೭೬ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕ.ಸ.ಪ ಅಧ್ಯಕ್ಷರ ಭಾಷಣ
12:12 PM
Posted by ಆಲೆಮನೆ
ಆತ್ಮೀಯ ಕನ್ನಡ ಬಂಧುಗಳೆ,
೭೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಹಾಕವಿ ಕುಮಾರವ್ಯಾಸ ಮಂಟಪದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಆಸೀನರಾಗಿರುವ ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ. ಗೀತಾ ನಾಗಭೂಷಣ ಅವರೆ, ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೆ, ಸಚಿವರಾದ ಶ್ರೀರಾಮುಲು ಅವರೆ, ಎಲ್ಲಾ ಗಣ್ಯಮಾನ್ಯರೆ, ನನ್ನ ಪ್ರೀತಿಯ ಕನ್ನಡ ಬಂಧುಗಳೆ, ಮಾಧ್ಯಮದ ಸ್ನೇಹಿತರೆ, ಸಮ್ಮೇಳನದ ಯಶಸ್ಸಿಗೆ ದುಡಿಯುತ್ತಿರುವ ಎಲ್ಲಾ ಮಹನೀಯರೆ, ನಿಮಗೆ ನನ್ನ ನಮಸ್ಕಾರಗಳು.
ಕನ್ನಡ ಸಾಹಿತ್ಯ ಪರಿಷತ್ತಿನ ಮಹೋನ್ನತ ಸಮಾರಂಭವಾಗಿ ಪ್ರತಿವರ್ಷ ಆಯೋಜನೆಗೊಳ್ಳುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗದಗಿನಲ್ಲಿ ನಡೆಯುತ್ತಿರುವುದು ನನಗೆ ಸಂತಸವುಂಟುಮಾಡಿದೆ. ಈ ಮಣ್ಣಿನಲ್ಲೇ ಕನ್ನಡದ ಮಹಾಕವಿ ಕುಮಾರವ್ಯಾಸ ಜನ್ಮತಳೆದು, ಮಹತ್ವದ ಮಹಾಕಾವ್ಯವಾದ ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದ್ದು. ಇಲ್ಲೇ ಕನ್ನಡದ ಆದರ್ಶ ನಾರಿ ದಾನಚಿಂತಾಮಣಿ ಅತ್ತಿಮಬ್ಬೆ ಕನ್ನಡ ಸಂಸ್ಕೃತಿಯನ್ನು ಉಜ್ವಲವಾಗಿ ಬೆಳಗಿಸಿದ್ದು. ಇದೇ ಭೂಮಿಯಲ್ಲೇ ದುರ್ಗಸಿಂಹ, ನಾಗವರ್ಮ, ನಯಸೇನ, ಚಾಮರಸ, ಅಜಗಣ್ಣ, ಮುಕ್ತಾಯಕ್ಕ, ಹುಯಿಲಗೋಳ ನಾರಾಯಣರಾಯ, ಅಂದಾನಪ್ಪ ದೊಡ್ಡಮೇಟಿ, ಆಲೂರು ವೆಂಕಟರಾವ್, ರಂ.ಶ್ರೀ. ಮುಗಳಿ, ಪಂಚಾಕ್ಷರಿ ಗವಾಯಿ, ಮೇವುಂಡಿ ಮಲ್ಲಾರಿ, ಎಚ್.ಎನ್. ಹೂಗಾರ್, ಶಿದ್ಧನಗೌಡ ಪಾಟೀಲ ಮೊದಲಾದ ಸಂಸ್ಕೃತಿ ಶ್ರೇಷ್ಠರು ಸಾಧನೆಗೈದುದು. ಸಾಹಿತ್ಯದ ಶ್ರೀಗಂಧ ತನ್ನ ಕಂಪು ಬೀರಲು ಕಾರಣವಾದುದು ಇದೇ ಪರಿಸರ. ಆದುದರಿಂದಲೇ ನನಗೆ ಗದುಗಿನ ಬಗೆಗೆ ವಿಶೇಷ ಅಕ್ಕರೆ, ಕಕ್ಕುಲತೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಉಜ್ವಲ ಇತಿಹಾಸವಿದೆ. ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಏಳಿಗೆಯಲ್ಲಿ ಕಳೆದ ತೊಂಬತ್ತೈದು ವರ್ಷಗಳಿಂದ ಪ್ರಮುಖ ಪಾತ್ರ ನಿರ್ವಹಿಸುತ್ತ ಬರುತ್ತಿರುವ ಪರಿಷತ್ತಿಗೆ ಆರಂಭದಲ್ಲಿ ಇದ್ದ ಹೆಸರು ‘ಕರ್ನಾಟಕ ಸಾಹಿತ್ಯ ಪರಿಷತ್ತು’. ೫-೫-೧೯೧೫ರಂದು ಬೆಂಗಳೂರಿನಲ್ಲಿ ಇದು ಅಸ್ತಿತ್ವಕ್ಕೆ ಬಂದಾಗ ಎಚ್.ವಿ. ನಂಜುಂಡಯ್ಯ ಅವರು ಪರಿಷತ್ತಿನ ಪ್ರಥಮ ಅಧ್ಯಕ್ಷರಾದರು. ಕನ್ನಡ ಪುಸ್ತಕಗಳ ಪ್ರಕಟಣೆ, ಪತ್ರಿಕೆಗಳ ಪ್ರಸರಣೆ, ವಾಚನಾಲಯಗಳ ಸ್ಥಾಪನೆ, ಉಪನ್ಯಾಸಗಳ ಆಯೋಜನೆ - ಹೀಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವುದು ಆರಂಭದ ಉದ್ದೇಶವಾಗಿತ್ತು. ೧೯೨೦ ರಿಂದ ೧೯೪೬ರವರೆಗೆ ಮೈಸೂರು ರಾಜಮನೆತನದವರಾದ ಎಂ. ಕಾಂತರಾಜೇ ಅರಸ್ ಅವರು ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಚುನಾಯಿತ ಉಪಾಧ್ಯಕ್ಷರು ಪರಿಷತ್ತಿನ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಮುಂದೆ ಕಂಠೀರವರ ನರಸರಾಜ ಒಡೆಯರ್, ಜಯಚಾಮರಾಜ ಒಡೆಯರ್, ಬಸವಪ್ರಭು, ರಾಜಾ ಲಖಮನಗೌಡ ಅವರು ಅಧ್ಯಕ್ಷ ಪದವಿಯಲ್ಲಿದ್ದರು. ಕರ್ಪೂರ ಶ್ರೀನಿವಾಸರಾವ್, ಡಿ.ವಿ. ಗುಂಡಪ್ಪ, ಬಿ.ಎಂ.ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಉಪಾಧ್ಯಕ್ಷರಾಗಿ ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ. ೧೯೨೩ರಲ್ಲಿ ಬೆಂಗಳೂರಿನ ಶಂಕರಪುರದಲ್ಲಿ ಬಾಡಿಗೆಗೆ ಮನೆಯೊಂದನ್ನು ಪಡೆದು ಪರಿಷತ್ತಿನ ಚಟುವಟಿಕೆಗಳನ್ನು ವಿಸ್ತೃತಗೊಳಿಸಲು ಅಡಿಪಾಯ ಹಾಕಲಾಯಿತು. ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಪ್ರಯತ್ನದಿಂದಾಗಿ ಈಗ ಪ್ರಧಾನ ಕಚೇರಿಯಿರುವ ಸ್ಥಳದಲ್ಲಿ ನಿವೇಶನವು ಉಚಿತವಾಗಿ ಲಭ್ಯವಾಯಿತು. ಆ ಸ್ಥಳದಲ್ಲಿ ಶ್ರೀ ಕೃಷ್ಣರಾಜ ಪರಿಷನ್ಮಂದಿರದ ನಿರ್ಮಾಣ ೧೯೩೩ರಲ್ಲಿ ಪೂರ್ಣಗೊಂಡಿತು. ಮೈಸೂರು ಸರ್ಕಾರ ಪರಿಷತ್ತಿಗೆ ೧೮೦೦ ರೂಪಾಯಿ ಅನುದಾನವನ್ನು ೧೯೨೮ರಷ್ಟು ಹಿಂದೆಯೇ ನೀಡಲು ಪ್ರಾರಂಭಿಸಿದ್ದು ಐತಿಹಾಸಿಕ ಸತ್ಯ. ಬಿ.ಎಂ.ಶ್ರೀ. ಅವರು ಪರಿಷತ್ತಿಗೆ ಲಾಂಛನವನ್ನು ನೀಡಿದ್ದಲ್ಲದೆ ಮುದ್ರಣಾಲಯವನ್ನು ಸ್ಥಾಪಿಸಿದರು. ಕನ್ನಡ ನುಡಿ ವಾರಪತ್ರಿಕೆಯನ್ನು ಪ್ರಾರಂಭಿಸಿ, ಅ.ನ.ಕೃ. ಅವರನ್ನು ಸಂಪಾದಕರನ್ನಾಗಿ ನೇಮಿಸಿದರು. ೧೯೩೮ರಲ್ಲಿ ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ‘ಕನ್ನಡ ಸಾಹಿತ್ಯ ಪರಿಷತ್ತು’ ಆಗಿ ಬದಲಾಯಿತು. ಕಾಸರಗೋಡಿನಲ್ಲಿ ೧೯೪೭ ಸೆಪ್ಟೆಂಬರ್ ೨೯ ರಂದು ನಡೆದ ಸರ್ವ ಸದಸ್ಯರ ಸಭೆಯು ಸಮ್ಮೇಳನಾಧ್ಯಕ್ಷರೇ ಪರಿಷತ್ತಿನ ಅಧ್ಯಕ್ಷರಾಗಬೇಕೆಂದು ನಿರ್ಣಯಿಸಿದ್ದರ ಪರಿಣಾಮವಾಗಿ ಉಪಾಧ್ಯಕ್ಷರ ಸ್ಥಾನ ರದ್ದಾಗಿ ಎಂ.ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷರಾದರು. ಅವರೇ ಕನ್ನಡ ನುಡಿ ಮತ್ತು ಪರಿಷತ್ಪತ್ರಿಕೆಯ ಸಂಪಾದಕರಾದರು. ಕೆಂಗಲ್ ಹನುಮಂತಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಕುಮಾರವ್ಯಾಸ ಭಾರತವನ್ನು ಮುದ್ರಿಸಲು ಅನುದಾನವನ್ನು ನೀಡಿದ್ದರಿಂದ ಕೇವಲ ಎರಡು ರೂಪಾಯಿಗೆ ಮಹಾಕಾವ್ಯವನ್ನು ನೀಡುವಂತಾದುದು ಇತಿಹಾಸ. ಎ.ಎನ್. ಮೂರ್ತಿರಾವ್, ಬಿ. ಶಿವಮೂರ್ತಿಶಾಸ್ತ್ರಿ, ಪ್ರೊ. ಜಿ. ವೆಂಕಟಸುಬ್ಬಯ್ಯ, ಜಿ. ನಾರಾಯಣ, ಹಂಪ. ನಾಗರಾಜಯ್ಯ, ಎಚ್.ಬಿ. ಜ್ವಾಲನಯ್ಯ, ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ, ಗೊ.ರು. ಚನ್ನಬಸಪ್ಪ, ಡಾ. ಸಾ.ಶಿ. ಮರುಳಯ್ಯ, ಎನ್. ಬಸವಾರಾಧ್ಯ, ಹರಿಕೃಷ್ಣ ಪುನರೂರು, ಪ್ರೊ. ಚಂದ್ರಶೇಖರ ಪಾಟೀಲ ಅವರು ಅಧ್ಯಕ್ಷರಾಗಿ ಪರಿಷತ್ತಿನ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದ್ದಾರೆ. ಜಿ. ನಾರಾಯಣ ಅವರು ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಸಮ್ಮೇಳನವನ್ನು ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಎಂದು ಕರೆದುದಲ್ಲದೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ೫೦ನೆಯ ಸಮ್ಮೇಳನವನ್ನು ಸಂಘಟಿಸಲಾಗಿತ್ತು. ಜಿ.ಎಸ್. ಸಿದ್ಧಲಿಂಗಯ್ಯ ಅವರ ಅವಧಿಯಲ್ಲಿ ಪರಿಷತ್ತಿಗೆ ಪ್ರತ್ಯೇಕ ಧ್ವಜ ರಚನೆಗೊಂಡಿತು. ಸಾ.ಶಿ. ಮರುಳಯ್ಯನವರು ಅಧ್ಯಕ್ಷರಾಗಿದ್ದಾಗ ಕನ್ನಡಾಂಬೆಯ ತೈಲಚಿತ್ರ ಸಿದ್ಧಗೊಂಡಿತು. ಇದೇ ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ದೇವೇಗೌಡ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಯನ್ನು ಅನುದಾನಕ್ಕೆ ಒಳಪಡಿಸಿದರು. ಈ ಎಲ್ಲ ಮಹನೀಯರ ಕಾರ್ಯಗಳು ನನಗೆ ಸ್ಫೂರ್ತಿ ನೀಡಿವೆ.
ನಾನು ಪರಿಷತ್ತಿನ ಅಧ್ಯಕ್ಷನಾದಾಗ ನನ್ನ ಮುಂದೆ ದೊಡ್ಡ ಸವಾಲುಗಳಿದ್ದವು. ಅವುಗಳನ್ನು ನಿಭಾಯಿಸುವ ಛಲದಿಂದ ಮುನ್ನುಗ್ಗಿದೆ. ಅದಕ್ಕೆ ಉತ್ತಮ ಫಲವನ್ನು ಪಡೆಯಲಾಗಿದೆ ಎಂಬ ಸಮಾಧಾನ ನನಗಿದೆ. ಆದಾಗ್ಯೂ ಇಂದು ಜಾಗತೀಕರಣದ ಪರಿಣಾಮವಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳು ಆಕ್ರಮಣಕ್ಕೊಳಗಾಗಿವೆ. ಮಹಾರಾಷ್ಟ್ರ ಗಡಿ ಸಮಸ್ಯೆ, ಕೇಂದ್ರ ಸರ್ಕಾರದ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಮೀಸಲಾತಿ, ಕನ್ನಡ ಭಾಷೆಗೆ ಸಿಗಬೇಕಿರುವ ಅಧಿಕೃತ ಶಾಸ್ತ್ರೀಯ ಸ್ಥಾನಮಾನದ ಸವಲತ್ತುಗಳು, ನೈಋತ್ಯ ರೈಲ್ವೆ ವಿಚಾರ, ಕಾವೇರಿ ಜಲವಿವಾದ, ಕೃಷ್ಣ-ಮಹದಾಯಿ ಯೋಜನೆಗಳ ನೀರು ಬಳಸಿಕೊಳ್ಳುವಲ್ಲಿ ತಕರಾರು, ಇಂಗ್ಲಿಷ್ ಎಂಬ ಮಾಯಾವಿ ಉಂಟುಮಾಡುತ್ತಿರುವ ತಲ್ಲಣಗಳು ಮುಂತಾದವುಗಳೆಲ್ಲವೂ ಸಮಸ್ಯೆಗಳಾಗಿಯೇ ಉಳಿದಿವೆ. ಇವುಗಳೆಲ್ಲವನ್ನು ಸಮರ್ಥವಾಗಿ ಎದುರಿಸಿ ನಿವಾರಿಸಿಕೊಳ್ಳಬೇಕಾದ ಹೊಣೆಗಾರಿಕೆ ಸಮಸ್ತ ಕನ್ನಡಿಗರ ಮೇಲಿದೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ರಾಜಿಗೆ ಅವಕಾಶವಿಲ್ಲದಂತೆ ಕಾರ್ಯೋನ್ಮುಖವಾಗಿವೆ.
ಕರ್ನಾಟಕಕ್ಕೆ ನಿರ್ದಿಷ್ಟ ಭಾಷೆ-ಸಂಸ್ಕೃತಿಯ ಇತಿಹಾಸವಿದೆ. ಭೌಗೋಳಿಕವಾಗಿ, ಚಾರಿತ್ರಿಕವಾಗಿ, ಭಾಷಿಕವಾಗಿ ಕನ್ನಡ ನಾಡು ಪ್ರತ್ಯೇಕ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಹೊಂದಿದೆ. ಅಭಿವೃದ್ಧಿ ದೃಷ್ಟಿಯಿಂದ, ಆಯಾ ಪ್ರದೇಶದ ಸ್ಥಿತಿಗತಿಗಳನ್ನು ಪರಿಗಣಿಸಿ ಪ್ರಗತಿಪರ, ಜನಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರಾದೇಶಿಕ ಅಸಮಾನತೆಯನ್ನು, ಪ್ರತ್ಯೇಕತೆಯ ಕೂಗನ್ನು ಹೋಗಲಾಡಿಸಿ ನಿಜವಾದ ಅರ್ಥದಲ್ಲಿ ನಮ್ಮದು ಸಾಂಸ್ಕೃತಿಕ ಕರ್ನಾಟಕ ಎಂಬುದನ್ನು ಸಮಸ್ತ ಕನ್ನಡಿಗರು ಒಂದಾಗಿ ಸಾಬೀತುಪಡಿಸಬೇಕಾಗಿದೆ. ರಾಜ್ಯ ಸರ್ಕಾರದ ಜೊತೆ ಸಂಘರ್ಷಕ್ಕೆ ಮುಂದಾಗದೆ ಸೌಹಾರ್ದದ ನೆಲೆಯಲ್ಲಿ ಪರಿಷತ್ತಿನ ಆಗಬೇಕಾದ ಕಾರ್ಯಗಳನ್ನು ಮಾಡಬೇಕೆಂದು ಅಗತ್ಯಗಳಿಗೆ ಸ್ಪಂದಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಕೇಳಿಕೊಂಡಾಗ ಅವರು ಪರಿಷತ್ತಿನ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ನಾನು ಹತ್ತು ಅಂಶಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದೆ. ಆ ಎಲ್ಲವೂ ಒಂದೇ ವರ್ಷದಲ್ಲಿ ಜಾರಿಯಾಗಿವೆ ಎಂಬ ಸಮಾಧಾನ ನನಗಿದೆ. ‘ಕನ್ನಡ ನುಡಿ’ ಜನಮೆಚ್ಚುವ ಪತ್ರಿಕೆಯಾಗಿ ರೂಪುಗೊಂಡಿದೆ ಎಂಬ ಸಂತೋಷ ನನಗಿದೆ. ಈಗಾಗಲೇ ಪರಿಷತ್ತಿನಲ್ಲಿ ಸಂಶೋಧನ-ನಿಘಂಟು ಕೇಂದ್ರಗಳು ಕ್ರಿಯಾಶೀಲವಾಗಿವೆ. ‘ಕನ್ನಡ ನಿಧಿ’ ರೂಪಿಸಿದ್ದು, ಸದಸ್ಯರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ, ಪರಿಷತ್ತಿನ ಪುಸ್ತಕಗಳ ಗುಣಮಟ್ಟ ಸುಧಾರಣೆ, ವಲಯ ಸಮ್ಮೇಳನಗಳ ಆಯೋಜನೆ, ‘ಗ್ರಾಮಸಿರಿ’ ಕಾರ್ಯಕ್ರಮಗಳ ಅನುಷ್ಠಾನ - ಹೀಗೆ ಹತ್ತಾರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಶೋಧನ ಕೇಂದ್ರವನ್ನು ಸ್ಥಾಪಿಸಲು ಒಂದು ಕೋಟಿ, ನಿಘಂಟು ಕಾರ್ಯಕ್ಕಾಗಿ ಒಂದು ಕೋಟಿ, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ತಲಾ ಐದುಲಕ್ಷ ರೂಪಾಯಿಗಳನ್ನು ಮಾನ್ಯ ಮುಖ್ಯಮಂತ್ರಿಗಳು ಮಂಜೂರು ಮಾಡಿದ್ದಾರೆ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಕನ್ನಡ ಜನತೆಯ ಪರವಾಗಿ ಸಲ್ಲಿಸುತ್ತೇನೆ. ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಜಯರಾಮರಾಜೇ ಅರಸು ಹಾಗೂ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಹಾಗೂ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ಇನ್ನೂ ಸಹ ಸೇವಾ ನಿಯಮಗಳು ರೂಪಿತವಾಗಿಲ್ಲ. ಅದನ್ನು ಆಗುಮಾಡಲು ಮಾನ್ಯ ಮುಖ್ಯಮಂತ್ರಿಗಳು ಸೂಕ್ತ ನಿರ್ದೇಶನವನ್ನು ನೀಡಬೇಕೆಂದು ಮನವಿ ಮಾಡುತ್ತಿದ್ದೇನೆ. ಪರಿಷತ್ತಿಗೆ ನಾನು ಅಧ್ಯಕ್ಷನಾದಾಗ ೬೫ ಸಾವಿರ ಮಂದಿ ಸದಸ್ಯರಿದ್ದರು. ಈಗ ಒಂದು ಲಕ್ಷ ಇಪ್ಪತ್ತೈದು ಸಾವಿರ ಸದಸ್ಯರಿದ್ದಾರೆ. ಪುಸ್ತಕ ಪ್ರಕಟಣೆಗೆ ಮುದ್ರಣಾಲಯವಿದೆ. ಕಚೇರಿಯ ಆಡಳಿತ ನಿರ್ವಹಣೆ, ಒಂದು ಸಾವಿರಕ್ಕೂ ಅಧಿಕ ದತ್ತಿನಿಧಿಗಳಿದ್ದು, ಅವುಗಳ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಸಭಾಂಗಣಗಳ ಮೇಲುಸ್ತುವಾರಿ, ನಿರ್ವಹಣೆಗೆ ಸಿಬ್ಬಂದಿ ಕೊರತೆಯಿದೆ. ಅನುದಾನ ಸಂಹಿತೆಗೆ ಒಳಪಟ್ಟಾಗ ೬೩ ಮಂದಿ ಸಿಬ್ಬಂದಿ ಇದ್ದರು. ಅಲ್ಲಿಂದೀಚೆಗೆ ಬಹಳ ಮಂದಿ ನಿವೃತ್ತಿ ಹೊಂದಿದ್ದು, ಈಗ ಕೇವಲ ೧೬ ಮಂದಿ ಮಾತ್ರ ಸೇವೆಯಲ್ಲಿದ್ದಾರೆ. ಪರಿಷತ್ತಿನ ಕಾರ್ಯಗಳನ್ನು ಎಲ್ಲಾ ಹಂತದಲ್ಲೂ ಕಂಪ್ಯೂಟರೀಕರಣಗೊಳಿಸಿ, ಆಡಳಿತವನ್ನು ಸುವ್ಯವಸ್ಥಿತವಾಗಿ ನಡೆಸಬೇಕಾಗಿರುವುದರಿಂದ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದೆ. ಆದುದರಿಂದ ಮಾನ್ಯ ಮುಖ್ಯಮಂತ್ರಿಗಳು ಹೊಸದಾಗಿ ೪೭ ಮಂದಿ ನೌಕರರನ್ನು ನೇಮಕ ಮಾಡಿಕೊಳ್ಳಲು ವಿಶೇಷ ಅನುಮತಿಯನ್ನು ನೀಡಿ, ಅದಕ್ಕನುಗುಣವಾಗಿ ಸಂಬಳದ ಅನುದಾನವನ್ನು ಹೆಚ್ಚಿಸಬೇಕೆಂದು ವಿನಂತಿಸುತ್ತೇನೆ. ಕನ್ನಡಿಗರ ಸಾರ್ವಭೌಮ ಸಂಸ್ಥೆಯು ಸಿಬ್ಬಂದಿ ಕೊರತೆಯಿಂದ ನರಳುವುದು ಕನ್ನಡಿಗರೆಲ್ಲರಿಗೂ ನೋವಿನ ಸಂಗತಿ. ಇದರಿಂದ ಕನ್ನಡದ ಕೆಲಸಗಳಿಗೆ ಹಿನ್ನಡೆಯುಂಟಾಗುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಮತ್ತೊಮ್ಮೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸುತ್ತೇನೆ. ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದರು. ಅದನ್ನು ಕೂಡಲೇ ಕಾರ್ಯಗತಗೊಳಿಸಬೇಕು. ಹಾಗೆ ಮಾಡುವಾಗ ಬೆಂಗಳೂರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವನ್ನು ಒಂದು ತಾಲ್ಲೂಕೆಂದು ಪರಿಗಣಿಸಬೇಕೆಂದು ವಿನಂತಿ. ಕರ್ನಾಟಕದ ಹೆಮ್ಮೆಯ ರಾಜಧಾನಿಯಾಗಿರುವ ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ನಾಲ್ಕು ನಿವೇಶನಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಭವನಗಳ ನಿರ್ಮಾಣಕ್ಕಾಗಿ ಅವುಗಳನ್ನು ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸುತ್ತೇನೆ. ‘ಕನ್ನಡ ನುಡಿ’ ಮಾಸಪತ್ರಿಕೆ ಮತ್ತಷ್ಟು ಚಂದವಾಗಿ, ವಿಷಯ ವೈವಿಧ್ಯತೆಯಿಂದ ಮೂಡಿಬರಲು ಸಹಾಯಕವಾಗುವಂತೆ ಪ್ರತಿ ತಿಂಗಳು ಎರಡು ಲಕ್ಷ ರೂಪಾಯಿಗಳ ಜಾಹೀರಾತು ನೀಡಬೇಕೆಂದು ಕೋರುತ್ತೇನೆ.
ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದುಭಾರತ ಕಣ್ಣಲಿ ಕುಣಿಯುವುದುಮೈಯಲಿ ಮಿಂಚಿನ ಹೊಳೆ ತುಳುಕಾಡುವುದು
ಎಂಬ ರಾಷ್ಟ್ರಕವಿ ಕುವೆಂಪು ಅವರ ನುಡಿಯಂತೆ ಈ ನೆಲದಲ್ಲಿ ನಾವು ಸಮಾವೇಶಗೊಂಡಿರುವುದೇ ಒಂದು ರೋಮಾಂಚನದ ಸಂಗತಿ. ಚಂಪೂ, ವಚನ, ಕೀರ್ತನೆ, ಸಾಂಗತ್ಯ, ರಗಳೆ, ತ್ರಿಪದಿಗಳು ಅರಳಿದ ಈ ಸಾರಸ್ವತ ಕಂಪಿನ ಸೊಂಪಿನ ಇಂಪಿನ ಬೀಡಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯುತ್ತಿರುವುದು ಎಲ್ಲರೂ ಅಭಿಮಾನಪಡಬೇಕಾದ ಸಂಗತಿಯಾಗಿದೆ.
ಈ ಮಹಾಮಂಟಪದಲ್ಲಿ ಕುಮಾರವ್ಯಾಸ, ಅತ್ತಿಮಬ್ಬೆ, ದುರ್ಗಸಿಂಹ, ನಾಗವರ್ಮ, ನಯಸೇನಾದಿಗಳು ಅಗೋಚರವಾಗಿ ನೆಲೆಗೊಂಡು ಸಂಭ್ರಮಪಡುತ್ತಿರುವರೆಂದು ಭಾವಿಸಿ, “ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದೊಡೆ ಮೇಲೆ ಪಲ್ಲವಿಸಿತ್ತು ನೋಡಾ” ಎಂಬ ಶರಣರ ನುಡಿಗಡಣವನ್ನು ನೆನೆದು ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.
ಕನ್ನಡ ಬಾಳಲಿ ಕನ್ನಡ ಬೆಳಗಲಿ ಎಲ್ಲೆಡೆ ಕನ್ನಡ ಮೆರೆಯಲಿ ಜೈ ಕರ್ನಾಟಕ
Post a Comment