ಸಾಹಿತ್ಯ ಪರಿಷತ್ತು, ಸಾಹಿತ್ಯ ಸಮ್ಮೇಳನಗಳು ಎಂದರೇನೆ ವಿವಾದಗಳು ಎಂಬಂತಾಗಿದೆ ಸ್ಥಿತಿ. ಕಸಾಪ ಹಾಗೂ ಸಮ್ಮೇಳನಗಳಿಗೆ ಇರುವಷ್ಟೇ ದೀರ್ಘ ಇತಿಹಾಸ ವಿವಾದಗಳಿಗೂ ಇದೆ. ಇಂತಿಪ್ಪ ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳ ಕುರಿತು ಖ್ಯಾತ ಸಾಹಿತಿ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ವಿವರವಾಗಿ ಚರ್ಚಿಸಿದ್ದಾರೆ. ಕೊಂಚ ದೀರ್ಘ ಲೇಖನವಾದ್ದರಿಂದ ಎರಡು ಭಾಗಗಳಾಗಿ ಪ್ರಕಟಿಸುತ್ತಿದ್ದೇವೆಕನ್ನಡ ಸಾಹಿತ್ಯ ಪರಿಷತ್ ವ್ಯವಸ್ಥೆಗೊಳಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಒಂದಲ್ಲಾ ಒಂದು ವಿವಾದವೇಳುತ್ತಿರುವುದು ಇತ್ತೀಚೆಗೆ ಸಹಜ ಕ್ರಿಯೆಯೆಂಬಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿರುವುದು ಇದಕ್ಕೆ ಒಂದು ಕಾರಣ. ಸಾಮಾನ್ಯವಾಗಿ ಸರಕಾರ ಹಾಗು ಅದರ ಅಂಗಸಂಸ್ಥೆಗಳ ನಡುವೆ ವಿವಾದಗಳನ್ನುಂಟುಮಾಡುವ ಪ್ರವೃತಿ ನಮ್ಮಲ್ಲಿದೆ. ವಿಶೇಷವಾಗಿ ಪ್ರಷಸ್ತಿಗಳು ಮತ್ತು ಅಧ್ಯಕ್ಷರು ಹಾಗು ಸದಸ್ಯರ ನೇಮಕಾತಿ ಸಂದರ್ಭದಲ್ಲಿ ನ್ಯಾಯ, ಸಾಮಾಜಿಕ ನ್ಯಾಯಗಳ ಬಗ್ಗೆ ಪ್ರಶ್ನೆಯನ್ನು ಎತ್ತಲಾಗುತ್ತದೆ. ಕೆಲವೊಮ್ಮೆ ಈ ನ್ಯಾಯಗಳ ಬಗ್ಗೆ ಅಷ್ಟೇನೂ ಅರಿವಿಲ್ಲದ ಗುಣಮಟ್ಟ ಪ್ರತಿಭೆ ಮುಂತಾದ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಆದರೆ ಯಾವುದೇ ಖಾಸಗೀ ಸಂಸ್ಥೆ ಕೊಡುವ ಪ್ರಶಸ್ತಿ, ಮತ್ತು ಒಳಗೊಳ್ಳುವ ಆಡಳಿತಾತ್ಮಕ ಸ್ವರೂಪದ ಬಗ್ಗೆ ಸಾಮಾಜಿಕ-ಪ್ರಾದೇಶಿಕ ನ್ಯಾಅಯದ ಪ್ರಶ್ನೆಗಳನ್ನು ಎತ್ತುವುದಿಲ್ಲ. ಖಾಸಗೀ ಸಂಸ್ಥೆಗಳೆಂದರೆ ಗುಣಮಟ್ಟ ಅಥವ ಪ್ರತಿಭೆಗಳನ್ನು ತಾನಾಗಿಯೇ ಪರಿಗಣಿಸುತ್ತವೆಯೆಂಬ ನಂಬಿಕೆಯಿಂದಲೋ ಏನೊ ಆ ಪ್ರಶ್ನೆಯನ್ನಂತೂ ಕೇಳುವುದೇ ಇಲ್ಲ. ಪ್ರಚಾರ ಮಾತ್ರ ಸಾಕಷ್ಟು ಸಿಕ್ಕುತ್ತವೆ. ಸಾರ್ವಜನುಕ ಮತ್ತು ಖಾಸಗೀ ಕ್ಷೇತ್ರಗಳಿಗೆ ಪ್ರತ್ಯೇಕ ನ್ಯಾಯ ಮತ್ತು ಪ್ರತ್ಯೇಕ ಮಾನದಂಡ ಎಂಬುದು ಆರ್ಥಿಕ ಕ್ಷೇತ್ರಕ್ಕಷ್ಟೇ ಅಲ್ಲ ಸಾಂಸ್ಕೃತಿಕ ಕ್ಷೇತ್ರಕ್ಕೂ ಅನ್ವಯವಾಗುತ್ತಾ ಬಂದಿರುವುದು ಒಂದು ಒಪ್ಪಿತ ವಿಪರ್ಯಾಸವಾಗಿಬಿಟ್ಟಿದೆ. ಈ ಅಂಶವನ್ನು ಪ್ರಸ್ತಾಪಿಸಲು ಕಾರಣವಿದೆ.

1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹತ್ಯ ಪರಿಷತ್ತನ್ನು ಅಧೀಕೃತವಾಗಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿದ್ದು, ಜನರು ಹಾಗೆಯೇ ಭಾವಿಸಿದ್ದು ಮತ್ತು ಸಾಹಿತ್ಯ ಪರಿಷತ್ತು ಮತ್ತು ಅದರ ಸಮ್ಮೇಳನಗಳು ಸರ್ಕಾರದ ಸಹಾಯವನ್ನು ಅವಲಂಬಿಸಿದ್ದು ಪ್ರಶ್ನೆಗಳನ್ನು ಎತ್ತಲು ಒಂದು ತಾತ್ವಿಕ ತರ್ಕವನ್ನು ಒದಗಿಸಿದೆ. ಬೇರೆ ಕೆಲವು ಸಂಸ್ಥೆಗಳು ನಡೆಸುವ ಸಮ್ಮೇಳನ ಅಥವಾ ಆ ಸಮಾವೇಶಗಳ ಬಗ್ಗೆ ಪ್ರಶ್ನೆಗಳು ಪಿಸುಗುಡುವುದೂ ಇಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು. ಇದರರ್ಥ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ, ಮತ್ತು ಸಮ್ಮೇಳನಗಳ ಸ್ವರೂಪದ ಬಗ್ಗೆ ಪ್ರಶ್ನಿಸಬಾರದೂ ಎಂದಲ್ಲ. ಪ್ರಶ್ನಾರ್ಹವಾದ ಕೆಲಸಗಳನ್ನು ಮಾಡಿದಾಗ ಸಾಹಿತ್ಯ ಪರಿಷತ್ತನ್ನೂ ಒಳಗೊಂಡಂತೆ ಎಲ್ಲಾ ಸಂಸ್ಥೆಗಳ ಕಾರ್ಯ ವೈಖರಿಯನ್ನು ಪ್ರಶ್ನಿಸುವುದು ಸರಿಯಾದುದು. ಎಂಬ ಅಭಿಪ್ರಾಯ ನನ್ನದು.

ಇರಲಿ, ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳ ಸುತ್ತ ಹಬ್ಬುತ್ತಾ ಬಂದ ವಿವಾದಗಳನ್ನು ಗಮನಿಸೋಣ. ವಿವಾದಗಳು ಎಲ್ಲಾ ಸಂದರ್ಭಗಳಲ್ಲೂ ತಾತ್ವಿಕ ನೆಲೆಯನ್ನು ಪಡೆದಿರುತ್ತವೆಯೆಂದೂ ಭಾವಿಸಬೇಕಾಗಿಲ್ಲ. ಒಂದೊಂದು ಸಾರಿ ಒಂದೊಂದು ಕಾರಣಕ್ಕೆ ವಿವಾದಗಳೆದ್ದಿವೆ. ಕೆಲವೊಮ್ಮೆ ವೈಯಕ್ತಿಕ, ಕೆಲವೊಮ್ಮೆ ತಾತ್ವಿಕ. ಕನ್ನಡ ಸಾಹಿತ್ಯ ಸಮ್ಮೆಳನದ ಬಗ್ಗೆ ಇಲ್ಲೀವರೆಗೆ ಎದ್ದಿರುವ ವಿವಾದಗಳು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು. (1) ಸಮ್ಮೇಳನಾಧ್ಯಕ್ಷರ ಆಯ್ಕೆ ಬಗ್ಗೆ, (2) ವಿಚಾರಗೋಷ್ಠಿಗಳ ಸ್ವರೂಪ ಮತ್ತು ವ್ಯಕ್ತಿಗಳ ಆಯ್ಕೆ ಕುರಿತು, (3) ತಾತ್ವಿಕ ಭಿನ್ನಾಭಿಪ್ರಾಯಗಳು.

(1) ಈಗ ಮೊದಲನೆಯ ಅಂಶವನ್ನು ಗಮನಿಸೋಣ. ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮತ್ತು ಅಸಮಾಧಾನ- ಎರಡು ಈಗ ಒಟ್ಟಿಗೆ ಬೆಸೆದುಕೊಂಡಿದೆ. ಸಾಹಿತ್ಯ ಪರಿಷತ್ತು ಸವರ್ಾನುಮತ ಅಥವಾ ಬಹುಮತಗಳ ಆಧಾರದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ, ಅನೇಕ ಅಂಶಗಳು ಪರಿಗಣಿತವಾಗುವುದು ಗುಟ್ಟಿನ ವಿಷಯವೇನೂ ಅಲ್ಲ. ಇಲ್ಲೀವರೆಗೆ ಆಯ್ಕೆಯಾದ ಬಹುಪಾಲು ಅಧ್ಯಕ್ಷರು ಅರ್ಹರಲ್ಲ ಎಂದು ಹೇಳುವಂತಿಲ್ಲವಾದರೂ ಎಷ್ಟು ಜನ ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ತುಳಿತಕ್ಕೊಳಗಾದ ಸಮಾಜದ ಸ್ಥರದಿಂದ ಬಂದಿರುವವರಿಗೆ, ಅರ್ಹತೆಯ ಆಧಾರವನ್ನು ಪರಿಗಣಿಸಿಯೂ ಅಧ್ಯಕ್ಷರಾಗುವ ಅವಕಾಶ ಲಭಿಸಿದೆ ಎಂಬ ಪ್ರಶ್ನೆ ಜೀವಂತವಾಗಿಯೇ ಇದೆ.ಈ ಪ್ರಶ್ನೆಗೆ ಅವರದ್ದೇ ಆದ ತಾತ್ವಿಕ ನೆಲೆಯಿದೆ. ವಿಶೇಷವಾದ ತಾತ್ವಿಕ ನೆಲೆಯಿಲ್ಲದಿದ್ದರೂ ಅಧ್ಯಕ್ಷರ ಆಯ್ಕೆ ವಿವಾದಾಸ್ಪದವಾದ ಸಂದರ್ಭಗಳೂ ನಮ್ಮಲ್ಲಿವೆ.

ಈ ಸಂದರ್ಭ ಎರಡು ನಿದರ್ಶನಗಳನ್ನು ಕೊಡಬಯಸುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಆಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ.ದೇ.ಜವರೇಗೌಡರು. ಸಮ್ಮೇಳನದ ಅಧ್ಯಕ್ಷರಾದರು. ಆಗ ಜವರೇಗೌಡರು ಕನ್ನಡಪರ ಕೆಚ್ಚಿಗೆ ಹೆಸರಾಗಿದ್ದರು. (ಈಗಲೂ ಆ ಕೆಚ್ಚು ಕಡಿಮೆಯಾಗಿಲ್ಲ. ಆದರೆ ಅವರ ಆದ್ಯತೆಗಳ ಬಗ್ಗೆ ನನ್ನಂಥವರ ಆಕ್ಷೇಪವಿದೆ.) ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ. ನಾರಾಯಣ ಅವರು ದೇಜಗೌ ಅವರ ಆಯ್ಕೆಯ ರುವಾರಿ ಎಂದೇ ಆಗ ಜನಜನಿತವಾಗಿತ್ತು. ಈ ಸಮ್ಮೇಳನದ ಬಗ್ಗೆ ಎರಡು ವಿವಾದಗಳು ಎದ್ದಿದ್ದವು. ಒಂದು-ಸುವರ್ಣ ಮಹೋತ್ಸವ ಸಮ್ಮೇಳನದ ಹೆಸರಿನಲ್ಲಿ ಕಟ್ಟಡ ನಿರ್ಮಾಣದಂಥಾ ಕೆಲಸದ ಹೊರತಾಗಿ ದುಂದು ವೆಚ್ಚ ಮಾಡಲಾಗುತ್ತಿದೆ- ಎಂಬ ಆಕ್ಷೇಪ. ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡುವ ಮೂಲಕ ಕೆಟ್ಟ ಸಂಪ್ರದಾಯವನ್ನು ಹಾಕಲಾಗುತ್ತಿದೆಯೆಂದು ಪ್ರತಿಪಾದಿಸಿ, ದುಂದು ವೆಚ್ಚವನ್ನು ವಿರೋಧಿಸಿ ಸಮ್ಮೇಳನದ ದಿನದಂದು ಸಮ್ಮೇಳನದ ಜಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ನನ್ನನೂ ಒಳಗೊಣ್ಡಂತೆ ಅನೇಕ ಪ್ರಗತಿಪರರು ಈ ಧರಣಿಯಲ್ಲಿ ಭಾಗವಹಿಸಿದ್ದರು. ಈ.ನಾರಾಯಣ ಅವರು ತಾವು ಮಾಡುತ್ತಿದ್ದ ವೆಚ್ಚಕ್ಕೆ ಸಮರ್ಥನೆ ನೀಡಿದರು. ವಿವಾದ ಮತ್ತು ವಿರೋಧದ ಎರಡನೇಯ ಅಂಶ ಸಮ್ಮೇಳನಾಧ್ಯಕ್ಷರಿಗೆ ಸಂಬಧಿಸಿದ್ದು . ದೇಜಗೌ ಚಿಕ್ಕವಯಸ್ಸಿನಲ್ಲೆ ಅಧ್ಯಕ್ಷರಾದರೆಂಬ ಗುಸುಗುಸುವಿನ ಜೊತೆಗೆ ಶ್ರೀ ಗೋಪಾಲಕೃಷ್ಣ ಅಡಿಗರು ಬಹಿರಂಗವಾಗಿ ಗುಟುರು ಹಾಕಿದರು. ಕೆಲವು ತಾತ್ವಿಕ ಕಾರಣಗಳನ್ನು ನೀಡಿ ಕನ್ನಡ ಸಾಹಿತ್ಯ ಪರಿಶತ್ತಿನ ಪ್ರಸ್ತುತತೆಯನ್ನೇ ಪ್ರಶ್ನಿಸಿದರು. ಲೆಖನ ಬರೆದರು. ನವ್ಯ ಸಾಹಿತಿಗಳಲ್ಲಿ ಕೆಲವರು ಅಡಿಗರ ಬೆಂಬಲಕ್ಕೆ ನಿಂತರು. ಆದರೆ ಅಡಿಗರ ನಿಲುವು ತಾತ್ವಿಕವೆ, ವೈಯ್ಯಕ್ತಿಕವೆ ಎಂಬ ಅನುಮಾನಕ್ಕೆ ಅವಕಾಶವಿದೆ. ಈ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಗೆ ಮೊದಲು ಒಪ್ಪಿಕೊಂಡು, ದೇಜಗೌ ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಿರಾಕರಿಸಿದರಲ್ಲದೇ ಸಾಹಿತ್ಯ ಪರಿಷತ್ತಿನ ಪ್ರಸ್ತುತತೆಯನ್ನೇ ಪ್ರಶ್ನಿಸಿದ್ದನ್ನು ಗಮನಿಸಿದಾಗ, ಪ್ರಸ್ತುತ-ಅಪ್ರಸ್ತುತ ವಿಶಯಕ್ಕೂ ದೇಜಗೌ ಆಯ್ಕೆಗೂ ಸಂಬಂಧವಿರುವುದು ಸ್ಪಷ್ಟವಾಗುತ್ತದೆ. ಮುಂದೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಅಡಿಗರು ಅಧ್ಯಕ್ಷರಾದಾಗ ಪ್ರಸ್ತುತತೆಯ ಪ್ರಶ್ನೆ ಅಪ್ರಸ್ತುತವಾದದ್ದು ಈಗ ಇತಿಹಾಸ!

ತುಮಕೂರಿನಲ್ಲಿ ನಡೆದ 69ನೇ ಸಾಹಿತ್ಯ ಸಮ್ಮೇಳನಕ್ಕೆ ಡಾ.ಯು.ಆರ್.ಅನಂತಮೂರ್ತಿಯವರು ಅಧ್ಯಕ್ಷರಾಗಿ ಆಯ್ಕೆಯಾದಾಗ ಅಪಸ್ವರದ ಅಬ್ಬರ ಕೇಳಿಸಿತು. ಪತ್ರಿಕಾ ಹೇಳಿಕೆ, ಕರಪತ್ರ, ಇತ್ಯಾದಿ ವಿಧಾನಗಳ ಮೂಲಕ ಅತ್ರುಪ್ತಿ ಅಭಿವ್ಯಕ್ತವಾಯಿತು. ಅನಂತಮೂತರ್ಿಯವರ ಕೆಲವು ಅಭಿಪ್ರಾಯ ಹಾಗು ನಡವಳಿಕೆಗಳ ಬಗ್ಗೆ ಆಕ್ಷೇಪಗಳಿವೆಯಾದರೂ ಸಮ್ಮೇಳನದ ಅಧ್ಯಕ್ಷರಾಗಲು ಅವರೂ ಅರ್ಹರಲ್ಲಿ ಒಬ್ಬರು ಎಂದು ನನ್ನ ಭಾವನೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನಂತಮೂರ್ತಿಯವರ ಬಗ್ಗೆ ಆಕ್ಷೇಪವೆತ್ತಿದವರು ಮುಂದಿನ ಸಮ್ಮೇಳನಕ್ಕೆ ಪ್ರಧಾನವಾಗಿ ಪತ್ರಕರ್ತರಾದ ಶ್ರೀ ಪಾಟೀಲ ಪುಟ್ಟಪ್ಪನವರು ಆಯ್ಕೆಯಾದ ಬಗ್ಗೆ ವಿವಾದವುಂಟು ಮಾಡಲಿಲ್ಲವೆನ್ನುವುದು ಅನೇಕ ಸಂಗತಿಗಳನ್ನು ಸ್ವಯಂವೇದ್ಯಗೊಳಿಸುತ್ತದೆ. ಹಿರಿಯರಾದ ಪಾಟೀಲ ಪುಟ್ಟಪ್ಪನವರ ಕನ್ನಡಪರ ಬದ್ಧತೆ ಅಷ್ಟೇ ಹಿರಿಯದಾದುದು. ಆದರೆ ವಿವಾದಗಳು ಏಳುವುದು ಬೀಳುವುದು ಯಾಕೆ ಎಂಬ ಯಕ್ಷಪ್ರಶ್ನೆಗೆ ಒಳ ಉತ್ತರಗಳು ಇರುತ್ತದೆಯೆಂಬುದನ್ನು ಇಂತಹ ಕೆಲವು ಪ್ರಸಂಗಗಳು ಮನವರಿಕೆ ಮಾಡಿಕೊಡುತ್ತವೆ.

2 ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸುವ ಗೋಷ್ಠಿಗಳ ವಿಷಯ ಮತ್ತು ವ್ಯಕ್ತಿಅಗಳ ಆಯ್ಕೆ ಕುರಿತ ಅಸಮಾಧಾನ ಯಾವಾಗಲೂ ಇರುತ್ತದೆ. ಅಂತೆಯೇ ಈ ಅಂಶಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಸಮಾಧಾನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಅದನ್ನು ನಿರೀಕ್ಷಿಸಬಾರದು. ಸ್ಥಳೀಯ ವಿಷಯಗಳಿಲ್ಲ, ಸ್ಥಳೀಯರಿಗೆ ಅವಕಾಶವಿಲ್ಲ ಎಂಬ ಆಕ್ಷೇಪವನ್ನೂ ಒಳಗೊಂಡಂತೆ ಇಂಥಾ ವಿಷಯದ ಗೋಷ್ಠಿ ಇರಬೇಕಿತ್ತು., ಇಂಥಾ ವಿಷಯ ಇರಬಾರದಿತ್ತು ಎಂಬ ಟೀಕೆಗಳು ಕೇಳಿಬರುತ್ತಲೇ ಇರುತ್ತವೆ. ಬಹಳಷ್ಟು ಸಾರಿ ಸಾಹಿತ್ಯೇತರ ಮತ್ತು ಸಾಂಸ್ಕೃತಿಕೇತರ ವಿಷಯ ಮತ್ತು ವ್ಯಕ್ತಿಗಳ ಪಾರವೇ ಒತ್ತಾಯಗಳಿರುತ್ತವೆ. ಒಂದೇ ಸಮ್ಮೇಳನದಲ್ಲಿ ಎಲ್ಲಾ ವಿಷಯಗಳನ್ನೂ ಒಳಗೊಳ್ಳಲಾಗದು ಎಂಬ ವಾಸ್ತವವನ್ನು ಒಪ್ಪಿಕೊಳ್ಳುತ್ತಲೇ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳ ಸ್ವರೂಪ ಕುರಿತು ಅರ್ಥಪೂರ್ಣ ಚರ್ಚೆಯನ್ನು ಆಕ್ಷೇಪಿಸುವುದು ತಪ್ಪಲ್ಲ. ಇಷ್ಟು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಈ ಚರ್ಚೆ ನಡೆದು ಸಾರ್ವಜನಿಕ ಮನವರಿಕೆಗೆ ಮುಂದಾಗಬಹುದಾಗಿದೆ.

ಗೋಷ್ಠಿಗಳ ವಿಷಯದಲ್ಲಿ ವಿವಾದವುಂಟಾಗಿ ಅರ್ಥ-ಅನರ್ಥಗಳಿಗೆ ಕಾರಣವಾದ ಎರಡು ಪ್ರಸಂಗಗಳನ್ನು ಇಲ್ಲಿ ಪ್ರಸ್ತಾಪಿಸಬಹುದಾಗಿದೆ. ಒಂದು 1979ರಲ್ಲಿ ನಡೆದ ಪ್ರಸಂಗ. ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನಕ್ಕೆ ಮುಂಚೆ ಸದರಿ ಸಮ್ಮೇಳನದಲ್ಲಿ ದಲಿತ ಗೋಷ್ಠಿ (ವಿಶೇಷವಾಗಿ ಸಾಹಿತ್ಯಕ್ಕೆ ಸಂಬಂಧಿಸಿ) ಇರಬೇಕೆಂದು ಶ್ರೀ ಚೆನ್ನಣ್ಣ ವಾಲೀಕಾರ ಮತ್ತಿತರ ಸ್ನೇಹಿತರು ಒತ್ತಾಯ ಮಾಡಿದರು. ಆಗ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾ.ಹಂಪನಾ ಅವರು ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎಂಬುದಿಲ್ಲ ಎಂದು ಪ್ರಾಸಬದ್ಧವಾದ ಲಘು ಪ್ರತಿಕ್ರಿಯೆ ನೀಡಿದರು. ಈ ಲಘು ಪ್ರತಿಕ್ರಿಯೆಯು ಗುರುತರ ಚಚರ್ೆಗೆ ಕಾರಣವಾಯಿತು. ದಲಿತ ಮತ್ತು ಪ್ರಗತಿಪರ ಸಾಹಿತಿಗಳು- ವಿಶೇಷವಾಗಿ ಅಂದಿನ ಯುವ ಸಾಹಿತಿಗಳು- ಪರಿಷತ್ತಿನ ಧೋರಣೆಯನ್ನು ಖಂಡಿಸಿದರು. ಈ ಮೂಲಕ ಪ್ರಗತಿಪರ ಚಿಂತನೆಯ ದಲಿತ ಮತ್ತು ದಲಿತೇತರ ಸಾಹಿತಿಗಳು ಒಂದಾಗಿ ಪ್ರತಿರೊಧ ಒಡ್ಡುವ ಪ್ರಕ್ರಿಯೆಗೆ ಒಂದು ಚಾಲನೆ ಸಿಕ್ಕಿತು. (ಈಗ ಹಂಪನಾ ಅವರೇ ದಲಿತರ ಪರ ಕಾಳಜಿ ಹೊಂದುವಷ್ಟು ಆರೋಗ್ಯಕರವಾಗಿ ಬದಲಾಗಿದ್ದಾರೆ)

ಎರಡನೇಯ ಪ್ರಸಂಗ- ಶಿವಮೊಗ್ಗದಲ್ಲಿ ನಡೆದ ಹಿಂದಿನ ವರ್ಷದ ಸಾಹಿತ್ಯ ಸಮ್ಮೆಳನದ ಪ್ರಾರಂಭದಲ್ಲೇ ಮುಖ್ಯಮಂತ್ರಿಗಳನ್ನು ಸರಿಯಾಗಿ ಆಹ್ವಾನಿಸಿಲ್ಲ ಎಂಬ ವಿವಾದ ಎದ್ದಿತ್ತು. ಇದನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪಾಟಿಲರು ವಿವಾದವಾಗದಂತೆ ಪರಿಹರಿಸಿಕೊಳ್ಳಬಹುದಿತ್ತೆಂಬ ಅಭಿಪ್ರಾಯ ಆಗ ಬಲವಾಗಿತ್ತು. ಈ ಸಣ್ಣ ವಿವಾದವನ್ನು ಮೀರಿಸಿ ಗೋಷ್ಠಿಗೆ ಸಂಬಂಧಿಸಿದ ವಿವಾದ ಭುಗಿಲೆದ್ದಿತ್ತು. ಒಂದು ಗೋಷ್ಠಿಗೆ ಗೌರಿ ಲಂಕೇಶ್, ವಿಠಲಹೆಗಡೆ, ಮುಂತಾದವರನ್ನು ಆಹ್ವಾನಿಸಲಾಗಿತ್ತು. ಇವರು ನಕ್ಸಲಿಸಂ ಪರವಾದವರೆಂದು ಆರೋಪಿಸಿದ ಸಂಘಅರಿವಾರದ ಶ್ರೇಷ್ಠರು ವೇದಿಕೆಗೆ ನುಗ್ಗಿ ಗದ್ದಲ ಮಾಡಿದರು. ಪೋಲೀಸರ ಪ್ರವೇಶ ಮತ್ತು ಲಾಠಿ ಚಾಜರ್ಿಗೆ ಕಾರಣವಾದ ಈ ಗೋಷ್ಠಿಯ ಆಯೋಜನೆ ಮತ್ತು ಅತಿಥಿಗಳ ಆಯ್ಕೆಯನ್ನು ಚಂದ್ರಶೇಖರ ಪಾತಿಲರು ಬಲವಾಗಿ ಸಮರ್ಥಿಸಿಕೊಂಡರು. ಅಂದಿನ ಉಪಮುಖ್ಯಮಂತ್ರಿ ಶ್ರೀಯಡಿಯೂರಪ್ಪನವರಾದಿಯಾಗಿ ಅನೆಕ ಮುಖಂಡರು ಸಂಘಪರಿವಾರದ ದಾಂಧಲೆ ಬಗ್ಗೆ ಸಹಾನುಭೂತಿ ಪರವಾಗಿದ್ದರು. ಆದರೂ ಚಂಪಾ ಅವರು ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಬದ್ಧವಾಗಿ ನೀದಿದ ಸಮರ್ಥನೆ ಸರಿಯಾಗಿತ್ತು. ಗೌರಿ ಲಂಕೇಶ್, ವಿಠಲ್ ಹೆಗಡೆಯವರ ನಿಲುವನ್ನು ಒಪ್ಪದೇ ಇರಬಹುದು. ಆದರೆ ಅವರು ಸಮ್ಮೆಳನದಲ್ಲಿ ಭಾಗವಹಿಸಿ ಮಾತಾಡಲೇಬಾರದು ಎಂಬ ಹಟಮಾರೀ ನಿಲುವು ಅನರ್ಥಕಾರಿಯಾದುದು. ಅರ್ಥಪೂರ್ಣ ವಾಗ್ವಾದಕ್ಕೆ ಪೂರಕವಾಗುವುದು. ಪರಸ್ಪರ ಗೌರವೌತ ಮುಖಾಮುಖಿಗೆ ಮುಂದಾಗುವುದು ತಪ್ಪಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ. ಹೀಗೆ ಇಲ್ಲಿ ಉದಾಹರಿಸಿದ ಎರಡು ಪ್ರಸಂಗಗಳು ಅರ್ಥ-ಅನರ್ಥಗಳ ಸಂಕೇತಗಳೂ ಆಗಬಹುದು.
(ಮುಂದುವರೆಯುವುದು)