ನಾಗರಾಜ ವಸ್ತಾರೆ ವೃತ್ತಿಯಲ್ಲಿ ಆರ್ಕಿಟೆಕ್ಟ್. ನಿತ್ಯ ಬೆಂಗಳೂರಿನ ಎರಡು ತದ್ವಿರುದ್ಧ ಜಗತ್ತುಗಳಲ್ಲಿ ಹೊಯ್ದಾಡುವವರು, ನಮ್ಮಲ್ಲನೇಕರಂತೆ. ಒಂದು ಹೊರಜಗತ್ತಿನ ಇಂಗ್ಲೀಷ್ ಲೋಕವಾದರೆ ಮತ್ತೊಂದು ಒಳಮನೆಯ ಕನ್ನಡದ ಸವಿಲೋಕ. ಈ ಎರಡೂ ಲೋಕಗಳ sensibilities ಗಳನ್ನು ತಮ್ಮ ಸಾಹಿತ್ಯದ ಹೂರಣ ಮಾಡಿಕೊಳ್ಳುವುದರಿಂದ ವಸ್ತಾರೆ ನಮಗೆ ಹೆಚ್ಚು ಆಪ್ತರಾಗುತಾರೆ, ಪ್ರಸ್ತುತರಾಗುತ್ತಾರೆ.

ಇಂಗ್ಲೀಷ್ - ಕನ್ನಡ - ಬೆಂಗಳೂರಿನ ಕುರಿತು ನಾಗರಾಜ ವಸ್ತಾರೆಯವರ ಆಪ್ತ ಲೇಖನ,ಇಗೋ ಇಲ್ಲಿ ಒಪ್ಪಿಸಿಕೊಳ್ಳಿ


ಕನ್ನಡದ ನೆಪದಲ್ಲೊಂದಿಷ್ಟು ಸ್ವಕೀಯ ಸ್ವಗತ


ನಿಜ ಹೇಳುತ್ತೇನೆ, ನನಗೆ ಕನ್ನಡ ಎಷ್ಟು ಮುಖ್ಯ ಅನ್ನುವುದು ನನಗೇ ಗೊತ್ತಿಲ್ಲ! ಬರವಣಿಗೆ ಅಂತೊಂದು ಇರದಿದ್ದರೆ ಈ ಊರಿನಲ್ಲಿ ಖಂಡಿತ ಕನ್ನಡವಿಲ್ಲದೆಯೇ ಬದುಕುತ್ತಿದ್ದೆನೇನೋ. ಬರೆಯುವುದು ನಾನು ಕಟ್ಟುವುದರಷ್ಟೇ ಅನಿವಾರ್ಯ ಅನಿಸುವುದರಿಂದ ನನ್ನ ಮಟ್ಟಿಗೆ ಕನ್ನಡ ಉಳಿದುಕೊಂಡಿದೆ. ಇಷ್ಟಕ್ಕೂ ಕನ್ನಡದಲ್ಲಿ ಯಾಕೆ ಬರೆಯಬೇಕು ಅಂತಲೂ ನನ್ನನ್ನು ಆಗಾಗ ಕಾಡುತ್ತದೆ. ಇಂಗ್ಲಿಷು ಎಷ್ಟೇ ಮಟ್ಟಿಗೆ ಬಂದರೂ, ಕೆಲವು ವಿಷಯಗಳನ್ನು ಕನ್ನಡದ ಮೂಲಕವೇ ಹೆಚ್ಚು ಧ್ವನಿಸಬಹುದು ಅನಿಸುವುದರಿಂದ, ಕೆಲವು ವಿಷಯಗಳನ್ನು ಕನ್ನಡದಲ್ಲಷ್ಟೇ ಯೋಚಿಸಲಿಕ್ಕಾಗುವುದು ಅನಿಸುವುದರಿಂದ ಕನ್ನಡದಲ್ಲಿ ಬರೆಯುತ್ತೇನೆ. ಇದು ನನಗೆ ನಾನೇ ಕೊಟ್ಟುಕೊಳ್ಳುತ್ತಿರುವ ಸಮಜಾಯಿಷಿಯೇ ಇರಬಹುದು. ಆದರೆ ಎಷ್ಟೋ ವಿಷಯಗಳನ್ನು ಕನ್ನಡದಲ್ಲಿ ಯೋಚಿಸಲಾಗುವುದಿಲ್ಲ ಅನ್ನುವುದೂ ನನ್ನ ಮಟ್ಟಿಗೆ ಅಷ್ಟೇ ನೈಜ. ಇದನ್ನು ನೀವೂ ಒಪ್ಪಬೇಕಷ್ಟೆ.

ದಿನಂಪ್ರತಿ ಎದ್ದಾಗಿನಿಂದ ಮಲಗುವವರೆಗೆ, ಕನ್ನಡೇತರದಲ್ಲೇ ಬದುಕುವ ಮತ್ತು ಆಡುವ- ಈ ಮೇಜೆದುರಿಗಿನ ‘ವೃತ್ತಿಪರ’ ಮುಲಾಜುಗಳ ದೆಸೆಯಿಂದ ನನ್ನ ಆಡುಗನ್ನಡ ಸೊರಗಿರುವುದಂತೂ ಹೌದು. ಕನ್ನಡದಲ್ಲಿ ಕೈಬರಹವನ್ನು ಮಾಡದೆ ಜನ್ಮಾಂತರವೇ ಕಳೆದುಹೋಗಿದೆ. ಈ ಊರಿಗೆ ಬಂದು ಆರ್ಕಿಟೆಕ್ಚರೆಂಬ ಕನ್ನಡೇತರದ ಓದು ಮತ್ತು ಅಭ್ಯಾಸದಲ್ಲಿ ತೊಡಗಿಕೊಂಡಂದಿನಿಂದ, ಅಂದರೆ ಸರಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಪೆನ್ನು ಹಿಡಿದು ಕನ್ನಡವನ್ನು ಕಾಗುಣಿಸಿಲ್ಲ. ಈ ಮುಂದಕ್ಕೂ ಇಲ್ಲವೇನೋ. ಈಚೆಗೆ ಲ್ಯಾಪ್‍ಟಾಪಿನಲ್ಲಿ ಕೀಲಿಕೆಯನ್ನು ಕಲಿತಿರುವುದರಿಂದಷ್ಟೇ ಈಚೀಚೆಗೆ ಹೀಗೊಂದಿಷ್ಟು ಬರಹ. ರುಜುವೊಂದನ್ನು ಬಿಟ್ಟು ಇನ್ನೇನನ್ನೂ ನಾನು ಪೆನ್ನಿಸುವುದಿಲ್ಲ. ಹಾಗೆ ಬರೆಯುವುದು ಅತ್ಯನವಶ್ಯಕವೆಂಬ ಮನದಟ್ಟನ್ನೂ ಈಚೀಚೆಗೆ ಊರು ಕಟ್ಟಿಬಿಟ್ಟಿದೆ. ಹೀಗಿರುವಾಗ ಕನ್ನಡವನ್ನು ಕೈಯಾರೆ ಬರೆಯುವ ಮಾತೆಲ್ಲಿ? ಯಾರೇನೇ ಅನ್ನಲಿ, ನಾನೊಬ್ಬ ಲ್ಯಾಪ್‍ಟಾಪ್ ಸಾಹಿತಿ ಅನ್ನುವುದು ನನ್ನ ಮಟ್ಟಿಗಿನ ಹೆಮ್ಮೆಯೂ ಹೌದು, ಅಷ್ಟೇ ಖೇದವೂ ಹೌದು! ಇದು ನನ್ನ ಸ್ವಕೀಯ ಇತಿಮಿತಿಯೇ ಇರಬಹುದು. ನನ್ನ ಪೀಳಿಗೆಯ ಎಷ್ಟೋ ಮಂದಿಯ ಕಟ್ಟುಪಾಡೂ ಇದೇ ಇದ್ದೀತು.

ಒಮ್ಮೊಮ್ಮೆ ಈ ಮೇಜಿನಲ್ಲಿ ಅನಿಸುವುದಿದೆ. ಬೀಮು, ಲಿಂಟಲು, ಕಾಂಕ್ರೀಟು, ಫುಟಿಂಗು... ಮೊದಲಾದವುಗಳನ್ನು ಕನ್ನಡದಲ್ಲಿ ಹೇಳಿ, ಕನ್ನಡದಲ್ಲಿಯೇ ಯೋಚಿಸುವುದಕ್ಕೆ ಸಾಧ್ಯವಿಲ್ಲವೆ? ಅವುಗಳ ವಿನ್ಯಾಸಕ್ಕೆ ಬೇಕಾದ ಲೆಕ್ಕಾಚಾರಗಳನ್ನೂ, ಶಿಯರ‍್‍ಫೋರ್ಸ್, ಬೆಂಡಿಂಗ್ ಮೊಮೆಂಟ್, ಡಿಫ್ಲೆಕ್ಷನ್, ಡೆಕ್ಲಿನೇಷನ್... ಇತ್ಯಾದಿಗಳನ್ನೂ ಕನ್ನಡದಲ್ಲಿ ಯೋಚಿಸಲಿಕ್ಕಾಗುವುದಿಲ್ಲವೆ? ದಿನನಿತ್ಯದ ಡೆಡ್‍ಲೈನ್‍ಗಳು, ಪ್ರೆಸೆಂಟೇಷನುಗಳನ್ನು ಕನ್ನಡದಲ್ಲಿ ಮಾಡಲಿಕ್ಕಾಗುವುದಿಲ್ಲವೆ? ಈ ಡೆಡ್‍ಲೈನ್, ಪ್ರೆಸೆಂಟೇಷನುಗಳನ್ನು ಕನ್ನಡಿಸುವುದು ಹೇಗೆ? ಹಾಗೆ ಅನುವಾದಿಸಿದ ಕನ್ನಡದ ಮಾತು ಅಷ್ಟೇ ಗಾಢವಾಗಿ ಸ್ಫುರಿಸಬಹುದೆ? ಎಲ್ಲಾ ಇಫ್ಫು, ಬಟ್ಟುಗಳ ಮಾತು, ಬಿಡಿ!! ಇಂತದೇ ಇತಿಮಿತಿ ನನ್ನ ಇಂಗ್ಲಿಷಿಗೂ ಇದೆ. ಎರ‍ಡು, ನಾಕಾರು, ಎಂಟು ಹದಿನಾಲ್ಕು... ಎನ್ನುವ ಎಣಿಕೆಗಳನ್ನೂ, ಹದಿನೈದೆಂಟಲ ನೂರಿಪ್ಪತ್ತು ಎನ್ನುವ ಗುಣಿಕೆಗಳನ್ನೂ ಇಂಗ್ಲಿಷಿನಲ್ಲಿ ಮಾಡಲಿಕ್ಕೆ, ನಮ್ಮಪ್ಪನಾಣೆ, ಆಗದ ಮಾತು. ಹೀಗಿರುವಾಗ ಇಂಗ್ಲಿಷು ನನಗೆಷ್ಟು ಮುಖ್ಯ ಅಂತ ಕೇಳಿದರೆ ಅದಿಲ್ಲದೆ ‘ಫಿಷೌಟಾಫ್ ವಾಟರ್’ ಎನ್ನುವ ಮಟ್ಟಿಗೆ, ಕನ್ನಡ ಎಷ್ಟು ಅಮುಖ್ಯ ಅಂತ ಕೇಳಿದರೆ ನನ್ನ ಎಚ್ಚರ‍ ಮತ್ತು ಸುಪ್ತಿಗಳ ಬೇರೆಲ್ಲ ತಾಯ್ನುಡಿಯಲ್ಲಿ ನೆಟ್ಟುಕೊಂಡಿರುವುದರಿಂದ ‘ಹವ್ವೀಸಿಟ್ ನಾಟಿಂಪಾರ್ಟೆಂಟ್?!!’ ಎಂದು ಕೆರಳುವ ಮಟ್ಟಿಗೆ- ಎರಡೂ ಸಮ ಸಮ ಬೇಕು! ಬರೇ ಅಭಿಮಾನದ ಸಲುವಾಗಿ ವೈದ್ಯನೊಬ್ಬ ತನ್ನೆದುರಿಗಿನ ಜ್ಞಾನವನ್ನೆಲ್ಲ ಕನ್ನಡಿಸುತ್ತ ಹೋದರೆ, ಆಪರೇಷನ್ ಮೇಜಿನ ಮೇಲೆ ಮೈ ಕೊಯ್ಯಿಸಿಕೊಂಡ ಆತ್ಮಕ್ಕೆ ಕೊಟ್ಟ ಎಡೆ, ಗಡವು ಸಾಲದೆ ವಿಲವಿಲಿಸೀತು!! ಹಾಗಾದರೆ ನನಗೆ ಎಷ್ಟು ಕನ್ನಡ ಬೇಕು? ಮತ್ತೆಷ್ಟು ಇಂಗ್ಲೀಷು? ಈ ಊರನ್ನು ಕಟ್ಟುವ ಭರದಲ್ಲಿರುವ ನನಗೆ ಇದೊಂದು ಬಾಲಿಶಪ್ರಶ್ನೆಯೇ ಸರಿ. An absolutely stupid arguement! -ಎಂದು ನಕ್ಕು ಮರೆಯುವುದಿದೆ. ಆದರೆ ರಕ್ಷಣಾವೇದಿಕೆಯ ಮಂದಿ ಕನ್ನಡ, ಕನ್ನಡ ಅಂತ ಬಡಿದುಕೊಳ್ಳುವಾಗ ತಾತ್ಸಾರವೆನಿಸುವಷ್ಟೇ, ನನ್ನೆದುರು ಮೇಜಿನಾಚೆಗೆ ಕೂರುವ ಕನ್ನಡೇತರದವನೊಬ್ಬ ಕನ್ನಡವನ್ನು ಹೀಗಳೆದರೆ ರೊಚ್ಚೇಳುವಂತಾಗುತ್ತದೆ. ಈ ಎರಡೂ ವೈರುಧ್ಯಗಳ ನಡುವೆ ಒಂದಷ್ಟು ಓದು, ಬರಹ, ಬದುಕು ನಡೆಯುತ್ತಿದೆ.

ನಾನಿರುವ ಬೆಂಗಳೂರೂ ಸಹ ಇದೇ ವೈರುಧ್ಯವನ್ನು ಧ್ವನಿಸುತ್ತದೆ. ನಮ್ಮ ಇವತ್ತಿನ ಪಟ್ಟಣಗಳೆಲ್ಲ ವೃತ್ತಿಯೊಕ್ಕಲಿನ ಸಲುವಾಗಿ ಕಟ್ಟಿಕೊಳ್ಳುತ್ತಿರುವಾಗ, ಉದ್ಯೋಗದ ಪರಿವಿಡಿಗಳು ಕನ್ನಡದ್ದಲ್ಲದೆ ಇರುತ್ತಿರುವಾಗ- ಊರಿಗೆ ಊರೇ ಪರದೇಸಿಯೆನಿಸುವುದು ಸಹಜವೆ. Today's cities are conceived as an extension of the industrial WEST! ನಮ್ಮ ಇವೊತ್ತಿನ ಊರುಗಳು ಔದ್ಯೋಗಿಕ ‘ಪಶ್ಚಿಮ’ದ ಬಡಾವಣೆಯೇ ಹೌದು. ಹೀಗಿರುವಾಗ ನಾನು ನನ್ನೊಳಗಿನ ಒತ್ತಾಯಕ್ಕೆ ಮಣಿದು ಕನ್ನಡದೊಳಗೆ ಊರಿಕೊಳ್ಳಬೇಕೆಂದರೆ ನನ್ನ ಹೊರಗೆಲ್ಲ ಇಂಗ್ಲಿಷ್ ಊರು ಊರಿಕೊಳ್ಳುತ್ತಿದೆಯಲ್ಲ...! ಏನನ್ನುವುದು ಇದಕ್ಕೆ? ಇದು ವೈರುಧ್ಯವೇ ಇದ್ದಲ್ಲಿ ಇದೆಷ್ಟರ ಮಟ್ಟಿಗೆ ಅನಿವಾರ್ಯ?

ಮತ್ತೆ, ಎಷ್ಟು ಕನ್ನಡವೆನ್ನುವ ಪ್ರಶ್ನೆಗೆ ಬಂದರೆ ಸದ್ಯದ ಪರಿಸ್ಥಿತಿಯಲ್ಲಿ, ನಾನಿರುವ ವೃತ್ತಿಯಲ್ಲಿ ಒಂದಿಷ್ಟೂ ಇಲ್ಲ ಅಂತನ್ನುವುದು ಪ್ರಾಮಾಣಿಕ ಉತ್ತರವಾಗುತ್ತದೆ. ಅಭಿಮಾನದಿಂದ ಅಷ್ಟೋ, ಇಷ್ಟೋ ಎನ್ನುವುದು ಸೋಗೆನಿಸುತ್ತದೆ. ಹಾಗಾಗಿಯೇ ನನ್ನಂತವರಿಗೆ ಕನ್ನಡವನ್ನು ಉಳಿಸೋಣ, ಬೆಳೆಸೋಣ ಅನ್ನುವುದೆಲ್ಲ ವೇದಿಕೆಯ ಮೇಲಿನ ‘ಸೊಗದ ಮೊಳಗು’ಗಳಷ್ಟೇ. ರಂಗದ ಮೇಲಷ್ಟೇ ಚೆನ್ನ. ಆದರೆ ಹೀಗನ್ನಲಿಕ್ಕೆ ದುಗುಡವಿಲ್ಲವಂತೇನಿಲ್ಲ. ಕನ್ನಡವೆಂದರೆ ಬರೇ ಮಾತಲ್ಲ, ಅದು ನಮ್ಮ ಬಾಳಿನ ರೀತಿ ಅನ್ನುವ ಕಟ್ಟಾ ‘ಭಾಷೇತರ’ ಮನವರಿಕೆಯನ್ನು ನಾವು ಬೌದ್ಧಿಕ ನೆಲೆಯಲ್ಲಿ ಹುಟ್ಟಿಸಬೇಕೇನೋ. ಇದು ನಮ್ಮ ನಮ್ಮ ಕೆಲಸಗಳ ಬೇರಿನವರೆಗೆ ಇಳಿಯಬೇಕೇನೋ. ನೋಡಿ, ಮಾಡಿ, ಓದಿ, ಕಲಿಯುವವುಗಳಲ್ಲದೆ ಇನ್ನಿತರೆ ಸಾಮಾನ್ಯ ಅರಿವುಗಳೂ ಕನ್ನಡದೊಳಗಿನಿಂದ ಬರದಿದ್ದಲ್ಲಿ ಹೊರಗೆ ಕಟ್ಟಿಕೊಳ್ಳುತ್ತಿರುವ ಊರನ್ನು ಎಷ್ಟು ಹಳಿದರೇನು ಫಲ? ಪ್ರತಿಮೆಯೊಳಗಿನ ಮಣ್ಣು ಮತ್ತು ಆಶಯ ನಮ್ಮದಲ್ಲದಿದ್ದರೆ ಅದರ ಮೇಲೆ ಎಷ್ಟೇ ಕನ್ನಡ ಕೈಯಾಡಿಸಿದರೂ ಅದು ಬೇವಾರಸಿಯೇ ತಾನೆ?!

ಊರಿನ ಯಾವುದೇ ‘ಕೃತಿ’ಯ ಪರಿಕಲ್ಪನೆ- ಅದರ ಮೂಲ ಚಿಂತನೆಯಿಂದ ಮೊದಲುಗೊಂಡು ನಮ್ಮೊಳಮನೆಗಳ ಮಾತಿನಲ್ಲಿ ನಡೆಯದಿರುವಾಗ, ಅದು ಮೂರ್ತಯಿಸಿದ ಮೇಲೆ ಎಷ್ಟೇ ಕನ್ನಡಿಸಿದರೂ ಪರಕೀಯವೇ ಅನಿಸುತ್ತದೆ. ನಮ್ಮ ಬೀದಿಗಳನ್ನು ರಾಚುವ ಬಿಲ್‍ಬೋರ‍್ಡುಗಳು, ಜಾಹಿರಾತುಗಳು ಕನ್ನಡದಲ್ಲಿದ್ದರೂ ಅದು ಬರೇ ಕಪಟವೆನಿಸುತ್ತದೆ ಯಾಕೆ? ನಮ್ಮ ಕೈಗಳಲ್ಲಿ ಶೋಭಿಸುವ ನಾಕಿಯಾ, ಸ್ಯಾಮ್‍ಸಂಗುಗಳು ಎಷ್ಟು ನಮ್ಮವು? ಮಿಸ್ಸ್‍ಡ್‍ಕಾಲ್ ಎನ್ನುವ ನಮ್ಮ ಅನುದಿನದ ಮಾತನ್ನು ಪಟ್ಟು ಹಿಡಿದು ಕನ್ನಡದಲ್ಲಿ ಹೇಳುವುದು ಹೇಗೆ? ಫಾರ್ವರ್ಡ್-ರೀವೈಂಡ್‍ಗಳ ಭಾಷಾತೀತತೆಯನ್ನು ನಿವಾರಿಸಲಿಕ್ಕುಂಟೆ? ಹಾಗೆ ಹೇಳಿದರೆ ಹಾಸ್ಯಾಸ್ಪದವೆನಿಸುವುದೇಕೆ? ಹೀಗೆ ಕನ್ನಡಗೊಂಡ ಊರು ನನಗೆಷ್ಟು ಸಲ್ಲುತ್ತದೆ? ಊರು ನನಗೆ ಸಲ್ಲುವುದಕ್ಕಿಂತ, ನಾನು ಇಂತಹ ಊರಿಗೆ ಹೆಚ್ಚು ಸಲ್ಲುತ್ತೇನೇಕೆ? ‘ಫಿರ್ ಮಿಲೇ ಸುರ್ ಮೇರಾ ತುಮ್ಹಾರಾ’ದಲ್ಲಿ ಬರುವ ಕನ್ನಡದ ಸಾಲುಗಳನ್ನು ಹೇಳುವವರು ಕನ್ನಡದ ಮುಖದವರು ಅಂತ ಒಪ್ಪಿಕೊಳ್ಳುವುದೇಕೆ? ಎಫ್ಫೆಮ್ಮ್ ಕನ್ನಡಕ್ಕೆ ‘ಕಂಗ್ಲಿಷ್’ ಅಂತ ಹೊಸ ಮೊಹರು ಕೊಟ್ಟು ಉಡಾಫೆಗೆ ಅಣಕಿಸುವಾಗ, ಯಾರೋ ಎಲ್ಲವನ್ನೂ ಅಚ್ಚಗೊಳಿಸುತ್ತಲೇ ಸಾಕಷ್ಟು ಅರ್ಥವಾಗದೆ ಮಿಕಮಿಕವಾಗುತ್ತದೇಕೆ? ಆದರೂ ಕನ್ನಡದ ಪಡ್ಡೆ ಸಿನೆಮಾಗಳಲ್ಲಿನ ‘ಸೆಂಟಿಮೆಂಟು, ಫೀಲಿಂಗು’ಗಳ ಹರಕಲುಗಳಿಗೆ ಖೇದಿಸುತ್ತೇವೇಕೆ? ಕನ್ನಡದ ನಟನೊಬ್ಬ ಇಹದ ಯಾತ್ರೆ ಮುಗಿಸಿದರೆ ಊರಿಗೆ ಊರ‍ೇ ಮುಗ್ಗರಿಸುವುದೇಕೆ? ಇಂಗ್ಲಿಷ್ ಮೂಲಕ ಜರುಗುವ ನನ್ನ ಕಟ್ಟಡಗಳ ಕೃತ್ಯ ಕೊಡುವಷ್ಟು ಹಣವನ್ನು ನನ್ನ ಅಚ್ಚಗನ್ನಡದ ಕೆಲಸಗಳು ಎಂದಾದರೂ ತಂದಾವೆ?

ಹಾಗಾದರೆ ಬದಲಾವಣೆ ಆಗಬೇಕಾಗಿರುವುದು ಎಲ್ಲಿ? ಇಂತಹ ಊರುಗಳ ಹೊಣೆಗಾರಿಕೆ ಯಾರದು?

ಕನ್ನಡದ ಮುತ್ಸದ್ದಿಗಳು ಉತ್ತರಿಸಲಿ.

ನಮಸ್ಕಾರ.