೭೭ನೇ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ
7:33 AM
Posted by ಆಲೆಮನೆ















ಕಸಾಪ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ - ವಿಶೇಷ ಸಂದರ್ಶನ.
7:08 AM
Posted by ಆಲೆಮನೆ

ನುಡಿ-ನಮನ, ಆಲೆಮನೆ ಬಳಗಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ ಅವರು ಕೊಟ್ಟ ವಿಶೇಷ ಸಂದರ್ಶನ.
ಸಂದರ್ಶಿಸಿದವರು -ಡಾ.ಹೆಚ್.ವಿ.ವೇಣುಗೋಪಾಲ್
1. ನಲ್ಲೂರು ಪ್ರಸಾದ್ ಅವರೆ, ಇದು ನಿಮ್ಮ ನಾಯಕತ್ವದಲ್ಲಿ ಎರಡನೆಯ ಸಮ್ಮೇಳನ, ಕಳೆದ ಬಾರಿ ಚಿತ್ರದುರ್ಗದಲ್ಲಿ ಸಮ್ಮೇಳನವನ್ನು ಆಯೋಜಿಸಿದ್ದೀರಿ. ಸಾಹಿತ್ಯ ಪರಿಷತ್ತಿನ ಇದುವರೆವಿಗಿನ ಸಮ್ಮೇಳನಕ್ಕಿಂತ ಈ ಸಮ್ಮೇಳನ ಹೇಗೆ ಭಿನ್ನ?
- ಇದುವರೆಗೆ 75 ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸಿಕೊಂಡು ಬಂದಿದೆ. ಈ ಎಲ್ಲ 75 ಸಮ್ಮೇಳದಲ್ಲಿಯೂ ಕೂಡ ವೈಶಿಷ್ಟ್ಯತೆ ಅಂದರೆ ನಾಡಿನ ಮತ್ತು ನುಡಿಯ ಬಗೆಗೆ ಹಲವಾರು ಸಮಸ್ಯೆಗಳನ್ನು ಕುರಿತು ಆಯಾಕಾಲದ ವೇದಿಕೆ ಚರ್ಚಿಸಿದೆ. ಕನ್ನಡ ನಾಡಿನ ಒಂದು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತಹ ರೀತಿಯಲ್ಲಿ ಈ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ನಾಡಿನಾದ್ಯಂತ ಇರುವಂತಹ ವಿದ್ವಾಂಸರನ್ನು ಕರೆಸಿ, ಅವರ ವಿಚಾರವನ್ನು ಇಲ್ಲಿ ಮಂಡಿಸುವಂತಹ ಕೆಲಸವನ್ನು ಈ ಪರಿಷತ್ತು ಮಾಡುತ್ತಿದೆ. ಕಾಲದಿಂದ ಕಾಲಕ್ಕೆ ಸಮ್ಮೇಳನದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಆಗಿದೆ. ಮೊದಲು ಸಮ್ಮೇಳನ ಅಂದರೆ ಹೆಚ್ಚು ಜನಾಕರ್ಷಣೆ ಇಲ್ಲದಿದ್ದಂತಹ ಕಾಲ ಇತ್ತು. ಆಗ ಸುಮಾರು ಸಾವಿರದ ಲೆಕ್ಕದಲ್ಲಿ ಜನ ಬರುತ್ತಿದ್ದರು. ಈಗ ಅದರ ಪ್ರಮಾಣ ಸಾಕಷ್ಟು ದೊಡ್ಡದಾಗಿದೆ. ಲಕ್ಷಗಟ್ಟಲೆ ಆಗಿದೆ. ಕಳೆದ ಬಾರಿ ನಮಗೆ 3.5ರಿಂದ 4 ಲಕ್ಷ ಜನ ಬಂದಿದ್ದರು ಎಂದು ಒಂದು ಅಂದಾಜು ಸಿಕ್ಕಿದೆ. ಇಲ್ಲಿಗೆ ಬರುವ ಜನರ ಆಸಕ್ತಿಯೂ ಕೂಡ ವಿಭಿನ್ನವಾಗಿರುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಸಾಹಿತ್ಯದ ಸಂಗತಿಗಳನ್ನು ಕುರಿತು ಚರ್ಚಿಸುವುದು ಅಷ್ಟೇ ಅಲ್ಲ, ಬದಲಾಗಿ ಒಟ್ಟು ಕನ್ನಡಿಗರ ಹಿತಚಿಂತನೆಗಳನ್ನು ಕುರಿತು ಚರ್ಚಿಸುವ ಒಂದು ವೇದಿಕೆ ಎಂಬ ನೆಲೆಯ ಮೇಲೆ ಈಗ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವಲ್ಲಿಗೆ ನಾವು ತಲುಪಿದ್ದೇವೆ.
ಕಳೆದವರ್ಷ ನಾನು ಅಧಿಕಾರ ಸ್ವೀಕಾರ ಮಾಡಿದ ಹೊಸ್ತಿಲಲ್ಲೇ ಚಿತ್ರದುರ್ಗದಲ್ಲಿ 75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಾಡಬೇಕಾದ ಒಂದು ಅನಿವಾರ್ಯ ಸ್ಥಿತಿ ಬಂತು. ಕಳೆದ ಬಾರಿಯೂ ಅದೇ ರಿತಿಯ ಒಂದು ಬದಲಾವಣೆಗಳನ್ನು ನಾನು ಮಾಡಿಕೊಂಡಿದ್ದೆ. ಈ ಬಾರಿ ಕೂಡ ಅದೇ ರೀತಿಯಾದಂತಹ, ಒಂದಷ್ಟು ಹೆಚ್ಚು ಜನರನ್ನು ತಲುಪುವ ನೆಲೆಯೊಳಗೆ ಕೆಲವು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಎಲ್ಲಾ ಜನರಿಗೂ ಬೇಕಾಗಿರುವಂತಹ ನುಡಿ, ಭಾಷೆ, ಚಿಂತನೆಗಳಿಗೆ ಸಂಬಂಧಿಸಿದಂತಹ ಸಾಹಿತ್ಯದ ಸ್ವರೂಪ, ಅದರ ಬದಲಾವಣೆ, ಬೆಳವಣಿಗೆಗಳನ್ನು ಕುರಿತಾದಂತಹ ವಿಚಾರಗಳು ಆಗಿದೆ. ಅದರ ಜೊತೆಗೆ ನಾಡಿನ ಜನರ ಸಮಸ್ಯೆಗಳಾದಂತಹ ಹಲವು ಸಂಗತಿಗಳನ್ನು ಅಲ್ಲಿ ಪ್ರಸ್ತಾಪ ಮಾಡಿದ್ದೇವೆ. ಅದರಲ್ಲಿ ಮುಖ್ಯವಾದಂತಹದ್ದು ಅಂತ ನಾನು ಭಾವಿಸಿಕೊಂಡಂತದ್ದು, ಬೇಸಾಯ ಮತ್ತು ಬದುಕು. ಪ್ರಸ್ತುತ ಸಂದರ್ಭದಲ್ಲಿ ರೈತನ ಬದುಕು ಒಂದು ಶೋಚನೀಯ ಸ್ಥಿತಿಯನ್ನು ತಲುಪಿದೆ ಆ ಎಲ್ಲಾ ಸಮಸ್ಯೆಗಳಿಗೆ, ಪರಿಷತ್ತು ಬಾಯಾಗಬೇಕಿದೆ. ಮೌನವಾಗಿ ಕುಳಿತುಕೊಳ್ಳುವಂತಹದ್ದು ನಾವು ಮಾಡುವಂತಹ ಅಪರಾಧ. ಯಾಕೆಂದರೆ, 'ಅನ್ನ ದೇವರುಗಳಿಗಿಂತ ಇನ್ನು ದೇವರುಗಳಿಲ್ಲ' ಅನ್ನೋ ಮಾತಾಗಲೀ 'ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು' ಅನ್ನೋ ಮಾತಾಗಲಿ ಈಗ ಹೆಚ್ಚು ಅರ್ಥಪೂರ್ಣವಾಗಿದೆ.
2. ಸಾರ್, ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ತಿರುವು ಪಡೆದುಕೊಂಡಿರುವ ಇಂತಹ ಸಾಹಿತ್ಯಿಕ ಜಾತ್ರೆಗಳು ಕಾಲ ಕಳೆದಂತೆ ವಿದ್ವಾಂಸರನ್ನು ಆಕರ್ಷಿಸುವುದರಲ್ಲಿ ಕಡಿಮೆಯಾಗಿ ರಾಜಕಾರಣಗಳನ್ನು ಅಪ್ಪಿಕೊಳುತ್ತಿದೆ ಎಂಬ ಪುಕಾರು ಕಾಲದಿಂದ ಇರುವುದರ ಬಗ್ಗೆ ತಾವು ಏನೆನ್ನುತ್ತೀರಿ. ಮತ್ತು ಈ ಪುಕಾರಿಗೆ ಈ ವರ್ಷದ ಸಮ್ಮೇಳನ ಹೇಗೆ ಉತ್ತರಿಸುತ್ತದೆ?
- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಬರುವ ಮುನ್ನ, ಹಾಗು ಬಂದ ನಂತರದಲ್ಲಿ ಒಳಗೆ ಕುಳಿತು ವಿವರಗಳನ್ನು ತಿಳಿದು ನಾನು ಕೆಲವು ನಿಲುವನ್ನು ತಾಳಿದ್ದೇನೆ. ಪರಿಷತ್ತಿನ ಹಾಗು ನಾಡು-ನುಡಿಯ ಬೆಳವಣಿಗೆಯ ದೃಷ್ಟಿಯಿಂದ ಯಾವುದನ್ನೂ ನಾನು ನಿರಾಕರಿಸಿರಲಿಲ್ಲ. ರಾಜಕಾರಣವನ್ನೂ, ಧರ್ಮವನ್ನೂ, ಎಲ್ಲವನ್ನೂ ನಿರಾಕರಿಸಿದ್ದಲ್ಲ. ಆದರೆ ಸಕಾರಾತ್ಮಕವಾಗಿ ಬಂದರೆ ಮಾತ್ರ ಧರ್ಮ, ರಾಜಕೀಯ ಇತ್ಯಾದಿ ಯಾವುದೇ ವಿಚಾರವನ್ನು ಸ್ವೀಕರಿಸುತ್ತೇನೆ, ನಕಾರಾತ್ಮಕವಾದ ರೀತಿಯಲ್ಲಿ ಬಂದರೆ ನಾನು ಸ್ವೀಕರಿಸುವುದಿಲ್ಲ, ಬದಲಾಗಿ ಅದರಿಂದ ದೂರ ಇರುತ್ತೇನೆ. ಆದ್ದರಿಂದ ನಾನು ಬಹಳ ಬಾರಿ ಹೇಳಿದ್ದೇನೆ, ಗಾಂಧೀಗಿಂತ ದೊಡ್ಡ ರಾಜಕಾರಣಿ, ಗುರು ಯಾರು? ಅವರಿಗಿಂತ ಜನಪರವಾಗಿ ಸಮಾಜಕ್ಕೆಂದು ಚಿಂತೆ ಮಾಡಿದ ದೊಡ್ದವರಾರು? ಹಾಗಾಗಿ ನಾವು ಆ ನಿಟ್ಟಿನಲ್ಲಿ ಎಲ್ಲವನ್ನೂ ಕನ್ನಡ ಸಾಹಿತ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. ರಾಜಕಾರಣವನ್ನು ನಾನು ಹೇಗೆ ಬಳಕೆ ಮಾಡಿಕೊಳ್ಳುತ್ತೇನೆ ಅಂದರೆ, ಒಂದು ಇನ್ಫ್ರಾಸ್ಟ್ರಕ್ಚರ್ಗೆ-ಸಂಪನ್ಮೂಲ ಕ್ರೋಢೀಕರಣಕ್ಕೆ. ಸಮ್ಮೇಳನದಂತಹ ಬೃಹತ್ ವ್ಯವಸ್ಥೆಯನ್ನು ಮಾಡೊ ಸಂದರ್ಭದಲ್ಲಿ ಅದರ ಅಗತ್ಯವೂ ಇದೆ ನಮಗೆ. ಅದು ಬಿಟ್ಟರೆ ನಾನು ಗೋಷ್ಠಿಯಲ್ಲಿ ಬೇರೊಂದು ಕಡೆ ಎಲ್ಲಿಯೂ ಕೂಡ ಅವರನ್ನು ಬಳಕೆ ಮಾಡಿಕೊಂಡಿಲ್ಲ ಅನ್ನೋದನ್ನು ತಾವು ಗಮನಿಸಬಹುದು.
3. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ- ಇಂದಿನ ಪರಿಸ್ಥಿತಿ ಏನು, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಸಂಬಂಧಪಟ್ಟಂತೆ ಬಂದ ಸಂಗತಿಯ ಸಂದರ್ಭದೊಳಗಡೆ ನಾನು ಹೇಳಿದಂತಹ ಸಂಗತಿಯೊಳಗಡೆ, ಇಲ್ಲಿ ಹತ್ತಾರು ಪಕ್ಷಗಳು ಇರಬಹುದು, ನೂರಾರು ರಾಜಕಾರಣಿಗಳಿರಬಹುದು, ಆದರೆ ನೀವು ರಾಜಕಾರಣವನ್ನು ಮರೆತು, ಪಕ್ಷವನ್ನು ಮರೆತು ಇಲ್ಲಿ ಕನ್ನಡದ ವಿಚಾರಕ್ಕಷ್ಟೇ ನೀವು ತೊಡಗಿಸಿಕೊಳ್ಳತಕ್ಕಂತಹ ಅನಿವಾರ್ಯತೆಯನ್ನು ಗಮನಿಸಿ ಈ ಮಾತನ್ನು ಹೇಳಿದ್ದೇನೆ. ಶಾಸ್ತ್ರೀಯ ಭಾಷೆ ಬರುವುದಕ್ಕಿಂತ ಮುಂಚೆ ನಡೆದ ಒಂದು ಹೋರಾಟದ ಸಂದರ್ಭದೊಳಗೆ ಇದನ್ನು ಪ್ರಸ್ತಾಪ ಮಾಡಿದ್ದೆ. ಎಲ್ಲಾ ಪಕ್ಷದವರಿಗೂ ಈ ಮಾತನ್ನು ಹೇಳಿದ್ದೆ. ಇವತ್ತೂ ಕೂಡ ನಾನು ಆ ಮಾತನ್ನು ಹೇಳುತ್ತಿದ್ದೀನಿ. ಇತ್ತೀಚೆಗೆ ನಡೆದ ಮಡಿಕೇರಿ ಸಾಹಿತ್ಯ ಸಮ್ಮೇಳನದೊಳಗೆ ಕೂಡ ಈ ಮಾತನ್ನು ಹೇಳಿದೆ. ಅನ್ಯ ರಾಜ್ಯದವರು ರಾಜಕಾರಣ ಮಾಡುವ ಸಂದರ್ಭದಲ್ಲಷ್ಟೇ ಪಕ್ಷದ ಬಗ್ಗೆ ಮಾತನಾಡುತ್ತಾರೆ.
4. ಈಗ ಕನ್ನಡ ಹಾಗು ಶಾಸ್ತ್ರೀಯ ಸ್ಥಾನಮಾನ ವಿಷಯದ ಚರ್ಚೆ ನಾವು ಮಾಡುತ್ತಿರುವುದರಿಂದ ಇನ್ನೊಂದು ಬಹಳ ಮುಖ್ಯವಾಗಿ ಚರ್ಚಿಸಬೇಕು ಅಂತ ಅನ್ನಿಸುತ್ತದೆ. ಕಳೆದ 2-3 ವರ್ಷಗಳಲ್ಲಿ ಬಹಳ ಚರ್ಚಿತವಾದಂತಹ ಸಂಗತಿ ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಭಾಷಾ ಕಲಿಕೆ. ಈ ಸಮ್ಮೇಳನದ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯವೇನು?
ಒಂದು ನಿಲುವನ್ನು ನಾವು ಗಟ್ಟಿಯಾಗಿ ತಿಳಿದುಕೊಳ್ಳಬೇಕು. ಭಾಷಾ ನೀತಿ ಏನಿದೆ, ಅದು ಪ್ರಾಥಮಿಕ ಹಂತದ ಒಳಗಡೆ ದೇಶಭಾಷೆಯಲ್ಲೇ ಕಲಿಸಬೇಕು. ನಾನು ಇಲ್ಲಿ ಮಾತೃಭಾಷೆಯನ್ನು ದೇಶಭಾಷೆಯೆಂದೇ ಕರೆಯುತ್ತೇನೆ. ಯಾಕೆಂದರೆ, ಮಾತೃಭಾಷೆ ಎಂದ ತಕ್ಷಣ ಅದರಲ್ಲಿ ಅಪಾಯ ಏನಿದೆ ಅಂದರೆ, ಒಬ್ಬನಿಗೆ ತನ್ನ ಮಾತೃಭಾಷೆ ತಮಿಳು ಆಗಿದ್ದು - 'ಈಗ ಬೆಂಗಳೂರಿನಲ್ಲಿದ್ದೇನೆ, ಆದರೂ ನಾನು ನನ್ನ ಮಾತೃಭಾಷೆ ತಮಿಳಲ್ಲಿ ಕಲಿಯುತ್ತೀನಿ' ಅನ್ನುವುದು ತಪ್ಪು. ಯಾವ ದೇಶದಲ್ಲಿ ಅಥವಾ ಯಾವ ರಾಜ್ಯದಲ್ಲಿ ನಾವು ವಾಸ ಮಾಡುತ್ತಿದ್ದೇವೆಯೋ ಆ ನೆಲದ ಭಾಷೆ ನಮ್ಮ ಭಾಷೆಯಾಗಬೇಕಾಗಿದೆ . ಈ ಹಿನ್ನೆಲೆಯೊಳಗೆ ನಮಗೆ ಪ್ರಾಥಮಿಕ ಹಂತದೊಳಗಡೆ, ದೇಶಭಾಷೆಯನ್ನು ಕಲಿಸಬೇಕಾದಂತಹ ಅನಿವಾರ್ಯವಾಗಿಬಿಟ್ಟಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನಾನು, ಅನಂತಮೂರ್ತಿಯವರು, ಪಂಡಿತಾರಾಧ್ಯ ಮುಂತಾದವರೆಲ್ಲಾ ಸೇರಿ ಒಂದು ಕೇಸ್ ಹಾಕಿದ್ದೀವಿ. ಇದರಲ್ಲಿ ಪ್ರಾಥಮಿಕ ಹಂತದೊಳಗೆ ಕನ್ನಡಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಅನ್ನೊ ವಿಚಾರವನ್ನೂ ಕೂಡ ಪ್ರಸ್ತಾಪ ಮಾಡಿದ್ದೇವೆ.
5. ಧರ್ಮದ ಬಗ್ಗೆ ಹಾಗು ರಾಜಕಾರಣದ ಬಗ್ಗೆ ಮಾತನಾಡಿದ್ದೀವಿ, ಇಂಥ ಒಂದು ಸಂದರ್ಭಗಳಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಪಾಲ್ಗೊಳ್ಳುವ ಕಾರಣ ಧರ್ಮರಾಜಕಾರಣ ತನ್ನ ಹಿತಾಸಕ್ತಿಯಲ್ಲಿ ಕೆಲಸ ಮಾಡುವುದರ ಬಗ್ಗೆ ಏನು ಹೇಳುತ್ತೀರ?
ಸಾಹಿತ್ಯ ಸಮ್ಮೇಳನದಲ್ಲಿ ಆ ರೀತಿಯಾದಂತವುಗಳಿಗೆ ಅವಕಾಶವಿಲ್ಲ. ಧರ್ಮ ಮತ್ತು ರಾಜಕಾರಣ ಅದು ಸಾಹಿತ್ಯವಾಗಿ ಬಂದರೆ ಮಾತ್ರ ಸ್ವಾಗತ. ಅದು ಬಿಟ್ಟು ಅದು ತನ್ನ ಐಡೆಂಟಿಟಿಯನ್ನು ಉಳಿಸಿಕೊಂಡು ಇಲ್ಲಿಗೆ ಬಂದರೆ ಅದಕ್ಕೆ ಇಲ್ಲಿ ಜಾಗವಿಲ್ಲ. ಇದಕ್ಕೆ ಅದು ತನ್ನನ್ನ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಸ್ಥಿತಿಯೊಳಗೆ ಬಂದರೆ ಮಾತ್ರ ಸ್ವಾಗತ.
6. ಇದು ರೈತಪರ ಸಮ್ಮೇಳನ ಎಂದು ಹೇಳಿದಿರಿ. ಆದರೆ ಮಠಮಾನ್ಯಗಳಿಗೆ ರೈತರ ಹಸಿವಿನ ಬಗೆಗೆ, ಬವಣೆಯ ಬಗೆಗೆ ಮಾತನಾಡುವ ಅಭ್ಯಾಸವಿಲ್ಲ, ಸರ್ಕಾರ ಕೂಡ ಎಷ್ಟೋ ಕಾಲ ರೈತರ ಹಸಿವಿನ ಬಗ್ಗೆ ಮಾತನಾಡುವುದಿಲ್ಲ. ಒಮ್ಮೆ ಹಸಿವನ್ನು ಕುರಿತು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹೇಳಿ ನಂತರ ಕಾರ್ಯಕ್ರಮಗಳಲ್ಲಿ ಅದು ಕಾಣೆಯಾಗುವಂತಹ ಬಹಳ ಉದಾಹರಣೆಗಳು ಇಂದು ಕಾಣುತ್ತಿದೆ. ಹಾಗಾಗಿ ಹೆಚ್ಚಿನ ಮಟ್ಟಿಗೆ ಧರ್ಮ ಹಾಗು ರಾಜಕಾರಣಗಳು ತಮ್ಮನ್ನು ವೈಭವೀಕರಿಸಿಕೊಳ್ಳೋದಿಕ್ಕೆ ಇಂತಹ ಜಾಗಳನ್ನೂ ಆಕ್ರಮಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯದ ಬಗ್ಗೆ ನೀವು ಏನು ಹೇಳುತ್ತೀರಿ?
ಅಂಥಾ ಆಲೋಚನೆಗಳಿಗೆ ಇಲ್ಲಿ ಎಡೆ ಇಲ್ಲ. ಇದನ್ನು ಅತ್ಯಂತ ಸ್ಪಷ್ಟವಾಗಿ ನಾನು ನಿಮಗೆ ಹೇಳುತ್ತಿದ್ದೇನೆ. ಭವಿಷ್ಯತ್ತಿನ ಒಟ್ಟು ಆಶಯಗಳಿಗೆ ಅವರು ಧ್ವನಿಯಾಗಿ ಅವರು ಬರಬೇಕೆ ವಿನಹ ಅವರದ್ದೇ ಆದಂತಹ ಧ್ವನಿ ಅಲ್ಲಿ ಇರುವುದಿಲ್ಲ. ರೈತರ ವಿಚಾರ ಇರಬಹುದು, ಹೋರಾಟದ ವಿಚಾರ ಇರಬಹುದು, ಜನಸಾಮಾನ್ಯರ ವಿಚಾರ ಇರಬಹುದು, ಭಾಷೆಯ ವಿಚಾರ ಇರಬಹುದು, ಇದು ಬಹುಜನರಿಗೆ ಅನುಕೂಲ ಆಗುವಂತಹದ್ದು. ಆನಸಾಮಾನ್ಯರಿಗೆ ಅನುಕೂಲ ಆಗುವಂತಹ ನೆಲೆಯೊಳಗೆ ಆಲೋಚನೆ ಮಾಡುವವರು ಬರಬೇಕೆ ವಿನಹ ಅದನ್ನು ಬಿಟ್ಟು ನಾವು ಮಾತನಾಡುತ್ತೇವೆ ಅನ್ನುವವರು ಸಾಧ್ಯ ಇಲ್ಲ. ಪರಿಷತ್ತು ಇಲ್ಲಿರುವಂತಹ ಕವಿಗೋಷ್ಠಿ ಮುಂತಾದವುಗಳಿಗೂ ಒಂದು ಸ್ವರೂಪಗಳನ್ನು ಕೊಟ್ಟಿರುವಂತಹುದು ಪರಿಷತ್ತೇ ವಿನಹ ಬೇರೆ ಯಾರನ್ನೂ ಕೂಡ ಇಲ್ಲಿ ಪ್ರವೇಶ ಮಾಡುವುದಕ್ಕೆ ನಾನು ಬಿಡುವುದಿಲ್ಲ.
7. ಹೊಸ ತಂತ್ರಜ್ಞಾನ ಇಂದು ದಾಪುಗಾಲು ಇಡುತ್ತಿರುವಂತಹ ಒಂದು ಸಂದರ್ಭದಲ್ಲಿ, ಈ ನಿಟ್ಟಿನಲ್ಲಿ ಪರಿಷತ್ತಿನಿಂದ ಒಂದು ಹೊಸ ವೆಬ್ಸೈಟ್ ತಯಾರಾಗುತ್ತಿದೆ ಎಂಬ - ನೀವು ಹೇಳಿದ ವಿವರದ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ.
ಈ ವಿಚಾರಗೋಷ್ಠಿಯಲ್ಲೂ ಕೂಡ ಒಂದು ವಿಷಯ ಇದೆ, 'ಈ ಜಗತ್ತಿನಲ್ಲಿ ಇ-ಕನ್ನಡ'. ವಾಸ್ತವವಾಗಿ ನಾನು ಆಧುನಿಕ ತಂತ್ರಜ್ಞಾನದ ತಿಳುವಳಿಕೆ ಇಲ್ಲದವನು. ಆದರೆ ಕನ್ನಡ ಭಾಷೆ ಆಧುನಿಕ ಜಗತ್ತಿನೊಳಗೆ ತನ್ನನ್ನು ತೆರೆದುಕೊಳ್ಳಬೇಕು ಅನ್ನುವ ಆಸೆ ಇಟ್ಟುಕೊಡಿರುವವ ನಾನು. ಪ್ರಪಂಚದಲ್ಲಿ ಇರುವಂತಹ ಹಲವು ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕಾದಂತಹದ್ದು ಕನ್ನಡ ಭಾಷೆ. ಹಳೇ ಕಾಲದ ಹಾಗೆ ಯೋಚನೆ ಮಾಡಿ, ಒಂದು ಸೀಮಿತವಾದಂತಹ ಸ್ವರೂಪದೊಳಗಡೆಯೇ ಪುಸ್ತಕ ಮುದ್ರಣ ಹಾಗು ವಿಮರ್ಶೆ ಮಾತ್ರಗಳು ಈಗ ಸಾಧ್ಯವಿಲ್ಲ. ಜಗತ್ತಿಗೆ ನಮ್ಮನ್ನು ತೆರೆದು ತೋರಿಸಬೇಕಾಗಿದೆ. ಇವತ್ತು ಇಲ್ಲಿ ಕುಳಿತು ಮಾತನಾಡುತ್ತಿರುವಂತಹದ್ದು, ಅಮೇರಿಕಾದ ಮೂಲೆಯಲ್ಲಿ ಹೇಳುತ್ತಿದ್ದೇನೆ ಅನ್ನೋದು ನನಗೆ ಬಹಳ ಸಂತೋಷ ಹಾಗು ಆಶ್ಚರ್ಯ ಕೂಡ ಹೌದು. ಈ ಆಸೆಗಳಿಂದ ನಾನು ಬಂದ ಕ್ಷಣದಿಂದಲೂ ಕೂಡ ಯೋಚನೆ ಮಾಡುತ್ತಾ ಇದ್ದೆ. ನನಗೆ ಅದರ ತಿಳುವಳಿಕೆ ಇಲ್ಲದ್ದಿದ್ದರೂ ಈ ದಿಕ್ಕಿನೊಳಗೆ ಪರಿಷತ್ತನ್ನು ನಡೆಸಬೇಕೆನ್ನುವಂತಹ ಯೋಚನೆ ನನಗಿದೆ.
8. ಈಗ ಸಮ್ಮೇಳನ ಗದಗದಲ್ಲಿ ನಡೆಯುತ್ತಿದೆ. ಗದಗದಲ್ಲಿ ನಡಿಯಬೇಕು ಅಂತ ಹಿಂದಿನ ಸಮ್ಮೇಳನದಲ್ಲಿ ತೀರ್ಮಾನ ಆಗಿರುತ್ತದೆ ಆದರೆ ಇವತ್ತಿನ ಪ್ರಸಂಗದಲ್ಲಿ ಉತ್ತರ ಕರ್ನಾಟಕ ದಲ್ಲಿ ನೆರೆ ಸಂತ್ರಸ್ತರು ಇರುವಾಗ, ಹಸಿವು ವಸತಿ ಸಮಸ್ಯೆಯಿಂದ ತತ್ತರಿಸಿರುವ ಸಾವಿರಾರು ಜನಗಳ ಎದುರು ಇತ್ತೀಚೆಗೆ ಕೋಟ್ಯಾಂತರ ಹಣ ಖರ್ಚು ಮಾಡಿ ಒಂದು ಹಬ್ಬ ಆಗಿದೆ. ಈಗ ಇನ್ನೊಂದು ಹಣದ ಖರ್ಚಿನ ಹಬ್ಬ. ಪರಿಷತ್ತಿನ ಸಮ್ಮೇಳನ ಇಂದು-ನಿನ್ನೆಯದಲ್ಲ. ಇದು ನಿರಂತರ ಆಗುತ್ತಿರಬೇಕೆಂಬುದು ಇಡೀ ಕನ್ನಡ ಜನತೆಯ ಆಶಯ ಆದರೂ ಕೂಡ ಸಂದರ್ಭದ ಹಿನ್ನೆಲೆಯಲ್ಲಿ ನಿಮ್ಮ ಆಲೋಚನೆಗಳು, ನಿಮ್ಮ ಉಪಾಯಗಳು ಏನಿವೆ?
ವಾಸ್ತವವಾಗಿ ನಾನು 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗದಗದಲ್ಲಿ ನಡೆಸಬೇಕೆಂದು ಚಿತ್ರದುರ್ಗ ಸಮ್ಮೇಳನ ಮುಗಿಸಿ ಬಂದ ನಂತರ ತೀರ್ಮಾನ ತೆಗೆದುಕೊಂಡೆವು. ಅದಕ್ಕಾಗಿ ಒಂದು ಪರಿಶೀಲನಾ ಸಮಿತಿಯನ್ನೂ ಕೂಡ ರಚಿಸಿದ್ದೆವು. ಚಂಪಾ ಅವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿ ಅವರಿಗೆ ಯಾರು ಯಾರು ಸಮ್ಮೇಳನವನ್ನು ಕೇಳುತ್ತಿದ್ದಾರೆಂದು ನೋಡಿಕೊಂಡು ಬರಲು ಹೇಳಿದ್ದೆವು. ಸಮಿತಿ ಶಿಫಾರಸ್ಸು ಮಾಡಿತು ಮತ್ತು ಎಲ್ಲಾ ಕಾರ್ಯಕಾರಿ ಸಮಿತಿ ಒಪ್ಪಿಗೆ ಕೊಟ್ಟಿತು, ಹೀಗೆ ಗದಗದಲ್ಲಿ ಮಾಡಬೇಕೆಂಬ ತೀಮರ್ಾನವನ್ನು ಕೈಗೊಂಡಿದ್ದೆವು. ಸಾಹಿತ್ಯ ಸಮ್ಮೇಳನ ಯಾವಾಗ ಎಂದು ಬಹಳಷ್ಟು ಜನ ಕೇಳುತ್ತಿರುತ್ತಾರೆ. ಹಾಗಾಗಬಾರದು, ಕನ್ನಡ ಸಾಹಿತ್ಯ ಸಮ್ಮೆಳನ ನವೆಂಬರ್ ತಿಂಗಳ ಕಡೆಯ ವಾರದಲ್ಲಿ ನಡೆಯಬೇಕೆಂಬತಹ ನಿಯಮವನ್ನು ರೂಪಿಸಿದ್ದೇನೆ. ಆದರೆ ಪ್ರಕೃತಿ ವಿಕೋಪದ ಕಾರಣದಿಂದ ಆಗ ನಡೆಸಲಾಗಲಿಲ್ಲ. ಅಲ್ಲಿದ್ದ ಜನ ನೆರೆ ಹಾವಳಿಯಿಂದ ತತ್ತರಿಸಿ ಹೋದಾಗ ನಾನೇ ಖುದ್ದಾಗಿ ಅಲ್ಲಿಗೆ ಹೋಗಿ, ಈ ಸಂದರ್ಭದಲ್ಲಿ ಸಮ್ಮೇಳನ ಮಾಡುವುದು ಸೂಕ್ತವಲ್ಲ ಎಂಬ ನಿರ್ಣಯವನ್ನು ನಾನೇ ಕೈಗೊಂಡೆ. ಆನಂತರದಲ್ಲಿ ವಾತಾವರಣ ತಿಳಿಯಾದ ಕಾರಣ ಅಲ್ಲಿರುವಂತಹ ಜನಪ್ರತಿನಿಧಿಗಳು, ಸಾಹಿತಿಗಳು ಮತ್ತು ಆಸಕ್ತರೆಲ್ಲರೂ ಕೂಡ, ಈ ತಿಂಗಳಲ್ಲಿ ನಡೆಸೊಣ ಎಂದು ಹೇಳಿದಾಗ (ಫೆಬ್ರವರಿ 19,20,21ನೇ ತಾರೀಖಿನಂದು) ಇಡೀ ಜನ ನೊಂದು ನಿಂತಿರೊ ಸಂದರ್ಭದೊಳಗೆ ನಮ್ಮ ಸಂಭ್ರಮದ ಆಚರಣೆ ಸಲ್ಲದು ಅನ್ನುವುದೇ ನನ್ನ ಆಶಯ. ಹಾಗಾಗಿ ಅತೀ ಅದ್ದೂರಿಯ ವಾತಾವರಣದಲ್ಲಿ ಸಮ್ಮೇಳನ ಇರಬಾರದು ಅನ್ನುವುದನ್ನು ಅಲ್ಲಿಯ ಸ್ವಾಗತ ಸಮಿತಿಗೆ ಮತ್ತು ಇಲ್ಲಿಯವರೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.
9. ಗೀತಾ ನಾಗಭೂಷಣ ಅವರು ಅಧ್ಯಕ್ಷರಾಗಿದ್ದಾರೆ. ಅವರ ಬಗ್ಗೆ ಒಂದೆರಡು ಮಾತು.
ನನಗಂತೂ ಗೀತಾ ನಾಗಭೂಷಣರ ಆಯ್ಕೆ ಬಗ್ಗೆ ಸಂಪೂರ್ಣ ತೃಪ್ತಿ, ಸಮಾಧಾನ ಮತ್ತು ಸಂತೋಷ ಇದೆ. ಎಲ್ಲಕ್ಕಿಂತ ಬಹುಮುಖ್ಯವಾಗಿ ನನಗನ್ನಿಸುವುದೇನೆಂದರೆ, ಅತ್ಯಂತ ಕೆಳವರ್ಗದಿಂದ ಬಂದಂತಹ ಒಬ್ಬ ಮಹಿಳೆ, ನೋವನ್ನೇ ಉಂಡು, ನೋವನ್ನೇ ಹಾಸಿ ಮಲಗಿಕೊಂಡು, ಆ ಎಲ್ಲಾ ತನ್ನ ಬದುಕಿನ ವಿಚಾರಗಳನ್ನು ಅಕ್ಷರ ರೂಪ ಕೊಟ್ಟು ಸಾಹಿತ್ಯ ಲೋಕದಲ್ಲಿ ಮೇಲೆದ್ದ ಸ್ವರೂಪ ಇದೆಯಲ್ಲಾ, ಅದು, ಮಣ್ಣೊಳಗೆ ಬೀಜ ನೆಟ್ಟು, ಅದು ಮೊಳೆತು, ಚಿಗುರಿ, ಮರವಾಗಿ ಹೂವಾಗಿ ಫಲಿತವಾಗುವಂತಹ ಪ್ರಕ್ರಿಯೆ ಇದೆಯಲ್ಲಾ, ಅಂತಹಾ ಒಂದು ಗಟ್ಟಿತನವನ್ನು ತೋರಿದಂತಹ ದಿಟ್ಟ ಮಹಿಳೆ ಆಕೆ. ಜೊತೆಗೆ ಸಾಹಿತ್ಯಲೋಕದಲ್ಲಿ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಪ್ರಶಸ್ತಿ, ಸಾಹಿತ್ಯ ಅಕ್ಯಾಡೆಮಿಯ ಪ್ರಶಸ್ತಿ, ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ, ಅದಕ್ಕಿಂತ ಹೆಚ್ಚಿನದು ಎಂದರೆ, ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಬಂಡಾಯದ ದನಿ ಅವರು. ಆ ಎಲ್ಲಾ ಹಿನ್ನೆಲೆಯನ್ನು ಗಮನಿಸಿ ಅವರನ್ನು ಈ ಬಾರಿಗೆ ಆಯ್ಕೆ ಮಾಡಿದ್ದೇವೆ. ಇಡೀ ನಾಡಿನ ಜನ ಕನ್ನಡ ಸಾಹಿತ್ಯ ಪರಿಷತ್ತನ್ನು ಹೊಗಳುತ್ತಿದ್ದಾರೆ ಒಳ್ಳೆ ಆಯ್ಕೆ ಎಂದು. ಯಾರನ್ನು ಕೇಳಿದರೂ ಇಂದು ಒಡಕು ಧ್ವನಿ ಬರಲಿಲ್ಲ ಅಂದರೆ ಪರಿಷತ್ತು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಇಡುತ್ತಿದೆ ಅನ್ನೊ ನಂಬಿಕೆ ನನಗೆ.
ಧನ್ಯವಾದಗಲು ಸಾರ್, ಸಮ್ಮೇಳನಕ್ಕೆ ನಮ್ಮ ಬಳಗ ಯಶಸ್ಸನ್ನು ಹಾರೈಸುತ್ತದೆ.
ಮಾಸ್ತಿ ಚಿತ್ರ ಸಂಪುಟ
5:48 AM
Posted by ಆಲೆಮನೆ


ಕನ್ನಡ ಸಾಹಿತ್ಯದ ಎರಡು ಆಧಾರ ಸ್ಥಂಬಗಳು ಹಿರಿಯ ಚೇತನಗಳು - ರಸರುಷಿ ಕುವೆಂಪು ಮತ್ತು ಮಾಸ್ತಿ. ನೋಡಲಿಕ್ಕೆ ಎಷ್ಟು ಖುಷಿಯಾಗ್ತದಲ್ಲ? ಈಗ ಇಂತ ಫೋಟೋ ಒಂದು ಸಿಗಲು ಸಾಧ್ಯವೇ? ಸುಮ್ಮನೆ ಊಹಿಸಿ ಕೊಳ್ಳಿ ಅನಂತಮೂರ್ತಿಗಳು ಮತ್ತು ಬೈರಪ್ಪನವರು ಒಂದೇ ಫ್ರೇಮಿನಲ್ಲಿ.....ಹಗಲುಗನಸು.....
ಮಾಸ್ತಿಯವರ ಮೂರು ಕತೆಗಳು
5:21 AM
Posted by ಆಲೆಮನೆ
ಇಂದಿನ ಅತಿಪ್ರಮುಖ ಕನ್ನಡ ಲೇಖಕರಲ್ಲೊಬ್ಬರು ವಸುಧೇಂದ್ರ. ವ್ಯಾವಹಾರಿಕವಾಗಿ IT ಜಗತ್ತಿನಲ್ಲಿ ಮುಳುಗಿ ಹೋಗಿದ್ದರೂ, ಕನ್ನಡ ಸಾಹಿತ್ಯದ ಸವಿರುಚಿಯನ್ನು ಉಂಡವರು, ಉಣಬಡಿಸುತ್ತಿರುವವರು. ವಸುಧೇಂದ್ರ ಕನ್ನಡ ಕಥಾಲೋಕದ ಪ್ರಪಿತಾಮಹ ಎಂದೇ ಗುರುತಿಸಲಾದ ಮಾಸ್ತಿಯವರ ಕಥೆಗಳು ಮತ್ತು ಅವರ ಅನುಭವದ ಕುರಿತು ಬರೆದಿದ್ದಾರೆ. ಅವರು ಹೇಗೆ ಇಂದಿಗೂ ಮೇಲ್ಪಂಕ್ತಿಯಲ್ಲಿ ನಿಂತು ಮಾರ್ಗದರ್ಶಕರಾಗಿದ್ದಾರೆ ಎಂದು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ....
ಇತ್ತೀಚೆಗೆ ಹಿರಿಯ ಗೆಳೆಯರೊಬ್ಬರು ನನ್ನನ್ನು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಸೊಗಸಾದ ಊಟವನ್ನು ಉಣಿಸಿ, ಮನೆಗೆ ಬರುವಾಗ ನನಗೆ ಉಡುಗೊರೆಯಾಗಿ ಮಾಸ್ತಿಯವರ ಒಂದು ಕಥಾಸಂಪುಟವನ್ನು ಕೊಟ್ಟರು. ನಾನು ಈಗಾಗಲೇ ಮಾಸ್ತಿಯವರ ಎಲ್ಲಾ ಕತೆಗಳನ್ನೂ ಓದಿಯಾಗಿತ್ತು. ಹಾಗಂತ ಅವರಿಗೆ ಹೇಳಿಯೂ ಬಿಟ್ಟೆ. ಅದಕ್ಕವರು ಏನಾಯ್ತೀಗ? ಮತ್ತೊಮ್ಮೆ ಮಾಸ್ತಿಯವರನ್ನು ಓದಿದರೆ ತಪ್ಪೇನೂ ಆಗುವುದಿಲ್ಲ ಎಂದು ಹೇಳಿ ಆ ಪುಸ್ತಕವನ್ನು ಕೊಟ್ಟರು. ನನಗೂ ಅವರ ಮಾತು ಸರಿಯೆನ್ನಿಸಿತು. ನಮ್ಮ ಹಿರಿಯರ ಸಾಹಿತ್ಯವನ್ನು ಓದಿದರೆ ನಮ್ಮ ಹುಟ್ಟೂರಿಗೊಮ್ಮೆ ಭೇಟಿ ಕೊಟ್ಟು ಬಂದಂತಹ ಅನುಭವವಾಗುತ್ತದೆ. ಪ್ರೀತಿ ಕೊಡುವ ಗೆಳೆಯರು, ಹಿರಿಯರು, ಬಂಧುಗಳು, ಶಾಲೆ, ಹಳ್ಳ, ಮರ, ಗಿಡಗಳಿರುವ ಹುಟ್ಟೂರು ಎಂದಾದರೂ ಬೇಸರ ಕೊಟ್ಟೀತೆ? ಈ ನೆಪದಿಂದಲಾದರೂ ಮಾಸ್ತಿಯವರ ಒಂದಿಷ್ಟು ಕತೆಗಳನ್ನು ಮತ್ತೊಮ್ಮೆ ಓದಿದರಾಯ್ತೆಂದು ಆ ಪುಸ್ತಕವನ್ನು ಸ್ವೀಕರಿಸಿದೆ. ಮನೆಗೆ ಬಂದ ತಕ್ಷಣ ಓದಿಯೂ ಬಿಟ್ಟೆ. ಮಾಸ್ತಿ ಮತ್ತೊಮ್ಮೆ ಇಷ್ಟವಾದರು. ಹೊಸದಾಗಿಯೂ ಕಂಡರು.
ಯಥಾಪ್ರಕಾರ ಯಾರ್ಯಾರೋ ಮಾಸ್ತಿಯವರಿಗೆ ಹೇಳಿದ ಕತೆಗಳಿವು. ನಮ್ಮ ಹತ್ತಿರವೇಕೆ ಯಾರೂ ಈ ತರಹ ಒಳ್ಳೆಯ ಕತೆಗಳನ್ನು ಹೇಳಿಕೊಳ್ಳುವದಿಲ್ಲ? ಎಂದು ಮಾಸ್ತಿಯವರ ಬಗ್ಗೆ ಅಸೂಯೆಯಾಗುವದರೊಳಗೆ ಇದು ಮಾಸ್ತಿಯವರ ತಂತ್ರವೇ ಹೊರತು ಹಾಗೆ ಯಾರೂ ಅವರಿಗೆ ಹೇಳಿರಲಿಕ್ಕಿಲ್ಲವೆಂದು ಅರ್ಥವಾಗುತ್ತದೆ. ಬದುಕಿನ ಬಗ್ಗೆ ಕಳಕಳಿ, ಒಳ್ಳೆಯತನದ ಬಗ್ಗೆ ಗೌರವ, ಇನ್ನೊಬ್ಬರ ಸಮಸ್ಯೆಗಳಲ್ಲಿ ಭಾಗವಹಿಸಿ ಅದನ್ನು ಪರಿಹರಿಸುವ ಉತ್ಸಾಹ, ಹಾಗೆ ಮಧ್ಯ ಬಂದು ಬುದ್ಧಿ ಹೇಳುವವರನ್ನು ಗೌರವಿಸುವ ಜನ, ಎಂತಹ ಸಂಗತಿಯನ್ನೂ ಉತ್ಪ್ರೇಕ್ಷೆ ಮಾಡದ, ಯಾವುದನ್ನೂ ನಗಣ್ಯಗೊಳಿಸದ ಮಾಸ್ತಿಯ ಕಥಾಲೋಕ ತನ್ನ ಪ್ರಾಮಾಣಿಕ ಆತ್ಮೀಯತೆಯಿಂದಲೇ ನಮ್ಮನ್ನು ಸೆಳೆಯುತ್ತದೆ.
ಈ ಸಂಪುಟದಲ್ಲಿದ್ದ 'ಆಚಾರ್ಯವಂತ ಅಯ್ಯಂಗಾರರು', 'ಎಮ್ಮೇ ಕಳವು' ಮತ್ತು 'ಪಕ್ಷಿಜಾತಿ' ಎಂಬ ಮೂರು ಕತೆಗಳನ್ನು ನಾನು ಆಯ್ಕೆ ಮಾಡಿಕೊಂಡಿರುವದಕ್ಕೆ ಮುಖ್ಯ ಕಾರಣ ಆ ಮೂರೂ ಕತೆಗಳು ಗಂಡು-ಹೆಣ್ಣಿನ ಅಕ್ರಮ ಸಂಬಂಧಗಳ ಕುರಿತದ್ದಾಗಿವೆ. ಮೂರು ಉದ್ದ ನಾಮಗಳನ್ನು ಸ್ಪಷ್ಟವಾಗಿ ಹಾಕಿಕೊಂಡು, ಬಿಳಿ ಪಂಜೆ, ಕರಿ ಕೋಟು ಧರಿಸಿ, ನಡೆ-ನುಡಿಯಿಂದ ಅಪ್ಪಟ ಮಡಿವಂತರಂತೆ ಕಾಣುತ್ತಿದ್ದ ನಮ್ಮ ಮಾಸ್ತಿ ಇಂತಹ ವಸ್ತುಗಳನ್ನು ಎಷ್ಟೊಂದು ಸಹಜವಾಗಿ, ಸರಳವಾಗಿ ನಿರ್ವಹಿಸಿಬಿಡುತ್ತಾರಲ್ಲ ಎಂಬುದು ನನ್ನ ಅಚ್ಚರಿ. ಎಂತಹ ಅಶ್ಲೀಲ ಸಂಗತಿಯನ್ನೂ ಮರೆಮಾಚದೆ, ಆದರೆ ಓದುಗನಿಗೆ ಅಸಹ್ಯವೆನ್ನಿಸದೆ ಹೇಳುವ ಅವರು ನನಗೆ ಅತ್ಯಂತ ಧೈರ್ಯವಂತ ಕಥೆಗಾರರಾಗಿ ಕಾಣುತ್ತಾರೆ.
'ಆಚಾರ್ಯವಂತ ಅಯ್ಯಂಗಾರರು' ಕತೆ ಡಾ. ಯು. ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿಯನ್ನು ನೆನಪಿಸುವಂತಹದ್ದು. ಈ ಕತೆಯನ್ನು ಯಾವ ಕಾಲದಲ್ಲಿ ಮಾಸ್ತಿ ಬರೆದರೆಂಬುದು ಈ ಪುಸ್ತಕದಲ್ಲಿ ನಮೂದಿಸಿಲ್ಲದಿರುವದರಿಂದ ಅದು 'ಸಂಸ್ಕಾರ'ದ ಕತೆಗೆ ಪ್ರತಿಕ್ರಿಯೆಯಾಗಿ ಬರೆದದ್ದೋ, ಅಥವಾ ಅದಕ್ಕೂ ಮುಂಚೆ ಬರೆದದ್ದೋ ನನಗೆ ತಿಳಿದಿಲ್ಲ. ಅತ್ಯಂತ ಮಡಿವಂತರಾದ ಅಯ್ಯಂಗಾರರೊಬ್ಬರು ತಮ್ಮ ಕುಟುಂಬವೊಂದನ್ನು ಕಳೆದುಕೊಂಡ ಮೇಲೆ ಕ್ರಿಶ್ಚಿಯನ್ ನರ್ಸ್ ಜೊತೆ ಕೂಡಿ ಬಾಳುವದಕ್ಕೆ ನಿರ್ಧರಿಸುತ್ತಾರೆ. ಆ ಇಳಿ ವಯಸ್ಸಿನಲ್ಲಿ ಇಬ್ಬರೂ ಮದುವೆಯಾಗುವದು ಬೇಡವೆಂದು ನಿರ್ಧರಿಸಿ, ಹಿರಿಯರೊಬ್ಬರ ಮುಂದೆ ತಾವು ಕೂಡಿ ಬಾಳುವದಾಗಿ ಹೇಳಿ, ಒಂದೇ ಮನೆಯಲ್ಲಿ ಗಂಡ-ಹೆಂಡಿರಂತೆ ಬಾಳಲಾರಂಭಿಸುತ್ತಾರೆ. ಹೆಂಡತಿ ನರ್ಸ್ ಆದ ಕಾರಣ ಯಾವಾಗಲೂ ಕೆಲಸದ ಮೇಲೆ ಹೊರ ಜಗತ್ತಿನಲ್ಲಿ ದುಡಿಯುತ್ತಿದ್ದರೆ, ಅಯ್ಯಂಗಾರರು ಮನೆಯಲ್ಲಿ ಅಡಿಗೆ ಮಾಡಿಕೊಂಡು ಅವಳಿಗೆ ಸಹಾಯ ಮಾಡುತ್ತಿರುತ್ತಾರೆ. ಒಂದು ದಿನ ಅಚಾನಕ್ಕಾಗಿ ಈ ಅಯ್ಯಂಗಾರರು ಕೊನೆಯುಸಿರೆಳೆಯುತ್ತಾರೆ. ಆದರೆ ವೈದಿಕ ಧರ್ಮವನ್ನು ಪರಿಪಾಲಿಸುತ್ತಿದ್ದ ಈ ಅಯ್ಯಂಗಾರರು ತಮ್ಮ ಸಂಸ್ಕಾರ ಕಾರ್ಯವನ್ನು ಶ್ರೀವೈಷ್ಣವರಿಂದಲೇ ಮಾಡಿಸಬೇಕೆಂದು ಹೆಂಡತಿಯಿಂದ ಮಾತು ಪಡೆದಿರುತ್ತಾರೆ. ಈ ಕ್ರಿಶ್ಚಿಯನ್ ಮಹಿಳೆ ಬೇರೆ ದಾರಿ ಕಾಣದೆ ನಿರೂಪಕರ ಮುಂದೆ ಬಂದು ಸಂಸ್ಕಾರದ ಸಹಾಯವನ್ನು ಕೇಳುತ್ತಾಳೆ. ಅದಕ್ಕೆ ತಗಲುವ ಎಲ್ಲಾ ಖರ್ಚನ್ನೂ ತಾನು ಭರಿಸುವದಾಗಿ ತಿಳಿಸುತ್ತಾಳೆ. ಅಲ್ಲಿಗೆ ಇದು 'ಸಂಸ್ಕಾರ' ಕಾದಂಬರಿಯ ಸಮಸ್ಯೆಯನ್ನೇ ಅತ್ಯಂತ ಸರಳವಾಗಿ ನಮ್ಮ ಮುಂದಿಡುತ್ತದೆ. ಆದರೆ ಮಾಸ್ತಿ ಆ ಸಮಸ್ಯೆಯನ್ನು ಬಗೆಹರಿಸುವ ರೀತಿ ಮಾತ್ರ ನಾವು ಬೆರಗುಗೊಳಿಸುವಷ್ಟು ಸರಳವಾದದ್ದಾಗಿದೆ. ಆ ನಿರೂಪಕರು ತಮ್ಮ ಶ್ರೀವೈಷ್ಣವ ಧರ್ಮದ ಹಲವು ಹಿರಿಯರನ್ನು ಮನೆಗೆ ಕರೆಸಿ, ವಿಷಯವನ್ನು ವಿವರಿಸಿ, ಆ ಸಂಸ್ಕಾರವನ್ನು ಮಾಡುವುದು ಮಾನವಧರ್ಮವೆಂದು ತಿಳಿಸುತ್ತಾರೆ. ಎಲ್ಲರೂ ಒಪ್ಪಿ ವಿಧಿವತ್ತಾಗಿ ಅಯ್ಯಂಗಾರರ ಸಂಸ್ಕಾರವನ್ನು ಮಾಡಿ ಮುಗಿಸುತ್ತಾರೆ. ಅಲ್ಲಿಗೆ ಕತೆ ಮುಗಿಯುತ್ತದೆ! ಸೂಕ್ಷ್ಮವಾಗಿ ನೋಡಿದರೆ ಈ ಕತೆಯಲ್ಲಿ ಬೆಚ್ಚಿ ಬೀಳುವಂತಹ ಸಂಗತಿಗಳಿವೆ. ಮದುವೆಯಾಗದೆ ಕೂಡಿ ಬಾಳುವ ಸಂಗತಿಯನ್ನು (ಲಿವಿಂಗ್ ಟುಗೆದರ್) ನಾವು ಈವತ್ತಿನ ವಿಶೇಷವೆನ್ನುವಂತೆ ಹೇಳುವದನ್ನು ಮಾಸ್ತಿ ಆಗಲೇ ತಿಳಿಸಿಬಿಟ್ಟಿದ್ದಾರೆ. ಬರೀ ಅಷ್ಟೇ ಅಲ್ಲ, ಅದರಲ್ಲಿ ಯಾವ ತಪ್ಪು-ಹುಳುಕನ್ನೂ ಮಾಸ್ತಿ ಕಾಣುವದಿಲ್ಲ. ಬದುಕನ್ನು ಅತ್ಯಂತ ವಿಶಾಲ ದೃಷ್ಟಿಕೋನದಿಂದ ಕಾಣುವ ಮಾಸ್ತಿಗೆ ಆ ಹೊಂದಾಣಿಕೆ ಅತ್ಯಂತ ಪ್ರಾಮಾಣಿಕವೆನ್ನಿಸುತ್ತದೆ. ಜೊತೆಗೆ ಅದರಿಂದ ಹುಟ್ಟುವ ಸಂಸ್ಕಾರದ ಸಮಸ್ಯೆಯೂ ಕ್ಷುಲ್ಲಕವಾಗಿ ಕಾಣುತ್ತದೆ. ಬ್ರಾಹ್ಮಣತ್ವ-ಶೂದ್ರತ್ವ ಎಂಬ ಕೂದಲು ಸೀಳುವ ರಸಿಕಸಿಗಳಿಲ್ಲದೆ ಸಮಸ್ಯೆಗೆ ಪರಿಹಾರವನ್ನು ಸುಲಭವಾಗಿ ಕೊಟ್ಟು ಬಿಡುತ್ತಾರೆ. ಬದುಕನ್ನು ನಾವು ಕ್ಲಿಷ್ಟವಾಗಿ ನೋಡಿದರೆ ಅದು ಕ್ಷಿಷ್ಟವಾಗಿ ನಮ್ಮನ್ನು ಕಂಗಾಲುಗೊಳಿಸುತ್ತದೆ, ಸರಳವಾಗಿ ನೋಡಿದರೆ ಅದು ಸರಳವಾಗಿ ತಲೆಬಾಗುತ್ತದೆ. ಕತೆಗಾರನ ವ್ಯಕ್ತಿತ್ವ ಯಾವ ಕಡೆ ವಾಲುತ್ತದೋ, ಕತೆಗೆ ಆ ಆಯಾಮ ದಕ್ಕುತ್ತದೆ, ಅಷ್ಟೇ!
'ಎಮ್ಮೇ ಕಳುವು' ಮತ್ತೊಂದು ವಿಭಿನ್ನ ಕತೆ. ತಾಯಿಯನ್ನು ಕಳೆದುಕೊಂಡ, ಅನಾರೋಗ್ಯ ತಂದೆಯನ್ನು ಸಾಕುವ ಜವಾಬ್ದಾರಿಯನ್ನು ಹೊತ್ತ, ಎಮ್ಮೆ ಸಾಕಾಣಿಕೆಯಿಂದ ಜೀವನ ಹೊರೆಯುವ ಹುಡುಗಿಯೊಬ್ಬಳ ಕತೆಯಿದು. ಅವಳಿಗೆ ಅಣ್ಣನೊಬ್ಬ ಇರುತ್ತಾನಾದರೂ, ಕೆಟ್ಟ ಚಟಗಳಿಗೆ ಬಿದ್ದ ಆ ಹುಡುಗ ಮನೆಗೆ ಯಾವ ಸಹಾಯಕ್ಕೂ ನಿಲ್ಲುವದಿಲ್ಲ. ಈ ಹುಡುಗಿ ಅಕಸ್ಮಾತ್ತಾಗಿ ಮದುವೆಯಾದ ಗೃಹಸ್ಥನೊಬ್ಬನ ಸಹವಾಸ ಮಾಡುತ್ತಾಳೆ. ಅವರಿಬ್ಬರ ಮಧ್ಯ ದೇಹ ಸಂಬಂಧವೂ ಬೆಳೆಯುತ್ತದೆ. ಈಗಾಗಲೇ ಕುಡಿತ-ವೇಶ್ಯೆಯರ ಚಟಕ್ಕೆ ಬಿದ್ದ ಅಣ್ಣನಿಗೆ ಈ ಸಂಗತಿ ಗೊತ್ತಾದದ್ದೇ ಅವಳ ಮೇಲೆ ಕೆಂಡ ಕಾರಲಾರಂಭಿಸುತ್ತಾನೆ. ಅವನ ಚೆಲ್ಲಾಟಗಳಿಗೆ ಬೇಕಾದ ಹಣವನ್ನು ಕೊಡಲು ಹುಡುಗಿ ನಿರಾಕರಿಸಿದ್ದೇ ಮನೆಯನ್ನು ಪಾಲು ಮಾಡಿಸಿಕೊಂಡು ಬಿಡುತ್ತಾನೆ. ಅಲ್ಲಿಗೂ ಅವನು ಸುಮ್ಮನಾಗದೆ ಹುಡುಗಿ ಸಾಕುತ್ತಿರುವ ಎಮ್ಮೆಗಳನ್ನು ಕದ್ದು ಮಾರಾಟ ಮಾಡಲು ಶುರುವಿಡುತ್ತಾನೆ. ಈ ಅನ್ಯಾಯವನ್ನು ಸಹಿಸದ ಹುಡುಗಿ ನಿರೂಪಕನಿಗೆ ನ್ಯಾಯ ಒದಗಿಸಿಕೊಡಲು ಮೊರೆ ಹೋಗುತ್ತಾಳೆ. ಒಂದಿಬ್ಬರು ಹಿರಿಯರ ಎದುರು ನ್ಯಾಯ ನಿರ್ಣಯವಾಗುವಾಗ ಹುಡುಗಿ ಅಣ್ಣನ ಬಗ್ಗೆ ದೂರು ಹೇಳಲು ಶುರು ಮಾಡಿದ್ದೇ, ಈ ಅಣ್ಣ ಅವಳ ಅಕ್ರಮ ಸಂಬಂಧವನ್ನು ಬಯಲಿಗೆಳೆದು ಅವಳ ಬಾಯಿ ಮುಚ್ಚಿಸಲು ನೋಡುತ್ತಾನೆ. ಅಲ್ಲಿಯವರೆಗೆ ಸಹಿಸಿಕೊಂಡಿದ್ದ ಹುಡುಗಿ ಈಗ ಧೈರ್ಯದಿಂದ ಮಾತನಾಡುತ್ತಾಳೆ. ನೀನು ನನ್ನ ಅಣ್ಣ. ನಮ್ಮಮ್ಮ ನಿನ್ನ ಮೊದಲು ಹೆತ್ತಳು. ಆಮೇಲೆ ನನ್ನ ಹೆತ್ತಳು. ಈ ತಂಗೀ ಹೆಸರು ಕೆಡಿಸೋಕೆ ಒಬ್ಬ ಅಣ್ಣ ಇರಲಿ ಅಂತ ನಿನ್ನ ಹೆತ್ತಳಾ? ನಿನಗೆ ಪ್ರಾಯ ಬಂತು. ನೀನು ಗಂಡು. ಹೆಣ್ಣು ಹುಡುಕ್ಕೊಂಡು ಹೋದಿ. ನನಗೂ ಪ್ರಾಯ ಬಂತು. ನಾನು ಹೆಣ್ಣು. ಬೀದೀಲಿ ಹೋಗೋ ಹಂಗಿಲ್ಲ. ಇರೋ ಕಡೆ ಇರಬೇಕು. ಒಬ್ಬರು ಬಂದು ಅಕ್ಕರೆ ಮಾತಾಡಿದರು. ಬಾಳುವ ಅಂದರು. ಮದುವೆ ಆಗೋಣ ಅಂದೆ. ಆಗೋಣ, ಸದ್ಯಕ್ಕೆ ಜೊತೀಗೆ ಇರು ಅಂದರು. ಇದ್ದೆ, ಬಹಳ ದೊಡ್ಡ ತಪ್ಪಾಯಿತಾ? ಗಂಡು ಮಾತ್ರ ಬೇಕಾದ ಆಟ ಆಡಬಹುದು. ಹೆಣ್ಣು ಮದುವೆ ಆಗುತೀನಿ ಅಂದವನೊಡನೆ ಸದರವಾಗಿರಬಾರದಾ? ಇದ್ದೆ, ಏನಾಯಿತು? ಎಂದು ಗುಡುಗುತ್ತಾಳೆ.
ಕಥಾವಸ್ತುವಿನ ಸೂಕ್ಷ್ಮತೆಯನ್ನು ನೋಡಿ. ಮದುವೆಗೆ ಮುಂಚೆ ದೇಹ ಸಂಬಂಧ ಬೆಳೆಸಿದ ಹುಡುಗಿ, ಅದೂ ಈಗಾಗಲೇ ಮದುವೆಯಾದವನೊಂದಿಗೆ! ಆದರೆ ಮಾಸ್ತಿ ಈ ಹುಡುಗಿಯ ಪರಿಸ್ಥಿತಿಯ ಬಗ್ಗೆ ಕನಿಕರ ವ್ಯಕ್ತಿ ಪಡಿಸುತ್ತಾರೆಯೇ ಹೊರತು ಎಲ್ಲೂ ಅವಳನ್ನು ಪಾಪದ ಕಟಕಟೆಯಲ್ಲಿ ನಿಲ್ಲಿಸುವದಿಲ್ಲ. ಕತೆಯಲ್ಲಿ ಕೊನೆಗೆ ಆ ಹುಡುಗಿಗೆ ನ್ಯಾಯ ಒದಗಿಸಿ ಕೊಡುತ್ತಾರೆ. ಮದುವೆಗೆ ಮುಂಚಿನ ದೇಹ ಸಂಬಂಧದಂತಹ (ಪ್ರಿ ಮೆರಿಟಿಯಲ್ ಸೆಕ್ಸ್) ಮೈಲಿಗೆಯ ಮಾತನಾಡುವಾಗಲೂ ಮಾಸ್ತಿ ಮಾನವೀಯತೆಯನ್ನು ಮರೆಯುವದಿಲ್ಲ. ಪಾತ್ರಗಳ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಅಂತಹ ಸಂಬಂಧಗಳ ಅಸಹಾಯಕತೆಯನ್ನು ವಿಶಾಲ ದೃಷ್ಟಿಕೋನದಿಂದ ಕ್ಷಮಿಸುತ್ತಾರೆ.
'ಪಕ್ಷಿಜಾತಿ'ಯಂತೂ ಬೆಚ್ಚಿ ಬೀಳಿಸುವಂತಹ ವಸ್ತುವನ್ನು ಹೊಂದಿರುವ ಕತೆ. ಆದರೆ ಓದುಗರನ್ನು ಬೆಚ್ಚಿ ಬೀಳಿಸುವ ಯಾವ ದುರುದ್ದೇಶವೂ ಇಲ್ಲದ ಮಾಸ್ತಿ, ತಮ್ಮ ಇತರ ಕತೆಗಳಂತೆಯೇ ಸರಳವಾಗಿ ಇದನ್ನೂ ನಿರೂಪಿಸುತ್ತಾರೆ. ಕತೆಯ ನಾಯಕ ಮಂಚ ನಂಜನಗೂಡಿನ ಕಡೆಯ ಹಳ್ಳಿಯೊಂದರಿಂದ ಓಡಿ ಬಂದು ಬೆಂಗಳೂರಿನಲ್ಲಿ ಸೌದೆ ಒಡೆಯುವ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ಅವನ ಹೆಂಡತಿ ಮತ್ತು ಆ ಹುಡುಗಿಯ ಅಣ್ಣ ಅವನನ್ನು ಹುಡುಕಿಕೊಂಡು ಬರುತ್ತಾರೆ. ಸೌದೆ ಅಂಗಡಿಯ ಒಡೆಯನ ಮುಂದೆ ನಾಯಕನ ಸಮಸ್ಯೆಯನ್ನು ಹೇಳುತ್ತಾರೆ. ಅವನ ಹೆಂಡತಿ ಮತ್ತು ಅವಳಣ್ಣ ಚಿಕ್ಕಂದಿನಲ್ಲಿ ಗಂಡು-ಹೆಣ್ಣಿನಂತೆ ಕೂಡಿರುತ್ತಾರೆ. ಅನಂತರ ಅದು ತಪ್ಪೆಂದು ತಿಳಿದು ಬಿಟ್ಟಿರುತ್ತಾರೆ. ಮಂಚನೊಂದಿಗೆ ತಂಗಿಯ ಮದುವೆಯಾಗುತ್ತದೆ. ಆದರೆ ಮಂಚ ಪೀಚಲು ದೇಹದವನು. ತಂಗಿಗೆ ಸರಿಯಾದ ಜೋಡಿಯಲ್ಲದೆ ಅವಳು ಸ್ವಲ್ಪ ಮಟ್ಟಿಗೆ ಹತಾಶಳಾಗಿರುತ್ತಾಳೆ. (ಈ ಗಂಡಿನೊಂದಿಗೆ ಬಾಳೋದು ಅಯ್ಯನವರ ಮನೆಯ ಊಟದಂತಾಯ್ತು ಎನ್ನುತ್ತಾಳೆ!) ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಅಣ್ಣನನ್ನು ಬಯಸಿದ ಈ ಹುಡುಗಿ ಒಂದು ರಾತ್ರಿ ಹೊಲದಲ್ಲಿ ಅಣ್ಣನನ್ನು ಕೂಡಿ ಬಿಡುತ್ತಾಳೆ. ಆಗ ಯಾರೋ ಇದನ್ನು ನೋಡಿದ್ದೇ ಊರಲ್ಲಿ ಸುದ್ದಿ ಮಾಡುತ್ತಾರೆ. ಮಂಚ ಅವಮಾನದಿಂದ ಬೆಂಗಳೂರಿಗೆ ಓಡಿ ಬರುತ್ತಾನೆ.
ಸೌದೆ ಅಂಗಡಿಯ ಯಜಮಾನನಿಗೆ ಇದು ಒಂದು ಕ್ಲಿಷ್ಟ ಸಮಸ್ಯೆ. ಅಣ್ಣ-ತಂಗಿಯರಿಬ್ಬರಿಗೂ ತಾವು ಮಾಡಿದ್ದು ತಪ್ಪು ಎಂದು ಗೊತ್ತಿದೆ. ಆದರೆ ಆ ಒಂದು ಚಿಕ್ಕ ತಪ್ಪಿಗೆ ಮಂಚ ಹೀಗೆ ಹೆಂಡತಿಯನ್ನು ಬಿಟ್ಟು ಬರಬಹುದೆ? ಎಂಬುದು ಅವರ ವಾದ. ಬೆಳವನ ಹಕ್ಕಿಗಳಲ್ಲಿ ಒಂದೇ ತಾಯಿಗೆ ಹುಟ್ಟಿದ ಹಕ್ಕಿಗಳು ಹೀಗೆ ಬಾಳುತ್ತವೆಂದು ಕೇಳಿದ್ದೇನೆ ಸ್ವಾಮಿ. ಇದೂ ಅಂತಹದೇ ಪಕ್ಷಿಜಾತಿಯ ಸ್ವಭಾವ. ಮತ್ತೆ ಅಂತಹ ತಪ್ಪು ಮಾಡುವದಿಲ್ಲ ಅಂತ ಅಣ್ಣ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಯಜಮಾನ ಎಲ್ಲರ ಜೊತೆಯಲ್ಲೂ ಮಾತನಾಡಿ, ಅಣ್ಣ-ತಂಗಿಯರು ಮತ್ತೊಮ್ಮೆ ಅಂತಹ ತಪ್ಪು ಮಾಡುವದಿಲ್ಲವೆಂದು ಮಾತು ತೆಗೆದುಕೊಂಡು, ಮಂಚನನ್ನು ಹೆಂಡತಿಯೊಡನೆ ಬಾಳಬೇಕೆಂದು ಒಪ್ಪಿಸಿ ಅವರೂರಿಗೆ ವಾಪಾಸು ಕಳುಹಿಸಿಕೊಡುತ್ತಾರೆ. ಆದರೆ ಮೊದಲ ಎರಡು ಕತೆಗಳಂತೆ ಈ ಕತೆಯಲ್ಲಿ ಎಲ್ಲೂ ಮಾಸ್ತಿ ಈ ಗಂಡು-ಹೆಣ್ಣಿನ ಸಂಬಂಧವನ್ನು ಒಪ್ಪಿಕೊಳ್ಳುವದಿಲ್ಲ. ಅದು ಸ್ಪಷ್ಟವಾಗಿ ವಿಕೃತಿಯೆಂದು ನಿಲುವು ತಾಳುತ್ತಾರೆ.
ಈ ಮೂರೂ ಕತೆಗಳು ಮಾಸ್ತಿಯ ವೈವಿಧ್ಯತೆಗೆ, ಬದುಕಿನ ವಿಶಾಲ ದೃಷ್ಟಿಕೋನಕ್ಕೆ, ತಪ್ಪನ್ನು ಕ್ಷಮಿಸುವ ಸಹೃದಯತೆಗೆ ಸರಳ ಉದಾಹರಣೆಗಳಷ್ಟೇ. ಹೆಂಡತಿ ರುಚಿಯಾಗಿ ಬೆಂಡೆಕಾಯಿ ಹುಳಿ ಮಾಡಿಲ್ಲವೆಂದು ಸನ್ಯಾಸ ಸ್ವೀಕರಿಸಿ ನಾಲ್ಕು ವರ್ಷದ ನಂತರ ಇನ್ನೊಮ್ಮೆ ಬೆಂಡೆಕಾಯಿ ಹುಳಿಯನ್ನು ತಿಂದಿದ್ದೇ ಮತ್ತೆ ಗೃಹಸ್ಥಾಶ್ರಮಕ್ಕೆ ಬರುವ ವ್ಯಕ್ತಿಯ ಹಾಸ್ಯಮಯ ಕತೆ, ಹಳ್ಳಿಯ ಹುಡುಗಿಯೊಬ್ಬಳನ್ನು ಮದುವೆ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಅವಳನ್ನು ವೇಶ್ಯೆಯಾಗಿಸಿ ಹಣ ಸಂಪಾದಿಸುವ ಷಂಡನ ಕೊಲೆಯ ರೋಚಕ ಕತೆ, ಕೋಲಾಟದ ಹಾಡಿನೊಳಗೆ ಅಡಕವಾಗಿರುವ ಒಡಪನ್ನು ಒಡೆದು ರಂಗನ ಗುಡಿಯ ಹಿತ್ತಲಿನಲ್ಲಿ ಅಡಗಿರುವ ರಾಮನ ವಿಗ್ರಹವನ್ನು ಪತ್ತೆ ಮಾಡುವ ಚಾರಿತ್ರಿಕ ಥ್ರಿಲ್ಲರ್ ಕತೆ, ತನ್ನ ಸಂಸಾರ ಹಾಳಾಗುತ್ತದೆಂದು ತಿಳಿದಿದ್ದರೂ ಪರಪುರುಷನ ಆಕರ್ಷಣೆಗೆ ಸೋತು ವೇಶ್ಯೆಯಾಗಿ ದುಃಖಿಸುವ ಹೆಣ್ಣಿನ ಕರುಣಾಜನಕ ಕತೆ, ಶ್ರೀಕೃಷ್ಣನ ಅಂತಿಮ ದಿನಗಳ ಕಳವಳದ ಪೌರಾಣಿಕ ಕತೆ, ಭಾರತಕ್ಕೆ ಬಂದು ಇಲ್ಲಿ ಹೊಂದಿಕೊಳ್ಳಲಾಗದೆ ವಾಪಾಸಾಗುವ ಬೇಬಿಲಾನ್ ರಾಜಕುಮಾರಿಯ ಕತೆ, ಕನ್ನಡಿಯೊಂದರಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕಾಣುವ ಮಾಯಾ ವಾಸ್ತವದ ಕತೆ - ಒಂದೇ ಎರಡೇ! ಮಾಸ್ತಿಯ ಕಥಾಪ್ರಪಂಚಕ್ಕೆ ಇತಿಮಿತಿಯಿಲ್ಲ. ಕಂಡ-ಕೇಳಿದ-ಓದಿದ-ಊಹಿಸಿದ ಎಲ್ಲಾ ಸಂಗತಿಗಳನ್ನೂ ಸಹಜವಾಗಿ ಮತ್ತು ಸರಳವಾಗಿ ಮಾಸ್ತಿ ಕತೆ ಕಟ್ಟಿಕೊಡುತ್ತಾರೆ. ಈ ಸಹಜತೆ ಮತ್ತು ಸರಳತೆಗಳೇ ಅವರಿಂದ ಇಷ್ಟೊಂದು ಕತೆಗಳನ್ನು ಬರೆಸಲು ಸಾಧ್ಯವಾಗಿಸಿದೆ. ಕೆಲಸದಲ್ಲಿ ತುಂಬಾ ಬಿಜಿಯಾಗಿದೀನಿ ಕಣ್ರೀ ಏನೂ ಬರೆಯೋಕೆ ಆಗ್ತಿಲ್ಲ ಅಂತ ಮಾತೆತ್ತಿದರೆ ನೆಪ ಹೇಳಿಕೊಂಡು ತಿರುಗಾಡುವ ಕತೆಗಾರರೆಲ್ಲರೂ ಮಾಸ್ತಿಯನ್ನೊಮ್ಮೆ ಓದಬೇಕು. ಅತ್ಯಂತ ದೊಡ್ಡ ಹುದ್ದೆಯಲ್ಲಿದ್ದರೂ ಪುಂಖಾನುಪುಂಖವಾಗಿ ಕತೆಗಳನ್ನು ಕನ್ನಡಕ್ಕೆ ಕಟ್ಟಿಕೊಟ್ಟ ಮಾಸ್ತಿ ಎಂದೂ ಅಂತಹ ನೆಪ ಹೇಳಿರಲಿಕ್ಕಿಲ್ಲ.
ಎಂಥಹ ಪಾತ್ರವನ್ನಾಗಲಿ, ಎಂಥಹ ಪರಿಸರವನ್ನಾಗಲಿ ಕಥೆಯಲ್ಲಿ ಹಿಡಿದಿಡುವ ತಂತ್ರವನ್ನು ಮಾಸ್ತಿ ಸೊಗಸಾಗಿ ರೂಢಿಸಿಕೊಂಡಿದ್ದರು. ಸಾಮಾನ್ಯ ಗೃಹಸ್ಥನಿಂದ ಹಿಡಿದು, ಮುನಿ, ಷಂಡ, ಕೊಲೆಗಾರ, ವೇಶ್ಯೆ, ಕಳ್ಳ, ಜೋಗಿ, ಸಾಬಿ, ಇಂಗ್ಲೀಷ್ ಪ್ರಜೆ, ಬ್ಯಾಬಿಲೋನಿನ ರಾಜಕುಮಾರಿ, ಶ್ರೀಕೃಷ್ಣ, ಹೊಯ್ಸಳ ರಾಜಕುಮಾರ - ಯಾರೇ ಆಗಲಿ, ಯಾವ ದೇಶದವರೇ ಆಗಲಿ, ಯಾವ ಕಾಲದವರೇ ಆಗಲಿ, ಮಾಸ್ತಿ ಅವರನ್ನು ಚಿತ್ರಿಸಲು ಅಂಜುವದಿಲ್ಲ. ಮಾನವರೆಲ್ಲರೂ ಒಂದೇ ಎಂಬ ಗಟ್ಟಿ ನಂಬಿಕೆಯಿರದಿದ್ದರೆ ಇಂತಹ ಶಕ್ತಿ ಕಥೆಗಾರನಿಗೆ ದಕ್ಕುವದಿಲ್ಲ. ಅತಿವಾಸ್ತವದ ವಿವರಗಳಿಗಾಗಿ ಒದ್ದಾಡದೆ, ಶ್ರೇಷ್ಠತೆಯ ವ್ಯಸನವಿಲ್ಲದೆ, ಆಡು ನುಡಿಯ ಬಳಕೆಯಿಲ್ಲದೆ, ತಮ್ಮ ಸ್ವಂತ ಅನುಭವಕ್ಕಷ್ಟೇ ಜೋತು ಬೀಳದೆ, ಸರಳವಾಗಿ ಗ್ರಾಂಥಿಕ ಭಾಷೆಯಲ್ಲಿ ಎಲ್ಲವನ್ನೂ ಹಿಡಿದಿಡುವ ಅವರ ಕಥಾತಂತ್ರಕ್ಕೆ ಆರೋಗ್ಯವೂ ಹೆಚ್ಚು, ಆಯುಷ್ಯವೂ ಹೆಚ್ಚು ಮತ್ತು ಓದುಗರೂ ಹೆಚ್ಚು.
ಮಾಸ್ತಿ ಕನ್ನಡದ ಆಸ್ತಿಯೆಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಆದರೆ ಅದಕ್ಕೂ ಮುಖ್ಯ ಸಂಗತಿಯೆಂದರೆ ಮಾಸ್ತಿ ಕನ್ನಡ ಕಥಾಲೋಕದ ಅಸ್ತಿಭಾರ (ತಳಹದಿ).
ಬ್ರೇಕಿಂಗ್ ನ್ಯೂಸ್ .....
7:24 AM
Posted by ಆಲೆಮನೆ
ನಿರೀಕ್ಷಿಸಿ ನಾಳೆ....
ಗದಗದಲ್ಲಿ ಜರುಗಲಿರುವ ೭೬ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ - ನಿಮ್ಮ ನುಡಿನಮನದಲ್ಲಿ!
ಯಾವ ಯಾವ ಘೋಷ್ಟಿಗ್ಲುಂಟು ಈ ಬಾರಿ? ಸಂಮಾನಗಳಾರಾರಿಗೆ? ಅದರಲ್ಲಿ ಒಂದನ್ನ ಪರಿಚಿತ ಮುಖವಿದೆಯೇ? ಅದು ಸರಿ ಯಾರ್ಯಾರು ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸ್ಟೇಜ್ ಹತ್ತುತ್ತಿದ್ದಾರೆ? ಯಾವ ವಿಷಯ? ಏನು ಮಾತು? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾಳೆಯೇ ಉತ್ತರ....ನಾಳೆ ನುಡಿನಮನ ನೋಡಲು ಮರೆಯದಿರಿ.
ಬ್ರೇಕಿಂಗ್ ನ್ಯೂಸ್ .....
6:23 AM
Posted by ಆಲೆಮನೆ
ಕನ್ನಡದ ಮೇಷ್ಟ್ರು, ಸದ್ಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು, ಕನ್ನಡ ಸಾಹಿತ್ಯ ಸಮ್ಮೇಳನದ ಉಸ್ತುವಾರಿ ಹೊತ್ತವರು ಡಾ. ನಲ್ಲೂರು ಪ್ರಸಾದ್, ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ `ನುಡಿನಮನ'ದೊಂದಿಗೆ ಮಾತನಾಡಿದ್ದಾರೆ. ಪ್ರಸ್ತುತ ಸಾಹಿತ್ಯ ಸಮ್ಮೇಳನ, ಕಸಾಪ ಮತ್ತು ಕನ್ನಡದ ಸ್ಥಿತಿಗತಿಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಸಂಪೂರ್ಣ ಸಂದರ್ಶನ - ನಾಳೆ ನಿರೀಕ್ಷಿಸಿ......
ಬ್ರೇಕಿಂಗ್ ನ್ಯೂಸ್ .....
6:21 AM
Posted by ಆಲೆಮನೆ
ಇಂದಿನ ಅತಿಪ್ರಮುಖ ಕನ್ನಡ ಲೇಖಕರಲ್ಲೊಬ್ಬರು ವಸುಧೇಂದ್ರ. ವ್ಯಾವಹಾರಿಕವಾಗಿ IT ಜಗತ್ತಿನಲ್ಲಿ ಮುಳುಗಿ ಹೋಗಿದ್ದರೂ, ಕನ್ನಡ ಸಾಹಿತ್ಯದ ಸವಿರುಚಿಯನ್ನು ಉಂಡವರು, ಉಣಬಡಿಸುತ್ತಿರುವವರು. ವಸುಧೇಂದ್ರ ಕನ್ನಡ ಕಥಾಲೋಕದ ಪ್ರಪಿತಾಮಹ ಎಂದೇ ಗುರುತಿಸಲಾದ ಮಾಸ್ತಿಯವರ ಕಥೆಗಳು ಮತ್ತು ಅವರ ಅನುಭವದ ಕುರಿತು ಬರೆದಿದ್ದಾರೆ. ಅವರು ಹೇಗೆ ಇಂದಿಗೂ ಮೇಲ್ಪಂಕ್ತಿಯಲ್ಲಿ ನಿಂತು ಮಾರ್ಗದರ್ಶಕರಾಗಿದ್ದಾರೆ ಎಂದು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ....
ಕರ್ನಾಟಕ ಏನಾಗಬೇಕು?
5:59 AM
Posted by ಆಲೆಮನೆ
ಕನ್ನಡ ಮಹಿಳಾ ಸಾಹಿತ್ಯ ಒಂದು ಕಿರುನೋಟ
5:53 AM
Posted by ಆಲೆಮನೆ
ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವವರು ಕರುನಾಡ ಹಿರಿಯಕ್ಕನಂತಹ ಗೀತ ನಾಗಭೂಷಣ್ರವರು. ಸಾಹಿತಿಗಳು ಅಂದರೆ ನಮಗೆ ಮೊದಲು ಬರುವ ಚಿತ್ರವೇ ಜುಬ್ಬಾ, ಪೈಜಾಮ, ಗಡ್ಡ,..ಆ ಕಲ್ಪನೆಯಲ್ಲಿ ಸೀರೆ ಏಕಿಲ್ಲ ಎಂಬುದರ ಕುರಿತು ಶಶಿಕಲಾ ವೀರಯ್ಯಸ್ವಾಮಿಯವರು ಚರ್ಚಿಸಿದ್ದಾರೆ...
ಕನ್ನಡ ಮಹಿಳಾ ಸಾಹಿತ್ಯ ಒಂದು ಕಿರು ನೋಟ
ಸ್ನೇಹಿತರೇ, ವಿಷಯದ ವ್ಯಾಪ್ತಿ ವಿಶಾಲವಾದುದು. ಸ್ಥಳಾವಕಾಶ ತುಂಬಾ ಚಿಕ್ಕದು. ಲೇಖನದ ಆಶಯಕ್ಕೆ, ಸಮಗ್ರತೆಯ ಕೊರತೆ. ಅನಿಸಿದಂತೆ ನನ್ನ ತಪ್ಪಲ್ಲ. ಆದರೂ ಕ್ಷಮಿಸಿ, ಮಹಿಳಾ ಸಾಹಿತ್ಯವನ್ನು ಮೂರು ವರ್ಗೀಕರಣಗಳಲ್ಲಿಟ್ಟರೆ ನೋಟ ಸ್ವಲ್ಪ ಮಟ್ಟಿಗೆ ತಿಳಿಯಾಗಬಹುದು. 1) ಜನಪದ ಸಾಹಿತ್ಯ 2) ವಚನ ಕಾರ್ತಿಯರು ಮತ್ತು ಹರಿದಾಸಿಯರು 3) ಆಧುನಿಕ ಸಾಹಿತ್ಯ. ಆನಪದರಲ್ಲಿ ಅಕ್ಷರಾಭ್ಯಾಸವಿಲ್ಲದದ್ದರೂ, ಬದುಕಿನ ಅನುಭವಗಳನ್ನು ಅವರು ಪದ್ಯ (ತ್ರಿಪದಿ)ಗಳ ಮೂಲಕವೋ ಕಥೆಗಳ ಮೂಲಕವೋ ದೇಸೀ ಸಾಹಿತ್ಯವನ್ನು ಜಾರಿಯಲ್ಲಿಟ್ಟಿದ್ದರು. ಹೆನ್ಣು ಮಕ್ಕಳ ಕಾವ್ಯವಂತೂ ತುಂಬಾ ತೀವ್ರವಾಗಿತ್ತು. 12ನೆಯ ಶತಮಾನದ ಮತ್ತು ಅದಕ್ಕೆ ಹತ್ತಿರದ ಹಿಂದು-ಮುಂದಿನ ಕಾಲ ಘಟ್ಟಗಳಲ್ಲಿ ಮಹಿಳೆಯರು ಸಾಹಿತ್ಯ ರಚನೆಗಳಲ್ಲಿ ತೊಡಗಿಕೊಂಡಿದ್ದರು. ಆದರೆ 12ನೆಯ ಶತಮಾನದ ಸಮಾಜೋಧಾಮರ್ಿಕ ಕ್ರಾಂತಿಯಲ್ಲಿ ಭಾಗವಹಿಸಿದ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳಲ್ಲಿ 33 ಜನ 'ವಚನ' ವೆಂಬ ಪ್ರಕಾರದಲ್ಲಿ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ. ಜಗತ್ತಿನ ಮಾಣ ಮಹಿಳಾ ಸಾಹಿತ್ಯದಲ್ಲಿ ಒಂದೇ ಕಾಲಕ್ಕೆ ಇಷ್ಟು ಜನಸಮಾಜ ಮುಖೀ ಸಾಹಿತ್ಯ ರಚನೆ ಮಾಡಿದ್ದು, ಕಡಿಮೆ ಎಂದೇ ಹೇಳಬೇಕು. ಹರಿದಾಸಿಯರು. ಉತ್ಕಟವಾದ ಭಕ್ತಿ ಪಂಥವನ್ನು ಹುಟ್ಟು ಹಾಕಿದರು.
ಆಧುನಿಕ ಕಾಲದಲ್ಲಿ ವಿದ್ಯಾಭ್ಯಾಸದ ಕಾರಣವಾಗಿ, ಬಹಳ ಜನ ಮಹಿಳೆಯವರು ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ತಮ್ಮ ಅಭಿವ್ಯಕ್ತಿಗಾಗಿ ದುಡಿಸಿಕೊಂಡಿದ್ದಾರೆ. ವಸ್ತುವಿನ ಆಯ್ಕೆಯಲ್ಲಿ ಕೂಡ ಬದುಕಿನ ಎಲ್ಲಾ ಕ್ಷೇತ್ರಗಳನ್ನು ಸ್ಪರ್ಶಿಸಿದ್ದಾರೆ. ಬಹುಶಃ ಹೆಚ್ಚಿನ ಸಂಖ್ಯೆಯಲ್ಲಿ ಕಾದಂಬರಿ ಪ್ರಕಾರವು ಜನಮೆಚ್ಚಿಗೆಯನ್ನು ಪಡೆದಿದೆ. ಅನೇಕರ ಕಾದಂಬರಿಗಳು-ಕಾವ್ಯಗಳು- ಬೇರೆ ಭಾಷೆಗಳಿಗೂ ಅನುವಾದಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ-ನಾಡೋಜಗಳಂಥ ಗೌರವಗಳಿಗೆ ಪಾತ್ರರಾದವರೂ ಆಧುನಿಕ ಕನ್ನಡ ಸಾಹಿತ್ಯದಲ್ಲಿದ್ದಾರೆ. ಮಹಾಕಾವ್ಯಗಳು ನಮಗೆ ಲಭ್ಯವಿವೆ. ವಿಮರ್ಶಾಕ್ಷೇತ್ರ- ಸಂಶೋಧನಾ ಕ್ಷೇತ್ರಗಳು, ಹಿಂದೆಂದಿಗಿಂತಲೂ ಇಂದು ತಮ್ಮನ್ನು ಹೆಚ್ಚು ವಿಸ್ತರಿಸಿಕೊಂಡಿವೆ. ಆದರೂ ಗಣನೀಯ ಸಂಖ್ಯೆಯ ಬಾಹುಳ್ಯವಿದ್ದರೂ, ಅದಕ್ಕೆ ನವ-ನವೀನ ಆಯಾಮಗಳು ಏಕೆ ದಕ್ಕಲಿಲ್ಲ? ಎನ್ನುವುದೊಂದು ಪ್ರಶ್ನೆ. ಅಕ್ಕಮಹಾದೇವಿಯಿಂದ ಹಿಡಿದು ತಿರುಮಲಾಂಬೆಗೆ, ಜಯದೇವಿತಾಯಿ ಲಿಗಾಎ, ಅನುಪಮಾ, ನಿರಂಜನ, ನಿರುಪಮಾ, ಕಮಲಾ ಹಂಪನಾ, ಟಿ.ಸುನಂದಮ್ಮ, ವೈದೇಹಿ, ಸಾರಾ ಅಬುಬಕ್ಕರ, ಶಾಂತಾ ಮಾಳಾಡ, ವೀಣಾ ಶಾಂತೇಶ್ವೃ, ನೇಮಿಚಂದ್ರ, ಪ್ರತಿಭಾ, ಲಲಿತಾ, ಸಿದ್ಧಬಸವಯ್ಯ..ಹೀಗೆ ಪತ್ನಿಯನ್ನೇ ಮಾಡಬಹುದು. ಇವರೆಲ್ಲ ಕನ್ನಡದ ವಿವಿಧ ಪ್ರಕಾರಗಳನ್ನು ಸಮೃದ್ಧಗೊಳಿಸಿದವರು. ಗಮನಾರ್ಹ ಬರವಣಿಗೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು.
ಆದರೂ ಪರರಾಜ್ಯಗಳಿಗೆ ಹೋಲಿಸಿದಾಗ- ಜಾಗತಿಕ ಮಟ್ಟದ ಮಹಿಳಾ ಸಾಹಿತ್ಯದ ಹಿನ್ನೆಲೆಯಲ್ಲಿ ಗಮನಿಸಿದಾಗ, ಮಹಿಳಾ ಸಾಹಿತ್ಯದ ಸ್ಥಾನ ಎಲ್ಲಿದೆ?
'ಆನಾ ಆಹ್ಮತೋವಾ' ರಷ್ಯಾ ದೇಶದ ಹೆಸರಾಂತ ಕವಿ. ಅವಳ ಕಾವ್ಯ ರಾಜಕೀಯ ಯುದ್ಧಗಳ ಭೀಕರತೆಯನ್ನೂ, ಜೀವನದ ನಿರರ್ಥಕತೆಯನ್ನೂ ತುಂಬಾ ಆಳವಾದ ನೆಲೆಯಲ್ಲಿ ಪ್ರಶ್ನಿಸುವಂಥದು. 1986ರಲ್ಲಿ ರಷ್ಯಾದೇಶವು ಅವಳ ಜನ್ಮ ಶತಾಬ್ಧಿಯನ್ನು ವಿಜೃಂಭಣೆಯಿಂದ ಆಚರಿಸಿತು. ಅಷ್ಟೇ ಅಲ್ಲ, ಆಕಾಶದಲ್ಲಿನ ಒಂದು ಗ್ರಹಕ್ಕೆ ಅವಳ ಹೆಸರನ್ನು ಕೂಡಾ ಇಡಲಾಯಿತು. ಇದು ಜಗತ್ತಿನ ಒಂದು ಉದಾಹರಣೆಯಾದರೆ ಬಂಗಾಲೀ ಭಾಷೆಯಲ್ಲಿ ಮಹಾಶ್ವೇತಾದೇವಿ, ಯಂಥವರು ಆದಿವಾಸಿ ಜನರ ಜೊತೆ ಕಾಡಿನಲ್ಲೇ ವಾಸಮಾಡುತ್ತಾ, ಅವರ ಪರವಾಗಿ ಸರಕಾರದೊಡನೆ ಅದನ್ನೇ ಸಾಹಿತ್ಯ ರಚನೆ ಮಾಡಿದವರು. ಬಂಗಾಲಿಯಲ್ಲೇ ಮೂರು ಜನ ಮಹಿಳೆಯವರು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಪಂಚಾಚಿನ ಅಮೃತಾಪ್ರೀತಂ, ಮಲೆಯಾಳದ ಮಾಧವೀ ಕುಟ್ಟಿ (ಕಮಲಾ ದಾಸ್) ತಮ್ಮ ದಿಟ್ಟ ಧೋರಣೆಗಳಿಮದ ಜಗತ್ಪ್ರಸಿದ್ಧರಾದವರು, ಇತ್ತಿಚೆಗೆ ಮರಾಠಿ ಮಹಿಳಾ ಸಾಹಿತ್ಯದಲ್ಲಿ ಪ್ರಕಟವಾಗುತ್ತಿರುವ ಆತ್ಮಚರಿತ್ರೆ ಅಥವಾ ಆತ್ಮಕಥೆಗಳು, ಓದುಗರನ್ನು ಬೆಚ್ಚಿ ಬೀಳಿಸುತ್ತಿವೆ. ಯಾವ ಮುಲಾಜೂ ಇಲ್ಲದೇ, ನಿಸ್ಸಂಕೋಚವಾಗಿ , ನಿಭರ್ೀತರಾಗಿ ಬರೆಯುತ್ತಿರುವ ಅಲ್ಲಿಯ ಹೆಣ್ಣುಮಕ್ಕಳು ವಿಶೇಷವಾಗಿದ ಧಾಡಸೀತನದಿಂದಾಗಿ ಮಹಿಳಾ ಸಾಹಿತ್ಯದಲ್ಲಿ ಒಂದು ಹೊಸ ಸಂಚಲನೆಯನ್ನುಂಟು ಮಾಡಿದ್ದಾರೆ.
ಇದೆಲ್ಲಾ ಕನ್ನಡದಲ್ಲೇಕೆ ಇನ್ನೂ ಸಾಧ್ಯವಾಗಿಲ್ಲ? ಎಂಬ ಪ್ರಶ್ನೆ ಪದೇ ಪದೇ ನಮಗೆದುರಾಗುತ್ತಿದೆ. ಉತ್ತರಗಳ ದಟ್ಟಣೆ ಅಧಿಕವಾಗಿದೆ. ನಾನು ಕೆಲವನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಇತ್ತೀಚೆಗೆ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ, 'ಶತಮಾನದ ಮಹಿಳಾ ಕಾವ್ಯ' ಎಂಬ ಕೃತಿಯನ್ನು ಸಂಪಾದಿಸಿಕೊಟ್ಟೆ. ಅದಿನ್ನೂ ಪ್ರಕಟಣೆಯ ಹಂತದಲ್ಲಿದೆ. ಅದಕ್ಕೊಂದು ಸುಧೀರ್ಘ ಪ್ರಸ್ತಾವಣೆಯನ್ನು ಬರೆದಿದ್ದೇನೆ. ಅಲ್ಲಿಯ ಮಾತುಗಳು ಇಲ್ಲಿಯೂ ಪ್ರಸ್ತುತವಾಗುವುದರಿಮದ ಕೆಲವನ್ನು ಎತ್ತಿಕೊಂಡಿದ್ದೇನೆ.
ಕನ್ನಡದಲ್ಲಿ ಸಂದರ್ಭದಲ್ಲಿ ಬರೆದಿರುವ, ಬರೆಯುತ್ತಿರುವ ಹೆಣ್ಣುಮಕ್ಕಳೆಲ್ಲ ಕೌಟುಂಬಿಕ ಜವಾಬ್ದಾರಿಗಳನ್ನು ಹೊತ್ತುಕೊಂಡೇ ಇದ್ದವರು. ಕೌಟುಂಬಿಕ ಬದ್ಧತೆ, ಹೆಣ್ಣಿಗೆ ಹೇರಿದ ಅನಿವಾರ್ಯ ಹೊಣೆ. ಅವಳಿಗೆ ಕುಟುಂಬವೇ ವಿಶ್ವ. ಆದರೆ ಗಂಡಿಗೆ, ಹೆಣ್ಣು ಕೇವಲ ಅವನ ವಿಶ್ವದ ಒಂದು ಘಟಕ ಮಾತ್ರ. ಅವಳಷ್ಟು ತೀವ್ರವಾಗಿ ಅವನು ತನ್ನನ್ನು ಕುಟುಂಬಕ್ಕೆ ಕಟ್ಟಿಕೊಳ್ಳಲಾರ. ಅದು ಅವನ ಜಾಯಮಾನವೇ ಅಲ್ಲ. ಗಂಡಸಿಗೆ, ತಾನು ಗಂಡಸಾಗಿರುವುದೇ ಒಂದು ಅಹಂಕಾರ (ಈಗೋ) ಇದು ಈಗೋ-ಆಗೋ ಹೋಗುವಂಥದ್ದಲ್ಲ. ಈ ಅಹಂನ ಜಗತ್ತಿನಲ್ಲಿ, ಅನಿಗೆ ಅವನ ಅಂತಸ್ತು, ಸಂಪತ್ತು, ಸ್ನೇಹಗಳಿಗೆ ಪ್ರಥಮ ಆದ್ಯತೆ, ಹೆಂಡತಿ-ಮಕ್ಕಳು, ಅವನ ವಿಶ್ವ ಸಂಚಾರದ ನದಿಯ ಎರಡು ದಡಗಳು ಮಾತ್ರ. ನದಿಯ ರಭಸಕ್ಕೆ ಬೆರಗಾಗುವ ಲೋಕ, ಅದನ್ನು ತೋಳಿನೊಳಗೆ ರಕ್ಷಿಸಿದ ದಡಗಳನ್ನು ಎಲ್ಲಿ ಗಮನಿಸುತ್ತದೆ? ದಡಗಳಿಗಾದರೂ, 'ಲೋಕ ತನ್ನನ್ನು ಕಂಡು ಬಎರಗಾಗಲೀ' ಎಂದು ಎಲ್ಲಿರುತ್ತದೆ? ಅದರ ಲಕ್ಷ್ಯವೆಲ್ಲ ತನ್ನ ತಾಯ್ತನದ ಸಂಭ್ರಮದಲ್ಲಿ ತಲ್ಲೀನವಾಗಿರುತ್ತದೆ. ತನ್ನ ತೋಳದಂಡೆಗಳಲ್ಲಿ ಕುಟುಂಬವನ್ನು ಸಂರಕ್ಷಿಸುವಲ್ಲೇ ಇಡೀ ತನ್ನ ಶಕ್ತಿ-ಚೈತನ್ಯಗಳನ್ನು ಧಾರೆ ಎರೆಯುತ್ತದೆ.
ಆದರೆ ಕುಟುಂಬದ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು, ಅವಳೂ ಹೆಗಲು ಕೊಡಲೂ ಉದ್ಯೋಗಿಯಾಗಬೇಕಾಗುತ್ತದೆ. ಆಧುನಿಕ ಜೀವನ ಶೈಲಿಗೆ ಉದ್ಯೋಗ ಅನಿವಾರ್ಯವಾದಾಗ ಅದು ಅವಳ ಬದುಕಿನ ಚೈತನ್ಯವನ್ನು ಒಳಗೊಳಗೇ ಖಾಲಿ ಮಾಡುತ್ತದೆ. ಹೈರಾಣು ಮಾಡುತ್ತದೆ. ಈಗ ಎರಡು ದೋಣಿಯ ಪ್ರಯಾಣದಲ್ಲಿ ಏಕಾಂತ, ಏಕಾಗ್ರತೆ, ಅನನ್ಯತೆಗಳು, ಅಲಭ್ಯವಾಗುವ ಕಾರಣ ಮತ್ತೆ ಮತ್ತೆ ಈ ಕೌಟುಂಬಿಕ- ಔದ್ಯೋಗಿಕ ಸುಳಿಗಳಲ್ಲಿ ಸುತ್ತತೊಡಗುವ ಸಾಹಿತ್ಯದ ಶಿಲ್ಪ ಅನೇಕಬಾರಿ ಶಿಥಿಲಗೊಳ್ಳುತ್ತದೆ. ಮಾನಸಿಕ-ದೈಹಿಕ ದಣಿವುಗಳು, ಸೃಜನಶೀಲ ಉಲ್ಲಾಸವನ್ನು ಕೊಂದು ಹಾಕುತ್ತವೆ.
ಪುರುಷ ಪ್ರಧಾನ ವ್ಯವಸ್ಥೆಯ, ಔದ್ಯಮಿಕ ಕ್ಷೇತ್ರ ಅವಳ ಪ್ರತಿಭೆಯನ್ನು ತುಳಿದು ಹಾಕಲು ಯತ್ನಿಸುತ್ತದೆ. ಇಂಥಲ್ಲಿ ಲೈಂಗಿಕ ಶೋಷಣೆಯ ಸಮಸ್ಯೆಗಳು ಇಂದು ಜಾಗತಿಕ ಮಟ್ಟದಲ್ಲಿ ಚಚರ್ೆಯಾಗುತ್ತಿವೆ. ದಿಟ್ಟವಗಿ, ಬದುಕುವ ಬರೆಯುವ ಹೆಣ್ಣನ್ನು ಈ ವ್ಯವಸ್ಥೆ ಹಿಂಡಿ ಪಿಂಡಿ ಮಾಡಿ ಬಿಡುತ್ತದೆ. (ಹೈದ್ರಾಬಾದ್ನಲ್ಲಿ ತಸ್ಲೀಮಾ ನಸ್ರೀಂ ಮೇಲೆ ದಿನಾಂಕ: 09-08-2007 ರಲ್ಲಿ ಹಲ್ಲೆನಡೆಯಿತು) ಇವೆಲ್ಲವುಗಳ ಜೊತೆಗೆ, ಬಸಿರು-ಬಾಣಂತನ-ಶಿಶುಪಾಲನೆಗಳು, ಅವಳ ಶಕ್ತಿ-ಸಮಯಗಳ ಬಹುಪಾಲನ್ನು ಕಬಳಿಸುತ್ತವೆ. ಹೊರಜಗತ್ತಿಗೆ ತೆರೆದುಕೊಳ್ಳಲು ಅವಳಿಗೆ ಸಾಧ್ಯವೇ ಆಗುವುದಿಲ್ಲ.
ಆದರೂ ಕೌಟುಂಬಿಕ ಚೌಕಟ್ಟಿನಲ್ಲಿ, ಗಂಡ-ಹೆಂಡತಿಯರ ಮನೋಭೂಮಿಕೆಗಳ ತಾಕಲಾಟಗಳು- ಮಧ್ಯವಯಸ್ಸಕ ಮಹಿಳೆಯರ ಚಡಪಡಿಕೆಗಳು, ದೈಹಿಕ ತುಡಿತಗಳು, ದೇಹ-ಮನಸ್ಸುಗಳ ಸೆಳೆತಗಳು, ವಿವಾಹಬಾಹಿರ ಸಂಬಂಧಗಳ ಜಟಿಲತೆಗಳು, ಸ್ತ್ರೀ-ಪುರಷರ ಭೌದ್ಧಿಕ ಸೌಹಚರ್ಯಗಳು, ಹೆಣ್ತನದ-ತಾಯ್ತನದ ವಿಶಿಷ್ಟಾ ಸ್ಪಂದನೆಗಳು ಇವೆಲ್ಲವುಗಳು ಕುರಿತು ನಾವಿನ್ನೂ ಮುಕ್ತವಾಗಿ ಬರೆದಿಲ್ಲ. ಅಮೆರಿಕನ್ ಲೇಖಕಿ 'ಲಾರಾ ಇಂಗಲ್ಸ್ ವೈಡರ್' 10 ಸಂಪುಟಗಳಲ್ಲಿ ತನ್ನ ಕುಟುಂಬದ ವಿಷಯವನ್ನೇ ಮನಮುಟ್ಟುವಂತೆ ಬರೆದು ವಿಶ್ವ ಪ್ರಸಿದ್ಧಳಾಗಿದ್ದಾಳೆ.
ಇವೆಲ್ಲವನ್ನೂ ಒಳಗೊಂಡು ಮಹಿಳಾ ಸಾಹಿತ್ಯದ ಸಾಧನೆ ಸಣ್ಣದೇನಲ್ಲ. ಇದನ್ನು ಡಾ|ಚಂದ್ರಶೇಖರ್ ಕಂಬಾರ ಅವರ ಮಾತುಗಳಿಂದ ಪುಷ್ಟೀಕರಿಸಬಹುದು. ಇಂದು ಪುರುಷ ಸಾಹಿತಿಗಳಿಗಿಂತ, ಮಹಿಳಾ ಸಾಹಿತಿಗಳು ಬದುಕನ್ನು ಭಿನ್ನವಾಗಿ ನೋಡುವ ಮೂಲಕ ಹೆಚ್ಚು ಸೃಜನಶೀಲರಾಗುತ್ತಿದ್ದಾರೆ. ಮಹಿಳೆಯರು ಪುರುಷರಿಗಿಂತ ಭಿನ್ನವಾಗಿ, ಭಾಷೆ-ಬದುಕನ್ನು ನೋಡುವುದರ ಮೂಲಕ ತಮ್ಮ ಸ್ವಂತಿಕೆಯನ್ನು ಹೆಚ್ಚು ಸ್ಪಷ್ಟಪಡಿಸುತ್ತಿದ್ದಾರೆ. ಕನ್ನಡ ಲೇಖಕಿಯರ, ಸ್ತ್ರೀ ಸಂವೇದನೆಯ ಸಾಹಿತ್ಯ ಪ್ರಕಾರಗಳು, ಹೆಚ್ಚು ಮೌಖಿಕವಾಗಿ ಮೂಡಿ ಬರುತ್ತಿವೆ. ಅವುಗಳನ್ನು ಯಾವ ವಿಮರ್ಶಕರೂ, ಲಘುವಾಗಿ ಪರಿಗಣಿಸುವಂತಿಲಲ್. (ಪ್ರಜಾವಾಣಿ.ದಿ.13.01.2004)
ಬ್ರೇಕಿಂಗ್ ನ್ಯೂಸ್ .....
6:33 PM
Posted by ಆಲೆಮನೆ
ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಉತ್ತರ ಕರ್ನಾಟಕದ ಗದಗದಲ್ಲಿ. ಉತ್ತರ ಕರ್ನಾಟಕಕ್ಕೆ ನಮ್ಮ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿರುವುದೂ, ಆ ಭಾಗ ಅಭಿವೃದ್ಧಿಯಿಂದ ವಂಚಿತವಾಗಿ ಸೊರಗುತ್ತಿರುವುದು ನಾವೆಲ್ಲರೂ ಬಲ್ಲ ವಿಚಾರವೇ. ಇದೆ ಪ್ರತ್ಯೇಕ ರಾಜ್ಯದ ಕೂಗೇಳುವಂತೆ ಮಾಡಿದೆ.ಈ ಹಿನ್ನಲೆಯಲ್ಲಿ ಕನ್ನಡದ ಹಿರಿಯ ಚೇತನ ಡಾ. ಪಾಟೀಲ ಪುಟ್ಟಪ್ಪ `ಕರ್ನಾಟಕ ಇಂದು ಏನಾಗಬೇಕಿದೆ?' ಎಂದು ಮಾರ್ಗದರ್ಶನ ಮಾಡಿದ್ದಾರೆ.ನಾಳೆ ನಿರೀಕ್ಷಿಸಿ.......ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವವರು ಕರುನಾಡ ಹಿರಿಯಕ್ಕನಂತಹ ಗೀತ ನಾಗಭೂಷಣ್ರವರು. ಸಾಹಿತಿಗಳು ಅಂದರೆ ನಮಗೆ ಮೊದಲು ಬರುವ ಚಿತ್ರವೇ ಜುಬ್ಬಾ, ಪೈಜಾಮ, ಗಡ್ಡ,....ಆ ಕಲ್ಪನೆಯಲ್ಲಿ ಸೀರೆ ಏಕಿಲ್ಲ ಎಂಬುದರ ಕುರಿತು ಶಶಿಕಲ ವೀರಯ್ಯಸ್ವಾಮಿಯವರು ಚರ್ಚಿಸಲಿದ್ದಾರೆ.ನಾಳೆ ನಿರೀಕ್ಷಿಸಿ.......
ಸಾಹಿತ್ಯ ಮತ್ತು ಪ್ರಭುತ್ವ
5:42 AM
Posted by ಆಲೆಮನೆ
ನಾನು ವಿಷಯ ಪ್ರವೇಶವನ್ನು 80 ರ ದಶಕದಿಂದ ಮಾಡುತ್ತೇನೆ. ಯಾಕೆಂದರೆ ಎಂಬತ್ತರ ದಶಕದ ನಂತರದ ಬಹುತೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಒಬ್ಬ ಪತ್ರಕರ್ತನಾಗಿ ನಾನು ಪಾಲ್ಗೊಂಡಿದ್ದೇನೆ. ಈ ನನ್ನ ಅನುಭವದಲ್ಲಿ ಕೆಲವು ಸಾಹಿತ್ಯ ಸಮ್ಮೇಳನಗಳು ನಾನು ಹೇಳಲು ಹೊರಟಿರುವ ವಿಷಯಕ್ಕೆ ಬೇಕಾದ ಪೂರ್ವಭಾವಿ ವಿಚಾರಗಳನ್ನು ಒದಗಿಸುತ್ತವೆ. ಆಗ ರಾಮಕೃಷ್ಣ ಹೆಗಡೆ ರಾಜ್ಯದ ಮುಖ್ಯಮಂತ್ರಿ. ಅವರ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಎಚ್. ಡಿ. ದೇವೇಗೌಡರು ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ್ದು ಸಮಾರೋಪ ಭಾಷಣ. ಆ ಭಾಷಣದಲ್ಲಿ ಅವರು ಪ್ರಸಕ್ತ ರಾಜಕೀಯ ಪರಿಸ್ಥಿತಿಂನ್ನು ಸಾಹಿತ್ಯದ ಮೂಲಕ ಪ್ರಸ್ತುತ ಪಡಿಸಿದ್ದರು. ಅದು ಸಾಹಿತ್ಯ ವಿಮರ್ಶೆಯೂ ಆಗಿತ್ತು. ರಾಜಕೀಯ ವಿಮರ್ಶೆಯೂ ಆಗಿತ್ತು. ಸಾಹಿತ್ಯ ಮತ್ತು ರಾಜಕೀಯದ ನಡುವಿನ ಸೂಕ್ಶ್ಮ ಸಂಬಂಧ ಮತ್ತು ಇದಕ್ಕೆ ಪೂರಕವಾಗಿರುವ, ವಿರೋಧವಾಗಿರುವ ಅಂಶಗಳನ್ನು ಹೊರಗಿಟ್ಟು ನೋಡಿದರೆ ಅದೊಂದು ಅಧ್ಬುತ ಭಾಷಣ. ಆದರೆ ನನಗೆ ಮೂಡಿದ್ದ ಪ್ರಶ್ನೆ ಎಂದರೆ ಸಾಹಿತ್ಯ ಜಾತ್ರೆಯನ್ನು- ಸಾಹಿತ್ಯ ಸಮ್ಮೇಳಗಳು ಸಾಹಿತ್ಯ ಜಾತ್ರೆ ಎಂದೇ ಕರೆಯುವುದು ಸೂಕ್ತ_ ಹೀಗೆ ರಾಜಕೀಯಕ್ಕೆ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು. ಆದರೆ ಇಲ್ಲಿ ಇನ್ನೂ ಕೆಲವು ಪ್ರಶ್ನೆಗಳಿವೆ. ಕನ್ನಡ ಸಾಹಿತ್ಯದ ಇತಿಹಾಸವನ್ನು ಗಮನಿಸಿದರೆ ಅದು ಪ್ರಭುತ್ವವನ್ನು ಬಿಟ್ಟು ಇಲ್ಲ. ಹಳೆಗನ್ನಡದ ಬಹುತೇಕ ಕವಿಗಳು ರಾಜಾಶ್ರಯ ಪಡೆದವರೇ. ಆ ಮೂಲಕ ಕಾವ್ಯವನ್ನು ರಚಿಸುತ್ತ ಬಂದವರು. ಆಯಾ ರಾಜರಿಗೆ ವಂದಿ ಮಾಗಧರಾಗಿ ಕೆಲಸ ಮಾಡುತ್ತ ಬಂದವರು. ಪ್ರಾಯಶಃ ರಾಜಶ್ರಯ ಇಲ್ಲದಿದ್ದರೆ ಹಳೆ ಗನ್ನಡ ಸಾಹಿತ್ಯ ಇಷ್ಟು ಸಮೃದ್ಧವಾಗಿ ಬೆಳೆಯುತ್ತಲೇ ಇರಲಿಲ್ಲ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಪರಿಸ್ಥಿತಿ ಬದಲಾಗಿತ್ತು. ಸಾಹಿತ್ಯ ರೊಮ್ಯಾಂಟಿಕ್ ಕಾವ್ಯಗಳತ್ತ ಹೊರಳಿತ್ತು. ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಆಗ ಅಷ್ಟು ಮುಖ್ಯವಾಗಿರಲಿಲ್ಲ. ಆದರೆ ಕೆಲವರ ಬ?ಹಗಳಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಬಗೆಗಿನ ಪ್ರೀತಿ ಮತ್ತು ಬ್ರಿಟೀಷ್ ಆಡಳಿತವ ವಿರುದ್ಧದ ಪ್ರತಿರೋಧ ವ್ಯಕ್ತವಾಗಿದ್ದು ಉಂಟು. ಆದರೆ ಅದು ಕನ್ನಡ ಸಾಹಿತ್ಯದ ಸ್ಥಾಯಿ ಭಾಗವಾಗಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಪರಿಸ್ಥಿತಿ ಬದಲಾಯಿತು. ನವೋದಯ ನವ್ಯದ ನಂತರದ ಬಂಡಾಯ ಮತ್ತು ದಲಿತ ಸಾಹಿತ್ಯಗಳು ಸಮಾಜಮುಖಿಯಾದವು. ಕಾವ್ಯ ಖಡ್ಗವಾಗುವ ಮಾತುಗಳು ಕೇಳಿಬಂದವು. ರೈತ ಗೀತೆಗಳು ಮೊಳಗತೊಡಗಿದವು. ಪ್ರತಿಭಟನೆಯ ಧ್ವನಿ ಇನ್ನಷ್ಟು ಗಟ್ಟಿಯಾಯಿತು. ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಸರಳವಾದುದಲ್ಲ. ಇವೆರಡರ ನಡುವಿನ ಸಂಬಂಧ ಹೇಗಿರಬೇಕು ಎಂದು ನಿರ್ಧರಿಸುವುದಕ್ಕೆ ಮೊದಲು ಸಾಹಿತ್ಯದ ಉದ್ದೇಶದ ಬಗ್ಗೆ ಸ್ಪಷ್ಟತೆ ಬೇಕು. ಹಳೆಗನ್ನಡದ ಸಂದರ್ಭದಲ್ಲಿ ಸಾಹಿತ್ಯದ ಉದ್ದೇಶ ಸಾಮಾಜಿಕ ಬದಲಾವಣೆ ಆಗಿರಲ್ಲಿಲ್ಲ. ಸಾಮಾಜಿಕ ಬದ್ಧತೆ ಎಂಬ ಮಾತಿಗೆ ಆಗ ಅರ್ಥ ಇರಲಿಲ್ಲ. ಆಗಿನ ಕಾವ್ಯ ಪ್ರಪಂಚವೇ ಬೇರೆ. ಆದ್ದರಿಂದ ಅಂದಿನ ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧವನ್ನು ಈ ಕಾಲ ಘಟ್ಟದಲ್ಲಿ ವಿಶ್ಳೇಷಿಸುವುದು ಸಮಂಜಸವಲ್ಲ. ಒಂದೊಮ್ಮೆ ಈಗ ವಿಶ್ಳೇಷಿಸಿದರೂ ಇಂದಿನ ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧದ ಮಾನದಂಡವನ್ನು ಬಳಸುವುದು ಸಾಧ್ಯವಿಲ್ಲ. ಯಾವಾಗ ಸಾಹಿತ್ಯ ಸಮಾಜಮುಖಿಯಾಗುತ್ತದೆಯೋ ಆಗ ಸಾಹಿತ್ಯ ಮತ್ತು ಪ್ರಭುತ್ವದ ನಡುವಿನ ಸಂಬಂಧ ಬೇರೆ ಆಯಾಮವನ್ನು ಪಡೆದುಕೊಳ್ಳುತ್ತದೆ. ಹಾಗೆ ಸಾಹಿತ್ಯದ ಉದ್ದೇಶ ಸಾಮಾಜಿಕ ಬದಲಾವಣೆ ಎಂದಾಗುತ್ತದೆಯೋ ಆಗ ಸಾಹಿತ್ಯ ಮತ್ತು ಪ್ರಭೂತ್ವದ ಸಂಬಂಧವನ್ನು ಬೇರೆ ರೀತಿಯಲ್ಲಿ ನೋಡಬೇಕಾಗುತ್ತದೆ. ಸಾಹಿತ್ಯದ ಉದ್ದೇಶ ಮನರಂಜನೆಯೋ, ಮನಸ್ಸನ್ನು ಮುದಗೊಳಿಸುವುದೋ ಆಗಿದ್ದರೆ, ಆಗ ಸಾಹಿತ್ಯ ಮಾತು ಪ್ರಭುತ್ವದ ಸಂಬಂಧವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಕನ್ನಡಲ್ಲಿ ಪ್ರತಿಭಟನೆಯ ಕಾವ್ಯಕ್ಕೂ ದೀರ್ಘವಾದ ಇತಿಹಾಸವಿದೆ. ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಇದ್ದುಕೊಂಡೇ ತನ್ನ ವಚನಗಳ ಮೂಲಕ ಹೊಸ ಕ್ಫ್ರಂತಿಯ ಬೀಜವನ್ನು ಬಿತ್ತಿದ. ಹಾಗೆ ನಂತರ ಬಂದ ದಾಸ ಸಾಹಿತ್ಯ ಕೂಡ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಬದಲಾವಣೆಯ ಕನಸನ್ನು ಕಂಡಿತ್ತು ಎಂಬುದನ್ನು ನೆನಪಿಟ್ಟುಕೊಂಡರೆ ಸಾಹಿತ್ಯದ ಉದ್ದೇಶದ ಬಗೆಗಿನ ನಮ್ಮ ಚರ್ಚೆಗೆ ಹೊಸ ಆಯಾಮ ದೊರಕುತ್ತದೆ. ಹಾಗೆ ಸಾಹಿತ್ಯದ ಉದ್ದೇಶ ಸಾಮಾಜಿಕ ಬದಲಾವಣೆಯೂ ಆಗಿರಬೇಕು ಎಂಬ ವಾದಕ್ಕೆ ಪುಷ್ಟಿ ದೊರಕುತ್ತದೆ. ಸಾಹಿತ್ಯ ಸಮಾಜದ ಪ್ರತಿಬಿಂಬವೇ ಆಗಿದೆ. ಹೀಗಾಗಿ ಸಮಾಜದ ಆಗುಹೋಗುಗಳಿಗೆ ಸಾಹಿತ್ಯಿಕವಾಗಿ ಪ್ರತಿಕ್ರಿಯಿಸುವುದು ಸಾಹಿತ್ಯದ ಕರ್ತವ್ಯ ಎಂದು ಸ್ಪಷ್ಟಪಡಿಸುತ್ತೇನೆ. ಈ ಮಾತುಗಳೊಂದಿಗೆ ನಾವು ಸಾಹಿತ್ಯ ಸಮ್ಮೇಳನಗಳು ಮತ್ತು ರಾಜಕೀಯದ ನಡುವಿನ ಸಂಬಂಧದ ಪ್ರಶ್ನೆಯನ್ನು ಕೈಗೆತ್ತಿಕೊಳ್ಳಬಹುದು. ನಾನು ಮೊದಲು ಹೇಳಿದ ಹಾಗೆ, ಸಾಹಿತ್ಯ ಸಮ್ಮೇಳನಗಳು ಸಾಹಿತ್ಯಿಕ ಜಾತ್ರೆ. ಜಾತ್ರೆಯಲ್ಲಿ ಸಂಭ್ರಮ ಇರುತ್ತದೆ. ಇಂತಹ ಸಂಭ್ರಮವನ್ನು ಸಾಹಿತ್ಯ ಸಮ್ಮೇಳನಗಳು ಕನ್ನಡ ನಾಡ ಜನತೆಗೆ ನೀಡುತ್ತವೆ. ಹೀಗೆ ಸಂಭ್ರಮಿಸುವುದಕ್ಕೆ ವೆಚ್ಚ ಮಾಡುವುದಕ್ಕೆ ಸರ್ಕಾರದ ಹಣ ಬೇಕು. ಶಾಸಕರು ಸಚಿವರು ಬೇಕು. ಅವರನ್ನು ವೇದಿಕೆಯ ಮೇಲೆ ಕೂಡ್ರಿಸಿ ಹರ ತುರಾಯಿ ಕೊಟ್ಟು ಗೌರವಿಸಬೇಕು. ಯಾಕೆಂದರೆ ಜಾತ್ರೆಯ ಬೇಕಾದ ವ್ಯವಸ್ಥೆಗೆ ಬೇಕಾದ ಹಣವನ್ನು ನೀಡಿದವರು ಅವರು. ಇದೆಲ್ಲ ಸರಿ, ಆದರೆ ಭ್ರಷ್ಟಾಚಾರಿಗಳು ತಲೆ ಹಿಡುಕರು, ಅಧಿಕಾರ ಹಿಡಿದಿರುವ ಸಂದರ್ಭದಲ್ಲಿ ಅವರನ್ನು ಮೆರೆಸುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಬದ್ಧತೆ ಮತ್ತು ಬದಲಾವಣೆಯ ಸಾಹಿತ್ಯಿಕ ಉದ್ದೇಶದ ಗತಿ ಏನಾಗುತ್ತದೆ ? ಈ ಬಗ್ಗೆ ಸರಸ್ವತಿ ಪುತ್ರರು, ಆರಾಧಕರು ಆಲೋಚಿಸಲೇಬೇಕಾಗುತ್ತದೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂದು ಹೊರಾಟದ ಕನಸನ್ನು ಬಿತ್ತಿದವರು ಅಧಿಕಾರಸ್ಥರ ಪಕ್ಕದಲ್ಲಿ ವಿರಾಜಮಾನರಾದರೆ ಅವರ ಮಾತುಗಳ ಬಗ್ಗೆ ಬರಹದ ಬಗ್ಗೆ ಅಪನಂಬಿಕೆ ಬರುತ್ತದೆ. ಈಗ ಆಗುತ್ತಿರುವುದೂ ಅದೇ. ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಎಲ್ಲೋ ಮೂಲೆ ಸೇರಿರುತ್ತದೆ. ಸಾಹಿತ್ಯಕ ಚರ್ಚೆಗಳು ಅರ್ಥ ಕಳೆದುಕೊಂದಿರುತ್ತವೆ. ಭಾರೀ ವಿಜ್ರಂಭಣೆಯಿಂದ ನಡೆಯುವ ಮದುವೆಗಳ ಹಾಗೆ, ಊರ ಜಾತ್ರೆಯ ಹಾಗೆ, ಮಾರಿ ಹಬ್ಬದ ಹಾಗೆ ಈ ಸಮ್ಮೇಳನಗಳು ನಡೆಯುತ್ತವೆ. ಸಾಹಿತಿಗಳು, ರಾಜಕಾರಣಿಗಳಿಗೆ ಹತ್ತಿರವಾಗಲು ಸಮ್ಮೇಳನಗಳನ್ನು ಬಳಸಿಕೊಳ್ಳುತ್ತಾರೆ. ರಾಜಕಾರಣಿಗಳು ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇದನ್ನು ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಾರೆ. ಸಾಹಿತ್ಯ ಸಮ್ಮೇಳನಗಳು ವಾರ್ಷಿಕವಾಗಿ ನಡೆಯುವ ತಿಥಿಯಂತಾಗಿವೆ. ಇದನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂಬುದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಉದ್ದೇಶ. ಯಾವುದೇ ಒಂದು ಕ್ರಿಯೆ ಸಂಪ್ರದಾಯವಾದರೆ ಅದು ಅರ್ಥ ಕಳೆದುಕೊಳ್ಳುತ್ತದೆ. ಅಲ್ಲಿ ಕ್ರಿಯಾಶೀಲತೆ ಮರೆಯಾಗುತ್ತದೆ. ಎಲ್ಲರೂ ಮಾಡುವುದನ್ನು ಮಾಡಿ ಮುಗಿಸುವುದಕ್ಕೆ ಮಾತ್ರ ಸೀಮಿತರಾಗುತ್ತಾರೆ. ಒಂದೇ ರೀತಿಯ ಘೋಷ್ಟಿಗಳು, ಅಧ್ಯಕ್ಷರ ಮೆರವಣಿಗೆ ಭಾಷಣ, ಊಟ ತಿಂಡಿ, ಪುಸ್ತಕ ಪ್ರದರ್ಶನ. ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಪುನರಾವಲೋಕನ ಮಾಡಬೇಕಿದೆ. ಸಾಹಿತ್ಯದ ಉದ್ದೇಶದ ಬಗ್ಗೆ ಸ್ಪಷ್ಟತೆ ಬೇಕು. ಆಗ ಸಾಹಿತ್ಯ ಮತ್ತು ಪ್ರಭೂತ್ವದ ನಡುವಿನ ಸಂಬಂಧದ ಬಗ್ಗೆಯೂ ಸ್ಪಷ್ಟತೆ ದೊರಕುತ್ತದೆ. ಕೊನೆಯದಾಗಿ ಇನ್ನೊಂದು ಮಾತು; ಅದು ಹಾಸನ ಸಾಹಿತ್ಯ ಸಮ್ಮೇಳನದ ಸಂದರ್ಭ. ಅಲ್ಲಿ ಬಹುತೇಕ ಮಠಾಧಿಪತಿಗಳೇ ವೇದಿಕಯ ಮೇಲೆ ವಿರಾಜಮಾನರಾಗಿದ್ದರು. ಅವರು ನಡುವೆ ಸಿಕ್ಕಿಕೊಂಡ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರು. ಅವರು ವೇದಿಕೆಯಿಂದ ಕೆಳಕ್ಕೆ ಇಳಿದು ಬಂದ ಮೇಲೆ ಮಠಾಧಿಪತಿಗಳ ಸಾಂಗತ್ಯ ಹೇಗಿತ್ತು? ಎಂದು ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದೆ. ಅವರು ಸುಮ್ಮನೆ ನಕ್ಕರು. ಈ ಸಾಹಿತ್ಯ ಸಮ್ಮೇಳನ ಮಠ ಮಾನ್ಯಗಳನ್ನು ವಿರೋಧಿಸುತ್ತಲೇ ಬಂದ ಪಾಟೀಲರನ್ನು ಮಠಾಧಿಪತಿಗಳ ಹತ್ತಿರ ತಂದಿತ್ತು ! ಇಂದಿನ ಸಾಹಿತ್ಯ ಜಾತ್ರೆ ಎಂತಹ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ನೈಜ ಉದಾಹರಣೆ ಎಂದು ನಾನು ಅಂದುಕೊಂಡಿದ್ದೇನೆ.
ಬ್ರೇಕಿಂಗ್ ನ್ಯೂಸ್ .....
6:38 AM
Posted by ಆಲೆಮನೆ
ಶಶಿಧರ್ ಭಟ್ - ಕನ್ನಡ ಪತ್ರಿಕೋದ್ಯಮದ ಹಿರಿ ತಲೆ. ಸುವರ್ಣ ನ್ಯೂಸ್ಗೆ ಒಂದು ಭದ್ರ ತಳಪಾಯ ಹಾಕಿಕೊಟ್ಟು ಈಗ ಜುಪಿಟರ್ ನೆಟ್ವರ್ಕ್ಸ್ನಲ್ಲಿದ್ದಾರೆ. ಅವರ ಅನುಭವ ಅಪಾರ. ೮೦ರ ದಶಕದಿಂದೀಚೆಗಿನ ಸಾಹಿತ್ಯ ಸಮ್ಮೇಳನಗಳ ಹಿನ್ನಲೆಯಲ್ಲಿ ಅವರು ಸಾಹಿತ್ಯ ಮತ್ತು ರಾಜಕೀಯದ ಸೂಕ್ಷ್ಮ ಸಂಬಂಧದ ಕುರಿತು ಮನೋಜ್ಞವಾಗಿ ಚರ್ಚಿಸಲಿದ್ದಾರೆ.
ನಾಳೆ ನಿರೀಕ್ಷಿಸಿ......
ನಿಶ್ಶಬ್ದದ ಭೀತಿ
7:15 PM
Posted by ಆಲೆಮನೆ
ಏನ್.ಎಸ. ಶಂಕರ್ - ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ, ಇನ್ನೂ ಏನೇನೋ .........
ನಮ್ಮ ಇಂದಿನ ಸಮಾಜದಲ್ಲಿ ಬೃಹದಾಕಾರವಾಗಿ ಎದ್ದಿರುವ ಮೌನದ ಗೋಡೆಗಳ ಕುರಿತು ಬರೆದಿದ್ದಾರೆ. ಚರ್ಚೆ, ಸಂವಾದಗಳಿಗೆ ತಾವೇ ಇಲ್ಲದಂತಹ ನಿಶಬ್ಧವೊಂದು ಇಂದು ಸಮಾಜದಲ್ಲಿ ಮನೆ ಮಾಡಿದೆ. ಒಬ್ಬ ಸೃಜನಶೀಲ ಏನನ್ನಾದರೂ ಬರೆದರೆ ಅದರ ಕುರಿತು ಚರ್ಚೆಯಾಗಲಿ ಎಂದು ಅಪೇಕ್ಷಿಸುವುದು ಸಹಜ. ಆದರೆ ಒಂದು ದಿವ್ಯ ನಿರ್ಲಕ್ಷ್ಯ ಅವರನ್ನು ಎದುರುಗೊಂಡಾಗ ಬರವಣಿಗೆ ಸಾರ್ಥಕವಲ್ಲ ಎನಿಸಿಬಿಡುತ್ತದೆ. ನಾವಿಂದು ಈ ಹಂತ ತಲುಪಿಬಿಟ್ಟಿರುವುದು ಮಹಾದುರಂತವೆ ಸರಿ. ಈ ಕುರಿತು ಏನ್. ಎಸ. ಶಂಕರ್ ಬರೆದ ಮಹತ್ವದ ಲೇಖನ.
ನಿಶ್ಶಬ್ದದ ಭೀತಿ
ಚೀನೀಯರು ತೊಟ್ಟು ನೀರಿನ ಶಿಕ್ಷೆ ಕಂಡು ಹಿಡಿದರೆ ಫ್ರೆಂಚರು ನಿಶ್ಶಬ್ದ ಕಂಡು ಹಿಡಿದರು ಎಂದು ಬರೆಯುತ್ತಾನೆ ಪ್ಯಾಪಿಲಾನ್.
ಪ್ರಾಚೀನ ಚೀನಾದಲ್ಲಿ ಅಪರಾಧಿಗಳಿಗೆ, ಮುಖ್ಯವಾಗಿ ಯುದ್ಧ ಕೈದಿಗಳಿಗೆ, ತಲೆ ಬೋಳಿಸಿ ಕೈ ಕಾಲು ಕಟ್ಟಿ ಕುರ್ಚಿ ಮೇಲೆ ಕೂರಿಸುವುದು; ಮೇಲಿನಿಂದ ಬೋಳು ತಲೆ ಮೇಲೆ ಒಂದೊಂದೇ ಹನಿ ನೀರು. ನಿರಂತರವಾಗಿ, ಅವ್ಯಾಹತವಾಗಿ ಗಂಟೆಗಟ್ಟಲೆ, ದಿನಗಟ್ಟಲೆ.... ಆ ಕೈದಿ ಕ್ರಮೇಣ ತಲೆ ಮೇಲೆ ಸುತ್ತಿಗೆ ಪ್ರಹಾರವಾದಂತೆ, ಬಿದ್ದ ಹನಿಗಿಂತ ಬೀಳುವ ಮುಂದಿನ ಹನಿಯ ಘೋರ ನಿರೀಕ್ಷೆಯಲ್ಲೇ ವಿಹ್ವಲನಾಗುತ್ತ ಮತಿಭ್ರಮಣೆಯ ಹಂತ ತಲುಪುತ್ತಾನೆ.
ಇದಕ್ಕಿಂತಲೂ ಭಯಾನಕವಾದದ್ದು ಫ್ರೆಂಚರ ನಿಶ್ಶಬ್ದ ಶಿಕ್ಷೆಯಂತೆ.
ತಾನು ಮಾಡದ ಕೊಲೆಯ ಆಪಾದನೆ ಹೊತ್ತು ಜೀವಾವಧಿ ಶಿಕ್ಷೆಗೆ ಗುರಿಯಾಗಿ ಭಯಾನಕ ಅಪರಾಧಿಗಳ ನಡುವೆ ಎರಡು ದಶಕಕ್ಕೂ ಹೆಚ್ಚು ಕಾಲ ಹಲವಾರು ನರಕಸದೃಶ ಜೈಲುಗಳಲ್ಲಿ ಕಳೆದು ಅನೇಕ ಬಾರಿ ತಪ್ಪಿಸಿಕೊಂಡು ಕಡೆಗೂ ಸ್ವತಂತ್ರನಾದ ಹೆನ್ರಿ ಚಾರೇರೆ ಉರುಫ್ ಪ್ಯಾಪಿಲಾನನ ಸಾಹಸ- ಆಧುನಿಕ ನಾಗರಿಕತೆಯ ಜಾನಪದ ಕತೆಯಂತಿದೆ.
ಆತನಿದ್ದ ಜೈಲುಗಳಲ್ಲಿ ಶಿಸ್ತು ಉಲ್ಲಂಘಿಸಿದವರಿಗೆ ಏಕಾಂತವಾಸದ ಶಿಕ್ಷೆ. ಆರು ತಿಂಗಳಿಂದ ಕೆಲವು ಬಾರಿ ಎರಡು ವರ್ಷಗಳವರೆಗೆ. ಅಥವಾ ಇನ್ನೂ ದೀರ್ಘಾವಧಿ . ಅಷ್ಟೂ ಕಾಲ ಒಂದು ಸಣ್ಣ ಸದ್ದೂ ಅವರ ಕಿವಿ ತಲುಪುವುದಿಲ್ಲ. ಮನುಷ್ಯ, ಪ್ರಾಣಿ, ಪಕ್ಷಿ, ಹುಳು ಹುಪ್ಪಟೆಯ ಚಹರೆಯೂ ಕಾಣುವುದಿಲ್ಲ. ಕಡೆಗೆ ಗಸ್ತು ತಿರುಗುವವರ ಹೆಜ್ಜೆ ಸಪ್ಪಳವೂ ಇಲ್ಲ. ಆಹಾರ ಕೂಡ ಅವರ ಕೋಣೆಯ ಬಾಗಿಲಿನ ಕೆಳಗಿನಿಂದ ಬರುವುದು. ಇರುವ ಒಂದೇ ಕೋಣೆಯಲ್ಲೇ ಉಚ್ಚೆ ಕಕ್ಕಸ್ಸು ಎಲ್ಲ. ಶಾಶ್ವತ ಕತ್ತಲು. ಎಲ್ಲಕ್ಕಿಂತ ಘೋರವಾದದ್ದು ಅ ಮೌನ ಎನ್ನುತ್ತಾನೆ ಪ್ಯಾಪಿಲಾನ್. ಜೀವಜಗತ್ತಿನಿಂದಲೇ ಬಹಿಷ್ಕಾರಗೊಂಡಂತೆ ಶುದ್ಧಾಂಗ ಮೌನ. ಕೆಲವೇ ತಿಂಗಳುಗಳಲ್ಲಿ ಕೈದಿ ಸತ್ತೇ ಹೋಗುತ್ತಾನೆ; ಅಥವಾ ಹುಚ್ಚು ಹಿಡಿದು ಈ ಕೊನೆಗಾಣದ ಮೌನದ ದಮನದಿಂದ ಪಾರಾಗಬೇಕು....
ನಮ್ಮ ಕಾಲದ ಭೀಕರ ದುಃಸ್ವಪ್ನವೆಂದರೆ- ಇಂಥದೇ ಮೌನ ನಮಗೆ ಎದುರಾಗಬಹುದಾದ ದಿಗಿಲು.
ಶಂಬಾ ಜೋಷಿಯವರಿಗೆ ಹೀಗೇ ಆಯಿತು. 'ಪ್ರವಾಹ ಪತಿತರ ಕರ್ಮ, ಹಿಂದೂ ಎಂಬ ಧರ್ಮ' ಎಂಬ ವ್ಯಾಖ್ಯಾನದೊಂದಿಗೆ ಹಿಂದೂ ಸಂಸ್ಕೃತಿಯ ಬೇರಿಗೆ ಕೈಯಿಟ್ಟ ಅದ್ವಿತೀಯ ಸಂಶೋಧಕ ಶಂಬಾ, ಪ್ರಾಚೀನ ಪಠ್ಯಗಳನ್ನು ಶೋಧಿಸುತ್ತ ಸಂಪ್ರದಾಯಶೀಲರು ತತ್ತರಿಸುವಂಥ ಸ್ಫೋಟಕ ಗೂಢಾರ್ಥಗಳನ್ನು ಬಿಡಿಸಿ ಹೇಳತೊಡಗಿದ ಕೂಡಲೇ ಅವರಿಗೆದುರಾದದ್ದು ವಿಮರ್ಶೆಯಲ್ಲ, ಛೀಮಾರಿಯಲ್ಲ, ಜಗಳವೂ ಅಲ್ಲ, ಎಂಥದೂ ಅಲ್ಲ. ಅವರ ಶೋಧನೆಯನ್ನು ಜೀರ್ಣಿಸಿಕೊಳ್ಳಲಾಗದ ಸಂಪ್ರದಾಯದ ಕೋಟೆ, ಶಂಬಾರನ್ನು ಸಂಪೂರ್ಣ ನಿರ್ಲಕ್ಷಿಸಿ ಮೌನದ ಮಹಾಗೋಡೆಯನ್ನೇ ಅವರೆದುರು ನಿಲ್ಲಿಸಿಬಿಟ್ಟಿತು. ಗಾಢ ಕತ್ತಲಿನಂಥ ಮೌನ. ಪರಿಣಾಮ, ತನ್ನೊಂದಿಗೆ ಮಾತಾಡುವವರೇ ಸಿಕ್ಕದ ಶಂಬಾರಿಗೆ, ಪ್ರತಿವಾದದ ಎದುರು ತನ್ನ ನೋಟವನ್ನು ಸ್ಫುಟಗೊಳಿಸಿಕೊಳ್ಳುವ, ಹರಿತಗೊಳಿಸಿಕೊಳ್ಳುವ ಅವಕಾಶವೇ ದೊರೆಯದಾಯಿತು. ಕ್ರಮೇಣ ಅವರ ಪಾಲಿಗೆ ಪಾಂಡಿತ್ಯವೇ ಪಂಜರವಾಗಿಹೋಯಿತು. ಬರಬರುತ್ತ ಶಂಬಾ ಬರವಣಿಗೆ ಬೀಜಗಣಿತದಂತೆ, ಅಭೇದ್ಯ ಕಗ್ಗದಂತೆ ಕ್ಲಿಷ್ಟವಾಯಿತು. ವಾಗ್ವಾದದಿಂದ ಪ್ರಜ್ವಲಿಸಬಹುದಿದ್ದ ಅವರ ತಿಳಿವಿನ ಜ್ಯೋತಿ ಹಾಗೇ ನಂದಿಹೋಯಿತು.
ಇಂಥ 'ಮೌನ ಪಿತೂರಿ' ನಮ್ಮಲ್ಲಿ ಎಂಥೆಂಥ ದೈತ್ಯಪ್ರತಿಭೆಗಳನ್ನೇ ನುಂಗಿಹಾಕಿದೆ ಎನ್ನಲು ಅಂಬೇಡ್ಕರ್ಗಿಂತ ಉದಾಹರಣೆ ಬೇಕಿಲ್ಲ. ಹಿಂದೂ ಸಮಾಜದ ಅಂತರಾಳವನ್ನು ಅಂಬೇಡ್ಕರರಷ್ಟು ಆಳವಾಗಿ, ಸಮಗ್ರವಾಗಿ, ವಿದ್ವತ್ಪೂರ್ಣವಾಗಿ ಸೋಸಿ ಬಯಲಿಗೆಳೆದ ಮತ್ತೊಬ್ಬರಿಲ್ಲ. ಆದರೆ ಅವರನ್ನು ದಲಿತ ನಾಯಕ ಮಾತ್ರರಾಗಿ ಕಂಡ ಭಾರತೀಯ ಚರಿತ್ರೆ, ಆ ಮೂಲಕ ಅಂಬೇಡ್ಕರ್ ಎತ್ತಿದ ಜೀವನ್ಮರಣದ ಪ್ರಶ್ನೆಗಳ ಮುಜುಗರದಿಂದ ಪಾರಾಗಿಬಿಟ್ಟಿತು. ಈಗಲೂ ಸಂವಿಧಾನ ಕರ್ತೃ, ದಲಿತ ನಾಯಕ ಎಂಬ ವಿಶೇಷಣಗಳಾಚೆ ಅಂಬೇಡ್ಕರರನ್ನು ಸ್ವೀಕರಿಸುವ ಆತ್ಮವೇ ಈ ಭವ್ಯ ದೇಶಕ್ಕಿಲ್ಲ. ನಮ್ಮ ದಲಿತರಿಗೆ ಅವರ ಫೋಟೋ ಸಾಕು, ಮಿಕ್ಕವರಿಗೆ ಅದೂ ಬೇಕಿಲ್ಲ....! ಇನ್ನು ಲೋಹಿಯಾ? ಗಾಂಧಿ, ಅಂಬೇಡ್ಕರ್ ನಂತರ ನಮ್ಮ ನಾಡು ಕಂಡ ಮಹಾನ್ ಚಿಂತಕ ಮತ್ತು ಯುಗ ಪ್ರವರ್ತಕ ರಾಮಮನೋಹರ ಲೋಹಿಯಾರ ಹೆಸರೇ ಈಗಿನ ತಲೆಮಾರಿಗೆ ಅಪರಿಚಿತ.....!
ಈ ಬಗೆಯ ಹಂತಕ ಮೌನ ಯಾವ ದೇಶದ ಚರಿತ್ರೆಯಲ್ಲೂ ಅಪರೂಪವಲ್ಲವೆಂದು ನನಗೆ ಗೊತ್ತು. ಎಲ್ಲೇ ಆದರೂ ಇಡೀ ಸಮಾಜ ಒಂದು ದಿಕ್ಕಿನಲ್ಲಿ ಮೈ ಮರೆತು ತಲೆದೂಗುವಾಗ ಬೇರೊಂದು ರಾಗ ತೆಗೆಯುವವನ ದನಿ ಅಪಸ್ವರವಾಗಿ ಮಾತ್ರ ಕೇಳಲು ಸಾಧ್ಯ. ಸ್ವತಃ ಲೋಹಿಯಾ ತಲೆ ರೋಸಿ ನನ್ನನ್ನು ಈಗ ಹುಚ್ಚನೆಂದು ನೋಡುತ್ತಿರುವವರಿಗೆ, ನಾನು ಸತ್ತ ಮೇಲೆ ನನ್ನ ಚಿಂತನೆಯ ಮಹತ್ವ ತಿಳಿಯಬಹುದು ಎಂದು ಉದ್ಗರಿಸಿದ್ದರು. ಅಂಥ ಪ್ರಖರ ಚಿಂತಕ ಮತ್ತು ಸತ್ಯವಂತನನ್ನು ವಿದೂಷಕನಾಗಿ ಕಂಡ ಅಂದಿನ ಮಾಧ್ಯಮಗಳಿಗೆ ಯಾವ ರೋಗ ಬಡಿದಿತ್ತು ಎಂದು ಅನೇಕ ಬಾರಿ ಸೋಜಿಗದಿಂದ ಕೇಳಿಕೊಂಡಿದ್ದೇನೆ.
ಆದರೆ ನಾನು ಈ ಪ್ರಶ್ನೆ ಕೇಳಿಕೊಳ್ಳಲು ಸಾಧ್ಯವಾಗಿದ್ದೇ ದೇವರಾಜ ಅರಸು ತಂದ ಆಡಳಿತಾತ್ಮಕ ಕ್ರಾಂತಿಯ ನಂತರದ ದಿನಗಳಲ್ಲಿ ಎಂಬುದನ್ನು ಮರೆಯುವಂತಿಲ್ಲ. ಆ ವೇಳೆಗಾಗಲೇ ಕರ್ನಾಟಕದಲ್ಲಿ ಬೂಸಾ ಚಳವಳಿ, ಸಮಾಜವಾದಿ ಯುವಜನ ಸಭಾ, ಬರಹಗಾರರ ಒಕ್ಕೂಟ, ಮುಂದಕ್ಕೆ ರೈತ, ದಲಿತ, ಭಾಷಾ ಚಳವಳಿಗಳ ಮಹಾನ್ ಸಂಚಲನದ ಪರ್ವವೇ ಆರಂಭವಾಗಿತ್ತು. ನನ್ನ ಸೋಜಿಗದ ಪ್ರಶ್ನೆ ಉದ್ಭವವಾಗಲು ಸಾಧ್ಯವಿದ್ದಿದ್ದೇ ಆಗ. ಆದರೆ ಲೋಹಿಯಾ ಸಾರ್ವಜನಿಕ ರಂಗಸ್ಥಳದಲ್ಲಿದ್ದ ಸಂದರ್ಭದಲ್ಲಿ ಇಡೀ ದೇಶವೇ ನೆಹರೂ ಸುತ್ತ ಸೃಷ್ಟಿಯಾಗಿದ್ದ ರಾಷ್ಟ್ರ ನಿರ್ಮಾಣದ ಭ್ರಮೆಯಲ್ಲಿ ಓಲಾಡುತ್ತಿತ್ತು ಎಂಬುದನ್ನು ನೆನೆಸಿಕೊಂಡಾಗ ಲೋಹಿಯಾ ಎದುರಿಸಿದ ದುರ್ಗಮ ಮೌನದ ತಥ್ಯ ತಿಳಿಯಬಹುದೇನೋ.
ಭಾರತೀಯರು ಒಂದು ದೇಶವಾಗಿ ಅದೇ ತಾನೇ ಸ್ವಾತಂತ್ರ್ಯ ಹೋರಾಟದ ಆಯಾಸ ಕಳೆದು ಸ್ವರಾಜ್ಯಕ್ಕೆ ಸಜ್ಜಾಗುತ್ತಿದ್ದರು. ಈ ಹೊಸ ಸ್ವಾತಂತ್ರ್ಯ ಎಲ್ಲ ಕನಸುಗಳನ್ನೂ ನನಸು ಮಾಡಬಹುದೆಂಬ ನಿರೀಕ್ಷೆ, ಭರವಸೆಗಳಿದ್ದವು. ಗಾಂಧೀಜಿ ಶಿಷ್ಯನೂ, ಉತ್ತರಾಧಿಕಾರಿಯೂ ಆದ ನೆಹರೂ- ಬಡತನ, ಹಸಿವು, ತಾರತಮ್ಯ, ನಿರುದ್ಯೋಗ ಎಲ್ಲ ಸಮಸ್ಯೆಗಳನ್ನೂ ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲರೆಂದು ಜನ ಕಣ್ಣು ಮುಚ್ಚಿ ನಂಬಿ ಕಾಯುತ್ತಿದ್ದರು. ಅಂಥ 'ನವೋದಯ'ದ ಆಶೋತ್ತರಗಳನ್ನು ದೇಶ ಮೈದುಂಬಿಕೊಂಡಿದ್ದ ಗಳಿಗೆಯಲ್ಲಿ ಲೋಹಿಯಾರ ಕಣ್ಣು ತೆರೆಸುವ ವಿರೋಧಿ ರಾಜಕಾರಣವನ್ನು ಸಹಾನುಭೂತಿಯಿಂದ ಪರಿಶೀಲಿಸುವುದು ಊಹಾತೀತವಾಗಿತ್ತು. ನೆಹರೂ ಅತ್ತ ತಮ್ಮ ಕೋಟಿನಲ್ಲಿ ಗುಲಾಬಿ ಸಿಕ್ಕಿಸಿಕೊಂಡು ರಾಷ್ಟ್ರದ ಕನಸು ಬಿತ್ತುತ್ತಿದ್ದರೆ, ಇತ್ತ ಲೋಹಿಯಾ ಸಮಾಜದ ಕರುಳು ಬಗೆದು ನೋಡುತ್ತಿದ್ದರು. ಹಾಗಾಗಿ ದೇಶದ ಕಣ್ಣಿಗೆ ಕಿರಿಕಿರಿಯ ತಂಟೆಕೋರನಾಗಿ ಮಾತ್ರ ಕಂಡರು. ಅಂಥ ಲೋಹಿಯಾ ಹೊಸ ತಿಳಿವಿನ ಹರಿಕಾರನಾಗಿ ಕಾಣಬೇಕಾದರೆ, ದೇಶದಲ್ಲಿ ನೆಹರೂ ಯುಗದ ಭ್ರಮೆಗಳೇ ತುರ್ತುಸ್ಥಿತಿಯ ಕರಾಳ ದುಃಸ್ವಪ್ನಕ್ಕೆ ದಾರಿಯಾಗಿ ದೇಶಾದ್ಯಂತ ಪ್ರತಿಭಟನೆಯ 'ಮೂಡ್' ಸೃಷ್ಟಿಯಾಗಬೇಕಾಯಿತು....!
ಈ ಮೂಡ್- ಸಾಮಾಜಿಕ ಹವೆ- ಎಂಥ ಮಾಯಕಾರ ಪದಾರ್ಥವೆಂಬುದು ಈಚೀಚೆಗೆ ನನ್ನನ್ನು ದಂಗು ಬಡಿಸುವ ಸಂಗತಿಯಾಗಿದೆ. ಉದ್ದಕ್ಕೂ ನಾವು ಸಸಿ ಹುಟ್ಟಿ, ಆ ಸಸಿ ಮರವಾಗಿ ಫಲ ನೀಡಿದ್ದನ್ನು ಮಾತ್ರ ನೋಡುತ್ತ ಬಂದಿದ್ದೇವೆಯೇ ಹೊರತು, ಆ ಸಸಿಗೆ ಜನ್ಮ ಕೊಟ್ಟ ಹದಮಣ್ಣನ್ನು ಲೆಕ್ಕಿಸಿಯೇ ಇಲ್ಲವೇನೋ ಎಂಬ ಅನುಮಾನ ನನಗೆ.
ನನ್ನ ತಲೆಮಾರಿಗೆ ಕಣ್ಣು ಕಿವಿ ಕೊಟ್ಟ 70- 80ರ ದಶಕಗಳನ್ನೇ ನೋಡಿ. ಆ ಕಾಲಘಟ್ಟದಲ್ಲಿ ನಂಜುಂಡಸ್ವಾಮಿ, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ದೇವನೂರ ಮಹಾದೇವ, ಸಿದ್ದಲಿಂಗಯ್ಯ... ಎಲ್ಲ ಕಣ್ಣು ಕೋರೈಸುವ ತಾರೆಯರೇ. ಅವರಿಗೆ ದಕ್ಕಿದ ತಾರಾಪಟ್ಟವನ್ನು ನೋಡುತ್ತ ಆನಂದಿಸಿದೆವು. ಅವರೆಲ್ಲರಿಂದ ಕಲಿತೆವು. ಅವರನ್ನು ಹೀರೋಗಳಂತೆ ಕಂಡು ಆರಾಧಿಸಿದೆವು. ಗುಂಡೂರಾಯರ ಅಂದಾದುಂದಿ ಸರ್ಕಾರ ಧೂಳೀಪಟವಾದಾಗ ಅದರ ಯಶಸ್ಸನ್ನು ಲಂಕೇಶ್ ಮತ್ತು ಅವರ ಪತ್ರಿಕೆಗೆ ಕಟ್ಟಿ ಸಂಭ್ರಮಿಸಿದೆವು. ಕಬ್ಬನ್ ಪಾರ್ಕಿನಲ್ಲಿ ಐದು ಲಕ್ಷ ಜನ ರೈತರು ಸೇರಿದಾಗ ನಂಜುಂಡಸ್ವಾಮಿಯವರ ವರ್ಚಸ್ಸನ್ನು ಬಿಡುಗಣ್ಣಾಗಿ ಕಂಡು ಕುಣಿದಾಡಿದೆವು. ಸಿದ್ದಲಿಂಗಯ್ಯನವರ ಕ್ರಾಂತಿಗೀತೆ ಕೇಳಿ ನಮ್ಮ ರೋಮಗಳೆಲ್ಲ ನಿಮಿರಿ ನಿಂತವು. ಒಟ್ಟು ಹೇಳುವುದೇನು? ಇವರ ನುಡಿಗಳಲ್ಲಿ ಈ ಸಮಾಜದ ಕದಲಿಕೆಯೇ ಸಾಕಾರಗೊಂಡಂತೆ ಭಾಸವಾಯಿತು.
ಇವರೆಲ್ಲರೂ ಹೀರೋಗಳೇ ನಿಜ. ಆದರೆ ಈ ಹೀರೋಗಿರಿಯಲ್ಲಿ ಆ ಸಮಾಜದ, ಆ ಕಾಲಘಟ್ಟದ 'ಮೂಡ್' ಎಷ್ಟು ಕಾರಣವಾಗಿತ್ತು ಎಂಬುದನ್ನು ನಾವು ಕೇಳಿಕೊಳ್ಳಲೇ ಇಲ್ಲ. ಅದಕ್ಕೇ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗುತ್ತಿದ್ದ ಹಾಗೆಯೇ ಈ ಎಲ್ಲ ಚಳವಳಿಗಳೂ ಯಾಕೆ ಕಳೆಗುಂದತೊಡಗಿದವು ಎಂದು ಕೇಳಿದರೆ, ನಾವು ಇಂದಿಗೂ ಹೆಗಡೆಯವರ ಚಾಣಾಕ್ಷತೆ- ಒಡೆದಾಳುವ ಕುಟಿಲತೆಯತ್ತ ಬೊಟ್ಟು ಮಾಡುತ್ತೇವೆ! ಆದರೆ ನಮ್ಮ ರಾಜ್ಯದಲ್ಲಿ ಮೊಟ್ಟಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಸೌಜನ್ಯದ ನುಡಿಗಟ್ಟಿನಲ್ಲಿ ವ್ಯವಹರಿಸತೊಡಗಿದ ಹೆಗಡೆ ಶೈಲಿಯನ್ನು ಜನ ಮನಸಾ ಅಪ್ಪಿಕೊಂಡ ಪರಿಯನ್ನು ಮರೆಯುತ್ತೇವೆ. ದಶಕಗಳ ಕಾಲ ದಡ್ಡುಗಟ್ಟಿದ್ದ ಕಾಂಗ್ರೆಸ್ಸಿನ ಠೇಂಕಾರ, ಆಲಸ್ಯ ಕಂಡಿದ್ದ ಜನಕ್ಕೆ ಹೆಗಡೆ ಚೇತೋಹಾರಿ ಪಯರ್ಾಯವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನು? ಅದಕ್ಕೇ ಅಂದು ನೆಹರೂ ಎದುರು ಲೋಹಿಯಾ ಎದುರಿಸಿದ ಮೌನವನ್ನೇ ಈ ಚಳವಳಿಗಳು ಹೆಗಡೆ ಎದುರು ಅನುಭವಿಸಬೇಕಾಯಿತು. ಗಾಳಿ ಬೀಸುವ ದಿಕ್ಕು ಬದಲಾಗಿತ್ತು. ಈಗ ಯೋಚಿಸಿದರೆ, ಆ ಎಲ್ಲ ಚಳವಳಿಗಳ ಅಂತಿಮ ಧ್ಯೇಯವೇ ಹೆಗಡೆ ಪಟ್ಟಾಭಿಷೇಕವೇನೋ ಎಂಬ ಮಟ್ಟಿಗೆ ಪರ್ಯವಸಾನವಾಯಿತಲ್ಲ ಎಂಬ ತಬ್ಬಿಬ್ಬು! ಇದು ಇಷ್ಟೆಲ್ಲ ಸರಳವಲ್ಲ ಎಂದು ಗೊತ್ತಿದ್ದೂ...
ಸರಿ, ಇಲ್ಲಿ ಈ ಮಟ್ಟಿಗೆ ಯಾಕೆ ಹಳೇ ತುರುಬು ಮುಟ್ಟಿ ನೆನೆಸಿಕೊಳ್ಳುತ್ತಿದ್ದೇನೆ?
ಯಾಕೆಂದರೆ ಆಗ ನಮ್ಮಲ್ಲಿ ಉಂಟಾದ ಎಚ್ಚರ ನಮ್ಮನ್ನು ಯಾವುದೋ ಮಹಾಯಾನಕ್ಕೆ ಒಯ್ಯುತ್ತಿರುವಂತೆ ಭಾಸವಾಗಿತ್ತು. ಆದರೀಗ ಆ ಯಾನದ ನೌಕೆ ಒಡೆದು ಒಬ್ಬೊಬ್ಬರೂ ಕೈಗೆ ಸಿಕ್ಕಿದ ಹಲಗೆ ಚೂರು ಹಿಡಿದು ಯಾವಯಾವುದೋ ನಡುಗಡ್ಡೆಗಳನ್ನು ತಲುಪಿ ಉಸಿರು ಬಿಡುತ್ತಿರುವ ಹಾಗಿದೆ. ಅಭ್ಯಾಸಬಲದ ಮೇಲೆ ಈಗಲೂ ಅವವೇ ಕನಸಿನ ಮಾತಾಡುತ್ತೇವೆ. ಆದರೀಗ ಅದು ಖಾಲಿಡಬ್ಬದ ಸದ್ದಿನಂತೆ ಟೊಳ್ಳಾಗಿದೆ. ನಿದರ್ಶನ ಬೇಕೆನ್ನುವವರು, ನಮ್ಮ ಸುತ್ತ ಜರುಗುವ ಸೆಮಿನಾರುಗಳನ್ನು ಕಂಡರೆ ಸಾಕು: ಮಾತಾಡುವವರೂ ಅವರೇ, ಮಾತುಗಳೂ ಅವೇ, ಕೊನೆಗೆ ಕೇಳುಗರೂ ಅವರೇ! ನಿಂತುಹೋದ ಗಡಿಯಾರದಂತೆ- ಮುಳ್ಳುಗಳಿವೆ, ಜೀವವಿಲ್ಲ!
ಇಷ್ಟೇ ಆಗಿದ್ದರೆ, ಗಡಿಯಾರಕ್ಕೆ ಕೀ ಕೊಟ್ಟು ಮತ್ತೆ ಚಲನೆ ತರುವ ಆಸೆಯಾದರೂ ಇರುತ್ತಿತ್ತು. ಆದರೆ ಸಮಾಜದ 'ಮೂಡ್' ಮತ್ತು ಆಶಯಗಳೇ ಬದಲಾಗಿಹೋಗಿವೆಯಲ್ಲ? ಗಾಳಿ ಈಗ ಯಾವ ದಿಕ್ಕಿನಲ್ಲಿ ಬೀಸುತ್ತಿದೆ? ನಾವುಗಳೇ ಮೃದುವಾಗಿ, ಒಳಗಿಂದೊಳಗೇ ಖದೀಮರಾಗಿ ನುಣ್ಣಗಾಗಲು ನೋಡುತ್ತಿದ್ದೇವೆ. ಜಾತಿಮತಗಳು ಇನ್ನಷ್ಟು ಗಟ್ಟಿಯಾಗಿ ಹಿಂದಿದ್ದ ಅಳುಕು, ಲಜ್ಜೆಗಳೂ ಮಾಯವಾಗಿ....
ಇದೀಗ ಮಾತಾಡುವುದಾದರೂ ಯಾರೊಂದಿಗೆ? ಯಾರಿಗಾಗಿ? ಮಾತಾಡಲು ಶುರು ಮಾಡುತ್ತೇವೆ. ಆದರೆ ತುಸು ಹೊತ್ತಿನಲ್ಲೇ, ಸಿಪ್ಪೆಹೊಟ್ಟಿನಂಥ ಹಳೆ ಮಾತುಗಳೇ ಬಾಯಿಗೆ ಬಂದು, ಅದೇ ಹಳಬರ ಮುಂದೆಯೇ ಬೊಗಳುತ್ತಿರುವುದಕ್ಕೆ ತಲೆ ತಗ್ಗಿಸುವಂತಾಗಿ ಮಾತು ನಾಚುತ್ತದೆ. ನಾಚಿಕೆಯಾಗದಿದ್ದ ಪಕ್ಷದಲ್ಲಿ.... ಎರಡು ಖಚಿತ ಬಣಗಳು ಮೇಲೇಳುತ್ತವೆ- ಎರಡು ಶತ್ರು ದೇಶಗಳ ಹಾಗೆ. ಇಬ್ಬರೂ ಒಟ್ಟಿಗೇ ಬಾಯಿ ಮಾಡುತ್ತಾರೆ. ಸಂವಾದದ ಹಾಗಲ್ಲ, ಇನ್ನೊಬ್ಬರ ಮಾತಿಗೆ ಕಿವಿಗೊಡುವ ತಾಳ್ಮೆಯಿಲ್ಲದೆ ದನಿಯೇರಿಸಿ ಕಿರುಚಾಡುತ್ತಾರೆ. ಕಡೆಗೆ ಮಾತು ನಿಷ್ಪ್ರಯೋಜಕವಾಗಿ ಗದ್ದಲ ಏಳುತ್ತದೆ; ಕೈಗೆ ಕತ್ತಿ ತ್ರಿಶೂಲ ಬರುತ್ತವೆ....
ಎಲ್ಲವನ್ನೂ ಉತ್ಪ್ರೇಕ್ಷಿಸಿ ಬಣ್ಣ ಕೊಟ್ಟು ಹೇಳುತ್ತಿದ್ದೇನೆಯೇ? ಗೊತ್ತಿಲ್ಲ. ಆದರೆ ಇಂದು ಏನಾದರೂ ಮಾತಿಗೆ ತೊಡಗಬೇಕೆಂದರೆ ಹಿಂದೆಂದೂ ಇಲ್ಲದಿದ್ದ ಹಿಂಜರಿಕೆ. ಯಾಕೆಂದರೆ ಎದುರಿನವನು ಕೇಳಿಸಿಕೊಳ್ಳುತ್ತಾನೆಂಬ, ಆ ಮೂಲಕವೇ ಪ್ರತಿ ಮಾತು ಹುಟ್ಟಿ ಸಂವಾದ ಬೆಳೆದೀತೆಂಬ ನಂಬಿಕೆಯೇ ಇಲ್ಲದ ತಬ್ಬಲಿ ಮಾತುಗಳು. ಮಾತಿಗೆ ಮಾತು ಕೊಡದ ಈ ನಿಶ್ಶಬ್ದದ ಭೀತಿ ಪ್ಯಾಪಿಲಾನನ ಕತ್ತಲ ಏಕಾಂತವಾಸದ ಅನುಭವಕ್ಕಿಂತ ಬೇರೆಯಲ್ಲ! ಕೇಳುಗರೇ ಇಲ್ಲದ ಹಾಡುಗಾರ, ನೋಡುಗರೇ ಇಲ್ಲದ ಚಿತ್ರಕಾರನ ಸ್ಥಿತಿ. ನನ್ನದು, ನಮ್ಮೆಲ್ಲರದು. ಮುಂದೆ ಹೇಗೋ ಏನೋ, ಈವತ್ತಿಗಂತೂ ಹೀಗಿದೆ. ಇದಕ್ಕೆ ಜಾಗತೀಕರಣ, ಮಣ್ಣುಮಸಿ ವಿವರಣೆ ಹುಡುಕಹೊರಟ ಕೂಡಲೇ ಮತ್ತದೇ ಎರಡು ಶತ್ರು ಬಣಗಳ ಚಿತ್ರ ಕಣ್ಣ ಮುಂದೆ ಬರುತ್ತದೆ!.....
ಇಂಥ ಸ್ಥಿತಿಯಲ್ಲಿ 'ಬರಹಗಾರನ ತಲ್ಲಣಗಳು' ಎಂದು ಯೋಚಿಸಹೊರಟರೂ, ವ್ಯಕ್ತಿಯಾಗಿ ನನ್ನ ಪಾಡು ಬೇರೆ, ಬರಹಗಾರನಾಗಿ ಬೇರೆ ಅಂದುಕೊಳ್ಳುವ ಹುಂಬತನ ನನಗಿಲ್ಲ. ವ್ಯತ್ಯಾಸವೇನೆಂದರೆ, ಸುತ್ತಣ ಸಂಕಟ ತವಕಗಳಿಗೇ ಎದೆಯೊಡ್ಡಿ ಶಬ್ದದ ಆಕಾರ ಕೊಡುವುದು ಬರಹಗಾರನಿಗೆ ಅಂಟಿ ಬಂದ ಶಾಪವಲ್ಲವೇ?...
(ಕೃಪೆ: ಶೂದ್ರ-35 ವಿಶೇಷಾಂಕ)
ನಾವು ಸಹ ಇಂದು ಅದೇ ಹಂತ ತಲುಪಿದ್ದೇವೆ. ಅವಧಿ-ಆಲೆಮನೆ ನುಡಿನಮನ ಒಳ್ಳೆಯ ಪ್ರಯತ್ನ ಎಂದು ಹಲವರು ತಿಳಿಸಿದ್ದೀರಿ, ಧನ್ಯವಾದಗಳು. ನಾವು ಈ ತಾಣವನ್ನು ಕನ್ನಡದ ಅಖಾಡ ಎಂದು ಕರೆದಿದ್ದೇವೆ. ಇದೊಂದು ಚರ್ಚೆಯ ತಾಣವಾಗಬೇಕೆಂಬ ಸದಾಶಯದೊಂದಿಗೆ ನಾಡಿನ ಅತ್ಯುತ್ತಮ ಕನ್ನಡ ಮನಸ್ಸುಗಳಿಂದ ಲೇಖನ ಬರೆಸಿ ಚರ್ಚೆಗೆ ವೇದಿಕೆಯೋದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ......
ಆಲೆಮನೆಗೆ ಕಬ್ಬಿನ ಅಭಾವ! ಹೌದು ತಾವುಗಳು ಈ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು, ತಮ್ಮ ನೇರ ನಿಷ್ಟುರ ಪ್ರತಿಕ್ರಿಯೆ ತಿಳಿಸಬೇಕು, ಚರ್ಚೆಯನ್ನು initiate ಮಾಡುವುದಷ್ಟೇ ನಮ್ಮ ಕೈಲಿರುವುದು, ಅದನ್ನು ಮುಂದುವರಿಸಬೇಕಿರುವುದು ತಾವುಗಳು. ತಮ್ಮ ಪಾಲ್ಗೊಲ್ಲುವಿಕೆಯೇ ನಮ್ಮ ಆಲೆಮನೆಗೆ ಕಬ್ಬು! ದಯವಿಟ್ಟು ಪ್ರೀತಿ ಮತ್ತು ಒಂದು ಸದಾಶಯದಿಂದ ಕಟ್ಟಿದ ಈ ಆಲೆಮನೆಗೆ ಕಬ್ಬಿನ ಅಭಾವ ಬಾರದಿರಿಸಿ. ಆದ್ದರಿಂದ ಕುಟುಕು ಜನಮೇಜಯ ಕುಟುಕು........








