ಡಿ. ಎಸ್. ನಾಗಭೂಷಣ ಕನ್ನಡದ ಸಮಾಜವಾದಿ ವಲಯದ ವಿಶಿಷ್ಟ ವಸ್ತುನಿಷ್ಠ ಚಿಂತಕ.
ಡಾ|| ಷ.ಶೆಟ್ಟರ್ ಅವರ `ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಪುಸ್ತಕದ ಹಿನ್ನಲೆಯಲ್ಲಿ, ಕನ್ನಡ ತಮಿಳಿನ ವಿಶಿಷ್ಟ ಸಂಬಂಧವನ್ನು ಕುರಿತು ವಿಶಿಷ್ಟ ಒಳನೋಟಗಳ ಮಹತ್ವದ ಲೇಖನ.


ತಮಿಳರಿಗೆ ಸಿಗುವುದೆಲ್ಲ ಕನ್ನಡಿಗರಿಗೂ ಸಿಗಬೇಕು. ಇದು ಕರ್ನಾಟಕ ಏಕೀಕರಣೋತ್ತರದಲ್ಲಿ ಕಂಡುಬರುತ್ತಿರುವ ಕನ್ನಡತನದ ಒಂದು ಸ್ಥಾಯೀಭಾವವಾಗಿಬಿಟ್ಟಿದೆ! ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡುವವರೆಗೂ ಕನ್ನಡಿಗರಿಗೆ ಶಾಸ್ತ್ರೀಯ ಭಾಷೆಯ ಕಲ್ಪನೆಯಾಗಲೀ, ಆ ಸ್ಥಾನಮಾನ ಕನ್ನಡಕ್ಕೆ ಒದಗಬೇಕೆಂಬ ಆಶಯವಾಗಲೀ ಇದ್ದುದು ಎಲ್ಲೂ ದಾಖಲಾದಂತಿಲ್ಲ. ತಮಿಳಿಗೆ ಆ ಸ್ಥಾನಮಾನ ದೊರೆತ ಮೇಲೇ ಕನ್ನಡಿಗರು, ಕನ್ನಡ ವಿದ್ವಾಂಸರು ಮತ್ತು ಸಂಶೋಧಕರು ಹಾಗೆಂದರೇನು ಎಂದು ತಿಳಿದುಕೊಳ್ಳಲು ಆಸಕ್ತಿ ವಹಿಸತೊಡಗಿದ್ದು. ತಮಿಳರು ಮತ್ತು ಕನ್ನಡಿಗರ ನಡುವೆ ಪದೇ ಪದೇ ಈ ತರಹದ ಘರ್ಷಣೆಗಳು ಏಕೆ ತಲೆದೋರುತ್ತವೆ? ಮತ್ತು ಕರ್ನಾಟಕ ಏಕೀಕರಣದ ನಂತರ ಕಟ್ಟಿಕೊಂಡ ಕನ್ನಡ ಚಳುವಳಿಗಳ ಪ್ರಚೋದಕ ಶಕ್ತಿ ಮುಖ್ಯವಾಗಿ ಏಕೆ ತಮಿಳು ವಿರೋಧವೇ ಆಗಿದೆ? ಎಂಬ ಪ್ರಶ್ನೆಗಳನ್ನೂ ನಾವು ಕೇಳಿಕೊಳ್ಳಬೇಕಿದೆ.

ಸಾಮಾನ್ಯವಾಗಿ ನಿರಭಿಮಾನಿಗಳೆಂದೇ ಹೆಸರಾಗಿರುವ, ಆದರೆ ಸ್ವಾಭಿಮಾನ ಪ್ರಕಟಿಸುವ ಸಂದರ್ಭ ಬಂದಾಗಲೆಲ್ಲ ಅದು ತಮಿಳು ವಿರೋಧಿಯಾಗಿಯೇ ಹೊರ ಹೊಮ್ಮುವಂತಿರುವ ಬೆಂಗಳೂರು ಹಾಗೂ ಅದರ ಸುತ್ತಮುತ್ತಲಿನ ಕನ್ನಡಿಗರ ಈ ವಿಚಿತ್ರ ನಡಾವಳಿಯ ಬಗ್ಗೆ ನನಗೊಂದು ಹೊಸ ಹೊಳಹು ಸಿಕ್ಕಿದ್ದು, ಇತ್ತೀಚೆಗೆ ಪ್ರಕಟವಾದ ಹಿರಿಯ ಇತಿಹಾಸಜ್ಞ ಷ. ಶೆಟ್ಟರ್ ಅವರ ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ (ಪ್ರ: ಅಭಿನವ, ಬೆಂಗಳೂರು) ಎಂಬ ಪುಸ್ತಕವನ್ನು ಓದಿದಾಗ.


ಇತ್ತೀಚೆಗೆ ಪ್ರಕಟಗೊಂಡ ಡಾ|| ಷ.ಶೆಟ್ಟರ್ ಅವರ ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ ಪುಸ್ತಕವು ಕನ್ನಡ ಭಾಷೆ ಹಾಗೂ ಸಂಸ್ಕೃತಿ ಚರಿತ್ರೆಯನ್ನು ಈವರೆಗೆ ನಮ್ಮ ಗಮನಕ್ಕೆ ಬಾರದಿದ್ದ ನೆಲೆಗಳ ಆಧಾರದ ಮೇಲೆ ಪುನಾರಚಿಸುವ ಅಗತ್ಯವನ್ನು ಮನಗಾಣಿಸುತ್ತದೆ. ಮುಖ್ಯವಾಗಿ ಈ ಪುಸ್ತಕ ಕನ್ನಡವನ್ನು ಕಟ್ಟಿದ್ದೆಂದು ಈವರೆಗೆ ನಾವು ಭಾವಿಸಿರುವ ಕನ್ನಡ-ಸಂಸ್ಕೃತ ಬಾಂಧವ್ಯಕ್ಕಿಂತ ಮೂಲಭೂತವಾದ ಹಾಗೂ ಅರ್ಥಪೂರ್ಣವಾದ ಕನ್ನಡ-ತಮಿಳು ಬಾಂಧವ್ಯವನ್ನು ನಮಗೆ ಎತ್ತಿ ತೋರಿಸುತ್ತದೆ. ಆದಿ ತಮಿಳಿನ ಮತ್ತು ತಮಿಳು ಪ್ರದೇಶದ(ತಮಿಳಗಂ) ಒಡನಾಟದಲ್ಲೇ ಒಡಮೂಡಿದ ಕನ್ನಡ ಮತ್ತು ಕನ್ನಡ ಸಮುದಾಯ, ತಮಿಳು ತನ್ನದೇ ಲಿಪಿಯನ್ನು ಪಡೆಯುವ ಸಾಕಷ್ಟು ಮುನ್ನವೇ ತನ್ನದೇ ಲಿಪಿಯನ್ನು ಪಡೆದುಕೊಂಡಿತು. ಇದರಿಂದಾಗಿ ಕನ್ನಡ ಇನ್ನೂ ತನ್ನದೇ ಲಿಪಿ ಪಡೆಯದ ತಮಿಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನ್ನಲ್ಲದೆ ರಾಜಕಾರಣವನ್ನೂ ಪ್ರಭಾವಿಸುವಷ್ಟರ ಮಟ್ಟಿಗೆ ಒಂದು ಸಮಾನಾಂತರ ರಾಜಕೀಯ ಶಕ್ತಿಯಾಗಿಯೂ ಹೇಗೆ ಒಡಮೂಡಿತು ಎಂಬುದರ ಸೂಕ್ಷ್ಮ ವಿವರಗಳನ್ನು ಶೆಟ್ಟರ್ ಈ ಪುಸ್ತಕದಲ್ಲಿ ನೀಡುತ್ತಾರೆ. ಈ ರಾಜಕಾರಣ, ಸಂಸ್ಕೃತಿಯ ನೆಲೆಯಲ್ಲಿ ಇನ್ನಷ್ಟು ಸ್ಪಷ್ಟಗೊಳ್ಳುವುದು, ಈ ಎರಡು ಭಾಷೆಗಳು ಹೊರಗಿಂದ ಬಂದ ಸಂಸ್ಕೃತ ಶಬ್ದಗಳಿಗೆ ತೆರೆದುಕೊಳ್ಳಬೇಕಾದ ರೀತಿ ನೀತಿಗಳ ಬಗ್ಗೆ ಕವಿರಾಜ ಮಾರ್ಗ ಮತ್ತು ತೊಲ್ಕಾಪ್ಪಿಯಮ್ಗಳು ನಿರೂಪಿಸುವ ನಿಯಮಗಳ ವಿಭಿನ್ನ ಸ್ವರೂಪದಲ್ಲಿ. ಈ ಸಂಕೀರ್ಣ ರಾಜಕಾರಣವೇ ಕಾವೇರಿಯೆಂಬ ಒಂದೇ ನದಿಯ ಕಣಿವೆಗಳಲ್ಲಿ ಹುಟ್ಟಿದ ಭಾಷೆಗಳಾಗಿದ್ದ ತಮಿಳು ಮತ್ತು ಕನ್ನಡಗಳನ್ನು, ಕಾಲಾನಂತರದಲ್ಲಿ ವಿರುದ್ಧ ಸಾಂಸ್ಕೃತಿಕ ದಿಕ್ಕುಗಳೆಡೆಗೆ ಎಳೆದುಕೊಂಡು ಹೋದದ್ದು. ಕನ್ನಡದ ಮೂಲ ನೆಲೆಯಲ್ಲಿನ ಈ ಸಾಂಸ್ಕೃತಿಕ ಪಲ್ಲಟವೇ, ಕನ್ನಡಿಗರು ಮತ್ತು ತಮಿಳರ ನಡುವೆ ಇಂದಿಗೂ ಕಾಣುವ ಅಸಹಜ ಸಾಂಸ್ಕೃತಿಕ ಬಿಗುವನ್ನು ಸೃಷ್ಟಿಸಿರುವುದು.

ಆ ಮೂಲಕ ಪರೋಕ್ಷವಾಗಿ; ಕನ್ನಡ ಕುಲ ಮೂಲದ ನಿಜ ಚರಿತ್ರೆ ಹೀಗಿದ್ದರೂ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಚರಿತ್ರೆಯನ್ನು ಸಂಸ್ಕೃತದ ಒಡನಾಟದ ಆಧಾರದ ಮೇಲೇ ಕಟ್ಟಲಾಗಿರುವ ಸಾಂಸ್ಕೃತಿಕ ರಾಜಕಾರಣದ ಕಡೆ ಅವರು ನಮ್ಮ ಗಮನ ಸೆಳೆಯುತ್ತಾರೆ.

ತಮಿಳು ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿಗಳ ನಡುವೆ ಈ ಸಾಂಸ್ಕೃತಿಕ ರಾಜಕಾರಣ ಉಂಟು ಮಾಡಿದ ಬಿರುಕೇ ಈ ದಿನಗಳ ಕನ್ನಡ-ತಮಿಳರ ಘರ್ಷಣೆಗಳ ಹಿಂದೆ ಕೆಲಸ ಮಾಡುತ್ತಿರಬಹುದೇ ಎಂಬ ಅನುಮಾನ ನನ್ನದು. ಇದೊಂದೇ ಅಲ್ಲ. ಇನ್ನೂ ಒಂದು ಮುಖ್ಯ ಸಂಗತಿ ಇದರ ಹಿಂದೆ ಕೆಲಸ ಮಾಡುತ್ತಿರಬಹುದೇ ಎಂಬ ಅನುಮಾನವೂ ಇದೆ: ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ. ಇದರ ಪರಿಣಾಮವಾಗಿ ಬ್ರಿಟಿಷರು ಚಾರಿತ್ರಿಕ ಕನ್ನಡ ನಾಡಿನ ಕೊನೆಯ ರೂಪ ಎನ್ನಬಹುದಾದ ಮೈಸೂರು ಸಂಸ್ಥಾನವನ್ನು ಮೂರು ಭಾಗಗಳಾಗಿ ಛಿದ್ರ ಮಾಡಿದರು. ಒಂದು ಭಾಗ ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದಾಗ, ಬ್ರಿಟಿಷರು ಅಲ್ಲಿಂದ ತಮಿಳು-ತೆಲುಗರನ್ನು ಭಾರಿ ಪ್ರಮಾಣದಲ್ಲಿ ದುಡಿಮೆಗಾಗಿ ಇಲ್ಲಿಗೆ ಸಾಗಿಸಿದರು. ಈ ರಾಜಕೀಯ ದುರುದ್ದೇಶದ ಆಯೋಜಿತ ವಲಸೆ ಮೈಸೂರು ಕನ್ನಡಿಗರ ಮಧ್ಯೆ ಉಂಟು ಮಾಡಿದ ಸಾಂಸ್ಕೃತಿಕ ಆಘಾತದ ಸುಪ್ತ ನೆನಪುಗಳೂ ಇಲ್ಲಿ ಕೆಲಸ ಮಾಡುತ್ತಿರಬಹುದು. ಹಾಗಾಗಿಯೇ ಕನ್ನಡ ಚಳುವಳಿ ತಮಿಳರು ಗಣನೀಯ ಸಂಖ್ಯೆಯಲ್ಲಿರುವ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲೇ ತನ್ನನ್ನು ವಿವಿಧ ರೂಪಗಳಲ್ಲಿ ಕಟ್ಟಿಕೊಂಡು, ತಮಿಳರನ್ನು ತನ್ನ ದೃಷ್ಟಿಕೇಂದ್ರವನ್ನಾಗಿ ಮಾಡಿಕೊಂಡಿದೆ. ಕನ್ನಡ ಚಳುವಳಿಯ ಈ ತಮಿಳು ವ್ಯಸನದಿಂದಾಗಿ ಇತರ ಭಾಷಾ ಸಮುದಾಯಗಳು-ಉದಾ: ಮಲೆಯಾಳಿಗಳು, ಹಿಂದೀಯರು, ಇತ್ತೀಚೆಗೆ ರಾಜಸ್ಥಾನಿಗಳು ಮತ್ತು ಬಿಹಾರಿಗಳು-ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ವಲಸೆ ಬಂದು ನೆಲೆಗೊಂಡು ಇಲ್ಲಿನ ಜನ ಸಮುದಾಯದೊಂದಿಗೆ ಬೆರೆಯುವ ಪ್ರಕ್ರಿಯೆಯಲ್ಲಿ ತೊಡಗದೇ ಹೋಗಿರುವುದು ಯಾರ ಗಮನಕ್ಕೂ ಬಾರದೆ ಹೋಗಿ, ತಮಿಳರು ತಮಿಳರಾಗಿಯೇ ಉಳಿದಿರುವುದು ಮಾತ್ರ ಈ ಕನ್ನಡ ಚಳುವಳಿಕಾರರನ್ನು ಬಾಧಿಸುವ ದೊಡ್ಡ ಸಮಸ್ಯೆಯಾಗಿದೆ! ಕನ್ನಡ ಚಳುವಳಿಯ ಈ ದೃಷ್ಟಿದೋಷದಿಂದಾಗಿ ಕನ್ನಡದ ಪೂರ್ವ ಗಡಿ ಪೂತರ್ಾ ರಾಜಕೀಯವಾಗಿ(ಇದೇ ಅಂತಿಮ ಹಂತ ತಾನೇ?) ತೆಲುಗರ ವಶವಾಗುತ್ತಿರುವುದು ಯಾರಿಗೂ ದೊಡ್ಡ ಸಮಸ್ಯೆಯಾಗಿ ಕಾಣುತ್ತಿಲ್ಲ. ಇದು ಕನ್ನಡ ಚಳುವಳಿಯ ಇಂದಿನ ದುರಂತ.

ತಮ್ಮ ಭಾಷೆಯ ಸ್ಥಾನಮಾನವನ್ನು ತಮಿಳಿನ ಸ್ಥಾನಮಾನದೊಂದಿಗಷ್ಟೇ ಹೋಲಿಸಿಕೊಂಡು ಅದನ್ನು ಸಂರಕ್ಷಿಸಿಕೊಳ್ಳುವಷ್ಟು ಮಾನಧನರಾದ ಕನ್ನಡಿಗರು, ತಮ್ಮ ಭಾಷೆಯ ಬಗ್ಗೆ ನಿಜವಾಗಿ ಎಷ್ಟು ಆಳವಾದ ಅಭಿಮಾನವನ್ನು ಹೊಂದಿದ್ದಾರೆ ಎಂಬುದನ್ನು ಷ.ಶೆಟ್ಟರ್ ಅವರು ತಮ್ಮ ಪುಸ್ತಕದಲ್ಲಿ ಸೂಚಿಸಿರುವುದು ಹೀಗೆ: ತಮ್ಮ ಸಾಹಿತ್ಯವನ್ನು ಪರಭಾಷೀಯರಿಗೆ ಪರಿಚಯಿಸುವ ಕಾರ್ಯವನ್ನು ತಮಿಳು ಭಾಷಾ ಪಂಡಿತರು ಬಹುಶಃ ಉಳಿದೆಲ್ಲ ಭಾಷಾ ಪಂಡಿತರಿಗಿಂತಲೂ-ಖಂಡಿತವಾಗಿಯೂ ಕನ್ನಡ ಕೃತಿಗಳನ್ನು ಪರಿಚಯಿಸಲು ಮಾಡಿದ ನಮ್ಮ ಪರಿಶ್ರಮಕ್ಕಿಂತಲೂ ಸರಿ ಸುಮಾರು ನೂರು ಪಟ್ಟು-ಹೆಚ್ಚು ಶ್ರಮ ಮತ್ತು ಶ್ರದ್ಧೆಯಿಂದ ಪೂರೈಸಿಕೊಟ್ಟಿರುವರು.

ತಮಿಳರಂತೆ ತಮ್ಮ ಭಾಷೆಯ ಬಗ್ಗೆ ನಿಜವಾದ ಶ್ರದ್ಧೆಯನ್ನಾಗಲೀ, ಪರಿಶ್ರಮವನ್ನಾಗಲೀ ಪ್ರದರ್ಶಿಸದ ಕನ್ನಡಿಗರು ತಮ್ಮ ಭಾಷೆಗೆ ತಮ್ಮದೇ ಬದುಕಿನಲ್ಲಿ ತಾವು ಕೊಡಲಾಗದ ಮಾನ್ಯತೆಯನ್ನು ಇತರರು ಕೊಡಬೇಕೆಂದು ಬಯಸುವ ಹುಸಿ ಆತ್ಮಾಭಿಮಾನದ ರೋಗಕ್ಕೆ ತುತ್ತಾಗಿ ಬಳಲುತ್ತಿದ್ದಾರೆ. ಈ ರೋಗದಿಂದ ಮುಕ್ತರಾಗದ ಹೊರತು ಕನ್ನಡಿಗರಿಗೆ ಮತ್ತು ಕನ್ನಡಿಗರಿಗೆ ಮುಕ್ತಿಯಿಲ್ಲ. ಇದೇ ಶಂಗಂ ತಮಿಳಗಂ ಪುಸ್ತಕ ನೀಡುವ ಮುಖ್ಯ ಸಾಂಸ್ಕೃತಿಕ ಹೊಳಹು ಕೂಡಾ ಎಂದು ನಾನು ಭಾವಿಸಿದ್ದೇನೆ.