ಶಶಿಧರ್ ಭಟ್ - ಕನ್ನಡ ಪತ್ರಿಕೋದ್ಯಮದ ಹಿರಿ ತಲೆ. ಸುವರ್ಣ ನ್ಯೂಸ್ಗೆ ಒಂದು ಭದ್ರ ತಳಪಾಯ ಹಾಕಿಕೊಟ್ಟು ಈಗ ಜುಪಿಟರ್ ನೆಟ್ವರ್ಕ್ಸ್ನಲ್ಲಿದ್ದಾರೆ. ಅವರ ಅನುಭವ ಅಪಾರ. ೮೦ರ ದಶಕದಿಂದೀಚೆಗಿನ ಸಾಹಿತ್ಯ ಸಮ್ಮೇಳನಗಳ ಹಿನ್ನಲೆಯಲ್ಲಿ ಅವರು ಸಾಹಿತ್ಯ ಮತ್ತು ರಾಜಕೀಯದ ಸೂಕ್ಷ್ಮ ಸಂಬಂಧದ ಕುರಿತು ಮನೋಜ್ಞವಾಗಿ ಚರ್ಚಿಸಿದ್ದಾರೆ....

ನಾನು ವಿಷಯ ಪ್ರವೇಶವನ್ನು 80 ರ ದಶಕದಿಂದ ಮಾಡುತ್ತೇನೆ. ಯಾಕೆಂದರೆ ಎಂಬತ್ತರ ದಶಕದ ನಂತರದ ಬಹುತೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಒಬ್ಬ ಪತ್ರಕರ್ತನಾಗಿ ನಾನು ಪಾಲ್ಗೊಂಡಿದ್ದೇನೆ. ಈ ನನ್ನ ಅನುಭವದಲ್ಲಿ ಕೆಲವು ಸಾಹಿತ್ಯ ಸಮ್ಮೇಳನಗಳು ನಾನು ಹೇಳಲು ಹೊರಟಿರುವ ವಿಷಯಕ್ಕೆ ಬೇಕಾದ ಪೂರ್ವಭಾವಿ ವಿಚಾರಗಳನ್ನು ಒದಗಿಸುತ್ತವೆ.

ಆಗ ರಾಮಕೃಷ್ಣ ಹೆಗಡೆ ರಾಜ್ಯದ ಮುಖ್ಯಮಂತ್ರಿ. ಅವರ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಎಚ್. ಡಿ. ದೇವೇಗೌಡರು ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ್ದು ಸಮಾರೋಪ ಭಾಷಣ. ಆ ಭಾಷಣದಲ್ಲಿ ಅವರು ಪ್ರಸಕ್ತ ರಾಜಕೀಯ ಪರಿಸ್ಥಿತಿಂನ್ನು ಸಾಹಿತ್ಯದ ಮೂಲಕ ಪ್ರಸ್ತುತ ಪಡಿಸಿದ್ದರು. ಅದು ಸಾಹಿತ್ಯ ವಿಮರ್ಶೆಯೂ ಆಗಿತ್ತು. ರಾಜಕೀಯ ವಿಮರ್ಶೆಯೂ ಆಗಿತ್ತು. ಸಾಹಿತ್ಯ ಮತ್ತು ರಾಜಕೀಯದ ನಡುವಿನ ಸೂಕ್ಶ್ಮ ಸಂಬಂಧ ಮತ್ತು ಇದಕ್ಕೆ ಪೂರಕವಾಗಿರುವ, ವಿರೋಧವಾಗಿರುವ ಅಂಶಗಳನ್ನು ಹೊರಗಿಟ್ಟು ನೋಡಿದರೆ ಅದೊಂದು ಅಧ್ಬುತ ಭಾಷಣ. ಆದರೆ ನನಗೆ ಮೂಡಿದ್ದ ಪ್ರಶ್ನೆ ಎಂದರೆ ಸಾಹಿತ್ಯ ಜಾತ್ರೆಯನ್ನು- ಸಾಹಿತ್ಯ ಸಮ್ಮೇಳಗಳು ಸಾಹಿತ್ಯ ಜಾತ್ರೆ ಎಂದೇ ಕರೆಯುವುದು ಸೂಕ್ತ_ ಹೀಗೆ ರಾಜಕೀಯಕ್ಕೆ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು.

ಆದರೆ ಇಲ್ಲಿ ಇನ್ನೂ ಕೆಲವು ಪ್ರಶ್ನೆಗಳಿವೆ. ಕನ್ನಡ ಸಾಹಿತ್ಯದ ಇತಿಹಾಸವನ್ನು ಗಮನಿಸಿದರೆ ಅದು ಪ್ರಭುತ್ವವನ್ನು ಬಿಟ್ಟು ಇಲ್ಲ. ಹಳೆಗನ್ನಡದ ಬಹುತೇಕ ಕವಿಗಳು ರಾಜಾಶ್ರಯ ಪಡೆದವರೇ. ಆ ಮೂಲಕ ಕಾವ್ಯವನ್ನು ರಚಿಸುತ್ತ ಬಂದವರು. ಆಯಾ ರಾಜರಿಗೆ ವಂದಿ ಮಾಗಧರಾಗಿ ಕೆಲಸ ಮಾಡುತ್ತ ಬಂದವರು. ಪ್ರಾಯಶಃ ರಾಜಶ್ರಯ ಇಲ್ಲದಿದ್ದರೆ ಹಳೆ ಗನ್ನಡ ಸಾಹಿತ್ಯ ಇಷ್ಟು ಸಮೃದ್ಧವಾಗಿ ಬೆಳೆಯುತ್ತಲೇ ಇರಲಿಲ್ಲ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಪರಿಸ್ಥಿತಿ ಬದಲಾಗಿತ್ತು. ಸಾಹಿತ್ಯ ರೊಮ್ಯಾಂಟಿಕ್ ಕಾವ್ಯಗಳತ್ತ ಹೊರಳಿತ್ತು. ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಆಗ ಅಷ್ಟು ಮುಖ್ಯವಾಗಿರಲಿಲ್ಲ. ಆದರೆ ಕೆಲವರ ಬ?ಹಗಳಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಬಗೆಗಿನ ಪ್ರೀತಿ ಮತ್ತು ಬ್ರಿಟೀಷ್ ಆಡಳಿತವ ವಿರುದ್ಧದ ಪ್ರತಿರೋಧ ವ್ಯಕ್ತವಾಗಿದ್ದು ಉಂಟು. ಆದರೆ ಅದು ಕನ್ನಡ ಸಾಹಿತ್ಯದ ಸ್ಥಾಯಿ ಭಾಗವಾಗಲಿಲ್ಲ.

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಪರಿಸ್ಥಿತಿ ಬದಲಾಯಿತು. ನವೋದಯ ನವ್ಯದ ನಂತರದ ಬಂಡಾಯ ಮತ್ತು ದಲಿತ ಸಾಹಿತ್ಯಗಳು ಸಮಾಜಮುಖಿಯಾದವು. ಕಾವ್ಯ ಖಡ್ಗವಾಗುವ ಮಾತುಗಳು ಕೇಳಿಬಂದವು. ರೈತ ಗೀತೆಗಳು ಮೊಳಗತೊಡಗಿದವು. ಪ್ರತಿಭಟನೆಯ ಧ್ವನಿ ಇನ್ನಷ್ಟು ಗಟ್ಟಿಯಾಯಿತು.

ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಸರಳವಾದುದಲ್ಲ. ಇವೆರಡರ ನಡುವಿನ ಸಂಬಂಧ ಹೇಗಿರಬೇಕು ಎಂದು ನಿರ್ಧರಿಸುವುದಕ್ಕೆ ಮೊದಲು ಸಾಹಿತ್ಯದ ಉದ್ದೇಶದ ಬಗ್ಗೆ ಸ್ಪಷ್ಟತೆ ಬೇಕು. ಹಳೆಗನ್ನಡದ ಸಂದರ್ಭದಲ್ಲಿ ಸಾಹಿತ್ಯದ ಉದ್ದೇಶ ಸಾಮಾಜಿಕ ಬದಲಾವಣೆ ಆಗಿರಲ್ಲಿಲ್ಲ. ಸಾಮಾಜಿಕ ಬದ್ಧತೆ ಎಂಬ ಮಾತಿಗೆ ಆಗ ಅರ್ಥ ಇರಲಿಲ್ಲ. ಆಗಿನ ಕಾವ್ಯ ಪ್ರಪಂಚವೇ ಬೇರೆ. ಆದ್ದರಿಂದ ಅಂದಿನ ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧವನ್ನು ಈ ಕಾಲ ಘಟ್ಟದಲ್ಲಿ ವಿಶ್ಳೇಷಿಸುವುದು ಸಮಂಜಸವಲ್ಲ. ಒಂದೊಮ್ಮೆ ಈಗ ವಿಶ್ಳೇಷಿಸಿದರೂ ಇಂದಿನ ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧದ ಮಾನದಂಡವನ್ನು ಬಳಸುವುದು ಸಾಧ್ಯವಿಲ್ಲ.

ಯಾವಾಗ ಸಾಹಿತ್ಯ ಸಮಾಜಮುಖಿಯಾಗುತ್ತದೆಯೋ ಆಗ ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಬೇರೆ ಆಯಾಮವನ್ನು ಪಡೆದುಕೊಳ್ಳುತ್ತದೆ. ಹಾಗೆ ಸಾಹಿತ್ಯದ ಉದ್ದೇಶ ಸಾಮಾಜಿಕ ಬದಲಾವಣೆ ಎಂದಾಗುತ್ತದೆಯೋ ಆಗ ಸಾಹಿತ್ಯ ಮತ್ತು ಪ್ರಭೂತ್ವದ ಸಂಬಂಧವನ್ನು ಬೇರೆ ರೀತಿಯಲ್ಲಿ ನೋಡಬೇಕಾಗುತ್ತದೆ. ಸಾಹಿತ್ಯದ ಉದ್ದೇಶ ಮನರಂಜನೆಯೋ, ಮನಸ್ಸನ್ನು ಮುದಗೊಳಿಸುವುದೋ ಆಗಿದ್ದರೆ, ಆಗ ಸಾಹಿತ್ಯ ಮಾತು ಪ್ರಭುತ್ವದ ಸಂಬಂಧವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ.

ಕನ್ನಡಲ್ಲಿ ಪ್ರತಿಭಟನೆಯ ಕಾವ್ಯಕ್ಕೂ ದೀರ್ಘವಾದ ಇತಿಹಾಸವಿದೆ. ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಇದ್ದುಕೊಂಡೇ ತನ್ನ ವಚನಗಳ ಮೂಲಕ ಹೊಸ ಕ್ಫ್ರಂತಿಯ ಬೀಜವನ್ನು ಬಿತ್ತಿದ. ಹಾಗೆ ನಂತರ ಬಂದ ದಾಸ ಸಾಹಿತ್ಯ ಕೂಡ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಬದಲಾವಣೆಯ ಕನಸನ್ನು ಕಂಡಿತ್ತು ಎಂಬುದನ್ನು ನೆನಪಿಟ್ಟುಕೊಂಡರೆ ಸಾಹಿತ್ಯದ ಉದ್ದೇಶದ ಬಗೆಗಿನ ನಮ್ಮ ಚರ್ಚೆಗೆ ಹೊಸ ಆಯಾಮ ದೊರಕುತ್ತದೆ. ಹಾಗೆ ಸಾಹಿತ್ಯದ ಉದ್ದೇಶ ಸಾಮಾಜಿಕ ಬದಲಾವಣೆಯೂ ಆಗಿರಬೇಕು ಎಂಬ ವಾದಕ್ಕೆ ಪುಷ್ಟಿ ದೊರಕುತ್ತದೆ.

ಸಾಹಿತ್ಯ ಸಮಾಜದ ಪ್ರತಿಬಿಂಬವೇ ಆಗಿದೆ. ಹೀಗಾಗಿ ಸಮಾಜದ ಆಗುಹೋಗುಗಳಿಗೆ ಸಾಹಿತ್ಯಿಕವಾಗಿ ಪ್ರತಿಕ್ರಿಯಿಸುವುದು ಸಾಹಿತ್ಯದ ಕರ್ತವ್ಯ ಎಂದು ಸ್ಪಷ್ಟಪಡಿಸುತ್ತೇನೆ. ಈ ಮಾತುಗಳೊಂದಿಗೆ ನಾವು ಸಾಹಿತ್ಯ ಸಮ್ಮೇಳನಗಳು ಮತ್ತು ರಾಜಕೀಯದ ನಡುವಿನ ಸಂಬಂಧದ ಪ್ರಶ್ನೆಯನ್ನು ಕೈಗೆತ್ತಿಕೊಳ್ಳಬಹುದು.

ನಾನು ಮೊದಲು ಹೇಳಿದ ಹಾಗೆ, ಸಾಹಿತ್ಯ ಸಮ್ಮೇಳನಗಳು ಸಾಹಿತ್ಯಿಕ ಜಾತ್ರೆ. ಜಾತ್ರೆಯಲ್ಲಿ ಸಂಭ್ರಮ ಇರುತ್ತದೆ. ಇಂತಹ ಸಂಭ್ರಮವನ್ನು ಸಾಹಿತ್ಯ ಸಮ್ಮೇಳನಗಳು ಕನ್ನಡ ನಾಡ ಜನತೆಗೆ ನೀಡುತ್ತವೆ. ಹೀಗೆ ಸಂಭ್ರಮಿಸುವುದಕ್ಕೆ ವೆಚ್ಚ ಮಾಡುವುದಕ್ಕೆ ಸರ್ಕಾರದ ಹಣ ಬೇಕು. ಶಾಸಕರು ಸಚಿವರು ಬೇಕು. ಅವರನ್ನು ವೇದಿಕೆಯ ಮೇಲೆ ಕೂಡ್ರಿಸಿ ಹರ ತುರಾಯಿ ಕೊಟ್ಟು ಗೌರವಿಸಬೇಕು. ಯಾಕೆಂದರೆ ಜಾತ್ರೆಯ ಬೇಕಾದ ವ್ಯವಸ್ಥೆಗೆ ಬೇಕಾದ ಹಣವನ್ನು ನೀಡಿದವರು ಅವರು. ಇದೆಲ್ಲ ಸರಿ, ಆದರೆ ಭ್ರಷ್ಟಾಚಾರಿಗಳು ತಲೆ ಹಿಡುಕರು, ಅಧಿಕಾರ ಹಿಡಿದಿರುವ ಸಂದರ್ಭದಲ್ಲಿ ಅವರನ್ನು ಮೆರೆಸುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಬದ್ಧತೆ ಮತ್ತು ಬದಲಾವಣೆಯ ಸಾಹಿತ್ಯಿಕ ಉದ್ದೇಶದ ಗತಿ ಏನಾಗುತ್ತದೆ ? ಈ ಬಗ್ಗೆ ಸರಸ್ವತಿ ಪುತ್ರರು, ಆರಾಧಕರು ಆಲೋಚಿಸಲೇಬೇಕಾಗುತ್ತದೆ.

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂದು ಹೊರಾಟದ ಕನಸನ್ನು ಬಿತ್ತಿದವರು ಅಧಿಕಾರಸ್ಥರ ಪಕ್ಕದಲ್ಲಿ ವಿರಾಜಮಾನರಾದರೆ ಅವರ ಮಾತುಗಳ ಬಗ್ಗೆ ಬರಹದ ಬಗ್ಗೆ ಅಪನಂಬಿಕೆ ಬರುತ್ತದೆ. ಈಗ ಆಗುತ್ತಿರುವುದೂ ಅದೇ. ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಎಲ್ಲೋ ಮೂಲೆ ಸೇರಿರುತ್ತದೆ. ಸಾಹಿತ್ಯಕ ಚರ್ಚೆಗಳು ಅರ್ಥ ಕಳೆದುಕೊಂದಿರುತ್ತವೆ. ಭಾರೀ ವಿಜ್ರಂಭಣೆಯಿಂದ ನಡೆಯುವ ಮದುವೆಗಳ ಹಾಗೆ, ಊರ ಜಾತ್ರೆಯ ಹಾಗೆ, ಮಾರಿ ಹಬ್ಬದ ಹಾಗೆ ಈ ಸಮ್ಮೇಳನಗಳು ನಡೆಯುತ್ತವೆ. ಸಾಹಿತಿಗಳು, ರಾಜಕಾರಣಿಗಳಿಗೆ ಹತ್ತಿರವಾಗಲು ಸಮ್ಮೇಳನಗಳನ್ನು ಬಳಸಿಕೊಳ್ಳುತ್ತಾರೆ. ರಾಜಕಾರಣಿಗಳು ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇದನ್ನು ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಾರೆ.

ಸಾಹಿತ್ಯ ಸಮ್ಮೇಳನಗಳು ವಾರ್ಷಿಕವಾಗಿ ನಡೆಯುವ ತಿಥಿಯಂತಾಗಿವೆ. ಇದನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂಬುದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಉದ್ದೇಶ. ಯಾವುದೇ ಒಂದು ಕ್ರಿಯೆ ಸಂಪ್ರದಾಯವಾದರೆ ಅದು ಅರ್ಥ ಕಳೆದುಕೊಳ್ಳುತ್ತದೆ. ಅಲ್ಲಿ ಕ್ರಿಯಾಶೀಲತೆ ಮರೆಯಾಗುತ್ತದೆ. ಎಲ್ಲರೂ ಮಾಡುವುದನ್ನು ಮಾಡಿ ಮುಗಿಸುವುದಕ್ಕೆ ಮಾತ್ರ ಸೀಮಿತರಾಗುತ್ತಾರೆ. ಒಂದೇ ರೀತಿಯ ಘೋಷ್ಟಿಗಳು, ಅಧ್ಯಕ್ಷರ ಮೆರವಣಿಗೆ ಭಾಷಣ, ಊಟ ತಿಂಡಿ, ಪುಸ್ತಕ ಪ್ರದರ್ಶನ.

ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಪುನರಾವಲೋಕನ ಮಾಡಬೇಕಿದೆ. ಸಾಹಿತ್ಯದ ಉದ್ದೇಶದ ಬಗ್ಗೆ ಸ್ಪಷ್ಟತೆ ಬೇಕು. ಆಗ ಸಾಹಿತ್ಯ ಮತ್ತು ಪ್ರಭೂತ್ವದ ನಡುವಿನ ಸಂಬಂಧದ ಬಗ್ಗೆಯೂ ಸ್ಪಷ್ಟತೆ ದೊರಕುತ್ತದೆ. ಕೊನೆಯದಾಗಿ ಇನ್ನೊಂದು ಮಾತು; ಅದು ಹಾಸನ ಸಾಹಿತ್ಯ ಸಮ್ಮೇಳನದ ಸಂದರ್ಭ. ಅಲ್ಲಿ ಬಹುತೇಕ ಮಠಾಧಿಪತಿಗಳೇ ವೇದಿಕಯ ಮೇಲೆ ವಿರಾಜಮಾನರಾಗಿದ್ದರು. ಅವರು ನಡುವೆ ಸಿಕ್ಕಿಕೊಂಡ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರು. ಅವರು ವೇದಿಕೆಯಿಂದ ಕೆಳಕ್ಕೆ ಇಳಿದು ಬಂದ ಮೇಲೆ ಮಠಾಧಿಪತಿಗಳ ಸಾಂಗತ್ಯ ಹೇಗಿತ್ತು? ಎಂದು ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದೆ. ಅವರು ಸುಮ್ಮನೆ ನಕ್ಕರು.

ಈ ಸಾಹಿತ್ಯ ಸಮ್ಮೇಳನ ಮಠ ಮಾನ್ಯಗಳನ್ನು ವಿರೋಧಿಸುತ್ತಲೇ ಬಂದ ಪಾಟೀಲರನ್ನು ಮಠಾಧಿಪತಿಗಳ ಹತ್ತಿರ ತಂದಿತ್ತು ! ಇಂದಿನ ಸಾಹಿತ್ಯ ಜಾತ್ರೆ ಎಂತಹ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ನೈಜ ಉದಾಹರಣೆ ಎಂದು ನಾನು ಅಂದುಕೊಂಡಿದ್ದೇನೆ.