ದುಡಿದು ದಣಿದವರು











ಭಿತ್ತಿಚಿತ್ರಗಳು







ತಿಂಡಿ-ತೀರ್ಥ







ಅಥಿತಿಗಳ ಆಗಮನಕ್ಕೆ ಮುಂಚೆಯೇ ನಡುಗಿದ ವೇದಿಕೆ







ಉಸ್ತುವಾರಿಯ ಹೊಣೆ ಹೊತ್ತವರು





























ಕುಶಲಕರ್ಮಿಗಳ ಕೈಚಳಕ















ಅರಿಶಿನ-ಕುಂಕುಮ




ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಬೆಂಗಳೂರಿನ ತಾಯಂದಿರು "ಮಹಿಳಾ ಸಮಿತಿ"ಯೊಂದನ್ನು ನಿರ್ಮಿಸಿಕೊಂಡಿದ್ದಾರೆ.
ಸಮ್ಮೇಳನದ ಮೊದಲನೇಯ ದಿನ ಬರುವ ಮಹಿಳಾಮಣಿಗಳಿಗೆ, ಅರಿಶಿನ-ಕುಂಕುಮ ನೀಡಿ ಶುಭ ಕೋರುಲು ನಿರ್ಧರಿಸಿದ್ದಾರೆ.

ಇದು ಕೇವಲ ಪ್ರಯೋಗಿಕ ಮಾತ್ರ.

ಭರದಿಂದ ಸಾಗುತ್ತಿರುವ ರಂಗಸಜ್ಜಿಕೆ















ಜಿ.ವಿ.......







ಶಿಸ್ತಿನ ಸಿಪಾಯಿಯಂತೆ ತಂದೆಯವರೊಡನೆ ಕೂಡಿ ಕನ್ನಡ ಕೆಲಸಕ್ಕಾಗಿ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದು ತಿಂಗಳಿಗೂ ಹೆಚ್ಚು ದಿನದಿಂದ ಜಿ.ವೆಂಕಟಸುಬ್ಬಯ್ಯನವರ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುತ್ತಿರುವ ಜಿ.ವಿ.ಅರುಣರವರು ಪ್ರಜಾವಾಣಿ ಪತ್ರಿಕೆಗಾಗಿ ಬರೆದ ಲೇಖನ ಇಲ್ಲಿದೆ......

ಈ ಬಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ವೆಂಕಟಸುಬ್ಬಯ್ಯನವರ ಶಿಸ್ತಿನ ಉತ್ತರಾಧಿಕಾರಿ ಅವರ ಮಗ ಜಿ.ವಿ.ಅರುಣ. ತಂದೆಯ ವ್ಯಕ್ತಿಚಿತ್ರವನ್ನು ಅವರಿಲ್ಲಿ ಕಡೆದಿದ್ದಾರೆ...


‘ಚಂದ್ರಗಿರಿ’ - ಇಗೋ ಕನ್ನಡದ ಮೊದಲ ಲೇಖನದಲ್ಲಿ ಬಂದ ಊರಿನ ಹೆಸರು. ಬೇರೆ ಊರಿನಲ್ಲಿದ್ದ ವಿದ್ಯಾರ್ಥಿಯ ತಂದೆ, ಶಾಲೆಯ ಮುಖ್ಯೋಪಾಧ್ಯಾಯರಿಗೆ ಬರೆದಂತೆ ಇದ್ದ ಕಾಗದ ಮೊದಲ ಲೇಖನದಲ್ಲಿ ಇತ್ತು. ಆ ಲೇಖನದ ಹಸ್ತಪ್ರತಿಯನ್ನು ಓದಿ ನಾನು ಕೇಳಿದ್ದೆ ‘ಅಣ್ಣಾ! ಯಾವುದು ಈ ಊರು?’

ತಂದೆಯ ಮುಖದಲ್ಲಿ ಮೂಡಿದ ಮಂದಹಾಸ ನಗುವಿನಲ್ಲಿ ಕೊನೆಯಾಯಿತು! ‘ಯಾಕೆ ನಗ್ತಾ ಇದ್ದೀಯ?’ ನನ್ನ ಪ್ರಶ್ನೆ.

‘ಯಾವ ಕಾರಣಕ್ಕೆ ಈ ಅಂಕಣ ಪ್ರಾರಂಭ ಆಗ್ತಾ ಇದೆಯೋ, ಅದರ ಮೊದಲ ಫಲ ನಿನ್ನ ಈ ಪ್ರಶ್ನೆ! ಇನ್ನೂ ಮುದ್ರಣ ಆಗೇ ಇಲ್ಲ, ಪ್ರಶ್ನೆ ಇಷ್ಟು ಬೇಗ ಬಂತಲ್ಲ! ಅದಕ್ಕೆ ನಗು ಬಂತು. ಚಂದ್ರಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಕರ್ನಾಟಕದಲ್ಲಿ ಮೊದಲ ಉತ್ಖನನ ಪ್ರಾರಂಭವಾದ ಪ್ರದೇಶ ಅದು. ನಾವು ಬಿ.ಎ. ಆನರ್ಸ್‌ ತರಗತಿಯಲ್ಲಿದ್ದಾಗ ನಮಗೆ ಇತಿಹಾಸದ ಪ್ರಾಧ್ಯಾಪಕರಾಗಿದ್ದ ಎಂ.ಎಚ್.ಕೃಷ್ಣ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಉತ್ಖನನದ ರೀತಿ ನೀತಿಗಳನ್ನು ನಮಗೆ ವಿವರವಾಗಿ ತಿಳಿಸಿ ಕೊಟ್ಟಿದ್ದರು’. ಮುಂದಿನದು ಕೇಳಿದವರಿಗೆ ಕನ್ನಡದ ಗಣಿಯಿಂದ ಅಗೆದು ತೆಗೆದು ಸಾಣೆ ಹಿಡಿದುಕೊಟ್ಟ ಮಾಣಿಕ್ಯಗಳು.

ಒಮ್ಮೆ ‘ಸ್ವಾಮಿದೇವನೆ ಲೋಕ ಪಾಲನೆ ...’ ಎಂಬ ಪ್ರಾರ್ಥನಾ ಪದ್ಯವನ್ನು ಬರೆದವರು ಯಾರು? ಎಂಬ ಪ್ರಶ್ನೆಗೆ ವಿವರಗಳನ್ನು ನೀಡಿ, ಅದು ಅರಮನೆಯ ವಿದ್ವಾಂಸರಾಗಿದ್ದ ಅಯ್ಯಾ ಶಾಸ್ತ್ರಿಗಳ ರಚನೆ ಎಂದು ತಿಳಿಸಿದ್ದರು. ಇದನ್ನು ಓದಿದ ಮಾಜಿ ಎಂ.ಎಲ್.ಎ. ಒಬ್ಬರು ಶಿವಮೊಗ್ಗದಿಂದ ಕಾಗದ ಬರೆದು - ನೀವು ಮೈಸೂರು ಅರಮನೆಯ ಒಬ್ಬರು ವಿದ್ವಾಂಸರ ಹೆಸರನ್ನು ಮಾತ್ರ ಹೇಳಿದ್ದೀರಿ. ಅದೇ ಕಾಲದಲ್ಲಿ ಮತ್ತೊಬ್ಬ ವಿದ್ವಾಂಸರಾದ ಬಸಪ್ಪ ಶಾಸ್ತ್ರಿಗಳ ಬಗ್ಗೆ ಯಾಕೆ ಹೇಳಿಲ್ಲ? ಅವರ ಬಗ್ಗೆ ಬೇಕಾದರೆ ನಾನು ವಿವರಗಳನ್ನು ಕಳುಹಿಸುತ್ತೇನೆ - ಎಂದು ಬರೆದಿದ್ದರು. ಬಸಪ್ಪ ಶಾಸ್ತ್ರಿಗಳ ಬಗ್ಗೆ ನಮೂದಿಸಿಲ್ಲದ್ದಕ್ಕೆ ಆಕ್ಷೇಪವನ್ನೂ ಮಾಡಿದ್ದರು.

ತಂದೆ ಅವರಿಗೆ ಉತ್ತರಿಸಿದರು; ಅದರ ಸಾರಾಂಶ ಇಷ್ಟು: ‘ಬಸಪ್ಪ ಶಾಸ್ತ್ರಿಗಳು ಅರಮನೆಯ ವಿದ್ವಾಂಸರು, ಅವರ ಕನ್ನಡ ಶಾಕುಂತಲ ನಾಟಕಂ, ಮೈಸೂರ ಅರಸರ ಕಾಲದಲ್ಲಿ ಕಾರ್ಯಕ್ರಮಗಳ ಕೊನೆಗೆ ಶಾಂತಿ ಪಾಠವಾಗಿ ಹಾಡುತ್ತಿದ್ದ ಅವರು ರಚಿಸಿದ್ದ ‘ಕಾಯೌ ಶ್ರೀ ಗೌರಿ ...’ ಇವುಗಳ ಬಗ್ಗೆ ನಾನು ತಿಳಿದುಕೊಂಡಿದ್ದೇನೆ, ಅವರ ಗ್ರಂಥಗಳನ್ನು ಓದಿ ಸಂತೋಷ ಪಟ್ಟಿದ್ದೇನೆ. ನಾನು ಅಧ್ಯಾಪಕನಾಗಿ ಅರಿತುಕೊಂಡಿರುವುದು ಆಸಕ್ತ ವಿದ್ಯಾರ್ಥಿಗಳಿಗೆ ತಿಳಿಸಿದರೆ ಅದು ಅವರ ಮನದಲ್ಲಿ ಬೇರೂರುತ್ತದೆ. ನನಗೆ ಗೊತ್ತು ಎಂದು ಎಲ್ಲ ವಿಚಾರಗಳನ್ನು ತಿಳಿಸುತ್ತಾ ಹೋದರೆ, ಅವರಲ್ಲಿ ಆಸಕ್ತಿ ಕುಂದಿ ಯಾವುದನ್ನೂ ಗ್ರಹಿಸದ ಸ್ಥಿತಿಗೆ ಅವರು ಬಂದು ಬಿಡುತ್ತಾರೆ. ಅಧ್ಯಾಪಕನಾಗಿ ಅವರ ಆಸಕ್ತಿಯನ್ನು ಕೆರಳಿಸುವ ಕಾರ್ಯವನ್ನು ನಾನು ಮಾಡುತ್ತಿದ್ದೇನೆ. ‘ಸ್ವಾಮಿ ದೇವನೆ ...’ ಬಗ್ಗೆ ಬಂದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ಮುಂದೆ ಆಸಕ್ತರು ‘ಬಸಪ್ಪ ಶಾಸ್ತ್ರಿಗಳ ಬಗ್ಗೆಯೋ ಕಾಯೌ ಶ್ರೀ ಗೌರಿ ... ಬಗ್ಗೆಯೋ ಪ್ರಶ್ನೆ ಕೇಳಿದರೆ ತಕ್ಷಣ ಉತ್ತರಿಸುತ್ತೇನೆ. ಮತ್ತೊಂದು ವಿಚಾರ- ‘ಕಾಯೌ ಶ್ರೀ ಗೌರಿ, ಕರುಣಾಲಹರಿ .....’ ಎಂಬ ಹಾಡನ್ನು ‘ಇಂಗ್ಲಿಷ್ ಟ್ಯೂನ್’ ಗೆ ಹೊಂದಿಸಿ ನಮ್ಮ ಅಂದಿನ ಸಂಗೀತಗಾರರು ಹಾಡುತ್ತಿದ್ದರು!
ಇದಕ್ಕೆ ಅವರು ಕಾಗದ ಬರೆದು ‘ನೀವು ಅನುಸರಿಸುತ್ತಿರುವ ಮಾರ್ಗವನ್ನು ತಿಳಿಸಿದ್ದೀರಿ. ಅದನ್ನು ಓದಿ ನನಗೆ ಬಹಳ ಆನಂದವಾಯಿತು. ಅದೇ ಸರಿಯಾದ ಮಾರ್ಗ ಎನ್ನುವುದರಲ್ಲಿ ಎರಡು ಮಾತಿಲ್ಲ ... ನನಗೆ ‘ಇಂಗ್ಲಿಷ್ ಟ್ಯೂನ್’ ವಿಚಾರ ಹೊಸದು. ತಿಳಿಸಿದ್ದಕ್ಕೆ ಧನ್ಯವಾದಗಳು’ ಎಂದು ತಿಳಿಸಿದ್ದರು. ಇಗೋ ಕನ್ನಡದ ಪುಸ್ತಕ ರೂಪದಲ್ಲಿ ಈ ವಿಚಾರಗಳೂ ಸೇರಿವೆ.
ಒಮ್ಮೆ ಇಗೋ ಕನ್ನಡದ ಹಸ್ತಪ್ರತಿಯನ್ನು ನೋಡುತ್ತಿದ್ದೆ (ಇಗೋ ಕನ್ನಡದ ಎಲ್ಲ ಹಸ್ತಪ್ರತಿಗಳನ್ನು - ಅದು ಪ್ರಜಾವಾಣಿಗೆ ಹೋಗುವ ಮೊದಲು ನಾನು ಓದಿದ್ದೇನೆ ಎಂಬ ಹೆಮ್ಮೆ ನನಗಿದೆ). ‘ಪಿತ್ರಾರ್ಜಿತ’ ಎಂಬ ಪದಕ್ಕೆ ಅರ್ಥ ವಿವರಣೆ ಅಲ್ಲಿತ್ತು. ‘ಸ್ವಯಾರ್ಜಿತ’ದ ಬಗ್ಗೆ ಅಲ್ಲೇ ಸೇರಿಸಿ ಎಂದು ಕೇಳಿದೆ. ಅವರು ಇಲ್ಲ ಎಂದರು. ನಾನು ಪಟ್ಟು ಹಿಡಿದೆ- ‘ಪಿತ್ರಾರ್ಜಿತ’ದ ಬಗ್ಗೆ ತಿಳಿಯಲು ಉತ್ಸುಕನಾಗಿರುವವನಿಗೆ ‘ಸ್ವಯಾರ್ಜಿತ’ವೂ ಬೇಕಾಗುತ್ತದೆ ಎಂದು ನನ್ನ ವಾದ.

‘ಅವರು ಕೇಳಿರುವುದೇನು?’
‘ಪಿತ್ರಾರ್ಜಿತ’
‘ಅದಕ್ಕೆ ಮಾತ್ರ ನಾನು ಉತ್ತರ ಕೊಡಬೇಕು ಅಷ್ಟೆ’
‘ಸರಿ, ನನಗೆ ಸ್ವಯಾರ್ಜಿತ ಬೇಕು’
‘ನಿನಗೆ ಬೇಕಾದರೆ ಬರೆದು ಕೇಳು; ಆಮೇಲೆ ನೋಡೋಣ .....’





ಹೀಗೆ ಸಾಗಿತ್ತು ವಾದ ಪ್ರತಿವಾದ! ಮುಂದಿನ ಕೊಠಡಿಯಲ್ಲಿ ಇಬ್ಬರೂ ಏರಿದ ಧ್ವನಿಯಲ್ಲಿ ಮಾತನಾಡುತ್ತಿದ್ದಾಗ ಮನೆಗೆ ಪರಿಚಯದವರು ಬಂದದ್ದು ನಮಗೆ ಗೊತ್ತಾಗಲೇ ಇಲ್ಲ! ಅವರು ನನ್ನ ತಾಯಿಯ ಹತ್ತಿರ ‘ಮಗ ಏನೋ ಗಲಾಟೆ ಮಾಡ್ತಾ ಇದ್ದ ಹಾಗಿದೆ?!’ ಎಂದು ಕೇಳಿದ್ದಾರೆ. ನನ್ನ ತಾಯಿ ‘ಓ! ಅದಾ! ಅದು ಪ್ರತಿ ದಿನ ಇದ್ದದ್ದೆ! ತಾಳಿ ಬಂದೆ’ ಎಂದು ನಮ್ಮ ಬಳಿ ಬಂದು ‘ಸ್ವಲ್ಪ ಮೆತ್ತಗೆ ಮಾತಾಡಿಕೊಳ್ಳಬಾರದೆ! ಬಂದವರು ಏನು ತಿಳ್ಕೊಬೇಕು’ ಎಂದು ಗದರಿದಾಗಲೇ ನನಗೆ ಎಚ್ಚರ. ಆಚೆ ನಗುತ್ತಾ ಬಂದ ಮೂವರನ್ನೂ ನೋಡಿ ಬಂದದ್ದವರಿಗೆ ಆಶ್ಚರ್ಯ. ಏನಾಗುತ್ತಿತ್ತು ಎಂದು ತಿಳಿದ ಮೇಲೆ ಅವರಿಗೆ ಸ್ವಲ್ಪ ನಿರಾಸೆಯಾಗಿತ್ತು ಅಂತ ನನ್ನ ಗುಮಾನಿ!

ನಮ್ಮ ತಂದೆ ಸ್ಕೌಟ್ಸ್ ತಂಡದಲ್ಲಿ ರೋವರ್ ಆಗಿದ್ದ ವಿಚಾರ ಯಾರಿಗೂ ಗೊತ್ತಿಲ್ಲ. ಒಮ್ಮೆ ಪುಸ್ತಕದ ಕಟ್ಟೊಂದಕ್ಕೆ ನಾನು ಕಟ್ಟಿದ್ದ ದಾರ ಎತ್ತುತ್ತಿದ್ದಂತೆ ಬಿಚ್ಚಿಕೊಂಡುಬಿಟ್ಟಿತು. ಆಗ ಅವರು ‘ಎಂಟರ ಆಕಾರದ ಗಂಟು ಹಾಕು (Figure of eight knot )’ ಎಂದರು. ನಾನು ಕಣ್ಣು ಕಣ್ಣು ಬಿಟ್ಟಾಗ ಐದಾರು ತರಹದ ಗಂಟುಗಳನ್ನು ತೋರಿಸಿ ಕೊಟ್ಟರು. ಅದರ ಬಗ್ಗೆ ಕೇಳಿದಾಗ ಹೊರ ಬಂದದ್ದು ಸ್ಕೌಟ್ಸ್ ವಿಚಾರ. ಅವರು ದೊಡ್ಡಬಳ್ಳಾಪುರದಲ್ಲಿ 1941ರಲ್ಲಿ ನಡೆದ ಸ್ಕೌಟ್ಸ್ ಕ್ಯಾಂಪ್‌ಗೆ ಅಧ್ಯಾಪಕ ಪ್ರತಿನಿಧಿಯಾಗಿ ಬಂದಿದ್ದರು.

ಆಗ ಅವರು ಮಂಡ್ಯದ ಮುನಿಸಿಪಲ್ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಡಿಸೆಂಬರ್‌ನ ಕೊರೆಯುವ ಚಳಿ. ಬೆಳಗಿನ ಜಾವ ಕ್ಯಾಂಪ್ ಪಕ್ಕದ ಕೆರೆಗೆ ಈಜಲು ಅವರ ಸ್ನೇಹಿತ ಅಪ್ಪಾಜಿಗೌಡರೂ ಇವರ ಜೊತೆ ಈಜಲು ಧುಮುಕಿದರು. ಅವರು ಶ್ರೀರಂಗಪಟ್ಟಣದ ಸರ್ಕಾರಿ ಶಾಲೆಯ ಅಧ್ಯಾಪಕರು. ಕೆರೆಯ ಮಧ್ಯದವರೆಗೆ ಈಜಿ ಹಿಂದಿರುಗುವಾಗ, ದಡ ಇನ್ನೂ ದೂರ ಇದೆ ಎನ್ನುವಾಗ ನಮ್ಮ ತಂದೆಯ ಬಲಗಾಲು ಚಳಿಗೆ ಮರಗಟ್ಟಿಹೋಯಿತು. ‘ಅಪ್ಪಾಜಿ’ ಎಂದು ಕೂಗಿದರು. ಇವರ ಹಿಂದೆ ಈಜಿಗೊಂಡು ಬರುತ್ತಿದ್ದ ಅಪ್ಪಾಜಿಗೌಡರಿಗೆ ಇವರು ಕಾಲು ಹೊಡೆಯಲಾಗದಿದ್ದುದು ಗೊತ್ತಾಯಿತು. ಹತ್ತಿರ ಬಂದು ಅವರ ಕಾಲಿನಿಂದ ಇವರನ್ನು ಜೋರಾಗಿ ಒದೆದರು. ಹೀಗೆ ಮೂರು ನಾಲ್ಕು ಬಾರಿ ಒದ್ದು ಕಾಲಿನಿಂದ ನೂಕಿದಾಗ ಇವರು ದಡ ಸೇರಿ ಸುಧಾರಿಸಿಕೊಂಡರು! ‘ಅಂದು ಅಪ್ಪಾಜಿ ನಮಗೆ ಸ್ಕೌಟ್ ತರಬೇತಿಯಲ್ಲಿ ಹೇಳಿಕೊಟ್ಟಿದ್ದರ ಯಶಸ್ವೀ ಪ್ರಯೋಗ ಮಾಡಿದ್ದ.

ನನಗೆ ಕಾಲು ಮರಗಟ್ಟಿಹೋದ ಕಡೆ ನೀರು ಎರಡಾಳು ಆಳವಿತ್ತು. ಅವನೇನಾದರೂ ಹಿಂದಿನಿಂದ ಒದ್ದು ನೂಕದೆ, ನನ್ನ ಮುಂದೆ ಬಂದಿದ್ದರೆ ಗಾಬರಿಯಿಂದ ನಾನು ಅವನ ಕತ್ತು - ಕೈಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಿದ್ದೆ - ಇಬ್ಬರು ನೀರಿನ ತಳ ಸೇರುತ್ತಿದ್ದೆವು’.

ನಮ್ಮ ತಂದೆ ‘ಯಾವ ಪ್ರತಿಭಾವಂತ ಯುವಕನೂ ಹಣಕಾಸಿನ ತೊಂದರೆಯಿಂದ ಅವನಿಗೆ ಬೇಕಾದ ವಿದ್ಯಾಭ್ಯಾಸದಿಂದ ವಂಚಿತನಾಗಬಾರದು; ಹಾಗೇನಾದರೂ ಆದರೆ ಅದು ದೇಶಕ್ಕೆ ದೊಡ್ಡ ನಷ್ಟ’ ಎಂದು ಆಗಾಗ ಹೇಳುತ್ತಿರುತ್ತಾರೆ. ಅದರ ಬಗ್ಗೆ ಅನೇಕ ವಿಚಾರಗಳನ್ನು ಕುರಿತು - ಅದರ ಅನೇಕ ಮಗ್ಗಲುಗಳನ್ನು ಕುರಿತು ಮಾತುಕತೆಗಳು ಆಗಾಗ ನಡೆದಿವೆ. ನಾವು ಗ್ರಹಿಸುವಂತೆ ಇದಕ್ಕೆ ಅವರ ವಿದ್ಯಾರ್ಥಿ ಜೀವನವೇ ಕಾರಣ.

‘ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಪುಸ್ತಕಗಳನ್ನು ಕೊಳ್ಳಲು ಹಣ ಇರುತ್ತಿರಲಿಲ್ಲ. ಅನೇಕ ಬಾರಿ ಇಡಿ ಪುಸ್ತಕವನ್ನೇ ಬರೆದುಕೊಂಡು ಇಟ್ಟುಕೊಳ್ಳುತ್ತಿದ್ದೆ. ವಿದ್ಯಾರ್ಥಿ ವೇತನದ ಹಣದಲ್ಲಿ ಎಷ್ಟೋ ಬಾರಿ ಆರುಕಾಸಿಗೆ ಒಂದು ಮಸಾಲೆ ದೋಸೆ ತಿಂದು ಇಡಿ ದಿನವನ್ನು ಕಳೆದದ್ದುಂಟು. ಕೆಲವು ದಿನಗಳು ಬರಿಯ ನೀರೆ ಗತಿಯಾದ ಪ್ರಸಂಗಗಳೂ ಇದ್ದವು. ತೃತೀಯ ಬಿ.ಎ. ಆನರ್ಸ್‌ನಲ್ಲಿ ನನಗೆ ಅಲ್ಲಿಯವರೆಗೆ ಬರುತ್ತಿದ್ದ ವಿದ್ಯಾರ್ಥಿವೇತನ ಕೇವಲ ಅರ್ಧ ಅಂಕದಿಂದ ತಪ್ಪಿಹೋಯಿತು. ಈ ವಿಚಾರವನ್ನು ನಮ್ಮ ಪ್ರಿನ್ಸಿಪಾಲರಾಗದ್ದ ಜೆ.ಸಿ.ರಾಲೋ ಅವರಿಗೆ ತಿಳಿಸಿದೆ. ನನಗೆ ಶುಲ್ಕ ಕೊಡುವುದು ಸಾಧ್ಯವಿಲ್ಲ; ಹಾಗಾಗಿ ತರಗತಿಗೆ ಹಾಜರಾಗಲು ಅನುಮತಿ ನೀಡುತ್ತಿಲ್ಲ ಎಂದು ಅರಿತ ಅವರು, ತಾವೇ ಟೈಪ್‌ರೈಟರ್ ಮುಂದೆ ಕುಳಿತು ‘ಇವರಿಗೆ ಶಿಕ್ಷಣ ಶುಲ್ಕದಿಂದ ಸಂಪೂರ್ಣವಾಗಿ ಮಾಫಿ ಮಾಡಿದ್ದೇನೆ’ ಎಂದು ಟೈಪಿಸಿ, ಸಹಿ ಮಾಡಿ ಒಂದು ಪ್ರತಿ ನನಗೆ ಕೊಟ್ಟರು. ನಂತರ ‘Difference of half a mark! That was not just! The benefit of doubt should have gone to you. Now you may attend the classes’ ಎಂದು ಭುಜ ತಟ್ಟಿದರು. ಹೀಗಾಗಿ ಆ ವರ್ಷ ವಿದ್ಯಾರ್ಥಿವೇತನದ ಹಣವಿಲ್ಲದೆ ಬಹಳ ಕಷ್ಟವಾಗಿತ್ತು. ದಿನ ಪತ್ರಿಕೆಗಳನ್ನು ಹಂಚಿ ದುಡ್ಡು ಸಂಪಾದಿಸೋಣವೆಂದರೆ ಆಗಿನ ಕಾಲದಲ್ಲಿ ದಿನ ಪತ್ರಿಕೆಗಳನ್ನು ಕೊಳ್ಳುತ್ತಿದ್ದ ಜನರೂ ಕಡಿಮೆಯೆ! ಬಹಳ ಕಷ್ಟದ ಕಾಲ ಅದು’.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಾಗ ನಾನು ಪ್ರೌಢಶಾಲೆಯ ವಿದ್ಯಾರ್ಥಿ. ಆಗಲೇ ನನಗೆ ಮನೆಯಲ್ಲಿ ಕಛೇರಿಯ ರೀತಿ ನೀತಿಗಳ ಬಗ್ಗೆ ತರಬೇತಿ ಪ್ರಾರಂಭವಾಯಿತು. ಕಛೇರಿಯ ಕೆಲಸದಲ್ಲಿ ಇರಬೇಕಾದ ಶಿಸ್ತು, ಪ್ರತಿಯೊಂದು ಕೆಲಸವನ್ನು ಅಣಿಯಾಗಿ ಮಾಡುವ ರೀತಿ, ದಿನಚರಿಯಲ್ಲಿ ಮುಖ್ಯ ಕಾರ್ಯಕ್ರಮಗಳನ್ನು ಬರೆದಿಡುವುದು... ಹೀಗೆ ನನಗೆ ಒಳ್ಳೆಯ ಕಾರ್ಯದರ್ಶಿಗೆ ಬೇಕಾಗುವ ತರಬೇತಿ ಪ್ರಾಪ್ತವಾಯಿತು. ಮನೆಯಲ್ಲಿ ಅವರ ಕಾರ್ಯದರ್ಶಿಯ ಕೆಲಸ ಈಗಲೂ ಮುಂದುವರಿದಿದೆ. ಕೆಲಸದ ವಿಚಾರಕ್ಕೆ ಬಂದರೆ ಅವರು ಬಹಳ ನಿಷ್ಠುರ - ಕಠಿಣ. ತಮ್ಮ ಬಗ್ಗೆಯೂ ಅವರು ಅಷ್ಟೇ ಕಠಿಣವಾಗಿರುತ್ತಾರೆ.

ಅವರ ಪ್ರಿಯ ಮಿತ್ರ ರಾಮಚಂದ್ರ ಶರ್ಮರ ಮೊದಲ ಕವನ ಸಂಕಲನ ಹೃದಯ ಗೀತಕ್ಕೆ ಕವನಗಳನ್ನು ಆಯ್ದುಕೊಟ್ಟಿದ್ದರು. ಅದರಲ್ಲಿ ಇನ್ನೂ ಕೆಲವು ಕವನಗಳು ಸೇರಬೇಕೆಂಬ ಶರ್ಮರ ಆಸೆಗೆ ಇವರು ಒಪ್ಪಿರಲಿಲ್ಲ - ಅವುಗಳ ಸ್ವಾರಸ್ಯ ಆಯ್ದ ಕವನಗಳ ಮಟ್ಟಕ್ಕೆ ಏರುವುದಿಲ್ಲ ಎಂಬ ಕಾರಣದಿಂದ ಶರ್ಮರ ಮನಸ್ಸಿಗೆ ಸ್ವಲ್ಪ ಬೇಸರವಾಗಿತ್ತು. ಮುದ್ರಿತ ಪುಸ್ತಕದಲ್ಲಿ ಅವರು ಬರೆದು ಕೊಟ್ಟಿರುವುದು ಹೀಗೆ:

‘ಒಮ್ಮೊಮ್ಮೆ ನಿನ್ನ ನುಡಿ ಬಲು ಕಟು
ಮದ್ದು ಮೆಣಸಿನ ಸಾರು ಮಧುವಲ್ಲ ಕಣಾ, ಜೀವಿ!
ಕೃತಜ್ಞ ಹೃದಯದ ಒಲವಿನ ಉಡುಗೊರೆ
-ರಾಮಚಂದ್ರ ಶರ್ಮ’

ಆ ಮದ್ದು ಮೆಣಸಿನ ಸಾರಿನ ಅನುಭವ ನನಗೂ ಆಗಿದೆ? ನನ್ನ ‘ಆರೋಗ್ಯ’ ಕೆಡದಿರುವುದಕ್ಕೆ, ಅವರ ‘ಆರೋಗ್ಯ’ ಕೆಡದಿರುವುದಕ್ಕೆ ಅದೇ ಕಾರಣ ಎಂಬ ಅರಿವೂ ನನಗಿದೆ.

[ಕೃಪೆ: ಫ್ರಜಾವಾಣಿ]

ಅ......ಆ.....:

ಆಲೆಮನೆಯ ಇರುವೆಗಳ ಕನ್ನಡದ ಗೂಡು "ನುಡಿನಮನ" ಕಟ್ಟಿ ಇಂದಿಗೆ ಒಂದು ವರ್ಷ......ಈ ಸುಸಂದರ್ಭದಲ್ಲಿ ಆಲೆಮನೆ ಇರುವೆಗಳ ಗುಂಪು ಮತ್ತಷ್ಟು ಉತ್ಸಾಹಿ ಗೆಳೆಯರೊಂದಿಗೆ ದೊಡ್ಡ ಸೇನೆಯನ್ನೇ ನಿರ್ಮಿಸಿಕೊಂಡು, ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಸುತ್ತುವರಿಯಲು ಸನ್ನದ್ಧವಾಗಿದೆ. ಈ ಯುವ ಮನಸ್ಸುಗಳಿಗೆ ಚಿಲುಮೆಯ ಚೂಯಿಂಗಮ್ ನೀಡುತ್ತಿರುವ 'ಅವಧಿ'ಯ ಜಿ.ಎನ್. ಮೋಹನ್ರವರಿಗೆ ನುಡಿನಮನದ ಮುಖೇನ ನಮಿಸುತ್ತಿದ್ದೇವೆ.

ಡಿಸೆಂಬರ್ ನಿಂದ ಜನವರಿಗೆ ಬಂದು ಅಲ್ಲಿಂದ ಒದ್ದಾಡಿ ಫೆಬ್ರವರಿಯಲ್ಲೇ ದಿನಾಂಕ ಗಟ್ಟಿಯಾಗಿ ಸಮ್ಮೇಳನದ ಸಿದ್ಧತೆಗಳು ತ್ವರಿತಗತಿಯಲ್ಲಿ ಸಾಗಿವೆ. ಸಿಲಿಕಾನ್ ವ್ಯಾಲಿಯೆಂದೇ ಹೆಸರಾಗಿರುವ ಬೆಂಗಳೂರು ಐಟಿ-ಬಿಟಿ ಕಂಪೆನಿಗಳಿಂದ ತುಲುಕುತ್ತಿದ್ದರೂ ಅಗತ್ಯವಾದ ಹಣದ ನೆರವು ಕನ್ನಡದ ಕೆಲಸಕ್ಕೆ ದೊರೆಯದೇ ಇರುವುದು ನೋವಿನ ಸಂಗತಿ. ಕೈಯ್ಯಲ್ಲಿರುವ ಹಣದಿಂದಲೇ ನಲ್ಲೂರ್ ಪ್ರಸಾದ್ರವರು ಕೆಲಸ ಪ್ರಾರಂಭಿಸಿದ್ದು ಹಿರಿಯ-ಕಿರಿಯ ಸಾಹಿತ್ಯಾಸಕ್ತರು ಹಿನ್ನೆಲೆಯಲ್ಲಿ ದುಡಿಯುತ್ತಿರುವುದು 77ನೇಯ ಕನ್ನದ ಸಾಹಿತ್ಯ ಸಮ್ಮೇಳನಕ್ಕೆ ಒಂದು ವಿಶೇಷ ಕಳೆ ಕಟ್ಟುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಸಾಹಿತ್ಯ ಸಮ್ಮೇಳನವೆಂದರೆ ಅದೇನೋ ಒಂದು ಹುರುಪಿನ ಸಂಚಲನ, ಯುವಕರಲ್ಲಿ ಹಬ್ಬದ ಉತ್ಸಾಹ, ತಮ್ಮದನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಲು ತವಕಿಸುವ ಸಾಹಿತಿಗಳ ಗುಂಪು, ಓದುಗ ಪ್ರೇಮಿಗಳಿಗೆ ಪುಸ್ತಕ ಮೇಳದಲ್ಲಿ ಮುಳುಗುವ ಸದಾವಕಾಶ, ಎಲ್ಲವನ್ನೂ ನೋಡುತ್ತಾ, ಓಡಾಡುತ್ತಾ, ಭೋಜನದ ಬಗೆಗೆ ಗಮನ ಹರಿಸೋ ತಿಂಡಿ ಪ್ರಿಯರು, ವ್ಯಾಪಾರಿಗಳಿಗೆ ಸರಕು ಖಾಲಿ ಮಾಡೊ ಸುಗ್ಗಿ ಕಾಲ, ಹೀಗೆ ಇದು ಜಾತ್ರೆಯೋ, ಹಬ್ಬವೋ, ಸಂತೆಯೋ, ಮೇಳವೋ............ ಏನೆಂದು ನೀವೇ ಅರ್ಥೈಸಿಕೊಳ್ಳಬೇಕು.
ಆಲೆಮನೆ ಬಳಗ ಇನ್ನು ಕೆಲವೆ ನಿಮಿಷಗಳಲ್ಲಿ ಚಿತ್ರ ಹಾಗು ವೀಡಿಯೋ ಸಮೇತವಾಗಿ ನಿಮಗೆ ಸಮ್ಮೇಳನದ ಬೆಲ್ಲದ ಸವಿಯನ್ನು ಉಣಬಡಿಸಲಿದೆ.
ಹಾ.........ನಿಮ್ಮ ಸ್ನೇಹಿತರು, ಮನೆ-ಮಂದಿ ಎಲ್ಲರಿಗೂ ಈ ಸುದ್ದಿ ಮುಟ್ಟಿಸಿ, ಬೇಗ ಬೇಗ ಸಿದ್ಧರಾಗಿ ಕುಳಿತಿರಿ....... ಅದೋ ನಮ್ಮ ಇರುವೆಗಳ ಸಾಲು ಶಿಸ್ತಿನಿಂದ ಇತ್ತಲೇ ಬರುತ್ತಿದೆ........

ಅಖಾಡಕ್ಕೆ ಇರುವೆಗಳು .........

ಗದಗದ ಸಾಹಿತ್ಯ ಸಮ್ಮೇಳನದ ಯಶಸ್ವಿ ಪಯಣದ ನಂತರ ಮತ್ತೆ ಅ ಮತ್ತು ಆ ಜೊತೆಗೂಡಿ ಸನ್ನದ್ಧವಾಗಿದೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ..ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ.
ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’.

77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗುತ್ತಿರುವ ಬೆಂಗಳೂರನ್ನು ಆಲೆಮನೆಯ ಇರುವೆಗಳು ಸುತ್ತು ವರಿದು ಕ್ಷಣ-ಕ್ಷಣದ ಮಾಹಿತಿಯನ್ನು ಹೊತ್ತು ತರಲಿವೆ.