ಏನ್.ಎಸ. ಶಂಕರ್ - ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ, ಇನ್ನೂ ಏನೇನೋ .........
ನಮ್ಮ ಇಂದಿನ ಸಮಾಜದಲ್ಲಿ ಬೃಹದಾಕಾರವಾಗಿ ಎದ್ದಿರುವ ಮೌನದ ಗೋಡೆಗಳ ಕುರಿತು ಬರೆದಿದ್ದಾರೆ. ಚರ್ಚೆ, ಸಂವಾದಗಳಿಗೆ ತಾವೇ ಇಲ್ಲದಂತಹ ನಿಶಬ್ಧವೊಂದು ಇಂದು ಸಮಾಜದಲ್ಲಿ ಮನೆ ಮಾಡಿದೆ. ಒಬ್ಬ ಸೃಜನಶೀಲ ಏನನ್ನಾದರೂ ಬರೆದರೆ ಅದರ ಕುರಿತು ಚರ್ಚೆಯಾಗಲಿ ಎಂದು ಅಪೇಕ್ಷಿಸುವುದು ಸಹಜ. ಆದರೆ ಒಂದು ದಿವ್ಯ ನಿರ್ಲಕ್ಷ್ಯ ಅವರನ್ನು ಎದುರುಗೊಂಡಾಗ ಬರವಣಿಗೆ ಸಾರ್ಥಕವಲ್ಲ ಎನಿಸಿಬಿಡುತ್ತದೆ. ನಾವಿಂದು ಈ ಹಂತ ತಲುಪಿಬಿಟ್ಟಿರುವುದು ಮಹಾದುರಂತವೆ ಸರಿ. ಈ ಕುರಿತು ಏನ್. ಎಸ. ಶಂಕರ್ ಬರೆದ ಮಹತ್ವದ ಲೇಖನ.



ನಿಶ್ಶಬ್ದದ ಭೀತಿ

ಚೀನೀಯರು ತೊಟ್ಟು ನೀರಿನ ಶಿಕ್ಷೆ ಕಂಡು ಹಿಡಿದರೆ ಫ್ರೆಂಚರು ನಿಶ್ಶಬ್ದ ಕಂಡು ಹಿಡಿದರು ಎಂದು ಬರೆಯುತ್ತಾನೆ ಪ್ಯಾಪಿಲಾನ್.
ಪ್ರಾಚೀನ ಚೀನಾದಲ್ಲಿ ಅಪರಾಧಿಗಳಿಗೆ, ಮುಖ್ಯವಾಗಿ ಯುದ್ಧ ಕೈದಿಗಳಿಗೆ, ತಲೆ ಬೋಳಿಸಿ ಕೈ ಕಾಲು ಕಟ್ಟಿ ಕುರ್ಚಿ ಮೇಲೆ ಕೂರಿಸುವುದು; ಮೇಲಿನಿಂದ ಬೋಳು ತಲೆ ಮೇಲೆ ಒಂದೊಂದೇ ಹನಿ ನೀರು. ನಿರಂತರವಾಗಿ, ಅವ್ಯಾಹತವಾಗಿ ಗಂಟೆಗಟ್ಟಲೆ, ದಿನಗಟ್ಟಲೆ.... ಆ ಕೈದಿ ಕ್ರಮೇಣ ತಲೆ ಮೇಲೆ ಸುತ್ತಿಗೆ ಪ್ರಹಾರವಾದಂತೆ, ಬಿದ್ದ ಹನಿಗಿಂತ ಬೀಳುವ ಮುಂದಿನ ಹನಿಯ ಘೋರ ನಿರೀಕ್ಷೆಯಲ್ಲೇ ವಿಹ್ವಲನಾಗುತ್ತ ಮತಿಭ್ರಮಣೆಯ ಹಂತ ತಲುಪುತ್ತಾನೆ.

ಇದಕ್ಕಿಂತಲೂ ಭಯಾನಕವಾದದ್ದು ಫ್ರೆಂಚರ ನಿಶ್ಶಬ್ದ ಶಿಕ್ಷೆಯಂತೆ.
ತಾನು ಮಾಡದ ಕೊಲೆಯ ಆಪಾದನೆ ಹೊತ್ತು ಜೀವಾವಧಿ ಶಿಕ್ಷೆಗೆ ಗುರಿಯಾಗಿ ಭಯಾನಕ ಅಪರಾಧಿಗಳ ನಡುವೆ ಎರಡು ದಶಕಕ್ಕೂ ಹೆಚ್ಚು ಕಾಲ ಹಲವಾರು ನರಕಸದೃಶ ಜೈಲುಗಳಲ್ಲಿ ಕಳೆದು ಅನೇಕ ಬಾರಿ ತಪ್ಪಿಸಿಕೊಂಡು ಕಡೆಗೂ ಸ್ವತಂತ್ರನಾದ ಹೆನ್ರಿ ಚಾರೇರೆ ಉರುಫ್ ಪ್ಯಾಪಿಲಾನನ ಸಾಹಸ- ಆಧುನಿಕ ನಾಗರಿಕತೆಯ ಜಾನಪದ ಕತೆಯಂತಿದೆ.

ಆತನಿದ್ದ ಜೈಲುಗಳಲ್ಲಿ ಶಿಸ್ತು ಉಲ್ಲಂಘಿಸಿದವರಿಗೆ ಏಕಾಂತವಾಸದ ಶಿಕ್ಷೆ. ಆರು ತಿಂಗಳಿಂದ ಕೆಲವು ಬಾರಿ ಎರಡು ವರ್ಷಗಳವರೆಗೆ. ಅಥವಾ ಇನ್ನೂ ದೀರ್ಘಾವಧಿ . ಅಷ್ಟೂ ಕಾಲ ಒಂದು ಸಣ್ಣ ಸದ್ದೂ ಅವರ ಕಿವಿ ತಲುಪುವುದಿಲ್ಲ. ಮನುಷ್ಯ, ಪ್ರಾಣಿ, ಪಕ್ಷಿ, ಹುಳು ಹುಪ್ಪಟೆಯ ಚಹರೆಯೂ ಕಾಣುವುದಿಲ್ಲ. ಕಡೆಗೆ ಗಸ್ತು ತಿರುಗುವವರ ಹೆಜ್ಜೆ ಸಪ್ಪಳವೂ ಇಲ್ಲ. ಆಹಾರ ಕೂಡ ಅವರ ಕೋಣೆಯ ಬಾಗಿಲಿನ ಕೆಳಗಿನಿಂದ ಬರುವುದು. ಇರುವ ಒಂದೇ ಕೋಣೆಯಲ್ಲೇ ಉಚ್ಚೆ ಕಕ್ಕಸ್ಸು ಎಲ್ಲ. ಶಾಶ್ವತ ಕತ್ತಲು. ಎಲ್ಲಕ್ಕಿಂತ ಘೋರವಾದದ್ದು ಅ ಮೌನ ಎನ್ನುತ್ತಾನೆ ಪ್ಯಾಪಿಲಾನ್. ಜೀವಜಗತ್ತಿನಿಂದಲೇ ಬಹಿಷ್ಕಾರಗೊಂಡಂತೆ ಶುದ್ಧಾಂಗ ಮೌನ. ಕೆಲವೇ ತಿಂಗಳುಗಳಲ್ಲಿ ಕೈದಿ ಸತ್ತೇ ಹೋಗುತ್ತಾನೆ; ಅಥವಾ ಹುಚ್ಚು ಹಿಡಿದು ಈ ಕೊನೆಗಾಣದ ಮೌನದ ದಮನದಿಂದ ಪಾರಾಗಬೇಕು....

ನಮ್ಮ ಕಾಲದ ಭೀಕರ ದುಃಸ್ವಪ್ನವೆಂದರೆ- ಇಂಥದೇ ಮೌನ ನಮಗೆ ಎದುರಾಗಬಹುದಾದ ದಿಗಿಲು.
ಶಂಬಾ ಜೋಷಿಯವರಿಗೆ ಹೀಗೇ ಆಯಿತು. 'ಪ್ರವಾಹ ಪತಿತರ ಕರ್ಮ, ಹಿಂದೂ ಎಂಬ ಧರ್ಮ' ಎಂಬ ವ್ಯಾಖ್ಯಾನದೊಂದಿಗೆ ಹಿಂದೂ ಸಂಸ್ಕೃತಿಯ ಬೇರಿಗೆ ಕೈಯಿಟ್ಟ ಅದ್ವಿತೀಯ ಸಂಶೋಧಕ ಶಂಬಾ, ಪ್ರಾಚೀನ ಪಠ್ಯಗಳನ್ನು ಶೋಧಿಸುತ್ತ ಸಂಪ್ರದಾಯಶೀಲರು ತತ್ತರಿಸುವಂಥ ಸ್ಫೋಟಕ ಗೂಢಾರ್ಥಗಳನ್ನು ಬಿಡಿಸಿ ಹೇಳತೊಡಗಿದ ಕೂಡಲೇ ಅವರಿಗೆದುರಾದದ್ದು ವಿಮರ್ಶೆಯಲ್ಲ, ಛೀಮಾರಿಯಲ್ಲ, ಜಗಳವೂ ಅಲ್ಲ, ಎಂಥದೂ ಅಲ್ಲ. ಅವರ ಶೋಧನೆಯನ್ನು ಜೀರ್ಣಿಸಿಕೊಳ್ಳಲಾಗದ ಸಂಪ್ರದಾಯದ ಕೋಟೆ, ಶಂಬಾರನ್ನು ಸಂಪೂರ್ಣ ನಿರ್ಲಕ್ಷಿಸಿ ಮೌನದ ಮಹಾಗೋಡೆಯನ್ನೇ ಅವರೆದುರು ನಿಲ್ಲಿಸಿಬಿಟ್ಟಿತು. ಗಾಢ ಕತ್ತಲಿನಂಥ ಮೌನ. ಪರಿಣಾಮ, ತನ್ನೊಂದಿಗೆ ಮಾತಾಡುವವರೇ ಸಿಕ್ಕದ ಶಂಬಾರಿಗೆ, ಪ್ರತಿವಾದದ ಎದುರು ತನ್ನ ನೋಟವನ್ನು ಸ್ಫುಟಗೊಳಿಸಿಕೊಳ್ಳುವ, ಹರಿತಗೊಳಿಸಿಕೊಳ್ಳುವ ಅವಕಾಶವೇ ದೊರೆಯದಾಯಿತು. ಕ್ರಮೇಣ ಅವರ ಪಾಲಿಗೆ ಪಾಂಡಿತ್ಯವೇ ಪಂಜರವಾಗಿಹೋಯಿತು. ಬರಬರುತ್ತ ಶಂಬಾ ಬರವಣಿಗೆ ಬೀಜಗಣಿತದಂತೆ, ಅಭೇದ್ಯ ಕಗ್ಗದಂತೆ ಕ್ಲಿಷ್ಟವಾಯಿತು. ವಾಗ್ವಾದದಿಂದ ಪ್ರಜ್ವಲಿಸಬಹುದಿದ್ದ ಅವರ ತಿಳಿವಿನ ಜ್ಯೋತಿ ಹಾಗೇ ನಂದಿಹೋಯಿತು.

ಇಂಥ 'ಮೌನ ಪಿತೂರಿ' ನಮ್ಮಲ್ಲಿ ಎಂಥೆಂಥ ದೈತ್ಯಪ್ರತಿಭೆಗಳನ್ನೇ ನುಂಗಿಹಾಕಿದೆ ಎನ್ನಲು ಅಂಬೇಡ್ಕರ್ಗಿಂತ ಉದಾಹರಣೆ ಬೇಕಿಲ್ಲ. ಹಿಂದೂ ಸಮಾಜದ ಅಂತರಾಳವನ್ನು ಅಂಬೇಡ್ಕರರಷ್ಟು ಆಳವಾಗಿ, ಸಮಗ್ರವಾಗಿ, ವಿದ್ವತ್ಪೂರ್ಣವಾಗಿ ಸೋಸಿ ಬಯಲಿಗೆಳೆದ ಮತ್ತೊಬ್ಬರಿಲ್ಲ. ಆದರೆ ಅವರನ್ನು ದಲಿತ ನಾಯಕ ಮಾತ್ರರಾಗಿ ಕಂಡ ಭಾರತೀಯ ಚರಿತ್ರೆ, ಆ ಮೂಲಕ ಅಂಬೇಡ್ಕರ್ ಎತ್ತಿದ ಜೀವನ್ಮರಣದ ಪ್ರಶ್ನೆಗಳ ಮುಜುಗರದಿಂದ ಪಾರಾಗಿಬಿಟ್ಟಿತು. ಈಗಲೂ ಸಂವಿಧಾನ ಕರ್ತೃ, ದಲಿತ ನಾಯಕ ಎಂಬ ವಿಶೇಷಣಗಳಾಚೆ ಅಂಬೇಡ್ಕರರನ್ನು ಸ್ವೀಕರಿಸುವ ಆತ್ಮವೇ ಈ ಭವ್ಯ ದೇಶಕ್ಕಿಲ್ಲ. ನಮ್ಮ ದಲಿತರಿಗೆ ಅವರ ಫೋಟೋ ಸಾಕು, ಮಿಕ್ಕವರಿಗೆ ಅದೂ ಬೇಕಿಲ್ಲ....! ಇನ್ನು ಲೋಹಿಯಾ? ಗಾಂಧಿ, ಅಂಬೇಡ್ಕರ್ ನಂತರ ನಮ್ಮ ನಾಡು ಕಂಡ ಮಹಾನ್ ಚಿಂತಕ ಮತ್ತು ಯುಗ ಪ್ರವರ್ತಕ ರಾಮಮನೋಹರ ಲೋಹಿಯಾರ ಹೆಸರೇ ಈಗಿನ ತಲೆಮಾರಿಗೆ ಅಪರಿಚಿತ.....!

ಈ ಬಗೆಯ ಹಂತಕ ಮೌನ ಯಾವ ದೇಶದ ಚರಿತ್ರೆಯಲ್ಲೂ ಅಪರೂಪವಲ್ಲವೆಂದು ನನಗೆ ಗೊತ್ತು. ಎಲ್ಲೇ ಆದರೂ ಇಡೀ ಸಮಾಜ ಒಂದು ದಿಕ್ಕಿನಲ್ಲಿ ಮೈ ಮರೆತು ತಲೆದೂಗುವಾಗ ಬೇರೊಂದು ರಾಗ ತೆಗೆಯುವವನ ದನಿ ಅಪಸ್ವರವಾಗಿ ಮಾತ್ರ ಕೇಳಲು ಸಾಧ್ಯ. ಸ್ವತಃ ಲೋಹಿಯಾ ತಲೆ ರೋಸಿ ನನ್ನನ್ನು ಈಗ ಹುಚ್ಚನೆಂದು ನೋಡುತ್ತಿರುವವರಿಗೆ, ನಾನು ಸತ್ತ ಮೇಲೆ ನನ್ನ ಚಿಂತನೆಯ ಮಹತ್ವ ತಿಳಿಯಬಹುದು ಎಂದು ಉದ್ಗರಿಸಿದ್ದರು. ಅಂಥ ಪ್ರಖರ ಚಿಂತಕ ಮತ್ತು ಸತ್ಯವಂತನನ್ನು ವಿದೂಷಕನಾಗಿ ಕಂಡ ಅಂದಿನ ಮಾಧ್ಯಮಗಳಿಗೆ ಯಾವ ರೋಗ ಬಡಿದಿತ್ತು ಎಂದು ಅನೇಕ ಬಾರಿ ಸೋಜಿಗದಿಂದ ಕೇಳಿಕೊಂಡಿದ್ದೇನೆ.

ಆದರೆ ನಾನು ಈ ಪ್ರಶ್ನೆ ಕೇಳಿಕೊಳ್ಳಲು ಸಾಧ್ಯವಾಗಿದ್ದೇ ದೇವರಾಜ ಅರಸು ತಂದ ಆಡಳಿತಾತ್ಮಕ ಕ್ರಾಂತಿಯ ನಂತರದ ದಿನಗಳಲ್ಲಿ ಎಂಬುದನ್ನು ಮರೆಯುವಂತಿಲ್ಲ. ಆ ವೇಳೆಗಾಗಲೇ ಕರ್ನಾಟಕದಲ್ಲಿ ಬೂಸಾ ಚಳವಳಿ, ಸಮಾಜವಾದಿ ಯುವಜನ ಸಭಾ, ಬರಹಗಾರರ ಒಕ್ಕೂಟ, ಮುಂದಕ್ಕೆ ರೈತ, ದಲಿತ, ಭಾಷಾ ಚಳವಳಿಗಳ ಮಹಾನ್ ಸಂಚಲನದ ಪರ್ವವೇ ಆರಂಭವಾಗಿತ್ತು. ನನ್ನ ಸೋಜಿಗದ ಪ್ರಶ್ನೆ ಉದ್ಭವವಾಗಲು ಸಾಧ್ಯವಿದ್ದಿದ್ದೇ ಆಗ. ಆದರೆ ಲೋಹಿಯಾ ಸಾರ್ವಜನಿಕ ರಂಗಸ್ಥಳದಲ್ಲಿದ್ದ ಸಂದರ್ಭದಲ್ಲಿ ಇಡೀ ದೇಶವೇ ನೆಹರೂ ಸುತ್ತ ಸೃಷ್ಟಿಯಾಗಿದ್ದ ರಾಷ್ಟ್ರ ನಿರ್ಮಾಣದ ಭ್ರಮೆಯಲ್ಲಿ ಓಲಾಡುತ್ತಿತ್ತು ಎಂಬುದನ್ನು ನೆನೆಸಿಕೊಂಡಾಗ ಲೋಹಿಯಾ ಎದುರಿಸಿದ ದುರ್ಗಮ ಮೌನದ ತಥ್ಯ ತಿಳಿಯಬಹುದೇನೋ.

ಭಾರತೀಯರು ಒಂದು ದೇಶವಾಗಿ ಅದೇ ತಾನೇ ಸ್ವಾತಂತ್ರ್ಯ ಹೋರಾಟದ ಆಯಾಸ ಕಳೆದು ಸ್ವರಾಜ್ಯಕ್ಕೆ ಸಜ್ಜಾಗುತ್ತಿದ್ದರು. ಈ ಹೊಸ ಸ್ವಾತಂತ್ರ್ಯ ಎಲ್ಲ ಕನಸುಗಳನ್ನೂ ನನಸು ಮಾಡಬಹುದೆಂಬ ನಿರೀಕ್ಷೆ, ಭರವಸೆಗಳಿದ್ದವು. ಗಾಂಧೀಜಿ ಶಿಷ್ಯನೂ, ಉತ್ತರಾಧಿಕಾರಿಯೂ ಆದ ನೆಹರೂ- ಬಡತನ, ಹಸಿವು, ತಾರತಮ್ಯ, ನಿರುದ್ಯೋಗ ಎಲ್ಲ ಸಮಸ್ಯೆಗಳನ್ನೂ ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲರೆಂದು ಜನ ಕಣ್ಣು ಮುಚ್ಚಿ ನಂಬಿ ಕಾಯುತ್ತಿದ್ದರು. ಅಂಥ 'ನವೋದಯ'ದ ಆಶೋತ್ತರಗಳನ್ನು ದೇಶ ಮೈದುಂಬಿಕೊಂಡಿದ್ದ ಗಳಿಗೆಯಲ್ಲಿ ಲೋಹಿಯಾರ ಕಣ್ಣು ತೆರೆಸುವ ವಿರೋಧಿ ರಾಜಕಾರಣವನ್ನು ಸಹಾನುಭೂತಿಯಿಂದ ಪರಿಶೀಲಿಸುವುದು ಊಹಾತೀತವಾಗಿತ್ತು. ನೆಹರೂ ಅತ್ತ ತಮ್ಮ ಕೋಟಿನಲ್ಲಿ ಗುಲಾಬಿ ಸಿಕ್ಕಿಸಿಕೊಂಡು ರಾಷ್ಟ್ರದ ಕನಸು ಬಿತ್ತುತ್ತಿದ್ದರೆ, ಇತ್ತ ಲೋಹಿಯಾ ಸಮಾಜದ ಕರುಳು ಬಗೆದು ನೋಡುತ್ತಿದ್ದರು. ಹಾಗಾಗಿ ದೇಶದ ಕಣ್ಣಿಗೆ ಕಿರಿಕಿರಿಯ ತಂಟೆಕೋರನಾಗಿ ಮಾತ್ರ ಕಂಡರು. ಅಂಥ ಲೋಹಿಯಾ ಹೊಸ ತಿಳಿವಿನ ಹರಿಕಾರನಾಗಿ ಕಾಣಬೇಕಾದರೆ, ದೇಶದಲ್ಲಿ ನೆಹರೂ ಯುಗದ ಭ್ರಮೆಗಳೇ ತುರ್ತುಸ್ಥಿತಿಯ ಕರಾಳ ದುಃಸ್ವಪ್ನಕ್ಕೆ ದಾರಿಯಾಗಿ ದೇಶಾದ್ಯಂತ ಪ್ರತಿಭಟನೆಯ 'ಮೂಡ್' ಸೃಷ್ಟಿಯಾಗಬೇಕಾಯಿತು....!

ಈ ಮೂಡ್- ಸಾಮಾಜಿಕ ಹವೆ- ಎಂಥ ಮಾಯಕಾರ ಪದಾರ್ಥವೆಂಬುದು ಈಚೀಚೆಗೆ ನನ್ನನ್ನು ದಂಗು ಬಡಿಸುವ ಸಂಗತಿಯಾಗಿದೆ. ಉದ್ದಕ್ಕೂ ನಾವು ಸಸಿ ಹುಟ್ಟಿ, ಆ ಸಸಿ ಮರವಾಗಿ ಫಲ ನೀಡಿದ್ದನ್ನು ಮಾತ್ರ ನೋಡುತ್ತ ಬಂದಿದ್ದೇವೆಯೇ ಹೊರತು, ಆ ಸಸಿಗೆ ಜನ್ಮ ಕೊಟ್ಟ ಹದಮಣ್ಣನ್ನು ಲೆಕ್ಕಿಸಿಯೇ ಇಲ್ಲವೇನೋ ಎಂಬ ಅನುಮಾನ ನನಗೆ.

ನನ್ನ ತಲೆಮಾರಿಗೆ ಕಣ್ಣು ಕಿವಿ ಕೊಟ್ಟ 70- 80ರ ದಶಕಗಳನ್ನೇ ನೋಡಿ. ಆ ಕಾಲಘಟ್ಟದಲ್ಲಿ ನಂಜುಂಡಸ್ವಾಮಿ, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ದೇವನೂರ ಮಹಾದೇವ, ಸಿದ್ದಲಿಂಗಯ್ಯ... ಎಲ್ಲ ಕಣ್ಣು ಕೋರೈಸುವ ತಾರೆಯರೇ. ಅವರಿಗೆ ದಕ್ಕಿದ ತಾರಾಪಟ್ಟವನ್ನು ನೋಡುತ್ತ ಆನಂದಿಸಿದೆವು. ಅವರೆಲ್ಲರಿಂದ ಕಲಿತೆವು. ಅವರನ್ನು ಹೀರೋಗಳಂತೆ ಕಂಡು ಆರಾಧಿಸಿದೆವು. ಗುಂಡೂರಾಯರ ಅಂದಾದುಂದಿ ಸರ್ಕಾರ ಧೂಳೀಪಟವಾದಾಗ ಅದರ ಯಶಸ್ಸನ್ನು ಲಂಕೇಶ್ ಮತ್ತು ಅವರ ಪತ್ರಿಕೆಗೆ ಕಟ್ಟಿ ಸಂಭ್ರಮಿಸಿದೆವು. ಕಬ್ಬನ್ ಪಾರ್ಕಿನಲ್ಲಿ ಐದು ಲಕ್ಷ ಜನ ರೈತರು ಸೇರಿದಾಗ ನಂಜುಂಡಸ್ವಾಮಿಯವರ ವರ್ಚಸ್ಸನ್ನು ಬಿಡುಗಣ್ಣಾಗಿ ಕಂಡು ಕುಣಿದಾಡಿದೆವು. ಸಿದ್ದಲಿಂಗಯ್ಯನವರ ಕ್ರಾಂತಿಗೀತೆ ಕೇಳಿ ನಮ್ಮ ರೋಮಗಳೆಲ್ಲ ನಿಮಿರಿ ನಿಂತವು. ಒಟ್ಟು ಹೇಳುವುದೇನು? ಇವರ ನುಡಿಗಳಲ್ಲಿ ಈ ಸಮಾಜದ ಕದಲಿಕೆಯೇ ಸಾಕಾರಗೊಂಡಂತೆ ಭಾಸವಾಯಿತು.

ಇವರೆಲ್ಲರೂ ಹೀರೋಗಳೇ ನಿಜ. ಆದರೆ ಈ ಹೀರೋಗಿರಿಯಲ್ಲಿ ಆ ಸಮಾಜದ, ಆ ಕಾಲಘಟ್ಟದ 'ಮೂಡ್' ಎಷ್ಟು ಕಾರಣವಾಗಿತ್ತು ಎಂಬುದನ್ನು ನಾವು ಕೇಳಿಕೊಳ್ಳಲೇ ಇಲ್ಲ. ಅದಕ್ಕೇ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗುತ್ತಿದ್ದ ಹಾಗೆಯೇ ಈ ಎಲ್ಲ ಚಳವಳಿಗಳೂ ಯಾಕೆ ಕಳೆಗುಂದತೊಡಗಿದವು ಎಂದು ಕೇಳಿದರೆ, ನಾವು ಇಂದಿಗೂ ಹೆಗಡೆಯವರ ಚಾಣಾಕ್ಷತೆ- ಒಡೆದಾಳುವ ಕುಟಿಲತೆಯತ್ತ ಬೊಟ್ಟು ಮಾಡುತ್ತೇವೆ! ಆದರೆ ನಮ್ಮ ರಾಜ್ಯದಲ್ಲಿ ಮೊಟ್ಟಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಸೌಜನ್ಯದ ನುಡಿಗಟ್ಟಿನಲ್ಲಿ ವ್ಯವಹರಿಸತೊಡಗಿದ ಹೆಗಡೆ ಶೈಲಿಯನ್ನು ಜನ ಮನಸಾ ಅಪ್ಪಿಕೊಂಡ ಪರಿಯನ್ನು ಮರೆಯುತ್ತೇವೆ. ದಶಕಗಳ ಕಾಲ ದಡ್ಡುಗಟ್ಟಿದ್ದ ಕಾಂಗ್ರೆಸ್ಸಿನ ಠೇಂಕಾರ, ಆಲಸ್ಯ ಕಂಡಿದ್ದ ಜನಕ್ಕೆ ಹೆಗಡೆ ಚೇತೋಹಾರಿ ಪಯರ್ಾಯವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನು? ಅದಕ್ಕೇ ಅಂದು ನೆಹರೂ ಎದುರು ಲೋಹಿಯಾ ಎದುರಿಸಿದ ಮೌನವನ್ನೇ ಈ ಚಳವಳಿಗಳು ಹೆಗಡೆ ಎದುರು ಅನುಭವಿಸಬೇಕಾಯಿತು. ಗಾಳಿ ಬೀಸುವ ದಿಕ್ಕು ಬದಲಾಗಿತ್ತು. ಈಗ ಯೋಚಿಸಿದರೆ, ಆ ಎಲ್ಲ ಚಳವಳಿಗಳ ಅಂತಿಮ ಧ್ಯೇಯವೇ ಹೆಗಡೆ ಪಟ್ಟಾಭಿಷೇಕವೇನೋ ಎಂಬ ಮಟ್ಟಿಗೆ ಪರ್ಯವಸಾನವಾಯಿತಲ್ಲ ಎಂಬ ತಬ್ಬಿಬ್ಬು! ಇದು ಇಷ್ಟೆಲ್ಲ ಸರಳವಲ್ಲ ಎಂದು ಗೊತ್ತಿದ್ದೂ...

ಸರಿ, ಇಲ್ಲಿ ಈ ಮಟ್ಟಿಗೆ ಯಾಕೆ ಹಳೇ ತುರುಬು ಮುಟ್ಟಿ ನೆನೆಸಿಕೊಳ್ಳುತ್ತಿದ್ದೇನೆ?
ಯಾಕೆಂದರೆ ಆಗ ನಮ್ಮಲ್ಲಿ ಉಂಟಾದ ಎಚ್ಚರ ನಮ್ಮನ್ನು ಯಾವುದೋ ಮಹಾಯಾನಕ್ಕೆ ಒಯ್ಯುತ್ತಿರುವಂತೆ ಭಾಸವಾಗಿತ್ತು. ಆದರೀಗ ಆ ಯಾನದ ನೌಕೆ ಒಡೆದು ಒಬ್ಬೊಬ್ಬರೂ ಕೈಗೆ ಸಿಕ್ಕಿದ ಹಲಗೆ ಚೂರು ಹಿಡಿದು ಯಾವಯಾವುದೋ ನಡುಗಡ್ಡೆಗಳನ್ನು ತಲುಪಿ ಉಸಿರು ಬಿಡುತ್ತಿರುವ ಹಾಗಿದೆ. ಅಭ್ಯಾಸಬಲದ ಮೇಲೆ ಈಗಲೂ ಅವವೇ ಕನಸಿನ ಮಾತಾಡುತ್ತೇವೆ. ಆದರೀಗ ಅದು ಖಾಲಿಡಬ್ಬದ ಸದ್ದಿನಂತೆ ಟೊಳ್ಳಾಗಿದೆ. ನಿದರ್ಶನ ಬೇಕೆನ್ನುವವರು, ನಮ್ಮ ಸುತ್ತ ಜರುಗುವ ಸೆಮಿನಾರುಗಳನ್ನು ಕಂಡರೆ ಸಾಕು: ಮಾತಾಡುವವರೂ ಅವರೇ, ಮಾತುಗಳೂ ಅವೇ, ಕೊನೆಗೆ ಕೇಳುಗರೂ ಅವರೇ! ನಿಂತುಹೋದ ಗಡಿಯಾರದಂತೆ- ಮುಳ್ಳುಗಳಿವೆ, ಜೀವವಿಲ್ಲ!

ಇಷ್ಟೇ ಆಗಿದ್ದರೆ, ಗಡಿಯಾರಕ್ಕೆ ಕೀ ಕೊಟ್ಟು ಮತ್ತೆ ಚಲನೆ ತರುವ ಆಸೆಯಾದರೂ ಇರುತ್ತಿತ್ತು. ಆದರೆ ಸಮಾಜದ 'ಮೂಡ್' ಮತ್ತು ಆಶಯಗಳೇ ಬದಲಾಗಿಹೋಗಿವೆಯಲ್ಲ? ಗಾಳಿ ಈಗ ಯಾವ ದಿಕ್ಕಿನಲ್ಲಿ ಬೀಸುತ್ತಿದೆ? ನಾವುಗಳೇ ಮೃದುವಾಗಿ, ಒಳಗಿಂದೊಳಗೇ ಖದೀಮರಾಗಿ ನುಣ್ಣಗಾಗಲು ನೋಡುತ್ತಿದ್ದೇವೆ. ಜಾತಿಮತಗಳು ಇನ್ನಷ್ಟು ಗಟ್ಟಿಯಾಗಿ ಹಿಂದಿದ್ದ ಅಳುಕು, ಲಜ್ಜೆಗಳೂ ಮಾಯವಾಗಿ....

ಇದೀಗ ಮಾತಾಡುವುದಾದರೂ ಯಾರೊಂದಿಗೆ? ಯಾರಿಗಾಗಿ? ಮಾತಾಡಲು ಶುರು ಮಾಡುತ್ತೇವೆ. ಆದರೆ ತುಸು ಹೊತ್ತಿನಲ್ಲೇ, ಸಿಪ್ಪೆಹೊಟ್ಟಿನಂಥ ಹಳೆ ಮಾತುಗಳೇ ಬಾಯಿಗೆ ಬಂದು, ಅದೇ ಹಳಬರ ಮುಂದೆಯೇ ಬೊಗಳುತ್ತಿರುವುದಕ್ಕೆ ತಲೆ ತಗ್ಗಿಸುವಂತಾಗಿ ಮಾತು ನಾಚುತ್ತದೆ. ನಾಚಿಕೆಯಾಗದಿದ್ದ ಪಕ್ಷದಲ್ಲಿ.... ಎರಡು ಖಚಿತ ಬಣಗಳು ಮೇಲೇಳುತ್ತವೆ- ಎರಡು ಶತ್ರು ದೇಶಗಳ ಹಾಗೆ. ಇಬ್ಬರೂ ಒಟ್ಟಿಗೇ ಬಾಯಿ ಮಾಡುತ್ತಾರೆ. ಸಂವಾದದ ಹಾಗಲ್ಲ, ಇನ್ನೊಬ್ಬರ ಮಾತಿಗೆ ಕಿವಿಗೊಡುವ ತಾಳ್ಮೆಯಿಲ್ಲದೆ ದನಿಯೇರಿಸಿ ಕಿರುಚಾಡುತ್ತಾರೆ. ಕಡೆಗೆ ಮಾತು ನಿಷ್ಪ್ರಯೋಜಕವಾಗಿ ಗದ್ದಲ ಏಳುತ್ತದೆ; ಕೈಗೆ ಕತ್ತಿ ತ್ರಿಶೂಲ ಬರುತ್ತವೆ....

ಎಲ್ಲವನ್ನೂ ಉತ್ಪ್ರೇಕ್ಷಿಸಿ ಬಣ್ಣ ಕೊಟ್ಟು ಹೇಳುತ್ತಿದ್ದೇನೆಯೇ? ಗೊತ್ತಿಲ್ಲ. ಆದರೆ ಇಂದು ಏನಾದರೂ ಮಾತಿಗೆ ತೊಡಗಬೇಕೆಂದರೆ ಹಿಂದೆಂದೂ ಇಲ್ಲದಿದ್ದ ಹಿಂಜರಿಕೆ. ಯಾಕೆಂದರೆ ಎದುರಿನವನು ಕೇಳಿಸಿಕೊಳ್ಳುತ್ತಾನೆಂಬ, ಆ ಮೂಲಕವೇ ಪ್ರತಿ ಮಾತು ಹುಟ್ಟಿ ಸಂವಾದ ಬೆಳೆದೀತೆಂಬ ನಂಬಿಕೆಯೇ ಇಲ್ಲದ ತಬ್ಬಲಿ ಮಾತುಗಳು. ಮಾತಿಗೆ ಮಾತು ಕೊಡದ ಈ ನಿಶ್ಶಬ್ದದ ಭೀತಿ ಪ್ಯಾಪಿಲಾನನ ಕತ್ತಲ ಏಕಾಂತವಾಸದ ಅನುಭವಕ್ಕಿಂತ ಬೇರೆಯಲ್ಲ! ಕೇಳುಗರೇ ಇಲ್ಲದ ಹಾಡುಗಾರ, ನೋಡುಗರೇ ಇಲ್ಲದ ಚಿತ್ರಕಾರನ ಸ್ಥಿತಿ. ನನ್ನದು, ನಮ್ಮೆಲ್ಲರದು. ಮುಂದೆ ಹೇಗೋ ಏನೋ, ಈವತ್ತಿಗಂತೂ ಹೀಗಿದೆ. ಇದಕ್ಕೆ ಜಾಗತೀಕರಣ, ಮಣ್ಣುಮಸಿ ವಿವರಣೆ ಹುಡುಕಹೊರಟ ಕೂಡಲೇ ಮತ್ತದೇ ಎರಡು ಶತ್ರು ಬಣಗಳ ಚಿತ್ರ ಕಣ್ಣ ಮುಂದೆ ಬರುತ್ತದೆ!.....
ಇಂಥ ಸ್ಥಿತಿಯಲ್ಲಿ 'ಬರಹಗಾರನ ತಲ್ಲಣಗಳು' ಎಂದು ಯೋಚಿಸಹೊರಟರೂ, ವ್ಯಕ್ತಿಯಾಗಿ ನನ್ನ ಪಾಡು ಬೇರೆ, ಬರಹಗಾರನಾಗಿ ಬೇರೆ ಅಂದುಕೊಳ್ಳುವ ಹುಂಬತನ ನನಗಿಲ್ಲ. ವ್ಯತ್ಯಾಸವೇನೆಂದರೆ, ಸುತ್ತಣ ಸಂಕಟ ತವಕಗಳಿಗೇ ಎದೆಯೊಡ್ಡಿ ಶಬ್ದದ ಆಕಾರ ಕೊಡುವುದು ಬರಹಗಾರನಿಗೆ ಅಂಟಿ ಬಂದ ಶಾಪವಲ್ಲವೇ?...

(ಕೃಪೆ: ಶೂದ್ರ-35 ವಿಶೇಷಾಂಕ)




ನಾವು ಸಹ ಇಂದು ಅದೇ ಹಂತ ತಲುಪಿದ್ದೇವೆ. ಅವಧಿ-ಆಲೆಮನೆ ನುಡಿನಮನ ಒಳ್ಳೆಯ ಪ್ರಯತ್ನ ಎಂದು ಹಲವರು ತಿಳಿಸಿದ್ದೀರಿ, ಧನ್ಯವಾದಗಳು. ನಾವು ಈ ತಾಣವನ್ನು ಕನ್ನಡದ ಅಖಾಡ ಎಂದು ಕರೆದಿದ್ದೇವೆ. ಇದೊಂದು ಚರ್ಚೆಯ ತಾಣವಾಗಬೇಕೆಂಬ ಸದಾಶಯದೊಂದಿಗೆ ನಾಡಿನ ಅತ್ಯುತ್ತಮ ಕನ್ನಡ ಮನಸ್ಸುಗಳಿಂದ ಲೇಖನ ಬರೆಸಿ ಚರ್ಚೆಗೆ ವೇದಿಕೆಯೋದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ......
ಆಲೆಮನೆಗೆ ಕಬ್ಬಿನ ಅಭಾವ! ಹೌದು ತಾವುಗಳು ಈ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು, ತಮ್ಮ ನೇರ ನಿಷ್ಟುರ ಪ್ರತಿಕ್ರಿಯೆ ತಿಳಿಸಬೇಕು, ಚರ್ಚೆಯನ್ನು initiate ಮಾಡುವುದಷ್ಟೇ ನಮ್ಮ ಕೈಲಿರುವುದು, ಅದನ್ನು ಮುಂದುವರಿಸಬೇಕಿರುವುದು ತಾವುಗಳು. ತಮ್ಮ ಪಾಲ್ಗೊಲ್ಲುವಿಕೆಯೇ ನಮ್ಮ ಆಲೆಮನೆಗೆ ಕಬ್ಬು! ದಯವಿಟ್ಟು ಪ್ರೀತಿ ಮತ್ತು ಒಂದು ಸದಾಶಯದಿಂದ ಕಟ್ಟಿದ ಈ ಆಲೆಮನೆಗೆ ಕಬ್ಬಿನ ಅಭಾವ ಬಾರದಿರಿಸಿ. ಆದ್ದರಿಂದ ಕುಟುಕು ಜನಮೇಜಯ ಕುಟುಕು.......
.