ಇತ್ತೀಚೆಗೆ ಕೆಲವರು ಕ್ಲುಪ್ತವಾದ, ಸಾಂದ್ರತೆಯುಳ್ಳ ಬರವಣಿಗೆಯತ್ತ ಧಾವಿಸುತ್ತಿದ್ದಾರೆ. ಬ್ಲಾಗು ಅಂಥದೊಂದು ತೀವ್ರವಾದ ಬರಹರೂಪವೇನೋ ಕಾದುನೋಡಬೇಕಿದೆ. ಹೀಗೆಂದಾಗ ಕನ್ನಡದ ಪ್ರತಿಭಾಲೋಕ ಸ್ಥಗಿತವಾಗಿದೆ ಅಥವಾ ಮಂದವಾಗಿದೆ ಎಂತೆನೂ ಅಲ್ಲ. ಹಾಗೆ ನೋಡಿದರೆ ಇದು ''ಬ್ಲಾಗು''ಗಳ ಯುಗ. ಕೆಂಡ ಸಂಪಿಗೆ, ಅವಧಿ, ಪುಸ್ತಕಪ್ರೀತಿ, ಅಂತರಂಗ, ಬುಕ್ಮಾರ್ಕ್. ಅನುಭವ ಮಂಟಪ, ಅನವರತ, ಮತ್ತು ಅಭಿವ್ಯಕ್ತಿ ಬ್ಲಾಗುಗಳು ವಿವಿಧ ವೆಬ್ ಸೈಟ್ ಗಳಲ್ಲಿ ಬರುತ್ತಿರುವ ಬರಹಗಳ ಮೊನಚು, ಆಪ್ತತೆ ಎಂಥವರನ್ನೂ ದಮ್ಗುಬದಿಸದೆ ಇರಲಾರದು. ದಿನದ ಹೆಚ್ಚುಹೊತ್ತು ಕಂಪ್ಯೂಟರ್ ಇದಿರು ಕುಳಿತು ಎಲ್ಲದಕ್ಕೂ ಅದನ್ನೇ ಆಶ್ರಯಿಸಿಕೊಂಡಿರುವ ಹೈಟೆಕ್ ಸಿಟಿಗಳ ವಿದ್ಯಾವಂತರಿಗಂತೂ ಬ್ಲಾಗುಗಳ ಲೋಕ ತೀರ ಆಪ್ಯಾಯಮಾನವೆನಿಸುತ್ತಿದೆ. ಖಾಸಗಿಯಲ್ಲದ ಈ ಖಾಸಗಿ ಓದು ಸಾಫ್ಟ್ವೇರ್ ಜಗತ್ತಿಗೆ ಅನಿವಾರ್ಯ.