೭೭ನೇ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ
ಬೆಂಗಳೂರಿನಲ್ಲಿ ಪ್ರಾರಂಭವಗುತ್ತಿರುವ 77ನೇಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ - ನಿಮ್ಮ ನುಡಿನಮನದಲ್ಲಿ! ಯಾವ ಯಾವ ಘೋಷ್ಟಿಗ್ಲುಂಟು ಈ ಬಾರಿ? ಸಂಮಾನಗಳಾರಾರಿಗೆ? ಅದರಲ್ಲಿ ಒಂದನ್ನ ಪರಿಚಿತ ಮುಖವಿದೆಯೇ? ಅದು ಸರಿ ಯಾರ್ಯಾರು ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸ್ಟೇಜ್ ಹತ್ತುತ್ತಿದ್ದಾರೆ? ಯಾವ ವಿಷಯ? ಏನು ಮಾತು? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಕ್ಲಿಕ್ಕಿಸಿ ಆಹ್ವಾನ ಪತ್ರಿಕೆಯನ್ನು ಪಡೆಯಿರಿಕಸಾಪ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ - ವಿಶೇಷ ಸಂದರ್ಶನ.


ನುಡಿ-ನಮನ, ಆಲೆಮನೆ ಬಳಗಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ ಅವರು ಕೊಟ್ಟ ವಿಶೇಷ ಸಂದರ್ಶನ.
ಸಂದರ್ಶಿಸಿದವರು -ಡಾ.ಹೆಚ್.ವಿ.ವೇಣುಗೋಪಾಲ್1. ನಲ್ಲೂರು ಪ್ರಸಾದ್ ಅವರೆ, ಇದು ನಿಮ್ಮ ನಾಯಕತ್ವದಲ್ಲಿ ಎರಡನೆಯ ಸಮ್ಮೇಳನ, ಕಳೆದ ಬಾರಿ ಚಿತ್ರದುರ್ಗದಲ್ಲಿ ಸಮ್ಮೇಳನವನ್ನು ಆಯೋಜಿಸಿದ್ದೀರಿ. ಸಾಹಿತ್ಯ ಪರಿಷತ್ತಿನ ಇದುವರೆವಿಗಿನ ಸಮ್ಮೇಳನಕ್ಕಿಂತ ಈ ಸಮ್ಮೇಳನ ಹೇಗೆ ಭಿನ್ನ?


- ಇದುವರೆಗೆ 75 ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸಿಕೊಂಡು ಬಂದಿದೆ. ಈ ಎಲ್ಲ 75 ಸಮ್ಮೇಳದಲ್ಲಿಯೂ ಕೂಡ ವೈಶಿಷ್ಟ್ಯತೆ ಅಂದರೆ ನಾಡಿನ ಮತ್ತು ನುಡಿಯ ಬಗೆಗೆ ಹಲವಾರು ಸಮಸ್ಯೆಗಳನ್ನು ಕುರಿತು ಆಯಾಕಾಲದ ವೇದಿಕೆ ಚರ್ಚಿಸಿದೆ. ಕನ್ನಡ ನಾಡಿನ ಒಂದು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತಹ ರೀತಿಯಲ್ಲಿ ಈ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ನಾಡಿನಾದ್ಯಂತ ಇರುವಂತಹ ವಿದ್ವಾಂಸರನ್ನು ಕರೆಸಿ, ಅವರ ವಿಚಾರವನ್ನು ಇಲ್ಲಿ ಮಂಡಿಸುವಂತಹ ಕೆಲಸವನ್ನು ಈ ಪರಿಷತ್ತು ಮಾಡುತ್ತಿದೆ. ಕಾಲದಿಂದ ಕಾಲಕ್ಕೆ ಸಮ್ಮೇಳನದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಆಗಿದೆ. ಮೊದಲು ಸಮ್ಮೇಳನ ಅಂದರೆ ಹೆಚ್ಚು ಜನಾಕರ್ಷಣೆ ಇಲ್ಲದಿದ್ದಂತಹ ಕಾಲ ಇತ್ತು. ಆಗ ಸುಮಾರು ಸಾವಿರದ ಲೆಕ್ಕದಲ್ಲಿ ಜನ ಬರುತ್ತಿದ್ದರು. ಈಗ ಅದರ ಪ್ರಮಾಣ ಸಾಕಷ್ಟು ದೊಡ್ಡದಾಗಿದೆ. ಲಕ್ಷಗಟ್ಟಲೆ ಆಗಿದೆ. ಕಳೆದ ಬಾರಿ ನಮಗೆ 3.5ರಿಂದ 4 ಲಕ್ಷ ಜನ ಬಂದಿದ್ದರು ಎಂದು ಒಂದು ಅಂದಾಜು ಸಿಕ್ಕಿದೆ. ಇಲ್ಲಿಗೆ ಬರುವ ಜನರ ಆಸಕ್ತಿಯೂ ಕೂಡ ವಿಭಿನ್ನವಾಗಿರುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಸಾಹಿತ್ಯದ ಸಂಗತಿಗಳನ್ನು ಕುರಿತು ಚರ್ಚಿಸುವುದು ಅಷ್ಟೇ ಅಲ್ಲ, ಬದಲಾಗಿ ಒಟ್ಟು ಕನ್ನಡಿಗರ ಹಿತಚಿಂತನೆಗಳನ್ನು ಕುರಿತು ಚರ್ಚಿಸುವ ಒಂದು ವೇದಿಕೆ ಎಂಬ ನೆಲೆಯ ಮೇಲೆ ಈಗ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವಲ್ಲಿಗೆ ನಾವು ತಲುಪಿದ್ದೇವೆ.

ಕಳೆದವರ್ಷ ನಾನು ಅಧಿಕಾರ ಸ್ವೀಕಾರ ಮಾಡಿದ ಹೊಸ್ತಿಲಲ್ಲೇ ಚಿತ್ರದುರ್ಗದಲ್ಲಿ 75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಾಡಬೇಕಾದ ಒಂದು ಅನಿವಾರ್ಯ ಸ್ಥಿತಿ ಬಂತು. ಕಳೆದ ಬಾರಿಯೂ ಅದೇ ರಿತಿಯ ಒಂದು ಬದಲಾವಣೆಗಳನ್ನು ನಾನು ಮಾಡಿಕೊಂಡಿದ್ದೆ. ಈ ಬಾರಿ ಕೂಡ ಅದೇ ರೀತಿಯಾದಂತಹ, ಒಂದಷ್ಟು ಹೆಚ್ಚು ಜನರನ್ನು ತಲುಪುವ ನೆಲೆಯೊಳಗೆ ಕೆಲವು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಎಲ್ಲಾ ಜನರಿಗೂ ಬೇಕಾಗಿರುವಂತಹ ನುಡಿ, ಭಾಷೆ, ಚಿಂತನೆಗಳಿಗೆ ಸಂಬಂಧಿಸಿದಂತಹ ಸಾಹಿತ್ಯದ ಸ್ವರೂಪ, ಅದರ ಬದಲಾವಣೆ, ಬೆಳವಣಿಗೆಗಳನ್ನು ಕುರಿತಾದಂತಹ ವಿಚಾರಗಳು ಆಗಿದೆ. ಅದರ ಜೊತೆಗೆ ನಾಡಿನ ಜನರ ಸಮಸ್ಯೆಗಳಾದಂತಹ ಹಲವು ಸಂಗತಿಗಳನ್ನು ಅಲ್ಲಿ ಪ್ರಸ್ತಾಪ ಮಾಡಿದ್ದೇವೆ. ಅದರಲ್ಲಿ ಮುಖ್ಯವಾದಂತಹದ್ದು ಅಂತ ನಾನು ಭಾವಿಸಿಕೊಂಡಂತದ್ದು, ಬೇಸಾಯ ಮತ್ತು ಬದುಕು. ಪ್ರಸ್ತುತ ಸಂದರ್ಭದಲ್ಲಿ ರೈತನ ಬದುಕು ಒಂದು ಶೋಚನೀಯ ಸ್ಥಿತಿಯನ್ನು ತಲುಪಿದೆ ಆ ಎಲ್ಲಾ ಸಮಸ್ಯೆಗಳಿಗೆ, ಪರಿಷತ್ತು ಬಾಯಾಗಬೇಕಿದೆ. ಮೌನವಾಗಿ ಕುಳಿತುಕೊಳ್ಳುವಂತಹದ್ದು ನಾವು ಮಾಡುವಂತಹ ಅಪರಾಧ. ಯಾಕೆಂದರೆ, 'ಅನ್ನ ದೇವರುಗಳಿಗಿಂತ ಇನ್ನು ದೇವರುಗಳಿಲ್ಲ' ಅನ್ನೋ ಮಾತಾಗಲೀ 'ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು' ಅನ್ನೋ ಮಾತಾಗಲಿ ಈಗ ಹೆಚ್ಚು ಅರ್ಥಪೂರ್ಣವಾಗಿದೆ.

ಹೀಗಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವಂಥಹ ರೈತನ ಬಗೆಗೆ ನಾವಿಲ್ಲಿ ಕುರಿತು ಮಾತಾಡಬೇಕಾಗಿದೆ. ಆ ಕ್ಷೇತ್ರದಲ್ಲಿ ಪರಿಣತರಾದಂತ ಜನರನ್ನು ಕರೆಸಿ, ಹಲವಾರು ವಿಚಾರಗಳನ್ನು ನಾವು ಮಾತಾಡುತ್ತಿದ್ದರೆ, ಜಾಗತೀಕರಣ ಮತ್ತು ರೈತ ಹೋರಾಟ, ಹಸಿವು ದುಡಿಮೆ ಮತ್ತು ಲಾಭಕೋರತನ, ಬೇಸಾಯ ಮತ್ತು ಮಹಿಳೆ, ಹಾಗು ರೈತ ಕೂಲೀ ಕಾರ್ಮಿಕರು. ಈ ರೀತಿಯ ವಿಷಯಗಳನ್ನು ಕುರಿತು ಒಂದು ದೊಡ್ಡ ಪ್ರಮಾಣದ ಚರ್ಚೆಯನ್ನು ನಡೆಸುವಂತಹ ಕೆಲಸವನ್ನು ಇಲ್ಲಿ ಮಾಡುತ್ತಿದ್ದೇವೆ. ಅದರಲ್ಲಿ ಕಡಿದಾಳು ಶಾಮಣ್ಣನಂಥವರು, ಈರಯ್ಯ ಕಿಲ್ಲೆದಾರ್, ಕೋಡಿಹಳ್ಳಿ ಚಂದ್ರಶೇಖರ್, ಟಿ.ಆರ್.ಚಂದ್ರಶೇಖರ್ ಅವರುಗಳು, ಬೇಸಾಯ ಮತ್ತು ಮಹಿಳೆ ಎಂಬುದರ ಬಗೆಗೆ ಶ್ರೀಮತಿ. ಬಿ.ಅನಸೂಯಮ್ಮ, ರೈತ ಕೂಲಿ ಕಾಮರ್ಿಕರಿಗೆ ಸಂಬಂಧಿಸಿದಂತೆ ಎಸ್.ಎನ್.ಮಂಜುನಾಥ್ ದತ್ತ ಮುಂತಾದವರೆಲ್ಲರೂ ಇದ್ದಾರೆ. ಇವರೆಲ್ಲರೂ ಕೂಡ ಆಯಾ ಕ್ಷೇತ್ರದಲ್ಲಿ ಅಪಾರವಾಗಿ ಕೆಲಸ ಮಾಡಿದಂಥವರು. ರತ ಸಂಘಟನೆಯೊಳಗೆ ತಮ್ಮನ್ನು ತೊಡಗಿಸಿಕೊಂಡಂಥವರು. ಈ ಹಿನ್ನೆಲೆಯ ಒಳಗೆ ಇಂತಹ ಒಂದು ಅಪರೂಪದ ವ್ಯವಸ್ಥೆಯನ್ನು ಕೂಡ ಮಾಡಿದ್ದೇವೆ.

2. ಸಾರ್, ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ತಿರುವು ಪಡೆದುಕೊಂಡಿರುವ ಇಂತಹ ಸಾಹಿತ್ಯಿಕ ಜಾತ್ರೆಗಳು ಕಾಲ ಕಳೆದಂತೆ ವಿದ್ವಾಂಸರನ್ನು ಆಕರ್ಷಿಸುವುದರಲ್ಲಿ ಕಡಿಮೆಯಾಗಿ ರಾಜಕಾರಣಗಳನ್ನು ಅಪ್ಪಿಕೊಳುತ್ತಿದೆ ಎಂಬ ಪುಕಾರು ಕಾಲದಿಂದ ಇರುವುದರ ಬಗ್ಗೆ ತಾವು ಏನೆನ್ನುತ್ತೀರಿ. ಮತ್ತು ಈ ಪುಕಾರಿಗೆ ಈ ವರ್ಷದ ಸಮ್ಮೇಳನ ಹೇಗೆ ಉತ್ತರಿಸುತ್ತದೆ?

- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಬರುವ ಮುನ್ನ, ಹಾಗು ಬಂದ ನಂತರದಲ್ಲಿ ಒಳಗೆ ಕುಳಿತು ವಿವರಗಳನ್ನು ತಿಳಿದು ನಾನು ಕೆಲವು ನಿಲುವನ್ನು ತಾಳಿದ್ದೇನೆ. ಪರಿಷತ್ತಿನ ಹಾಗು ನಾಡು-ನುಡಿಯ ಬೆಳವಣಿಗೆಯ ದೃಷ್ಟಿಯಿಂದ ಯಾವುದನ್ನೂ ನಾನು ನಿರಾಕರಿಸಿರಲಿಲ್ಲ. ರಾಜಕಾರಣವನ್ನೂ, ಧರ್ಮವನ್ನೂ, ಎಲ್ಲವನ್ನೂ ನಿರಾಕರಿಸಿದ್ದಲ್ಲ. ಆದರೆ ಸಕಾರಾತ್ಮಕವಾಗಿ ಬಂದರೆ ಮಾತ್ರ ಧರ್ಮ, ರಾಜಕೀಯ ಇತ್ಯಾದಿ ಯಾವುದೇ ವಿಚಾರವನ್ನು ಸ್ವೀಕರಿಸುತ್ತೇನೆ, ನಕಾರಾತ್ಮಕವಾದ ರೀತಿಯಲ್ಲಿ ಬಂದರೆ ನಾನು ಸ್ವೀಕರಿಸುವುದಿಲ್ಲ, ಬದಲಾಗಿ ಅದರಿಂದ ದೂರ ಇರುತ್ತೇನೆ. ಆದ್ದರಿಂದ ನಾನು ಬಹಳ ಬಾರಿ ಹೇಳಿದ್ದೇನೆ, ಗಾಂಧೀಗಿಂತ ದೊಡ್ಡ ರಾಜಕಾರಣಿ, ಗುರು ಯಾರು? ಅವರಿಗಿಂತ ಜನಪರವಾಗಿ ಸಮಾಜಕ್ಕೆಂದು ಚಿಂತೆ ಮಾಡಿದ ದೊಡ್ದವರಾರು? ಹಾಗಾಗಿ ನಾವು ಆ ನಿಟ್ಟಿನಲ್ಲಿ ಎಲ್ಲವನ್ನೂ ಕನ್ನಡ ಸಾಹಿತ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. ರಾಜಕಾರಣವನ್ನು ನಾನು ಹೇಗೆ ಬಳಕೆ ಮಾಡಿಕೊಳ್ಳುತ್ತೇನೆ ಅಂದರೆ, ಒಂದು ಇನ್ಫ್ರಾಸ್ಟ್ರಕ್ಚರ್ಗೆ-ಸಂಪನ್ಮೂಲ ಕ್ರೋಢೀಕರಣಕ್ಕೆ. ಸಮ್ಮೇಳನದಂತಹ ಬೃಹತ್ ವ್ಯವಸ್ಥೆಯನ್ನು ಮಾಡೊ ಸಂದರ್ಭದಲ್ಲಿ ಅದರ ಅಗತ್ಯವೂ ಇದೆ ನಮಗೆ. ಅದು ಬಿಟ್ಟರೆ ನಾನು ಗೋಷ್ಠಿಯಲ್ಲಿ ಬೇರೊಂದು ಕಡೆ ಎಲ್ಲಿಯೂ ಕೂಡ ಅವರನ್ನು ಬಳಕೆ ಮಾಡಿಕೊಂಡಿಲ್ಲ ಅನ್ನೋದನ್ನು ತಾವು ಗಮನಿಸಬಹುದು.

ಈ 76ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಇರಬಹುದು, ಅಥವಾ 75ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಇರಬಹುದು, ಹೀಗೆ ಸಂಬಂಧ ಪಡದೇ ಇರುವಂತಹ ವಿಚಾರಗಳಲ್ಲಿ ಅವುಗಳನ್ನು ಎಲ್ಲಿಯೂ ಬಳಕೆ ಮಾಡಿಕೊಳ್ಳುವುದಿಲ್ಲ. ರಾಜಕಾರಣದಲ್ಲೂ ಕೂಡ ಸಾಹಿತ್ಯಾಸಕ್ತರು, ರಂಗಭೂಮಿ ಆಸಕ್ತರು, ಸುಮಾರು ಜನ ಇದ್ದಾರೆ. ಹಾಗೆಯೇ ಸಾಹಿತ್ಯಾಸಕ್ತ ಮಠಮಾನ್ಯಗಳಿದ್ದಾವೆ. ಇವೆಲ್ಲವನ್ನೂ ದೂರ ಮಾಡಿ ಸಮ್ಮೇಳನವನ್ನು ಮಾಡಬೇಕೆನ್ನುವುದನ್ನೂ ನಾನು ಒಪ್ಪುವುದಿಲ್ಲ. ಧರ್ಮಗುರುಗಳಿಗೂ ರಾಜಕಾರಿಣಿಗಳಿಗೂ ದೊರೆತ ಜಾಗಕ್ಕೆ ಸಮನಾಗಿ ಒಬ್ಬ ಜನಸಾಮಾನ್ಯನಿಗೂ ಅಲ್ಲಿ ದೊರೆಯಬೇಕು ಅಂತ ನನ್ನ ವಾದ ಇದೆ.
ಇನ್ನು ವಿದ್ವಾಂಸರಿಗೆ ಸ್ಥಾನ ಕಡಿಮೆಯಾಗಿದೆ ಎಂಬ ಮಾತಿನ ಬಗ್ಗೆ ಹೇಳುವುದಾದರೆ, ಪೂರ್ಣ ಅಕೆಡೆಮಿಕ್ ಆದಂತಹ, ಉನ್ನತ ಮಟ್ಟದಲ್ಲಿರುವಂತಹ ವಿದ್ವಾಂಸರು ಅಲ್ಲಿಗೆ ಆಗಮಿಸಬೇಕೆಂದು ನನ್ನ ಆಶಯ. ವೈವಿಧ್ಯಮಯವಾದ ವಿಷಯಗಳನ್ನು ಅಲ್ಲಿ ಪ್ರಸ್ತಾಪ ಮಾಡುವುದು, ಎಲ್ಲ ಜನಗಳಿಗೂ ವಿಚಾರಗಳನ್ನು ತಲುಪಿಸುವಂತಹ ಕೆಲಸ ಮಾಡುವುದು ನನ್ನ ಉದ್ದೇಶ. ಹಿಂದೆ ಒಮ್ಮೆ ನಾಡು ನುಡಿ ಚಿಂತನೆ ಬಗೆಗೆ, ತೀವ್ರತರವಾದಂತಹ ಕೆಲಸಗಳನ್ನು ಮಾಡುತ್ತಿರುವಂಥವರನ್ನು ಕರೆಯಿಸಿದಾಗ, ತೀವ್ರವಾದೀ ಬೆಂಬಲಿಗರಿಗೆ ಜಾಗ ಕೊಟ್ಟಿದ್ದೀರಿ ಎಂಬ ವಿವಾದ ಕೂಡಾ ಹುಟ್ಟಿಕೊಂಡಿತ್ತು. ಆದರೆ ಈ ಬಗೆಗೆ ನನ್ನ ಮುಖ್ಯವಾದ ಉದ್ದೇಶವೇ ಬೇರೆ. ಸಮ್ಮೇಳನದಲ್ಲಿ ಹಲವಾರು ಚಿಂತನೆಗಳು, ಹಲವಾರು ಸೈದ್ಧಾಂತಿಕ ಸಂಗತಿಗಳು ನಮ್ಮೆಲ್ಲರನ್ನೂ ಕೂಡ ಬೇರೆ ಬೇರೆ ಆಗಿಸುತ್ತವೆ. ನಾನೆಲ್ಲರೂ ಒಂದೊಂದು ನೆಲೆಯೊಳಗಿರುತ್ತೀವಿ. ನಾನು ಒಂದು ನೆಲೆಯಲ್ಲಿ, ಇನ್ನೊಬ್ಬ ಸಾಹಿತಿ ಒಂದು ನೆಲೆಯಲ್ಲಿ, ನನಗೊಂದು ರಾಜಕೀಯ ಚಿಂತನೆಗಳಿರುತ್ತದೆ, ಹಾಗೆಯೇ ಇನ್ನೊಬ್ಬನಿಗೆ ಇನ್ನೊಂದು ತರಹದ ರಾಜಕೀಯ ಚಿಂತನೆಗಳಿರುತ್ತದೆ. ಅದು ಅಭಿಪ್ರಾಯ ಭೇದವೇ ವಿನಾ ಶತ್ರುತ್ವವಲ್ಲ. ಅಭಿಪ್ರಾಯ ಭೇದಗಳೂ ಕೂಡಾ, ಕನ್ನಡ ನಾಡಿನ ಒಳಿತಿಗೆ ಆಗುವುದಾದರೆ ಒಂದು ಚರ್ಚೆಯ ಮೂಲಕ ಒಂದು ತೀರ್ಮಾನಕ್ಕೆ ಬರುವುದಾದರೆ, ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎನ್ನುವುದು ನನ್ನ ವಾದ.

3. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ- ಇಂದಿನ ಪರಿಸ್ಥಿತಿ ಏನು, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಸಂಬಂಧಪಟ್ಟಂತೆ ಬಂದ ಸಂಗತಿಯ ಸಂದರ್ಭದೊಳಗಡೆ ನಾನು ಹೇಳಿದಂತಹ ಸಂಗತಿಯೊಳಗಡೆ, ಇಲ್ಲಿ ಹತ್ತಾರು ಪಕ್ಷಗಳು ಇರಬಹುದು, ನೂರಾರು ರಾಜಕಾರಣಿಗಳಿರಬಹುದು, ಆದರೆ ನೀವು ರಾಜಕಾರಣವನ್ನು ಮರೆತು, ಪಕ್ಷವನ್ನು ಮರೆತು ಇಲ್ಲಿ ಕನ್ನಡದ ವಿಚಾರಕ್ಕಷ್ಟೇ ನೀವು ತೊಡಗಿಸಿಕೊಳ್ಳತಕ್ಕಂತಹ ಅನಿವಾರ್ಯತೆಯನ್ನು ಗಮನಿಸಿ ಈ ಮಾತನ್ನು ಹೇಳಿದ್ದೇನೆ. ಶಾಸ್ತ್ರೀಯ ಭಾಷೆ ಬರುವುದಕ್ಕಿಂತ ಮುಂಚೆ ನಡೆದ ಒಂದು ಹೋರಾಟದ ಸಂದರ್ಭದೊಳಗೆ ಇದನ್ನು ಪ್ರಸ್ತಾಪ ಮಾಡಿದ್ದೆ. ಎಲ್ಲಾ ಪಕ್ಷದವರಿಗೂ ಈ ಮಾತನ್ನು ಹೇಳಿದ್ದೆ. ಇವತ್ತೂ ಕೂಡ ನಾನು ಆ ಮಾತನ್ನು ಹೇಳುತ್ತಿದ್ದೀನಿ. ಇತ್ತೀಚೆಗೆ ನಡೆದ ಮಡಿಕೇರಿ ಸಾಹಿತ್ಯ ಸಮ್ಮೇಳನದೊಳಗೆ ಕೂಡ ಈ ಮಾತನ್ನು ಹೇಳಿದೆ. ಅನ್ಯ ರಾಜ್ಯದವರು ರಾಜಕಾರಣ ಮಾಡುವ ಸಂದರ್ಭದಲ್ಲಷ್ಟೇ ಪಕ್ಷದ ಬಗ್ಗೆ ಮಾತನಾಡುತ್ತಾರೆ.

ಆದರೆ ಭಾಷೆಯ ವಿಚಾರ ಬಂದಾಗ, ನಾಡಿನ ವಿಚಾರ ಬಂದಾಗ, ನೆಲದ ವಿಚಾರ ಬಂದಾಗ, ಅವರೆಲ್ಲ ಒಗ್ಗೂಡುವಂತಹ ಒಂದು ಒಳ್ಳೆಯ ಗುಣವನ್ನು ತೋರಿಸುತ್ತಾರೆ. ಇದು ಸರಿಯಾದರೀತಿ ಎಂಬುದು ನನ್ನ ವಾದ. ನಮ್ಮಲ್ಲೂ ಅಂಥದೇ ಭಾವನೆಗಳು ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತಿವೆ. ಇದು ಒಳ್ಳೆಯ ಬೆಳವಣಿಗೆ. ಗಾಂಧಿ ಅನ್ನುವವರು ಒಬ್ಬರು ಅದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಸಕರ್ಾರ ಮತ್ತು ನಾನು ಕೂತು ಮಾತನಾಡಿದ್ದೇವೆ. ನಾನು 2-3 ಸಭೆಗಳಿಗೆ ಹೋಗಿ ಮಾತನಾಡಿದ್ದೆ. ಆ ಸಂದರ್ಭದಲ್ಲಿ ನಾನು ಸರ್ಕಾರವನ್ನು ಕೇಳಿದ್ದು ಏನೆಂದರೆ, ನೀವು ಪ್ರತಿವಾದಿಯಾಗಿ ಹೋಗಲಿಕ್ಕೆ ಇಷ್ಟವಿಲ್ಲವಾದರೆ ಕನ್ನಡ ಸಾಹಿತ್ಯ ಪರಿಷತ್ತು ಆ ಕೆಲಸವನ್ನು ಮಾಡುತ್ತದೆ. ಅದಕ್ಕೆ ಅವಕಾಶ ಕಲ್ಪಿಸಿಕೊಡಿ ಅನ್ನೊ ಮಾತನ್ನು ಹೇಳಿದೆ. ಆಗ ಸರ್ಕಾರದ ಪರವಾಗಿ ಬಂದಂತಹ ಮುಖ್ಯಮಂತ್ರಿ ಚಂದ್ರು ಅವರು-ಇಲ್ಲ, ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಅದಕ್ಕೆ ಕಂಕಣಬದ್ಧವಾಗಿದೆ ಅನ್ನೋ ಮಾತನ್ನು ಹೇಳಿದರು.

4. ಈಗ ಕನ್ನಡ ಹಾಗು ಶಾಸ್ತ್ರೀಯ ಸ್ಥಾನಮಾನ ವಿಷಯದ ಚರ್ಚೆ ನಾವು ಮಾಡುತ್ತಿರುವುದರಿಂದ ಇನ್ನೊಂದು ಬಹಳ ಮುಖ್ಯವಾಗಿ ಚರ್ಚಿಸಬೇಕು ಅಂತ ಅನ್ನಿಸುತ್ತದೆ. ಕಳೆದ 2-3 ವರ್ಷಗಳಲ್ಲಿ ಬಹಳ ಚರ್ಚಿತವಾದಂತಹ ಸಂಗತಿ ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಭಾಷಾ ಕಲಿಕೆ. ಈ ಸಮ್ಮೇಳನದ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯವೇನು?

ಒಂದು ನಿಲುವನ್ನು ನಾವು ಗಟ್ಟಿಯಾಗಿ ತಿಳಿದುಕೊಳ್ಳಬೇಕು. ಭಾಷಾ ನೀತಿ ಏನಿದೆ, ಅದು ಪ್ರಾಥಮಿಕ ಹಂತದ ಒಳಗಡೆ ದೇಶಭಾಷೆಯಲ್ಲೇ ಕಲಿಸಬೇಕು. ನಾನು ಇಲ್ಲಿ ಮಾತೃಭಾಷೆಯನ್ನು ದೇಶಭಾಷೆಯೆಂದೇ ಕರೆಯುತ್ತೇನೆ. ಯಾಕೆಂದರೆ, ಮಾತೃಭಾಷೆ ಎಂದ ತಕ್ಷಣ ಅದರಲ್ಲಿ ಅಪಾಯ ಏನಿದೆ ಅಂದರೆ, ಒಬ್ಬನಿಗೆ ತನ್ನ ಮಾತೃಭಾಷೆ ತಮಿಳು ಆಗಿದ್ದು - 'ಈಗ ಬೆಂಗಳೂರಿನಲ್ಲಿದ್ದೇನೆ, ಆದರೂ ನಾನು ನನ್ನ ಮಾತೃಭಾಷೆ ತಮಿಳಲ್ಲಿ ಕಲಿಯುತ್ತೀನಿ' ಅನ್ನುವುದು ತಪ್ಪು. ಯಾವ ದೇಶದಲ್ಲಿ ಅಥವಾ ಯಾವ ರಾಜ್ಯದಲ್ಲಿ ನಾವು ವಾಸ ಮಾಡುತ್ತಿದ್ದೇವೆಯೋ ಆ ನೆಲದ ಭಾಷೆ ನಮ್ಮ ಭಾಷೆಯಾಗಬೇಕಾಗಿದೆ . ಈ ಹಿನ್ನೆಲೆಯೊಳಗೆ ನಮಗೆ ಪ್ರಾಥಮಿಕ ಹಂತದೊಳಗಡೆ, ದೇಶಭಾಷೆಯನ್ನು ಕಲಿಸಬೇಕಾದಂತಹ ಅನಿವಾರ್ಯವಾಗಿಬಿಟ್ಟಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನಾನು, ಅನಂತಮೂರ್ತಿಯವರು, ಪಂಡಿತಾರಾಧ್ಯ ಮುಂತಾದವರೆಲ್ಲಾ ಸೇರಿ ಒಂದು ಕೇಸ್ ಹಾಕಿದ್ದೀವಿ. ಇದರಲ್ಲಿ ಪ್ರಾಥಮಿಕ ಹಂತದೊಳಗೆ ಕನ್ನಡಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಅನ್ನೊ ವಿಚಾರವನ್ನೂ ಕೂಡ ಪ್ರಸ್ತಾಪ ಮಾಡಿದ್ದೇವೆ.

5. ಧರ್ಮದ ಬಗ್ಗೆ ಹಾಗು ರಾಜಕಾರಣದ ಬಗ್ಗೆ ಮಾತನಾಡಿದ್ದೀವಿ, ಇಂಥ ಒಂದು ಸಂದರ್ಭಗಳಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಪಾಲ್ಗೊಳ್ಳುವ ಕಾರಣ ಧರ್ಮರಾಜಕಾರಣ ತನ್ನ ಹಿತಾಸಕ್ತಿಯಲ್ಲಿ ಕೆಲಸ ಮಾಡುವುದರ ಬಗ್ಗೆ ಏನು ಹೇಳುತ್ತೀರ?

ಸಾಹಿತ್ಯ ಸಮ್ಮೇಳನದಲ್ಲಿ ಆ ರೀತಿಯಾದಂತವುಗಳಿಗೆ ಅವಕಾಶವಿಲ್ಲ. ಧರ್ಮ ಮತ್ತು ರಾಜಕಾರಣ ಅದು ಸಾಹಿತ್ಯವಾಗಿ ಬಂದರೆ ಮಾತ್ರ ಸ್ವಾಗತ. ಅದು ಬಿಟ್ಟು ಅದು ತನ್ನ ಐಡೆಂಟಿಟಿಯನ್ನು ಉಳಿಸಿಕೊಂಡು ಇಲ್ಲಿಗೆ ಬಂದರೆ ಅದಕ್ಕೆ ಇಲ್ಲಿ ಜಾಗವಿಲ್ಲ. ಇದಕ್ಕೆ ಅದು ತನ್ನನ್ನ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಸ್ಥಿತಿಯೊಳಗೆ ಬಂದರೆ ಮಾತ್ರ ಸ್ವಾಗತ.

6. ಇದು ರೈತಪರ ಸಮ್ಮೇಳನ ಎಂದು ಹೇಳಿದಿರಿ. ಆದರೆ ಮಠಮಾನ್ಯಗಳಿಗೆ ರೈತರ ಹಸಿವಿನ ಬಗೆಗೆ, ಬವಣೆಯ ಬಗೆಗೆ ಮಾತನಾಡುವ ಅಭ್ಯಾಸವಿಲ್ಲ, ಸರ್ಕಾರ ಕೂಡ ಎಷ್ಟೋ ಕಾಲ ರೈತರ ಹಸಿವಿನ ಬಗ್ಗೆ ಮಾತನಾಡುವುದಿಲ್ಲ. ಒಮ್ಮೆ ಹಸಿವನ್ನು ಕುರಿತು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹೇಳಿ ನಂತರ ಕಾರ್ಯಕ್ರಮಗಳಲ್ಲಿ ಅದು ಕಾಣೆಯಾಗುವಂತಹ ಬಹಳ ಉದಾಹರಣೆಗಳು ಇಂದು ಕಾಣುತ್ತಿದೆ. ಹಾಗಾಗಿ ಹೆಚ್ಚಿನ ಮಟ್ಟಿಗೆ ಧರ್ಮ ಹಾಗು ರಾಜಕಾರಣಗಳು ತಮ್ಮನ್ನು ವೈಭವೀಕರಿಸಿಕೊಳ್ಳೋದಿಕ್ಕೆ ಇಂತಹ ಜಾಗಳನ್ನೂ ಆಕ್ರಮಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯದ ಬಗ್ಗೆ ನೀವು ಏನು ಹೇಳುತ್ತೀರಿ?

ಅಂಥಾ ಆಲೋಚನೆಗಳಿಗೆ ಇಲ್ಲಿ ಎಡೆ ಇಲ್ಲ. ಇದನ್ನು ಅತ್ಯಂತ ಸ್ಪಷ್ಟವಾಗಿ ನಾನು ನಿಮಗೆ ಹೇಳುತ್ತಿದ್ದೇನೆ. ಭವಿಷ್ಯತ್ತಿನ ಒಟ್ಟು ಆಶಯಗಳಿಗೆ ಅವರು ಧ್ವನಿಯಾಗಿ ಅವರು ಬರಬೇಕೆ ವಿನಹ ಅವರದ್ದೇ ಆದಂತಹ ಧ್ವನಿ ಅಲ್ಲಿ ಇರುವುದಿಲ್ಲ. ರೈತರ ವಿಚಾರ ಇರಬಹುದು, ಹೋರಾಟದ ವಿಚಾರ ಇರಬಹುದು, ಜನಸಾಮಾನ್ಯರ ವಿಚಾರ ಇರಬಹುದು, ಭಾಷೆಯ ವಿಚಾರ ಇರಬಹುದು, ಇದು ಬಹುಜನರಿಗೆ ಅನುಕೂಲ ಆಗುವಂತಹದ್ದು. ಆನಸಾಮಾನ್ಯರಿಗೆ ಅನುಕೂಲ ಆಗುವಂತಹ ನೆಲೆಯೊಳಗೆ ಆಲೋಚನೆ ಮಾಡುವವರು ಬರಬೇಕೆ ವಿನಹ ಅದನ್ನು ಬಿಟ್ಟು ನಾವು ಮಾತನಾಡುತ್ತೇವೆ ಅನ್ನುವವರು ಸಾಧ್ಯ ಇಲ್ಲ. ಪರಿಷತ್ತು ಇಲ್ಲಿರುವಂತಹ ಕವಿಗೋಷ್ಠಿ ಮುಂತಾದವುಗಳಿಗೂ ಒಂದು ಸ್ವರೂಪಗಳನ್ನು ಕೊಟ್ಟಿರುವಂತಹುದು ಪರಿಷತ್ತೇ ವಿನಹ ಬೇರೆ ಯಾರನ್ನೂ ಕೂಡ ಇಲ್ಲಿ ಪ್ರವೇಶ ಮಾಡುವುದಕ್ಕೆ ನಾನು ಬಿಡುವುದಿಲ್ಲ.

7. ಹೊಸ ತಂತ್ರಜ್ಞಾನ ಇಂದು ದಾಪುಗಾಲು ಇಡುತ್ತಿರುವಂತಹ ಒಂದು ಸಂದರ್ಭದಲ್ಲಿ, ಈ ನಿಟ್ಟಿನಲ್ಲಿ ಪರಿಷತ್ತಿನಿಂದ ಒಂದು ಹೊಸ ವೆಬ್ಸೈಟ್ ತಯಾರಾಗುತ್ತಿದೆ ಎಂಬ - ನೀವು ಹೇಳಿದ ವಿವರದ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ.

ಈ ವಿಚಾರಗೋಷ್ಠಿಯಲ್ಲೂ ಕೂಡ ಒಂದು ವಿಷಯ ಇದೆ, 'ಈ ಜಗತ್ತಿನಲ್ಲಿ ಇ-ಕನ್ನಡ'. ವಾಸ್ತವವಾಗಿ ನಾನು ಆಧುನಿಕ ತಂತ್ರಜ್ಞಾನದ ತಿಳುವಳಿಕೆ ಇಲ್ಲದವನು. ಆದರೆ ಕನ್ನಡ ಭಾಷೆ ಆಧುನಿಕ ಜಗತ್ತಿನೊಳಗೆ ತನ್ನನ್ನು ತೆರೆದುಕೊಳ್ಳಬೇಕು ಅನ್ನುವ ಆಸೆ ಇಟ್ಟುಕೊಡಿರುವವ ನಾನು. ಪ್ರಪಂಚದಲ್ಲಿ ಇರುವಂತಹ ಹಲವು ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕಾದಂತಹದ್ದು ಕನ್ನಡ ಭಾಷೆ. ಹಳೇ ಕಾಲದ ಹಾಗೆ ಯೋಚನೆ ಮಾಡಿ, ಒಂದು ಸೀಮಿತವಾದಂತಹ ಸ್ವರೂಪದೊಳಗಡೆಯೇ ಪುಸ್ತಕ ಮುದ್ರಣ ಹಾಗು ವಿಮರ್ಶೆ ಮಾತ್ರಗಳು ಈಗ ಸಾಧ್ಯವಿಲ್ಲ. ಜಗತ್ತಿಗೆ ನಮ್ಮನ್ನು ತೆರೆದು ತೋರಿಸಬೇಕಾಗಿದೆ. ಇವತ್ತು ಇಲ್ಲಿ ಕುಳಿತು ಮಾತನಾಡುತ್ತಿರುವಂತಹದ್ದು, ಅಮೇರಿಕಾದ ಮೂಲೆಯಲ್ಲಿ ಹೇಳುತ್ತಿದ್ದೇನೆ ಅನ್ನೋದು ನನಗೆ ಬಹಳ ಸಂತೋಷ ಹಾಗು ಆಶ್ಚರ್ಯ ಕೂಡ ಹೌದು. ಈ ಆಸೆಗಳಿಂದ ನಾನು ಬಂದ ಕ್ಷಣದಿಂದಲೂ ಕೂಡ ಯೋಚನೆ ಮಾಡುತ್ತಾ ಇದ್ದೆ. ನನಗೆ ಅದರ ತಿಳುವಳಿಕೆ ಇಲ್ಲದ್ದಿದ್ದರೂ ಈ ದಿಕ್ಕಿನೊಳಗೆ ಪರಿಷತ್ತನ್ನು ನಡೆಸಬೇಕೆನ್ನುವಂತಹ ಯೋಚನೆ ನನಗಿದೆ.

ಆ ಕಾರಣಕ್ಕಾಗಿ ಈಗ, ವೆಬ್ಸೈಟ್ ಒಂದನ್ನು ಶೀಘ್ರದಲ್ಲೇ ಪ್ರಾರಂಭಿಸುತ್ತಿದ್ದೇವೆ. ಅದರಲ್ಲಿ ಪರಿಪೂರ್ಣವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾದ ದಿನದಿಂದ ಇಲ್ಲಿಯವರೆಗೆ ಏನೇನು ನಡೆದಿದೆ ಅನ್ನುವಂತಹದ್ದು, ಅಲ್ಲಿಂದ ನಡೆದಂಥ ಸಾಹಿತ್ಯ ಸಮ್ಮೇಳನಗಳೆಷ್ಟು? ಪರಿಷತ್ತಿನ ಅಧ್ಯಕ್ಷರು ಯಾರು? ನಡೆದಂತಹ ಕೆಲಸಗಳೇನು? ಪ್ರಕಟನೆಗಳು ಯಾವುವು? ದತ್ತಿನಿಧಿ ಎಷ್ಟು? ನಡೆದಂತಹ ವಿಚಾರಗೋಷ್ಠಿ ಏನೇನು? ಈ ರೀತಿಯಾಗಿರುವಂತಹ ಸರ್ವ ವಿಚಾರಗಳನ್ನು ದಾಖಲಿಸುವ ಕೆಲಸವನ್ನು ಮಾಡಬೇಕೆಂದು ಆಸೆ ಇಟ್ಟುಕೊಂಡಿದ್ದೇನೆ. ಇದಲ್ಲದೆ ಒಂದು ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿದ್ದೇನೆ. ಸರ್ಕಾರದ ನೆರವಿನಿಂದ ಒಂದು ಕೋಟಿ ಹಣವನ್ನು ಪಡೆದು ಮಾಡಿದ ಈ ಅಧ್ಯಯನ ಕೇಂದ್ರದ ಉದ್ಘಾಟನೆಯೂ ಆಗಿದೆ. ಕನ್ನಡದ ಸಮಸ್ತ ಸಂಗತಿಗಳೂ, ಸಾಹಿತ್ಯಕ್ಕೆ ಸಂಬಂಧ ಪಟ್ಟ ವಿಚಾರಗಳು ಬೆರಳ ತುದಿಯಲ್ಲಿ ದೊರಕಬೇಕೆಂಬಂತಹ ಆಸೆಯಿದೆ. ಹಾಗಾಗಿ ತಂತ್ರಜ್ಞರ ಜೊತೆ ಕುಳಿತು ವಿಚಾರಣೆ ಮಾಡಿ ಈ ಯೋಜನೆಗೆಂದೇ ರೂಪಿಸಲಾದ ಕಂಪ್ಯೂಟರ್ಗಳನ್ನು ತರಿಸಿದ್ದೇವೆ.

ಈ ವಿಚಾರಗಳನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಪರಿಣತರನ್ನು ಈಗಾಗಲೇ ಅದಕ್ಕೆ ನಿಯೋಜಿಸುವಂತಹ ಯೋಚನೆಯನ್ನು ಮಾಡಿದ್ದೇನೆ. ಶೀಘ್ರದಲ್ಲೇ ಈ ಎಲ್ಲಾ ವಿಷಯಗಳನ್ನೊಳಗೊಂಡ ನಮ್ಮ ವೆಬ್ಸೈಟ್ ಪ್ರಾರಂಭವಾಗುತ್ತಿದೆ. ನಾವು ಸಮ್ಮೇಳನಗಳ ನಿರ್ಣಯವನ್ನು ಮಾಡಿರುತ್ತೇವೆ. 76 ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳಿವೆ. ಬಹಳಷ್ಟು ಜನ ಪತ್ರಕರ್ತರು ನಿರ್ಣಯಗಳನ್ನು ಏನು ಮಾಡಿದ್ದೀರಿ ಎಂದು ಕೇಳುತ್ತಾರೆ. ಅದನ್ನು ಎಲ್ಲರಿಗೂ ತಲುಪಿಸಲು ಆಗುವುದಿಲ್ಲ. ಹೀಗಾಗಿ ಅವರೆಲ್ಲಾ ಅಂತರ್ಜಾಲದ ಮುಖಾಂತರ ಅದನ್ನು ಪಡೆದುಕೊಳ್ಳಬಹುದು. ಉದಾಹರಣೆಗೆ ಅಧ್ಯಕ್ಷರ ಭಾಷಣ. ಎಲ್ಲರೂ ಭಾಷಣದ ಪ್ರತಿಗಳು ಕೊಡಿ ಎಂದು ಕೇಳುತ್ತಾರೆ. ಬದಲಾಗಿ ಅದನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು. ಸಮ್ಮೇಳನಾಧ್ಯಕ್ಷರ ಭಾಷಣ ಆಗಬಹುದು, ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಸಿಕ ಪತ್ರಿಕೆಯಾದ 'ಕನ್ನಡ ನುಡಿ' ಮುಂತಾದವುಗಳಾಗಬಹುದು, ಎಲ್ಲವನ್ನೂ ಅಂತರ್ಜಾಲದದಿಂದ ಪಡೆಯಬಹುದು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡವನ್ನು ಇನ್ನೂ ಹೆಚ್ಚು ಜನಕ್ಕೆ ತಲುಪಿಸುವಂತಹ ಕೆಲಸವನ್ನು ಪರಿಷತ್ತು ಮಾಡಬೇಕು ಅಂತ ಆಲೋಚನೆ ಮಾಡಿದ್ದೇನೆ. ಆ ದಿಕ್ಕಿನಲ್ಲಿ ಈಗಾಗಲೇ ಹೆಜ್ಜೆ ಇಟ್ಟಿದ್ದೇನೆ.

8. ಈಗ ಸಮ್ಮೇಳನ ಗದಗದಲ್ಲಿ ನಡೆಯುತ್ತಿದೆ. ಗದಗದಲ್ಲಿ ನಡಿಯಬೇಕು ಅಂತ ಹಿಂದಿನ ಸಮ್ಮೇಳನದಲ್ಲಿ ತೀರ್ಮಾನ ಆಗಿರುತ್ತದೆ ಆದರೆ ಇವತ್ತಿನ ಪ್ರಸಂಗದಲ್ಲಿ ಉತ್ತರ ಕರ್ನಾಟಕ ದಲ್ಲಿ ನೆರೆ ಸಂತ್ರಸ್ತರು ಇರುವಾಗ, ಹಸಿವು ವಸತಿ ಸಮಸ್ಯೆಯಿಂದ ತತ್ತರಿಸಿರುವ ಸಾವಿರಾರು ಜನಗಳ ಎದುರು ಇತ್ತೀಚೆಗೆ ಕೋಟ್ಯಾಂತರ ಹಣ ಖರ್ಚು ಮಾಡಿ ಒಂದು ಹಬ್ಬ ಆಗಿದೆ. ಈಗ ಇನ್ನೊಂದು ಹಣದ ಖರ್ಚಿನ ಹಬ್ಬ. ಪರಿಷತ್ತಿನ ಸಮ್ಮೇಳನ ಇಂದು-ನಿನ್ನೆಯದಲ್ಲ. ಇದು ನಿರಂತರ ಆಗುತ್ತಿರಬೇಕೆಂಬುದು ಇಡೀ ಕನ್ನಡ ಜನತೆಯ ಆಶಯ ಆದರೂ ಕೂಡ ಸಂದರ್ಭದ ಹಿನ್ನೆಲೆಯಲ್ಲಿ ನಿಮ್ಮ ಆಲೋಚನೆಗಳು, ನಿಮ್ಮ ಉಪಾಯಗಳು ಏನಿವೆ?

ವಾಸ್ತವವಾಗಿ ನಾನು 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗದಗದಲ್ಲಿ ನಡೆಸಬೇಕೆಂದು ಚಿತ್ರದುರ್ಗ ಸಮ್ಮೇಳನ ಮುಗಿಸಿ ಬಂದ ನಂತರ ತೀರ್ಮಾನ ತೆಗೆದುಕೊಂಡೆವು. ಅದಕ್ಕಾಗಿ ಒಂದು ಪರಿಶೀಲನಾ ಸಮಿತಿಯನ್ನೂ ಕೂಡ ರಚಿಸಿದ್ದೆವು. ಚಂಪಾ ಅವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿ ಅವರಿಗೆ ಯಾರು ಯಾರು ಸಮ್ಮೇಳನವನ್ನು ಕೇಳುತ್ತಿದ್ದಾರೆಂದು ನೋಡಿಕೊಂಡು ಬರಲು ಹೇಳಿದ್ದೆವು. ಸಮಿತಿ ಶಿಫಾರಸ್ಸು ಮಾಡಿತು ಮತ್ತು ಎಲ್ಲಾ ಕಾರ್ಯಕಾರಿ ಸಮಿತಿ ಒಪ್ಪಿಗೆ ಕೊಟ್ಟಿತು, ಹೀಗೆ ಗದಗದಲ್ಲಿ ಮಾಡಬೇಕೆಂಬ ತೀಮರ್ಾನವನ್ನು ಕೈಗೊಂಡಿದ್ದೆವು. ಸಾಹಿತ್ಯ ಸಮ್ಮೇಳನ ಯಾವಾಗ ಎಂದು ಬಹಳಷ್ಟು ಜನ ಕೇಳುತ್ತಿರುತ್ತಾರೆ. ಹಾಗಾಗಬಾರದು, ಕನ್ನಡ ಸಾಹಿತ್ಯ ಸಮ್ಮೆಳನ ನವೆಂಬರ್ ತಿಂಗಳ ಕಡೆಯ ವಾರದಲ್ಲಿ ನಡೆಯಬೇಕೆಂಬತಹ ನಿಯಮವನ್ನು ರೂಪಿಸಿದ್ದೇನೆ. ಆದರೆ ಪ್ರಕೃತಿ ವಿಕೋಪದ ಕಾರಣದಿಂದ ಆಗ ನಡೆಸಲಾಗಲಿಲ್ಲ. ಅಲ್ಲಿದ್ದ ಜನ ನೆರೆ ಹಾವಳಿಯಿಂದ ತತ್ತರಿಸಿ ಹೋದಾಗ ನಾನೇ ಖುದ್ದಾಗಿ ಅಲ್ಲಿಗೆ ಹೋಗಿ, ಈ ಸಂದರ್ಭದಲ್ಲಿ ಸಮ್ಮೇಳನ ಮಾಡುವುದು ಸೂಕ್ತವಲ್ಲ ಎಂಬ ನಿರ್ಣಯವನ್ನು ನಾನೇ ಕೈಗೊಂಡೆ. ಆನಂತರದಲ್ಲಿ ವಾತಾವರಣ ತಿಳಿಯಾದ ಕಾರಣ ಅಲ್ಲಿರುವಂತಹ ಜನಪ್ರತಿನಿಧಿಗಳು, ಸಾಹಿತಿಗಳು ಮತ್ತು ಆಸಕ್ತರೆಲ್ಲರೂ ಕೂಡ, ಈ ತಿಂಗಳಲ್ಲಿ ನಡೆಸೊಣ ಎಂದು ಹೇಳಿದಾಗ (ಫೆಬ್ರವರಿ 19,20,21ನೇ ತಾರೀಖಿನಂದು) ಇಡೀ ಜನ ನೊಂದು ನಿಂತಿರೊ ಸಂದರ್ಭದೊಳಗೆ ನಮ್ಮ ಸಂಭ್ರಮದ ಆಚರಣೆ ಸಲ್ಲದು ಅನ್ನುವುದೇ ನನ್ನ ಆಶಯ. ಹಾಗಾಗಿ ಅತೀ ಅದ್ದೂರಿಯ ವಾತಾವರಣದಲ್ಲಿ ಸಮ್ಮೇಳನ ಇರಬಾರದು ಅನ್ನುವುದನ್ನು ಅಲ್ಲಿಯ ಸ್ವಾಗತ ಸಮಿತಿಗೆ ಮತ್ತು ಇಲ್ಲಿಯವರೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.

ಈ ವಿಚಾರದಲ್ಲಿ ನನಗೆ ಒಂದಷ್ಟು ಕಾಳಜಿ ಇದೆ. ಅದರಲ್ಲಿ ಮೊದಲನೆಯದಾಗಿ ಅದ್ದೂರಿಯ ಮೆರವಣಿಗೆಗೆ ವಿದಾಯ ಹೇಳಿದ್ದೇನೆ. ಊಟೋಪಚಾರದಲ್ಲೂ ಕೂಡ ಹೀಗೆಯೇ ಇರಬೇಕೆಂದು ಹೇಳಿದ್ದೇನೆ. ಬಂದವರೆಲ್ಲರಿಗೂ ಊಟ ಕೊಡಬೇಕು ಹಾಗು ಎಲ್ಲರಿಗೂ ಒಂದೇ ತರಹದ ಊಟದ ವ್ಯವಸ್ಥೆ ಆಗಬೇಕು. ಭೂರೀ ಭೋಜನದ ಅಗತ್ಯ ಇಲ್ಲ. ಜನಸಾಮಾನ್ಯರಿಗೆ ಶುಚಿ-ರುಚಿಯಾದ ಊಟವನ್ನು ನೀಡಬೇಕೆಂದು ಸ್ವಾಗತ ಸಮಿತಿಯವರೆಗೆ ಮೊದಲೇ ಹೇಳಿದ್ದೇನೆ. ಅದನ್ನು ಅವರೆಲ್ಲರೂ ಒಪ್ಪಿದ್ದಾರೆ. ಈ ರೀತಿಯ ವಾತಾವರಣವನ್ನು ನೋಡಿದಾಗ, ಎಲ್ಲಾ ಕಡೆಯು ನಾವು ಸಾಕಷ್ಟು ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಿದ್ದೇನೆ. ಕಡೆಯ ದಿನದ ವಿಚಾರ ಗೋಷ್ಠಿಯಲ್ಲಿ ಇದರ ಬಗ್ಗೆಯೂ ಒಂದು ವಿಷಯ ಇದೆ. ರಹಮದ್ ತರಿಕೆರೆ ಅವರು ಈ ವಿಚಾರವನ್ನು ಕುರಿತು ಮಾತನಾಡುತ್ತಿದ್ದಾರೆ. ದುರ್ಗದಲ್ಲಿ ನಡೆದ ಸಮ್ಮೇಳನಕ್ಕೆ ನಾನು 'ಶ್ರೀ ಸಾಮಾನ್ಯರ ಸಾಹಿತ್ಯ ಸಮ್ಮೇಳನ' ಅಂತ ಕರೆದಿದ್ದೆ. ಈ ಸಮ್ಮೇಳನ ಒಂದು ರೀತಿಯಲ್ಲಿ ನೊಂದ ಜನರ ನಡುವೆ ನಿಂತು, ಅವರ ಹೆಗಲ ಮೇಲೆ ಕೈ ಇಟ್ಟು ನೊಂದಿದ್ದೀರಿ, ಭಯಪಡಬೇಡಿ, ನಿಮ್ಮ ಜೊತೆ ನಾವಿದ್ದೇವೆ ಅಂತ ಹೇಳುವಂತಹ 'ಸಾಂತ್ವಾನ ಸಾಹಿತ್ಯ ಸಮ್ಮೇಳನ' ಅಂತ ಕರೆಯುವುದಕ್ಕೆ ನಾನು ಇಷ್ಟ ಪಡುತ್ತೇನೆ.

9. ಗೀತಾ ನಾಗಭೂಷಣ ಅವರು ಅಧ್ಯಕ್ಷರಾಗಿದ್ದಾರೆ. ಅವರ ಬಗ್ಗೆ ಒಂದೆರಡು ಮಾತು.

ನನಗಂತೂ ಗೀತಾ ನಾಗಭೂಷಣರ ಆಯ್ಕೆ ಬಗ್ಗೆ ಸಂಪೂರ್ಣ ತೃಪ್ತಿ, ಸಮಾಧಾನ ಮತ್ತು ಸಂತೋಷ ಇದೆ. ಎಲ್ಲಕ್ಕಿಂತ ಬಹುಮುಖ್ಯವಾಗಿ ನನಗನ್ನಿಸುವುದೇನೆಂದರೆ, ಅತ್ಯಂತ ಕೆಳವರ್ಗದಿಂದ ಬಂದಂತಹ ಒಬ್ಬ ಮಹಿಳೆ, ನೋವನ್ನೇ ಉಂಡು, ನೋವನ್ನೇ ಹಾಸಿ ಮಲಗಿಕೊಂಡು, ಆ ಎಲ್ಲಾ ತನ್ನ ಬದುಕಿನ ವಿಚಾರಗಳನ್ನು ಅಕ್ಷರ ರೂಪ ಕೊಟ್ಟು ಸಾಹಿತ್ಯ ಲೋಕದಲ್ಲಿ ಮೇಲೆದ್ದ ಸ್ವರೂಪ ಇದೆಯಲ್ಲಾ, ಅದು, ಮಣ್ಣೊಳಗೆ ಬೀಜ ನೆಟ್ಟು, ಅದು ಮೊಳೆತು, ಚಿಗುರಿ, ಮರವಾಗಿ ಹೂವಾಗಿ ಫಲಿತವಾಗುವಂತಹ ಪ್ರಕ್ರಿಯೆ ಇದೆಯಲ್ಲಾ, ಅಂತಹಾ ಒಂದು ಗಟ್ಟಿತನವನ್ನು ತೋರಿದಂತಹ ದಿಟ್ಟ ಮಹಿಳೆ ಆಕೆ. ಜೊತೆಗೆ ಸಾಹಿತ್ಯಲೋಕದಲ್ಲಿ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಪ್ರಶಸ್ತಿ, ಸಾಹಿತ್ಯ ಅಕ್ಯಾಡೆಮಿಯ ಪ್ರಶಸ್ತಿ, ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ, ಅದಕ್ಕಿಂತ ಹೆಚ್ಚಿನದು ಎಂದರೆ, ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಬಂಡಾಯದ ದನಿ ಅವರು. ಆ ಎಲ್ಲಾ ಹಿನ್ನೆಲೆಯನ್ನು ಗಮನಿಸಿ ಅವರನ್ನು ಈ ಬಾರಿಗೆ ಆಯ್ಕೆ ಮಾಡಿದ್ದೇವೆ. ಇಡೀ ನಾಡಿನ ಜನ ಕನ್ನಡ ಸಾಹಿತ್ಯ ಪರಿಷತ್ತನ್ನು ಹೊಗಳುತ್ತಿದ್ದಾರೆ ಒಳ್ಳೆ ಆಯ್ಕೆ ಎಂದು. ಯಾರನ್ನು ಕೇಳಿದರೂ ಇಂದು ಒಡಕು ಧ್ವನಿ ಬರಲಿಲ್ಲ ಅಂದರೆ ಪರಿಷತ್ತು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಇಡುತ್ತಿದೆ ಅನ್ನೊ ನಂಬಿಕೆ ನನಗೆ.

ಧನ್ಯವಾದಗಲು ಸಾರ್, ಸಮ್ಮೇಳನಕ್ಕೆ ನಮ್ಮ ಬಳಗ ಯಶಸ್ಸನ್ನು ಹಾರೈಸುತ್ತದೆ.

ಮಾಸ್ತಿ ಚಿತ್ರ ಸಂಪುಟಕನ್ನಡ ಸಾಹಿತ್ಯದ ಎರಡು ಆಧಾರ ಸ್ಥಂಬಗಳು ಹಿರಿಯ ಚೇತನಗಳು - ರಸರುಷಿ ಕುವೆಂಪು ಮತ್ತು ಮಾಸ್ತಿ. ನೋಡಲಿಕ್ಕೆ ಎಷ್ಟು ಖುಷಿಯಾಗ್ತದಲ್ಲ? ಈಗ ಇಂತ ಫೋಟೋ ಒಂದು ಸಿಗಲು ಸಾಧ್ಯವೇ? ಸುಮ್ಮನೆ ಊಹಿಸಿ ಕೊಳ್ಳಿ ಅನಂತಮೂರ್ತಿಗಳು ಮತ್ತು ಬೈರಪ್ಪನವರು ಒಂದೇ ಫ್ರೇಮಿನಲ್ಲಿ.....ಹಗಲುಗನಸು.....
ಎಡಕ್ಕೆ ಇವರು ಮಾಸ್ತಿಯವರ ಧರ್ಮಪತ್ನಿ . ಇವರೂ ಮಾಸ್ತಿಯೇ - ಒಳ್ಳೆ ಮೈಸೂರ್ ದಿವಾನ್ ಇದ್ದ ಹಾಗಿಲ್ಲ>ಮಾಸ್ತಿ ೪೦ರ ದಶಕದಿಂದ ೮೬ರಲ್ಲಿ ಅವರು ಕೊನೆಯುಸಿರೆಲೆಯುವವರೆಗೆ ತಪ್ಪದೆ ದಿನಾ ಸಾಯಂಕಾಲ ೬:೦೦ ಘಂಟೆಗೆ ಹೋಗಿ ೮:೦೦ ಘಂಟೆವರೆಗೆ ಕಾರ್ಡ್ಸ್ ಆಡುತ್ತಿದ್ದ ಬಸವನಗುಡಿಯ ಕ್ಲಬ್. `ಬೇಕಾದರೆ ಒಂದು ದಿನ ಸಂಧ್ಯಾವಂದನೆ ತಪ್ಪಿಸಿಯೇನು ಆದರೆ ಈ ಕ್ಲಬ್ ಅನ್ನು ಮಾತ್ರ ತಪ್ಪಿಸೋಲ್ಲ' ಎಂದು ಹೇಳಿಕೊಳ್ಳುತ್ತಿದ್ದರಂತೆ ಮಾಸ್ತಿ.

ಮಾಸ್ತಿಯವರ ಮೂರು ಕತೆಗಳುಇಂದಿನ ಅತಿಪ್ರಮುಖ ಕನ್ನಡ ಲೇಖಕರಲ್ಲೊಬ್ಬರು ವಸುಧೇಂದ್ರ. ವ್ಯಾವಹಾರಿಕವಾಗಿ IT ಜಗತ್ತಿನಲ್ಲಿ ಮುಳುಗಿ ಹೋಗಿದ್ದರೂ, ಕನ್ನಡ ಸಾಹಿತ್ಯದ ಸವಿರುಚಿಯನ್ನು ಉಂಡವರು, ಉಣಬಡಿಸುತ್ತಿರುವವರು. ವಸುಧೇಂದ್ರ ಕನ್ನಡ ಕಥಾಲೋಕದ ಪ್ರಪಿತಾಮಹ ಎಂದೇ ಗುರುತಿಸಲಾದ ಮಾಸ್ತಿಯವರ ಕಥೆಗಳು ಮತ್ತು ಅವರ ಅನುಭವದ ಕುರಿತು ಬರೆದಿದ್ದಾರೆ. ಅವರು ಹೇಗೆ ಇಂದಿಗೂ ಮೇಲ್ಪಂಕ್ತಿಯಲ್ಲಿ ನಿಂತು ಮಾರ್ಗದರ್ಶಕರಾಗಿದ್ದಾರೆ ಎಂದು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ....


ಇತ್ತೀಚೆಗೆ ಹಿರಿಯ ಗೆಳೆಯರೊಬ್ಬರು ನನ್ನನ್ನು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಸೊಗಸಾದ ಊಟವನ್ನು ಉಣಿಸಿ, ಮನೆಗೆ ಬರುವಾಗ ನನಗೆ ಉಡುಗೊರೆಯಾಗಿ ಮಾಸ್ತಿಯವರ ಒಂದು ಕಥಾಸಂಪುಟವನ್ನು ಕೊಟ್ಟರು. ನಾನು ಈಗಾಗಲೇ ಮಾಸ್ತಿಯವರ ಎಲ್ಲಾ ಕತೆಗಳನ್ನೂ ಓದಿಯಾಗಿತ್ತು. ಹಾಗಂತ ಅವರಿಗೆ ಹೇಳಿಯೂ ಬಿಟ್ಟೆ. ಅದಕ್ಕವರು ಏನಾಯ್ತೀಗ? ಮತ್ತೊಮ್ಮೆ ಮಾಸ್ತಿಯವರನ್ನು ಓದಿದರೆ ತಪ್ಪೇನೂ ಆಗುವುದಿಲ್ಲ ಎಂದು ಹೇಳಿ ಆ ಪುಸ್ತಕವನ್ನು ಕೊಟ್ಟರು. ನನಗೂ ಅವರ ಮಾತು ಸರಿಯೆನ್ನಿಸಿತು. ನಮ್ಮ ಹಿರಿಯರ ಸಾಹಿತ್ಯವನ್ನು ಓದಿದರೆ ನಮ್ಮ ಹುಟ್ಟೂರಿಗೊಮ್ಮೆ ಭೇಟಿ ಕೊಟ್ಟು ಬಂದಂತಹ ಅನುಭವವಾಗುತ್ತದೆ. ಪ್ರೀತಿ ಕೊಡುವ ಗೆಳೆಯರು, ಹಿರಿಯರು, ಬಂಧುಗಳು, ಶಾಲೆ, ಹಳ್ಳ, ಮರ, ಗಿಡಗಳಿರುವ ಹುಟ್ಟೂರು ಎಂದಾದರೂ ಬೇಸರ ಕೊಟ್ಟೀತೆ? ಈ ನೆಪದಿಂದಲಾದರೂ ಮಾಸ್ತಿಯವರ ಒಂದಿಷ್ಟು ಕತೆಗಳನ್ನು ಮತ್ತೊಮ್ಮೆ ಓದಿದರಾಯ್ತೆಂದು ಆ ಪುಸ್ತಕವನ್ನು ಸ್ವೀಕರಿಸಿದೆ. ಮನೆಗೆ ಬಂದ ತಕ್ಷಣ ಓದಿಯೂ ಬಿಟ್ಟೆ. ಮಾಸ್ತಿ ಮತ್ತೊಮ್ಮೆ ಇಷ್ಟವಾದರು. ಹೊಸದಾಗಿಯೂ ಕಂಡರು.

ಯಥಾಪ್ರಕಾರ ಯಾರ್ಯಾರೋ ಮಾಸ್ತಿಯವರಿಗೆ ಹೇಳಿದ ಕತೆಗಳಿವು. ನಮ್ಮ ಹತ್ತಿರವೇಕೆ ಯಾರೂ ಈ ತರಹ ಒಳ್ಳೆಯ ಕತೆಗಳನ್ನು ಹೇಳಿಕೊಳ್ಳುವದಿಲ್ಲ? ಎಂದು ಮಾಸ್ತಿಯವರ ಬಗ್ಗೆ ಅಸೂಯೆಯಾಗುವದರೊಳಗೆ ಇದು ಮಾಸ್ತಿಯವರ ತಂತ್ರವೇ ಹೊರತು ಹಾಗೆ ಯಾರೂ ಅವರಿಗೆ ಹೇಳಿರಲಿಕ್ಕಿಲ್ಲವೆಂದು ಅರ್ಥವಾಗುತ್ತದೆ. ಬದುಕಿನ ಬಗ್ಗೆ ಕಳಕಳಿ, ಒಳ್ಳೆಯತನದ ಬಗ್ಗೆ ಗೌರವ, ಇನ್ನೊಬ್ಬರ ಸಮಸ್ಯೆಗಳಲ್ಲಿ ಭಾಗವಹಿಸಿ ಅದನ್ನು ಪರಿಹರಿಸುವ ಉತ್ಸಾಹ, ಹಾಗೆ ಮಧ್ಯ ಬಂದು ಬುದ್ಧಿ ಹೇಳುವವರನ್ನು ಗೌರವಿಸುವ ಜನ, ಎಂತಹ ಸಂಗತಿಯನ್ನೂ ಉತ್ಪ್ರೇಕ್ಷೆ ಮಾಡದ, ಯಾವುದನ್ನೂ ನಗಣ್ಯಗೊಳಿಸದ ಮಾಸ್ತಿಯ ಕಥಾಲೋಕ ತನ್ನ ಪ್ರಾಮಾಣಿಕ ಆತ್ಮೀಯತೆಯಿಂದಲೇ ನಮ್ಮನ್ನು ಸೆಳೆಯುತ್ತದೆ.

ಈ ಸಂಪುಟದಲ್ಲಿದ್ದ 'ಆಚಾರ್ಯವಂತ ಅಯ್ಯಂಗಾರರು', 'ಎಮ್ಮೇ ಕಳವು' ಮತ್ತು 'ಪಕ್ಷಿಜಾತಿ' ಎಂಬ ಮೂರು ಕತೆಗಳನ್ನು ನಾನು ಆಯ್ಕೆ ಮಾಡಿಕೊಂಡಿರುವದಕ್ಕೆ ಮುಖ್ಯ ಕಾರಣ ಆ ಮೂರೂ ಕತೆಗಳು ಗಂಡು-ಹೆಣ್ಣಿನ ಅಕ್ರಮ ಸಂಬಂಧಗಳ ಕುರಿತದ್ದಾಗಿವೆ. ಮೂರು ಉದ್ದ ನಾಮಗಳನ್ನು ಸ್ಪಷ್ಟವಾಗಿ ಹಾಕಿಕೊಂಡು, ಬಿಳಿ ಪಂಜೆ, ಕರಿ ಕೋಟು ಧರಿಸಿ, ನಡೆ-ನುಡಿಯಿಂದ ಅಪ್ಪಟ ಮಡಿವಂತರಂತೆ ಕಾಣುತ್ತಿದ್ದ ನಮ್ಮ ಮಾಸ್ತಿ ಇಂತಹ ವಸ್ತುಗಳನ್ನು ಎಷ್ಟೊಂದು ಸಹಜವಾಗಿ, ಸರಳವಾಗಿ ನಿರ್ವಹಿಸಿಬಿಡುತ್ತಾರಲ್ಲ ಎಂಬುದು ನನ್ನ ಅಚ್ಚರಿ. ಎಂತಹ ಅಶ್ಲೀಲ ಸಂಗತಿಯನ್ನೂ ಮರೆಮಾಚದೆ, ಆದರೆ ಓದುಗನಿಗೆ ಅಸಹ್ಯವೆನ್ನಿಸದೆ ಹೇಳುವ ಅವರು ನನಗೆ ಅತ್ಯಂತ ಧೈರ್ಯವಂತ ಕಥೆಗಾರರಾಗಿ ಕಾಣುತ್ತಾರೆ.

'ಆಚಾರ್ಯವಂತ ಅಯ್ಯಂಗಾರರು' ಕತೆ ಡಾ. ಯು. ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿಯನ್ನು ನೆನಪಿಸುವಂತಹದ್ದು. ಈ ಕತೆಯನ್ನು ಯಾವ ಕಾಲದಲ್ಲಿ ಮಾಸ್ತಿ ಬರೆದರೆಂಬುದು ಈ ಪುಸ್ತಕದಲ್ಲಿ ನಮೂದಿಸಿಲ್ಲದಿರುವದರಿಂದ ಅದು 'ಸಂಸ್ಕಾರ'ದ ಕತೆಗೆ ಪ್ರತಿಕ್ರಿಯೆಯಾಗಿ ಬರೆದದ್ದೋ, ಅಥವಾ ಅದಕ್ಕೂ ಮುಂಚೆ ಬರೆದದ್ದೋ ನನಗೆ ತಿಳಿದಿಲ್ಲ. ಅತ್ಯಂತ ಮಡಿವಂತರಾದ ಅಯ್ಯಂಗಾರರೊಬ್ಬರು ತಮ್ಮ ಕುಟುಂಬವೊಂದನ್ನು ಕಳೆದುಕೊಂಡ ಮೇಲೆ ಕ್ರಿಶ್ಚಿಯನ್ ನರ್ಸ್ ಜೊತೆ ಕೂಡಿ ಬಾಳುವದಕ್ಕೆ ನಿರ್ಧರಿಸುತ್ತಾರೆ. ಆ ಇಳಿ ವಯಸ್ಸಿನಲ್ಲಿ ಇಬ್ಬರೂ ಮದುವೆಯಾಗುವದು ಬೇಡವೆಂದು ನಿರ್ಧರಿಸಿ, ಹಿರಿಯರೊಬ್ಬರ ಮುಂದೆ ತಾವು ಕೂಡಿ ಬಾಳುವದಾಗಿ ಹೇಳಿ, ಒಂದೇ ಮನೆಯಲ್ಲಿ ಗಂಡ-ಹೆಂಡಿರಂತೆ ಬಾಳಲಾರಂಭಿಸುತ್ತಾರೆ. ಹೆಂಡತಿ ನರ್ಸ್ ಆದ ಕಾರಣ ಯಾವಾಗಲೂ ಕೆಲಸದ ಮೇಲೆ ಹೊರ ಜಗತ್ತಿನಲ್ಲಿ ದುಡಿಯುತ್ತಿದ್ದರೆ, ಅಯ್ಯಂಗಾರರು ಮನೆಯಲ್ಲಿ ಅಡಿಗೆ ಮಾಡಿಕೊಂಡು ಅವಳಿಗೆ ಸಹಾಯ ಮಾಡುತ್ತಿರುತ್ತಾರೆ. ಒಂದು ದಿನ ಅಚಾನಕ್ಕಾಗಿ ಈ ಅಯ್ಯಂಗಾರರು ಕೊನೆಯುಸಿರೆಳೆಯುತ್ತಾರೆ. ಆದರೆ ವೈದಿಕ ಧರ್ಮವನ್ನು ಪರಿಪಾಲಿಸುತ್ತಿದ್ದ ಈ ಅಯ್ಯಂಗಾರರು ತಮ್ಮ ಸಂಸ್ಕಾರ ಕಾರ್ಯವನ್ನು ಶ್ರೀವೈಷ್ಣವರಿಂದಲೇ ಮಾಡಿಸಬೇಕೆಂದು ಹೆಂಡತಿಯಿಂದ ಮಾತು ಪಡೆದಿರುತ್ತಾರೆ. ಈ ಕ್ರಿಶ್ಚಿಯನ್ ಮಹಿಳೆ ಬೇರೆ ದಾರಿ ಕಾಣದೆ ನಿರೂಪಕರ ಮುಂದೆ ಬಂದು ಸಂಸ್ಕಾರದ ಸಹಾಯವನ್ನು ಕೇಳುತ್ತಾಳೆ. ಅದಕ್ಕೆ ತಗಲುವ ಎಲ್ಲಾ ಖರ್ಚನ್ನೂ ತಾನು ಭರಿಸುವದಾಗಿ ತಿಳಿಸುತ್ತಾಳೆ. ಅಲ್ಲಿಗೆ ಇದು 'ಸಂಸ್ಕಾರ' ಕಾದಂಬರಿಯ ಸಮಸ್ಯೆಯನ್ನೇ ಅತ್ಯಂತ ಸರಳವಾಗಿ ನಮ್ಮ ಮುಂದಿಡುತ್ತದೆ. ಆದರೆ ಮಾಸ್ತಿ ಆ ಸಮಸ್ಯೆಯನ್ನು ಬಗೆಹರಿಸುವ ರೀತಿ ಮಾತ್ರ ನಾವು ಬೆರಗುಗೊಳಿಸುವಷ್ಟು ಸರಳವಾದದ್ದಾಗಿದೆ. ಆ ನಿರೂಪಕರು ತಮ್ಮ ಶ್ರೀವೈಷ್ಣವ ಧರ್ಮದ ಹಲವು ಹಿರಿಯರನ್ನು ಮನೆಗೆ ಕರೆಸಿ, ವಿಷಯವನ್ನು ವಿವರಿಸಿ, ಆ ಸಂಸ್ಕಾರವನ್ನು ಮಾಡುವುದು ಮಾನವಧರ್ಮವೆಂದು ತಿಳಿಸುತ್ತಾರೆ. ಎಲ್ಲರೂ ಒಪ್ಪಿ ವಿಧಿವತ್ತಾಗಿ ಅಯ್ಯಂಗಾರರ ಸಂಸ್ಕಾರವನ್ನು ಮಾಡಿ ಮುಗಿಸುತ್ತಾರೆ. ಅಲ್ಲಿಗೆ ಕತೆ ಮುಗಿಯುತ್ತದೆ! ಸೂಕ್ಷ್ಮವಾಗಿ ನೋಡಿದರೆ ಈ ಕತೆಯಲ್ಲಿ ಬೆಚ್ಚಿ ಬೀಳುವಂತಹ ಸಂಗತಿಗಳಿವೆ. ಮದುವೆಯಾಗದೆ ಕೂಡಿ ಬಾಳುವ ಸಂಗತಿಯನ್ನು (ಲಿವಿಂಗ್ ಟುಗೆದರ್) ನಾವು ಈವತ್ತಿನ ವಿಶೇಷವೆನ್ನುವಂತೆ ಹೇಳುವದನ್ನು ಮಾಸ್ತಿ ಆಗಲೇ ತಿಳಿಸಿಬಿಟ್ಟಿದ್ದಾರೆ. ಬರೀ ಅಷ್ಟೇ ಅಲ್ಲ, ಅದರಲ್ಲಿ ಯಾವ ತಪ್ಪು-ಹುಳುಕನ್ನೂ ಮಾಸ್ತಿ ಕಾಣುವದಿಲ್ಲ. ಬದುಕನ್ನು ಅತ್ಯಂತ ವಿಶಾಲ ದೃಷ್ಟಿಕೋನದಿಂದ ಕಾಣುವ ಮಾಸ್ತಿಗೆ ಆ ಹೊಂದಾಣಿಕೆ ಅತ್ಯಂತ ಪ್ರಾಮಾಣಿಕವೆನ್ನಿಸುತ್ತದೆ. ಜೊತೆಗೆ ಅದರಿಂದ ಹುಟ್ಟುವ ಸಂಸ್ಕಾರದ ಸಮಸ್ಯೆಯೂ ಕ್ಷುಲ್ಲಕವಾಗಿ ಕಾಣುತ್ತದೆ. ಬ್ರಾಹ್ಮಣತ್ವ-ಶೂದ್ರತ್ವ ಎಂಬ ಕೂದಲು ಸೀಳುವ ರಸಿಕಸಿಗಳಿಲ್ಲದೆ ಸಮಸ್ಯೆಗೆ ಪರಿಹಾರವನ್ನು ಸುಲಭವಾಗಿ ಕೊಟ್ಟು ಬಿಡುತ್ತಾರೆ. ಬದುಕನ್ನು ನಾವು ಕ್ಲಿಷ್ಟವಾಗಿ ನೋಡಿದರೆ ಅದು ಕ್ಷಿಷ್ಟವಾಗಿ ನಮ್ಮನ್ನು ಕಂಗಾಲುಗೊಳಿಸುತ್ತದೆ, ಸರಳವಾಗಿ ನೋಡಿದರೆ ಅದು ಸರಳವಾಗಿ ತಲೆಬಾಗುತ್ತದೆ. ಕತೆಗಾರನ ವ್ಯಕ್ತಿತ್ವ ಯಾವ ಕಡೆ ವಾಲುತ್ತದೋ, ಕತೆಗೆ ಆ ಆಯಾಮ ದಕ್ಕುತ್ತದೆ, ಅಷ್ಟೇ!

'ಎಮ್ಮೇ ಕಳುವು' ಮತ್ತೊಂದು ವಿಭಿನ್ನ ಕತೆ. ತಾಯಿಯನ್ನು ಕಳೆದುಕೊಂಡ, ಅನಾರೋಗ್ಯ ತಂದೆಯನ್ನು ಸಾಕುವ ಜವಾಬ್ದಾರಿಯನ್ನು ಹೊತ್ತ, ಎಮ್ಮೆ ಸಾಕಾಣಿಕೆಯಿಂದ ಜೀವನ ಹೊರೆಯುವ ಹುಡುಗಿಯೊಬ್ಬಳ ಕತೆಯಿದು. ಅವಳಿಗೆ ಅಣ್ಣನೊಬ್ಬ ಇರುತ್ತಾನಾದರೂ, ಕೆಟ್ಟ ಚಟಗಳಿಗೆ ಬಿದ್ದ ಆ ಹುಡುಗ ಮನೆಗೆ ಯಾವ ಸಹಾಯಕ್ಕೂ ನಿಲ್ಲುವದಿಲ್ಲ. ಈ ಹುಡುಗಿ ಅಕಸ್ಮಾತ್ತಾಗಿ ಮದುವೆಯಾದ ಗೃಹಸ್ಥನೊಬ್ಬನ ಸಹವಾಸ ಮಾಡುತ್ತಾಳೆ. ಅವರಿಬ್ಬರ ಮಧ್ಯ ದೇಹ ಸಂಬಂಧವೂ ಬೆಳೆಯುತ್ತದೆ. ಈಗಾಗಲೇ ಕುಡಿತ-ವೇಶ್ಯೆಯರ ಚಟಕ್ಕೆ ಬಿದ್ದ ಅಣ್ಣನಿಗೆ ಈ ಸಂಗತಿ ಗೊತ್ತಾದದ್ದೇ ಅವಳ ಮೇಲೆ ಕೆಂಡ ಕಾರಲಾರಂಭಿಸುತ್ತಾನೆ. ಅವನ ಚೆಲ್ಲಾಟಗಳಿಗೆ ಬೇಕಾದ ಹಣವನ್ನು ಕೊಡಲು ಹುಡುಗಿ ನಿರಾಕರಿಸಿದ್ದೇ ಮನೆಯನ್ನು ಪಾಲು ಮಾಡಿಸಿಕೊಂಡು ಬಿಡುತ್ತಾನೆ. ಅಲ್ಲಿಗೂ ಅವನು ಸುಮ್ಮನಾಗದೆ ಹುಡುಗಿ ಸಾಕುತ್ತಿರುವ ಎಮ್ಮೆಗಳನ್ನು ಕದ್ದು ಮಾರಾಟ ಮಾಡಲು ಶುರುವಿಡುತ್ತಾನೆ. ಈ ಅನ್ಯಾಯವನ್ನು ಸಹಿಸದ ಹುಡುಗಿ ನಿರೂಪಕನಿಗೆ ನ್ಯಾಯ ಒದಗಿಸಿಕೊಡಲು ಮೊರೆ ಹೋಗುತ್ತಾಳೆ. ಒಂದಿಬ್ಬರು ಹಿರಿಯರ ಎದುರು ನ್ಯಾಯ ನಿರ್ಣಯವಾಗುವಾಗ ಹುಡುಗಿ ಅಣ್ಣನ ಬಗ್ಗೆ ದೂರು ಹೇಳಲು ಶುರು ಮಾಡಿದ್ದೇ, ಈ ಅಣ್ಣ ಅವಳ ಅಕ್ರಮ ಸಂಬಂಧವನ್ನು ಬಯಲಿಗೆಳೆದು ಅವಳ ಬಾಯಿ ಮುಚ್ಚಿಸಲು ನೋಡುತ್ತಾನೆ. ಅಲ್ಲಿಯವರೆಗೆ ಸಹಿಸಿಕೊಂಡಿದ್ದ ಹುಡುಗಿ ಈಗ ಧೈರ್ಯದಿಂದ ಮಾತನಾಡುತ್ತಾಳೆ. ನೀನು ನನ್ನ ಅಣ್ಣ. ನಮ್ಮಮ್ಮ ನಿನ್ನ ಮೊದಲು ಹೆತ್ತಳು. ಆಮೇಲೆ ನನ್ನ ಹೆತ್ತಳು. ಈ ತಂಗೀ ಹೆಸರು ಕೆಡಿಸೋಕೆ ಒಬ್ಬ ಅಣ್ಣ ಇರಲಿ ಅಂತ ನಿನ್ನ ಹೆತ್ತಳಾ? ನಿನಗೆ ಪ್ರಾಯ ಬಂತು. ನೀನು ಗಂಡು. ಹೆಣ್ಣು ಹುಡುಕ್ಕೊಂಡು ಹೋದಿ. ನನಗೂ ಪ್ರಾಯ ಬಂತು. ನಾನು ಹೆಣ್ಣು. ಬೀದೀಲಿ ಹೋಗೋ ಹಂಗಿಲ್ಲ. ಇರೋ ಕಡೆ ಇರಬೇಕು. ಒಬ್ಬರು ಬಂದು ಅಕ್ಕರೆ ಮಾತಾಡಿದರು. ಬಾಳುವ ಅಂದರು. ಮದುವೆ ಆಗೋಣ ಅಂದೆ. ಆಗೋಣ, ಸದ್ಯಕ್ಕೆ ಜೊತೀಗೆ ಇರು ಅಂದರು. ಇದ್ದೆ, ಬಹಳ ದೊಡ್ಡ ತಪ್ಪಾಯಿತಾ? ಗಂಡು ಮಾತ್ರ ಬೇಕಾದ ಆಟ ಆಡಬಹುದು. ಹೆಣ್ಣು ಮದುವೆ ಆಗುತೀನಿ ಅಂದವನೊಡನೆ ಸದರವಾಗಿರಬಾರದಾ? ಇದ್ದೆ, ಏನಾಯಿತು? ಎಂದು ಗುಡುಗುತ್ತಾಳೆ.

ಕಥಾವಸ್ತುವಿನ ಸೂಕ್ಷ್ಮತೆಯನ್ನು ನೋಡಿ. ಮದುವೆಗೆ ಮುಂಚೆ ದೇಹ ಸಂಬಂಧ ಬೆಳೆಸಿದ ಹುಡುಗಿ, ಅದೂ ಈಗಾಗಲೇ ಮದುವೆಯಾದವನೊಂದಿಗೆ! ಆದರೆ ಮಾಸ್ತಿ ಈ ಹುಡುಗಿಯ ಪರಿಸ್ಥಿತಿಯ ಬಗ್ಗೆ ಕನಿಕರ ವ್ಯಕ್ತಿ ಪಡಿಸುತ್ತಾರೆಯೇ ಹೊರತು ಎಲ್ಲೂ ಅವಳನ್ನು ಪಾಪದ ಕಟಕಟೆಯಲ್ಲಿ ನಿಲ್ಲಿಸುವದಿಲ್ಲ. ಕತೆಯಲ್ಲಿ ಕೊನೆಗೆ ಆ ಹುಡುಗಿಗೆ ನ್ಯಾಯ ಒದಗಿಸಿ ಕೊಡುತ್ತಾರೆ. ಮದುವೆಗೆ ಮುಂಚಿನ ದೇಹ ಸಂಬಂಧದಂತಹ (ಪ್ರಿ ಮೆರಿಟಿಯಲ್ ಸೆಕ್ಸ್) ಮೈಲಿಗೆಯ ಮಾತನಾಡುವಾಗಲೂ ಮಾಸ್ತಿ ಮಾನವೀಯತೆಯನ್ನು ಮರೆಯುವದಿಲ್ಲ. ಪಾತ್ರಗಳ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಅಂತಹ ಸಂಬಂಧಗಳ ಅಸಹಾಯಕತೆಯನ್ನು ವಿಶಾಲ ದೃಷ್ಟಿಕೋನದಿಂದ ಕ್ಷಮಿಸುತ್ತಾರೆ.

'ಪಕ್ಷಿಜಾತಿ'ಯಂತೂ ಬೆಚ್ಚಿ ಬೀಳಿಸುವಂತಹ ವಸ್ತುವನ್ನು ಹೊಂದಿರುವ ಕತೆ. ಆದರೆ ಓದುಗರನ್ನು ಬೆಚ್ಚಿ ಬೀಳಿಸುವ ಯಾವ ದುರುದ್ದೇಶವೂ ಇಲ್ಲದ ಮಾಸ್ತಿ, ತಮ್ಮ ಇತರ ಕತೆಗಳಂತೆಯೇ ಸರಳವಾಗಿ ಇದನ್ನೂ ನಿರೂಪಿಸುತ್ತಾರೆ. ಕತೆಯ ನಾಯಕ ಮಂಚ ನಂಜನಗೂಡಿನ ಕಡೆಯ ಹಳ್ಳಿಯೊಂದರಿಂದ ಓಡಿ ಬಂದು ಬೆಂಗಳೂರಿನಲ್ಲಿ ಸೌದೆ ಒಡೆಯುವ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ಅವನ ಹೆಂಡತಿ ಮತ್ತು ಆ ಹುಡುಗಿಯ ಅಣ್ಣ ಅವನನ್ನು ಹುಡುಕಿಕೊಂಡು ಬರುತ್ತಾರೆ. ಸೌದೆ ಅಂಗಡಿಯ ಒಡೆಯನ ಮುಂದೆ ನಾಯಕನ ಸಮಸ್ಯೆಯನ್ನು ಹೇಳುತ್ತಾರೆ. ಅವನ ಹೆಂಡತಿ ಮತ್ತು ಅವಳಣ್ಣ ಚಿಕ್ಕಂದಿನಲ್ಲಿ ಗಂಡು-ಹೆಣ್ಣಿನಂತೆ ಕೂಡಿರುತ್ತಾರೆ. ಅನಂತರ ಅದು ತಪ್ಪೆಂದು ತಿಳಿದು ಬಿಟ್ಟಿರುತ್ತಾರೆ. ಮಂಚನೊಂದಿಗೆ ತಂಗಿಯ ಮದುವೆಯಾಗುತ್ತದೆ. ಆದರೆ ಮಂಚ ಪೀಚಲು ದೇಹದವನು. ತಂಗಿಗೆ ಸರಿಯಾದ ಜೋಡಿಯಲ್ಲದೆ ಅವಳು ಸ್ವಲ್ಪ ಮಟ್ಟಿಗೆ ಹತಾಶಳಾಗಿರುತ್ತಾಳೆ. (ಈ ಗಂಡಿನೊಂದಿಗೆ ಬಾಳೋದು ಅಯ್ಯನವರ ಮನೆಯ ಊಟದಂತಾಯ್ತು ಎನ್ನುತ್ತಾಳೆ!) ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಅಣ್ಣನನ್ನು ಬಯಸಿದ ಈ ಹುಡುಗಿ ಒಂದು ರಾತ್ರಿ ಹೊಲದಲ್ಲಿ ಅಣ್ಣನನ್ನು ಕೂಡಿ ಬಿಡುತ್ತಾಳೆ. ಆಗ ಯಾರೋ ಇದನ್ನು ನೋಡಿದ್ದೇ ಊರಲ್ಲಿ ಸುದ್ದಿ ಮಾಡುತ್ತಾರೆ. ಮಂಚ ಅವಮಾನದಿಂದ ಬೆಂಗಳೂರಿಗೆ ಓಡಿ ಬರುತ್ತಾನೆ.

ಸೌದೆ ಅಂಗಡಿಯ ಯಜಮಾನನಿಗೆ ಇದು ಒಂದು ಕ್ಲಿಷ್ಟ ಸಮಸ್ಯೆ. ಅಣ್ಣ-ತಂಗಿಯರಿಬ್ಬರಿಗೂ ತಾವು ಮಾಡಿದ್ದು ತಪ್ಪು ಎಂದು ಗೊತ್ತಿದೆ. ಆದರೆ ಆ ಒಂದು ಚಿಕ್ಕ ತಪ್ಪಿಗೆ ಮಂಚ ಹೀಗೆ ಹೆಂಡತಿಯನ್ನು ಬಿಟ್ಟು ಬರಬಹುದೆ? ಎಂಬುದು ಅವರ ವಾದ. ಬೆಳವನ ಹಕ್ಕಿಗಳಲ್ಲಿ ಒಂದೇ ತಾಯಿಗೆ ಹುಟ್ಟಿದ ಹಕ್ಕಿಗಳು ಹೀಗೆ ಬಾಳುತ್ತವೆಂದು ಕೇಳಿದ್ದೇನೆ ಸ್ವಾಮಿ. ಇದೂ ಅಂತಹದೇ ಪಕ್ಷಿಜಾತಿಯ ಸ್ವಭಾವ. ಮತ್ತೆ ಅಂತಹ ತಪ್ಪು ಮಾಡುವದಿಲ್ಲ ಅಂತ ಅಣ್ಣ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಯಜಮಾನ ಎಲ್ಲರ ಜೊತೆಯಲ್ಲೂ ಮಾತನಾಡಿ, ಅಣ್ಣ-ತಂಗಿಯರು ಮತ್ತೊಮ್ಮೆ ಅಂತಹ ತಪ್ಪು ಮಾಡುವದಿಲ್ಲವೆಂದು ಮಾತು ತೆಗೆದುಕೊಂಡು, ಮಂಚನನ್ನು ಹೆಂಡತಿಯೊಡನೆ ಬಾಳಬೇಕೆಂದು ಒಪ್ಪಿಸಿ ಅವರೂರಿಗೆ ವಾಪಾಸು ಕಳುಹಿಸಿಕೊಡುತ್ತಾರೆ. ಆದರೆ ಮೊದಲ ಎರಡು ಕತೆಗಳಂತೆ ಈ ಕತೆಯಲ್ಲಿ ಎಲ್ಲೂ ಮಾಸ್ತಿ ಈ ಗಂಡು-ಹೆಣ್ಣಿನ ಸಂಬಂಧವನ್ನು ಒಪ್ಪಿಕೊಳ್ಳುವದಿಲ್ಲ. ಅದು ಸ್ಪಷ್ಟವಾಗಿ ವಿಕೃತಿಯೆಂದು ನಿಲುವು ತಾಳುತ್ತಾರೆ.

ಈ ಮೂರೂ ಕತೆಗಳು ಮಾಸ್ತಿಯ ವೈವಿಧ್ಯತೆಗೆ, ಬದುಕಿನ ವಿಶಾಲ ದೃಷ್ಟಿಕೋನಕ್ಕೆ, ತಪ್ಪನ್ನು ಕ್ಷಮಿಸುವ ಸಹೃದಯತೆಗೆ ಸರಳ ಉದಾಹರಣೆಗಳಷ್ಟೇ. ಹೆಂಡತಿ ರುಚಿಯಾಗಿ ಬೆಂಡೆಕಾಯಿ ಹುಳಿ ಮಾಡಿಲ್ಲವೆಂದು ಸನ್ಯಾಸ ಸ್ವೀಕರಿಸಿ ನಾಲ್ಕು ವರ್ಷದ ನಂತರ ಇನ್ನೊಮ್ಮೆ ಬೆಂಡೆಕಾಯಿ ಹುಳಿಯನ್ನು ತಿಂದಿದ್ದೇ ಮತ್ತೆ ಗೃಹಸ್ಥಾಶ್ರಮಕ್ಕೆ ಬರುವ ವ್ಯಕ್ತಿಯ ಹಾಸ್ಯಮಯ ಕತೆ, ಹಳ್ಳಿಯ ಹುಡುಗಿಯೊಬ್ಬಳನ್ನು ಮದುವೆ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಅವಳನ್ನು ವೇಶ್ಯೆಯಾಗಿಸಿ ಹಣ ಸಂಪಾದಿಸುವ ಷಂಡನ ಕೊಲೆಯ ರೋಚಕ ಕತೆ, ಕೋಲಾಟದ ಹಾಡಿನೊಳಗೆ ಅಡಕವಾಗಿರುವ ಒಡಪನ್ನು ಒಡೆದು ರಂಗನ ಗುಡಿಯ ಹಿತ್ತಲಿನಲ್ಲಿ ಅಡಗಿರುವ ರಾಮನ ವಿಗ್ರಹವನ್ನು ಪತ್ತೆ ಮಾಡುವ ಚಾರಿತ್ರಿಕ ಥ್ರಿಲ್ಲರ್ ಕತೆ, ತನ್ನ ಸಂಸಾರ ಹಾಳಾಗುತ್ತದೆಂದು ತಿಳಿದಿದ್ದರೂ ಪರಪುರುಷನ ಆಕರ್ಷಣೆಗೆ ಸೋತು ವೇಶ್ಯೆಯಾಗಿ ದುಃಖಿಸುವ ಹೆಣ್ಣಿನ ಕರುಣಾಜನಕ ಕತೆ, ಶ್ರೀಕೃಷ್ಣನ ಅಂತಿಮ ದಿನಗಳ ಕಳವಳದ ಪೌರಾಣಿಕ ಕತೆ, ಭಾರತಕ್ಕೆ ಬಂದು ಇಲ್ಲಿ ಹೊಂದಿಕೊಳ್ಳಲಾಗದೆ ವಾಪಾಸಾಗುವ ಬೇಬಿಲಾನ್ ರಾಜಕುಮಾರಿಯ ಕತೆ, ಕನ್ನಡಿಯೊಂದರಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕಾಣುವ ಮಾಯಾ ವಾಸ್ತವದ ಕತೆ - ಒಂದೇ ಎರಡೇ! ಮಾಸ್ತಿಯ ಕಥಾಪ್ರಪಂಚಕ್ಕೆ ಇತಿಮಿತಿಯಿಲ್ಲ. ಕಂಡ-ಕೇಳಿದ-ಓದಿದ-ಊಹಿಸಿದ ಎಲ್ಲಾ ಸಂಗತಿಗಳನ್ನೂ ಸಹಜವಾಗಿ ಮತ್ತು ಸರಳವಾಗಿ ಮಾಸ್ತಿ ಕತೆ ಕಟ್ಟಿಕೊಡುತ್ತಾರೆ. ಈ ಸಹಜತೆ ಮತ್ತು ಸರಳತೆಗಳೇ ಅವರಿಂದ ಇಷ್ಟೊಂದು ಕತೆಗಳನ್ನು ಬರೆಸಲು ಸಾಧ್ಯವಾಗಿಸಿದೆ. ಕೆಲಸದಲ್ಲಿ ತುಂಬಾ ಬಿಜಿಯಾಗಿದೀನಿ ಕಣ್ರೀ ಏನೂ ಬರೆಯೋಕೆ ಆಗ್ತಿಲ್ಲ ಅಂತ ಮಾತೆತ್ತಿದರೆ ನೆಪ ಹೇಳಿಕೊಂಡು ತಿರುಗಾಡುವ ಕತೆಗಾರರೆಲ್ಲರೂ ಮಾಸ್ತಿಯನ್ನೊಮ್ಮೆ ಓದಬೇಕು. ಅತ್ಯಂತ ದೊಡ್ಡ ಹುದ್ದೆಯಲ್ಲಿದ್ದರೂ ಪುಂಖಾನುಪುಂಖವಾಗಿ ಕತೆಗಳನ್ನು ಕನ್ನಡಕ್ಕೆ ಕಟ್ಟಿಕೊಟ್ಟ ಮಾಸ್ತಿ ಎಂದೂ ಅಂತಹ ನೆಪ ಹೇಳಿರಲಿಕ್ಕಿಲ್ಲ.

ಎಂಥಹ ಪಾತ್ರವನ್ನಾಗಲಿ, ಎಂಥಹ ಪರಿಸರವನ್ನಾಗಲಿ ಕಥೆಯಲ್ಲಿ ಹಿಡಿದಿಡುವ ತಂತ್ರವನ್ನು ಮಾಸ್ತಿ ಸೊಗಸಾಗಿ ರೂಢಿಸಿಕೊಂಡಿದ್ದರು. ಸಾಮಾನ್ಯ ಗೃಹಸ್ಥನಿಂದ ಹಿಡಿದು, ಮುನಿ, ಷಂಡ, ಕೊಲೆಗಾರ, ವೇಶ್ಯೆ, ಕಳ್ಳ, ಜೋಗಿ, ಸಾಬಿ, ಇಂಗ್ಲೀಷ್ ಪ್ರಜೆ, ಬ್ಯಾಬಿಲೋನಿನ ರಾಜಕುಮಾರಿ, ಶ್ರೀಕೃಷ್ಣ, ಹೊಯ್ಸಳ ರಾಜಕುಮಾರ - ಯಾರೇ ಆಗಲಿ, ಯಾವ ದೇಶದವರೇ ಆಗಲಿ, ಯಾವ ಕಾಲದವರೇ ಆಗಲಿ, ಮಾಸ್ತಿ ಅವರನ್ನು ಚಿತ್ರಿಸಲು ಅಂಜುವದಿಲ್ಲ. ಮಾನವರೆಲ್ಲರೂ ಒಂದೇ ಎಂಬ ಗಟ್ಟಿ ನಂಬಿಕೆಯಿರದಿದ್ದರೆ ಇಂತಹ ಶಕ್ತಿ ಕಥೆಗಾರನಿಗೆ ದಕ್ಕುವದಿಲ್ಲ. ಅತಿವಾಸ್ತವದ ವಿವರಗಳಿಗಾಗಿ ಒದ್ದಾಡದೆ, ಶ್ರೇಷ್ಠತೆಯ ವ್ಯಸನವಿಲ್ಲದೆ, ಆಡು ನುಡಿಯ ಬಳಕೆಯಿಲ್ಲದೆ, ತಮ್ಮ ಸ್ವಂತ ಅನುಭವಕ್ಕಷ್ಟೇ ಜೋತು ಬೀಳದೆ, ಸರಳವಾಗಿ ಗ್ರಾಂಥಿಕ ಭಾಷೆಯಲ್ಲಿ ಎಲ್ಲವನ್ನೂ ಹಿಡಿದಿಡುವ ಅವರ ಕಥಾತಂತ್ರಕ್ಕೆ ಆರೋಗ್ಯವೂ ಹೆಚ್ಚು, ಆಯುಷ್ಯವೂ ಹೆಚ್ಚು ಮತ್ತು ಓದುಗರೂ ಹೆಚ್ಚು.

ಮಾಸ್ತಿ ಕನ್ನಡದ ಆಸ್ತಿಯೆಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಆದರೆ ಅದಕ್ಕೂ ಮುಖ್ಯ ಸಂಗತಿಯೆಂದರೆ ಮಾಸ್ತಿ ಕನ್ನಡ ಕಥಾಲೋಕದ ಅಸ್ತಿಭಾರ (ತಳಹದಿ).