‘ಹಕ್ಕಿ ಹಾರುತಿದೆ ನೋಡಿದಿರಾ..?’
4:42 PM
Posted by ಆಲೆಮನೆ
-ಜಿ ಎನ್ ಮೋಹನ್
'ಓ ಬಿ ವ್ಯಾನ್ ಬೇಕು' ಅಂದೆ. ರಾಮೋಜಿ ಫಿಲಂ ಸಿಟಿಯ ಮೀಟಿಂಗ್ ಹಾಲ್ ನಲ್ಲಿದ್ದವರು ಏನೋ ಟೆರರಿಸ್ಟ್ ಅಟ್ಯಾಕ್ ಆಗಿದೆ ಅಂತ ಗಾಬರಿಯಾದರು. ಅಂತದ್ದೇನೂ ಇಲ್ಲ ಅಂದೆ. ಹಾಗಿದ್ರೆ ಸೋನಿಯಾ ಗಾಂಧಿ ಬರ್ತಾ ಇದ್ದಾರಾ ಅಂದ್ರು. ' ನೋ' ಅಂತ ತಲೆ ಆಡಿಸಿದೆ. ಮತ್ತೆ ಓ ಬಿ ವ್ಯಾನ್ ಯಾಕೆ ಅಂತ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನ ಕವರೇಜ್ ಗೆ ಅಂದೆ. ಒಂದು ಕ್ಷಣ ಎಲ್ಲರೂ ಮುಖ ಮುಖ ನೋಡಿಕೊಂಡರು. ಓ ಬಿ ವ್ಯಾನ್ ಗೂ ಸಾಹಿತ್ಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಬೆಟ್ಟದ ಮೇಲಿನ ನೆಲ್ಲೀಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ..?
ಇಂತದ್ದೇ ಗಾಬರಿ ನೇರಾ ನೇರಾ ರಾಮೋಜಿರಾಯರಿಗೇ ಆಗಿತ್ತು. ತೇಜಸ್ವಿ ಇಲ್ಲವಾದಾಗ ಈಟಿವಿಯ ಬುಲೆಟಿನ್ ಗಳೆಲ್ಲವೂ ಶೋಕ ಹೊದ್ದು ಕೂತಿತು. ಗಂಟೆಗೊಮ್ಮೆ ಪ್ರಸಾರವಾಗುವ ಬುಲೆಟಿನ್ ಗಳು ಹಾಂ, ಹ್ಞೂ ಎನ್ನುವುದರೊಳಗೆ ಮುಗಿದು ಹೋಗಿರುತ್ತವೆ. ಹಾಗಾಗಿ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಪ್ರೈಮ್ ಬುಲೆಟಿನ್ ಮಾತ್ರ ಎಲ್ಲರ ಗರುಡಗಣ್ಣನ್ನೂ ದಾಟಿಯೇ ಬರಬೇಕು. ಸಂಸ್ಥೆಯ ಮುಖ್ಯಸ್ಥರಿಂದ ಹಿಡಿದು ಮ್ಯಾನೇಜರ್ ವರೆಗೆ ಎಲ್ಲರೂ 'ನೈಟ್ ವಾಚ್ ಮನ್' ಗಳೇ..ಹಾಗಿರುವಾಗ ತೇಜಸ್ವಿ ಇಲ್ಲವಾದ ದಿನ ಇಡೀ ಬುಲೆಟಿನ್ ಅನ್ನು ತೇಜಸ್ವಿಗೆ ಮೀಸಲಿಟ್ಟಿದ್ದು ಎಲ್ಲರಿಗೂ ಷಾಕ್ ನೀಡಿತ್ತು. ತೇಜಸ್ವಿ ಇಲ್ಲ ಎನ್ನುವ ಸುದ್ದಿಯ ಮುಂದೆ ಇನ್ನೊಂದು ಸುದ್ದಿಯಾದರೂ ಎಲ್ಲಿ ಅನ್ನೋದು ನನ್ನ ನಿಲುವು. ಚೇರ್ಮನ್ ರಿಂದ ಬುಲಾವ್ ಬಂತು. ಅಲ್ಲ, ಇಡೀ ಬುಲೆಟಿನ್ ಅನ್ನು ಒಬ್ಬರಿಗೇ ಮೀಸಲಿಡೋದು ಎಷ್ಟು ಸರಿ? ಜಗತ್ತಿನ ಎಲ್ಲೂ ಇವತ್ತು ಏನೂ ಘಟಿಸಿಲ್ವ? ಅದೂ ಪ್ರೈಮ್ ಬುಲೆಟಿನ್ ನಲ್ಲಿ' ಅಂದ್ರು. ನನಗಂತೂ ಅವತ್ತಿನ ಮೆಗಾ ನ್ಯೂಸ್ ತೇಜಸ್ವಿಯೇ ಅನ್ನೋದು ಖಚಿತವಾಗಿ ಹೋಗಿತ್ತು. 'ತೇಜಸ್ವಿ ವಿನಾ ಬುಲೆಟಿನ್ ನ ಚಲತಿ' ಅಂತ ನಿರ್ಧರಿಸಿಬಿಟ್ಟಿದ್ದೆ.
ಸಾರ್, ನಮ್ಮ ನ್ಯೂಸ್ ಗೆ ಟಿ ಆರ್ ಪಿ ಬರೋದೇ ಮೊದಲ ಆದ್ಯತೆ ಆದ್ರೆ ನನ್ನನ್ನ ಬಿಟ್ಬಿಡಿ. ನನ್ನ ಮನಸ್ಸು ಹೇಳ್ತಿದೆ. ತೇಜಸ್ವಿ ಇಲ್ಲ ಅನ್ನೋ ಸುದ್ದಿ ಮಾತ್ರಾನೇ ಇವತ್ತು ಜನರಿಗೆ ಮುಖ್ಯ. ಅಕಸ್ಮಾತ್ ಟಿ ಆರ್ ಪಿ ಬರಲಿಲ್ಲ ಅಂದ್ರೆ ಇನ್ನು ಮುಂದೆ ನೀವು ಹೇಳಿದ ಹಾಗೆ ಕೇಳ್ತೀನಿ. ನೀವೇ ಹೇಳಿದ್ದೀರಲ್ಲಾ ಮೊದಲ ತಪ್ಪು ಮಾಡೋದಿಕ್ಕೆ ಎಲ್ಲರಿಗೂ ಅವಕಾಶವಿದೆ ಅಂತ ಅವರು ಹೇಳಿದ್ದ ಮಾತನ್ನೇ ರಕ್ಷಣೆಗೆ ಗುರಾಣಿಯಾಗಿ ಬಳಸಿದೆ. ರಾಮೋಜಿರಾಯರು ನನ್ನನ್ನ ಒಂದು ಕ್ಷಣ ನೋಡಿದವರೇ 'ಗೋ ಅಹೆಡ್' ಅಂದ್ರು. ತೇಜಸ್ವಿ ತೇಜಸ್ವಿಯೇ. ಸತತ ಮೂರು ದಿನ ಈಟಿವಿ ಚಾನಲ್ ತೇಜಸ್ವಿ ಎನ್ನುವ 'ನಿಗೂಢ ಮನುಷ್ಯ' ನನ್ನು ಸಾಧ್ಯವಿದ್ದ ದಿಕ್ಕಿನಿಂದೆಲ್ಲಾ ಸ್ಪರ್ಶಿಸಲು ಯತ್ನಿಸಿತು. ನನ್ನ ನಂಬಿಕೆ ಹುಸಿಹೋಗಲಿಲ್ಲ. ಅದುವರೆಗೂ ಬಾಂಬ್ ಸ್ಫೋಟಕ್ಕೆ, ಉಗ್ರರ ಧಾಳಿಗೆ, ಸರಣಿ ಹತ್ಯೆಗೆ, ವಿ ಐ ಪಿ ಪ್ರೆಸ್ ಕಾನ್ಫೆರೆನ್ಸ್ ಗೆ ಸೋನಿಯಾ, ಪ್ರಿಯಾಂಕಾ, ರಾಹುಲ್ ಭೇಟಿಗೆ, ಅಡ್ವಾಣಿ ಯಾತ್ರೆಗೆ ಮಾತ್ರ ಸೀಮಿತವಾಗಿ ಹೋಗಿದ್ದ ಬುಲೆಟಿನ್ ಗಳು ಸಾಹಿತ್ಯವನ್ನೂ ತಬ್ಬಿಕ್ಲೊಂಡಿತು. ಮಾರ್ಕೆಟಿಂಗ್ ಟೀಮ್ ನವರು ತಬ್ಬಿಬ್ಬಾಗಿ ಕುಳಿತಿದ್ದರು ಅದುವರೆಗೂ ಗೊತ್ತಿಲದ ಇನ್ನೊಂದು ಟಿ ಆರ್ ಪಿ ವಿನ್ನರ್ ಚಾನಲ್ ಅಂಗಳ ಪ್ರವೇಶಿಸಿತ್ತು. 'ಕಂಗ್ರಾಟ್ಸ್' ಅಂತ ಅದೇ ರಾಮೋಜಿರಾಯರು ಕೈ ಕುಲುಕಿದರು. ಸಾಹಿತ್ಯವೆಂಬ ಹಕ್ಕಿ ಪತ್ರಿಕೋದ್ಯಮದ ಅಂಗಳದಲ್ಲಿ ಹಾರಿತು.
ಅಷ್ಟೇ, ಆನಂತರ ಈಟಿವಿಗೆ ಸಾಹಿತ್ಯ ಅನ್ನೋದು ಎಂದಿಗೂ ಮೈಲಿಗೆಯಾಗಿ ಉಳಿಯಲಿಲ್ಲ. ನಮ್ಮ ವರದಿಗಾರರಿಗೆ ಸಾಹಿತ್ಯ, ಸಾಂಸ್ಕೃತಿಕ ಲೋಕದ ಕಣ್ಣೋಟ ಬೇಕು ಅಂತ ನೀನಾಸಂ ಸಂಸ್ಕೃತಿ ಶಿಬಿರಕ್ಕೆ ಕಳಿಸುವ ಪ್ರಸ್ತಾಪ ಮಾಡಿದರೆ ಮರುಕ್ಷಣ ಒಪ್ಪಿಗೆಯ ಮುದ್ರೆ ಬೀಳುತ್ತಿತ್ತು. ಓ ಬಿ ವ್ಯಾನ್ ಒಂದು ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಿಂದ ಶಿವಮೊಗ್ಗಕ್ಕೆ ಬಂದು ನಾಲ್ಕು ದಿನ ಇದ್ದು ಮತ್ತೆ ತನ್ನ ಮೂತಿ ಹೈದರಾಬಾದ್ ನತ್ತ ತಿರುಗಿಸುವ ವೇಳೆಗೆ ಖರ್ಚು ಏನಿಲ್ಲೆಂದರೂ ೧೦ ಲಕ್ಷ ಮೀರುತ್ತಿತ್ತು. ಆದರೆ ಯಾರಿಗೂ ಈ ಬಗ್ಗೆ ಅಬ್ಜೆಕ್ಷನ್ ಇರಲಿಲ್ಲ. ಶಿವಮೊಗ್ಗದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊತ್ತ ಮೊದಲ ಬಾರಿ ಓ ಬಿ ವ್ಯಾನ್ ಗಳು ಕಾಣಿಸಿಕೊಂಡಿದ್ದವು.
'ಸಾರ್, ಇದು ನೋಡಿ' ಅಂತ ಸಿದ್ಧು ಕಾಳೋಜಿ ನನ್ನನ್ನ ಮಾನಿಟರ್ ಮುಂದೆ ಕೂಡಿಸಿದಾಗ ನನ್ನೊಳಗೆ ತಕ್ಷಣ ಮಿಂಚೊಂದು ಹರಿದು ಹೋಯಿತು. ಅಲ್ಲಿಯವರೆಗೆ ಸಾಹಿತ್ಯ ಸಮ್ಮೇಳನದ ಕವರೇಜ್ ದಿನಗಟ್ಟಲೆ ಯಾರು ನೋಡುತ್ತಾರೆ ಎನ್ನುವ ಗುಂಗೀ ಹುಳು ನನ್ನನ್ನೂ ಕೊರೆಯುತ್ತಿತ್ತು. ಅದು ಕ್ಷಣ ಮಾತ್ರದಲ್ಲಿ ಪರಿಹಾರವಾಗಿ ಹೋಯ್ತು. ಸಿದ್ಧು ತೋರಿಸಿದ್ದು ಬೇರೆ ಬೇರೆ ವರದಿಗಾರರು ಸಮ್ಮೇಳನದ ಅಂಗಳದಿಂದ ಕಳಿಸಿದ್ದ ವಿಡಿಯೋ ಫೂಟೇಜ್ ಗಳನ್ನ. ಅದರಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ನಿದ್ದೆ ಹೊಡೆಯುತ್ತಿದ್ದ ದೃಶ್ಯ ಇತ್ತು. ಸಿದ್ಧು ಕೈ ಅದುಮಿದವನೇ ಎಲ್ಲಾ ನಿದ್ದೆ ಶಾಟ್ ಗಳನ್ನ ಬೇರೆ ಮಾಡಿ ಎಂದೆ. ಬಾಲು ಬುಲೆಟಿನ್ ಉಸ್ತುವಾರಿಗೆ ನಿಂತಿದ್ದರು. ತಕ್ಷಣ ಅವರಿಗೆ ನಾನು ಏನು ಯೋಚಿಸುತ್ತಿದ್ದೇನೆ ಎಂದು ಅರ್ಥವಾಗಿ ಹೋಯಿತು. ಬುಲೆಟಿನ್ ಆರಂಭವಾಗುತ್ತಿದ್ದಂತೆಯೇ 'ಸಮ್ಮೇಳನಕ್ಕೆ ನಿಮ್ಮ ಪ್ರತಿಕ್ರಿಯೆ ಏನು?' ಅಂತ ಶೀರ್ಷಿಕೆ ಫ್ಲಾಶ್ ಆಯ್ತು. ನಂತರ ಸಭಾಂಗಣದಲ್ಲಿ ಜನ ಥರಾವರಿ ಭಂಗಿಗಳಲ್ಲಿ, ನಾನಾ ಥರದ ನಿದ್ದೆಗೆ ಜಾರಿದ್ದು ಮೂಡುತ್ತಾ ಹೋದವು. ಹಿನ್ನೆಲೆಯಲ್ಲಿ ಗೊರಕೆ ಮ್ಯೂಸಿಕ್. ಡೆಸ್ಕ್ ನಲ್ಲಿ ಬುಲೆಟಿನ್ ನೋಡುತ್ತಾ ಇದ್ದ ಎಲ್ಲರೂ ಬಿದ್ದೂ ಬಿದ್ದೂ ನಗುತ್ತಿದ್ದರು. ಎಸ್! ನಮ್ಮ ಕೈಗೆ ದೃಶ್ಯ ಮಾಧ್ಯಮದ ಗ್ರಾಮರ್ ಸಿಕ್ಕು ಹೋಗಿತ್ತು.
ತುಮಕೂರು ಸಾಹಿತ್ಯ ಸಮ್ಮೇಳನಕ್ಕೆ ವರದಿ ಮಾಡಲು ಹೋದ ನನಗೆ ಮೊದಲು ಗೊತ್ತಾಗಿದ್ದು ಜನ ನೋಡಬೇಕಾದರೆ ಮೊದಲು ನೋಡುವಂತ ನ್ಯೂಸ್ ಕೊಡಬೇಕು ಅನ್ನೋದು. ಅದೇ ಸಪ್ಪೆ ಭಾಷಣ, ಅದೇ ಗೋಷ್ಥಿ ಅಂತ ಕೊಟ್ಟರೆ ಸಾಹಿತ್ಯವನ್ನ ಆಕರ್ಷಕವಾಗಿಸೋದಿಕ್ಕೆ ಸಾಧ್ಯವೇ ಇಲ್ಲ ಅಂತ ಗೊತ್ತಾಯ್ತು. ಆಗಲೇ ನಮ್ಮ ಕ್ಯಾಮೆರಾ ಸಮ್ಮೇಳನದ ಅಡಿಗೆ ಮನೆ, ಹೋಟೆಲ್ ಮುಂದಿನ ಭಾರೀ ಕ್ಯೂ, ನಕಲಿ ಊಟದ ಚೀಟಿಗಳು,ಸಾಹಿತ್ಯದ ಬುಕ್ ಸ್ಟಾಲ್ ನಲ್ಲಿ ಹಳ್ಳಿ ಶಕುನದ ಪುಸ್ತಕಗಳ ಕಡೆ ಹೊರಳಿದ್ದು. ಅನಂತಮೂರ್ತಿ ಅವರ ಮೆರವಣಿಗೆಗೆ ರೆಡಿ ಆಗಿದ್ದ ರಥದ ಚಕ್ರವೇ ಟುಸ್ ಅಂದಿದ್ದು, ವರದಿಗಾರರ ಮೇಲೆ ಪೋಲೀಸ್ ಲಾಟಿ ಬೀಸಿದ್ದು, ಸಾಹಿತ್ಯ ಪರಿಷತ್ ನವರು ಮೀಟಿಂಗ್ ನಲ್ಲಿ ಗುದ್ದಾಡಿಕೊಂಡಿದ್ದು ಎಲ್ಲಾ ಎಲ್ಲಾ ನ್ಯೂಸ್ ಆಯ್ತು. ಟಿ ಆರ್ ಪಿ ನೂ ಬಂತು, ಬ್ರೇಕಿಂಗ್ ನ್ಯೂಸೂ ಸಿಗ್ತು,
'ನನಗೆ ಕಿತ್ತೋಗಿರೋ ಖಾತೆ ಕೊಟ್ಟಿದಾರೆ' ಅಂತ ಗೂಳಿಹಟ್ಟಿ ಶೇಖರ್ ಒಬ್ರೇ ಕಿರುಚಿಕೊಳ್ತಾ ಇಲ್ಲ. ಯಾವುದೇ ಮೀಡಿಯಾ ಆಫೀಸ್ ಗೆ ಹೋಗಿ ನೋಡಿ ಸಾಹಿತ್ಯ, ನಾಟಕದ ಕವರೇಜ್ ಅಂದ್ರೆ ಮುಖ ಕೆಂಡ ಆಗಿ ಹೋಗುತ್ತೆ. ಯಾಕೆ ನಮಗೆ ಬಿ ಜೆಪಿ, ಕಾಂಗ್ರೆಸ್ ಬೀಟ್ ಕವರ್ ಮಾಡೋ ತಾಖತ್ ಇಲ್ವಾ? ವಿಧಾನಸೌಧ ರೌಂಡ್ಸ್ ನಮಗ್ಯಾಕೆ ಹಾಕಲ್ಲ ಅಂತ ಸಿಡಿಯೋ ಗೂಳಿಹಟ್ಟಿಗಳು ಪ್ರತೀ ಆಫೀಸ್ ನಲ್ಲೂ ಸಿಗ್ತಾರೆ. ಹೀಗೆ ಒದ್ದಾಡಿದ ಗೂಳಿಹಟ್ಟಿಗಳೇ ಪೇಪರ್, ಚಾನಲ್ ಚುಕ್ಕಾಣಿ ಹಿಡಿಯೋ ಕಾಲ ಬಂದರಂತೂ ' ಅಲ್ಲೀಗೆ ಹರ ಹರಾ ಆಲ್ಲಿಗೆ ಶಿವ ಶಿವಾ ಅಲ್ಲೀಗೆ ನಮ್ಮ ಕಥೀ ಸಂಪೂರ್ಣವಯ್ಯ..' ಅಂತ ಮಂಗಳ ಹಾಡ್ಬೇಕಾಗುತ್ತೆ.
ಸಾಹಿತ್ಯ ಸಮ್ಮೇಳನ ಅಂದ್ರೆ ಪತ್ರಿಕೆಗಳು ಹಬ್ಬ ಆಚರಿಸ್ತಾ ಇದ್ದ ಕಾಲಾನೂ ಒಂದಿತ್ತು ಯಾಕಂದ್ರೆ ಅದು ನುಡಿ ಹಬ್ಬ. ಸಾಹಿತ್ಯ ಅನ್ನೋದು ಪತ್ರಿಕೋದ್ಯಮದ ಸ್ಟೀರಿಂಗ್ ಅನ್ನೋ ನಂಬಿಕೆ ಇತ್ತು. ಹಾಗಾಗೀನೆ ವಿಶೇಷ ಪುರವಣಿಗಳು, ವರದಿ ಮಾಡೋದಿಕ್ಕೆ ಪತ್ರಕರ್ತರ ದಂಡು, ವರದಿ ಬರೆಯೋದರಲ್ಲಿ ಪೈಪೋಟಿ, ನೂರೆಂಟು ಫೋಟೋ..ಆದರೆ ಇವತ್ತು ಆ ಸಂಭ್ರಮ ಉಳಿದಿಲ್ಲ. ಯಾವ ಸಾಪ್ತಾಹಿಕ ಸಂಚಿಕೆಯಲ್ಲಿ ಕಥೆ, ಕವಿತೆಗೆ ಏಕೆ ಜಾಗ ಅಂತ ಯೋಚಿಸಿದ್ದ ವಿಜಯಕರ್ನಾಟಕವೇ ಇವತ್ತು ಸಾಹಿತ್ಯದ ಕವರೇಜ್ ನಲ್ಲಿ ಮುಂಚೂಣಿಯಲ್ಲಿದೆ. ಸಮ್ಮೇಳನ ಅಧ್ಯಕ್ಷರನ್ನ ತನ್ನ ಕಚೇರಿಗೆ ಕರೆಸಿ ಓದುಗರೊಂದಿಗೆ ಫೋನ್- ಇನ್ ನಡೆಸಿದೆ. ಸಂಯುಕ್ತ ಕರ್ನಾಟಕ ಒಳ್ಳೆ ಪುರವಣಿಯ ಮೂಲಕ ತಾನು ಜಾಗೃತವಾಗಿದ್ದೀನಿ ಅನ್ನೋದನ್ನ ಸಾರಿದೆ. ಯಾವತ್ತೂ ಸಾಹಿತ್ಯದ ವಿಷಯ ಬಂದಾಗ ನಾವು ಕಾದು ಕೂರುವಂತೆ ಮಾಡುತ್ತಿದ್ದ ಕನ್ನಡಪ್ರಭ ಆ ಗೆಲುವು ಉಳಿಸಿಕೊಂಡಿಲ್ಲ. ಪ್ರಜಾವಾಣಿಗಂತೂ ಸಂಪೂರ್ಣ ಗೊಂದಲ. ಒಂದು ಕಾಲಕ್ಕೆ ಸಾಲು ಸಾಲು ಸಾಹಿತಿಗಳನ್ನ ಬೆಳಕಿಗೆ ತಂದಿದ್ದ, ನವ್ಯ ಸಾಹಿತ್ಯಕ್ಕೆ ಅಡಿಪಾಯ ಹಾಕಿಕೊಟ್ಟಿದ್ದ, ಬಂಡಾಯದ ದನಿಗೆ ಸಾಥ್ ನೀಡಿದ್ದ ಪ್ರಜಾವಾಣಿ 'ದಾರಿ ಯಾವುದಯ್ಯಾ ವೈಕುಂಠಕೆ..'ಎಂಬಂತೆ ಸಕ್ಸಸ್ ಗೆ ಇರೋ ದಾರಿ ಯಾವುದು ಅಂತ ಗೊತ್ತಾಗದೆ ನಿಂತು ಬಿಟ್ಟಿದೆ. ಇವತ್ತಿನ ಪೇಪರ್ ಗಳನ್ನ ನೋಡಿದರೆ, ಚಾನಲ್ ಬದಲಿಸ್ತಾ ಹೋದರೆ ಸಾಹಿತ್ಯ ಅನ್ನೋದು ಪತ್ರಿಕೆಗಳ ಪಾಲಿಗೆ ಎಕ್ಸ್ಪೈರಿ ಡೇಟ್ ಮುಗಿದಿರೋ ಮಾತ್ರೆ ಥರಾ ಆಗ್ತಿದೆ ಅನ್ನೋದು ಸ್ಪಷ್ಟ.
ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಗೋಪಾಲಕೃಷ್ಣ ಪೈ ಅವರ ಅಷ್ಟು ದಪ್ಪದ ಕಾದಂಬರಿ ಸಪ್ನ ಸಾರಸ್ವತವನ್ನ ಓದಿ ಮುಗಿಸಿದ್ದಾರೆ, ತಾರಾ ಫಿಲಂ ಸೆಟ್ ನಲ್ಲಿ ಪುಸ್ತಕ ಓದುತ್ತಾ ಕೂಡ್ತಾರೆ, ಟಿ ಎನ್ ಸೀತಾರಾಂ ಸೀರಿಯಲ್ ನಲ್ಲಿ ಎಷ್ಟೊಂದು ಕವಿತೆ ಕೋಟ್ ಮಾಡ್ತಾರೆ. ಬಳ್ಳಾರಿ ಚನ್ನಬಸವಣ್ಣ ಬ್ಯಾಂಕ್ ಉದ್ಯೋಗದಲ್ಲಿದ್ರೂ ಪುಸ್ತಕ ಮಾಡೋದಿಕ್ಕೆ ಯಾಕೆ ಹೋದರು, ಅನ್ನೋದು ಮೀಡಿಯಾಗೆ ಹಬ್ಬದೂಟ ಆಗೋದಿಲ್ವಾ? ಬರೀ ಹೀರೋಯಿನ್ ಗಳಲ್ಲ ಪತ್ರಿಕೆ, ಚಾನಲ್ ಗಳೂ ಜೀರೋ ಬಾಡಿ ಗೇ ಮನಸೋತಿವೆ. ಆ ಬಾಡಿಗಾಗಿ ಹಂಬಲಿಸಿ ಡಯಟಿಂಗ್ ಶುರು ಮಾಡಿವೆ. ಆ ನಿಟ್ಟಿನಲ್ಲಿ ಮೊದಲು ವರ್ಜ್ಯ ಮಾಡಿರೋದೇ ಸಾಹಿತ್ಯವನ್ನ.
ಮೊನ್ನೆ ಎಚ್ ಎಸ್ ವೆಂಕಟೇಶ ಮೂರ್ತಿಗಳ ಮೂರು ಸಮಗ್ರ ಕೃತಿಗಳು ಬಿಡುಗಡೆಯಾಯ್ತು. ಅದೇ ದಿನ ಸಂಜೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂತಸದಲ್ಲಿರುವ ವೈದೇಹಿ ಬೆಂಗಳೂರಿನಲ್ಲಿ ಓದುಗರೊಂದಿಗೆ ಮಾತಿಗೆ ಕೂತರು. ಒಂದಿಷ್ಟು ಅಪವಾದ ಬಿಟ್ಟರೆ ಎಚ್ ಎಸ್ ವಿ, ವದೇಹಿ ಓದುಗರ ಮನೆಯೊಳಗೇ ಹೋಗದಂತೆ ಮಾಧ್ಯಮಗಳು ನೋಡಿಕೊಂದುಬಿಟ್ಟವು. ಇದೇ ಎಚ್ ಎಸ್ ವಿ, ಇದೇ ವೈದೇಹಿ ಇವತ್ತು ಯಾರ ಮನೆಯೊಳಗಾದರೂ ಕಾಲಿಡಬೇಕಾದರೆ 'ಪುನರ್ಜನ್ಮ' ಎತ್ತಿ ಬರಬೇಕು, ಇಲ್ಲಾ 'ಬಾಲ ಜ್ಞಾನಿ'ಗಳಾಗಿರಬೇಕು. ಇಲ್ಲಾ ಅವರ 'ಬದುಕು ಜಟಕಾ ಬಂಡಿ' ಆಗಿರಬೇಕು. ಇಲ್ಲಾ ಅಂದ್ರೆ ಕನಿಷ್ಠ ಪಕ್ಷ ಭಾನುವಾರ ಮಧ್ಯಾಹ್ನ ಚಿಕನ್ ಟಿಕ್ಕಾ ಮಾಡಲಾದರೂ ಬರಬೇಕು...
ಬುಕ್ ಟಾಕ್
ಪತ್ರಿಕೋದ್ಯಮಕ್ಕೂ ಸಾಹಿತ್ಯಕ್ಕೂ ಗೆರೆ ಎಳೆಯಲಾಗದ ಕಾಲ ಒಂದಿತ್ತು. ಪತ್ರಿಕೋದ್ಯಮ ಅನ್ನುವುದು ಅವಸರದ ಸಾಹಿತ್ಯ ಎನ್ನುವ ಹಿರಿಮೆಗೂ ಪಾತ್ರವಾಗಿತ್ತು. ಇಂತಹ ನಂಟನ್ನು ಪರಿಶೀಲಿಸುವ ಅಪರೂಪದ ಪ್ರಯತ್ನ- 'ಸಾಹಿತ್ಯ ಮತ್ತು ಪತ್ರಿಕೋದ್ಯಮ'. ಹಲವು ದಶಕಗಳ ಕಾಲ ಪತ್ರಿಕೋದ್ಯಮವನ್ನು ಭೋಧಿಸಿದ, ಸಾಹಿತಿಗಳೊಂದಿಗೆ ಒಡನಾಟವಿದ್ದ ಪ್ರೊ. ಬಿ ಎ ಶ್ರೀಧರ್ ಈ ಕೃತಿ ರಚಿಸಿದ್ದಾರೆ. ಆಂಗ್ಲ ಪತ್ರಿಕೋದ್ಯಮಕ್ಕೆ ಇದ್ದ ಸಾಹಿತ್ಯದ ನಂಟನ್ನು ಪರಿಶೀಲಿಸುತ್ತಾ, ಟಾಮ್ ವೂಲ್ಫ್ ಕೊಟ್ಟ ಕೊಡುಗೆಯನ್ನು ಗುರುತಿಸುತ್ತಾ ಹೋಗುವ ಶ್ರೀಧರ್ ಭಾರತದ ಪತ್ರಿಕೋದ್ಯಮದಲ್ಲಿ ನಡೆದ ಪ್ರಯೋಗಗಳನ್ನು ಪರಿಚಯಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಈ ಕೃತಿ ಪ್ರಕಟಿಸಿದೆ.
ಕೆಂಪ್ ಮೆಣಸಿನ್ಕಾಯ್
ಬಳ್ಳಾರಿನಲ್ಲಿ ಸಡನ್ನಾಗಿ ಹಾಜಿ, ಮಾಜಿ ಪತ್ರಕರ್ತ ಆರ್ ಜಿ ಹಳ್ಳಿ ನಾಗರಾಜ್ ಎದುರಾಗಿಬಿಡೋದಾ? . ಏನ್ಗುರು ಇಲ್ಲಿ.. ಅಂದೆ. ರೆಡ್ಡಿ ಗ್ಯಾಂಗು ಎತ್ತಾಕ್ಕೊಂಡು ಬಂದ್ಬಿಟ್ಟಿದೆಯಪ್ಪಾ ಅಂದ. ಏನ್ಸಮಾಚಾರ ಅಂದೆ. ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಇತ್ತಲ್ಲ ಅದಕ್ಕೆ ಕರಕೊಂಡು ಬಂದವ್ರೆ ಅಂದ. ಅದು ಸರಿ ಅದಕ್ಕೂ ನಿನಗೂ ಏನ್ ಸಂಬಂಧ ಅಂದೆ. 20 ವರ್ಷ ವಿಜಯನಗರದಲ್ಲೇ ಇದ್ನಲ್ಲ ಅದಕ್ಕೆ ಈ ರೆಡ್ದಿಗಾರುಗಳು ನನ್ನೇ ಕೃಷ್ಣದೇವರಾಯ ಅನ್ಕೊಂಡಿದಾರೆ. ಬೆಂಗಳೂರು ವಿಜಯನಗರದಲ್ಲಿ ಬಾಡಿಗೆ ಮನೆ ಮಾಡ್ಕೊಂಡು ಇದ್ದಿದ್ದೇ ತಪ್ಪಾ? ಅಂದ. ನಾನು ಡಿಟೋ ಟಿ ಪಿ ಕೈಲಾಸಂ ಸ್ಟೈಲ್ ನಲ್ಲಿ ತಪ್ಪೆವರದಿ?? ಅಂದೆ.
Post a Comment