ಪ್ರೋ| ಕೆ.ಜಿ.ಕುಂದಣಗಾರರೆಂಬ ’ಕುಂದಣ’

ಕೃಪೆ - `ಮೂರ್ತಿ' ಪೂಜೆ
ಕಾವ ಗದುಗಿನ ವೀರನಾರಾಯಣನ ಬೀಡಾದ ಹಿಂದಿನ ಕೃತಪುರ- ಇಂದಿನ ಗದುಗಿನಲ್ಲಿ ಕನ್ನಡದ ಹಬ್ಬ - ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಿನ ವಾರ ಶುರುವಾಗಲಿದೆ. ಈ ಹಿಂದೆ ೧೯೬೧ನೇ ಇಸ್ವಿಯಲ್ಲಿ ೪೩ನೇ ಸಮ್ಮೇಳನ ಇಲ್ಲಿ ನಡೆದಿತ್ತು. ಅಂದಿನ ಕನ್ನಡಮ್ಮನ ಪೂಜೆಯ ಹಿರಿಯಾಳಾಗಿದ್ದವರು ಶ್ರೀ ಕುಂದಣಗಾರರು. ಈಗ ಗದುಗಿನಲ್ಲಿ ಮತ್ತೆ ಕನ್ನಡಮ್ಮನ ತೇರು. ೧೯೬೧ರ ಸಾಹಿತ್ಯ ಸಮ್ಮೇಳನ ಅತ್ಯಂತ ಮಹತ್ವದ್ದೂ ಕೂಡ ಹೌದು. ೧೯೬೧ರ ಗದುಗಿನ ಸಮ್ಮೇಳನದಲ್ಲಿ ಮೈಸೂರ್ ರಾಜ್ಯವನ್ನು ಕರ್ನಾಟಕವೆಂದು ಮರುನಾಮಕರಣ ಮಾಡಬೇಕೆಂಬ ನಿರ್ಣಯವನ್ನು ತೆಗೆದುಕೊಂಡು, ಅನುಶ್ಥಾಣಗೊಂಡ ಕರ್ಮಭೂಮಿಯಿದು. ಗದುಗಿನ ಸಮ್ಮೇಳನದ ಈ ಸಂದರ್ಭದಲ್ಲಿ , ಬನ್ನಿ ಕುಂದಣಗಾರರ ’ಮೂರ್ತಿ’ಪೂಜೆ ಮಾಡೋಣ.

ಶ್ರೀ ಕೆ.ಜಿ.ಕುಂದಣಗಾರರ ಈ ಮೂರ್ತಿ ಇರುವುದು ಧಾರವಾಡದ ವಿದ್ಯಾಭವನದ ಎದುರುಗಡೆ. ಈ ಮೂರ್ತಿಯ ಸ್ಥಾಪನೆಯಾದದ್ದು ೦೫-೦೯-೨೦೦೫ರಂದು:

ಕನ್ನಡದೊಂದಿಗೆ ಪಾಲಿ, ಮರಾಠಿ, ಅರ್ಧ-ಮಾಗಧಿ, ಇಂಗ್ಲೀಷಿನಲ್ಲೂ ವಿದ್ವಾಂಸರಾಗಿದ್ದ ಕುಂದಣಗಾರರ ಪೂರ್ತಿ ಹೆಸರು - ಕಲ್ಲಪ್ಪ ಗಿರಿಯಪ್ಪ ಕುಂದಣಗಾರ. ಇಂದಿನ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿರುವ ಕೌಜಲಿಗಿ ಕುಂದಣಗಾರರ ಹುಟ್ಟುರು. ಹುಟ್ಟಿದ್ದು ಕ್ರಿಶ ೧೮೯೫ರಲ್ಲಿ. ತಂದೆ ಗಿರಿಯಪ್ಪ, ಮನೆತನದ ಕಸಬು ಪತ್ತಾರಿಕೆ. ಚಿಕ್ಕಂದಿನಲ್ಲಿಯೇ ತಂದೆ-ತಾಯಿಯರನ್ನು ಕಳೆದುಕೊಂಡ ಅವರು ಚಿಕ್ಕಪ್ಪನ ಆಸರೆಯಲ್ಲಿ ಬೆಳೆದರು.

ಕಷ್ಟ-ಕಾರ್ಪಣ್ಯಗಳ ನಡುವೆಯೇ ಕೌಜಲಿಗಿ-ಬೆಳಗಾವಿ-ಧಾರವಾಡಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಕುಂದಣಗಾರರು, ಉದ್ಯೋಗ ಪರ್ವವನ್ನು ಗೋಕಾಕಿನಲ್ಲಿ ಶಾಲಾ ಶಿಕ್ಷಕರಾಗಿ ಶುರುಮಾಡಿದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರುಷ ಕೆಲಸಮಾಡಿ, ಅದರ ನಂತರ ಕೊಲ್ಹಾಪುರದ ರಾಜಾರಾಮ್ ಕಾಲೇಜಿಗೆ ಸೇರಿದರು. ಎರಡು ದಶಕಗಳಷ್ಟು ಸಮಯವನ್ನು ರಾಜಾರಾಮ್ ಕಾಲೇಜಿನ ಸೇವೆಯಲ್ಲಿ ಕಳೆದ ಕುಂದಣಗಾರರು, ಕೊಲ್ಹಾಪುರದಲ್ಲಿನ ತಮ್ಮ ವಾಸ್ತವ್ಯವನ್ನು ಸಾರ್ಥಕವಾಗಿ ಕಳೆದರು- ಉತ್ತರ ಕರ್ನಾಟಕ ಮತ್ತು ಕೊಲ್ಹಾಪುರ ಭಾಗದ ಶಾಸನಗಳ ಅಧ್ಯಯನ ಮತ್ತು ಪ್ರಕಟಣೆ, ಕೊಲ್ಹಾಪುರದ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಉತ್ಖನನ, ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನದ ಬಗೆಗಿನ ಲೇಖನ ಪ್ರಕಟಣೆ ಹೀಗೆ.

ಎಮ್‌ಈಎಸ್‌ನವರ ಗಲಾಟೆ ನೋಡುತ್ತಲೇ ಬೆಳೆದ ನಮ್ಮ ತಲೆಮಾರಿನವರಿಗೆ ಮಹಾರಾಷ್ಟ್ರದಲ್ಲಿ ಕುಂದಣಗಾರರು ಶಾಸನ ಅಧ್ಯಯನ ಮಾಡುತ್ತಿದ್ದರು ಎಂದರೆ ಮರಾಠಿ ಶಾಸನಗಳನ್ನಷ್ಟೇ ಅಧ್ಯಯನ ಮಾಡುತ್ತಿದ್ದರಾ ಎಂಬ ಅನುಮಾನ ಮೂಡುವುದು ಸಹಜ. ಆದರೆ ನಾವು ಗಮನಿಸಬೇಕಾದ ಅಂಶವೆಂದರೆ ಕನ್ನಡದ ರಾಜರು ಇಂದು ನಾವು ಮಹಾರಾಷ್ಟ್ರವೆಂದು ಕರೆಯುವ ಬಹುತೇಕ ಭೂಭಾಗದಲ್ಲಿ ಬಹುಸಮಯ ರಾಜ್ಯವಾಳಿದ್ದರು. ಹೀಗಾಗಿ ಅಲ್ಲಿ ದೊರೆತ ಕನ್ನಡ ಶಾಸನಗಳ ಸಂಖ್ಯೆ ದೊಡ್ಡದು. ಕುಂದಣಗಾರಂತವರು ಇಂತಹ ಶಾಸನಗಳನ್ನು ಬೆಳಕಿಗೆ ತಂದು ಕನ್ನಡಕ್ಕೆ ಮಹದುಪಕಾರ ಮಾಡಿದ್ದಾರೆ.

ಕುಂದಣಗಾರರು ಹಲವು ಸೃಜನಶೀಲ ಕೃತಿಗಳನ್ನು ರಚಿಸಿದ್ದರೂ, ಸಂಶೋಧನಾತ್ಮಕ ಕೆಲಸಗಳಿಗೆ ಅವರು ಹೆಸರುವಾಸಿಯಾಗಿದ್ದರು. ಜಿನಸೇನಾಚಾರ್ಯನ ಪೂರ್ವಪುರಾಣ, ಕುಮದೇಂದು ರಾಮಾಯಾಣ, ಪಂಪನ ಆದಿಪುರಾಣ, ಕಲ್ಯಾಣಕೀರ್ತಿಯ ಚಿನ್ಮಯ ಚರಿತೆ, ಜ್ಞಾನಭಾಸ್ಕರ ಚರಿತೆ ಇತ್ಯಾದಿಗಳನ್ನು ಇತರ ಪಂಡಿತರೊಡನೆ ಕೂಡಿ ಸಂಪಾದಿಸಿಕೊಟ್ಟಿದ್ದಾರೆ. ಅವರು ಹರಿಹರ ಕವಿಯ ಬಗ್ಗೆ ಹರಿಹರದೇವ ಎಂಬ ಕೃತಿಯನ್ನು ಸಂಪಾದಿಸಿಕೊಟ್ಟಿದ್ದಾರೆ.

ಅದಲ್ಲದೇ ಹಲವು ಕನ್ನಡ ಕೃತಿಗಳನ್ನು ಮರಾಠಿಗೆ ಅನುವಾದ, ’ವಾಗ್ಬೂಷಣ’ ಮತ್ತು ’ಜಿನಸಮಯ’ ಪತ್ರಿಕೆಗಳ ಸಂಪಾದನೆ, ಹೀಗೆ ಸುಮಾರು ಐದು ದಶಕಗಳ ಕನ್ನಡ ಸೇವೆ ಮಾಡಿದ ಕುಂದಣಗಾರರಿಗೆ ನಮೋಃ.