ಇಂದಿನ ಅತಿಪ್ರಮುಖ ಕನ್ನಡ ಲೇಖಕರಲ್ಲೊಬ್ಬರು ವಸುಧೇಂದ್ರ. ವ್ಯಾವಹಾರಿಕವಾಗಿ IT ಜಗತ್ತಿನಲ್ಲಿ ಮುಳುಗಿ ಹೋಗಿದ್ದರೂ, ಕನ್ನಡ ಸಾಹಿತ್ಯದ ಸವಿರುಚಿಯನ್ನು ಉಂಡವರು, ಉಣಬಡಿಸುತ್ತಿರುವವರು. ವಸುಧೇಂದ್ರ ಕನ್ನಡ ಕಥಾಲೋಕದ ಪ್ರಪಿತಾಮಹ ಎಂದೇ ಗುರುತಿಸಲಾದ ಮಾಸ್ತಿಯವರ ಕಥೆಗಳು ಮತ್ತು ಅವರ ಅನುಭವದ ಕುರಿತು ಬರೆದಿದ್ದಾರೆ. ಅವರು ಹೇಗೆ ಇಂದಿಗೂ ಮೇಲ್ಪಂಕ್ತಿಯಲ್ಲಿ ನಿಂತು ಮಾರ್ಗದರ್ಶಕರಾಗಿದ್ದಾರೆ ಎಂದು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ....


ಇತ್ತೀಚೆಗೆ ಹಿರಿಯ ಗೆಳೆಯರೊಬ್ಬರು ನನ್ನನ್ನು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಸೊಗಸಾದ ಊಟವನ್ನು ಉಣಿಸಿ, ಮನೆಗೆ ಬರುವಾಗ ನನಗೆ ಉಡುಗೊರೆಯಾಗಿ ಮಾಸ್ತಿಯವರ ಒಂದು ಕಥಾಸಂಪುಟವನ್ನು ಕೊಟ್ಟರು. ನಾನು ಈಗಾಗಲೇ ಮಾಸ್ತಿಯವರ ಎಲ್ಲಾ ಕತೆಗಳನ್ನೂ ಓದಿಯಾಗಿತ್ತು. ಹಾಗಂತ ಅವರಿಗೆ ಹೇಳಿಯೂ ಬಿಟ್ಟೆ. ಅದಕ್ಕವರು ಏನಾಯ್ತೀಗ? ಮತ್ತೊಮ್ಮೆ ಮಾಸ್ತಿಯವರನ್ನು ಓದಿದರೆ ತಪ್ಪೇನೂ ಆಗುವುದಿಲ್ಲ ಎಂದು ಹೇಳಿ ಆ ಪುಸ್ತಕವನ್ನು ಕೊಟ್ಟರು. ನನಗೂ ಅವರ ಮಾತು ಸರಿಯೆನ್ನಿಸಿತು. ನಮ್ಮ ಹಿರಿಯರ ಸಾಹಿತ್ಯವನ್ನು ಓದಿದರೆ ನಮ್ಮ ಹುಟ್ಟೂರಿಗೊಮ್ಮೆ ಭೇಟಿ ಕೊಟ್ಟು ಬಂದಂತಹ ಅನುಭವವಾಗುತ್ತದೆ. ಪ್ರೀತಿ ಕೊಡುವ ಗೆಳೆಯರು, ಹಿರಿಯರು, ಬಂಧುಗಳು, ಶಾಲೆ, ಹಳ್ಳ, ಮರ, ಗಿಡಗಳಿರುವ ಹುಟ್ಟೂರು ಎಂದಾದರೂ ಬೇಸರ ಕೊಟ್ಟೀತೆ? ಈ ನೆಪದಿಂದಲಾದರೂ ಮಾಸ್ತಿಯವರ ಒಂದಿಷ್ಟು ಕತೆಗಳನ್ನು ಮತ್ತೊಮ್ಮೆ ಓದಿದರಾಯ್ತೆಂದು ಆ ಪುಸ್ತಕವನ್ನು ಸ್ವೀಕರಿಸಿದೆ. ಮನೆಗೆ ಬಂದ ತಕ್ಷಣ ಓದಿಯೂ ಬಿಟ್ಟೆ. ಮಾಸ್ತಿ ಮತ್ತೊಮ್ಮೆ ಇಷ್ಟವಾದರು. ಹೊಸದಾಗಿಯೂ ಕಂಡರು.

ಯಥಾಪ್ರಕಾರ ಯಾರ್ಯಾರೋ ಮಾಸ್ತಿಯವರಿಗೆ ಹೇಳಿದ ಕತೆಗಳಿವು. ನಮ್ಮ ಹತ್ತಿರವೇಕೆ ಯಾರೂ ಈ ತರಹ ಒಳ್ಳೆಯ ಕತೆಗಳನ್ನು ಹೇಳಿಕೊಳ್ಳುವದಿಲ್ಲ? ಎಂದು ಮಾಸ್ತಿಯವರ ಬಗ್ಗೆ ಅಸೂಯೆಯಾಗುವದರೊಳಗೆ ಇದು ಮಾಸ್ತಿಯವರ ತಂತ್ರವೇ ಹೊರತು ಹಾಗೆ ಯಾರೂ ಅವರಿಗೆ ಹೇಳಿರಲಿಕ್ಕಿಲ್ಲವೆಂದು ಅರ್ಥವಾಗುತ್ತದೆ. ಬದುಕಿನ ಬಗ್ಗೆ ಕಳಕಳಿ, ಒಳ್ಳೆಯತನದ ಬಗ್ಗೆ ಗೌರವ, ಇನ್ನೊಬ್ಬರ ಸಮಸ್ಯೆಗಳಲ್ಲಿ ಭಾಗವಹಿಸಿ ಅದನ್ನು ಪರಿಹರಿಸುವ ಉತ್ಸಾಹ, ಹಾಗೆ ಮಧ್ಯ ಬಂದು ಬುದ್ಧಿ ಹೇಳುವವರನ್ನು ಗೌರವಿಸುವ ಜನ, ಎಂತಹ ಸಂಗತಿಯನ್ನೂ ಉತ್ಪ್ರೇಕ್ಷೆ ಮಾಡದ, ಯಾವುದನ್ನೂ ನಗಣ್ಯಗೊಳಿಸದ ಮಾಸ್ತಿಯ ಕಥಾಲೋಕ ತನ್ನ ಪ್ರಾಮಾಣಿಕ ಆತ್ಮೀಯತೆಯಿಂದಲೇ ನಮ್ಮನ್ನು ಸೆಳೆಯುತ್ತದೆ.

ಈ ಸಂಪುಟದಲ್ಲಿದ್ದ 'ಆಚಾರ್ಯವಂತ ಅಯ್ಯಂಗಾರರು', 'ಎಮ್ಮೇ ಕಳವು' ಮತ್ತು 'ಪಕ್ಷಿಜಾತಿ' ಎಂಬ ಮೂರು ಕತೆಗಳನ್ನು ನಾನು ಆಯ್ಕೆ ಮಾಡಿಕೊಂಡಿರುವದಕ್ಕೆ ಮುಖ್ಯ ಕಾರಣ ಆ ಮೂರೂ ಕತೆಗಳು ಗಂಡು-ಹೆಣ್ಣಿನ ಅಕ್ರಮ ಸಂಬಂಧಗಳ ಕುರಿತದ್ದಾಗಿವೆ. ಮೂರು ಉದ್ದ ನಾಮಗಳನ್ನು ಸ್ಪಷ್ಟವಾಗಿ ಹಾಕಿಕೊಂಡು, ಬಿಳಿ ಪಂಜೆ, ಕರಿ ಕೋಟು ಧರಿಸಿ, ನಡೆ-ನುಡಿಯಿಂದ ಅಪ್ಪಟ ಮಡಿವಂತರಂತೆ ಕಾಣುತ್ತಿದ್ದ ನಮ್ಮ ಮಾಸ್ತಿ ಇಂತಹ ವಸ್ತುಗಳನ್ನು ಎಷ್ಟೊಂದು ಸಹಜವಾಗಿ, ಸರಳವಾಗಿ ನಿರ್ವಹಿಸಿಬಿಡುತ್ತಾರಲ್ಲ ಎಂಬುದು ನನ್ನ ಅಚ್ಚರಿ. ಎಂತಹ ಅಶ್ಲೀಲ ಸಂಗತಿಯನ್ನೂ ಮರೆಮಾಚದೆ, ಆದರೆ ಓದುಗನಿಗೆ ಅಸಹ್ಯವೆನ್ನಿಸದೆ ಹೇಳುವ ಅವರು ನನಗೆ ಅತ್ಯಂತ ಧೈರ್ಯವಂತ ಕಥೆಗಾರರಾಗಿ ಕಾಣುತ್ತಾರೆ.

'ಆಚಾರ್ಯವಂತ ಅಯ್ಯಂಗಾರರು' ಕತೆ ಡಾ. ಯು. ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿಯನ್ನು ನೆನಪಿಸುವಂತಹದ್ದು. ಈ ಕತೆಯನ್ನು ಯಾವ ಕಾಲದಲ್ಲಿ ಮಾಸ್ತಿ ಬರೆದರೆಂಬುದು ಈ ಪುಸ್ತಕದಲ್ಲಿ ನಮೂದಿಸಿಲ್ಲದಿರುವದರಿಂದ ಅದು 'ಸಂಸ್ಕಾರ'ದ ಕತೆಗೆ ಪ್ರತಿಕ್ರಿಯೆಯಾಗಿ ಬರೆದದ್ದೋ, ಅಥವಾ ಅದಕ್ಕೂ ಮುಂಚೆ ಬರೆದದ್ದೋ ನನಗೆ ತಿಳಿದಿಲ್ಲ. ಅತ್ಯಂತ ಮಡಿವಂತರಾದ ಅಯ್ಯಂಗಾರರೊಬ್ಬರು ತಮ್ಮ ಕುಟುಂಬವೊಂದನ್ನು ಕಳೆದುಕೊಂಡ ಮೇಲೆ ಕ್ರಿಶ್ಚಿಯನ್ ನರ್ಸ್ ಜೊತೆ ಕೂಡಿ ಬಾಳುವದಕ್ಕೆ ನಿರ್ಧರಿಸುತ್ತಾರೆ. ಆ ಇಳಿ ವಯಸ್ಸಿನಲ್ಲಿ ಇಬ್ಬರೂ ಮದುವೆಯಾಗುವದು ಬೇಡವೆಂದು ನಿರ್ಧರಿಸಿ, ಹಿರಿಯರೊಬ್ಬರ ಮುಂದೆ ತಾವು ಕೂಡಿ ಬಾಳುವದಾಗಿ ಹೇಳಿ, ಒಂದೇ ಮನೆಯಲ್ಲಿ ಗಂಡ-ಹೆಂಡಿರಂತೆ ಬಾಳಲಾರಂಭಿಸುತ್ತಾರೆ. ಹೆಂಡತಿ ನರ್ಸ್ ಆದ ಕಾರಣ ಯಾವಾಗಲೂ ಕೆಲಸದ ಮೇಲೆ ಹೊರ ಜಗತ್ತಿನಲ್ಲಿ ದುಡಿಯುತ್ತಿದ್ದರೆ, ಅಯ್ಯಂಗಾರರು ಮನೆಯಲ್ಲಿ ಅಡಿಗೆ ಮಾಡಿಕೊಂಡು ಅವಳಿಗೆ ಸಹಾಯ ಮಾಡುತ್ತಿರುತ್ತಾರೆ. ಒಂದು ದಿನ ಅಚಾನಕ್ಕಾಗಿ ಈ ಅಯ್ಯಂಗಾರರು ಕೊನೆಯುಸಿರೆಳೆಯುತ್ತಾರೆ. ಆದರೆ ವೈದಿಕ ಧರ್ಮವನ್ನು ಪರಿಪಾಲಿಸುತ್ತಿದ್ದ ಈ ಅಯ್ಯಂಗಾರರು ತಮ್ಮ ಸಂಸ್ಕಾರ ಕಾರ್ಯವನ್ನು ಶ್ರೀವೈಷ್ಣವರಿಂದಲೇ ಮಾಡಿಸಬೇಕೆಂದು ಹೆಂಡತಿಯಿಂದ ಮಾತು ಪಡೆದಿರುತ್ತಾರೆ. ಈ ಕ್ರಿಶ್ಚಿಯನ್ ಮಹಿಳೆ ಬೇರೆ ದಾರಿ ಕಾಣದೆ ನಿರೂಪಕರ ಮುಂದೆ ಬಂದು ಸಂಸ್ಕಾರದ ಸಹಾಯವನ್ನು ಕೇಳುತ್ತಾಳೆ. ಅದಕ್ಕೆ ತಗಲುವ ಎಲ್ಲಾ ಖರ್ಚನ್ನೂ ತಾನು ಭರಿಸುವದಾಗಿ ತಿಳಿಸುತ್ತಾಳೆ. ಅಲ್ಲಿಗೆ ಇದು 'ಸಂಸ್ಕಾರ' ಕಾದಂಬರಿಯ ಸಮಸ್ಯೆಯನ್ನೇ ಅತ್ಯಂತ ಸರಳವಾಗಿ ನಮ್ಮ ಮುಂದಿಡುತ್ತದೆ. ಆದರೆ ಮಾಸ್ತಿ ಆ ಸಮಸ್ಯೆಯನ್ನು ಬಗೆಹರಿಸುವ ರೀತಿ ಮಾತ್ರ ನಾವು ಬೆರಗುಗೊಳಿಸುವಷ್ಟು ಸರಳವಾದದ್ದಾಗಿದೆ. ಆ ನಿರೂಪಕರು ತಮ್ಮ ಶ್ರೀವೈಷ್ಣವ ಧರ್ಮದ ಹಲವು ಹಿರಿಯರನ್ನು ಮನೆಗೆ ಕರೆಸಿ, ವಿಷಯವನ್ನು ವಿವರಿಸಿ, ಆ ಸಂಸ್ಕಾರವನ್ನು ಮಾಡುವುದು ಮಾನವಧರ್ಮವೆಂದು ತಿಳಿಸುತ್ತಾರೆ. ಎಲ್ಲರೂ ಒಪ್ಪಿ ವಿಧಿವತ್ತಾಗಿ ಅಯ್ಯಂಗಾರರ ಸಂಸ್ಕಾರವನ್ನು ಮಾಡಿ ಮುಗಿಸುತ್ತಾರೆ. ಅಲ್ಲಿಗೆ ಕತೆ ಮುಗಿಯುತ್ತದೆ! ಸೂಕ್ಷ್ಮವಾಗಿ ನೋಡಿದರೆ ಈ ಕತೆಯಲ್ಲಿ ಬೆಚ್ಚಿ ಬೀಳುವಂತಹ ಸಂಗತಿಗಳಿವೆ. ಮದುವೆಯಾಗದೆ ಕೂಡಿ ಬಾಳುವ ಸಂಗತಿಯನ್ನು (ಲಿವಿಂಗ್ ಟುಗೆದರ್) ನಾವು ಈವತ್ತಿನ ವಿಶೇಷವೆನ್ನುವಂತೆ ಹೇಳುವದನ್ನು ಮಾಸ್ತಿ ಆಗಲೇ ತಿಳಿಸಿಬಿಟ್ಟಿದ್ದಾರೆ. ಬರೀ ಅಷ್ಟೇ ಅಲ್ಲ, ಅದರಲ್ಲಿ ಯಾವ ತಪ್ಪು-ಹುಳುಕನ್ನೂ ಮಾಸ್ತಿ ಕಾಣುವದಿಲ್ಲ. ಬದುಕನ್ನು ಅತ್ಯಂತ ವಿಶಾಲ ದೃಷ್ಟಿಕೋನದಿಂದ ಕಾಣುವ ಮಾಸ್ತಿಗೆ ಆ ಹೊಂದಾಣಿಕೆ ಅತ್ಯಂತ ಪ್ರಾಮಾಣಿಕವೆನ್ನಿಸುತ್ತದೆ. ಜೊತೆಗೆ ಅದರಿಂದ ಹುಟ್ಟುವ ಸಂಸ್ಕಾರದ ಸಮಸ್ಯೆಯೂ ಕ್ಷುಲ್ಲಕವಾಗಿ ಕಾಣುತ್ತದೆ. ಬ್ರಾಹ್ಮಣತ್ವ-ಶೂದ್ರತ್ವ ಎಂಬ ಕೂದಲು ಸೀಳುವ ರಸಿಕಸಿಗಳಿಲ್ಲದೆ ಸಮಸ್ಯೆಗೆ ಪರಿಹಾರವನ್ನು ಸುಲಭವಾಗಿ ಕೊಟ್ಟು ಬಿಡುತ್ತಾರೆ. ಬದುಕನ್ನು ನಾವು ಕ್ಲಿಷ್ಟವಾಗಿ ನೋಡಿದರೆ ಅದು ಕ್ಷಿಷ್ಟವಾಗಿ ನಮ್ಮನ್ನು ಕಂಗಾಲುಗೊಳಿಸುತ್ತದೆ, ಸರಳವಾಗಿ ನೋಡಿದರೆ ಅದು ಸರಳವಾಗಿ ತಲೆಬಾಗುತ್ತದೆ. ಕತೆಗಾರನ ವ್ಯಕ್ತಿತ್ವ ಯಾವ ಕಡೆ ವಾಲುತ್ತದೋ, ಕತೆಗೆ ಆ ಆಯಾಮ ದಕ್ಕುತ್ತದೆ, ಅಷ್ಟೇ!

'ಎಮ್ಮೇ ಕಳುವು' ಮತ್ತೊಂದು ವಿಭಿನ್ನ ಕತೆ. ತಾಯಿಯನ್ನು ಕಳೆದುಕೊಂಡ, ಅನಾರೋಗ್ಯ ತಂದೆಯನ್ನು ಸಾಕುವ ಜವಾಬ್ದಾರಿಯನ್ನು ಹೊತ್ತ, ಎಮ್ಮೆ ಸಾಕಾಣಿಕೆಯಿಂದ ಜೀವನ ಹೊರೆಯುವ ಹುಡುಗಿಯೊಬ್ಬಳ ಕತೆಯಿದು. ಅವಳಿಗೆ ಅಣ್ಣನೊಬ್ಬ ಇರುತ್ತಾನಾದರೂ, ಕೆಟ್ಟ ಚಟಗಳಿಗೆ ಬಿದ್ದ ಆ ಹುಡುಗ ಮನೆಗೆ ಯಾವ ಸಹಾಯಕ್ಕೂ ನಿಲ್ಲುವದಿಲ್ಲ. ಈ ಹುಡುಗಿ ಅಕಸ್ಮಾತ್ತಾಗಿ ಮದುವೆಯಾದ ಗೃಹಸ್ಥನೊಬ್ಬನ ಸಹವಾಸ ಮಾಡುತ್ತಾಳೆ. ಅವರಿಬ್ಬರ ಮಧ್ಯ ದೇಹ ಸಂಬಂಧವೂ ಬೆಳೆಯುತ್ತದೆ. ಈಗಾಗಲೇ ಕುಡಿತ-ವೇಶ್ಯೆಯರ ಚಟಕ್ಕೆ ಬಿದ್ದ ಅಣ್ಣನಿಗೆ ಈ ಸಂಗತಿ ಗೊತ್ತಾದದ್ದೇ ಅವಳ ಮೇಲೆ ಕೆಂಡ ಕಾರಲಾರಂಭಿಸುತ್ತಾನೆ. ಅವನ ಚೆಲ್ಲಾಟಗಳಿಗೆ ಬೇಕಾದ ಹಣವನ್ನು ಕೊಡಲು ಹುಡುಗಿ ನಿರಾಕರಿಸಿದ್ದೇ ಮನೆಯನ್ನು ಪಾಲು ಮಾಡಿಸಿಕೊಂಡು ಬಿಡುತ್ತಾನೆ. ಅಲ್ಲಿಗೂ ಅವನು ಸುಮ್ಮನಾಗದೆ ಹುಡುಗಿ ಸಾಕುತ್ತಿರುವ ಎಮ್ಮೆಗಳನ್ನು ಕದ್ದು ಮಾರಾಟ ಮಾಡಲು ಶುರುವಿಡುತ್ತಾನೆ. ಈ ಅನ್ಯಾಯವನ್ನು ಸಹಿಸದ ಹುಡುಗಿ ನಿರೂಪಕನಿಗೆ ನ್ಯಾಯ ಒದಗಿಸಿಕೊಡಲು ಮೊರೆ ಹೋಗುತ್ತಾಳೆ. ಒಂದಿಬ್ಬರು ಹಿರಿಯರ ಎದುರು ನ್ಯಾಯ ನಿರ್ಣಯವಾಗುವಾಗ ಹುಡುಗಿ ಅಣ್ಣನ ಬಗ್ಗೆ ದೂರು ಹೇಳಲು ಶುರು ಮಾಡಿದ್ದೇ, ಈ ಅಣ್ಣ ಅವಳ ಅಕ್ರಮ ಸಂಬಂಧವನ್ನು ಬಯಲಿಗೆಳೆದು ಅವಳ ಬಾಯಿ ಮುಚ್ಚಿಸಲು ನೋಡುತ್ತಾನೆ. ಅಲ್ಲಿಯವರೆಗೆ ಸಹಿಸಿಕೊಂಡಿದ್ದ ಹುಡುಗಿ ಈಗ ಧೈರ್ಯದಿಂದ ಮಾತನಾಡುತ್ತಾಳೆ. ನೀನು ನನ್ನ ಅಣ್ಣ. ನಮ್ಮಮ್ಮ ನಿನ್ನ ಮೊದಲು ಹೆತ್ತಳು. ಆಮೇಲೆ ನನ್ನ ಹೆತ್ತಳು. ಈ ತಂಗೀ ಹೆಸರು ಕೆಡಿಸೋಕೆ ಒಬ್ಬ ಅಣ್ಣ ಇರಲಿ ಅಂತ ನಿನ್ನ ಹೆತ್ತಳಾ? ನಿನಗೆ ಪ್ರಾಯ ಬಂತು. ನೀನು ಗಂಡು. ಹೆಣ್ಣು ಹುಡುಕ್ಕೊಂಡು ಹೋದಿ. ನನಗೂ ಪ್ರಾಯ ಬಂತು. ನಾನು ಹೆಣ್ಣು. ಬೀದೀಲಿ ಹೋಗೋ ಹಂಗಿಲ್ಲ. ಇರೋ ಕಡೆ ಇರಬೇಕು. ಒಬ್ಬರು ಬಂದು ಅಕ್ಕರೆ ಮಾತಾಡಿದರು. ಬಾಳುವ ಅಂದರು. ಮದುವೆ ಆಗೋಣ ಅಂದೆ. ಆಗೋಣ, ಸದ್ಯಕ್ಕೆ ಜೊತೀಗೆ ಇರು ಅಂದರು. ಇದ್ದೆ, ಬಹಳ ದೊಡ್ಡ ತಪ್ಪಾಯಿತಾ? ಗಂಡು ಮಾತ್ರ ಬೇಕಾದ ಆಟ ಆಡಬಹುದು. ಹೆಣ್ಣು ಮದುವೆ ಆಗುತೀನಿ ಅಂದವನೊಡನೆ ಸದರವಾಗಿರಬಾರದಾ? ಇದ್ದೆ, ಏನಾಯಿತು? ಎಂದು ಗುಡುಗುತ್ತಾಳೆ.

ಕಥಾವಸ್ತುವಿನ ಸೂಕ್ಷ್ಮತೆಯನ್ನು ನೋಡಿ. ಮದುವೆಗೆ ಮುಂಚೆ ದೇಹ ಸಂಬಂಧ ಬೆಳೆಸಿದ ಹುಡುಗಿ, ಅದೂ ಈಗಾಗಲೇ ಮದುವೆಯಾದವನೊಂದಿಗೆ! ಆದರೆ ಮಾಸ್ತಿ ಈ ಹುಡುಗಿಯ ಪರಿಸ್ಥಿತಿಯ ಬಗ್ಗೆ ಕನಿಕರ ವ್ಯಕ್ತಿ ಪಡಿಸುತ್ತಾರೆಯೇ ಹೊರತು ಎಲ್ಲೂ ಅವಳನ್ನು ಪಾಪದ ಕಟಕಟೆಯಲ್ಲಿ ನಿಲ್ಲಿಸುವದಿಲ್ಲ. ಕತೆಯಲ್ಲಿ ಕೊನೆಗೆ ಆ ಹುಡುಗಿಗೆ ನ್ಯಾಯ ಒದಗಿಸಿ ಕೊಡುತ್ತಾರೆ. ಮದುವೆಗೆ ಮುಂಚಿನ ದೇಹ ಸಂಬಂಧದಂತಹ (ಪ್ರಿ ಮೆರಿಟಿಯಲ್ ಸೆಕ್ಸ್) ಮೈಲಿಗೆಯ ಮಾತನಾಡುವಾಗಲೂ ಮಾಸ್ತಿ ಮಾನವೀಯತೆಯನ್ನು ಮರೆಯುವದಿಲ್ಲ. ಪಾತ್ರಗಳ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಅಂತಹ ಸಂಬಂಧಗಳ ಅಸಹಾಯಕತೆಯನ್ನು ವಿಶಾಲ ದೃಷ್ಟಿಕೋನದಿಂದ ಕ್ಷಮಿಸುತ್ತಾರೆ.

'ಪಕ್ಷಿಜಾತಿ'ಯಂತೂ ಬೆಚ್ಚಿ ಬೀಳಿಸುವಂತಹ ವಸ್ತುವನ್ನು ಹೊಂದಿರುವ ಕತೆ. ಆದರೆ ಓದುಗರನ್ನು ಬೆಚ್ಚಿ ಬೀಳಿಸುವ ಯಾವ ದುರುದ್ದೇಶವೂ ಇಲ್ಲದ ಮಾಸ್ತಿ, ತಮ್ಮ ಇತರ ಕತೆಗಳಂತೆಯೇ ಸರಳವಾಗಿ ಇದನ್ನೂ ನಿರೂಪಿಸುತ್ತಾರೆ. ಕತೆಯ ನಾಯಕ ಮಂಚ ನಂಜನಗೂಡಿನ ಕಡೆಯ ಹಳ್ಳಿಯೊಂದರಿಂದ ಓಡಿ ಬಂದು ಬೆಂಗಳೂರಿನಲ್ಲಿ ಸೌದೆ ಒಡೆಯುವ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ಅವನ ಹೆಂಡತಿ ಮತ್ತು ಆ ಹುಡುಗಿಯ ಅಣ್ಣ ಅವನನ್ನು ಹುಡುಕಿಕೊಂಡು ಬರುತ್ತಾರೆ. ಸೌದೆ ಅಂಗಡಿಯ ಒಡೆಯನ ಮುಂದೆ ನಾಯಕನ ಸಮಸ್ಯೆಯನ್ನು ಹೇಳುತ್ತಾರೆ. ಅವನ ಹೆಂಡತಿ ಮತ್ತು ಅವಳಣ್ಣ ಚಿಕ್ಕಂದಿನಲ್ಲಿ ಗಂಡು-ಹೆಣ್ಣಿನಂತೆ ಕೂಡಿರುತ್ತಾರೆ. ಅನಂತರ ಅದು ತಪ್ಪೆಂದು ತಿಳಿದು ಬಿಟ್ಟಿರುತ್ತಾರೆ. ಮಂಚನೊಂದಿಗೆ ತಂಗಿಯ ಮದುವೆಯಾಗುತ್ತದೆ. ಆದರೆ ಮಂಚ ಪೀಚಲು ದೇಹದವನು. ತಂಗಿಗೆ ಸರಿಯಾದ ಜೋಡಿಯಲ್ಲದೆ ಅವಳು ಸ್ವಲ್ಪ ಮಟ್ಟಿಗೆ ಹತಾಶಳಾಗಿರುತ್ತಾಳೆ. (ಈ ಗಂಡಿನೊಂದಿಗೆ ಬಾಳೋದು ಅಯ್ಯನವರ ಮನೆಯ ಊಟದಂತಾಯ್ತು ಎನ್ನುತ್ತಾಳೆ!) ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಅಣ್ಣನನ್ನು ಬಯಸಿದ ಈ ಹುಡುಗಿ ಒಂದು ರಾತ್ರಿ ಹೊಲದಲ್ಲಿ ಅಣ್ಣನನ್ನು ಕೂಡಿ ಬಿಡುತ್ತಾಳೆ. ಆಗ ಯಾರೋ ಇದನ್ನು ನೋಡಿದ್ದೇ ಊರಲ್ಲಿ ಸುದ್ದಿ ಮಾಡುತ್ತಾರೆ. ಮಂಚ ಅವಮಾನದಿಂದ ಬೆಂಗಳೂರಿಗೆ ಓಡಿ ಬರುತ್ತಾನೆ.

ಸೌದೆ ಅಂಗಡಿಯ ಯಜಮಾನನಿಗೆ ಇದು ಒಂದು ಕ್ಲಿಷ್ಟ ಸಮಸ್ಯೆ. ಅಣ್ಣ-ತಂಗಿಯರಿಬ್ಬರಿಗೂ ತಾವು ಮಾಡಿದ್ದು ತಪ್ಪು ಎಂದು ಗೊತ್ತಿದೆ. ಆದರೆ ಆ ಒಂದು ಚಿಕ್ಕ ತಪ್ಪಿಗೆ ಮಂಚ ಹೀಗೆ ಹೆಂಡತಿಯನ್ನು ಬಿಟ್ಟು ಬರಬಹುದೆ? ಎಂಬುದು ಅವರ ವಾದ. ಬೆಳವನ ಹಕ್ಕಿಗಳಲ್ಲಿ ಒಂದೇ ತಾಯಿಗೆ ಹುಟ್ಟಿದ ಹಕ್ಕಿಗಳು ಹೀಗೆ ಬಾಳುತ್ತವೆಂದು ಕೇಳಿದ್ದೇನೆ ಸ್ವಾಮಿ. ಇದೂ ಅಂತಹದೇ ಪಕ್ಷಿಜಾತಿಯ ಸ್ವಭಾವ. ಮತ್ತೆ ಅಂತಹ ತಪ್ಪು ಮಾಡುವದಿಲ್ಲ ಅಂತ ಅಣ್ಣ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಯಜಮಾನ ಎಲ್ಲರ ಜೊತೆಯಲ್ಲೂ ಮಾತನಾಡಿ, ಅಣ್ಣ-ತಂಗಿಯರು ಮತ್ತೊಮ್ಮೆ ಅಂತಹ ತಪ್ಪು ಮಾಡುವದಿಲ್ಲವೆಂದು ಮಾತು ತೆಗೆದುಕೊಂಡು, ಮಂಚನನ್ನು ಹೆಂಡತಿಯೊಡನೆ ಬಾಳಬೇಕೆಂದು ಒಪ್ಪಿಸಿ ಅವರೂರಿಗೆ ವಾಪಾಸು ಕಳುಹಿಸಿಕೊಡುತ್ತಾರೆ. ಆದರೆ ಮೊದಲ ಎರಡು ಕತೆಗಳಂತೆ ಈ ಕತೆಯಲ್ಲಿ ಎಲ್ಲೂ ಮಾಸ್ತಿ ಈ ಗಂಡು-ಹೆಣ್ಣಿನ ಸಂಬಂಧವನ್ನು ಒಪ್ಪಿಕೊಳ್ಳುವದಿಲ್ಲ. ಅದು ಸ್ಪಷ್ಟವಾಗಿ ವಿಕೃತಿಯೆಂದು ನಿಲುವು ತಾಳುತ್ತಾರೆ.

ಈ ಮೂರೂ ಕತೆಗಳು ಮಾಸ್ತಿಯ ವೈವಿಧ್ಯತೆಗೆ, ಬದುಕಿನ ವಿಶಾಲ ದೃಷ್ಟಿಕೋನಕ್ಕೆ, ತಪ್ಪನ್ನು ಕ್ಷಮಿಸುವ ಸಹೃದಯತೆಗೆ ಸರಳ ಉದಾಹರಣೆಗಳಷ್ಟೇ. ಹೆಂಡತಿ ರುಚಿಯಾಗಿ ಬೆಂಡೆಕಾಯಿ ಹುಳಿ ಮಾಡಿಲ್ಲವೆಂದು ಸನ್ಯಾಸ ಸ್ವೀಕರಿಸಿ ನಾಲ್ಕು ವರ್ಷದ ನಂತರ ಇನ್ನೊಮ್ಮೆ ಬೆಂಡೆಕಾಯಿ ಹುಳಿಯನ್ನು ತಿಂದಿದ್ದೇ ಮತ್ತೆ ಗೃಹಸ್ಥಾಶ್ರಮಕ್ಕೆ ಬರುವ ವ್ಯಕ್ತಿಯ ಹಾಸ್ಯಮಯ ಕತೆ, ಹಳ್ಳಿಯ ಹುಡುಗಿಯೊಬ್ಬಳನ್ನು ಮದುವೆ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಅವಳನ್ನು ವೇಶ್ಯೆಯಾಗಿಸಿ ಹಣ ಸಂಪಾದಿಸುವ ಷಂಡನ ಕೊಲೆಯ ರೋಚಕ ಕತೆ, ಕೋಲಾಟದ ಹಾಡಿನೊಳಗೆ ಅಡಕವಾಗಿರುವ ಒಡಪನ್ನು ಒಡೆದು ರಂಗನ ಗುಡಿಯ ಹಿತ್ತಲಿನಲ್ಲಿ ಅಡಗಿರುವ ರಾಮನ ವಿಗ್ರಹವನ್ನು ಪತ್ತೆ ಮಾಡುವ ಚಾರಿತ್ರಿಕ ಥ್ರಿಲ್ಲರ್ ಕತೆ, ತನ್ನ ಸಂಸಾರ ಹಾಳಾಗುತ್ತದೆಂದು ತಿಳಿದಿದ್ದರೂ ಪರಪುರುಷನ ಆಕರ್ಷಣೆಗೆ ಸೋತು ವೇಶ್ಯೆಯಾಗಿ ದುಃಖಿಸುವ ಹೆಣ್ಣಿನ ಕರುಣಾಜನಕ ಕತೆ, ಶ್ರೀಕೃಷ್ಣನ ಅಂತಿಮ ದಿನಗಳ ಕಳವಳದ ಪೌರಾಣಿಕ ಕತೆ, ಭಾರತಕ್ಕೆ ಬಂದು ಇಲ್ಲಿ ಹೊಂದಿಕೊಳ್ಳಲಾಗದೆ ವಾಪಾಸಾಗುವ ಬೇಬಿಲಾನ್ ರಾಜಕುಮಾರಿಯ ಕತೆ, ಕನ್ನಡಿಯೊಂದರಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕಾಣುವ ಮಾಯಾ ವಾಸ್ತವದ ಕತೆ - ಒಂದೇ ಎರಡೇ! ಮಾಸ್ತಿಯ ಕಥಾಪ್ರಪಂಚಕ್ಕೆ ಇತಿಮಿತಿಯಿಲ್ಲ. ಕಂಡ-ಕೇಳಿದ-ಓದಿದ-ಊಹಿಸಿದ ಎಲ್ಲಾ ಸಂಗತಿಗಳನ್ನೂ ಸಹಜವಾಗಿ ಮತ್ತು ಸರಳವಾಗಿ ಮಾಸ್ತಿ ಕತೆ ಕಟ್ಟಿಕೊಡುತ್ತಾರೆ. ಈ ಸಹಜತೆ ಮತ್ತು ಸರಳತೆಗಳೇ ಅವರಿಂದ ಇಷ್ಟೊಂದು ಕತೆಗಳನ್ನು ಬರೆಸಲು ಸಾಧ್ಯವಾಗಿಸಿದೆ. ಕೆಲಸದಲ್ಲಿ ತುಂಬಾ ಬಿಜಿಯಾಗಿದೀನಿ ಕಣ್ರೀ ಏನೂ ಬರೆಯೋಕೆ ಆಗ್ತಿಲ್ಲ ಅಂತ ಮಾತೆತ್ತಿದರೆ ನೆಪ ಹೇಳಿಕೊಂಡು ತಿರುಗಾಡುವ ಕತೆಗಾರರೆಲ್ಲರೂ ಮಾಸ್ತಿಯನ್ನೊಮ್ಮೆ ಓದಬೇಕು. ಅತ್ಯಂತ ದೊಡ್ಡ ಹುದ್ದೆಯಲ್ಲಿದ್ದರೂ ಪುಂಖಾನುಪುಂಖವಾಗಿ ಕತೆಗಳನ್ನು ಕನ್ನಡಕ್ಕೆ ಕಟ್ಟಿಕೊಟ್ಟ ಮಾಸ್ತಿ ಎಂದೂ ಅಂತಹ ನೆಪ ಹೇಳಿರಲಿಕ್ಕಿಲ್ಲ.

ಎಂಥಹ ಪಾತ್ರವನ್ನಾಗಲಿ, ಎಂಥಹ ಪರಿಸರವನ್ನಾಗಲಿ ಕಥೆಯಲ್ಲಿ ಹಿಡಿದಿಡುವ ತಂತ್ರವನ್ನು ಮಾಸ್ತಿ ಸೊಗಸಾಗಿ ರೂಢಿಸಿಕೊಂಡಿದ್ದರು. ಸಾಮಾನ್ಯ ಗೃಹಸ್ಥನಿಂದ ಹಿಡಿದು, ಮುನಿ, ಷಂಡ, ಕೊಲೆಗಾರ, ವೇಶ್ಯೆ, ಕಳ್ಳ, ಜೋಗಿ, ಸಾಬಿ, ಇಂಗ್ಲೀಷ್ ಪ್ರಜೆ, ಬ್ಯಾಬಿಲೋನಿನ ರಾಜಕುಮಾರಿ, ಶ್ರೀಕೃಷ್ಣ, ಹೊಯ್ಸಳ ರಾಜಕುಮಾರ - ಯಾರೇ ಆಗಲಿ, ಯಾವ ದೇಶದವರೇ ಆಗಲಿ, ಯಾವ ಕಾಲದವರೇ ಆಗಲಿ, ಮಾಸ್ತಿ ಅವರನ್ನು ಚಿತ್ರಿಸಲು ಅಂಜುವದಿಲ್ಲ. ಮಾನವರೆಲ್ಲರೂ ಒಂದೇ ಎಂಬ ಗಟ್ಟಿ ನಂಬಿಕೆಯಿರದಿದ್ದರೆ ಇಂತಹ ಶಕ್ತಿ ಕಥೆಗಾರನಿಗೆ ದಕ್ಕುವದಿಲ್ಲ. ಅತಿವಾಸ್ತವದ ವಿವರಗಳಿಗಾಗಿ ಒದ್ದಾಡದೆ, ಶ್ರೇಷ್ಠತೆಯ ವ್ಯಸನವಿಲ್ಲದೆ, ಆಡು ನುಡಿಯ ಬಳಕೆಯಿಲ್ಲದೆ, ತಮ್ಮ ಸ್ವಂತ ಅನುಭವಕ್ಕಷ್ಟೇ ಜೋತು ಬೀಳದೆ, ಸರಳವಾಗಿ ಗ್ರಾಂಥಿಕ ಭಾಷೆಯಲ್ಲಿ ಎಲ್ಲವನ್ನೂ ಹಿಡಿದಿಡುವ ಅವರ ಕಥಾತಂತ್ರಕ್ಕೆ ಆರೋಗ್ಯವೂ ಹೆಚ್ಚು, ಆಯುಷ್ಯವೂ ಹೆಚ್ಚು ಮತ್ತು ಓದುಗರೂ ಹೆಚ್ಚು.

ಮಾಸ್ತಿ ಕನ್ನಡದ ಆಸ್ತಿಯೆಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಆದರೆ ಅದಕ್ಕೂ ಮುಖ್ಯ ಸಂಗತಿಯೆಂದರೆ ಮಾಸ್ತಿ ಕನ್ನಡ ಕಥಾಲೋಕದ ಅಸ್ತಿಭಾರ (ತಳಹದಿ).