, ನನಗೆ ನಿರಾಸೆಯಾಗುತ್ತಿತ್ತು. ಆದರೆ ಒಂದು ಸಿದ್ಧಿ ಮಾತ್ರ ತೀರಾ ಸುಲಭವೆಂದು ತೋರಿತು. ಅದು ವಶೀಕರಣ ವಿದ್ಯೆ. ಕಣ್ಣಿನ ನೋಟದಿಂದಲೇ ಇನ್ನೊಬ್ಬರನ್ನು ಸಮ್ಮೋಹನಗೊಳಿಸಿ ನಾವು ಹೇಳಿದಂತೆ ಕೇಳುವ ಹಾಗೆ ವಶಪಡಿಸಿಕೊಳ್ಳುವ ವಿದ್ಯೆ. ಇದರ ಸಿದ್ಧಿಗಾಗಿ ಮಾಡಾಬೇಕಾದದ್ದು ಕೇವಲ ಇಷ್ಟೆ - ಯಾವುದಾದರೂ ಒಂದು ಆಗ ತಾನೇ ಅರಳಿದ ತಾಜಾ ಹೂವನ್ನು ತಂದು ಮುಂದಿಟ್ಟುಕೊಳ್ಳುವುದು, ಅದನ್ನೇ ಏಕಾಗ್ರಚಿತ್ತದಿಂದ ದಿಟ್ಟಿಸಿ ಕೂರುವುದು, ಹೂವು ಕ್ರಮೇಣ ಬಾಡಿ, ಒಣಗಿ ಮುದುಡಿಕೊಳ್ಳುತ್ತದೆ. ಆ ಹೂವು ಮತ್ತೆ ಮೊದಲಿನಂತೆ ಅರಳಿ ನಳನಳಿಸಲಿ, ಗಮಗಮಿಸಲಿ ಎಂದು ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿಕೊಂಡು ಅದನ್ನೇ ದಿಟ್ಟಿಸಿ ನೋಡುತ್ತಾ ಕೂರುವುದು. ಇದು ದಿನಗಟ್ಟಲೆ, ವಾರಗಟ್ಟಲೆ ಹಿಡಿಯಬಹುದು. ನಿರಾಶರಾಗಬಾರದು. ಸಾಧನೆ ಮುಂದುವರಿಸಬೇಕು. ಕೊನೆಗೊಮ್ಮೆ ಆ ಕರಕಲಾದ ಹೂ ಮತ್ತೆ ಮೊದಲಿನಂತೆ ನಳನಳಿಸಿ ಅರಳಿ ಗಮಗಮಿಸಿದರೆ, ಆ ವಶೀಕರಣ ವಿದ್ಯೆ ನಮ್ಮ ನೇತ್ರಗತವಾದಂತೆ. ಅಲ್ಲಿಂದಾಚೆ ಕೇವಲ ನಮ್ಮ ಕಣ್ಣ ನೋಟದಿಂದಲೇ ಯಾರನ್ನು ಬೇಕಾದರೂ ಆಟ ಆಡಿಸಬಹುದು.
ಅರೆರೆ! ಈ ಸಾಧನೆ ಇಷ್ಟು ಸುಲಭವೇ!' ಅನ್ನಿಸಿ ಕೂಡಲೇ ಕಾರ್ಯತತ್ಪರನಾದೆ. ಹೂವೊಂದನ್ನು ತಂದು ನನ್ನ ಕೊಠಡಿಯಲ್ಲಿ ಗುಟ್ಟಾಗಿ ಮುಂದಿಟ್ಟುಕೊಂಡು ಕೂತು, ಅದನ್ನೇ ಗಂಟೆಗಟ್ಟಲೇ ದಿಟ್ಟಿಸತೊಡಗಿದೆ. ಮುಂದೆ ಏನಾಯಿತೆಂಬುದನ್ನು ವಿವರಿಸುವ ಅಗತ್ಯವಿಲ್ಲ. ಹೂವೇನೋ ಬಾಡಿ, ಒಣಗಿ ಮುದುಡಿಕೊಂಡು ಕರಕಲಾಯಿತು. ಆದರೆ ನಾನು ಎಷ್ಟೇ ಧೃಢ ಸಂಕಲ್ಪದಿಂದ ಎಶ್ಃಟೇ ದಿನ ಪ್ರಯತ್ನಿಸಿದರೂ ಅದು ಮೊದಲಿನಂತೆ ನಳನಳಿಸಿ ಅರಳಲಿಲ್ಲ. ಗಮಗಮಿಸಲಿಲ್ಲ. ವಶೀಕರಣ ವಿದ್ಯೆ ನನಗೆ ಸಿದ್ಧಿಸಲಿಲ್ಲ. ಕೊನೆಗೆ ಹತಾಶನಾಗಿ ನನ್ನ ಪ್ರಯತ್ನವನ್ನು ಕೈಬಿಡಬೇಕಾಯಿತು.
ಮುಂದೆ ನಾನು ಬೆಳೆದು ದೊಡ್ಡಾವನಾಗಿ ಸಾಹಿತ್ಯದ ಅಧ್ಯಯನ ಮತ್ತು ಕಾವ್ಯಕೃಷಿಯಲ್ಲಿ ಗಂಭೀರವಾಗಿ ನನ್ನನ್ನು ತೊಡಗಿಸಿಕೊಂಡೆ. ಇತ್ತೀಚೆಗೆ ಒಮ್ಮೆ ಇದ್ದಕ್ಕಿದ್ದಂತೆ ನನಗೆ ಹೊಳೆಯಿತು. 'ಅರೇ, ಬಾಲ್ಯದಲ್ಲಿ ವಶೀಕರಣ ವಿದ್ಯೆಯ ಸಾಧನೆಗಾಗಿ ನಾನು ಮಾಡಿದ ಪ್ರಯತ್ನ ಕಾವ್ಯದ ಉದ್ದೇಶಕ್ಕೆ ಒಡ್ಡಿದ ಪ್ರತಿಮೆಯಂತಿದೆಯಲ್ಲವೇ? ಜೀವನದ ಜಂಜಾಟದಿಂದ ಜರ್ಜರಿತರಾದ ಎಷ್ಟು ಜನರಿದ್ದಾರಲ್ಲ ನಮ್ಮ ಸುತ್ತ! ಅವರ ಬಾಳಿನಲ್ಲಿ ಭರವಸೆಯನ್ನು ತುಂಬಿ ಅವರ ಬಾಡಿ ಮುದುರಿ ಕರಕಲಾದ ಮನಸ್ಸನ್ನು ಮತ್ತೆ ಅರಳಿ ನಳಾನಳಿಸುವಂತೆ, ಘಮಘಮಿಸುವಂತೆ ಮಾಡಲು ಪ್ರಯತ್ನಿಸಬೇಕಾದ್ದು ಕಾವ್ಯದ ನಿಜವಾದ ಉದ್ದೇಶವಾಗಬೇಕಲ್ಲವೇ? ಸಂಕಲ್ಪವಾಗಬೇಕಲ್ಲವೆ?
ಕೆ.ಎಸ್.ನರಸಿಂಹಸ್ವಾಮಿಯವರು ಹೇಳುತ್ತಾರೆ:
ಭೂಮಿಯ ಕರುಣೆಗೆ ಮಿತಿ ಇರದೆಂದು,
ಎಲ್ಲರ ದುಡಿಮೆಗೆ ಫಲವಿಹುದೆಂದು,
ನಾಳೆಯ ಬಾಗಿಲು ನಂದನವೆಂದು,
ಪ್ರೀತಿಗೆ ಶಾಂತಿಗೆ ಜಯವಿರಲೆಂದು,
ಎಲ್ಲರಿಗೊಳಿತನು ಬಯಸಲಿ ಕವನ!
ಗೋಪಾಲಕೃಷ್ಣ ಅಡಿಗರು ತಮ್ಮ 'ಬತ್ತಲಾಗದ ಗಂಗೆ' ಕವನದ ಕೊನೆಯಲ್ಲಿ ಹೀಗೆ ಹೇಳುತ್ತಾರೆ-
ಗಂಗೆಯಿಲ್ಲದ ಕಾಲದಲ್ಲಿ ತಡೆದುಡುಕಿದ ಭಗೀರಥನ
ಸಂಕಲ್ಪ ಬಲದ ಅಸಂಖ್ಯಾತರಿಲ್ಲಿ
ಬಂದೆ ಬರುವರು, ದೇವಗಂಗೆಯ ನೇರ.
ಹೃದಯದಂತರ್ಗಂಗೆ ತುಂಬಿ ಚೆಲ್ಲಿ
ದಡದಲ್ಲಿ ಮತ್ತೆ ವಿದ್ಯಾರಣ್ಯ ಧರ್ಮಕ್ಷೇತ್ರ
ಚಿಗುರುವುವು ಜಿಗಿಯುವುವು ಮುಗಿಲ ಕಡೆಗೆ.
ಕನಸೇ, ಕಲ್ಪನೆಯೇ? ಇಲ್ಲವಾದರೇನಿದೆ ಇಲ್ಲಿ :
ಕಣ್ಣು ಕೀಳುವ ಸೂಜಿ, ಕೋಲುವ ಬಡಿಗೆ.
ಭ್ರಷ್ಟಗೊಂಡ ವಾಣಿಜ್ಯ ಮತ್ತು ರಾಜಕಾರಣ, ಜೀವನ ವಾತ್ಸಲ್ಯಗಳನ್ನೇ ಪಲ್ಲಟಗೊಳಿಸುವ ಭೋಗ ಸಂಸ್ಕೃತಿ ದಿನನಿತ್ಯದ ಸಂಗತಿಗಳಾಗಿರುವ ಕೋಮು ಗಲಭೆ, ಭಯೋತ್ಪಾದನೆ, ಹಿಂಸಾಚಾರ, ಇವುಗಳಿಂದ ತತ್ತರಿಸಿರುವ ಇಂದಿನ ಜಗತ್ತಿನ ಮಟ್ಟಿಗೂ ಕಾವ್ಯದ ಸಾಂತವಾನ ಭರವಸೆ, ಮತ್ತು ಆಶಾವಾದ ಈಗ ಅನಗತ್ಯವಾಗಿದೆಯಲ್ಲವೇ? ಎಲ್ಲಾ ಮೇಲಿನ ಮನಸ್ಸುಗಳನ್ನೂ ತೊಳೆದು, ನಿರ್ಮಲಗೊಳಿಸುವಂಥ ಹಾಗು ಬರಡಾದ ಪರಿಸರವನ್ನು ಮತ್ತೆ ಹಚ್ಚ ಹಸಿರಾಗಿರುವಂಥ ಕಾವ್ಯಗಂಗೆಗೆ 'ಇಳಿದು ಬಾ ತಾಯಿ, ಇಳಿದು ಬಾ' ಎಂದು ನಾವು ಆರ್ತರಾಗಿ ಮೊರೆಯಿಡಬೇಕಾದ ಸಂದ್ದರ್ಭ ಇದಲ್ಲವೇ? ಹೀಗನ್ನಿಸಿ, ನನ್ನ ಬಾಲ್ಯದ ವಶೀಕರಣ ವಿದ್ಯೆಯ ಸಾಧನೆಯ ಪ್ರಯತ್ನವನ್ನೇ ಪ್ರತಿಮೆಯಾಗಿಸಿ ಕಾವ್ಯದ ಉದ್ದೇಶದ ಬಗ್ಗೆ ನಾನೊಂದು ಕವನ ಬರೆದೆ.
ಅದು : `ಸಿದ್ಧಿ'
ಆ ಬಾಡಿಹೋದ ಹೂವನ್ನು
ಕಂಡೆಯಾ?
ತಂದು ಮುಂದಿಟ್ಟುಕೊ.
ಮೃದುವಾಗಿ ಅದನ್ನು
ನೇವರಿಸು.
ನೆಟ್ಟ ನೋಟದಿಂದ
ದಿಟ್ಟಿಸು.
ನಿಧಾನ ಅದರ ಒಳಕ್ಕಿಳಿ
ಹೃದಯ ಮುಟ್ಟು
ಅಕ್ಕರೆಯಿಂದ
ಮೆಲ್ಲಗೆ ತಟ್ಟು
ಘಲ್ಲೆಂದು ಪುಳಕಿಸಿ
ಆ ಹೂ
ದಳ ಬಿಚ್ಚಿ, ನಳನಳಿಸಿ
ನಕ್ಕರೆ...
ನೀ ಕವಿ,
ಅದು ಕವಿತೆ.
ಕಡಿದಾಳು ಶಾಮಣ್ಣರಿಂದ ಫೋಟೋಗ್ರಫಿ ಕ್ಲಾಸ್...
6:56 PM
Posted by ಆಲೆಮನೆ
ಗೀತಕ್ಕ ಸಮರ್ಥನೆ..
6:43 PM
Posted by ಆಲೆಮನೆ
ಶ್ರೀ ರಾಮುಲುರನ್ನು ತಮ್ಮ ಅಂತ ಕರೆದಿದ್ದು ಬಂಡವಾಳಶಾಹಿಯ ಮುಂದೆ ನಡ ಬಗ್ಗಿಸಿದ್ದಲ್ಲ, ಅದು ಈ ಸೀಮೆಯ ಸಂಸ್ಕೃತಿ. ಇನ್ನು ಪ್ರಶಸ್ತಿಯ ವಿಚಾರ, ಶ್ರೀ ರಾಮುಲು ಸರ್ಕಾರದ ಪ್ರತಿನಿಧಿ ಅನ್ನುವ ಕಾರಣಕ್ಕೆ ಅವರನ್ನು ಪ್ರಶಸ್ತಿಯ ವಿಚಾರವಾಗಿ ಆಗ್ರಹಿಸಿದ್ದು. ಅದು ಅಂಗಲಾಚಿದ್ದಲ್ಲ, ಆಗ್ರಹಿಸಿದ್ದು. ಅದು ನಮ್ಮ ಹಕ್ಕು ಎಂದು ತಮ್ಮನ್ನು ಗೀತಕ್ಕ ಸಮರ್ಥಿಸಿಕೊಂಡರು.
ಮಾತಿಗೆ ಕುಂತ ಗೀತಕ್ಕ...
6:32 PM
Posted by ಆಲೆಮನೆ
ಮೀನಾಕ್ಷಿ ಬಾಳಿಯವರ ಆಪ್ತ ಖಡಕ್ ನಿರೂಪಣೆಯಲ್ಲಿ ಮೂಡಿ ಬಂದ ಸಂವಾದ ಗೀತಕ್ಕನವರ ಗುಲ್ಬರ್ಗಾದ ಭಾಷೆಯಲ್ಲಿ ಮತ್ತಷ್ಟು ಸೊಗಸು ಪಡೆದಿತ್ತು.