ಗದುಗಿಗೆ ಸೊಬಗು ತಂದ ನನ್ನ ಅಜ್ಜ : ವೀರಭದ್ರಪ್ಪ ಬಳ್ಳಾರಿ
2:49 PM
Posted by ಆಲೆಮನೆ
ರವೀಂದ್ರ ರೇಷ್ಮೆ
ಬೆಂಗಳೂರಿನ ಕೆಂಗಲ್ ಹನುಮಂತಯ್ಯ ಡಬ್ಬಲ್ ರೋಡನ್ನು ನೆನಪಿಸುವ ಕಾಂಕ್ರೀಟ್ ರಸ್ತೆ, ರಸ್ತೆ ವಿಭಾಜಕ, ಅಚ್ಚುಕಟ್ಟಾದ ಫುಟ್ಪಾತ್, ದೊಡ್ಡಬಳ್ಳಾಪುರ ಗ್ರಾನೈಟ್ ಕಲ್ಲಿನ ಸಾಲು ಬೆಂಚುಗಳು, ಸುಂದರವಾದ ಟ್ರಾಫಿಕ್ ಸರ್ಕಲ್ಗಳು, ಭೂಗತ ಕೇಬಲ್ ಅಳವಡಿಸಿದ ಮರ್ಕ್ಯುರಿ ರಸ್ತೆ ದೀಪಗಳು ಹಾಗೂ ಬಾಲಭವನವನ್ನು ಹೋಲುವ ಮಕ್ಕಳ ವನ ಪಾರ್ಕು.... ಇತ್ಯಾದಿ ಅತ್ಯಾಧುನಿಕ ನಗರ ವಿನ್ಯಾಸವನ್ನು ಗದಗ್ ಎಂಬ ಪುಟ್ಟ ನಗರಿಗೆ ಅಳವಡಿಸಿದ ಮಹಾನುಭಾವ ಯಾರು ಗೊತ್ತಾ?
ಗದುಗಿನ ರೈಲ್ವೆ ಸ್ಟೇಶನ್ನಿಂದ ಊರ ಮಧ್ಯಭಾಗದ ಮಹೇಂದ್ರಕರ್ ಸರ್ಕಲ್ವರೆಗಿನ ಈ ಬೆಂಗಳೂರು ಮಾದರಿ ಮಾಸ್ಟರ್ ಪ್ಲಾನ್ ಅನ್ನು 1950ರ ದಶಕದಷ್ಟು ಹಿಂದೆಯೇ ಇಲ್ಲಿನ ಮಸಾರಿ ಮಣ್ಣಿನಲ್ಲಿ ಧರೆಗಿಳಿಸಿದ ಕನಸುಗಾರ ಯಾರು?
ಹುಬ್ಬಳ್ಳಿಯ ಕನರ್ಾಟಕ ಚೇಂಬರ್ ಆಫ್ ಕಾಮರ್ಸ್ ಎಂಬ ಪ್ರತಿಷ್ಟಿತ ವಾಣಿಜ್ಯ ಮಂಡಳಿಯ ಸಂಸ್ಥಾಪಕ ಕಾರ್ಯದಶರ್ಿಯಾಗಿದ್ದು ಅಖಿಲ ಭಾರತ ವಾಣಿಜ್ಯ ಮಹಾಮಂಡಲದ ಕಾರ್ಯದರ್ಶಿ ಸ್ಥಾನಕ್ಕೂ ಏರಿದ ಕ್ರಿಯಾಶಾಲಿ ಉದ್ಯಮದಾರ ಯಾರಿರಬಹುದು? ಅಖಿಲ ಭಾರತ ಮಂಡಳಿ ವತಿಯಿಂದ ಬ್ರಿಟಿಷ್ ಆಡಳಿತದ ಭಾರತೀಯ ರೈಲ್ವೆ ಮಂಡಳಿಯ ಸದಸ್ಯತ್ವ ಪಡೆದಕೊಂಡ ಪ್ರಪ್ರಥಮ ಕನ್ನಡಿಗ ಯಾರಿದ್ದಾರು? ಹಾಗೆಯೇ ಪ್ರಪ್ರಥಮ ಕನ್ನಡ ರೈಲ್ವೆ ವೇಳಾಪಟ್ಟಿಯನ್ನು ಸ್ವಂತ ಕೈಬರಹದಲ್ಲಿಯೇ ತಯಾರಿಸಿ ಅದನ್ನು ಪ್ರಕಟಿಸಲು ಕಾರಣರಾದ ಕನಸುಗಾರ ಯಾರೆಂಬುದು ಇವತ್ತಿನ ಗದುಗಿನ ನಾಗರಿಕರಿಗೆ ನೆನಪಿದೆಯೇ?
2ನೇ ಮಹಾಯುದ್ದದ ಕಾಲಘಟ್ಟದಲ್ಲಿ ಬೆಂಗಳೂರಿನಿಂದ ಪ್ರಕಟಗೊಳ್ಳತ್ತಿದ್ದ ಕನ್ನಡ ಮಾಸಿಕ ಡೈಜೆಸ್ಟ್ ವಾಣಿ ಎಂಬ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕನೂ ಆಗಿದ್ದ ಈ ಗದುಗಿನ ಬಹುಮುಖ ಪ್ರತಿಭೆಯ ಸಾಹಸಿ ದಿವಂಗತ ವೀರಭದ್ರಪ್ಪ ಬಳ್ಳಾರಿ ನನ್ನ ಅತ್ಯಂತ ಪ್ರೀತಿಯ ಅಜ್ಜ ಅಂದರೆ ನನ್ನ ತಾಯಿಯ ತಂದೆ ಎಂಬ ಹೆಮ್ಮೆ ನನ್ನದು ಎಂದು ಸಾಹಿತ್ಯ ಸಮ್ಮೇಳನದ ಈ ಸಡಗರದಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ. ಅಂದಿನ ಆ ವಾಣಿ ಮಾಸ ಪತ್ರಿಕೆಯ ಬಳಗದಲ್ಲಿದ್ದವರು ಬೀಚಿ, ಬಸವರಾಜ ಕಟ್ಟಿಮನಿ ಮತ್ತು ತರಾಸು ಎಂಬ ಕನ್ನಡ ಸಾಹಿತ್ಯದ ಹೆಸರಾಂತ ದಿಗ್ಗಜಗಳು ಎಂಬ ಗತ ವೈಭವ ಕೂಡ ಇವತ್ತು ಇತಿಹಾಸಕಾರರಿಗೆ ಬಹುಶ: ನೆನಪಾಗಲಿಕ್ಕಿಲ್ಲ.
ಕೇವಲ ಮ್ಯಾಟ್ರಿಕ್ವರೆಗೆ ಓದಿದ್ದ ನನ್ನ ಅಜ್ಜ ಗದುಗಿನ ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯ ಸಾಮ್ರಾಜ್ಯ ಸ್ಥಾಪಿಸಿದ್ದ ತನ್ನ ತಂದೆಯ ವಿರುದ್ದವೇ ಸೆಡ್ಡು ಹೊಡೆದು ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ಸ್ವಂತೂರನ್ನು ತೊರೆದು ಬೆಂಗಳೂರಿಗೆ ವಲಸೆ ಹೋಗಿದ್ದು 1930ರ ದಶಕದಲ್ಲಿ. ತಂದೆಯ ಹಂಗಿಲ್ಲದೆ ಸ್ವಂತ ಉದ್ಯಮ ನಡೆಸಬೇಕೆಂಬ ಛಲ ಅವರದ್ದಾಗಿತ್ತು.
ಮಲ್ಲೇಶ್ವರದ ಆಟದ ಮೈದಾನದ ಬಳಿಯ ಪುಟ್ಟ ಮನೆಯೊಂದರಲ್ಲಿ ಗೂಡು ಕಟ್ಟಿಕೊಂಡ ನನ್ನ ಅಜ್ಜ ವಾಟರ್ ಪ್ರೂಫ್ ಪ್ಯಾಕಿಂಗ್ ಪೇಪರ್ ತಯಾರು ಮಾಡಲು ಮಶೀನ್ ಒಂದನ್ನು ತಾನೇ ಸ್ವತ: ಡಿಸೈನ್ ಮಾಡಿ 1930ರ ದಶಕದಲ್ಲಿಯೇ ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಿಂದ ಪೇಟೆಂಟ್ ಹಕ್ಕು ಪಡೆದುಕೊಂಡರು. ಆ ಯಂತ್ರವನ್ನು ಬಳಸಿಯೇ ಕಾರ್ಖಾನೆಯನ್ನು ಆರಂಭ ಮಾಡಿದರು. ಹಾಗೆಯೇ ಬೆಂಗಳೂರಿನ ಒಡನಾಟದಲ್ಲಿ ಪರಿಚಯವಾದ ಅಯ್ಯಂಗಾರ್ ಹೆಣ್ಣುಮಗಳೊಬ್ಬಳನ್ನು ತನ್ನ ಎರಡನೆಯ ಹೆಂಡತಿಯಾಗಿ ವರಿಸಿಯೂ ಬಿಟ್ಟರು.
ತನ್ನ ಅಪ್ಪ ಸತ್ತ ನಂತರವೇ ಊರಿಗೆ ಮರಳುವೆನೆಂದು ಶಪಥ ತೊಟ್ಟಿದ್ದ ಈ ಛಲದಂಕಮಲ್ಲ ನಮ್ಮ ಮುತ್ತಜ್ಜ ಬಸವಪ್ಪ ಬಳ್ಳಾರಿಯವರ ಮರಣದ ನಂತರವೇ ಗದುಗಿಗೆ ಇಬ್ಬರು ಹೆಂಡಿರು ಮತ್ತು ಮೂವರು ಮಕ್ಕಳೊಂದಿಗೆ ವಾಪಸ್ಸಾದರು. ಬೆಂಗಳೂರಿನ ಬೆಡಗನ್ನು ಕಂಡನುಭವಿಸಿದ್ದ ಈ ಸೊಗಸುಗಾರ ವೀರಭದ್ರಪ್ಪ ಬಳ್ಳಾರಿ ಇನ್ನು ಮುಂದೆ ಇಂಥಾ ಊರಲ್ಲಿ ಬದುಕುವುದು ಹೇಗೆ ಎಂದು ತೊಳಲಾಡಿದರು. ಈ ತೊಳಲಾಟದಿಂದ ಹೊರಬರಲೆಂದೇ ಗದಗ್ ಶಹರಕ್ಕೆ ಬೆಂಗಳೂರು ಮಾದರಿಯ ಮಾಸ್ಟರ್ ಪ್ಲಾನ್ ತಯಾರಿಸಿ ಕೊಟ್ಟು ಅದರ ಆಧುನೀಕರಣಕ್ಕೆ ಕಾರಣರಾದರು.
ಗದುಗಿನ ಸುಂದರೀಕರಣಕ್ಕೆ ಅಗತ್ಯವಿದ್ದ ಸಿವಿಲ್ ಇಂಜಿನಿಯರಿಂಗ್ ನಕಾಶೆಗಳನ್ನು ಕೂಡ ನನ್ನ ಅಜ್ಜ ತಾನೇ ಸ್ವತ: ತಯಾರಿಸಿ ಇಲ್ಲಿನ ಮುನಿಸಿಪಾಲಿಟಿಗೆ ಅನುಷ್ಟಾನಗೊಳಿಸುವಂತೆ ಮನವೊಲಿಸಿಬಿಟ್ಟರು. ಹೀಗೆ ಔಪಚಾರಿಕ ಪದವಿಯಿಲ್ಲದೆಯೂ ಮುಂದೊಮ್ಮೆ ಹುಬ್ಬಳ್ಳಿಯ ನಗರ ಪಾಲಿಕೆಗೆ ಆಟೋಮ್ಯಾಟಿಕ್ ಕೊಳಚೆ ನೀರು ವಿಸರ್ಜನೆಯ ವಿನೂತನ ಯಂತ್ರದ ವಿನ್ಯಾಸವನ್ನೂ ತಾವೇ ರೂಪಿಸಿಕೊಟ್ಟರು. ಈ ಮೆಕ್ಯಾನಿಕಲ್ ಇಂಜಿನಿಯರಿಂಗಿನ ಹೊಸ ಯಂತ್ರಕ್ಕೂ ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದ ಹೈಡ್ರಾಲಿಕ್ ತಂತ್ರಜ್ಞಾನ ವಿಭಾಗದ ಪೇಟೆಂಟ್ ಮಾನ್ಯತೆ ದೊರಕಿಸಿಕೊಂಡರು.!
ಮುಂಬೈ ಕನರ್ಾಟಕ ವಿದ್ಯುತ್ ಬಳಕೆದಾರರ ಪರಿಷತ್ ಎಂಬ ಸಂಘಟನೆಯನ್ನು ಸ್ಥಾಪಿಸಿ ಕೆಂಗಲ್ ಹನುಮಂತಯ್ಯ ಮತ್ತು ಕೆ. ಚೆನ್ನಬಸಪ್ಪನವರಂಥ ಹಳೆಯ ಮೈಸೂರಿನ ಮೇಧಾವಿ ಮುತ್ಸದ್ದಿಗಳನ್ನು 1956ರಷ್ಟು ಹಿಂದೆಯೇ ಗದುಗಿಗೆ ಕರೆಸಿಕೊಂಡು ಸಮ್ಮೇಳನ ನಡೆಸಿದರು. ಇಲ್ಲಿನ ಮತ್ತು ಧಾರವಾಡ, ಬೆಳಗಾವಿ ಹಾಗೂ ಹಾವೇರಿ ನಗರಗಳಲ್ಲಿ ಏಕಸ್ವಾಮ್ಯ ಹೊಂದಿದ್ದ ಖಾಸಗಿ ವಿದ್ಯುತ್ ಸರಬರಾಜು ಕಂಪನಿಗಳ ರಾಷ್ಟ್ರೀಕರಣಕ್ಕೆ ಜನಾಗ್ರಹ ರೂಪಿಸಿದರು.
1972-73ರಲ್ಲಿ ದೇವರಾಜ ಅರಸು ಮುಖ್ಯ ಮಂತ್ರಿತ್ವದ ಇಂದಿರಾ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ ಮಂತ್ರಿಯಾಗಿದ್ದ ಹುಲಕೋಟಿ ಹುಲಿ ದಿವಂಗತ ಕೆ.ಹೆಚ್. ಪಾಟೀಲರಿಗೆ ಗದುಗಿನ ಜನತೆಯ ಪರವಾಗಿ ಒತ್ತಡ ಹೇರಿ ಈ ಖಾಸಗಿ ವಿದ್ಯುತ್ ಸರಬರಾಜು ಕಂಪನಿಗಳ ರಾಷ್ಟ್ರೀಕರಣ ಮಾಡಿಸುವಲ್ಲಿ ಯಶಸ್ವಿಯಾಗುವ ಮೂಲಕ ಮುಂಬೈ ಕರ್ನಾಟಕವನ್ನು ರಾಜ್ಯದ ಮುಖ್ಯ ವಾಹಿನಿಗೆ ತರಲು ಕಾರಣರಾದರು ಬಳ್ಳಾರಿ ವೀರಭದ್ರಪ್ಪ.
ಇಷ್ಟೆಲ್ಲಾ ಊರು ಉಸಾಬರಿ ಹಚ್ಚಿಕೊಂಡು ಸಾರ್ವಜನಿಕ ನೆಮ್ಮದಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ನನ್ನ ಅಜ್ಜ ಯಾವತ್ತೂ ಯಾವುದೇ ಅಧಿಕಾರ ಸ್ಥಾನಕ್ಕಾಗಿ ಹಂಬಲಿಸಲೂ ಇಲ್ಲ. ಹಾಗೆಯೇ ವ್ಯಾಪಾರದಲ್ಲಿ, ಉಧ್ಯಮದಲ್ಲಿ ಹುಚ್ಚಾಪಟ್ಟೆ ಹಣ ಮಾಡಬೇಕೆಂಬ ಗೀಳಿಗೂ ಬಲಿಯಾಗಲಿಲ್ಲ. ಅಂತೆಯೇ ಜಾತಿ ರಾಜಕೀಯದ ಸಣ್ಣತನಕ್ಕೂ ಅವಕಾಶ ನೀಡಲಿಲ್ಲ. ತನ್ನ ಪೋಷಾಕು, ಊಟ, ಉಪಚಾರ, ಓದು, ಬರವಣಿಗೆ, ಪ್ರವಾಸ ಇತ್ಯಾದಿ ಸದಭಿರುಚಿಯ ಹವ್ಯಾಸಗಳಲ್ಲಿಯೇ ತನ್ನ ಸಾರ್ಥಕ ಬದುಕನ್ನು ಪೂರೈಸಿದ ನನ್ನ ಅಜ್ಜ ಗದುಗಿನ ಸಾಂಸ್ಕೃತಿಕ ಬದುಕಿನ ಶ್ರೀಮಂತಿಕೆಗೆ ಯಥಾಶಕ್ತಿ ದುಡಿದು, ತುಡಿದು ನಿವೃತ್ತಿಯಾದಾಗ ಅವರಿಗಿನ್ನೂ 45ದೋ ಅಥವಾ 50ತ್ತೋ ವಯಸ್ಸಾಗಿರಬೇಕು. ಮುಂದೆ 20.04.1985 ರಂದು ಅವರು ಮಡಿದಾಗ ಗದಗ್ ನಗರಕ್ಕೆ ಅವರಿತ್ತ ನಾಗರಿಕ ಬದುಕಿನ ಮತ್ತು ಸುಂದರ ಜೀವನ ಶೈಲಿಯ ಮಾದರಿ ಚಿರಸ್ಥಾಯಿಯಾಗಿ ಉಳಿದುಬಿಟ್ಟಿತು.
Post a Comment