ನೇರ ನಿಷ್ಟುರಿ ಮರಳುಸಿದ್ದಪ್ಪನವರು ಕನ್ನಡ ಚಳುವಳಿಯ ಎಲ್ಲ ಮುಖವಾಡಗಳನ್ನು ಕಿತ್ತೊಗೆಯುವಂತಹ ಹತ್ತು ಪ್ರಶ್ನೆಗಳನ್ನು ಓದುಗರ ಮುಂದಿಟ್ಟಿದ್ದಾರೆ. ಈ ಎಲ್ಲ ಪ್ರಶ್ನೆಗಳ ಕುರಿತೂ ಪ್ರಾಮಾಣಿಕ ಚರ್ಚೆ ಕನ್ನಡದ ಸದ್ಯದ ಅಗತ್ಯ. ಕನ್ನಡ ಇಂದು ರಾಜಕೀಕರಣಗೊಂಡಿರುವುದರಿಂದ ಕಳೆದ ದಶಕದಲ್ಲಿ ಕನ್ನಡ ಚಳುವಳಿ ಹಾದಿ ತಪ್ಪುತ್ತಿದೆ. ಕನ್ನಡ ಚಳುವಳಿಯನ್ನು ಮತ್ತೆ ಸರಿಯಾದ ಹಳಿಗೆ ತರುವ ಹೊಣೆ ನಮ್ಮನಿಮ್ಮೆಲ್ಲರದ್ದು ಎನ್ನುವ ಅಭಿಪ್ರಾಯ ಲೇಖಕರದ್ದು. ಅದಕ್ಕೆ ಮರಳುಸಿದ್ದಪ್ಪನವರು ಎತ್ತಿರುವ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಒಂದು ಆರೋಗ್ಯಪೂರ್ಣ ಚರ್ಚೆಯಲ್ಲಿ ತೊಡಗುವುದು ಈ ನಿಟ್ಟಿನಲ್ಲಿ ಮೊದಲ ಮೆಟ್ಟಿಲಾದೀತು.ಸ್ವಾತಂತ್ರ್ಯ ಚಳುವಳಿಯ ಜೊತೆಜೊತೆಗೇ ನಾಲ್ಕಾರು ರಾಜ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಗ್ಗೂಡಿಸಬೇಕೆಂಬ ಹಂಬಲದ ಒಂದು ಬೃಹತ್ ಆಂದೋಲನವೂ ಇಪತ್ತನೆಯ ಶತಮಾನದುದ್ದಕ್ಕೂ ಸಾಗಿ ಬಂದಿತು. 1956ರಲ್ಲಿ ಅಖಂಡ ಕನ್ನಡ ನಾಡು ವಿಶಾಲ ಮೈಸೂರಿನಲ್ಲಿ ಐಕ್ಯಗೊಂಡಾಗ ಈ ಚಳವಳಿ ಒಂದು ಅರ್ಥದಲ್ಲಿ ತನ್ನ ಗುರಿ ಮುಟ್ಟಿತಾದರೂ, ಕನ್ನಡ ಭಾಷೆ ಮತ್ತು ಕನ್ನಡ ಜನರ ಅಭಿವೃದ್ಧಿಗೆ ಸರ್ಕಾರ ಮನಸ್ಸು ಮಾಡಲು ಜನಪರ ಚಳವಳಿಯೊಂದರ ಅಗತ್ಯ ಇದ್ದೇ ಇತ್ತು. ಹೀಗೆ ಹಿಂದಿನ ಶತಮಾನದ ಅರವತ್ತರ ದಶಕದಲ್ಲಿ ಹುಟ್ಟಿ ಬೆಳೆದು ಬಂದ ಕನ್ನಡ ಚಳುವಳಿಯ ಗುರಿ ಕನ್ನಡ ಪರ ಕಾಳಜಿಯನ್ನು ವಿವಿಧ ನೆಲೆಯಲ್ಲಿ ಪ್ರತಿಪಾದಿಸಿ, ಅದಕ್ಕಾಗಿ ಹೋರಾಟದ ಭೂಮಿಕೆಯೊಂದನ್ನು ನಿರ್ಮಿಸಿತು .

ಕನ್ನಡ ಮಾತನಾಡುವ ಜನ ಅಧಿಕ ಸಂಖ್ಯೆಯಲ್ಲಿರುವ ಅನ್ಯರಾಜ್ಯಗಳ ಕೆಲವು ಪ್ರದೇಶಗಳನ್ನು ಕರ್ನಾಟಕಕ್ಕೆ ಪಡೆಯುವುದಕ್ಕೆ, ಕನ್ನಡ ಭಾಷೆಗೆ ಕರ್ನಾಟಕ ಆಡಳಿತದಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಗ್ರಮಾನ್ಯ ಸ್ಥಾನ ಪಡೆಯುವದಕ್ಕಾಗಿ, ಅಂತರಾಜ್ಯ ನದಿ ನೀರಿನ ಹಂಚಿಕೆಯಲ್ಲಿ ಕನರ್ಾಟಕಕ್ಕೆ ನ್ಯಾಯವಾದ ಪಾಲು ಪಡೆಯುವದಕ್ಕಾಗಿ, ರಾಜ್ಯದಲ್ಲಿನ ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ತಪ್ಪಿ ಹೋಗುತ್ತಿರುವ ಉದ್ಯೋಗಾವಕಾಶ ಹಕ್ಕಿಗಾಗಿ, ಹೋರಾಡಲೇ ಬೇಕಾದ ಸಂದರ್ಭದಲ್ಲಿ ಕನ್ನಡ ಚಳವಳಿಯು ಈ ಎಲ್ಲ ನೆಲೆಯಲ್ಲಿಯೂ ನ್ಯಾಯ ಸಮ್ಮತವಾದ ಮಾರ್ಗದಲ್ಲಿಯೇ ಹೋರಾಟ ನಡೆಸಿ ಸಾಕಷ್ಟು ಮಟ್ಟಿಗೆ ಯಶಸ್ಸನ್ನೂ ಸಾಧಿಸಲಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸಬೇಕೆಂಬ `ಗೋಕಾಕ್ ವರದಿ'ಯನ್ನು ಜಾರಿ ಗೊಳಿಸಲು ಒತ್ತಾಯಿಸಿ ನಡೆಸಿದ ಹೋರಾಟ ಕನ್ನಡ ಚಳುವಳಿಯ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟ. ಕರ್ನಾಟಕದ ಸರ್ಕಾರಗಳೂ ಸಹ, ಕಾದಿಂದ ಕಾಲಕ್ಕೆ ಕನ್ನಡ ಚಳುವಳಿಯ ನ್ಯಾಯಯುತವಾದ ಹೋರಾಟಕ್ಕೆ ಸ್ಪಂದಿಸುತ್ತಾ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿದ್ದ ಮಟ್ಟಿಗೂ ಕನ್ನಡ ಪರವಾಗಿಯೇ ನಿಂತಿವೆ.

ಕರ್ನಾಟಕದ ಸರ್ಕಾರಗಳೂ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕನ್ನಡ ಅಭಿವೃದ್ಧಿಯ ಸಲುವಾಗಿ ಹಲವಾರು ಸಂಸ್ಥೆಗಳನ್ನು ಬಲಪಡಿಸಲು ನೆರವು ನೀಡಿವೆ. ಬಹುಮುಖ್ಯವಾದ ನೀತಿ ನಿರ್ಣಯಗಳಾಗುವ ಸಂದರ್ಭದಲ್ಲಿ ಕನ್ನಡ ಚಳುವಳಿಯ ನಾಯಕರೂ, ಕನ್ನಡ ಸಾಹಿತಿ ಕಲಾವಿದರನ್ನೂ ಕರೆಸಿ ಸಮಾಲೋಚಿಸುವ ಪದ್ಧತಿಗೆ ಎಲ್ಲ ಸರ್ಕಾರಗಳೂ ಬದ್ಧವಾಗಿವೆ. ಇದರ ಪರಿಣಾಮವಾಗಿ ಕನ್ನಡ ಚಳುವಳಿಯ ಸಂಘಟನೆಗಳಿಗೆ, ನಾಯಕರಿಗೆ ಕರ್ನಾಟಕದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಪ್ರತಿಷ್ಠೆ ಪ್ರಾಪ್ತವಾಗಿದ್ದು, ಕ್ರಮೇಣವಾಗಿ. ಈ ವಲಯವು ಸಂವಿಧಾನೇತರ ಶಕ್ತಿ ಕೇಂದ್ರವಾಗಿ ಬಲಿಷ್ಠಗೊಂಡಿದೆ.

ಸುಮಾರು ಐವತ್ತು ವರ್ಷಗಳ ಕಾಲ ಪರಿಶುದ್ಧವಾಗಿ ಕನ್ನಡದ ಸಲುವಾಗಿಯೇ ಹೋರಾಟ ನಡೆಸಿಕೊಂಡು ಬಂದ ಚಳುವಳಿ ಕಳೆದ ಹತ್ತು ವರ್ಷಗಳಿಂದ ಪಟ್ಟಭಧ್ರ ಹಿತಾಸಕ್ತ ವಲಯಗಳ ವ್ಯಾಪ್ತಿಗೆ ಹೋಗುತ್ತಿರುವುದರ ಬಗ್ಗೆ ನಿಜವಾದ ಕನ್ನಡ ಪ್ರೇಮಿಗಳೆಲ್ಲರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಹಿತಚಿಂತಕರೂ ತಮಗೆ ತಾವೇ ಕೆಲವು ಪ್ರಶ್ನೆಗಳನ್ನು ಹಾಕಿಕೊಂತಾ ಕನ್ನಡ ಚಳುವಳಿಯ ದಿಕ್ಕು ದೆಸೆಯ ಬಗೆಗೆ ಉತ್ತರಿಸಬೇಕಾಗುತ್ತದೆ.

1) ಕರ್ನಾಟಕದಲ್ಲಿ ಕನ್ನಡವೇ ಅಧಿಕೃತ ಭಾಷೆಯಾಗಿದ್ದರೂ ಅಲ್ಪ ಸಂಖ್ಯಾತ ಭಾಷಾ ಸಮುದಾಯಗಳ ಹಿತರಕ್ಷನೆಯನ್ನು ಸಂವಿಧಾನ ಬದ್ಧವಾಗಿ ಕಾಪಾಡಿಕೊಳ್ಳಬೇಕಾದದು ನಮ್ಮ ಕರ್ತವ್ಯವಲ್ಲವೇ? ಈ ನಿಟ್ಟಿನಲ್ಲಿ ಕನ್ನಡ ಚಳುವಳಿ ಹಾಗೂ ನಾಯಕರು ವಹಿಸಿದ, ವಹಿಸುತ್ತಿರುವ ಪಾತ್ರವೇನು?

2) ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ನಾಡಿನ ಮಕ್ಕಳು ಒಂದು ಭಾಷೆಯಾಗಿ ಇಂಗ್ಲೀಷನ್ನು ಕಲಿಯುವುದರಲ್ಲಿ ತಪ್ಪೇನಿದೆ? ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಮಾತೃಭಾಷೆಯೇ ಮಾಧ್ಯಮವಾಗಿರುವುದು ನ್ಯಾಯಸಮ್ಮತವೆನಿಸಿದರೂ ಇದನ್ನು ಕಡ್ಡಾಯಗೊಳೀಸಲು ಇರುವ ತೊಡಕುಗಳೇನು? ಪ್ರಜಾಪ್ರಭುತ್ವದ ತತ್ವಕ್ಕನುಸಾರವಾಗಿ ಈ ಪ್ರಶ್ನೆಯನ್ನು ಕುರಿತು ಮುಕ್ತ ಚರ್ಚೆಯಾಗಬೇಕಿದೆಯಲ್ಲವೇ?

3) ಕನ್ನಡ ಭಾಷೆಯನ್ನು ಆಡಳಿತದ ಎಲ್ಲ ನೆಲೆಯಲ್ಲಿ ಬಳಸುವುದು, ಮತ್ತು ಶಿಕ್ಷಣ ವಲಯದಲ್ಲಿ ಕನ್ನಡಕ್ಕೆ ಎಲ್ಲ ನೆಲೆಯಲ್ಲಿಯೂ ಅವಕಾಶ ಕಲ್ಪಿಸುವುದು, ಕೇವಲ ಭಾವನಾತ್ಮಕ ವಿಚಾರವಾಗಿರದೆ, ಬಹುಸಂಖ್ಯಾತ ಸಮುದಾಯದ ಆಶೋತ್ತರವೆಂಬುದನ್ನು ತಿಳಿಯಬೇಕಲ್ಲವೇ? ಅಲ್ಪ ಸಂಖ್ಯಾತ ಭಾಷಾ ಸಮುದಾಯಗಳೂ ಈ ವಾಸ್ತವವನ್ನು ಒಪ್ಪಿಕೊಳ್ಳುವಂತೆ ಒಲಿಸುವ ಮಾರ್ಗೋಪಾಯಗಳೇನು?

4) ಕರ್ನಾಟಕದ ಭೌಗೋಳಿಕ ಗಡಿ ರೇಖೆಗಳು ಈಗಾಗಲೇ ನಿರ್ಧಾರಗೊಂಡಿರುವಾಗ, ಅದನ್ನು ಬದಲಿಸಿ ಕೆಲವು ಕನ್ನಡ ನಾಡಿಗೆ ಬೇರೆ ರಾಜ್ಯದಿಂದ ಪಡೆಯಬೇಕೆಂಬ ಹೋರಾಟ ಅವಾಸ್ತವವೆನ್ನಿಸುವುದಿಲ್ಲವೇ? ಹಾಗೆಯೇ ಕನ್ನಡ ನಾಡಿನಲ್ಲಿರುವ ಮರಾಠಿ ಪ್ರದೇಶಗಳನ್ನು ಬಿಟ್ಟುಕೊಡುವುದೂ ಅವಾಸ್ತವ ವಿಚಾರವಾಗಿದ್ದು, ಇದೆಲ್ಲವನ್ನೂ ಪರಸ್ಪರ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಕನ್ನಡ ಚಳುವಳಿ ಯಾವ ಪಾತ್ರ ವಹಿಸಿದೆ? ವಹಿಸಬೇಕು?

5) ಸರ್ಕಾರೀ ಉದ್ಯೋಗಗಳು ಖಸಗೀ ವಲಯದ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಆದ್ಯತೆಯಿರುವುದನ್ನು ಪ್ರಶ್ನಿಸುವಂತಿಲ್ಲವಾದರೂ ಕನ್ನಡಿಗರೆಂದು ಗುರುತಿಸುವ ಮಾನದಂಡ ಯಾವುದು? ಶತಶತಮಾನಗಳಿಂದಲೂ ಕನ್ನಡ ನಾಡಿನಲ್ಲಿರುವ ಇತರ ಭಾಷಾ ಸಮುದಾಯಗಳು, ವಲಸೆ ಬಂದು ದಶಕಗಳಿಂದಲೂ ಕನ್ನಡ ನಡಿನಲ್ಲಿ ದುಡಿಯುತ್ತಿರುವ ಕೂಲಿಕಾರ ವರ್ಗದ ಹಕ್ಕುಗಳ ಸ್ವರೂಪವೇನು? ಸಾಮಾಜಿಕ ನ್ಯಾಯ ಹಾಗೂ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರದಂತೆ ಈ ಉದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ? ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಶಿವಸೇನೆಯ ಮಾದರಿ ನಮಗೆ ಅಗತ್ಯವಿದೆಯೆ? ಇದೆಂದಿಗೂ ಅಪಾಯಕಾರಿ ವರ್ಗವಲ್ಲವೇ?

6) ಹಿಂದುತ್ವವಾದಿ ಶಿವಸೇನೆಯ ಮಾದರಿಯನ್ನು ನಮ್ಮ ಕನ್ನಡ ಚಳುವಳಿಯ ಕೆಲವು ನಾಯಕರೂ ಪ್ರತಿಪಾದಿಸುತ್ತಿರುವುದು ಅಪಾಯಕಾರಿಯಲ್ಲವೇ? ಹಿಂದೂ ಧರ್ಮವು ಉಳಿದರೆ ಕನ್ನಡ ಭಾಷೆಯೂ ಉಳಿಯುತ್ತದೆ ಎಂದು ಹಿರಿಯ ವಿದ್ವಾಂಸರೊಬ್ಬರು ಹೇಳುತ್ತಿರುವುದು ಅಪಾಯಕಾರಿಯಲ್ಲವೇ? ಕನ್ನಡದ ಮುಖವಾಡ ಹಾಕಿಕೊಂಡು ಮತಾಂಧ ಶಕ್ತಿಗಳು ಕನರ್ಾಟಕವನ್ನು ಆಹುತಿ ತೆಗೆದುಕೊಳ್ಳುವ ಸನ್ನಾಹದಲ್ಲಿರುವಾಗ, `ಮನುಜ ಕುಲಂ ತಾನೊಂದೇ ವಲಂ' ಎಂದು ನಂಬಿರುವ ಕನ್ನಡ ಪರಂಪರೆಯನ್ನು ಉಳಿಸಿ ಕಟ್ಟಿ ಬೆಳೆಸಲು ಸಾಧ್ಯವೇ?

7)ಸೌಹಾರ್ದಯುತ ಕರ್ನಾಟಕವನ್ನು ಕಟ್ಟಿ ಬೆಳೆಸಲು ಇರುವ ಅಡ್ಡಿ ಆತಂಕಗಳೇನು? ಕನ್ನಡ ಚಳುವಳಿಯ ಕೆಲವರು ರಾಜಕೀಯ ಪ್ರೇರಣೆ ಪಡೆದು ಸೌಹಾರ್ದತೆಯನ್ನು ಕದಡಲು ಕನ್ನಡ ಚಳುವಳಿಯನ್ನು ಬಳಸಿಕೊಳ್ಳುತ್ತಿದ್ದಾರೆಯೇ?

8)ಕನ್ನಡ ಚಳುವಳಿಯ ಕೆಲವು ಸಂಘಟನೆಗಳ ಆರ್ಥಿಕ ಮೂಲದ ಬಗ್ಗೆ ಯಾರೂ ಯಾಕೆ ಪ್ರಶ್ನಿಸುತ್ತಿಲ್ಲ?ರಾಜಕೀಯ ಪಕ್ಷಗಳು ತಮ್ಮ ಕೈಗೊಂಬೆಯಾಗಿ ಕನ್ನಡ ಚಳುವಳಿಯನ್ನು ಬಳಸಿಕೊಳ್ಳುತ್ತಿರುವುದರ ಬಗೆಗೆ ಉತ್ತರ ಹೇಳಬೇಕಾದವರಾರು?

9)ಕಾನೂನು ವಿರೋಧೀ ಚಟುವಟಿಕೆಗಳಲ್ಲಿ ಭಾಗಿಯಾದವರು, ಭೂಗತ ಲೋಕದ ಶಕ್ತಿಗಳು, ಕಪ್ಪುಹಣದ ಪಾರುಪತ್ತೆದಾರರೂ, ಕನ್ನಡ ಚಳುವಳಿಯನ್ನು ಇತ್ತೀಚಿನ ವರ್ಷಗಳಲ್ಲಿ ಆವರಿಸಿಕೊಳ್ಳುತ್ತರುವುದನ್ನು ನೋಡುತ್ತಾ ಅಸಹಾಯಕರಾಗಿರುವ ಸಾಂಸ್ಕೃತಿಕ ಲೋಕದಲ್ಲಿರುವವರ ಕರ್ತವ್ಯವೇನು?ಈ ಸಾಂಸ್ಕೃತಿಕ ಲೋಕದ ದಿಗ್ಗಜರೇ ಕನ್ನಡದ ಹೆಸರಲ್ಲಿ ಕಾನೂನು ವಿರೋಧಿ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆಂಬ ಆರೋಪದ ಬಗೆಗೆ ಚರ್ಚೆ ನಡೆಯಬೇಕಲ್ಲವೇ?

10)ಕನ್ನಡದ ಹೆಸರಿನಲ್ಲಿ ಕೆಲವು ಅಪ್ರಸ್ತುತ ವಿಚಾರಗಳಿಗಾಗಿ ಷಳುವಳಿ ಹುಟ್ಟು ಹಾಕಿ, ವ್ಯಕ್ತಿ ಪ್ರತಿಷ್ಠೆ ಬೆಲೆಸಿಕೊಳ್ಳುವ ಸಾಂಸ್ಕೃತಿಕ ಲೋಕದ ಗಣ್ಯರನ್ನು ಸಹಿಸಬೇಕೇ? ವ್ಯಕ್ತಿ ಪ್ರತಿಷ್ಠೆಗಾಗಿ ಕನ್ನಡ ಚಳುವಳಿಯನ್ನು ನಂಬಿಕೊಮಡಿರುವ ರಾಜಖೀಯ ಪುಢಾರಿಗಳಿಗೂ ಸಾಂಸ್ಕೃತಿಕ ಲೋಕದ ಗಣ್ಯರಿಗೂ ವ್ಯತ್ಯಾಸವಿರಬೇಕಲ್ಲವೇ? ವ್ಯತ್ಯಾಸವಿದೆಯೇ?