ಶರತ್ ಕಲ್ಕೋಡ್ - ಸದ್ಯ ಓ ಮನಸೇ ಪಾಕ್ಷಿಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಪತ್ರಿಕೋದ್ಯಮದ ಹಿರಿಯರು. ಕನ್ನಡದ ಆಡುನುಡಿಗಳನ್ನು ಮಾಧ್ಯಮಗಳಲ್ಲಿ ಅಪಹಾಸ್ಯ ಮಾಡುತ್ತಿರುವ ಪರಿಯನ್ನು ಕಂಡು ನೊಂದವರು. ಅದೇ ಅವರ ಲೇಖನಿಯಿಂದ ಹೊರ ಬಂದಿದೆ.

ಪ್ರಾದೇಶಿಕ ಆಡುನುಡಿ ಬಗ್ಗೆ ಏಕೆ ಈ ಅಲಕ್ಷ ಮನೋಭಾವ?

ಎಲ್ಲಾ ಭಾಷೆಗಳಲ್ಲೂ ಇರುವಂತೆ ಕನ್ನಡದಲ್ಲೂ ಪ್ರಾದೇಶಿಕ ಆಡು ನುಡಿಗಳಿವೆ. ಉದಾಹರಣೆಗೆ: ಧಾರವಾಡದ ಕನ್ನಡ, ಮಂಗಳೂರು ಕನ್ನಡ, ಗುಲ್ಬರ್ಗ ಕನ್ನಡ, ಇತ್ಯಾದಿ. ಆಯಾಯ ಪ್ರಾದೇಶಿಕ ಜೀವನ ಶೈಲಿ, ಉಡುಗೆ ತೊಡುಗೆಗಳಂತೆ ಭಾಷೆಯಲ್ಲೂ ವೈವಿಧ್ಯವಿರುವುದು ಸಹಜ. ಆದರೆ ಈ ಪ್ರಾದೇಶಿಕ ವೈವಿಧ್ಯವೇ ನಮ್ಮಲ್ಲಿ ತಮಾಷೆಯ ವಸ್ತುವಾಗುವುದು ಮಾತ್ರ ವಿಪರ್ಯಾಸದ ಸಂಗತಿ.

ಮಂಗಳೂರು (ದಕ್ಷಿಣ ಕನ್ನಡ) ಕನ್ನಡ ಬಹಳ ಪರಿಶುದ್ಧವೆಂದು ಅವರ ಭಾವನೆ. ದಕ್ಷಿಣ ಕನ್ನಡಿಗರ ಹೆಚ್ಚಿನವರ ಮಾತ್ರ ಭಾಷೆ ತುಳು, ಕೊಂಕಣಿ ಹಾಗೂ ಇನ್ನಿತರ ಭಾಷೆಗಳಾಗಿರುವುದು. ಅವರ ಕನ್ನಡದ ಸ್ಪಷ್ಟ ಬಳಕೆ ಕಾರಣವಾಗಿರಬಹುದು. ಆದರೆ ದಕ್ಷಿಣ ಕನ್ನಡದಲ್ಲೇ ಕುಂದಾಪುರ ಕನ್ನಡ, ಹವ್ಯಕ ಕನ್ನಡ ಪರಿಭೇದಗಳುಂಟು. ಕುಂದಾಪುರ ಕನ್ನಡದಲ್ಲಿ 'ಹೋಯ್ಕು', 'ಬರ್ಕು' ಪದಗಳ ಪ್ರಯೋಗ ಹೊಸಬರಿಗೆ ಬೇರೆ ಭಾಷೆಯಾಗಿ ಕಂಡರೆ ಆಶ್ಚರ್ಯದ ಮಾತಲ್ಲ. ಹಾಗೇ ಧಾರವಾಡದಲ್ಲಿ ಬಳಕೆಯಾಗುವ ಕನ್ನಡ ಭಾಷೆಯ ಉಚ್ಛಾರವೆ ಬೇರೆ. ಅಷ್ಟೇ ಅಲ್ಲ, ಅಲ್ಲಿ ಬಳಸುವ ಪದಗಳು ಮೈಸೂರಿನಲ್ಲಿ ಬಳಕೆಯಾಗುವ ಪದಗಳಿಗಿಂತ ಭಿನ್ನವಾದ ಅರ್ಥವನ್ನು ಕೊಡುತ್ತದೆ. ಕೆಲವೊಮ್ಮೆ ಅಪಾರ್ಥವನ್ನೂ ಎಡೆಮಾಡಿಕೊಡುತ್ತದೆ. ಆದರೆ ನಾನು ಇಲ್ಲಿ ವಿಶ್ಲೇಷಿಸಲು ಹೊರಟಿರುವುದು ಪ್ರಾದೇಶಿಕ ಭಾಷೆಯ ಶಬ್ಧ ಬಳಕೆ, ಶೈಲಿಗಳ ಕುರಿತು ಅಲ್ಲ. ಈ ಪ್ರಾದೇಶಿಕ ಭಾಷಾ ವೈವಿಧ್ಯವನ್ನು ನಮ್ಮ ದೃಶ್ಯ ಮಾಧ್ಯಮದವರು, ಹೇಗೆ ದುರುಪಯೋಗ ಪಡಿಸಿಕೊಂಡು ತಮಾಷೆಯ ವಸ್ತುವನ್ನಾಗಿ ಮಾಡಿ, ಆ ಮೂಲಕ ಆ ಪ್ರದೇಶದ ಜನರನ್ನು ಗೇಲಿ ವಸ್ತುವನ್ನಾಗಿ ಮಾಡಿದ್ದಾರೆ. ಹೀಗೆ ಮಾಡುವುದು ಸರಿಯೇ ಎನ್ನುವುದರ ಬಗ್ಗೆ.

ಸಿನಿಮಾ, ನಾಟಕ, ಟಿವಿ ಸಿರೀಯಲ್ಗಳಲ್ಲಿ, ಅಷ್ಟೇ ಏಕೆ ಕೆಲವೊಮ್ಮೆ ಬರಹಗಳಲ್ಲೂ ಕೂಡ, ಪ್ರಾದೇಶಿಕ ಭಾಷೆಯನ್ನು, ಅದರ ಸೊಗಡನ್ನು ತಮಾಷೆಯಾಗಿ ಬಳಸುವ, ಪ್ರಯೋಗಿಸುವ ವೈಖರಿಯನ್ನು ನೀವು ಈಗಾಗಲೇ ಗಮನಿಸಿರುತ್ತೀರಿ. ಇದಕ್ಕೆ ಹಲವು ದಶಕಗಳ ಇತಿಹಾಸವೇ ಇದೆ. ಅಡುಗೆ ಭಟ್ಟನ ಪಾತ್ರಕ್ಕೆ ಮಂಗಳೂರು ಕನ್ನಡ ಬಳಸುವುದು, ಪೊಲೀಸ್ನ ಪಾತ್ರಕ್ಕೆ ಉತ್ತರ ಕರ್ನಾಟಕ ಭಾಷೆ ಬಳಸುವುದು ಬಹಳ ಮಾಮೂಲಿಯಾದ ಹವ್ಯಾಸ. ಈ ರೀತಿಯ ಪ್ರಯೋಗಗಳ ಫಲವಾಗಿ ಆ ಪ್ರದೇಶದ ಜನರು ಹಾಗೂ ಅವರಾಡುವ ಭಾಷೆ, ಅವಹೇಳನಕ್ಕೆ, ತಮಾಷೆಗೆ ಗುರಿಯಾಗುತ್ತಾರೆ ಎಂಬ ಕಲ್ಪನೆಯ ಇಲ್ಲದೆ ಇದನ್ನು ಮಾಧ್ಯಮದವರು, ತಮ್ಮ ಅವಶ್ಯಕತೆಗೆ, ಅನುಕೂಲಕ್ಕೆ ತಕ್ಕಂತೆ ಬಳಸಿ ಕೊಳ್ಳುತ್ತಾರೆ. ಕೆಲವೊಮ್ಮೆ ಅದನ್ನು ಸಹಜವಾಗಿ ಕೂಡ ಬಳಸುವುದಿಲ್ಲ. ಅಶ್ಲೀಲವಾಗಿ, ಶೇಷಾರ್ಥ ಬರುವಂತೆ ಬಳಸುತ್ತಾರೆ. ಹೀಗೆ ಮಾಡುವುದು ಸರಿಯೆ?

ಇದು ಸರಿಯಾದ ಕ್ರಮವಲ್ಲ ಎಂಬುದು ಪ್ರಜ್ಞಾವಂತರೆಲ್ಲರ ಅನಿಸಿಕೆ. ಹೀಗೆ ಭಾಷೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಹಾಗೆ ಮಾಡುವುದರಿಂದ ಆಯಾಯ ಪ್ರದೇಶದ ಜನರನ್ನು ಅವಹೇಳನ ಮಾಡಿದಂತಾಗುತ್ತದೆ. ಭಾಷೆಗೂ ಹಾನಿ ಮಾಡಿದಂತೆ ಆಗುತ್ತದೆ ಎಂಬ ಎಚ್ಚರದ ಮಾತನ್ನು, ತಿಳುವಳಿಕೆ ನುಡಿಯನ್ನು ಮಾಧ್ಯಮದವರಿಗೆ ಯಾರೂ ಹೇಳಿದಂತಿಲ್ಲ. ಹೇಳಿದರೂ ಆ ಮಾತುಗಳನ್ನು ಅಲಕ್ಷಿಸುವ ಮಾಧ್ಯಮ ಮಂದಿಯೇ ಹೆಚ್ಚು.

ದೃಶ್ಯ ಮಾಧ್ಯಮದಲ್ಲಿ ಜಾತಿ ಬಗ್ಗೆ ನಿಂದನೆಯಾದರೆ, ಆಯಾಯ ಜಾತಿಯ ಜನ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಸೆನ್ಸಾರ್ ಮಂಡಲಿ ಎಚ್ಚರ ವಹಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಸರ್ಕಾರವೂ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಆದರೆ ಭಾಷೆ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಯಾಕೆಂದರೆ ಇಲ್ಲಿ ಜಾತಿ- ವರ್ಗದ ಪ್ರಶ್ನೆ ಏಳುವುದಿಲ್ಲ. ಭಾಷೆ ಆ ಪ್ರದೇಶದ ಸಮುದಾಯಕ್ಕೆ ಸೇರಿದ್ದು. ಹಾಗಾಗಿ ಪ್ರತಿಭಟಿಸುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಹೀಗೆ ಪ್ರಾದೇಶಿಕ ಆಡುನುಡಿಗಳನ್ನು ದೃಶ್ಯ ಮಾಧ್ಯಮಗಳು ಕಳೆದ ಹಲವು ದಶಕಗಳಿಂದಲೂ ದುರುಪಯೋಗ ಪಡಿಸಿಕೊಳ್ಳುತ್ತಲೇ ಬಂದಿದ್ದಾವೆ ಎಂಬುದು ನನ್ನ ವಾದವಲ್ಲ. ಅದಕ್ಕಿಂತ ಭಿನ್ನವಾಗಿ, ಪ್ರಾದೇಶಿಕ ಭಾಷೆಯ ಸೊಗಡನ್ನು, ಅದರ ಆಳ-ಅಗಲದ ವಿಸ್ತಾರವನ್ನು ಬಳಸಿಕೊಳ್ಳುವ ಮೂಲಕ, ಅದರ ಪ್ರತಿಷ್ಠೆ- ಶೋಭೆ ಹೆಚ್ಚಿಸಿದವರೂ ಇದ್ದಾರೆ ಎಂಬುದು ನಮ್ಮ ನಾಡ- ನುಡಿಯ ಪುಣ್ಯ. ಉದಾಹರಣೆಗೆ ಗಿರೀಶ ಕಾಸರವಳ್ಳಿಯವರ ಸಿನಿಮಾ- 'ತಾಯಿ ಸಾಹೇಬ', 'ದ್ವೀಪ', 'ಗುಲಾಬಿ ಟಾಕೀಸ್'- ಹೀಗೆ ಅವರ ಯಾವುದೇ ಸಿನಿಮಾ ನೋಡಿ, ಕಥೆ, ಸಂಭಾಷಣೆ, ವಸ್ತು, ತಂತ್ರಗಳ ಬಗ್ಗೆ ಎಚ್ಚರವಹಿಸುವಂತೆ, ಭಾಷೆಯ ಬಗ್ಗೆಯೂ ಕಾಸರವಳ್ಳಿ ಅವರು ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತಾರೆಂಬುದು ಗಮನಾರ್ಹ. ಹೆಮ್ಮೆಯ-ಸಂತೋಷದ ಅಂಶ ಕೂಡ. 'ಗುಲಾಬಿ ಟಾಕೀಸ್' ನಲ್ಲಂತೂ ಕುಂದಾಪುರ ಕನ್ನಡದ ಗಟ್ಟಿತನ, ಹಾಸ್ಯ- ವ್ಯಂಗ್ಯ, ದುಃಖ ದುಮ್ಮಾನ ಸಂತೋಷಗಳನ್ನು ಅಭಿವ್ಯಕ್ತಿಸಲು ಹೇಗೆ ಸಶಕ್ತವಾಗಿದೆ ಎಂಬುದನ್ನು ಚಿತ್ರದ ಉದ್ದಕ್ಕೂ ಗಮನಿಸಿ. ಪಾತ್ರ ಹಾಗೂ ದೃಶ್ಯಗಳ ಜೊತೆಜೊತೆಗೆ ಕುಂದಾಪುರದ ಭಾಷೆಯೂ ತನ್ನತನದ ಛಾಪು ಮೂಡಿಸುತ್ತದೆ. 'ಗುಲಾಬಿ ಟಾಕೀಸ್' ಕೇವಲ ದೃಶ್ಯ ಮಾಧ್ಯಮವಾಗಿ ಮಾತ್ರವಲ್ಲ; ಭಾಷಾ ಮಾಧ್ಯಮವಾಗಿ ಎಷ್ಟು ಅರ್ಥಪೂರ್ಣವಾಗಿ ಹೊರಹೊಮ್ಮಿದೆ ಎಂಬುದನ್ನು ಚಿತ್ರದುದ್ದಕ್ಕೂ ನೀವು ಸಂಭಾಷಣೆಯನ್ನು ಎಚ್ಚರದಿಂದಲೇ ಗಮನಿಸಬೇಕಾಗುತ್ತದೆ. ಅಂದರೆ ಪ್ರಾದೇಶಿಕವಾದ 'ಕುಂದಾಪುರದ ಕನ್ನಡ' ಅಭಿವ್ಯಕ್ತಿಯ ಭಾಷೆಯಾಗಿ ಪ್ರೇಕ್ಷಕನಿಗೆ ಎಲ್ಲೂ ಅಡ್ಡಿ-ಆತಂಕಗಳನ್ನು ಒಡ್ಡುವುದೇ ಇಲ್ಲ. ಬದಲಾಗಿ 'ಕುಂದಾಪುರದ ಕನ್ನಡ'ದ ಬಗ್ಗೆ ಪ್ರೇಕ್ಷಕರಿಗೆ ಹೊಸ ಅರಿವು ಮೂಡಿಸುವಲ್ಲಿ ಹೊಸ ಅನುಭವ ಕಟ್ಟಿಕೊಡುವಲ್ಲಿ ಸಫಲವಾಗುತ್ತದೆ. ದೃಶ್ಯ ಮಾಧ್ಯವನ್ನು ಸೃಷ್ಟಿಸಲು ಹೊರಟ ಮಂದಿಯ ಜವಾಬ್ದಾರಿ ಇರುವುದು ಇಲ್ಲೇ.

ಯಾವುದೇ ಘೋಷಣೆಗಳಿಲ್ಲದೆ ಪ್ರಾದೇಶಿಕ ಆಡುಭಾಷೆಗೂ ಹೊಸ ಆಯಾಮ ನೀಡುವಲ್ಲಿ ಸದ್ದು-ಗದ್ದಲ ಮಾಡದೇ ಗೆದ್ದಿರುತ್ತಾನೆ. ಆ ಮೂಲಕ ಆ ಪ್ರದೇಶಗಳ ಭಾಷೆಗೂ ಹೊಸತನ, ಮೌಲ್ಯ, ಘನತೆ, ಗಾಂಭೀರ್ಯ, ಒದಗಿಸಿಕೊಡುವ ಆಯುಧ. ಆ ಆಡು ನುಡಿಯ ಜನರ ಪ್ರೀತಿ-ವಿಶ್ವಾಸಗಳಿಸುವ ಮೂಲಕ ಅವರ ಹೃದಯದಲ್ಲಿ ವಿಶಿಷ್ಟವಾದ-ಸ್ಥಾನಮಾನ ಪಡೆಯುತ್ತಾನೆ. ಈ ರೀತಿ ಮಾಡುವುದು ಮಾಧ್ಯಮದ ಮಂದಿಗೆ ಒಂದು ರೀತಿಯ ಅಗ್ಗಳಿಕೆ ಅಲ್ಲವೇ? ಪ್ರಾದೇಶಿಕ ಭಾಷೆಗೆ ಹೊಸ ಮೆರಗೂ ನೀಡಿದಂತಾಗುತ್ತದೆ. ಇದು ಖಂಡಿತಾ ಸಾಮಾನ್ಯವಾದ ಸಾಧನೆಯೇನಲ್ಲ. ಕನ್ನಡದ ಪ್ರಾದೇಶಿಕತನವನ್ನೂ ಎಚ್ಚರದಿಂದ ಬಳಸುವಂತೆ ಪ್ರಜ್ಞಾವಂತ ಮಾಧ್ಯಮದ ಮಂದಿ ಕಾರ್ಯೋನ್ಮುಖರಾಗಲು ಇದು ಸಕಾಲಿಕ ಅಲ್ಲವೇ!?