ಗದಗ ಸಾಹಿತ್ಯ-ಕಲೆ-ಸಂಗೀತ-ರಂಗಭೂಮಿ-ಜನಪದ-ಧಾರ್ಮಿಕತೆ-ವಾಣಿಜ್ಯೋದ್ಯಮ-ಕ್ರೀಡೆ ಹೀಗೆ ಹಲವಾರು ಪರಂಪರೆಗಳಿಮ್ದ ಅಮರ ಕೀರ್ತಿ ಮೆರೆದ ಭವ್ಯ ಕರ್ಮಭೂಮಿ. ಇದು ಕವಿ ಕಾಶಿ ಎಂದು ಹೆಸರುವಾಸಿಯಾಗಿದೆ. ಇಲ್ಲಿನ ಸಾಮಾಜಿಕ-ಶೈಕ್ಷಣಿಕ ಕ್ಷೇತ್ರಗಳೂ ಬಹು ಸಕ್ರಿಯವಾಗಿವೆ. ಇಲ್ಲಿ ಈಗ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಎರಡನೆಯದು, ಗದಗ ಜಿಲ್ಲೆಯಾಗಿ ಮಾರ್ಪಾಟಾದಮೇಲೆ ಮೊದಲನೆಯದು. ನೆರೆ ಹಾವಳಿಯಿಂದಾಗಿ ನವೆಂಬರ್ನಲ್ಲಿ ನಡೆಯಬೇಕಿದ್ದ ಸಮ್ಮೇಳನ ಮುಂದೂಡಲಾಗಿ ಈಗ ಫೆಬ್ರವರಿಯಲ್ಲಿ ನಡೆಯುತ್ತಿದೆ. ಇದನ್ನು ಪರಿಷದಧ್ಯಕ್ಷರಾದ ಶ್ರೀ ನಲ್ಲೂರ್ ಪ್ರಸಾದ್ ಅವರು 'ಸಾಹಿತ್ಯ-ಸಾಂಸ್ಕೃತಿಕ ಸಾಂತ್ವನ' ಎಂದು ಕರೆದಿದ್ದಾರೆ.

ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಗದಗಿನ ಮೇರು ಕೊಡುಗೆ ಗದುಗಿನ ನಾರಣಪ್ಪ. ಈತನು ಇಲ್ಲಿನ ವೀರನಾರಯಣನ ಸನ್ನಿಧಿಯಲ್ಲಿ 'ಕರ್ನಾಟಕ ಭಾರತ ಕಥಾಮಂಜರಿ' ರಚಿಸಿದ್ದು 'ಗದುಗಿನ ಭಾರತ'ಎಂದೇ ಜನಪ್ರಿಯವಾಗಿದೆ. ಇವನಂತೆಯೇ ಚಾಮರಸ ಕೂಡಾ ತನ್ನ 'ಪ್ರಭುಲಿಂಗಲೀಲೆ' ರಚಿಸಿ ಗದಗಿನ ಹೆಸರನ್ನು ಇನ್ನಷ್ಟು ಎತ್ತರಕ್ಕೇರಿಸಿದ. 'ಧರ್ಮಾಂಮೃತ' ರಚಿಸಿದ ಮುಳುಗುಂದದ ನಯಸೇನ, ಹುಯಿಲಗೋಳ ನಾರಾಯಣರಾಯರು, ಲಕ್ಕುಂಡಿಯ ರನ್ನ ಮತ್ತು ಮುಕ್ತಾಯಕ್ಕರು, ಲಕ್ಷ್ಮೇಶ್ವರದ ಅಚಣ್ಯ, 'ಏಕೋತ್ತರ ಶತಸ್ಥಲ' ಬರೆದ ಮಹಾಲಿಂಗ, ಬೆಟಗೇರಿಯ ಸಿದ್ಧಮಲ್ಲಾಚಾರ್ಯ, ಶ್ರೀಧರಾಚಾರ್ಯ, ಬಸವಣ್ಣಯ್ಯ, ಕನ್ನಪ್ಪಯ್ಯ, ಅಷ್ಟೇ ಅಲ್ಲ, ದ.ರ.ಬೇಂದ್ರೆ, ಆಲೂರ ವೆಮ್ಕಟರಾಯರು, ಚೆನ್ನವೀರ ಕಣವಿ, ಪತ್ತಾರ ಮಾಸ್ತರ, ಸೋಮಶೇಖರ ಇಮ್ರಾಪುರ, ಜಿ.ಎಸ್.ಅಮೂರ. ಗಿರಡ್ಡಿ ಗೊವಿಂದರಾಜ, ಆರ್.ಸಿ.ಹಿರೆಮಠ, ಜಿ.ಬಿ.ಜೋಶಿ, ಡಾ.ವರದರಾಜ ಹುಯಿಲಗೊಳ ಮುಂತಾದ ಸಾಹಿತ್ಯ ದಿಗ್ಗಜರು ಗದಗ ಜಿಲ್ಲೆಯವರೇ.


ಕೋಮು ಸೌಹಾರ್ದ ತಾಣ :- ಗದಗಿನ ತೋಟದಾರ್ಯ ಶ್ರೀಪೀಠದ ಪೂಜ್ಯ ಶ್ರೀ ಡಾ.ಸಿದ್ಧಲಿಂಗ ಸ್ವಾಮಿಗಳು-ಭಕ್ತ ಶ್ರೀಮಂತ ಸ್ವಾಮಿ ದು ಬಡವ ಎಂಬ ತತ್ವದ ಇವರು, ದಾಸೋಹ ಅತಿ ಮುಖ್ಯವೆಂದು ಎಡೆಯೂರು, ಗದಗ, ಡಂಬಲಗಳಲ್ಲಿ ನಿತ್ಯ ದಾಸೋಹ ನಡೆಸುತ್ತಿದ್ದಾರೆ. ಅನ್ನ-ಪುಸ್ತಕ-ಶಿಕ್ಷಣ ಎಂಬ ಮೂರು ಬಗೆಯ ದಾಸೋಹಗಳನ್ನು ನೆರವೇರಿಸುತ್ತಿದ್ದಾರೆ. ಎಲ್ಲ ಮತ ಪಂಥದವರಿಗೆ ಶ್ರೀಮಠದ ಬಾಗಿಲನ್ನು ಮುಕ್ತವಾಗಿಟ್ಟು ಸರ್ವಧರ್ಮ ಪರಿಪಾಲನೆ ಮಾಡಿದ್ದಾರೆ. ಇದಕ್ಕಾಗಿ ಕೇಂದ್ರ ಸರಕಾರ 2001ರಲ್ಲಿ ಮಥಕ್ಕೆ 'ಕೋಮುಸೌಹಾರ್ದತಾ ಪ್ರಶಸ್ತಿ' ನೀಡಿ ಗೌರವಿಸಿದೆ. ಗೊಕಾಕ ವರದಿ ಜಾರಿಗೆ ತರಬೇಕೆಂಬ ಚಳವಳಿಯಲ್ಲಿ ಬೀದಿಗಿಳಿದು ಶ್ರೀಗಳು ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಇಲ್ಲಿನ ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠ ಹಿಂದೂ-ಮುಸ್ಲಿಮ್ ಭಕ್ತ ಭಾಂಧವರಿಂದ ತುಂಬಿತುಳುಕುತ್ತಿದೆ.


ಸಾಂಸ್ಕೃತಿಕ ಸ್ಪರ್ಶ:- ಗದಗ ರಂಗಭೂಮಿ ಮತ್ತು ಸಂಗೀತದ ತವರೂರು. ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಮ್.ಪಂಚಾಕ್ಷರಿ ಗವಾಯಿಗಳವರ ಪುಣ್ಯ ತಿಥಿಯಂದು ಮೂರು ದಿನಗಳಕಾಲ ಪ್ರತಿವರ್ಷವೂ ಇಲ್ಲಿ ಪ್ರವಚನ-ಹಿಂದೂಸ್ತಾನೀ ಸಂಗೀತ ಹರಿಯುತ್ತದೆ. ರಾಜ್ಯ ಸರಕಾರದ ಲಕ್ಕುಂಡಿ ಉತ್ಸವ ಇಲ್ಲಿ ಪ್ರತಿವರ್ಷವೂ ನಡೆಯುತ್ತಿದೆ. ತೋಂಟದಾರ್ಯ ಮಠದಲ್ಲಿ ಪ್ರತಿ ಸೊಮವಾರ ಶಿವಾನುಭವ ಕಾರ್ಯಕ್ರಮ ನಡೆಯುತ್ತದೆ. ಆಬಾಲವೃದ್ಧರಾದಿಯಾಗಿ ಎಲ್ಲ ಪ್ರತಿಭಾನ್ವಿತರಿಗೆಸಮ್ಮಾನ-ಗೌರವ ಕಾರ್ಯಕ್ರಮಗಳು ಜರುಗುತ್ತವೆ. ಇನ್ನುಲಿದಂತೆ ಸಾಂಸ್ಕೃತಿಕ ಸಮ್ಮೇಳನಗಳನ್ನು ನಡೆಸಲು ಇಲ್ಲಿ ಒಂದು ಸರಿಯಾದ ಕಲಾಭವನದ ಕೊರತೆಇದೆ. ಆದಾಗ್ಯೂ ಇಂಥ ಸಮ್ಮೇಳನಗಳಿಗೇನೂ ಕೊರತೆ ಇಲ್ಲ. ಅವುಗಲುಮಥಗಳು, ಕಲ್ಯಾಣಮಂಟಪಗಳು, ಪುಣ್ಯಾಶ್ರಮಗಲಲ್ಲಿ ನಡೆಯುತ್ತಿವೆ. ಕಲಾಚೇತನ, ಕಲಾವಿಕಾಸ ಪರಿಷತ್, ಬಣ್ಣದಮನೆ, ಆಭಿನಯರಂಗ, ಲಯಕಲಾ ಮನೆ, ರಾಜೇಶ್ವರಿ ಕಲಾಕುಟೀರ, ಹೀಗೆ ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಲೇ ಇರುತ್ತವೆ.


ನಾದಮಯ----ಆನಂದಮಯ :- ಭಾರತರತ್ನ ಭೀಮಸೇನ ಜೋಶಿಯವರು ಹುಟ್ಟಿದ್ದು ಗದಗದಲ್ಲೇ. ಉಭಯಗಾನವಿಶಾರದ ಪಂ. ಪಂಚಾಕಾಹರಿ ಗವಾಯಿಗಳು ಸಂವಿಗೀತ ಪಾಠಶಾಲೆಯ ಮೂಲಕ ಸರ್ವ ಜಾತಿ-ವರ್ಗಗಳ ಅಂಧ-ಅನಾಥ ಮಕ್ಕಳಿಗೆ ಸಂಗೀತ ಶಿಕ್ಷಣದ ಧಾರೆ ಎರೆದವರು. ಗದಗಿನ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳು ಅಂಧ-ಅನಾಥ-ಅಂಗಹೀನ ಮಕ್ಕಳಿಗೆ ಉಚಿತ ಊಟ ವಸತಿ ವಸ್ತ್ರದಾನ ಸಂಗೀತ-ಸಾಹಿತ್ಯದ ವಿದ್ಯಾದಾನವನ್ನು ನೀಡುತ್ತಿದ್ದಾರೆ. 97ರ ಹರೆಯದ ಪುಟ್ಟರಾಜರು ಬ್ರೈಲ್ ಲಿಪಿಯಲ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಸಂಗೀತಕ್ಕೆ ಹೊಸ ಚೀಜುಗಳನ್ನು ರಚಿಸಿದ್ದಾರೆ. ಪುಟ್ಟರಾಜ ಗವಾಯಿಗಳಿಗೆ ಈ ಸಾಲಿನ (2010) ಪದ್ಮಭೂಷಣ ಪ್ರಶಸ್ತಿಯಿತ್ತು ಕೇಂದ್ರ ಸರ್ಕಾರ ಗೌರವಿಸಿದೆ.

ರಂಗಭೂಮಿ:- ನಾಟಕಕಾರರಾದ ಹುಯಿಲಗೋಳ ನಾರಾಯಣರಾವ್, ಎಚ್.ಎನ್.ಹೂಗಾರ, ಸಂಕಣ್ಣ ಡಂಬಳ ಗರೂಡ ಸದಾಶಿವರಾಯರು, ಪಂ.ಭೀಮಸೇನ ಜೋಶಿ, ಶ್ರೀಪಾದರಾವ್ ಗರೂಡ, ಸುಶೀಲೇಂದ್ರ ಜೋಶಿ, ಜಯತೀರ್ಥ ಜೋಶಿ, ವೀರಭದ್ರಪ್ಪ ಹಡಗಲಿ, ರಾಜಣ್ಣ ಹೂಗಾರ, ಬಿ.ಭಾಸ್ಕರ್, ಮಹಾಲಕ್ಷ್ಮೀ ರಾಘವೇಂದ್ರಾಚಾರ್ಯ ಗುಡಿ, ಭಾರತಿ ಶಿರಹಟ್ಟಿ, ಫ,ಶಿ.ಭಾಂಡಗೆ, ಮುಂತಾದವರು ಗದಗದ ರಂಗಭೂಮಿಯ ರಂಗನ್ನೇರಿಸಿದ್ದಾರೆ. ದಿಹೆಚ್.ಎನ್.ಹೂಗಾರ ಅವರು ಗುಬ್ಬಿ ವೀರಣ್ಣ ಪುರಸ್ಕೃತಿಗೆ ಭಾಜನರಾಗಿದ್ದಾರೆ. ಅಭಿನಯರಂಗ, ಆರ್.ಎನ್.ಕೆ. ಮಿತ್ರಮಂಡಳಿ, ಎಂಬೆರಡು ಹವ್ಯಾಸಿ ರಂಗತಂಡಗಳು, ಮತ್ತು ಕುಮಾರೇಶ್ವರ ನಾಟಕ ಸಂಘ ಎಂಬ ಒಂದು ವೃತ್ತಿ ನಾಟಕ ಕಂಪನಿ ಸಕ್ರಿಯವಾಗಿವೆ.

ಮುದ್ರಣ ವಾಣಿಜ್ಯೋದ್ಯಮ :- ಇಲ್ಲಿನ ಮುದ್ರಕರು ಪ್ರಕಾಶಕರೂ ಒಂದು ಶತಮಾನದಿಂದಲೂ ಕ್ರಿಯಾಶೀಲವಾಗಿದ್ದಾರೆ. 75ಕ್ಕೂ ಹೆಚ್ಚು ಮುದ್ರಕರು, 25ಕ್ಕೂ ಹೆಚ್ಚು ಪ್ರಕಾಶಕರು ಗದಗದಲ್ಲಿದ್ದಾರೆ. ಶಾಬಾದಿಮಠ ಪ್ರಕಾಶನ, ಎಂ.ವಿ.ಅರಳಿ ಪ್ರಕಾಶನ, ವಿಜಯ ಪ್ರಕಾಶನ, ಸಂಕೇಶ್ವರ ಪ್ರಕಾಶನ, ವಿಕ್ರಮ ಪ್ರಕಾಶನ, ಪಾರು ಪ್ರಕಾಶನ, ಮುಂತಾದ ಪ್ರಕಾಶನಗಳು ಕಾದಂದಿಂದಲೂ ಪುಸ್ತಕ ಮುದ್ರಣ ಸೇವೆ ಮಾಡುತ್ತಾ ಕ್ರಿಯಾಶೀಲವಾಗಿದೆ. ಇತ್ತೀಚಿಗಿನ ಈಸ್ಟ್ರನ್ ಪ್ರಕಾಶನ ಗದಗಿಗೆ ಮಾಹಿತಿ ತಂತ್ರಜ್ಞಾನದ ಮುದ್ರಣದ ರುಚಿ ಹತ್ತಿಸಿದೆ.

ಕರ್ನಾಟಕ ಏಕೀಕರಣ ಹೋರಾಟಗಾರರಾದ ರೋಣ ತಾಲ್ಲೂಕಿನ ಜಕ್ಕಲಿಯ ಅನ್ನದಾನಪ್ಪ ದೊಡ್ಡಮೇಟಿಯವರು ಗಾಂಧೀಜಿಯವರನ್ನು ಗದಗಿಗೆ ಕರೆತಂದವರು. ಅದರ ನೆನಪಿಗೆ ರೈಲ್ವೆ ನಿಲ್ದಾಣದ ಮಾರ್ಗದ ವೃತ್ತಕ್ಕೆ 'ಗಾಂಧಿ ಸರ್ಕಲ್' ಎಮ್ಬ ನಾಮಕರಣವಿದೆ. ಗದಗದ ಹೆಸರಾಂತ ಕಲಾವಿದರಾದ ಸಿ.ಎನ್.ಪಾಟೀಲರು ಕನ್ನದ ಭುವನೇಶ್ವರಿಯ ಚಿತ್ರ ಬರೆದ ಮೊದಲಿಗರು. ಕಣಗಿನ ಹಾಳದ ಸಿದ್ದನಗೌಡ ಪಾಟೀಲ್ ಏಷಿಯಾದಲ್ಲೇ ಪ್ರಪ್ರಥಮ ಸಹಕಾರಿ ಬ್ಯಾಂಕ್ನ್ನು ಇಲ್ಲಿನ ಒಂದು ಚಿಕ್ಕ ಹಳ್ಳಿಯಲ್ಲಿ ಪ್ರಾರಂಭಿಸಿ ಇತಿಹಾಸ ಸ್ಥಾಪಿಸಿದ್ದಾರೆ.

ಶಿಲ್ಪಕಲೆ, ಪ್ರವಾಸಿ ತಾಣಗಳು:- ಗದಗಿನ ವೀರನಾರಯಣ ದೇವಸ್ಥಾನ, ಚಾಲುಕ್ಯ ಹೊಯ್ಸಳ ಹಾಗು ವಿಜಯನಗರ ಶಿಲ್ಪ ಮಾದರಿಗಳ ಸಂಗಮ. ಹೊಯ್ಸಳರ ಉಪರಾಜಧಾನಿಯಾಗಿ ಮೆರೆದ ಲಕ್ಕುಂಡಿಯಲ್ಲಿ ಪುರಾತನ ದೇವಾಲಯಗಳು, ಶಾಸನಗಳು, ಬಾವಿಗಳು, ಊರಿನ ಭವ್ಯ ಪರಂಪರೆಯನ್ನು ಸಾರುತ್ತವೆ. ಮಾಗಡಿ ಕೆರೆಯಲ್ಲಿ ವಿದೇಶೀ ಪಕ್ಷಿಗಳ ಕಲರವ, ಕಪ್ಪತಗುಡ್ಡದ ಆಯುರ್ವೇದದ ಔಷದ ವನ, ಬಿಂಕದ ಕಟ್ಟೆ ಪ್ರಾಣಿ ಸಂಗ್ರಹಾಲಯ, ದಕ್ಷಿಣ ಕಾಶಿ ಎನಿಸಿದ ಗಜೇಂದ್ರಗಢ, ಡಂಬಳ, ಇಟಗಿ, ಪುಲಿಗೆರೆ, ಲಕ್ಷ್ಮೇಶ್ವರಗಳಲ್ಲಿನ ದೇವಾಲಯಗಳು ಶಿಲ್ಪಕಲಾಶೈಲಿಗೆ ಅತ್ಯುತ್ತಮ ಉದಾಹರಣೆಗಳು.


ಕೃಪೆ- ತರಂಗ 25 ಫೆಬ್ರವರಿ ೨೦೧೦
- ಕಾವೆಂಶ್ರೀ ಅವರ ಲೇಖನದ ಸಂಕ್ಷಿಪ್ತ ರೂಪ.