೩) ತಾತ್ವಿಕವಾಗಿ ಭಿನ್ನ ನೆಲೆ-ನಿಲುವುಗಳ ಕಾರಣದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಗೆ ಪಯರ್ಾಯ ನೆಲೆಗಳು ಹುಟ್ಟಿಕೊಂಡಿದ್ದು, ಬೆಳೆದದ್ದು ಗಮನಿಸಲೇಬೇಕಾದ ಸಂಗತಿಯಾಗಿದೆ. ತಾತ್ವಿಕ ಭಿನ್ನ ನೆಲೆಗಳ ಕ್ರಿಯೆ ಕೇವಲ ಇತ್ತೀಚಿನದಲ್ಲ. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 23ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ (ಡಿಸೆಂಬರ್ 26, 27, 28) ಪ್ರಗತಿಶೀಲ ಲೇಖಕರು ಒಗ್ಗೂಡಿ ಒಂದು ಒಕ್ಕೂಟವನ್ನು ರಚಿಸಿಕೊಂಡರು. ಅದನ್ನು ಪ್ರಗತಿಶೀಲ ಲೆಖಕರ ಒಕ್ಕೂಟವೆಂದು ಕರೆಯಲಾಯಿತು. ಸಾಹುಇತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನಕ್ಕೆ ದ.ರಾ.ಬೇಂದ್ರೆಯವರು ಅಧ್ಯಕ್ಷರಾಗಿದ್ದರು. ಬೇಂದ್ರೆಯವರ ಬಗ್ಗೆ ಭಿನ್ನಾಭಿಪ್ರಾಯವಿರಲಿಲ್ಲ. ಭಾರತದಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿ ರೂಪುಗೊಳ್ಳುತ್ತಿದ್ದ ಕಾಲವದು. ಹಿಂದಿನ ವರ್ಷ ಮುಂಬೈಯಿಯಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯ ಸಮ್ಮೇಳನಕ್ಕೆ ಖ್ಯಾತ ನಾಟಕಕಾರ ಶ್ರೀರಂಗರು ಹೋಗಿ ಬಂದಿದ್ದರು. ಸಾಹಿತ್ಯ ಪರಿಷತ್ತಿನ ನೆಲೆ ನಿಲುವುಗಳಿಗೆ ಭಿನ್ನವಾಗಿ ಪ್ರಗತಿಪರ ಚಿಂತನೆಯ ಲೇಖಕರು ಒಂದಾಗಿ ಕ್ರಿಯಾಶೀಲರಾಗಬೇಕೆಂಬ ಹಂಬಲದಿಂದ ಹುಟ್ಟಿದ ಒಕ್ಕೂಟದಲ್ಲಿ ಶ್ರೀರಂಗ, ಅ.ನ.ಕೃ, ನಿರಂಜನ, ಬಸವರಾಜ ಕಟ್ಟೀಮನಿ, ಕೃಷ್ಣಕುಮಾರ ಕಲ್ಲೂರ, ಇನಾಂದಾರ್ ಮುಂತಾದ ಅನೇಕ ಪ್ರಸಿದ್ಧರು ಇದ್ದರು. ಮುಂದೆ 1952ನೇ ಜೂನ್ 4ರಿಂದ 7ರವರೆಗೆ ಹಿರಿಯೂರಿನಲ್ಲಿ ಪ್ರಗತಿಪರ ಲೇಖಕರ ಸಮಾವೇಶ ನಡೆಯಿತು. ಆನಂತರದ ದಿನಗಳಲ್ಲಿ ಅ.ನ.ಕೃ ಮತ್ತು ನಿರಂಜನರ ನಡುವೆ ತಾತ್ವಿಕ ಭಿನ್ನಾಭಿಪ್ರಾಯವುಂಟಾಗಿ ಒಕ್ಕೂಟದ ಒಡಕಿನಲ್ಲಿ ಪಯರ್ಾವಸಾನವಾಯಿತು.ಇದು ನಡೆದಿದ್ದು 1954ರಲ್ಲಿ. ಅ.ನ.ಕೃ ಅವರು ವೇಶ್ಯೆಯರನ್ನು ಕುರಿತು ಬರೆದ ನಗ್ನಸತ್ಯ, ಸಂಜೆಗತ್ತಲು ಮತ್ತು ಶನಿಸಂತಾನ- ಎಂಬ ಕಾದಂಬರಿಗಳು ವಿವಾದದ ಕೇಂದ್ರವಾದವು. ಅ.ನ.ಕೃ ಅವರು ಸಂಪ್ರದಾಯವಾದಿಗಳ ವಿರೋಧದ ಜೊತೆಗೆ ನಿರೂಪಣೆಯ ವಿಧಾನ ಮತ್ತು ವಸ್ತು ನಿರ್ವಹಣೆ ಕುರಿತಂತೆ ನಿರಂಜನರಾದಿಯಾಗಿ ಇನ್ನು ಕೆಲವರಿಂದ ಪ್ರತಿರೋಧ ಎದುರಿಸಿದರು. ತಮ್ಮ ನಿಲುವಿನ ಸಮರ್ಥನೆಗಾಗಿ ಸಾಹಿತ್ಯ ಮತ್ತು ಕಾಮ ಪ್ರಚೋದನೆ ಎಂಬ ಕೃತಿಯನ್ನು ಬರೆದರು.

ಮುಂದೆ 1979ರ ಮಾರ್ಚ್ ತಿಂಗಳಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನವು ವಿವಾದಕ್ಕೆ ಗುರಿಯಾಯಿತು. ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದ ಮತ್ತು ಧರ್ಮಸ್ಥಳದಲ್ಲಿ ನಡೆದ ಈ ಸಮ್ಮೇಳನದ ದಿನದಗಳಂದೇ ಬೆಂಗಳೂರಲ್ಲಿ ಬಂಡಾಯ ಸಾಹಿತ್ಯದ ಸಮ್ಮೇಳನ ನಡೆಯಿತು. ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೆಳೆಯುತ್ತಾ ಬಂದ ಎಡಪಂಥೀಯ, ಪ್ರಗತಿಪರ, ಪ್ರಜಾಸತ್ತಾತ್ಮಕ ನಿಲುವುಗಳಿಗೆ ಸಂಘಟನೆಯ ನೆಲೆ ಒದಗಿಸಲು ಧರ್ಮಸ್ಥಳದ ಸಮ್ಮೇಳನ ಒಂದು ಸನ್ನಿವೇಶವನ್ನು ಒದಗಿಸಿತು. ಆ ವೇಳೆಗಾಗಲೇ ಅಡಿಗರು ರಾಜಕೀಯವಾಗಿ ಸಂಘಪರಿವಾರದವರಾಗಿದ್ದರು. ಹಂಪನಾ ಅವರು ಸಮ್ಮೇಳನವನ್ನು ಧರ್ಮಸ್ಥಳಕ್ಕೆ ಕೊಂಡೊಯ್ದಿದ್ದರು. ಈ ವೇಳೆಗೆ ಕನರ್ಾಟಕದಲ್ಲಿ ದಲಿತ ಸಂಘರ್ಷ ಸಮಿತಿ, ಸಮುದಾಯದಂತಹ ಆಂದೋಲನಾತ್ಮಕ ಸಂಘಟನೆಗಳು ಕ್ರಿಯಾಶೀಲವಾಗಿದ್ದವು. ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಆಂದೋಲನಕ್ಕೆ ಅವಕಾಶವಿತ್ತು. ಅದು ಅನಿವಾರ್ಯವೂ ಆಗಿತ್ತು. ಆ ವೇಳೆಗೆ ರಾಷ್ಟ್ರದಲ್ಲಿ ರಾಜಕೀಯವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಧ್ರುವೀಕರಣ ಆರಂಭವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲೂ ಇಂತಹ ಧ್ರುವೀಕರಣದ ಅಗತ್ಯವನ್ನು ಕರ್ನಾಟಕವು ಮೊದಲನೇ ಬಂಡಾಯ ಸಾಹಿತ್ಯದ ಸಮ್ಮೇಳನದ ಮೂಲಕ ಕಂಡುಕೊಂಡಿತು. ಮಾರ್ಕ್ಸ್ವಾದ, ಗಾಂಧೀವಾದ, ಅಂಬೇಡ್ಕರ್ವಾದ, ಲೋಹಿಯಾವಾದ- ಇವೇ ಮುಂತಾದ ತಾತ್ವಿಕ ನಂಬಿಕೆ ಇರುವವರು ಮತ್ತು ಒಟ್ಟಾರೆ ಪ್ರಗತಿಪರರು ಬಂಡಾಯ್ ಅಸಾಹಿತ್ಯ ಸಂಘಟನೆಯ ವಿಶಾಲ ತಳಹದಿಯ ಮೇಲೆ ಒಂದಾದರು. ಆರಂಭದ ಕೆಲ ವರ್ಷ ತಾತ್ವಿಕ ಗಟ್ಟಿತನವನ್ನು ಬೆಳೆಸಿಕೊಳ್ಳುವ ಕಾರ್ಯತಂತ್ರವಾಗಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಗವಹಿಸದಿರಲು ನಿರ್ಧರಿಸಲಾಯಿತು. ಇದು ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳುವ ಕಾರ್ಯತಂತ್ರವಾಗಿದ್ದರಿಂದ ಅನಂತರ ಯಾವುದೇ ಸಂಸ್ಥೆಗಳಿಗೆ ಹೋದರೂ ನಮ್ಮ ವಿಚಾರಗಳನ್ನು ಪ್ರತಿಪಾದಿಸಬೇಕು ಎಂಬ ಬದ್ಧತೆಯಿಂದ ಷರತ್ತನ್ನು ತೆರವುಗೊಳಿಸಲಾಯಿತು. ಒಟ್ತಾರೆ ಕ್ರಿಯಾಶೀಲತೆಗಳ ಏರಿಳಿತಗಳಿದ್ದರೂ ಬಂಡಾಯ ಸಾಹಿತ್ಯ ಸಂಘಟನೆ ಈಗಲೂ ಇದೆ. ತನ್ನ ಮೊದಲನೇಯ ಸಮ್ಮೇಳನದ ಕರಪತ್ರದಲ್ಲೇ ಸ್ಪಷ್ಟಪಡಿಸಿದಂತೆ ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ವಿರುದ್ಧವಲ್ಲ ಸಾಂಸ್ಕೃತಿಕವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಕ್ರೋಢೀಕರಿಸುವ ಚಳುವಳಿ.

ತಾತ್ವಿಕ ವಿವಾದದ ಕಾರಣ ಹೇಳಿ ಹುಟ್ಟಿದ ಇನ್ನೊಂದು ಸಮ್ಮೇಳನ (ಸಂಘಟನೆಯಲ್ಲ) ಜಾಗತಿಕ ಸಾಹಿತ್ಯ ಸಮ್ಮೇಳನ 1990ರ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯಾಗಿ ಅಥವಾ ಪರ್ಯಾಯವಾಗಿ ಬೆಂಗಳೂರಿನಲ್ಲಿ ಜಾಗೃತ ಸಾಹಿತ್ಯ ಸಮ್ಮೇಳನ ನಡೆಯಿತು. 1990ರ 59ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ.ಆರ್.ಸಿ.ಹಿರೇಮಠ ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ವಿವಾದದ ಅಲೆಗಳು ಎದ್ದವು. ಕೆಲವರು ಶ್ರೇಷ್ಠತೆಯ ಪ್ರಶ್ನೆಯನ್ನು ಎತ್ತಿದರು ಮತ್ತು ಶ್ರೇಷ್ಠತೆಯ ವಾದವನ್ನು ಬೆಳೆಸಿದರು. ಸಾಹಿತ್ಯದ ಶ್ರೇಷ್ಠತೆ ಮುಖ್ಯವೆಂದು ಪ್ರತಿಪಾದಿಸಿದ ಈ ಗೆಳೆಯರಲ್ಲಿ ಕೆಲವರಿಗಾದರೂ ಶ್ರೇಷ್ಠತೆಯ ಪ್ರಶ್ನೆ ಜಟಿಲವೆಂಬ ಅರಿವು ಇತ್ತೆಂದು ನಾನು ಭಾವಿಸುತ್ತೇನೆ. ಆದರೆ ಎಲ್ಲರಿಗೂ ಇದರ ಅರಿವು ಇರಲಿಲ್ಲವಾದ್ದರಿಂದ ನವ್ಯ ಸಾಹಿತ್ಯದ ವ್ಯಕ್ತಿನಿಷ್ಠ ಶ್ರೇಷ್ಠತೆಯ ಹಿನ್ನೆಲೆ ಪಡೆದವರೇ ಹೆಚ್ಚಾಗಿ ಜಾಗೃತ ಸಾಹಿತ್ಯ ಸಮ್ಮೇಳನದ ಭಾಗವಾಗಿದ್ದರು. ನಮ್ಮ ಸಾಹಿತ್ಯದ ಶ್ರೇಷ್ಠದ ಕಲ್ಪನೆ ಪುನರ್ ನವೀಕರಣಗೊಳ್ಳುವ ಲಕ್ಷಣಗಳು ಕಾಣಿಸಿದ ಈ ಸಮ್ಮೇಳನವು ಚರ್ಚೆ ಮತ್ತು ಭಾಗವಹಿಸುವಿಕೆಯ ದೃಷ್ಟಿಯಿಂದ ಯಷಸ್ವಿಯಾಯಿತೆಂದೇ ಹೇಳಬೇಕು. ಆದರೆ ಈ ದೇಶದ ಸಾಮಾಜಿಕ ಸ್ಥರಗಳಿಂದುಂಟಾದ ವೈರುಧ್ಯಗಳನ್ನು ಗ್ರಹಿಸದೇ ಕೇವಲ ವ್ಯಕ್ತಿನಿಷ್ಠ ಅನುಭವ ಮತ್ತು ಕೃತಿನಿಷ್ಠ ನೆಲೆಯನ್ನು ಗಮನಿಸಿ ಪ್ರತಿಪಾದಿತವಾಗುವ ಸೀಮಿತ ಶ್ರೇಷ್ಠತೆಯ ಕಲ್ಪನೆಯ ಎದುರು ಅನೇಕ ಪ್ರಶ್ನೆಗಳಿವೆಯೆಂಬುದನ್ನು ಮರೆಯಬಾರದು. ಶ್ರೇಷ್ಠತೆಯು ಪ್ರಗತಿಪರಬದ್ಧ ಲೇಖಕರನ್ನು ಮುಗಿಸುವ ಒಂದು ಅಸ್ತ್ರವಾಗಬಾರದು. ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಕೆ.ವಿ.ಸುಬ್ಬಣ್ಣನವರು ಬರೆದ ಶ್ರೇಷ್ಠತೆಯ ವ್ಯಸನ ಎಂಬ ಲೇಖನವನ್ನು ಇಲ್ಲಿ ನೆನೆಯಬಹುದು.

ಈಗ 74ನೇ ಕನ್ನಡ ಸಾಹಿತ್ಯ ಸಮ್ಮೇಳನವು ಉಡುಪಿಯಲ್ಲಿ ನಡೆಯುವಾಗ ಸಂಘಪರಿವಾರದ ಸಂಬಂಧವುಳ್ಳವರೆಂದು ಭಾವಿಸಲಾದ ಪ್ರೊ.ಎಲ್.ಎಸ್.ಶೇಷಗಿರಿರಾಯರು ಅಧ್ಯಕ್ಷರಾದುದು ಮತ್ತು ಸಮ್ಮೇಳನದ ವ್ಯವಸ್ಥೆಯ ಮುಂಚೂಣಿಯಲ್ಲಿ ಸಂಘಪರಿವಾರದವರೇ ತುಂಬಿದ್ದರೆನ್ನುವುದು ತಮ್ಮ ತಾತ್ವಿಕ ವಿರೋಧಕ್ಕೆ ಕಾರಣವೆಂದು ಪ್ರತಿಪಾದಿಸುವ ಕೋಮು ಸೌಹಾರ್ಧ ವೇದಿಕೆಯ ಗೆಳೆಯರು ಇತರೆ ಪ್ರಗತಿಪರರ ಜೊತೆ ಸೇರಿ ಡಿಸೆಂಬರ್ 9ರಂದು ಉಡುಪಿಯಲ್ಲಿ ಸೌಹಾರ್ಧ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ್ದರು. ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಕೋಮು ಸೌಹಾರ್ದ ವೇದಿಕೆಯವರ ಪರವಾಗಿ ನಿಂತ ಚಂದ್ರಶೇಖರ ಪಾಟೀಲರು ಇಲ್ಲಿ ಅದೇ ವೇದಿಕೆಯವರ ಪ್ರತಿರೋಧವನ್ನಿ ಎದುರಿಸಬೇಕಾಗಿ ಬಂದಿದ್ದು ಒಂದು ವಿಪರ್ಯಾಸ! ಆದರೆ ಕೋಮು ಸೌಹಾರ್ದ ವೇದಿಕೆಯವರ ಜೊತೆ ಉಡುಪಿಯ ಪ್ರಗತಿಪರರು (ಉದಾ: ಜಿ.ರಾಜಶೇಖರ್ ಮುಂತಾದವರು) ಸೇರಿದ ಮೇಲ ಸೌಹಾರ್ದ ಸಮ್ಮೇಳನವು ಪರ್ಯಾಯ ಸಮ್ಮೇಳನವಲ್ಲ ಎಂದು ತಿಳಿಸಲಾಯಿತು. ಆದರೂ ತಾತ್ವಿಕ ಭಿನ್ನತೆ ಇದ್ದೇ-ಇತ್ತು. ಹೀಗಾಗಿ ಸೌಹಾರ್ಧ ಸಾಹಿತ್ಯ ಸಮ್ಮೇಳನವು ಧಾರ್ಮಿಕ ಮೂಲಭೂತವಾದಕ್ಕೆ ಪ್ರತಿರೋಧಿಯಾದ ಸಮ್ಮೇಳನವಾಯಿತು.

ಈ ತಾತ್ವಿಕ ಭಿನ್ನ ಮತದ ಘಟನೆಗಳು ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಇತಿಮಿತಿಯನ್ನು ತೋರಿಸುತ್ತವೆ. ಸಾಹಿತ್ಯ ಪರಿಷತ್ತಿನ ನೇತೃತ್ವ ವಹಿಸಿದವರು ಒಟ್ಟಾರೆ ಪ್ರಗತಿಪರ ಸ್ವರೂಪವನ್ನು ಪರಿಷತ್ತಿನ ವ್ಯಾಪ್ತಿಯಲ್ಲೇ ನೀಡಲು ಪ್ರಯತ್ನಿಸಬಹುದೆಂಬುದು ನಿಜವಾದರೂ ಅದು ತಾತ್ವಿಕವಾಗಿ ನಿರ್ದಿಷ್ಟ ಸಾಮಾಜಿಕ ರಾಜಕೀಯ ಬದ್ಧತೆ ತೋರುವುದು ಕಷ್ಟವೆಂದು ಇಲ್ಲೀವರೆಗಿನ ಬೆಳವಣಿಗೆಗಳು ತೋರಿಸಿವೆ- ಹೀಗಾಗಿ ತಾತ್ವಿಕ ವಿವಾದಗಳು ಹುಟ್ಟುತ್ತಲೇ ಇರುತ್ತವೆ