ನೀವು ಇತ್ತೀಚಿಗೆ ಓದಿದ ಇಂಗ್ಲಿಷ್ ಕವಿತೆ ಯಾವುದು?

ಬೈರನ್‌ನ ಫೇರ್‌ವೆಲ್ ಓದ್ತಿದ್ದೆ.. ತುಂಬಾ ಇಷ್ಟವಾಯ್ತು..’ಅಷ್ಟು ಹಳೆಯದಲ್ಲ ನಾನು ಕೇಳಿದ್ದು, ಇತ್ತೀಚಿಗೆ ಓದಿದ ಇತ್ತೀಚಿನ ಕವಿತೆ ಯಾವುದು?

ಅವರು ಒಂದು ಕ್ಷಣ ಮೌನವಾದರು. ಇತ್ತೀಚಿನ ಕವಿತೆ ಯಾವುದು ಎಂದು ನೆನಪಿಸಿಕೊಳ್ಳಲು ಯತ್ನಿಸಿದರು. ಅದು ಎಷ್ಟು ಇತ್ತೀಚಿನದಾಗಿರಬೇಕು ಎಂದು ತಮ್ಮನ್ನು ತಾವೇ ಕೇಳಿಕೊಂಡರು. ಆಡೆನ್ ನೆನಪಾದ, ನಿಸ್ಸಿಮ್ ಎಜಿಕೆಲ್ ನೆನಪಾದ. ಅದರಾಚೆಗೆ ಯಾರು ಬರೆದಿದ್ದಾರೆ? ಯಾರು ಕವಿತೆ ಬರೆಯುತ್ತಿದ್ದಾರೆ. ಅವರು ತಲೆಯಾಡಿಸಿದರು.

ಹೋಗಲಿ ಬಿಡಿ, ಇತ್ತೀಚೆಗೆ ಓದಿದ ಇತ್ತೀಚಿನ ಸಣ್ಣಕತೆ ಯಾವುದು?
ಅಲ್ಲೂ ಅದೇ ಹುಡುಕಾಟ. ಓ ಹೆನ್ರಿ, ಚೆಕಾಫ್, ಬ್ರೆಕ್ಟ್, ಟಾಲ್‌ಸ್ಟಾಯ್, ಜೇಮ್ಸ್ ಜಾಯ್ಸ್- ಅಲ್ಲಿಂದಾಚೆ ಯಾವ ಹೆಸರೂ ಹೊಳೆಯಲಿಲ್ಲ. ಸಾಹಿತ್ಯ ಕೂಡ ಚರಿತ್ರೆ ಆಗಿದೆ ಅನ್ನಿಸುತ್ತಿಲ್ಲವೇ. ನಮ್ಮ ಹುಡುಗರ ಸ್ಥಿತಿ ನೋಡಿ. ಇಂಗ್ಲಿಷ್ ಲಿಟರೇಚರ್ ಅಂದರೆ ಅದೇ ಶೆಲ್ಲಿ, ವರ್ಡ್‌ವರ್ಥ್, ಲ್ಯಾಂಬ್, ಕೀಟ್ಸ್, ಯೇಟ್ಸ್, ಬೈರನ್, ಮಾರ್ವೆಲ್, ಆಡೆನ್... ಅಲ್ಲಿಗೆ ನಿಂತು ಹೋಗುತ್ತದೆ. ಪ್ರಬಂಧದಲ್ಲೂ ಅದೇ ಹಳೆಯ ಬೇಕನ್, ಆರ್ವೆಲ್ ಹೆಸರೇ. ನಾಟಕಕಾರನ್ನು ಹುಡುಕುತ್ತಾ ಹೋದರೆ ಅದೇ ಷೇಕ್ಸ್‌ಪಿಯರ್, ಚೆಕಾಫ್, ಬ್ರೆಕ್ಟ್, ಬೆಕೆಟ್, ದಾರಿಯೋ ಫೋ ತೀರಾ ಇತ್ತೀಚೆಗೆ ಬಂದರೆ ಹೆರಾಲ್ಡ್ ಪಿಂಟರ್. ಹನಿಗವಿತೆಗಳನ್ನು ಓದಲು ಹುಡುಕಾಡಿದರೆ ಅದೇ ಅನಾದಿಕಾಲದ ಲಿಮೆರಿಕ್ಕು, ಅದದೇ ಹಾಯ್ಕು.

ಇಷ್ಟೇನಾ?
ಯಾವ ಇಂಗ್ಲಿಷ್ ಪತ್ರಿಕೆ ಕತೆಗಳನ್ನು ಪ್ರಕಟಿಸುತ್ತೆ ಹೇಳಿ? ಟೈಮ್ಸಾಫಿಂಡಿಯಾದಲ್ಲೋ ಅಥವಾ ಅದರಂಥ ಯಾವುದಾದರೂ ಇಂಗ್ಲಿಷ್ ಪತ್ರಿಕೆಯಲ್ಲೋ ಕವಿತೆ ಪ್ರಿಂಟಾಗುತ್ತಾ? ಹೋಗಲಿ ಅಂದರೆ ಒಂದು ಪ್ರಬಂಧ, ಒಂದು ಹನಿಗವಿತೆ. ಹುಡುಕಿದರೂ ಸಿಗುವುದಿಲ್ಲ. ಇಂಗ್ಲಿಷ್ ಭಾಷೆ ಎಷ್ಟು ಬರಡಾಗಿ ಹೋಗಿದೆ ಎಂದು ಯೋಚಿಸುತ್ತಾ ಕೂತೆ. ಅದು ಕೇವಲ ಮಾಹಿತಿಯನ್ನು ರವಾನಿಸುವ ಭಾಷೆಯಾಗಿದೆ. ತನ್ನ ಕಲಾತ್ಮಕ ಅಭಿವ್ಯಕ್ತಿಯನ್ನು ಕಳಕೊಂಡಿದೆ. ರಸಹೀನವಾಗಿದೆ. ಸುದ್ದಿಯನ್ನೂ ಮಾಹಿತಿಯನ್ನೂ ವರದಿಗಳನ್ನೂ ಪಠ್ಯಪುಸ್ತಕಗಳನ್ನೂ ಅದರಲ್ಲಿ ಬರೆಯಬಹುದು. ಈ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಕೇಳಿ ಉತ್ತರ ಪಡೆಯಬಹುದು. ದಾರಿ ನೂರಾರಿವೆ ಬೆಳಕಿನರಮನೆಗೆ ಎಂದು ರೂಪಕದಲ್ಲಿ ಹೇಳುವುದಕ್ಕೆ ಅದನ್ನು ಯಾರೂ ಬಳಸುತ್ತಿಲ್ಲ.

ಅಂದ ಮೇಲೆ ಸತ್ತ ಭಾಷೆ ಯಾವುದು? ಕನ್ನಡವಲ್ಲ, ಇಂಗ್ಲಿಷು. ಅದು ತನ್ನ ಸತ್ವವನ್ನು ಕಳೆದುಕೊಂಡು ಕಮರ್ಷಿಯಲ್’ ಭಾಷೆ ಆಗಿಬಿಟ್ಟಿದೆ. ಹಾಗೇನಿಲ್ಲ, ಇಂಗ್ಲಿಷಿನಲ್ಲಿ ಕಾದಂಬರಿ ಬರೆಯುತ್ತಿದ್ದಾರೆ.’ನಿಜ, ಕಾದಂಬರಿಗಳು ಸಾಕಷ್ಟು ಬರುತ್ತಿವೆ. ಸತ್ತ ಮೇಲೂ ಸಿಡ್ನಿ ಶೆಲ್ಡನ್ ಹೊಸ ಕಾದಂಬರಿಗಳು ಬಿಡುಗಡೆ ಆಗಬಲ್ಲ ಭಾಷೆ ಅದು. ಅದೇ ಹುಡುಕಾಟದಲ್ಲಿರುವ ಡಾನ್ ಬ್ರಾನ್‌ನಂಥ ಕಾದಂಬರಿಕಾರರಿದ್ದಾರೆ. ಅದನ್ನು ಬಿಟ್ಟರೆ ಅಲ್ಲಿ ಬರೆಯುತ್ತಿರುವವರ ಪೈಕಿ ಬಹುತೇಕ ಮಂದಿ ಮೂರನೆಯ ವಿಶ್ವಕ್ಕೆ ಸೇರಿದವರು. ಅರವಿಂದ ಅಡಿಗನಿಂದ ಉಪಮನ್ಯು ಚಟರ್ಜಿ ತನಕ, ಅಮಿತವ್ ಘೋಷ್‌ನಿಂದ ಸಲ್ಮನ್ ರಶ್ದಿಯ ತನಕ ಯಾರೂ ಇಂಗ್ಲೆಂಡಿನವರೂ ಅಲ್ಲ, ಅಮೆರಿಕನ್ನರೂ ಅಲ್ಲ. ಅತ್ಯದ್ಭುತ ಕಾದಂಬರಿಗಳನ್ನು ಕೊಟ್ಟ ರಷಿಯಾ ಇವತ್ತು ಬರಡಾಗಿ ಕೂತಿದೆ. ಸೊಗಸಾದ ನಾಟಕಗಳನ್ನು ಕೊಟ್ಟ ಫ್ರಾನ್ಸ್ ಸದ್ದಡಗಿದೆ. ಹಾಯ್ಕುಗಳ ಸಾಮ್ರಾಟ ಜಪಾನ್ ಮೌನವಾಗಿದೆ. ಸಾಹಿತ್ಯ ಬದುಕಿರುವುದು ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಇರಾನ್‌ಗಳಲ್ಲಿ.

ಹೇಗೆ ಅವರೆಲ್ಲ ದಿಕ್ಕೆಟ್ಟಿದ್ದಾರೆ ನೋಡಿ. ನಮ್ಮ ಕಾಲದ ಅತ್ಯುತ್ತಮ ಲೇಖಕ ಎಂದು ನಾವು ಪರಿಗಣಿಸುವ ಮಾರ್ಕೆಸ್‌ನಂಥ ಮಾರ್ಕೆಸ್ ಕೂಡ ತನ್ನ ಪಾಡಿಗೆ ಕಾದಂಬರಿ ಬರೆಯುತ್ತಾನೆ. ಆ ನಂತರ ಅದರ ಬಗ್ಗೆ ಅವನು ಮಾತಾಡುವುದೂ ಇಲ್ಲ. ತನ್ನ ಸಹಲೇಖಕನನ್ನು ಆತ ಓದುತ್ತಾನೆಯೇ ಎನ್ನುವುದೂ ಅನುಮಾನ. ತನ್ನ ಓರಗೆಯ ಬರಹಗಾರರ ಬಗ್ಗೆ ಅವನು ಬರೆದ ಒಂದು ಪುಟ್ಟ ಟಿಪ್ಪಣಿಯನ್ನಾಗಲೀ, ಅವನು ಯಾರಿಗೋ ಮುನ್ನುಡಿ ಬರೆದದ್ದಾಗಲೀ, ಇದು ನಾನು ಇತ್ತೀಚೆಗೆ ಓದಿದ ಒಳ್ಳೆಯ ಪುಸ್ತಕ ಎಂದು ಹೇಳಿದ್ದಾಗಲೀ ನಾನಂತೂ ನೋಡಿಲ್ಲ. ಪರಸ್ಪರರ ನಡುವೆ ಮಾತುಕತೆಯೇ ಇಲ್ಲ.ಎಲ್ಲರೂ ಏಕಾಂತಕ್ಕೆ ಸಂದಿದ್ದಾರೆ. ಯಾವುದೇ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗೆ ಸ್ಪಂದಿಸುವಂಥ ಕಾದಂಬರಿಗಳನ್ನೂ ಅವರೂ ಬರೆಯುತ್ತಿಲ್ಲ.

ಕನ್ನಡದಲ್ಲಿ ಹಾಗಿಲ್ಲ. ಒಬ್ಬ ತರುಣ ಲೇಖಕನ ಬಗ್ಗೆ ಅನಂತಮೂರ್ತಿ ಬರೆಯುತ್ತಾರೆ. ಬರಗೂರು ಪ್ರತಿಕ್ರಿಯಿಸುತ್ತಾರೆ. ಎಚ್ ಎಸ್ ವೆಂಕಟೇಶಮೂರ್ತಿ ಪುಸ್ತಕ ಬಿಡುಗಡೆ ಮಾಡಿ ಮಾತಾಡುತ್ತಾರೆ. ಹೊಸ ಲೇಖಕರು ಹೊಚ್ಚ ಹೊಸದಾಗಿ ಬರೆಯುತ್ತಿದ್ದಾರೆ. ವಿವೇಕ್ ದೇಶಕಾಲ’ದಂಥ ಪತ್ರಿಕೆ ಮಾಡುತ್ತಾ, ಅದರ ವಿಶೇಷಾಂಕದಲ್ಲಿ ಕನ್ನಡದ ಅಷ್ಟೂ ಸಮಕಾಲೀನ ಲೇಖಕರು ಇರಬೇಕು ಎಂದು ನಿರೀಕ್ಷಿಸುತ್ತಾರೆ. ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ದಲಿತ, ಬಂಡಾಯ ಮತ್ತು ಪ್ರಗತಿಶೀಲ ದನಿಗಳು ಇವತ್ತಿಗೂ ಬತ್ತಿಲ್ಲ. ಎಲ್ಲೋ ಕೂತು ಗೋಪಾಲಕೃಷ್ಣ ಪೈ ಸೊಗಸಾದ ಕಾದಂಬರಿ ಬರೆದು ಮುಂದಿಡುತ್ತಾರೆ. ತನಗಿಂತ ಕಿರಿಯರಾದವರನ್ನೂ ಒಳಗೊಳ್ಳುವಂತೆ ಕುಂವೀ ಬರೆಯುತ್ತಾರೆ. ಭೈರಪ್ಪ ಒಂದಲ್ಲ ಒಂದು ಚರ್ಚೆಯನ್ನು ಹುಟ್ಟುಹಾಕಿ ವಾದಕ್ಕೆ ನಿಲ್ಲುತ್ತಾರೆ.

ಸಾಹಿತ್ಯದ ವಾತಾವರಣ ಹಾಗೇ ಇರಬೇಕಲ್ವೇ? ಜೀವಂತವಾಗಿರುವ ಭಾಷೆಯ ಲಕ್ಷಣ ಅದು. ಏನಾದರೂ ಮಾಡುತಿರು ತಮ್ಮ, ನೀ ಸುಮ್ಮನಿರಬೇಡ ಎಂದು ಪ್ರತಿಯೊಬ್ಬರೂ ಏನಾದರೊಂದು ಮಾಡುತ್ತಿರುವ ಸ್ಥಿತಿ ಅದು. ಸುಮ್ಮನೆ ಪುಸ್ತಕಗಳತ್ತ ಕಣ್ಣು ಹಾಯಿಸಿ. ಇಲ್ಲಿ ಪ್ರಬಂಧ, ಕತೆ, ಕಾದಂಬರಿ, ವಿಡಂಬನೆ, ಹಾಸ್ಯ, ಹನಿಗವಿತೆ, ಕವಿತೆ, ಭಾವಗೀತೆ ಎಲ್ಲವೂ ಈಗಲೂ ಸೃಷ್ಟಿಯಾಗುತ್ತಿವೆ. ಇತ್ತೀಚೆಗೆ ಇಂಗ್ಲಿಷ್ ಸಣ್ಣಕತೆಗಳ ಸಂಕಲನವೊಂದು ಬಂದಿದ್ದರೆ ಹೇಳಿ; ದಿ ಅನ್‌ಅಕಸ್ಟಮ್‌ಡ್ ಅರ್ಥ್’ ಬಿಟ್ಟರೆ. ಅವೂ ನೀಳ್ಗತೆಗಳು. ಪರಸ್ಪರ ಸಂಬಂಧವಿರುವ ಮೂರು ನೀಳ್ಗತೆಗಳ ಸಂಕಲನ.

ಆಲ್ಬರ್ಟ್ ಕಮೂ ಏನೆಲ್ಲ ಬರೆದು ಅಚ್ಚರಿ ಹುಟ್ಟಿಸುತ್ತಿದ್ದ. ಕತೆ, ಕಾದಂಬರಿ, ಪ್ರಬಂಧ, ಆಧ್ಯಾತ್ಮ ಎಲ್ಲದರ ಕುರಿತೂ ಬರೆಯುತ್ತಿದ್ದ. ಆಗೆಲ್ಲ ಹೀಗೆ ಕೇವಲ ಕಾದಂಬರಿಯನ್ನೇ ಬರೆಯಬೇಕು ಎಂದು ಒತ್ತಾಯಿಸುವ ಏಜಂಟರು’ ಇರಲಿಲ್ಲ ಎಂದು ಕಾಣುತ್ತದೆ. ಈಗಂತೂ ಇಂಗ್ಲಿಷ್ ಕಾದಂಬರಿ ಬರೆಯುವುದು ಒಂದು ಎಕ್ಸ್‌ರ್‌ಸೈಜು. ಒಂದು ಫ್ಯಾಕ್ಟರಿ ಶುರುಮಾಡಿದಷ್ಟೇ ಸರ್ಕಸ್ಸು. ಯಾವುದರ ಬಗ್ಗೆ ಬರೆಯುತ್ತೀರಿ, ಯಾವ ಭಾಷೆ ಬಳಸುತ್ತೀರಿ, ಹೇಗೆ ಬರೆಯುತ್ತೀರಿ, ಎಷ್ಟು ಪರ್ಸೆಂಟ್ ಹಾಸ್ಯ ಇರುತ್ತೆ, ಯಾವ ದೇಶದ ಪಾತ್ರಗಳನ್ನು ಆಯ್ದು ಕೊಳ್ಳುತ್ತೀರಿ ಎನ್ನುವುದನ್ನೆಲ್ಲ ಅವರಿಗೆ ಮೊದಲೇ ಹೇಳಬೇಕು. ಟೀವಿಗೆ ಸೀರಿಯಲ್ ಮಾಡಿಕೊಟ್ಟಷ್ಟೇ ಕಷ್ಟದ ಕೆಲಸ. ಅದನ್ನು ಒಂದು ಟಾರ್ಗೆಟ್ ಗ್ರೂಪ್ ಓದುತ್ತದೆ, ಬದಲಾವಣೆ ಸೂಚಿಸುತ್ತದೆ. ಆ ರೀತಿ ಬರೆಯಿರಿ ಎನ್ನುತ್ತದೆ. ವರ್ಷಕ್ಕೊಮ್ಮೆ ನೀಡಲಾಗುವ ಬೂಕರ್ ಪ್ರಶಸ್ತಿಗೆ ಕಾದಂಬರಿಗಳನ್ನು ಬರೆಯುವುದೂ ಕೂಡ ಒಂದು ದಂಧೆಯೇ. ಅದೂ ಒಂದು ರೀತಿಯಲ್ಲಿ ಸೌಂದರ್ಯ ಸ್ಪರ್ಧೆ ಇದ್ದ ಹಾಗೆ. ತಿದ್ದಿ ತೀಡಿದ, ಬಣ್ಣ ಬಳಿದ, ಹೇಗೆ ವರ್ತಿಸಬೇಕು, ಹೇಗೆ ಉತ್ತರಿಸಬೇಕು ಅನ್ನುವುದನ್ನೆಲ್ಲ ಕಲಿತ ಬೆಡಗಿಯರ ಹಾಗೆ ಕಾದಂಬರಿಕಾರರೂ ಆಗಿಬಿಟ್ಟಿದ್ದಾರೆ.

ವಿಶ್ವಸಾಹಿತ್ಯದಲ್ಲಿ ಕಾದಂಬರಿಗಳು ಮಾತ್ರ ಉಳಿದು ಮಿಕ್ಕೆಲ್ಲ ಸಾಹಿತ್ಯ ಪ್ರಕಾರಗಳೂ ನಶಿಸಿಹೋಗಲಿವೆಯಾ ಎಂಬ ಅನುಮಾನ ಮತ್ತು ಆತಂಕಕ್ಕೆ ಕಾರಣವಾಗುವ ಬೆಳವಣಿಗೆಗಳಂತೂ ನಡೆಯುತ್ತಿವೆ. ಅದರ ಮಧ್ಯೆಯೂ ಇಲ್ಲಿ, ನಮ್ಮೂರಲ್ಲಿ ಕಾವ್ಯ, ಹನಿಗವಿತೆ, ವಿಮರ್ಶೆ, ಸಂಸ್ಕೃತಿ ವಿಮರ್ಶೆ, ಕಾದಂಬರಿ, ಸಣ್ಣಕತೆ ಮತ್ತು ಪ್ರಹಸನಗಳ ಮೂಲಕ ವೈವಿಧ್ಯವನ್ನೂ ವಿಸ್ಮಯವನ್ನೂ ಹುಟ್ಟಿಸಿಕೊಳ್ಳುತ್ತಾ ನಾವು ಜೀವಂತವಾಗಿದ್ದೇವೆ.